ಪ್ರತಿಭಾ ನಂದಕುಮಾರ್ ಅವರ 'ಕಾಗದದ ಸಾಕ್ಷಿ'

ಪ್ರತಿಭಾ ನಂದಕುಮಾರ್
ಈ ಜೋಡೆತ್ತುಗಳು
~
ಕಲೆಯಿಂದ ಕಲಾವಿದನನ್ನು ಬೇರ್ಪಡಿಸಬಹುದೇ?
ಇಲ್ಲವೆಂದಾದರೆ ಪುಡಾರಿಯನ್ನು ಕುತಂತ್ರದಿಂದ?
 
ಈ ಜೋಡೆತ್ತುಗಳು ಬಹಳ ಕಷ್ಟಪಟ್ಟು ಜೊತೆಗೆ ಇಷ್ಟಪಟ್ಟು
ಒಂದೇ ನೊಗಕ್ಕೆ ತಗುಲಿಹಾಕಿಕೊಂಡಿವೆ ಆದರೆ
ಎತ್ತು ಏರಿಗೆ ಕೋಣ ನೀರಿಗೆ ಎಂದಾಗಿ ಅವರಿಗೆ ದಿಕ್ಕೆಟ್ಟಿದೆ.
ಈ ಅಸಮಾನ ಜೋಡಿ ಮಂಡ್ಯಕ್ಕೆ ಬಂದಿದ್ದರೆ
ಕಾವೇರಿಯ ನೀರು ಕುಡಿದಿದ್ದರೆ
ಓದಬಹುದಿತ್ತು ಕಲ್ಲಿನ ಮೇಲೆ ಕೆತ್ತಿದ ಶಾಸನ
ಬ್ರಿಟಿಷರೊಂದಿಗೆ ಕಾದಾಡುತ್ತಾ ಟಿಪ್ಪು ಇದೇ ಸ್ಥಳದಲ್ಲಿ
ಬಿದ್ದು ವೀರ ಮರಣವನ್ನೈದಿದ.
 
ಚರಿತ್ರೆ ಹಾಗೆ ಕೊರೆಯಬಹುದೇ ಶಾಸನ
ಜೋಡೆತ್ತುಗಳ ಬಗ್ಗೆ?  ಅವುಗಳ ನೊಗದ ಬಗ್ಗೆ?
ಎತ್ತಬಹುದೇ ಪ್ರಶ್ನೆ ಎತ್ತುಗಳನ್ನು ಉತ್ತ ಭೂಮಿಯನ್ನು
ಬೇರ್ಪಡಿಸಬಹುದೇ?  ನೊಗ ಇಳಿಸಿ ನಡೆವಾಗ ಇವು
ಹಿಂದಿರುಗಿ ನೋಡಬಹುದೇ, ತಾವು ಹೆಜ್ಜೆ ಇಟ್ಟಲ್ಲೆಲ್ಲ
ಹಾಳಾದ ಹೊಲ ಕಂಡು ಕಣ್ಣೀರು ಹಾಕಬಹುದೇ?
 
ಅಥವಾ ಮುಸುಕುಧಾರಿಗಳ ದಂಡಪಾಣಿಗಳ
ಸುತ್ತಿಗೆ ಸರಪಳಿಗಳ ಬೂಟುಕಾಲುಗಳ
ಲಾಠಿ ಏಟುಗಳ ಅಶ್ರುಅನಿಲಗಳ ಶತ್ರು ರೋಷಗಳ
ಅರಕ್ಷಕರ  ಆತ್ಮದ್ರೋಹಿಗಳ ದೇಶಭ್ರಷ್ಟರ
ಮಡದಿ ಮಕ್ಕಳ ತೊರೆದವರ ತಾಯಂದಿರ ಮರೆತವರ
ಬಾಂಬಿಟ್ಟು ಸಿಪಾಯಿಗಳ ಸಿಡಿಸಿದವರ
ರೈಲಿಗೆ ಬೆಂಕಿ ಇಟ್ಟವರ ಮಕ್ಕಳಿಗೆ ವಿಷ ಕೊಟ್ಟವರ
ಸರ್ವಾಧಿಕಾರದ ಮದ ಸರ್ಪ ಮತ್ಸರದ ಹಠ ತೊಟ್ಟವರ
ಅಧರ್ಮಕ್ಕೆ ಶರಣಾಗಿ ಸತ್ಯಕ್ಕೆ ವಿಮುಖರಾಗಿ
ಬೀದಿಗಿಳಿದವರ ಕಡೆಗಣಿಸಿ ಬೂಟುನೆಕ್ಕುವವರ ತಲೆ ಸವರಿ
ಮೇಯುವುದೇ ಕಾಯಕವಾದ ಸನಾತನಿಗಳ
ಪೋಸ್ಟರ್ ಬಾಯ್ ಜೋಡೆತ್ತುಗಳು
 
ಕೊನೆಗೆ ಪಶ್ಚಾತ್ತಾಪ ಪಡಬಹುದೇ?
ನಿಜಕ್ಕೂ ರಾಮನಾಮ ಜಪಿಸಿ
ಧರ್ಮದೇಟು ತಪ್ಪಿಸಿಕೊಳ್ಳಬಹುದೇ?

ಚಕ್ರವ್ಯೂಹ
~
If all else fails, try the Ambedkar and Dalit card – Nagraj Huilgol
ಇಷ್ಟೆಲ್ಲಾ ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ಉಪಯೋಗವಿಲ್ಲ
ನೆಟ್ ವರ್ಕ್ ಇಲ್ಲದೇ ಗೂಗಲ್ ಮ್ಯಾಪ್ ತೆರೆಯುವುದಿಲ್ಲ.
ಚಕ್ರವ್ಯೂಹದೊಳಗೆ ತಾವಾಗಿ ಹೋಗಿ ಸಿಕ್ಕಿಕೊಂಡವರು
 
ಅಲ್ಲಾಸಿ ಇಲ್ಲಾಸಿ ಯಾವುದೋ ಕೋಟೆ ಪಕ್ಕದ ಶಾಸನ ತೋರಿಸಿ
ಮೋಡಿ ಅಕ್ಷರಗಳ ತಾಳೆಗರಿಗಳ ಶಾಸ್ತ್ರಾಧಾರ ಉಲ್ಲೇಖಿಸಿ
ಹಾಗಂತೆ ಹೀಗಂತೆ ಸಂದರ್ಭಾನುಸಾರ ವಿಶ್ಲೇಷಿಸಿ ಕೊನೆಗೆ
 
ಇದು ಶಾಸ್ತ್ರೋಕ್ತ ಇದು ನಿಷಿದ್ಧ ಇದು ಆಗಿಬರುತ್ತೆ ಇದಿಲ್ಲ
ಸಮ್ಮತ ಅಸಮ್ಮತ ಬಹಿಷ್ಕೃತ ತಿರಸ್ಕೃತ ಪುರಸ್ಕೃತ ಅಂತೆಲ್ಲಾ
ಬೊಗಳೆ ಹೊಡಿಯುತ್ತ ದೊಡ್ಡಿಯೊಳಗೆ ಕೂಡಿ ಹಾಕುತ್ತಾ
 
ಎಷ್ಟು ದಿನ ರಾರಾಜಿಸಲು ಸಾಧ್ಯ, ನಿಲ್ಲುತ್ತಿದೆ ಸಧ್ಯ
ಬೀದಿಗಿಳಿದ ದನಗಳು ಮತ್ತು ಗೋವುಗಳ ನಡುವೆ ಕಾದಾಟ
ಉಚ್ಚೆ ಮತ್ತು ಮೂತ್ರದ ಸಂಘರ್ಷ, ಏನು ಹಾರಾಟ!
 
ಮುಸುಕಿನೊಳಗಿನ ಗುದ್ದಲ್ಲ ಇದು ನೇರಾನೇರ ಹೊಡೆದಾಟ
ಮರೆಮಾಡಿಕೊಂಡ ಮುಖ ಚಿರಪರಿಚಿತ, ಗುಟ್ಟಲ್ಲ
ಕಳಿಸಿದವರೂ ಹೊರಗಿನವರಲ್ಲ ಹಿಟ್ಲರನ ನೆಂಟರೆ ಎಲ್ಲ
 
ಸ್ವಲ್ಪ ಅರ್ಥಮಾಡಿಕೊಳ್ಳಿ ಇದವರ ಕೊನೆಯ ಅಸ್ತ್ರ
ಶಾಸ್ತ್ರ ಕೈಬಿಟ್ಟು ಬೇರೆ ದಾರಿ ತೋರದೇ ಶರಣಾಗಿ ವಿವಸ್ತ್ರ
ಸಿಕ್ಕಿಬಿದ್ದಿದ್ದಾರೆ ವ್ಯೂಹದಲ್ಲಿ ಹೊರಬರುವ ಸಾಧ್ಯತೆಯಿಲ್ಲ.
 
ಇದೀಗ ಇನ್ನೊಂದು ತಂತ್ರ ಕಂಡುಕೊಂಡಿದ್ದಾರೆ
ಅದವರ ರಾಮಬಾಣವೆಂದು ಭ್ರಮಿಸಿದ್ದಾರೆ
ಬಾಡು ತಿನ್ನುವವರಿಗೆ ಬಾಳೆಲೆಯ ಊಟ ಬಡಿಸಿದ್ದಾರೆ.
 
ಶಾಸ್ತ್ರ ಸಮ್ಮಿತ ಸ್ವಾಮಿ ಎಂದು ಈಗ ಅರಚುತ್ತಿದ್ದಾರೆ.

ಕಂಬದ ಗೊಂಬೆ
~
“ಕಂಬದಾ ಮ್ಯಾಲಿನಾ ಗೊಂಬಿಯೇ
ನಂಬಲೆನಾ ನಿನ್ನಾ ನಗಿಯನ್ನಾ.. “
ಎಂದು ಕೇಳಿ ಅದು ನಂಬಬೇಡಾ ಎಂದು ಹೇಳಿದರೂ
ಕೇಳದೇ ಕೈಕೊಟ್ಟು ಕೋಳಕೊಟ್ಟು ಕಟ್ಟು ಹಾಕಿಸಿಕೊಂಡು
ಮನದ ಮಾತಿಗೆ ಮರುಳಾಗಿ ಉದ್ದಂಡ ಬಿದ್ದು ಶರಣಾಗಿ
ಸಕಲವನ್ನೂ ಧಾರೆಯೆರೆದು ಕೊನೆಗೆ ಚಿಪ್ಪು ಹಿಡಿದು ಬೀದಿಗಿಳಿದರೆ
 
ಕಂಬದ ಗೊಂಬೆಗೇನೂ ನಷ್ಟವಿಲ್ಲ
ಆಡಿಸಿ ನೋಡು ಬೀಳಿಸಿ ನೋಡು ಎಂದು ಕಿಚಾಯಿಸಿ
ಕೈ ತಟ್ಟಿ ಕರೆಯುತ್ತಿದೆ ಒಂದು ಕೈ ನೋಡಲು.
ಇದು ರೋಟಿ ಕಪಡಾ ಮಕಾನಿನ ಮಾತು
ಇದು ಕಾಗದದ ಸಾಕ್ಷಿಯ ಕರಾಮತ್ತು
ಇದು ಶಾನಾಶಾಹಿಯ ಸಾಬೀತು
ನಗೀನವಿಲು ಕುಣಿಯುತ್ತಿತ್ತು ಆಡುತಿತ್ತು
 
ಕಂಬದ ಮೇಲಿನ ಗೊಂಬಿಗಳು
ಕೆಂಪುಕೋಟೆಯ ಮೇಲೆ
ಜಯಲಲಿತಾ ಶಶಿಕಲಾ ಜೋಡಿಯಂತೆ
ಮುಳುಗಿಸದೆ ಬಿಡೆವು ಎಂದು ಶಪಥ ತೊಟ್ಟು
 
ಆಡುತ್ತಿವೆ ಹಾವು ಏಣಿ ಆಟ
ತಿಳಿಯದೋ ಏನಿವರ ಹಠ.

‍ಲೇಖಕರು avadhi

January 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: