ಪೀಪಲ್ ಯು ಮೆ Know 

 ಪೀಪಲ್ ಯು ಮೆ Know 
( People You May Know ) 

-ಶಿವಕುಮಾರ್ ಮಾವಲಿ 

‘ನಮ್ಮದಲ್ಲದ ಬದುಕನ್ನು ಒಂದು ದಿನವಾದರೂ ಬದುಕಲು ಸಾಧ್ಯವೆ ?’ ಎಂಬ ಯೋಚನೆ ಬಂದ ದಿನವೇ ನಾನು ಒಂದು ಪ್ರಯೋಗಕ್ಕೆ ನನ್ನನ್ನು ಒಡ್ಡಿಕೊಂಡಿದ್ದೆ. ಒಂದು ದಿನದ ಮಟ್ಟಿಗೆ ನಾನು ಭಿಕ್ಷುಕನಾಗಿ ಇರಬೇಕು ಎಂಬುದೇ ಅದಾಗಿತ್ತು.  ಇಷ್ಟು‌ ದೊಡ್ಡ ನಗರದಲ್ಲಿ ನನ್ನ ಗುರುತು ಯಾರಿಗೆ ಸಿಕ್ಕೀತು ಎಂಬ ಧೈರ್ಯದಿಂದ ಅದುವರೆಗೂ ನಾನು ಒಮ್ಮೆಯೂ ಹೋಗಿರದ ಬಡಾವಣೆಯ ಕಡೆ ಹೋಗಿ ಭಿಕ್ಷೆ ಬೇಡುವುದಾಗಿ ನಿರ್ಧರಿಸಿದೆ. ಆ ರೀತಿ ನಾನು ಭಿಕ್ಷುಕನಾಗಿ ಕಳೆದ ಒಂದು ದಿನದ ಬಗ್ಗೆ ಸವಿಸ್ತಾರವಾಗಿ ಬರೆದದ್ದನ್ನು ಪತ್ರಿಕೆಯೊಂದು ಪ್ರಕಟಿಸಿತ್ತು. ಆನಂತರ ಆ ವಿಷಯವನ್ನು ನಾನು ಮರತೇಬಿಟ್ಟಿದ್ದೆ . ಆದರೆ ನಿನ್ನೆ ನನ್ನನ್ನು ಭೇಟಿ ಮಾಡಲು ಬಂದಿದ್ದ ಹುಡುಗನೊಬ್ಬ ಆ ಪತ್ರಿಕೆಯಲ್ಲಿ ನನ್ನ ಲೇಖನವಿದ್ದ ಪುಟವನ್ನು ನನ್ನ ಮುಂದಿಟ್ಟು ಹೇಳಿದ ; ‘ ಸರ್, ನೀವು ಒಂದು ದಿನದ ಭಿಕ್ಷುಕನಾಗಿದ್ದಾಗ ಆದ ಅನುಭವವನ್ನು ಬರೆದಿದ್ದೀರಿ. ಅದನ್ನು ಓದಿ ಸ್ಪೂರ್ತಿಗೊಂಡ ನಾನು, ಅದೇ ರೀತಿ ಒಂದು ಪ್ರಯೋಗ ಮಾಡಲು ಹೋಗಿ‌ ಒಂದು ವಿಚಿತ್ರ ಅನುಭವವಾಯಿತು ಸರ್’

‘ ಅಂದರೆ , ನೀವೂ ಒಂದು ದಿನಕ್ಕೆ ಭಿಕ್ಷುಕರಾಗಿದ್ದಿರಾ ?’ ಎಂದೆ
‘ ಇಲ್ಲ. ಅದು ನನ್ನಿಂದಾಗದ ಮಾತು ಎನ್ನಿಸಿತು.‌ ಹಾಗಾಗಿ ನಾನು ಹೊಸದಾಗಿ ಶುರುವಾಗಿರುವ ರಾಪಿಡೋ ಬೈಕ್ ಟ್ಯಾಕ್ಸಿಯ ಕ್ಯಾಪ್ಟನ್ ಆಗಿ ವೀಕೆಂಡ್ ನಲ್ಲಿ  ಒಂದು ದಿನ ಕೆಲಸ ಮಾಡೋಣ ಎಂದು ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡೆ’
‘ ಓಹ್ ! ಖಾಯಂ ಆಗಿ ದುಡ್ಡು ಬಂದೇ ಬರುತ್ತದೆ ಎಂಬ ಖಾತರಿಯಿರುವ ಪ್ರಯೋಗಕ್ಕೆ ಮುಂದಾಗಿದ್ದೀರಾ ಎನ್ನಿ ‘

‘ ಹೌದು ಸರ್. ಆದರೆ ನನಗೆ ದುಡ್ಡಿಗಿಂತ ಈ ಕೆಲಸ ಮಾಡುವಾಗ ಎದುರಾಗುವ ಜನ ಎಂಥವರು? ಅವರ ತುರ್ತು ಕೆಲಸಗಳೇನು? ಅವರು ಅದ್ಹೇಗೆ ಯಾವುದೋ ಒಬ್ಬ ಗೊತ್ತು ಪರಿಚಯವಿಲ್ಲದ ವ್ಯಕ್ತಿಯ ಜೊತೆ, ಅದೂ ಬೈಕಲ್ಲಿ ಕೂರುವ ಮನಸ್ಸು ಮಾಡುತ್ತಾರೆ? ಎಂಬೆಲ್ಲ ವಿಷಯಗಳ ಬಗ್ಗೆ ಕುತೂಹಲ ಇತ್ತು ಸರ್. ಅದಕ್ಕಾಗಿಯೇ ನಾನು ಒಂದು ವೀಕೆಂಡ್ ನಲ್ಲಿ ಹೀಗೆ ಬೈಕ್ ಟ್ಯಾಕ್ಸಿ ಓಡಿಸುವ ಕ್ಯಾಪ್ಟನ್ ಆಗಿ ಕೆಲಸ ಮಾಡಲು ನಿರ್ಧರಿಸಿ ಹೊರಟೆ. ಮೂರು ಟ್ರಿಪ್ ಸುಸೂತ್ರವಾಗಿ ನಡೆಯಿತು. ನಾಲ್ಕೈದು ಕಿಲೋಮೀಟರ್ ಗಳ ಅಂತರದಲ್ಲಿ ಡ್ರಾಪ್ ತೆಗೆದುಕೊಂಡವರಲ್ಲಿ ಮೊದಲನೆಯವನ ಬಳಿ ನಾನು ತುಂಬಾ ಮಾತಾಡಿಬಿಟ್ಟಿದ್ದೆ ಸರ್.‌ ಅವನು ಟ್ರಿಪ್ ಮುಗಿದ ನಂತರ ಫೀಡ್ ಬ್ಯಾಕ್ ಕೊಟ್ಟಿದ್ದರಿಂದ ನನಗೆ ಕಂಪೆನಿಯವರು ಕಾಲ್ ಮಾಡಿ ಹಾಗೆಲ್ಲ ಗ್ರಾಹಕರೊಂದಿಗೆ ಅನವಶ್ಯಕ ಮಾತಾಡಬಾರದೆಂದು, ಇದು ರಿಪೀಟ್ ಆದರೆ ನನ್ನನ್ನು ಅವರೇ ಅನ್ ಸಬ್ ಸ್ಕ್ರೈಬ್ ಮಾಡುವುದಾಗಿಯೂ ತಿಳಿಸಿದರು. ಹಾಗಾಗಿ ನಂತರದ ಎರಡು ಟ್ರಿಪ್ ಗಳಲ್ಲಿ ನಾನು ಮಾತೇ ಆಡಲಿಲ್ಲ. ಆನಂತರ ಯಾರೋ ಒಬ್ಬ ನನ್ನದು ಬಜಾಜ್ ಪ್ಲಾಟಿನಮ್ ಹಳೆಯ ಮಾಡೆಲ್ ಬೈಕ್ ಎಂಬ ಕಾರಣಕ್ಕೆ ಬುಕಿಂಗ್ ಕ್ಯಾನ್ಸಲ್ ಮಾಡಿದ್ದ. ನಾನಾಗ ಮೊದಲ ಟ್ರಿಪ್ ನ ಕಸ್ಟಮರ್ ಕೊಟ್ಟ ಫೀಡ್ ಬ್ಯಾಕ್ ಇಂದಾಗಿಯೇ ಇದು ಕ್ಯಾನ್ಸಲ್ ಆಗಿರಬೇಕು ಎಂದುಕೊಂಡೆ. ಆದರೆ ಐದನೆಯ ಟ್ರಿಪ್ ಹಾಗಾಗಲಿಲ್ಲ.


*             *             *             *
ಟ್ರಿಪ್ ಶುರು ಮಾಡಲು ಓಟಿಪಿ ಹೇಳಿ ಬಂದು ಕುಳಿತ ವ್ಯಕ್ತಿ ತಾನಾಗಿಯೇ ನನ್ನನ್ನು ಮಾತಿಗೆಳೆದ.
” ಅವಳು ಅವನನ್ನು ಯಾವ ಕಾರಣಕ್ಕೆ  ಪ್ರೀತಿಸಿದಳೋ ಅದೇ ಕಾರಣಕ್ಕೆ ಪ್ರೀತಿಸದಾದಳು”- ಏನ್ ಸರ್ ಹೀಗಂದ್ರೆ ? ಈಗಿನ್ನು ಒಂದ್ ಆಟೋದ್ ಹಿಂದೆ ಹೀಗೆ ಬರೆದಿದದ್ದನ್ನ ನೋಡಿದೆ ಅಂದ. ಅದಕ್ಕೆ ನಾನು ಏನೂ ಉತ್ತರಿಸದೆ ಸುಮ್ಮನಿದ್ದದ್ದಕ್ಕೆ ‘ರೀ ಮಿಸ್ಟರ್, ನನ್ನ ಡೆಸ್ಟಿನೇಷನ್ ಬರೋ ತನಕ, I am your neighbor in the bike . ನೀವು ಹೀಗೆ ಸುಮ್ನೆ ಇದ್ರೆ ನಾನು ಒಳ್ಳೆಯ ಫೀಡ್ ಬ್ಯಾಕ್ ಕೊಡೋಲ್ಲ ನೋಡಿ’ ಎಂದು ಕಿಚಾಯಿಸಿದ. ನನಗೆ ಇದೊಳ್ಳೆ ಪೀಕಲಾಟ ಆಯ್ತಲ್ಲ ಅನ್ನಿಸಿತು. ಆದರೂ ಅವನು ಹೇಳಿದ ಆ ವಾಕ್ಯ ಇಂಟರೆಸ್ಟಿಂಗ್ ಆಗಿತ್ತು.  ಅದಕ್ಕೆ ನಾನು ಸೇರಿಸಿದೆ :
” ಇಲ್ಲಿ ಯಾರೂ ಪ್ರೀತ್ಸೋದಿಲ್ಲ ಸರ್ ಕೇವಲ ಮೆಚ್ಚಿಸೋಕೆ ಹಾತೊರಿತಾರೆ ” ಎಂದೆ.
ಆಗ ಅವನು ಆಟೋದ ಮೇಲಿದ್ದ ಮತ್ತು ನಾನು ಹೇಳಿದ ಎರಡೂ ವಾಕ್ಯಗಳೂ ಸೇರಿ ಗೋಜಲಿಗೆ ಒಳಗಾದಂತೆ ಕಂಡು ‘ ನಿನ್ನ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋಗಬೇಡ. ನಾನು ಹೇಳೋ ರೂಟ್ ನಲ್ಲಿ ಹೋಗು. ಈಗ ನಾನು ಮೀಟ್ ಮಾಡಲು ಹೋಗ್ತಿರೋ ಹುಡುಗಿ ಹೊಸಬಳಿರಬಹದು ಆದರೆ ಆ ಸ್ಥಳ ಮತ್ತದರ ದಾರಿ ಎರಡೂ ನನಗೆ ಚಿರಪರಿಚಿತ’ ಎಂದ.
ಆತ ಹುಡುಗಿಯೊಬ್ಬಳನ್ನು ಭೇಟಿ ಮಾಡಲು ಹೋಗುತ್ತಿರುವುದು ತಿಳಿದದ್ದರಿಂದ ನಾನೇ ಅವನನ್ನು ಕೇಳಿದೆ ; ನಿಮ್ಮ ಗರ್ಲ್ ಫ್ರೆಂಡ್ ನ ಮೀಟ್ ಮಾಡೋಕೆ ಹೋಗ್ತಿರೋದ ಸರ್’
‘ಇನ್ನೂ ಆಗಿಲ್ಲ. ಇವತ್ತು ಆಗ್ಬೋದು ಗರ್ಲ್ ಫ್ರೆಂಡ್ ‘ ಅಂದ.
‘ ಆಲ್ ದ ಬೆಸ್ಟ್ ಸರ್ ‘ ಎಂದೆ.
‘ ಥ್ಯಾಂಕ್ಸ್. ಅಂದಹಾಗೆ ಅವಳು ನನಗೆ ಫೇಸ್ ಬುಕ್ ನಲ್ಲಿ ಪರಿಚಯ ಆಗಿದ್ದು. ‘ಪೀಪಲ್ ಯೂ ಮೇ ನೋ’ ನಲ್ಲಿ ಆಗಾಗ ಅವಳ ಅಕೌಂಟ್ ಕಾಣಿಸ್ತಿತ್ತು. ಆಮೇಲೆ ರಿಕ್ವೆಸ್ಟ್ ಕಳಿಸಬಹುದಾ ಎಂದು ಕೇಳಿದೆ. ಅದಕ್ಕೆ ಓಕೆ ಸಿಕ್ಕಮೇಲೆ ಅಲ್ಲಿಯೇ ಗೆಳೆತನ , ಮಾತು, ಹರಟೆ, ನಂಬರ್ ಎಕ್ಸಛೇಂಜ್ ಎಲ್ಲ ಆದಮೇಲೆ ಈಗ ಮೀಟ್ ಮಾಡಬಹುದು ಅನ್ನೋ ಖಾತರಿ ಸಿಗ್ತು. ಹಾಗಾಗಿ ಹೋಗ್ತಾ ಇದ್ದೀನಿ.‌ ನನ್ನ ಫ್ರೆಂಡ್ ಒಬ್ಬ ನನ್ನ ಗಾಡಿ ತಗೋಂಡ್ ಹೋಗಿದ್ರಿಂದ , ಅದೂ ಅಲ್ಲದೆ ಅಷ್ಟೊಂದ್ ದೂರ ಗಾಡಿ ಓಡ್ಸೋರು ಯಾರು ಅಂತೇಳಿ ನಿಮ್ ಬೈಕ್ ಬುಕ್ ಮಾಡಿದೆ ನೋಡಿ. ಬೇಗ ಬೇಗ ಹೋಗ್ಬೇಕು. ಹಾಗೆ ಒಬ್ಬ ಹುಡುಗಿ ನನಗಿಂತ ಮೊದಲು ಬಂದು ಕಾಯೋದನ್ನ ಊಹಿಸಿಕೊಳ್ಳೋಕು ಸರಿ ಕಾಣಲ್ಲ ನನ್ಗೆ ‘ ಎಂದು ತನ್ನ ಅರೆದಾರಿಯಲ್ಲಿದ್ದ ಪ್ರೇಮ ಕಥಾನಕವನ್ನು ಬಡಬಡನೆ ಹೇಳಿಬಿಟ್ಟ.

ಈಗ ಅವನಿಗೆ ಆಟೋದ ಹಿಂದಿದ್ದ ಬರಹದ ಅರ್ಥ ಹೇಳ್ಬೇಕು ಎಂದುಕೊಂಡ ನಾನು, ‘ ಓಹ್ ! ಚೆನ್ನಾಗಿದೆ‌‌ ಸರ್. ನಿಮ್ದು ಡಿಜಿಟಲ್ ಇಂಡಿಯಾದಲ್ಲಿನ ಡಿಜಿಟಲ್ ಲವ್ . ಒಳ್ಳೇದಾಗ್ಲಿ ನಿಮ್ಗೆ. ಆದ್ರೆ ಒಂದು ವಿಚಾರದಲ್ಲಿ‌ ಬಹಳ ಹುಷಾರು ಸರ್ . ಯಾವುದನ್ನು ಬಹಳ ಇಷ್ಟುಪಟ್ಟು ನಿನ್ನ ಪ್ರೀತಿಸಲು ಇದೇ ಕಾರಣ ಅಂತ ಹೇಳ್ತೇವೋ ಮುಂದೊಂದು ದಿನ ಪ್ರೀತಿ ಕಡಿಮೆ ಆಗೋದು ಅದ್ರಿಂದಾನೆ ಆಗ್ಬಿಡುತ್ತೆ. ಬಹುಶಃ ಆ ಆಟೋದಲ್ಲಿ ಬರೆದಿದ್ದರ‌ ಅರ್ಥ ಇದೇ ಇರಬೇಕು‌’ ಎಂದೆ.

‘ ಹೌದಾ ಸರ್? ತಪ್ಪು ತಿಳೀಬೇಡಿ. ಆದ್ರೆ ನೀವು ಇಷ್ಟೊಂದ್ ಖಡಾಖಂಡಿತವಾಗಿ ಹೇಗೆ ಹೇಳ್ತೀರಿ?’ ಎಂಬುದು ಅವನ ಮರು ಪ್ರಶ್ನೆಯಾಗಿತ್ತು.

ಯಾವುದು ಅನುಭವವಾಗುತ್ತೋ‌ ಅದು ನಂತರ ವೇದಾಂತವಾಗಿಬಿಡುತ್ತದೆ ಎಂಬಂತೆ ನನ್ನಷ್ಟಕ್ಕೆ ನಾನು ಭಾವಿಸಿಕೊಂಡಿದ್ದರಿಂದ ಆಟೋ ಹಿಂದೆ ಬರೆದ ಸಾಲು ನನಗೆ ಹತ್ತಿರವಾಗಿದ್ದವು. ಆದರೆ, ಹೀಗೆ ಗ್ರಾಹಕನಾಗಿ ಬಂದವನಿಗೆ ನನ್ನ ಗತಕಾಲದ ಪ್ರೇಮವೈಫಲ್ಯವನ್ನು ಹೇಳುವುದು ಎಷ್ಟು ಸರಿ ಅನ್ನಿಸಿ ಸುಮ್ಮನಿದ್ದೆ. ಅಷ್ಟರಲ್ಲಿ ಅವನೇ ಜ್ಯೂಸ್ ಸೆಂಟರ್ ಬಳಿ ಬೈಕ್ ನಿಲ್ಲಿಸಲು ಹೇಳಿ, ಜ್ಯೂಸ್ ಕುಡಿಯುತ್ತ ‘ ನಿಮ್ಮ ಪ್ರೀತಿ ಸೋಲಲು ಕಾರಣ ಏನು ಸರ್ ? ‘ ಎಂದು ಕೇಳಿದ

ಗೆದ್ದದ್ದೋ , ಸೋತದ್ದೋ, ಯಾರಾದರೂ ಪ್ರೀತಿಯ ಬಗ್ಗೆ ಕೇಳಿದರೆ ಸಾಕು ಹೇಳಿಕೊಳ್ಳಬೇಕೆಂಬ ಹಂಬಲ‌ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ ನಾನು ನಮ್ಮ ನಡುವಿನ ಪ್ರೀತಿ ಹೇಗಾಯಿತು ಎಂಬುದಕ್ಕಿಂತ ಹೇಗೆ ಇಲ್ಲದಾಯಿತು ಎಂಬುದನ್ನು ಸೂಚ್ಯವಾಗಿ ಹೇಳಿದೆ. ನಿನ್ನ ಮಾತೆಂದರೆ ನನಗೆ ಇಷ್ಟ ಕಣೋ , ಯಾರೊಬ್ಬರಿಗೂ ನಿನ್ನ ಮಾತಿನಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎನ್ನುತ್ತಿದ್ದವಳು, ಇದ್ದಕ್ಕಿದ್ದಂತೆ, ನೀನು ನೇರವಾಗಿ ಮಾತನಾಡುವುದಿಲ್ಲ, ನಿನ್ನ ಮಾತಿನಲ್ಲಿ ಪ್ರಾಮಾಣಿಕತೆ ಇಲ್ಲ , ನಿನ್ನ  ಮಾತುಗಳಲ್ಲಿ ಪಾಸಿಟಿವಿಟಿ ಇರೋದಿಲ್ಲ, ನೀನು ದೇಶದ ಬಗ್ಗೆ , ರಾಜಕೀಯದ ಬಗ್ಗೆ  ಅನಗತ್ಯ ಮಾತಾಡ್ತೀಯ, ತರಕಾರಿ ಬೆಲೆ ಹೆಚ್ಚಾದದ್ದಕ್ಕೆ ಸರ್ಕಾರವನ್ನು ನಿಂದಿಸುವ ನಿನ್ನ ಮಾತುಗಳು ಕ್ಲೀಷೆ ಎನಿಸುತ್ತವೆ , ಎಲ್ಲರೂ ಏನನ್ನೋ ಹೇಳಲು ಮಾತನಾಡಿದರೆ, ನೀನು ಏನನ್ನೋ ಮುಚ್ಚಿಡಲು ಮಾತನಾಡುತ್ತೀಯ, ರೂಪಕಗಳಲ್ಲಿ ನನ್ನನ್ನು ಹೊಗಳುವುದನ್ನು ಮೊದಲು ನಿಲ್ಲಿಸು, ಮಾತುಗಳನ್ನು ಆಡಲೇಬೇಕಾದ ಕರ್ತವ್ಯವೇನೋ ಎಂಬಂತೆ ಏಕೆ ಮಾತನಾಡಬೇಕು ? ಎಂದೆಲ್ಲ ಹೇಳ ತೊಡಗಿದಳು. ಯಾವುದನ್ನು ನನ್ನಲ್ಲಿ ಅತಿಯಾಗಿ ಮೆಚ್ಚಿದ್ದಳೋ ಅದನ್ನೇ ದ್ವೇಷಿಸುವ ಮಟ್ಟಕ್ಕೆ ಬಂದಿತೆಂದ ಮೇಲೆ ಇನ್ನೆಲ್ಲಿಯ ಪ್ರೀತಿ ಸರ್ ? ನಿನ್ನನ್ನು ಪ್ರೀತಿಸಿದ ಕಾರಣಗಳಿಗಾಗಿಯೇ , ಪ್ರೀತಿಸದೇ ಉಳಿಯುವಂತೆ ಮಾಡುತ್ತೀಯ ಎಂದು ಅಂದುಕೊಂಡಿರಲಿಲ್ಲ ಎನ್ನುತ್ತಾ let’s break up and be kind to each other ಎನ್ನುವುದರೊಂದಿಗೆ ಎಲ್ಲ ಮುಗಿದು ಹೋಯಿತು… ನೋಡಿ,ಆಟೋದಲ್ಲಿ ನೀವು ಓದಿದ್ದು ನನ್ನ ಜೀವನದ ಪ್ರತಿಬಿಂಬದ ಸಾಲುಗಳು ಅಷ್ಟೇ. ‌ಎಂದು ಹೇಳುವಾಗ ಆತ ಸ್ವಲ್ಪ ವಿಚಲಿತನಾದಂತೆ ಕಂಡರೂ ಆ ಹುಡುಗಿ ಎಲ್ಲರಂತಲ್ಲ ಎಂಬ ಆಹ್ವಾನಿತ ಸಮಾಧಾನಭಾವವನ್ನು ಹೊದ್ದುಕೊಂಡಂತೆ ನನಗೆ ಕಂಡುಬಂದ. ಅದಕ್ಕೆ ಅವನ ಮುಂದಿನ ಮಾತು ಪುಷ್ಟಿ ನೀಡಿದ್ದು ಸುಳ್ಳಲ್ಲ.


‘ ಎಲ್ಲರೂ ಹಾಗೆ ಇರೋಲ್ಲ ಅಲ್ವಾ ? ಈಗ ನೋಡಿ ನಾನು ಮೀಟ್ ಮಾಡಲು ಹೋಗುತ್ತಿರುವ ಹುಡುಗಿ ಅಕಸ್ಮಾತ್ ಆಗಿ ಪರಿಚಯವಾದವಳು. ನಂತರ ಹತ್ತಿರಾದವಳು. ತನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಈ ದಿನ ನಾವು ಜೊತೆಯಲ್ಲಿರುವ ನಿರ್ಧಾರ ಮಾಡಲಿದ್ದೇವೆ. ಪರಸ್ಪರ ಅರಿತುಕೊಂಡಮೇಲೆ ಈ ನಿರ್ಧಾರಕ್ಕೆ ಬರುತ್ತಿದ್ದೇವೆ. ಪ್ರೀತಿಯೆಂದರೆ ಒಬ್ಬರನ್ನೊಬ್ಬರು ಮೆಚ್ಚಿಸುವ, ಖುಷಿಯಾಗಿಡುವ ಸಾಹಸವಲ್ಲವೆ ? ಹಾಗಿದ್ದಮೇಲೆ ಮೆಚ್ಚಿಸಲು ಪ್ರಯತ್ನಿಸಿದರೆ ತಪ್ಪೇನಿದೆ ಹೇಳಿ ? ‘ ಎಂದವನು ತಕ್ಷಣ ಮತ್ತಿಕೆರೆಯಲ್ಲಿರುವ ಜೆ.ಪಿ.ಪಾರ್ಕ್ ಬಳಿ ಬಂದದ್ದನ್ನು ಗಮನಿಸಿ,‌ಅಲ್ಲಿಯೇ ನಿಲ್ಲಿಸಲು ಹೇಳಿ, ‘ ಥ್ಯಾಂಕ್ಸ್ ಸರ್. ನನ್ ಫ್ರೆಂಡ್ ಜೊತೆ ಕಾರ್ ಲ್ಲಿ ಬರ್ತಿದೀನಿ, ಅವನೇ‌ ಡ್ರಾಪ್ ಮಾಡ್ತಾನೆ ಅಂತ ಆಗ್ಲೆನೆ ಅವಳಿಗೆ ಮೆಸೇಜ್ ಮಾಡಿದ್ದೀನಿ.‌ಹಾಗಾಗಿ ಪಾರ್ಕ್ ಹತ್ರ ಅವಳು ನನ್ನನ್ನು ಬೈಕ್ ನಲ್ಲಿ ಬಂದಿದ್ನ ನೋಡೋದ್ ಬೇಡ ಎನ್ನುತ್ತಾ ಅಲ್ಲಿಯೇ ಇಳಿದು ದುಡ್ಡು ಕೊಟ್ಟು ಹೋಗುವಾಗ ‘ ಆಲ್ ದಿ ಬೆಸ್ಟ್ ‘ ಹೇಳಿ ಕಳುಹಿಸಿದೆ.

ಆತ ಹೋದ ದಾರಿಯನ್ನು ಗಮನಿಸುತ್ತಲೇ ನಿಂತೆ. ಪಾರ್ಕಿನ ಗೇಟ್ ಬಳಿ ಆತ ಹೋಗುತ್ತಿದಂತೆಯೇ ಆಕೆ ಬಂದಳು. ಇವನು ತನ್ನ ಕೈಯಲ್ಲಿದ್ದ ಚಾಕೊಲೇಟ್ ನ್ನು ಅವಳ ಕೈಗಿತ್ತ‌. ಅವಳು ಅವನ ಕೈಕುಲುಕಿದಳು. ನಾನು ನೋಡುತ್ತಲೇ ಇದ್ದೆ. ಇಬ್ಬರೂ ಪಾರ್ಕಿನ ಒಳಗೆ ದಾರಿ ಹಿಡಿದರು. ಆತ, ಅಕೆಯ ಭುಜವನ್ನು ತನ್ನ ಕೈಗಳಿಂದ ಬಳಸಿದ. ಆಕೆ‌ ಆಗಾಗ ಭುಜದಿಂದ ಅವನ ಕೈ ತೆಗೆಯುತ್ತಿದ್ದಳು ಆದರೆ ಅವನು ಮಿಂಚಿನ ವೇಗದಲ್ಲಿ ಆ ಭುಜವನ್ನು ಮತ್ತೆ ಮತ್ತೆ ಬಳಸುತ್ತಿದ್ದ. ಸಾಕಷ್ಟು ದೂರ ಹೀಗೆ ನಡೆದ ನಂತರ ಒಂದು ಬೆಂಚಿನ ಮೇಲೆ ಇಬ್ಬರೂ ಎದುರುಬದುರಾಗಿ ಕೂತು ಮಾತಾಡತೊಡಗಿದರು.
ಹೌದು, ಅವಳು ಅವನ ಪಾಲಿಗೆ ಫೇಸ್ ಬುಕ್ ನ People You May Know ವಿಭಾಗದಲ್ಲಿ ಸಿಕ್ಕವಳು. ಆದರೆ She was certainly the person I knew thoroughly.

ನಾನು ಅವಳ ತುಟಿಗಳನ್ನು ಗಮನಿಸಿದೆ. ಅರೆ ! ಅದೇ ವಾಕ್ಯಗಳು … ನಿನ್ನ ಮಾತುಗಳು ಕ್ಲೀಷೆ, ನೀನು ವಿಷಯ ಮುಚ್ಚಿಡಲು ಮಾತನಾಡುತ್ತೀಯ… ಸರ್ಕಾರವನ್ನು ದೂರುತ್ತೀಯ – ಇವೇ ಮಾತುಗಳನ್ನು ಅವಳು ಮುಂದೊಂದು ದಿನ ಅವನಿಗೂ ಹೇಳಬಹುದೆ ? ಎಂದು ಯೋಚಿಸಿದೆ. ‘ನಿನ್ನನ್ನು ಪ್ರೀತಿಸಿದ ಕಾರಣಕ್ಕೆ ನೀನು‌ ದೂರ ಮಾಡಲ್ಪಡುತ್ತೀಯ’ ಎಂದು ಅವನಿಗೆ ಈಗಲೇ ತಿಳಿಸಿಬಿಡಲೆ ? ಎಂದು ಯೋಚನೆ ಬಂದರೂ ಹೇಳಲು ಮನಸ್ಸು ಬರಲಿಲ್ಲ. ಆಕೆಯ ಮಾತುಗಳಿಗೆ ಇವನು ಪೋಣಿಸುವ ಮಾತುಗಳೂ ನನ್ನಷ್ಟೇ ಅಮಾಯಕವಾದವುಗಳೆ ? ಎಂದಷ್ಟೇ ಆಲೋಚಿಸುತ್ತಿದ್ದೆ.‌ ಅಷ್ಟರಲ್ಲಿ ಮತ್ತೊಂದು ಟ್ರಿಪ್ ನ ಬುಕಿಂಗ್ ಬಂತು. ನಾನು ಅದನ್ನು ಕ್ಯಾನ್ಸೆಲ್ ಮಾಡಿದೆ. ಮನೆಗೆ ಬಂದವನು ಆ  ಆ್ಯಪ್ ನ್ನೇ ಅನ್ ಇನ್ ಸ್ಟಾಲ್ ಮಾಡಿದೆ… ಆ ನಾಲ್ಕನೇ ಟ್ರಿಪ್ ನ್ನು ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ವ್ಯಕ್ತಿಯ ಬಗ್ಗೆ ದ್ವೇಷ ಮತ್ತು ಪ್ರೀತಿ ಒಟ್ಟೊಟ್ಟಿಗೇ ಆದವು. ಅವನು ಕ್ಯಾನ್ಸಲ್ ಮಾಡದಿದ್ದರೆ ಈ People You May Know ಪ್ರಕರಣ ನನಗೆ ಎದುರಾಗುತ್ತಲೇ ಇರಲಿಲ್ಲ. ನನ್ನ ದೂರ ಮಾಡಿ ಹೋದವಳ ಬಳಿಗೆ ಹೋಗುತ್ತಿದ್ದವನನ್ನು ನಾನೇ ಹೋಗಿ ಡ್ರಾಪ್ ಮಾಡಿ ಬಂದೆನಲ್ಲ ಎಂಬುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯಲಿಲ್ಲ. ನನ್ನದಲ್ಲದ ಬದುಕನ್ನು ಒಂದು ದಿನ ಬದುಕಲು ಹೋಗಿದ್ದು ನನ್ನದೇ ಬದುಕಿಗೆ ಹೀಗೆ ತಳುಕು ಹಾಕಿಕೊಳ್ಳಬಲ್ಲುದು‌‌ ಎಂದು ನಾನಾದರೂ ಏಕೆ ಎಣಿಸಿರಬೇಕು ಅಲ್ಲವೆ ಸರ್ ? ಎಂದು ಆ ಹುಡುಗ ತನ್ನ ಅನುಭವ ಹೇಳಿಕೊಂಡಾಗ, ನನಗೆ ನಾನು ಒಂದು ದಿನ ಭಿಕ್ಷುಕನಾಗಿ ಹೋದಾಗ ನಡೆದದ್ದೆಲ್ಲ ನೆನಪಾಯಿತು.

ನನ್ನೆದುರು ಕೂತಿದ್ದ ಆ ಹುಡುಗನ ಕಣ್ಣಂಚಲ್ಲಿ ನೀರು ಬಂದಿದ್ದನ್ನು ಗಮನಿಸಿದ ನಾನು , ‘ ನೋಡು People you know or knew are the ones who bother you , people who don’t know you don’t care for what you are ‘ ಎಂಬ ಫಿಲಾಸಫಿಕಲ್ ಮಾತು ಹೇಳಿದೆ. ಆತ ತಂದಿದ್ದ ಆ ಲೇಖನವಿದ್ದ ನ್ಯೂಸ್ ಪೇಪರ್ ನ್ನು ಅಲ್ಲಿಯೇ ಇಟ್ಟು ಏನೂ ಮಾತಾಡದೆ ಎದ್ದು ಹೋದ. ನಾನು ಲೇಖನದ ಜೊತೆ ಪ್ರಕಟವಾಗಿದ್ದ ನನ್ನದೇ ಫೋಟೋ ನೋಡಿಕೊಂಡು ಪೀಪಲ್ ಯೂ ಮೇ know ಎಂಬುದನ್ನು ನೆನಯುತ್ತಾ ರಾಪಿಡ್ ಬೈಕ್ ಟ್ಯಾಕ್ಸಿಯ ಕ್ಯಾಪ್ಟನ್ ಆ್ಯಪ್ ನ್ನು ಇನ್ಸ್ಟಾಲ್ ಮಾಡಿಕೊಂಡೆ. ನಾಳೆ ಶನಿವಾರ. ಅಕಸ್ಮಾತ್ ಆ ಹುಡುಗಿ ಏನಾದರೂ ಆ ಹುಡುಗನನ್ನು ಮೀಟ್ ಮಾಡಲು ಬೈಕ್ ರೈಡ್ ಬುಕ್ ಮಾಡಿ, ಅದು ನನಗೇ ಸಿಕ್ಕರೆ ಅವಳ ಬಳಿ How many people you may know ಎಂದು ಕೇಳಿಯೇ ಬಿಡುತ್ತೇನೆ…

 

‍ಲೇಖಕರು avadhi

January 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Ahalya

    ಕುತೂಹಲ, ಕೊನೆಯವರೆಗೂ. ಇಷ್ಟ ಆಯ್ತು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: