ನಂ ಬೆಂಗ್ಳೂರು!

ಎಸ್ ಜಿ ಶಿವಶಂಕರ್

ಬೆಂಗ್ಳೂರೆಂದ್ರೆ ನಂಗೊಂತರಾ ಅಲರ್ಜಿ! ನಾನೆಂದ್ರೆ ಬೆಂಗ್ಳೂರಿಗೂ ಅಲರ್ಜಿ ಇರಬಹುದು. ಬೆಂಗಳೂರಿಗೆ ಹೋಗುವುದನ್ನು ಏನಾದರೂ ನೆಪವೊಡ್ಡಿ ತಪ್ಪಿಸಿಕ್ಕೊಳ್ಳುತ್ತೇನೆ, ಅನಿವಾರ್ಯವಾದರೆ ಹೋಗುವ ದಿನವನ್ನು ಆದಷ್ಟೂ ಮುಂದೆ ತಳ್ಳುತ್ತೇನೆ. ಆದರೆ ಮುಂದೂಡಲಾಗದ ಕೆಲವು ಅನಿವಾರ್ಯ ಸಂದರ್ಭಗಳು ಬಂದೇ ಬರುತ್ತವೆ. ಉದಾಹರಣೆಗೆ ಸ್ನೇಹಿತರ ಇಲ್ಲಾ ನೆಂಟರಿಷ್ಟರ ಮೆನಯ ಮದುವೆ, ಮುಂಜಿ, ನಾಮಕರಣ, ಬರ್ತ್ ಡೇ-ಇಂತಾವು! ನನಗಾಗಿ ಮದುವೆಯನ್ನು ಮುಂದೆ ಹಾಕಿ ಎಂದು ಹೇಳಲು ಸಾಧ್ಯವೆ..? ಹಾಗೇನಾದರೂ ಹೇಳಿದರೆ ನಿಮ್ಹಾನ್ಸ್ ದಾರಿಯನ್ನೇ ತೋರಿಸಿಬಿಡುತ್ತಾರೆ!! ಬೆಂಗಳೂರಿಗೆ ಹೋಗಲೇಬೇಕಾದ ಇಂತಾ ಸಂದರ್ಭಗಳು ನನ್ನನ್ನು ದುಃಸ್ವಪ್ನದಂತೆ ಕಾಡುತ್ತವೆ.
ಅಖಂಡ ಭಾರತದ ಜನರಿಗೂ ಮತ್ತು ಬೆಂಗಳೂರಿಗರಿಗೂ ನನ್ನ ಈ ಹಪಾಹಪಿ ವಿಚಿತ್ರ ಎನಿಸಿಬಹುದು! ತಮಿಳರಿಗೆ, ತೆಲುಗರಿಗೆ, ಮಲೆಯಾಳಿಗಳಿಗೆ, ಉತ್ತರ, ಪಶ್ಚಿಮ, ಪೂರ್ವ ಭಾರತೀಯರಿಗೆಲ್ಲಾ ಬೆಂಗಳೂರು ಸ್ವರ್ಗವಾಗಿರುವಾಗ ಇವನದೇನು ಅಪಸ್ವರ ಎನಿಸಬಹುದು. ನನ್ನನ್ನು ಬಿಟ್ಟು ಉಳಿದ ಭಾರತೀಯರಿಗೆ ಅನ್ನಿಸಿದಂತೆ ನಿಮಗೂ ಬೆಂಗಳೂರೆಂದರೆ ಸ್ವರ್ಗ ಎನ್ನಿಸಬಹುದು. ಖಂಡಿತವಾಗಿ ನನಗಲ್ಲ ಮಹರಾಯರೆ!
ಮೈಸೂರಿನಂತ ಪ್ರಶಾಂತವಾದ ಊರಿನಲ್ಲಿ ಬೆಳೆದವರು ಖಂಡಿತ ನನ್ನ ಮಾತನ್ನು ನಂಬಿಯೇ ನಂಬುತ್ತಾರೆ ಎಂಬ ಭಾವನೆ ನನ್ನದು. ಬಹುತೇಕ ಕನ್ನಡಗರಿಗೆ, ಸಣ್ಣಪುಟ್ಟ ನಗರವಾಸಿಗಳಿಗೆ ಬೆಂಗಳೂರೆಂದರೆ ಕಿರಿಕಿರಿಯೇ! ಆದರೆ ಕರ್ನಾಟಕದ ಜನರ ಶೇಕಡಾ ಐವತ್ತರಷ್ಟು ಸ್ನೇಹಿತರು, ನೆಂಟರಿಷ್ಟರು ಬೆಂಗಳೂರಿನಲ್ಲಿಯೇ ನೆಲಸಿರುವರು! ಇದು ನನ್ನ ಅಂದಾಜು! ಬಹುಶಃ ಈ ಮಾತನ್ನು ಭಾರತದ ಇತರ ಜನರಿಗೂ ಅನ್ವಂಸುತ್ತದೆ! ಹೀಗಾಗಿ ಸ್ನೇಹಕ್ಕಾಗಿ, ನೆಂಟಸ್ತನಕ್ಕಾಗಿ ಎಲ್ಲರೂ ಬೆಂಗಳೂರಿಗೆ ಹೋಗಿ ಬರುವುದು ಅನಿವಾರ್ಯ! ಕರ್ನಾಟಕದ ರಾಜಧಾನಿಯೂ ಬೆಂಗಳೂರೇ ಆಗಿದೆ. ಹೀಗಾಗಿ ವ್ಯಾಪಾರ, ವಹಿವಾಟುಗಳಿಗೆ, ಶಿಫಾರಸ್ಸುಗಳಿಗೆ, ವಗರ್ಾವಣೆಗಳಿಗೆ, ಉದ್ಯೋಗ ಅರಸುವುದಕ್ಕೆ, ಇಲ್ಲದಿದ್ದರೂ ಸುಮ್ಮನೆ-ಹೀಗೆ ಹತ್ತಾರು ಕಾರಣಗಳಿಗೆ ಜನರು ಬೆಂಗಳೂರಿಗೆ ಬಂದು ಕಂಗಾಲುಪಡುತ್ತಾರೆ! ಅಥವಾ ಇದು ನನ್ನ ದೃಷ್ಟಿಯೇನೋ ತಿಳಿಯುತ್ತಿಲ್ಲ.
ಮೊದಲೇ ಹೇಳಿದಂತೆ ನನಗೆ ಬೆಂಗಳೂರೆಂದರೆ ಭಯಂಕರ ಅಲರ್ಜಿ! ಕಿರಿಕಿರಿ, ಪಿರಿಪಿರಿ! ನನ್ನಂತ ಅನೇಕರಿಗೂ ಅಲರ್ಜಿಯಿರಬಹುದು! ಕಾರಣ..? ಎಂದು ಬೆಂಗಳೂರಿಗರು ಹುಬ್ಬೇರಿಸಿ ಎತ್ತರದ ದನಿಯಲ್ಲಿ ಕೇಳಬಹುದು. ಸ್ವಾಮಿ, ಕಾರಣ ಒಂದಾದರೆ ಹೇಳಬಹುದು, ಆದರೆ ನೂರಾರು ಕಾರಣಗಳಾದರೆ ಹೇಗೆ ಹೇಳುವುದು. ಆದರೂ ಕೆಲವನ್ನು ಹೇಳಿಯೇಬಿಡುತ್ತೇನೆ. ಇದು ಬೆಂಗಳೂರು ನಗರವಾಸಿಗಳಿಗೆ ಅಪಥ್ಯವಾಗಬಹುದು, ಅದಕ್ಕಾಗಿ ಬೆಂಗಳೂರಿಗರ ಕ್ಷಮೆ ಕೋರುತ್ತಿದ್ದೇನೆ ಇನ್ ಅಡ್ವಾನ್ಸ್!
ಮೊದಲಿಗೆ ಯಾವುದೇ ಊರಿನಿಂದ ಬೆಂಗಳೂರಿನ ಬಸ್ಸು ಹತ್ತಿದರೆ ಅದು ಬೆಂಗಳೂರಿನ ಅಂಚಿನವರೆಗೆ ಸುಖವಾಗಿ ಒಯ್ದು, ಅಲ್ಲಿಂದ ಆಮೆಯಂತೆ ಚಲಿಸುತ್ತದೆ. ಮುಂದಿರುವ ಅಸಂಖ್ಯ ವಾಹನಗಳ ಹಿಂದೆ ತೆವಳುತ್ತದೆ. ನಡುನಡುವೆ ಮೆಟ್ರೋ ಕಾಮಗಾರಿಯ ಧೂಳಿನ ಅಭಿಷೇಕ ಯತೇಚ್ಛವಾಗಿ ಆಗುತ್ತದೆ! ಡ್ರೈವರ್ ಆಗಾಗ್ಗೆ ಹಾಕುವ ಬ್ರೇಕಿಗೆ ಬಸ್ಸು ಮಾರಣಾಂತಿಕವಾಗಿ ನರಳುತ್ತದೆ! ಜನರು ಮುಗ್ಗರಿಸುತ್ತಾರೆ! ಸಾವರಿಸಿಕೊಂಡು ಸರಿಯಾಗಿ ಕೂರುತ್ತಾರೆ! ಇದು ಸ್ಯಾಟಲೈಟ್ ಬಸ್ ನಿಲ್ದಾಣದವರೆಗೂ ನಿರಂತರವಾಗಿ ನಡೆಯುತ್ತದೆ. ಸುಮಾರು ಮುಕ್ಕಾಲು ಗಂಟೆಯ ನಂತರ ನಿಲ್ದಾಣಕ್ಕೆ ಬಸ್ಸು ಬಂದು ನಿಂತಾಗ ಪ್ರಯಾಣಿಕರೆಲ್ಲ ಸುಧೀರ್ಘ ನಿಟ್ಟುಸಿರಿಡುತ್ತಾರೆ! ‘ಅಂತೂ ಬಂದೇಬಿಟ್ಟೆವಲ್ಲ’ ಎಂಬ ಹರ್ಷವನ್ನು ಮುಖದಲ್ಲಿ ಪ್ರದರ್ಶಿಸುತ್ತಾರೆ!
ಐದು ವರ್ಷಗಳ ಹಿಂದೆ ಮೆಜಸ್ಟಿಕ್ ಎಂದೇ ಜನಪ್ರಿಯವಾಗಿರುವ ಸುಭಾಷ್ ನಗರದ ಕೆಂ.ಬ.ನಿಗೆ (ಕಂಬನಿ ಅಲ್ಲ) ಅಂದರೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಎಲ್ಲಾ ಬಸ್ಸುಗಳೂ ಬಂದು ನಿಲ್ಲುತ್ತಿದ್ದವು. ಅದೇ ಕೇಂದ್ರ ಬಸ್ ನಿಲ್ದಾಣವಾಗಿತ್ತು. ಬೇರೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರೆಲ್ಲಾ ಎದುರಿನ ಬಿ.ಎಂ.ಟಿ.ಸಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಹೋಗಿ ತಮ್ಮ ಬಡಾವಣೆಗಳಿಗೆ ಬಸ್ಸು ಹಿಡಿಯುತ್ತಿದ್ದರು. ಈಗಿನ ವ್ಯವಸ್ಥೆಯೇ ಬೇರೆ.
ಮೈಸೂರು ಕಡೆಯಿಂದ ಬಂದವರನ್ನು ಕರ್ನಾಟಕ ಸಾರಿ ಬಸ್ಸು ಬ್ಯಾಟರಾಯನ ಪುರದ ಸ್ಯಾಟಲೈಟ್ ನಿಲ್ದಾಣದಲ್ಲಿಯೇ ಇಳಿಸಿಬಿಡುತ್ತದೆ. ಅಲ್ಲಿಂದ ನಗರದ ಎಲ್ಲಾ ಬಡಾವಣೆಗಳಿಗೂ ನಗರ ಸಾರಿಗೆ ವ್ಯವಸ್ಥೆಯಿಲ್ಲ! ಅದಕ್ಕಾಗಿ ಮತ್ತೊಂದು ಬಸ್ಸು ಹತ್ತಿ ಬಿ.ಎಂ.ಟಿ.ಸಿ ಕೇಂದ್ರ ನಿಲ್ದಾಣಕ್ಕೆ ಹೋಗಬೇಕು! ಈ (ಅ)ವ್ಯವಸ್ಥೆಗೆ ಹೊಂದಿಕ್ಕೊಳ್ಳಬೇಕೆಂದು ಸಾರಿಗೆ ಇಲಾಖೆಯವರು ಬಲವಂತ ಮಾಘಸ್ನಾನ ಮಾಡಿಸುತ್ತಿದ್ದಾರೆ! ನನಗೆ ಮಾತ್ರ ಪ್ರತಿಬಾರಿಯೂ ಬ್ಯಾಟರಾಯನಪುರದ ಬಸ್ ನಿಲ್ದಾಣದಲ್ಲಿ ಇಳಿದಾಗ ‘ಬ್ಯಾ’ ಎನ್ನುವ ಕುರಿಯ ಪ್ರಜ್ಞೆ ನನ್ನನ್ನು ಕಾಡುತ್ತದೆ.
ಬೆಂಗಳೂರಿಗೆ ಹೋಗಬೇಕೆನ್ನುವಾಗ ನನಗೆ ಈ ಎಲ್ಲಾ ನೆನಪುಗಳು ಟಿವಿಯ ಮೆಗಾ ಸೀರಿಯಲ್ಲುಗಳಂತೆ ಕಂತುಕಂತಿನಲ್ಲಿ ಕಾಡುತ್ತವೆ. ಇದರೆ ಜೊತೆಗೆ ಬೆಂಗಳೂರಿನ ಆಟೋ ಚಾಲಕರೂ ನನ್ನ ಹೆದರಿಕೆಗೆ ಕಾರಣ! ಯಾಕೆ ಎನ್ನುತ್ತೀರಾ..? ಮೊದಲಿಗೆ ಈ ಆಟೋ ಚಾಲಕರು ನಾವು ಹೋಗುವ ಕಡೆಗೆ ಬರುವುದಿಲ್ಲ! ಜಯನಗರಕ್ಕೆ ಬರ್ತೀರಾ ಎಂದರೆ ಮಲ್ಲೇಶ್ವರಕ್ಕೆ ಬರ್ತೀನಿ ಎನ್ನುತ್ತಾರೆ! ನಾವು ಕೋರಮಂಗಲ ಅಂದರೆ ಅವರು ವೈಟ್ಫೀಲ್ಡ್ ಅನ್ನುತ್ತಾರೆ! ಅವರಲ್ಲಿ ಯಾರದರೊಬ್ಬರು ನಾವು ಹೋಗೋ ಕಡೆಗೆ ಅಕಸ್ಮಾತ್ ಬಂದರೆ ‘ಒಂದೂವರೆ ಚಾರ್ಜು’ ಅನ್ನುತ್ತಾರೆ! ಹೆಚ್ಗೆ ಡಿಮ್ಯಾಂಡ್ ಮಾಡದಿದ್ದರೆ ಅವರ ಆಟೋ ಮೀಟರು ಯದ್ವಾತದ್ವಾ ಓಡುತ್ತದೆ! ಇಳಿದಾಗ ಚಿಲ್ಲರೆ ಇಲ್ಲ ಅಂದರೆ ಚಿಲ್ಲರೆ ಮಾತಾಡುತ್ತಾರೆ. ಖಡಕ್ಕಾಗಿ ಮಾತಾಡಿದ್ರೆ ಅರ್ಧ ದಾರೀಲೇ ಇಳಿಸಿಬಿಡ್ತಾರೆ!
ಮರುದಿನ ಅನಿವಾರ್ಯವಾಗಿ ಬೆಂಗಳೂರಿಗೆ ಹೋಗಲೇಬೇಕಾಗಿರುವುದು ನೆನಸಿಕೊಂಡು ಜ್ವರ ಬಂದಂತಾಗಿತ್ತು! ಮುಖ ಕಳಾಹೀನವಾಗಿತ್ತು.
‘ಸ್ವಲ್ಪ ಡಲ್ಲಾಗಿದ್ದೀನಲ್ವಾ..?’ ಮನೆಯವಳನ್ನು ಕೇಳಿದೆ.
‘ಷೇವ್ ಮಾಡ್ಕೊಂಡಿಲ್ವಲ್ಲಾ ಅದಕ್ಕೇ ಇರ್ಬೇಕು’ ಎಂದಳು. ಮುಂದುವರಿಸಿ ‘ಬೆಳಿಗ್ಗೆ ಎಷ್ಟೊತ್ತಿಗೆ ಹೋಗ್ತೀರಾ..? ತಿಂಡಿ ತಿಂದ್ಕೊಂಡು ಹೋಗ್ತೀರೋ ಇಲ್ಲಾ ಹಾಗೇ ಹೋಗ್ತೀರೋ?’ ಎಂದಿದ್ದಕ್ಕೆ ಬೆದರಿದೆ.
ಅವಳ ಪ್ರಶ್ನೆಗಳಿಗೆ ಇನ್ನಷ್ಟು ಬೆದರಿದೆ. ಬೆಂಗಳೂರು ಹೋಟೆಲುಗಳಲ್ಲಿ ಸಾಮಾನ್ಯ ಮಧ್ಯಮವರ್ಗದವರು ಆಹಾರ ಸೇವಿಸಲಾದೀತೆ..? ಜೇಬು ತುಂಬಾ ಹಣ ತುಂಬಿಕೊಂಡು ಹೋದರೆ ಮಾತ್ರ ಹೊಟ್ಟೆ ತುಂಬಾ ತಿನ್ನಬಹುದು. ನೂರರ ನೋಟಿಗೆ ಎರಡು ಇಡ್ಲಿ, ಒಂದು ಚೋಟಾ ಕಾಫಿ ಸಿಗಬಹುದು ಅಷ್ಟೆ!
ಹಿಂದಿನ ಸಲದ ಕಹಿ ಅನುಭವ ನೆನಪಾಯಿತು. ರೈಲ್ವೇ ಸ್ಟೇಷನ್ ಬಳಿಯ ಹೋಟೆಲೊಂದರಲ್ಲಿ ಒಂದು ಇಡ್ಲಿ, ಒಂದು ಉದ್ದಿನ ವಡೆ ಆರ್ಡರ್ ಮಾಡಿದ್ದಕ್ಕೆ ಬಂದಿದ್ದ ಬಿಲ್ಲು ಎರಡು ಇಡ್ಲಿ ಮತ್ತು ಉದ್ದಿನ ವಡೆಗೆ. ನಾನು ತಿಂದಿದ್ದು ಒಂದೇ ಇಡ್ಲಿ ಎಂಬ ನನ್ನ ಮಾತಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಕೂತಿದ್ದವ ನಕ್ಕು ಹೇಳಿದೆ.
‘ಹೀಗೇ ಜನ ಚೌಕಾಸಿ ಮಾಡಿ ಅರೆ ಹೊಟ್ಟೆ ತಿನ್ತಾರೆ. ಅದಕ್ಕೇ ನಾವು ಇಡ್ಲೀನ ಸ್ಟ್ಯಾಂಡರ್ಡ್ಡ ಮಾಡಿದ್ದೀವಿ. ನೀವು ಒಂದು ತಿಂದರೂ ಅಷ್ಟೇ ಚಾರ್ಜು ಇಲ್ಲಾ ಎರಡು ತಿಂದರೂ ಅಷ್ಟೇ ಚಾರ್ಜು’ ಎಂದು ಬಾಯಿ ಮುಚ್ಚಿಸಿದ್ದ.
ಅವನ ವಿಚಿತ್ರವಾದ ವಾದಕ್ಕೆ ಬೆಪ್ಪಾಗಿದ್ದೆ. ಆಗಲೇ ಇಡೀ ಬೆಂಗಳೂರಿನಲ್ಲಿರುವ ಲೆಕ್ಕಕ್ಕೆ ಸಿಗದ ಹೋಟೆಲುಗಳಲ್ಲಿ ಇನ್ನೆಷ್ಟು ವಿಚಿತ್ರವಾದ ನಿಯಮಾವಳಿಗಳಿರಬಹುದು ಎಂದು ದಿಗಿಲಾಯಿತು. ಅಂದಿನಿಂದ ಬೆಂಗಳೂರಿನ ಹೋಟೆಲುಗಳ ಸಹವಾಸಕ್ಕೆ ಹೋಗಬಾರದು ಎಂದು ನಿರ್ಧರಿಸಿದ್ದೇನೆ.

‘ಇಲ್ಲ, ಬೆಳಿಗ್ಗೆ ತಿಂಡಿ ತಿಂದ ನಂತರವೇ ಹೊರಡ್ತೇನೆ’ ಎಂದು ಹೇಳಿ ಟಿವಿಯತ್ತ ಕಣ್ಣು, ಕಿವಿ ಹೊರಳಿಸಿದ್ದೆ.
‘ಹೀಗೂ ಉಂಟೆ’ ಕಾರ್ಯಕ್ರಮ ಬಿತ್ತರವಾಗುತ್ತಿತ್ತು. ಏನೋ ನಂಬಲಾಗದ ಸುದ್ದಿಯಂತೆ. ನೂರಾರು ನಂಬಲಾರದವನ್ನು ನೋಡಿ ತಲೆ ಚಿಟ್ಟು ಹಿಡಿದಿತ್ತು. ದೊಡ್ಡದಾಗಿ ಆಕಳಿಸಿದೆ.
‘ಟಿವಿ ಮುಂದೆ ಕೂತು ಆಕಳಿಸಬೇಡಿ. ಹೋಗಿ ಮಲಗಿ, ನನಗಾದರೂ ನೆಮ್ಮದಿಯಿಂದ ಟಿವಿ ನೋಡೋಕೆ ಬಿಡಿ’ ಅರ್ಧಾಗಿಯ ಹಿತವಚನಕ್ಕೆ ಮರ್ಯಾದೆಯಿತ್ತು ಮಲಗುವ ಸಿದ್ಧತೆ ನಡೆಸಿದೆ.
ಬೆಂಗಳೂರಿಗೆ ಹೋಗಲೇಬೇಕಾದ ಅನಿವಾರ್ಯತೆ ತಲೆ ತುಂಬ ತುಂಬಿತ್ತು. ವರ್ಣಿಸಲಾರದ ಬೆಂಗಳೂರಿನ ತಾಪತ್ರಯಗಳ ಚಿಂತೆಯಿಂದ ಕುಗ್ಗಿ ದಿಂಬಿಗೆ ತಲೆಯಿಟ್ಟೆ! ಕ್ಷಮಿಸಿ ವಾಕ್ಯ ತಪ್ಪಾಯಿತು. ಕುತ್ತಿಗೆ ನೋವಿನ ದೆಸೆಯಿಂದ ವೈದ್ಯರು ದಿಂಬನ್ನೇ ಉಪಯೋಗಿಸಬೇಡಿ ಎಂದು ಆದೇಶಿಸಿರುವುದರಿಂದ ದಿಂಬಿಗೆ ತಲೆಯಿಟ್ಟೆ ಎಂದರೆ ಸುಳ್ಳು ಹೇಳಿದ ಹಾಗೆ ಆಗುತ್ತದೆ! ದಿಂಬನ್ನು ಕಾಲಿನ ಕಡೆ ಹಾಕಿ, ಹಾಸಿಗೆಗೆ ತಲೆಯಿಟ್ಟೆ!!

* * *

ಸಕಾಲಕ್ಕೆ ಬೆಂಗಳೂರು ತಲುಪಿದರೆ ಅದು ವಿಶ್ವದ ಅಚ್ಚರಿಗಳಲ್ಲೊಂದಾಗುವುದು! ನನಗೂ ಹಾಗೇ ಆಯಿತು!! ಟ್ರಾಫಿಕ್ ಜಾಮಿನಲ್ಲಿ ಜಾಮಾಗಲಿಲ್ಲ! ಮೆಟ್ರೋ ಕಾಮಗಾರಿಯ ಧೂಳಿನ ಅಭಿಷೇಕವಾಗಲಿಲ್ಲ! ಸುಖವಾಗಿ ಬ್ಯಾಟರಾಯನಪುರದ ಸ್ಯಾಟಲೈಟ್ ನಿಲ್ದಾಣಕ್ಕೆ ನಾನು ಪ್ರಯಾಣಿಸುತ್ತಿದ್ದ ಬಸ್ಸು ಬಂದಿಳಿಯಿತು.
ಬಸ್ಸಿನಿಂದ ಕೆಳಗೆ ಕಾಲಿಟ್ಟಾಗ ಒಂದು ಹಿಂಡು ಶ್ಯಾಮಲೆಯರು ಮತ್ತು ಶ್ಯಾಮಲಿಗರು ( ಶ್ಯಾಮಲ ವರ್ಣದ ಹುಡುಗರು) ನಮಗೆ ‘ವಣಕ್ಕಂ, ಬೆಂಗಳೂರಿಕ್ಕಿ ಸ್ವಾಗತಂ’ ಎಂದು ತಮಿಳಿನಲ್ಲಿ ಸ್ವಾಗತಿಸಿ ಕೈಗೊಂದು ಮಕ್ಕಳು ಆಟಕ್ಕೆ ಹಾಕಿಕ್ಕೊಳ್ಳುವ ರಬ್ಬರಿನ ಮುಖವಾಡ ಕೊಟ್ಟರು. ತಿರುಗಿಸಿ ನೋಡಿದರೆ ಅದು ಕುರಿ ಮುಖದ್ದಾಗಿತ್ತು.
‘ಇದೇನಿದು..? ಯಾತಕ್ಕೆ ಇದು..? ಇದನ್ನು ಏನು ಮಾಡಬೇಕು..?’
‘ಬೆಂಗಳೂರಿನಲ್ಲಿ ಇರೋತನಕ ಇದನ್ನು ಹಾಕಿಕೊಂಡಿರಬೇಕು! ಹೂಂ ಹಾಕ್ಕೊಳ್ಳಿ ಇಗ್ಲೇ’ ಎಂದು ಆಗ್ರಹಪಡಿಸಿದರು. ಧ್ವನಿಯಲ್ಲಿ ಬೆದರಿಕೆ ಇತ್ತು!
ಮರುಮಾತಾಡದ್ದೆ ಅದನ್ನು ಮುಖಕ್ಕೆ ಅಳವಡಿಸಿಕೊಂಡು ಆಟೊದತ್ತ ನಡೆದೆ. ನನ್ನ ಜೊತೆಯಲ್ಲಿ ಬಂದವರೂ ಸಹ ಮಾಸ್ಕ್ ಧರಿಸಿದ್ದು ಕಂಡು ಆಶ್ಚರ್ಯವೇ ಆಯಿತು. ಯಾರು ಆ ಶ್ಯಾಮಲರು..? ಈ ಮುಖವಾಡ ಯಾತಕ್ಕೆ..? ಇದನ್ನು ನಮಗೆ ನೀಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು..? ಈ ಚಿಂತೆಯಲ್ಲೇ ಆಟೋ ಮುಂದೆ ನಿಂತಿದ್ದೆ.
‘ಎಂಗೆ?’ ಎಂದ ಚಾಲಕ.
‘ಮಲ್ಲೇಶ್ವರ’ ಎಂದೆ. ಅವನು ‘ಕೋರಮಂಗಲ’ ಎಂದ!
ಇನ್ನೂ ಮೂವರು ಆಟೋದವರನ್ನು ಕೇಳಿದೆ ಯಾರೂ ನಾನು ಬಯಸಿದ ಕಡೆ ಬರಲು ಸಿದ್ಧರಿರಲಿಲ್ಲ! ಇನ್ನೊಂದು ವಿಚಿತ್ರವೆಂದರೆ ಈವರೆಗೆ ನಾನು ಕಂಡವರೆಲ್ಲಾ ತಮಿಳಿನಲ್ಲೇ ಮಾತಾಡುತ್ತಿದ್ದರು.
ಕೊನೆಗೊಬ್ಬ ಆಟೋದವ ಮಲ್ಲೇಶ್ವರಕ್ಕೆ ಬರಲು ಒಪ್ಪಿದ. ಆಟೋದಲ್ಲಿ ಕೂತೆ. ಸೆಕೆಯೆನಿಸಿತು. ಮುಖವಾಡ ಧರಿಸಿದ್ದಕ್ಕೆ ಕಿರಿಕಿರಿ ಎನಿಸುತ್ತಿತ್ತು. ಆ ಮಾಸ್ಕ್ ತೆಗೆದೆ. ಆಟೋ ಚಲಿಸಲು ಪ್ರಾರಂಭಿಸಿತು.
‘ಮಾಸ್ಕ್ ಹಾಕ್ಕೊಳ್ಳಿ ಸಾರ್, ಇಲ್ಲಾಂದ್ರೆ ಪೋಲೀಸ್ರು ಅರೆಸ್ಟ್ ಮಾಡಿ ಲಾಕಪ್ಪಿಗಾಕ್ತಾರೆ’
ಎಂದು ಬೆದರಿಸಿದವನು ಆಟೋದವನು! ಪುಣ್ಯಕ್ಕೆ ಇದುವರೆಗೆ ಬೆಂಗಳೂರಿನಲ್ಲಿ ಕನ್ನಡ ಮಾತಾಡಿದ್ದವನು ಅವನೊಬ್ಬನೇ! ಆದೇನೊ ಹಿತವಾದ್ದದ್ದೇ! ಆದರೆ ಮಾಸ್ಕ್ ಇಲ್ಲಾಂದ್ರೆ ಅರೆಸ್ಟ್ ಮಾಡ್ತಾರೆ ಅಂದಿದ್ದು ಮಾತ್ರ ಸಹಿಸಲಾಗಲಿಲ್ಲ! ಸಹಜವಾಗಿ ಕೆರಳಿದೆ!
‘ಯಾಕಯ್ಯಾ..? ಅಂತಾದ್ದು ನಾನೇನು ಮಾಡಿದ್ದೀನಿ..?’ ಗರಂ ಆಗೇ ಕೇಳಿದೆ.
‘ಹೆಚ್ಗೆ ಮಾತಾಡ್ಬೇಡಿ ಸಾರ್! ಇಲ್ಲಿ ಕನ್ನಡ ಮಾತಾಡೋದೇ ಡೇಂಜರ್!! ‘
ಅವನ ಮಾತು ವಿಚಿತ್ರವಾಗಿತ್ತು! ಅವನಿಗೆ ‘ಸ್ಕ್ರೂ ಲೂಸ್’ ಆಗಿರಬೇಕೆನ್ನಿಸಿತು! ಕನರ್ಾಟಕದ ರಾಜಧಾನಿಯಲ್ಲಿ ಬೆಂಗಳೂರಲ್ಲಿ ಕನ್ನಡ ಮಾತಾಡೋದು ಡೇಂಜರ್ ಅಂತ ಯಾರಾದ್ರೂ ತಲೆ ಸರಿ ಇರೋರು ಹೇಳ್ತಾರ..? ನಿಜಕ್ಕೂ ಅವನ ತಲೆ ಸರಿ ಇಲ್ಲಾನ್ನಿಸಿತು!
ಯಾಕೋ ಇಡೀ ಬೆಂಗಳೂರೇ ವಿಚಿತ್ರವಾಗಿ ಕಾಣಿಸುತ್ತಿತ್ತು. ನಿಮ್ಹಾನ್ಸ್ ( ಮಾನಸಿಕ ಆಸ್ಪತ್ರೆ) ಆವರಣದಂತೆ ಕಂಡಿತು! ರಸ್ತೆಬದಿಯಲ್ಲಿ ಕಾಣುತ್ತಿದ್ದ ಅಂಗಡಿಗಳ ಬೊಡರ್ುಗಳೆಲ್ಲಾ ತಮಿಳಿನಲ್ಲಿದ್ದವು. ಫುಟ್ಪಾತಿನಲ್ಲಿ ನಡೆಯುತ್ತಿದ್ದ ಜನ, ಕಾರಿಗಳಲ್ಲಿ ಪ್ರಯಾಣಿಸುತ್ತಿದ್ದವರು, ಅಷ್ಟೇಕೆ ಕಣ್ಣಿಗೆ ಕಂಡ ಜನರೆಲ್ಲರೂ ತಮಿಳರಂತೆಯೇ ಕಾಣುತ್ತಿದ್ದರು. ಆಟೋದಲ್ಲಿ ಸಾಗುವಾಗ ಕಂಡ ಪ್ರತಿ ಸರ್ಕಲ್ಲಿನಲ್ಲೂ ತಮಿಳು ರಾಜಕಾರಿಣಿಗಳು, ಕವಿಗಳು, ಸಿನಿಮಾ ನಟರ ಮೂತರ್ಿಗಳಿದ್ದವು! ಬಹುಶಃ ಅವರ ಹೆಸರುಗಳೇ ಬಹುಶಃ ಸರ್ಕಲ್ಲಿಗೂ ಇಟ್ಟಿರಬಹುದು. ಹೆಸರುಗಳೆಲ್ಲಾ ತಮಿಳು ಅಕ್ಷರಗಳಲ್ಲೇ ಇದ್ದುದರಿಂದ ನನಗೆ ಅರ್ಥವಾಗಲಿಲ್ಲ. ಎದುರು ಬರುವ ಬಸ್ಸುಗಳ ಮಾರ್ಗಸೂಚಿಗಳೆಲ್ಲ ತಮಿಳಿನಲ್ಲೇ ಇದ್ದವು! ಹಣೆ ಬೆವರಿಟ್ಟಿತು. ಗಂಟಲೊಣಗಿತು! ಏನೋ ಆಗಿದೆ ಬೆಂಗಳೂರಿಗೆ ಎಂದು ಹೆದರಿಕೆಯಾಯಿತು! ಇಲ್ಲಾ ನಾನೇ ತಪ್ಪಿ ಚೆನ್ನೈಗೆ ಬಂದಿಳಿದಿದ್ದೇನೋ..? ಇಲ್ಲಾ ಇದೆಲ್ಲಾ ಕನಸೋ..? ಗೊಂದಲದಲ್ಲಿ ಕೈ ಚಿವುಟಿಕೊಂಡೆ! ನೋವಾಯಿತು! ಅಂದರೆ ಇದು ಕನಸಲ್ಲ ..ನನಸೇ..! ವಾಸ್ತವ!!
‘ಏನಯ್ಯಾ ಆಗಿದೆ ಬೆಂಗಳೂರಿಗೆ..?’ ಆಟೋದವನನ್ನು ಕೇಳಿದೆ.
‘ನೀವು ಇಂಗೇ ಕನ್ನಡದಲ್ಲಿ ಮಾತಾಡ್ತಿದ್ರೆ ನಾಕು ಇಕ್ಕಿಬಿಡ್ತಾರೆ! ಹುಷಾರು!’
ಅವನ ಉತ್ತರಕ್ಕೆ ಮೈಯೆಲ್ಲಾ ಉರಿಯಿತು.
‘ಹಲೋ.? ತಲೆ ಸರಿಯಿದೆ ತಾನೆ..? ಇದು ಕನರ್ಾಟಕದ ರಾಜಧಾನಿ! ಇಲ್ಲಿನ ಬೀಸೋ ಗಾಳಿ ಕನ್ನಡ! ಇಲ್ಲಿ ಕನ್ನಡ ಮಾತಾಡೋದು ನಮ್ಮ ಜನ್ಮಸಿದ್ಧ ಹಕ್ಕು! ‘ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದ ಮಹಾಕವಿ ಪಂಪನ ನಾಡಿದು! ಅವನ ಹಾಗೇ ನಾನೂ ಹೇಳ್ತೀನಿ..ನಾನೇಕೆ? ಕನ್ನಡದ ಮುಕ್ಕೋಟಿ ಕನ್ನಡಿಗರೂ ಹೇಳ್ತಾರೆ: ಆರಂಕುಶಮಿಟ್ಟೊಡಂ ನುಡಿವುದೆನ್ನ ಜಿಹ್ವೆ ಕನ್ನಡ ಭಾಷೆಯಂ’ ಅವೇಶದಿಂದ ಹೇಳಿದೆ.
‘ನಂಗೆ ತಲೆ ಸರಿಯಾಗೇ ಇದೆ! ನಿಂಗೆ ಸರಿಯಿಲ್ಲ ಅಷ್ಟೆ!! ನಿಮ್ಹಾನ್ಸ್ಗೆ ಹೋಗೋದ್ರ ಬದಲಿಗೆ ಮಲ್ಲೇಶ್ವರಕ್ಕೆ ಹೋಗ್ತಿದ್ದೀಯ!’
ಅವನು ಏಕ್ದಂ ಏಕವಚನಕ್ಕಿಳಿದಿದ್ದ! ನನ್ನ ಕೋಪ ತಾರಕ್ಕೇರಿತು!
‘ದುರುಳ, ದುಷ್ಟ! ಬೆಂಗಳೂರಿನಲ್ಲಿ ಕನ್ನಡ ಮಾತಾಡ್ಬೇಡ ಅನ್ನೋದಲ್ಲದೆ ನನ್ನನ್ನ ಹುಚ್ಚ ಅಂತಿದ್ದೀಯ ?’ ಕಿರುಚಿದೆ!! ಇಡೀ ಬೆಂಗಳೂರಿಗೇ ಕೇಳುವಷ್ಟು ಜೋರಾಗಿ!!
‘ಇವ್ನಾವನು ತಲೆಕೆಟ್ಟವನು? ಏನಯ್ಯಾ..? ವರ್ಷದ ಹಿಂದೆ ತಮಿಳರ ಕೋರಿಕೆ, ಬೆದರಿಕೆ, ಗದರಿಕೆ, ದಮಕಿಗಳಿಗೆ ಕೇಂದ್ರ ಸಕರ್ಾರ ಗದಗದ ನಡುಗಿತ್ತು! ಸಕರ್ಾರಕ್ಕೆ ತನ್ನ ಬೆಂಬಲ ಹಿಂತೆಗೆದುಕ್ಕೊಳ್ಳುವ ತಮಿಳರ ಬೆದರಿಕೆಗಳಿಗೆ ಮಣಿದು ಸಕರ್ಾರ ಬೆಂಗಳೂರನ್ನ ತಮಿಳು ನಾಡಿಗೆ ಸೇರಿಸಿದ್ದು ಗೊತ್ತೇ ಇಲ್ಲವಾ..? ತಮಿಳು ಜನರು ಇಲ್ಲಿ ಕನ್ನಡದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅದಕ್ಕೇ ಇದನ್ನು ತಮಿಳು ನಾಡಿನ ಬೇಸಿಗೆ ರಾಜಧಾನಿಯನ್ನಾಗಿ ಘೋಷಿಸಿ ಎಂದು ಕೇಂದ್ರ ಸಕರ್ಾರಕ್ಕೆ ದಮಕೀ ಹಾಕಿದ್ದು ನಿನಗೆ ಗೊತ್ತೇ ಇಲ್ವ..? ಸೆಂಟರ್ರು ಕ್ಯಾರೆ ಅನ್ನದಿದ್ದಾಗ ಸಕರ್ಾರಕ್ಕೆ ಕೊಕ್ ಕೊಡ್ತೀನಿ ಅಂತ ಚಳಿಜ್ವರ ಬರಿಸಿದ್ದರು! ಕೊನೆಗೆ ಕೇಂದ್ರ ಕೆಮ್ಮಿ, ಮಣಿದಿದ್ದು ನಿನಗೆ ಗೊತ್ತೆ ಇಲ್ವ? ಬೆಂಗಳೂರಿನ ಮೇಲೆ ಇಡೀ ದೇಶದ ಎಲ್ಲ ರಾಜ್ಯದ ಜನರ ಕಣ್ಣೂ ಬಿದ್ದಿತ್ತು! ಹಿಂದಿ ಬೈಯ್ಯಾಗಳು ತಮಗೆ ಬೇಕೆಂದೂ, ತೆಲುಗರು ತಮಗೆ ಬೇಕೆಂದೂ ತಮಟೆ ಬಡಿದಿದ್ದರು. ಮಲೆಯಾಳಿಗಳಂತೂ ಇದು ಕೇರಳದ ಭಾಗವೇ ಜನ ತಪ್ಪು ತಿಳಿದಿದ್ದಾರೆ ಅಷ್ಟೆ ಎಂದು ಅಚ್ಚರಿ ಹುಟ್ಟಿಸಿದ್ದರು. ಇನ್ನು ಬಿಹಾರಿಗಳು, ಬೆಂಗಾಲಿಗಳು ಎಲ್ಲರೂ ಒಟ್ಟಿಗೇ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಹೋಗಿ ಕೊನೆಗೆ ಇದು ತಮಿಳುನಾಡಿಗೆ ದಕ್ಕಿದ್ದು ತಮಿಳುನಾಡಿಗೆ! ಸತ್ಯವಾಗಿ ಹೇಳು ಇದು ನಿನಗೆ ಗೊತ್ತಿಲ್ಲವಾ..?’
ನಾನು ಕಣ್ಣು-ಬಾಯಿ ಬಿಟ್ಕೊಂಡು ಆಟೋದವನನ್ನು ನೋಡಿದೆ. ಅವನ ಯಾವ ಮಾತುಗಳನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ!
‘ನನಗಿದು ಗೊತ್ತೂ ಇಲ್ಲ, ನಾನಿದನ್ನು ನಂಬೋದೂ ಇಲ್ಲ! ಅವರು ಕೇಳಿಬಿಟ್ಟರೂಂತ ಇವರು ಕೂಡೋಕೆ ಅದೇನು ಅವರಪ್ಪನ ಮನೆ ಆಸ್ತಿಯೇನು..?’
‘ಅವರು ಅಂದರೆ ತಮಿಳು ತಂಬಿಗಳು ಮುಂದಿಟ್ಟ ಪ್ರಶ್ನೆಗಳೇನು ಗೊತ್ತಾ..? ಅವರ ಆಗರ್ು್ಯಮೆಂಟ್ ಗೊತ್ತಾ..? ಕಾವೇರಿ ನೀರು ಕುಡಿಯೋರು, ಅದನ್ನ ವ್ಯವಸಾಯಕ್ಕೆ ಬಳಸಿಕ್ಕೊಳ್ಳೋರೂ ಅವರೇ ಅಂತೆ!ಇಲ್ಲಿ ಅಂದ್ರೆ ಬೆಂಗಳೂರಲ್ಲಿ ಹೆಚ್ಚಿನ ಜನ ಮಾತಾಡೋದು ತಮಿಳಂತೆ! ತಮಿಳು ಸಿನೀಮಾಗಳು ಹೆಚ್ಚಿಗೆ ಕಾಸು ಮಾಡೋದು ಇಲ್ಲೇ ಅಂತೆ! ಇಲ್ಲಿ ವ್ಯಾಪಾರದಲ್ಲಿ ತೊಡಾಗಿರೋರು ಹೆಚ್ಚಿನ ಪಾಲು ತಮಿಳರೇ ಅಂತೆ! ಇಂತಾ ವಿಚಿತ್ರ ವಾದಗಳನ್ನು ಮುಂದಿಟ್ಟು ಬೆಂಗಳೂರು ತಮಿಳು ರಾಜಧಾನಿ ಅಂತ ಘೋಷಿಸುವಂತೆ ಮಾಡಿದ್ದಾರೆ! ಅದಕ್ಕೇ ಈ ಮಾಸ್ಕು ಕಡ್ಡಾಯ! ಹುಷಾರ್’
ಮತ್ತೆ ನನಗೇ ಬೆದರಿಕೆ ಹಾಕಿದ. ನಾನು ನಿರುತ್ತರನಾಗಿದ್ದೆ-ಅನ್ಯ ಮಾರ್ಗವಿಲ್ಲದೆ.
ಮಲ್ಲೇಶ್ವರದ ಸಿಗ್ನಲ್ ಹತ್ತಿರ ಅವನು ಗಕ್ಕನೆ ಆಟೋಗೆ ಬ್ರೇಕ್ ಹಾಕಿ ಇಳಿದ. ಹತ್ತಿರದಲ್ಲೇ ನಿಂತಿದ್ದ ಪೋಲೀಸಪ್ಪನ ಹತ್ತಿರ ತಮಿಳಿನಲ್ಲಿ ಏನೋ ವದರಿದೆ. ಅವನ ಮಾತಿಗೆ ತಲೆದೂಗಿದ ಪೊದೆ ಮೀಸೆಯ ಪೋಲೀಸಪ್ಪ ನನ್ನ ಹತ್ತಿರ ಬಂದು ಕೆಕ್ಕರಿಸಿ ನೋಡಿದೆ.
‘ಎನ್ನಯ್ಯಾ..? ಅಗರ್ೂ್ಯ ಪಂಡ್ರೆಯಾ..? ವಾ ಸ್ಟೇಷನ್ನಿಕ್ಕಿ’ ಎಂದು ನನ್ನ ತೋಳು ಹಿಡಿದು ಎಳೆದ. ಅವನ ಬಲಿಷ್ಠ ಹಿಡಿತಕ್ಕೆ ನಾನು ಅನಾಮತ್ತಾಗಿ ಆಟೋದಿಂದ ಕೆಳಕ್ಕೆ ಬಿದ್ದೆ! ಇದು ತೀರಾ ಅನ್ಯಾಯ ಅನ್ನಿಸಿತು! ನನ್ನದೇ ರಾಜ್ಯದಲ್ಲಿ ನಾನು ಅನಾಥನಾಗಿದ್ದೆ; ಅಸಹಾಯಕನಾಗಿದ್ದೆ!
‘ದೇವರೇ ಇದು ನ್ಯಾಯವಾ..? ಸತ್ಯಕ್ಕೆ ಬೆಲೆಯೇ ಇಲ್ಲವಾ..?’ ದುಃಖದಿಂದ ದೇವರನ್ನು ಕೇಳಿದೆ!
‘ಇದ್ಯಾಕ್ರೀ ಹೀಗೆ ಮಂಚದಿಂದ ಕೆಳಕ್ಕೆ ಬಿದ್ರಿ..?’
ಹೆಣ್ಣು ದ್ವನಿ! ಪರಿಚಿತವಾದ ದನಿ! ಎಲಾ..? ಆ ಪೋಲೀಸಪ್ಪ ಎಲ್ಲಿ..? ಮತ್ತೆ ಆ ಡಬಲ್ ಕ್ರಾಸಿಂಗ್ ಆಟೋದವ..? ಅವನೆಲ್ಲಿ..? ಯಾರೂ ಕಾಣಲಿಲ್ಲ! ಎಲ್ಲಾ ಕತ್ತಲು!
‘ಏನ್ರೀ ಆಗಿದೆ ನಿಮಗೆ..? ರಾತ್ರಿಯೆಲ್ಲಾ ಕನವರಿಸ್ತಾ ಇದ್ರಿ..? ಯಾವುದು ಆಟೋ..? ಯಾರು ಫೋಲೀಸ್..? ತಮಿಳು? ನ್ಯಾಯ-ಅನ್ಯಾಯ’
ಹೆಣ್ಣು ದ್ವನಿ ನನ್ನ ಪತ್ನಿಯದರಂತೆಯೇ ಇತ್ತು!
ಕಣ್ಣುಜ್ಜಿಕೊಂಡು ನೋಡಿದೆ. ನಿಜ ನನ್ನ ಪತ್ನಿಯೇ ಎದುರು ನಿಂತಿದ್ದಳು! ಅಂದರೆ ನಾನು ನೋಡಿದ್ದು ಕನಸು ಎಂದು ಸ್ಪಷ್ಟವಾಯಿತು!
‘ಏನೋ ಕೆಟ್ಟ ಕನಸು’ ತಡವರಿಸಿ ಹೇಳಿದೆ.
‘ಮತ್ತೆ, ಬೆಂಗ್ಳೂರಿಗೆ ಹೋಗೊಲ್ಲವೇ..? ಗಂಟೆ ಆರಾಯ್ತು?’
‘ಸದ್ಯ ದೇವರು ದೊಡ್ಡವನು’ ಎಂದು ದೀರ್ಘ ನಿಟ್ಟುಸಿರಿಟ್ಟೆ.
‘ಏನೇನೋ ಮಾತಾಡ್ತಿದ್ದೀರಲ್ರೀ..? ಮೈ ಸರಿ ಇಲ್ಲವಾ..? ಹಾಗಿದ್ರೆ ಬೆಂಗ್ಳೂರಿಗೇನೂ ಹೋಗೋದು ಬೇಡ ಬಿಡಿ! ಹೇಗೂ ದೂರದ ಸಂಬಂಧ ಅಲೆವೆ..? ನನಗೆ ಹುಷಾರಿರಲಿಲ್ಲಾಂತ ಹೇಳಿಬಿಡ್ತೀನಿ ಬಿಡಿ. ಆಗ ಅವರು ನಿಮ್ಮನ್ನ ಆಕ್ಷೇಪಿಸೋದಿಲ್ಲ. ಹೋಗದಿದ್ರೂ ನಡಿಯುತ್ತೆ’
ಅವಳು ಅಷ್ಟು ಹೇಳಿದ್ದೇ ಸಾಕಾಗಿತ್ತು! ಒಡನೆಯೇ ಬೆಂಗಳೂರು ಟ್ರಿಪ್ಪು ಕ್ಯಾನ್ಸಲ್ ಮಾಡಿಬಿಟ್ಟೇ!! ಸ್ನಾನದ ನಂತರ ದೇವರ ಮನೆಗೆ ಹೋಗಿ ‘ದೇವರೇ ನನ್ನ ಕನಸು ಕನಸಾಗಿಯೇ ಉಳಿಯಲಿ. ಅದೆಂದಿಗೂ ನನಸಾಗುವುದು ಬೇಡ’ ಎಂದು ಪ್ರಾರ್ಥಿಸುವ ಮನಸ್ಸು ಮಾಡಿದೆ.
ಯಾಕೋ ಬೆಂಗಳೂರಿನ ಸ್ಥಿತಿ ನೆನೆದು ಕಣ್ಣಂಚಿನಲ್ಲಿ ಕಂಬನಿ ಇಣುಕಿತು!!!

‍ಲೇಖಕರು avadhi

October 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. Soory Hardalli

    Very good article. Already number of Kannada people in Bengaluru is reduced to 20%. North Indians and Malayalees are increasing. I wrote one article, in which it is better to include Bengaluru to Tamilnadu to solve Kaveri problem.
    Thank you.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: