ನನ್ನೆದೆಯ ‘ಅಲೆಯ ಹಾಡು’ ಹಾಡುತ್ತಿದ್ದ..

ಸಮರಸದ ಕಡಲೊಳು ಬಂದೊದಗಿದ ಘನನೀಲಿ…

ಕೆಲವು ಎಲ್ಲೆಗಳನ್ನ ದಾಟಿದರೆ ಅದುಮಿಟ್ಟ ಭಾವನೆಗಳು ಅಪಾಯಕಾರಿಯಾಗಿ ಬಿಡುವ ಸಾಧ್ಯತೆಗಳಿವೆ ಎನ್ನುವುದು ಅನೇಕ ಸಲ ನನ್ನ ಅನುಭವಕ್ಕೆ ಬಂದಿದೆ. ಹಾಗಾಗಿಯೇ ಆ ಕ್ಷಣಕ್ಕೆ ಏನು ಅನ್ನಿಸುತ್ತದೆಯೋ ಅದನ್ನು ಮಾಡಿದ್ದೇನೆ.

ಪಟ್ಟ ಕಷ್ಟ, ಅನುಭವಿಸಿದ ನಿರಾಸೆಗಳು ನನ್ನನ್ನು ಇನ್ನೂ ತೀವ್ರವಾಗಿ ಬದುಕಲು ಪ್ರೇರೆಪಿಸುತ್ತವೆ. ಬದುಕುವ ತುಡಿತ ಮೀರಿ ಡಿಪ್ರೆಷನ್ ನ ಕೈ ಮೇಲಾದಾಗ ಯಾವ ಆರ್ಟ್ಸ್ ಎಕ್ಸಿಬಿಷನ್ ಗೆ ಹೋದರೂ ಹೊಸತು ಸಿಗದೆ, ಚಿತ್ರದಲ್ಲಿ ತುಡಿತವಿಲ್ಲದೆ, ಹಾಡುಗಳೆಲ್ಲ ಹಳಸಿದಂತಾಗಿ ಅರ್ಧದಲ್ಲೇ ಎದ್ದು ನಡೆದಿದ್ದೇನೆ.

ಆಗೆಲ್ಲ ಪಡಸಾಲೆಯ ತೂಗುಮಂಚದ ಮೇಲೆ ಕೂತು ವಯೋಲಿನ್ ಕೈಗೆತ್ತಿಕೊಂಡು, ಕಣ್ಣುಮುಚ್ಚಿ ಕೆನ್ನೆಗೊಮ್ಮೆ ಬೋ ‘ಟಚ್’ ಮಾಡಿ, ತಂತಿಗಳನ್ನು ಶ್ರುತಿಗೆ ಹೊಂದಿಸುವ ಪ್ರಯತ್ನ ಮಾಡುತ್ತೇನೆ. ಬಂಡಿ ಮಿಣಿ ಹರಿದಷ್ಟು ಕಷ್ಟವೆನಿಸುತ್ತದೆ.

ಎಂಥದ್ದೇ ಪರಿಸ್ಥಿತಿಯಲ್ಲಿ ಬಿಲ್ಹರಿ ರಾಗ ನುಡಿಸಲು ಶುರು ಮಾಡಿದರೆ ತಿಳಿಗೊಳವಾಗುವ ಮನಸು ಈ ಸ್ಥಿತಿಯಲ್ಲಿ ಮಾತ್ರ ರಾಡಿ ರಾಡಿ. ಸಂತೃಪ್ತ ರಾತ್ರಿಗಳಿಲ್ಲದ ಅತೃಪ್ತ ಹಗಲಿನಲ್ಲಿ ರಿಯಾಜ್ ಸಾಧ್ಯವಾಗುವುದಿಲ್ಲ. ಭೂಮಿಯಂಥವರ ತೋಳಲ್ಲಿ ಮಾಯೆಯಂತೆ ಸೋಲಬೇಕೆನಿಸುತ್ತದೆ.

ಒಲವ ಏಕತಾರಿ ಈ ಹೊತ್ತಿನ ‘ಇಷ್ಟಸಖ’ನೊಂದಿಗೆ ಸಮುದ್ರ ತೀರದಲ್ಲಿ ಒಂದು ಸಂಜೆ ಕಳೆದರೆ… ಎಂದು ಮೀಂಟುತ್ತದೆ. ಈ ಯೋಚನೆಯೇ ಭವದ ಬಂಧನಗಳಿಂದ ಕಳಚಿಕೊಳ್ಳುವ ಜಿಗಿತವನ್ನು ಸಾಧ್ಯವಾಗಿಸುತ್ತದೆ.

ವ್ಯಕ್ತಿ ಕುರಿತಾದ ‘ಇಷ್ಟ’ ಎನ್ನುವ ಪದವನ್ನು ಆಡುವಾಗ-ಬರೆಯುವಾಗಲೆಲ್ಲ ನನಗೆ ಮಳೆ ಸಾಹಿತಿ ಒಮ್ಮೆ ಸ್ನೇಹಿತನಿಗೆ ಹೇಳಿದ, ‘ಮನೆಗೆಲಸದವರನ್ನು ಮೊದಲು ಮಕ್ಕಳಿಗೆ ತೋರಿಸಬೇಕು. ಅವರ ಬಗ್ಗೆ ಮಕ್ಕಳ ಮುಖದಲ್ಲಿ ಇಷ್ಟತೆ ಕಂಡರೆ ಅವರು ನಮ್ಮ ಮನೆಯಲ್ಲಿರಲು ಅಡ್ಡಿಯಿಲ್ಲ,’ ಎನ್ನುವ ಮಾತು ನೆನಪಾಗುತ್ತದೆ. (ವ್ಯಕ್ತಿಗಳ ಕುರಿತಾದ ನನ್ನ ಇಷ್ಟವೂ ಇದಕ್ಕಿಂತ ಭಿನ್ನವಾಗಿಲ್ಲ. ಇದ್ದೀನಿ ಎನ್ನುವುದೂ ಗುರುತಾಗದಂತೆ ಸಾಗಿ ಹೋಗುವ ನಾನು ನನ್ನ ಸುತ್ತಲಿನ ವಲಯದಲ್ಲಿರುವವರಿಗೆ ಬಾಯಿಬಿಟ್ಟು ಅದು ಬೇಕಿತ್ತು, ಅದೊಂಚೂರು ಮಾಡಿ ಕೊಡು, ಅದು ಹಾಗಲ್ಲ ಹೀಗೆ… ಎಂದು ಹೇಳಲು ಸಾಧ್ಯವಾಗದಿದ್ದರೆ ಅಷ್ಟೇ ಅವರು!)

ಇಷ್ಟಗಳಿಗೆಲ್ಲ ಒಮ್ಮೊಮ್ಮೆ ನಾನೇ ಸ್ವಯಂ ಅವಕಾಶ ಕಲ್ಪಿಸಿಕೊಂಡರೆ ಕೆಲವೊಮ್ಮೆ ತಾನೇ ಒದಗಿ ಬರುತ್ತದೆ. ಈ ಸಲದ್ದು ವೈಸ್ ವರ್ಸಾ (vice versa). ನನ್ನೊಳಗಿನ ಕಡಲ ನೀಲಿಯ ಕುದಿತದ ವೈಬ್ರೇಷನ್ ಅದೇ ಕ್ಷಣದಲ್ಲಿ ಅಲ್ಲಿಗೂ ತಲುಪಿ ಫೋನ್ ಗುಲುಗಿತು.

ಮುಂದಿನ ಲೇಟ್ ನೈಟ್ ಚಾಟ್ ಗಳಲ್ಲಿ ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ತುಡಿತಕ್ಕೆ ವೇದಿಕೆ ಕಲ್ಪಿಸಲು ಮಾಡಿದ ಸಂಚು ಯಶಸ್ವಿ. ಈ ವಿಚಾರಗಳ ಅದಲು ಬದಲು ಕಂಚಿ ಕದಲಿನ ಕಾನ್ವರ್ಸೇಷನ್ ನಡೆಯುತ್ತಿದ್ದಾಗ ಒಮ್ಮೆ ಎರಡು ದಿನ ಫೋನು, ಟೆಕ್ಸ್ಟ್ ಗೆ ರಿಪ್ಲೈ ಇಲ್ಲ.

ಏನಾಗಿರಬಹುದು ಎಂದು ಯೋಚಿಸುತ್ತಿದ್ದಾಗ ಬಂತು, ಸಮುದ್ರ ತೀರದ ಫಾರೆಸ್ಟ್ ನಲ್ಲಿದೀನಿ. ರಿಮೋಟ್ ಏರಿಯಾ. ನೆಟ್ವರ್ಕ್, ನೆಟ್ ಎರಡೂ ಇಲ್ಲ. ಮತ್ತೆ ಈಗ ಕುಡಿದ ನಶೆಯೊಂದೇ ಸಾಕು. ಕೆಂಡದುರಿ ಚೆಂಬೆಳಕಿನ ಕಡಲಿನಿರುಳಿಗೆ ನಿನ್ನ ಧ್ವನಿ ಕಿಚ್ಚು ಹೊತ್ತಿಸುವುದು ಬೇಡ ಎನ್ನುವ ಮೆಸೇಜ್.

ಅರೆರೆ, ಕರೆದಿದ್ದರೆ ನಾನೂ ಬರುತ್ತಿದ್ದೆ ಎಂದರೆ ನಿಜವಾಗ್ಲೂ ಎನ್ನುವ ಪ್ರಶ್ನೆ. ಕರೆದು ನೋಡು! ಕಾಡುವ ಅನೇಕ ಸಂಗತಿಗಳಲ್ಲಿ ವಾರಾಶಿಯೂ ಒಂದೆಂದೆ. ಬದುಕನ್ನು ಚಲಿಸುವ ತೆರೆಗಳಂತೆ ಚೈತನ್ಯಮಯವಾಗಿಸಲು ಒಲವು ಒಲಿದೊಲಿದು ಬಂತು.

ಅಲ್ಲಿಂದ ಮುಂದೆ ನೈಸರ್ಗಿಕ ವಿಕೋಪಗಳು, ಅನಾವೃಷ್ಠಿ, ಅತಿವೃಷ್ಠಿ, ಬಂಡುಕೋರರ ದಾಳಿ, ತಾಯ್ನಾಡು ಬಿಟ್ಟು ವಲಸೆ ಹೋಗುವವರ ಬಗ್ಗೆ ತಲ್ಲಣಿಸಿದಾಗ…

ಅಂತರವಿಲ್ಲದ ನಿರಂತರತೆಯೇ ತಾನ್ಪುರದ ಐಡೆಂಟಿಟಿ ಎನ್ನುವಂತೆ ನಿರಂತರ ಹರಿವಿನ ಒಲವೇ ನನ್ನ ಅಸ್ತಿತ್ವ. ತೋಳಲ್ಲಿ ತೂಗಿ; ಕಣ್ಣಲ್ಲಿ ಲಾಲಿಸುವವ ಇನ್ನೊಂದು ಅಕ್ಕರೆಯೆಡೆಗೂ ನನ್ನದು ಕೊನೆಯಿಲ್ಲದ ನಿರೀಕ್ಷೆ ಎನ್ನುವುದನ್ನು ಇವನಿಗೆ ಹೇಳುವುದು ಹೇಗೆ ಎಂದು ವಿಚಲಿತಳಾದಾಗ…

ಅವನು, ನನ್ನ ಬೊಗಸೆಯಲ್ಲಿ ತುಂಬಿಕೊಳ್ಳದ ಹುಡುಗಿ ಏನು ಚಿಂತೆಯೇ ನಿನಗೆ ನನ್ನನುಳಿದು ಎಂದು ಕೇಳಿದ. ನಾನು, ಏನ ಹೇಳಲಿ ಹುಡುಗ ನಿನ್ನ ತುಂಬಿದ ಹಡಗ ಸೂರೆಗೊಳ್ಳುವುದಷ್ಟು ಸುಲಭವೇನು ಎಂದು ಮಾತು ಮರೆಸಿದೆ.

ಸಾಕು ಆಡಿದ್ದು, ಭೇಟಿಗೆ ತಿಂಗಳಿದೆ ಎನ್ನುವಾಗ ಇನ್ನೇನಿದ್ದರೂ ಸಮುದ್ರದ ದಡದಲ್ಲೇ ಎಂದು ಎಲ್ಲ ಸಂಪರ್ಕ ಮಾಧ್ಯಮಗಳಿಂದ ಕಳಚಿಕೊಂಡಿದ್ದು ಪ್ರಪಂಚದ ಎಲ್ಲ ವಿಚಿತ್ರಗಳಿಗಿಂತಲೂ ವಿಚಿತ್ರವಾದ ನನ್ನ ಮನಸ್ಸಿನ ಹುಚ್ಚುತನದ ಕಾರಣಕ್ಕೆ.

ತೀರದಲ್ಲಿ ನಿಂತು ಕಾಯುತ್ತಲೇ ಇದ್ದೆ. ಪರಿಚಯದ ನಂತರ ಇಬ್ಬರ ಊರಿನ ನದಿಗಳಲ್ಲೂ ಸಾಕಷ್ಟು ನೀರು ಹರಿದಿದೆ. ಇಂದು ಮೀಯಬೇಕಾದ ಸಮುದ್ರದದ ಹೆಸರನ್ನು ಅವ ಮರೆತಿದ್ದರೆ? ಬರದೆ ಹೋದರೆ ಇಲ್ಲ. ನಾನು ಬಂದಿದ್ದು ಅವನಿಗಾಗಿ ಅಲ್ಲ ಕಡಲಿಗಾಗಿ ಎಂದು ಸಮಾಧಾನ ಮಾಡಿಕೊಂಡರೂ ಎದೆಯೊಳಗೆ ತೂಫಾನು.

ಒಲವಿನ ಸೊಗಸು ನೆನಪಾಗಿ ಕಣ್ತಂಪು. ದೃಷ್ಟಿ ಮಂಜಾಗಿದ್ದಕ್ಕೆ ಆಕೃತಿಯೇ ಮಸುಕು ಎನ್ನುವಂತೆ ಚಲಿಸಿ ಬಂದ ಜೀವದೆದೆಯ ಮೇಲೆ ಕಂಪಿಸುವ ಅಂಗೈಯಿಟ್ಟು ಬರುವುದಿಲ್ಲವೇನೋ… ಎಂದೆನಿಸಿತ್ತು ಎಂದೆ.

ಮುತ್ತಾಗಲೆಂದೇ ಮೋಡದಿಂದ ಜಾರಿದ ಬಿಂದುಗಳಲ್ಲಿ ಕಡಲೆ ಕರುಣೆಯಿಂದ ನನಗಾಗಿ ಬಿಟ್ಟುಕೊಟ್ಟ ದಿವ್ಯಹನಿ ನೀನು. ಪುಟ್ಟಆತ್ಮವೊಂದಕ್ಕೆ ನಾನು ಕೊಟ್ಟ ಮಾತು ನೀರ ಪಾಲಾದರೆ ಪ್ರಪಂಚದಲ್ಲಿ ಒಲವಿನ ಪಿಸುಮಾತುಗಳಿಗೆ ಜಾಗವೆಲ್ಲಿ ಎಂದವನ ಕಣ್ಣುಗಳಲ್ಲಿ ಕರಗುತ್ತಿದ್ದೆ.

ಇಳಿಸಂಜೆ ಕಡಲ ತೀರದ ಬಾನು ಅಕ್ಷರಶಃ ಬಣ್ಣದ ಕಣಜ. ದಾರಿಯುದ್ದಕ್ಕೂ ಕಾರಿನ ಕಿಟಕಿಯಿಂದ ವರ್ಣಭಂಡಾರ ನೋಡುವ ಅಭಿಯೋಗ. ವಾಸ್ತವ್ಯದ ಕೊಠಡಿಯೊಳಕ್ಕೆ ಕಾಲಿಟ್ಟಾಗ ಚಿರಕನಸೊಂದು ಕೈಗೂಡಿ ಬಂದ ಖುಷಿ. ಶಿಶಿರದ ರಾತ್ರಿಗಳ ಚಳಿ ಹೋಗಲಾಡಿಸಲು ಶಾಲಿನಂತೆ ಆವರಿಸಿದವನ ತೋಳುಗಳಲ್ಲಿ ರೇಷ್ಮೆಯ ಹಿತ.

ಇನ್ನು ಇವನ ನೆನಪಿನ ನೆರಳು ಇರುಳೆಲ್ಲ ಕಾಡುವುದಿಲ್ಲ ಎನ್ನುವ ಖಾತ್ರಿಯಾಯಿತು. ಎದೆಯಲ್ಲಿ ಮುಖ ಹುದುಗಿಸಿದವಳಿಗೆ ಈ ಬಿಸಿಯುಸಿರ ಕದನದ ನೆನಪಲ್ಲಿ ಸ್ವಲ್ಪ ದಿನ ಹಗಲುಗಳೂ ಮಜಬೂತಾಗಿರುತ್ತವೆ ಎನಿಸಿತು.

ಮಧ್ಯರಾತ್ರಿ ಎಚ್ಚರಾಗಿದ್ದಕ್ಕೆ ಎದ್ದು ಬಂದು ದಡದಲ್ಲಿ ‌ನಿಂತೆ. ಒಂದೇ ಒಂದು ಮೋಡದ ತುಣುಕಿಲ್ಲದ ಆಗಸ, ಮಳಲ ರಾಶಿಯಲ್ಲಿ ಬಿದಿಗಿ ಚಂದ್ರನ ನೇಯ್ಗೆಯಾಟಕ್ಕೆ ಮನದೊಳಗೆ ಚೊಗಚೀ ಹೂವಿನ ಕುಲುಕಲು. ನೊರೆಹೊತ್ತು ಮೊರೆಯುತ್ತ ದೊಡ್ಡ ತರಂಗವಾಗಿ, ದಡದ ‌ಮೇಲೆ ಉರುಳಿ ಅಪ್ಪಳಿಸುವ ರಭಸ, ಚಿಕ್ಕ ಚಿಕ್ಕ ತೆರೆಗಳಾಗಿ ಒಡೆದು ನಿಧಾನದಲ್ಲಿ ಸಮುದ್ರಕ್ಕೆ ಹಿಂತಿರುಗುವ ಸೌಮ್ಯತೆ, ಊರ್ಮಿಯದೇ ಆದ ಅವಿಶ್ರಾಂತ ಜೀವನ ನನ್ನ ಬದುಕಿನ ವಾಸ್ತವಿಕ ನಿರೂಪಣೆಯಂತೆ ಕಂಡಿತು.

ಏನೂ ಅಂದುಕೊಂಡಂತೆ ಆಗ್ತಿಲ್ಲ ಎನ್ನುವ ಅಣ್ಣನ ಅಸಹಾಯಕತೆ, ದೊಡ್ಡಕ್ಕನಿಗೆ ಸಹಾಯ; ಅವಳ ಮಗನ ಓದಿನ ಜವಾಬ್ದಾರಿ, ಎರಡನೇ ಅಕ್ಕನ ಜೀವನದ ಏಳು ಬೀಳಿನ ಅಳುವ ಕಡಲೊಳು ಮುಳಗದಂತೆ ಮುಚ್ಚಟೆಯಿಂದ ಎತ್ತಿ, ನನ್ನ ಹಂಬಲದ ಕರೆಗಳಿಗೆಲ್ಲ ಪವಾಡದಂತೆ ಬಂದೊದಗುವ ಸಮರಸದ ಸಮುದ್ರದ ಈ ಘನನೀಲಿ ಕನಸೊ ನನಸೊ ತಿಳಿಯದಾಯಿತು.

ಅರಿವಿಗೆ ಗುರುತೇ ತಪ್ಪಿದ ಹಾಗೆನಿಸಿ ನೊರೆ ಸ್ಪರ್ಶಿಸಿದೆ. ಓಡೋಡಿ ಬಂದ ಅಲೆ ತುದಿ ಬೆರಳಿಗೆ ಅಕ್ಕರೆಯಿಂದ ಮುತ್ತಿಟ್ಟಿತು. ಒಂದೊಂದೆ ಹೆಜ್ಜೆ ಆಳಕ್ಕೆ ಇಳಿಯುತ್ತಿದ್ದೆ. ನೀರ ನೀಲಿಯೊಂದಿಗೆ ಪೈಪೋಟಿಗಿಳಿದಿದ್ದ ಎದೆಯ ಮೇಲಿನ ಹಚ್ಚೆ ಗುರುತು ನೋಡಿ, ಒಲವಿನ ಸಾಗರಕ್ಕೆ ತೀರಗಳಿಲ್ಲ; ಏನಿದ್ದರೂ ಮಿಲನಗಳೇ ಎಂದು ಖುಷಿಯಿಂದ ತೊನೆಯುತ್ತಿತ್ತು ಧೀರಶರಧಿ.

ಇದಕ್ಕೆ ಹಿಮ್ಮೇಳ ಎನ್ನುವಂತೆ ಖಲೀಲ್ ಗಿಬ್ರಾನ್‌,

ಬಲಿಷ್ಠ ಸಾಗರತೀರ ನನ್ನ ನಲ್ಲ,
ನಾನವನ ನಲ್ಲೆ.
ನೀಲ ದಿಗಂತದ ಹಿಂದಿನಿಂದ ನಾನು
ಕಳ್ಳತನದಲಿ ತಟಕ್ಕನೆ ಬರುವೆ, ನನ್ನ ನೊರೆಗಳ
ಬೆಳ್ಳಿಯನು ಅವನ ಮರಳಿನ ಭಂಗಾರದ ಮೇಲೆ ಎಸೆವುದಕ್ಕೆ;
ಒಂದಾಗುವೆವು ನಾವು ದ್ರವೀಭೂತ ಹೊಳಪಿನಲ್ಲಿ.
ನಾ ವೇಗವತಿ, ಭಯಂಕರೆ; ಅವನಾದರೊ
ಮೌನಿ, ತಾಳ್ಮೆಯುಳ್ಳವ, ಯೋಚನಾಪರ. ಅವನ
ವಿಶಾಲ ಎದೆಯಲ್ಲಿ ನನ್ನ ತಳಮಳಕೆ ಉಪಶಮನ…

ಎಂದು ನನ್ನೆದೆಯ ‘ಅಲೆಯ ಹಾಡು’ ಹಾಡುತ್ತಿದ್ದ.

‍ಲೇಖಕರು avadhi

January 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: