’ಭೂಮಿಗೆ ಬಂದ ಭಗವಂತ’ – ಶಾಂತಲಾ ಅನಿಲ್ ಬರೀತಾರೆ

ವಿಶ್ವ(ಕು)ರೂಪದರ್ಶನ

ಶಾಂತಲಾ ಅನಿಲ್

ಸಹ ಧರ್ಮಿಣಿಯಿಂದ ಬೆಳಗು-ಬೈಗೆನ್ನದೆ ಬೈಗುಳಗಳನ್ನು ತಿನ್ನುತ್ತ-ಅಲ್ಲ-ತುರಿಕಿಸಿಕೊಳ್ಳುತ್ತಾ ಮತ್ತೊಂದು ಹಗಲನ್ನು ದೂಡಲಾಗದೆ ಆಟೋ ಸಂಜಯ್ ಬೆಳಗಾಗುತ್ತಲೇ ಆಟೋ ಹಾಕಿಕೊಂಡು (ಅಥವ ಆಟೋ ಅವನನ್ನು ಹೇರಿಕೊಂಡು) ಹೊರಟಿದ್ದ. ಮನುಷ್ಯನಿಗೆ ಎಂಟು ಗಂಟೆ ಕೆಲಸ ಎಂಟು ಗಂಟೆ ನಿದ್ದೆಯ ಅಗತ್ಯವಿದ್ದರೂ, ಎರಡೂ ಅದೇ ಎಂಟು ಗಂಟೆಗಳಲ್ಲಲ್ಲ ಎಂದು ಗಂಟೆಗೆ ಎಂಟು ಸಲ ವಟ-ವಟ ಎನ್ನುತ್ತಿದ್ದವಳಿಗಿಂದು ನೆಮ್ಮದಿ. ಗಂಡನಿಗೀಗಲಾದರೂ ಬುದ್ಧಿ ಬಂತೆಂದು ಸಮಾಧಾನ ಪಾಪ ಅವಳಿಗೇನು ಗೊತ್ತು- ಅವನು ತನ್ನ ನಿದ್ದೆ ಹಾಳಾಗಬಾರದೆಂದು ಕಿಲೋಮೀಟರ್ ದೂರದಲ್ಲಿದ್ದ ನಿರ್ಜನವಾದ ಹೊಂಗೆ-ಬೇವಿನ ತೋಪಿನಲ್ಲಿ ತನ್ನ ವಾಹನವನ್ನು ನಿಲ್ಲಿಸಿ, ಪ್ರಯಾಣಿಕರು ಕೂರುವ ಸೀಟಿನಲಿ ಬೆಚ್ಚಗೆ ಮುದುರಿಕೊಂಡು ಸಣ್ಣ ಗೊರಕೆ ತೆಗೆಯುತ್ತಿದ್ದನೆಂದು?!
“ಅಯ್ಯಾ ಚಾಲಕ! ಎನ್ನ ತಲಪುದಾಣಕ್ಕೆ ಕರೆದೊಯ್ಯುವನಾಗುವೆಯಾ?” ಬಡಿದೆಬ್ಬಿಸುವ ಬದಲು ಮೃದುವಾಗಿ ತಟ್ಟಿ ಮಲಗಿಸುವಂಥಹ ಶಾರೀರದ ಶರೀರವ ನೋಡ ಬೇಕೆನಿಸಿ ಕಣ್ಣು ಬಿಟ್ಟ ಸಂಜಯ. ಬಿಟ್ಟ ಕಣ್ಣುಗಳ ಗುಡ್ಡೆಗಳು ಉದುರಿ ಜೋತಾಡುವಂತೆ ದಿಟ್ಟಿಸಿದ. ಕಾರಣ ಎದುರಿಗೆ ತನ್ನೆಲ್ಲಾ ಸೊಗಸುಗಾರಿಕೆಯಲ್ಲಿ ನಿಂತ ಸಾಕ್ಷಾತ್ ಶ್ರೀಕೃಷ್ಣ! ಏಳುತ್ತಿದ್ದಂತೆ ದೇವರ ಪಟ ನೋಡೆಂದು ಸದಾ ಅಮ್ಮ ಹೇಳುತ್ತಿದ್ದಳು, ಆದರೆ ನಿದ್ದೆ ಮಂಪರಿನಲ್ಲಿ ಪಟವೇ ದೇವರಾಯಿತೆ? ಅಥವ ಬೇವಿನ ಮರದ “ಗಾಳಿ”ಯ ಆಟವೆ?
“ಸಾರಥಿ! ಹೇಳಯ್ಯ?” ಮತ್ತೆ ನುಡಿದಾಗ ಕಣ್ಗುಡ್ಡೆಗಳು ಸಾವರಿಸಿಕೊಂಡು ಒಳಗೆಹೋಗಲು; ಧರೆಗಿಳಿದ ಸಂಜಯ. ಈತ ಭೂಮಿಗೆ ಬಂದ ಭಗವಂತನೆ? ಅಥವ ನಾಟಕದವನೆ ಎಂದು ತನ್ನಲ್ಲೇ ಚರ್ಚಿಸಿಕೊಂಡ. ಏನೊ ಮಂಪರಿನಲ್ಲಿ ಸರಿಯಾಗಿ ಯೋಚಿಸಲೂ ಆಗೊಲ್ಲದು. “ಚಾಲಕ, ತ್ವರೆಮಾಡಿ, ಎನ್ನ ತಲುಪಿಸು! ಭಕ್ತಾದಿಗಳು ನನಗೆ ಅಭಿಷೇಕ ಮಾಡಲು ಕಾಯುತ್ತಿರುವರು!”ಎಂದು ಮುಗುಳ್ನಕ್ಕನು ಶ್ರೀಕೃಷ್ಣ. ಬೋಣಿ ಗಿರಾಕಿ ಎಂದಂದುಕೊಂಡು, ಕಣ್ಣುಜ್ಜಿಕೊಳ್ಳುತ್ತಾ “ಕುಂತ್ಕೊಳಿ” ಎಂದ ಸಂಜಯ.

“ಇದೇ ಹಳ್ಳಗಳಲ್ಲೇ ರಸ್ತೆ ಇದೆ. ಆ ಕಿರೀಟ ತೆಗೆದು ಪಕ್ಕದಲ್ಲಿಟ್ಕೊಂಡು ಬದ್ರವಾಗಿ ಕೈಪಟ್ಟಿ ಹಿಡಿಯಿರಿ. ಅಂದಹಾಗೆ ಎಲ್ಲಿಗೆ ಹೋಗಬೇಕು ಸಾರ್?”
“ದೇವಾಲಯಕ್ಕೆ. ನೀನು ಸಾಗುತ್ತಲಿರು, ನಾನು ರಸ್ತೆ ತೋರಿಸುವೆ ಸಾರಥಿ,” ಎಂದು ಶ್ರೀಕೃಷ್ಣ ಎನ್ನುವ ಮೊದಲೇ ಬೇವಿನ ಮರದಲ್ಲಿ ನೇತಾಡುತ್ತಿದ್ದ ಪ್ರೇತವೊಂದು ಹೊಕ್ಕಂತೆ, ಒಮ್ಮೆ ಜೋರಾಗಿ ಬಿಕ್ಕಳಿಸಿ, ಅದರಿದ ಆಟೊ ಭರ್ರೆಂದು ಪಯಣ ಶುರುಮಾಡಿತು. ಕುಲುಕುತ್ತಾ, ಕುಕ್ಕುತ್ತಾ ಸಾಗುತ್ತಿದ್ದ ಆಟೋ ಲೀಲೆಯನ್ನು ಆಶ್ಚರ್ಯದಿಂದ ಅವಲೋಕಿಸುತ್ತಿದ್ದ ಪಾರ್ಥಸಾರಥಿ. ತಾನು ಆ ಹದಿನೆಂಟು ದಿನಗಳು ಸವ್ಯಸಾಚಿಗಾಗಿ ಚಲಿಸಿದ ರಥಕ್ಕೆ ಸಾಟಿಯೇ ಇಲ್ಲವೆಂದು ಈವರೆಗೂ ನಂಬಿದ್ದೆನಲ್ಲಾ! ವಾಹ್! ಇದೂ ಎಂಥಹ ವಾಹನವಯ್ಯ! ಹಳ್ಳ-ದಿಣ್ಣೆ; ಎಡ-ಬಲ; ಹಿಂದು-ಮುಂದೆಂಬ ತಾರತಮ್ಯವಿಲ್ಲದೆ ಸಾಗುತ್ತದೆ! ಈ ಸಾರಥಿ ಸಂಜಯನೂ ಅಸಮಾನ್ಯನೇ-ತೂಕಡಿಸುತ್ತಿದ್ದರೂ ಎಚ್ಚರದಲ್ಲಿದ್ದವನಂತೇ ಚಲಿಸುತ್ತಿದ್ದಾನೆ! ಸಣ್ಣ ಓಣಿಗಳಲ್ಲಿ ವಾಹನವನ್ನು ಚಿಕ್ಕದಾಗಿಸಿ, ದೊಡ್ಡ ರಸ್ತೆಗಳಲ್ಲಿ ತಾನೇ ಒಡೆಯನಂತೆ ಸಾಗಿಸುತ್ತಿದ್ದಾನೆ!
“ಯಾವೂರು ಸಾರ್?”
“ಆಂ?! ವೈಕುಂಟ.”
“ಎಲ್ಲಿಗೆ ಹೋಗಬೇಕು ಅಂತಲ್ಲ ಕೇಳಿದ್ದು. ಯಾವೂರು ಅಂತ?” ಮತ್ತಷ್ಟು ವೇಗ ಹೆಚ್ಚಿಸಿದನು.
“ಸ್ವಲ್ಪ ತಡೆ. ಇಲ್ಲಿ ಅದಾವುದೋ ಪೂಜೆ ಜರಗುತ್ತಲಿದೆ. ಇಲ್ಲೇ ಇರಬಹುದು.”
ಇನ್ನೆಂದೂ ಬೆಳಿಯಲೇ ಬಾರದೆಂದು ಹಟ ಮಾಡಿಕೊಂಡು, ಎಂದೋ ಟಾ-ಟಾ ಹೇಳಿದ್ದ ತಲೆಗೂದಲನ್ನು ಮತ್ತೆ ವಶ ಪಡಿಸಿಕೊಳ್ಳುವ ಪಣಾ ತೊಟ್ಟವರಂತೆ, ಬಕ್ಕ ತಲೆಗೇ ಸುವಾಸನೆಯ ತೈಲ ತೀಡಿಕೊಂಡು, ಕೈಮುಗಿದು ನಿಂತಿದ್ದರು ಕೈಗಾರಿಕೋದ್ಯಮಿ ಸರವಣನ್. ಪುಟ್ಟ ಲಿಂಗವನ್ನು ಸ್ಥಾಪಿಸಲು ದೇವಾಲಯದ ಗುದ್ದಲಿ ಪೂಜೆ ನಡೆದಿತ್ತು. ಓ! ಈಶ್ವರನೂ ನನ್ನ ಸಹೋದ್ಯೋಗಿಯೇ! ಅವನಿಗೆ ಸನ್ಮಾವಾದರೆ ನನ್ನನ್ನು ಪೂಜಿಸಿದಂತೆಯೆ! ಬಹುಶಃ ಇದೇ ನನ್ನ ಉಧ್ಧಿಷ್ಟ ಸ್ಥಳವೆಂದುಕೊಳ್ಳುತ್ತಿದ್ದಂತೆ ಸರವಣನ್ ಕಣ್ಬಿಟ್ಟು ಆಚೀಚೆ ನೋಡಿದರು. ಪಕ್ಕದಲ್ಲಿ ಹೆಂಡತಿ ಆದಿಲಕ್ಷ್ಮಿಆದಿಕಾಲದಿಂದಲೂ ಶೇಕರಿಸಿಟ್ಟ ಒಡವೆಗಳನ್ನು ಹೇರಿಕೊಂಡು ಬಾರದ ಕತ್ತನ್ನು ಎತ್ತಲಾರದೆ, ತಲೆಯನ್ನು ಅತ್ತಿತ್ತ ಆಡಿಸಲಾರದೆ ವಿಧಿಯಿಲ್ಲದೆ ತಲೆ ಬಾಗಿ ನಿಂತ್ತಿದ್ದಳು. ಆಚೆಯಲ್ಲಿ ಅರೆಬೆತ್ತಲಾದ ಸ್ಲಂ ನಿವಾಸಿಗಳು, ಅಲ್ಲಿ ಯಾವುದೋ ಆಟೋ ಬಂದು ನಿಂತಿದೆಯಲ್ಲ, ಯಾರಿರಬಹುದು, ಎಂದು ಪ್ರಯಾಣಿಕನ ಜಾಗವನ್ನು ನೋಡಿದರು. ಖಾಲಿಯಾದ ಜಾಗದಲ್ಲಿ ವಿಚಿತ್ರವಾದ ಬೆಳಕನ್ನು ಕಾಣುತ್ತಿದ್ದಂತೆ, ಸರವಣನ್‌ರವರ ನಾಲಿಗೆ ಸೆಟೆದು ಕೊಂಡಿತು. ಅದಕ್ಕೆ ತನ್ನದೇ ಬುದ್ಡಿಬಂದುಬಿಟ್ಟಿತು.
“ಏಂಡಾ ಪೂಜಾರಪ್ಪ. ಬೇಕ ಸ್ಥಾಪನೆ ಮುಗಿಸಯ್ಯ. ಬುಲ್ ಡೋಜರ್ ಬರುವ ಹೊತ್ತಿಗೆ ಲಿಂಕ ಪೀಠತಮೇಲಿದ್ದರೆ ನಮ್ಮ ಜಾಕ(ಜಾಗ) ಮುಟ್ಟದೆ ಆ ಗುಡಿಸಲುಗಳನ್ನು ಮಾತ್ರ ಕೆಡವುತ್ತಾರೆ!” ಆಟೋ ಇಳಿಯುತ್ತಿದ್ದ ಶ್ರೀಕೃಷ್ಣನಿಗೂ ಆತನ ಮಾತು ಕೇಳುತ್ತಿದ್ದಂತೆಯೆ, ನೆರೆದಿದ್ದ ಎಲ್ಲರಂತೆಯೇ ವಾಸ್ತವದ ಅರಿವಾಯಿತು! ತನ್ನ ನಾಲಗೆಗೇನಾಗಿದೆಯೆಂದು ಸರವಣನ್ ಬಾಯಲ್ಲಿ ಕೈಹಾಕಿಕೊಂಡು ನಾಲಗೆಯನ್ನು ಮುಟ್ಟಿ-ಹಿಸುಕಿ-ಕಚ್ಚಿ ನೋಡಿಕೊಳ್ಳುತ್ತಿದ್ದನು. “ಸಾರಥಿ, ಮುಂದಕ್ಕೆ ಸಾಗು, ಇದು ನನ್ನ ತಾಣವಲ್ಲ,” ಎಂದು ಮತ್ತೆ ಆಟೋ ಏರಿದ ವಾಸುದೇವ.
ಒಂದರ ಮೇಲೊಂದರಂತೆ ಬಿದ್ದು-ಬಾಗಿ ತಲೆಗಳೆತ್ತಿದ್ದ ಕಾಂಕ್ರೀಟಿನ ಕಾಡಿನಲ್ಲಿ ಆಟೋ ಸಾಗುತ್ತಿತ್ತು. ಒಂದೆಡೆ ಮಾತ್ರ ಸುತ್ತಲೂ ಬೇಲಿಹಾಕಿದ್ದ ಜಾಗ ಕಂಡರೂ, ಬೇಲಿಯ ಒಳಗಿದ್ದ ಬೆಳೆಯನ್ನೆಲ್ಲಾ ಯಾರೋ ಕುಯ್ಲು ಮಾಡಿಬಿಟ್ಟಿದ್ದರು. “ಇದೇನಯ್ಯ? ಖಾಲಿ ಹೊಲಕ್ಕೆ ಬೇಲಿಯೇ?” ಎಂದು ಕೇಳಲು, “ಸಾರ್, ನಮಲ್ಲಿ ರಾತ್ರೋ ರಾತ್ರಿ ಬೇಲಿಯೇ ಎದ್ದು ಹೊಲವನ್ನು ಮೇಯ್ದು, ಕೈಯನ್ನು ಅದೋ ಅಂಥಹ ಮರಕ್ಕೆ ಒರೆಸಿಬಿಡುತ್ತದೆ. ಬೆಳಿಗ್ಗೆ ಬಂದ ಜನರು, “ಓ ಈ ಮರ ಕೆಟ್ಟದ್ದು, ಹೊಲವನ್ನು ಮೇಯ್ದಿದೆ, ತಕ್ಕ ಶಿಕ್ಷೆ ಆಗಲೇ ಬೇಕೆಂದು ಮರವನ್ನು ಕಡಿದು ಒಳ್ಳೊಳ್ಳೆ ಕುರ್ಚು-ಮೇಜು-ಬಾಗಿಲುಗಳನ್ನು ಮಾಡಿಕೊಂಡು ಬಿಡುತ್ತಾರೆ!”
ಫೀ!ಫೀ! ಪೋಲೀಸಪ್ಪನ್ನ ದರ್ಶನವಾಗುವ ಮುಂಚೆಯೇ ಅವನ ಸೀಟಿ ಕೇಳಿ, ಸಂಜಯ ಗಾಡಿಯನ್ನು ಗಕ್ಕನೆ ನಿಲ್ಲಿಸಿದ್ದ. ಈ ವಾರದ ಹಫ್ತ ಬಾಕಿ ಇತ್ತೆಂಬ ಅರಿವು ಅವನಿಗಿತ್ತು. ರಾಜ ಠೀವಿಯಲ್ಲಿ ನಡೆದು ಬಂದು ಇನ್ನೇನು ಸಂಜಯನ ಮೇಲೆ ಗರ್ಜಿಸುವ ಮುನ್ನ ಯಾರು ಪ್ರಯಾಣಿಕರು ಎಂದೊಮ್ಮೆ ಹಿಂದೆ ಕಣ್ಣು ಹಾಯಿಸಿದನಷ್ಟೆ. ಪೋಲೀಸಪ್ಪನ ನಾಲಿಗೆಗೆ ಪುನರ್ಜನ್ಮವಾಯಿತು. “ಆಟೋ ರಾಜ! ಹೋದ ವಾರ ನೀನು ಸರಿಯಾಗಿಯೇ ಗಾಡಿ ಚಲಿಸಿದರೂ ಸುಮ್ಮನೆ ನಿನಗೆ ಫೈನ್ ಹಾಕಿಬಿಟ್ಟೆ. ತಪ್ಪಾಯಿತು!” (ಪೋಲೀಸಿನಿಂದ ತಪ್ಪೊಪ್ಪಿಗೆ ಕೇಳಿದ ಸಂಜಯನಿಗೆ ಆಯಾ ತಪ್ಪುವಂತಾಯಿತು.) ಪೋಲೀಸ್ ಪ್ಯಾದೆಯಂತೂ ತನ್ನ ನಾಲಿಗೆಗೇನಾಯಿತೆಂದು ಗಲಿಬಿಲಿಗೊಳ್ಳುತ್ತಿದ್ದಂತೆ ಆತನ ಕೈಗಳಿಗೂ ಸ್ವಾತಂತ್ರ ಬಂದುಬಿಟ್ಟಿತು! ಎಷ್ಟೇ ತಡಿಯಲೆತ್ನಿಸುತ್ತಿದ್ದರೂ ಬಲಗೈ ಕಿಸೆಯೊಳಗೆ ನುಸುಳಿ ನಾಲ್ಕು ದಿನದ ಹಿಂದೆ ಕಸಿದುಕೊಂಡಿದ್ದ ಐವತ್ತು ರೂಪಾಯಿಗಳನ್ನು ಸಂಜಯನಿಗೆ ವಾಪಸ್ಸು ಮಾಡಿಯೇಬಿಟ್ಟಿತು! ಪ್ರಯಾಣಿಕರ ಸೀಟಿನಲ್ಲಿ ವಿಚಿತ್ರ ಬೆಳಕಿನ ಪರಿಣಾಮವಿರಬಹುದೇ ಎಂದು ಕೊಳ್ಳುತ್ತಿದ್ದ ಪ್ಯಾದೆ ಮನಸ್ಸು ಬದಲಿಸಿಯಾನು ಎಂದು ಕ್ಷಣದಲ್ಲೇ ಗೇರ್ ಬದಲಿಸಿ ಸುಂಯ್ ಎಂದು ಹೊರಟ ಸಂಜಯ!
“ಸಾರಥಿ! ನಿಲ್ಲು! ಇಲ್ಲೊಂದು ಬೃಹತ್ ದೇವಸ್ಥಾನವಿದ್ದಂತಿದೆ!” ಶ್ರೀಕೃಷ್ಣ ಪರಮಾತ್ಮ ದೇವಾಲಯದಾಚೆಯೇ ಸ್ಥಾಪಿಸಲ್ಪಟ್ಟ ದೇವರ ಮೂರ್ತಿಯನ್ನು ಎವಕ್ಕದೆ ನೋಡಿದ. ಒಂದು ಕಾಲದಲ್ಲಿ ತಾಯಿಗೆ ಜಗವನ್ನೇ ತೋರಿದ ಆ ಬಾಯಿಯ ದವಡೆ ಇಂದು ಆಶ್ಚರ್ಯದಿಂದ ಹಾರೆಹೊಡೆದುಕೊಂಡಿತು! ಕಾರಣ ಯಾವ ಅಸುರನನ್ನೂ ನಾಚಿಸುವ (ಕು)ರೂಪ ಅಲ್ಲಿದ್ದ ಮೂರ್ತಿಯಲ್ಲಿತ್ತು. ಕೇಶರಾಶಿ, ಕಪ್ಪು ಚಶ್ಮದಲ್ಲಿಯೇ ಅರ್ಧ ಮುಚ್ಚಿಹೋದ ಮುಖ, ಅಂಗವಸ್ತ್ರವಿಲ್ಲದೆ ಹೊರವಾಗಿ ಪ್ರದರ್ಶಿಸಿದ್ದ ಮೇಲ್ ಮೈ ನರಸಿಂಹಾವತಾರವನ್ನು ನೆನಪಿಸಿತು. ವಿಪರ್ಯಾಸವೆಂದರೆ ಈ ಮೂರ್ತಿಯ ಭಂಗಿ ಲಲನೆಯರನ್ನು ಆಕರ್ಶಿಸುವ ದೇವಲೋಕದ ಕಾಮರಾಜನಂತಿತ್ತು! ತಾನು ಈ ನಮೂನೆಯನ್ನು ಸೃಷ್ಟಿಮಾಡಿದ ನೆನಪೇ ಬರುತ್ತಿಲ್ಲವಲ್ಲ! ಇಂಥಹ ರೂಪವನ್ನು ಪಡೆ ಎಂದು ಯರಿಗೂ ಶಾಪವನ್ನು ಕೊಡಲಿಲ್ಲವಲ್ಲ. ಭ್ರಹ್ಮನೇನಾದರೂ ನನಗೆ ತಿಳಿಯದೆ ಯಾವುದೋ ನಶೆಯಲ್ಲಿ ಪಾಪ ಈ ದುರ್ದೈವಿಯನ್ನು ಸೃಷ್ಟಿಸಿಬಿಟ್ಟನೆ?
“ಸಾರ್! ಇದು ದೇವಸ್ಥಾನವಲ್ಲ. ಚಿತ್ರ ಮಂದಿರ. ಅಲ್ಲಿನ ಕಟೌಟ್ ನಮ್ಮ ಹೀರೋ ಲವ್ ಕುಮಾರ್ದು. ಇವತ್ತು ಹೊಸ ಚಿತ್ರ ಬಿಡುಗಡೆ. ಹಾಲು, ಹೂವೆಲ್ಲ ಅಭಿಷೇಕ-ಅಲಂಕಾರಕ್ಕೆ ಒಯ್ಯುತ್ತಿರುವುದು,” ಎಂದು ಸಂಜಯ ಹೇಳುತ್ತಲೇ, ಶಿವನ ನೆನಪಾಯಿತು. ಇತ್ತೀಚೆಗೆ ಭೂಲೋಕದಲ್ಲಿ ಸಾಮಗ್ರಿಗಳ ಕೊರತೆಯಿಂದಾಗಿ ನಮಗೆ ಅಮೋಘವಾಗಿ ಪೂಜೆ ನಡೆಯುತ್ತಿಲ್ಲ ಎಂದು ಸಭೆಗಳಲ್ಲಿ ಪೇಚಾಡುತ್ತಿದ್ದ.
“ಸಾರ್! ಯಾವ ಕಡೆ ಅಂತ ಬೇಗ ಹೇಳಿ. ನನಗೆ ಆಸ್ಪತ್ರೆಯ ಡ್ಯೂಟಿಯಿದೆ,” ಎಂದು ಸಂಜಯ ಹೇಳಲು, “ಆಂ! ನೀನು ವೈದ್ಯನೆ? ಭೂಲೋಕದಲ್ಲಿ ಕೆಲಸವಿಲ್ಲದೆ ವೈದ್ಯರು ಏನೆಲ್ಲ ಕುಯ್ದು-ಕೆರೆಯುತ್ತಿದ್ದಾರೆಂದು ವರದಿಯಿತ್ತು. ಆದರೆ ನೀವು ಸಾರಥಿಗಳೂ ಆಗಿದ್ದೀರ?”
“ಅಯ್ಯೋ! ನಾನೇನು ಡಾಕ್ಟರ್ ಅಲ್ಲವಾದರೂ ಸ್ವಲ್ಪಮಟ್ಟಿಗೆ ನಾನೂ ಅವರಿಗೆ ಪೈಪೋಟಿಯಾಗ ಬಲ್ಲೆ. ಹೋಮಿಯೋಪಥಿ-ಅಲ್ಲೋಪಥಿಯ ಹಾಗೆ ನಾವು ಆಟೋ-ಪತಿಯರಲ್ಲವೆ? ಇತ್ತೀಚೆಗೆ ನಮ್ಮೂರಿನ ಬಸುರಿ ಹೆಂಗಸರು ಆಸ್ಪತ್ರೆಗಳ ಪ್ರಸವಕೋಣೆಗಳಿಗಿಂತ ನಮ್ಮ ಆಟೋಗಳೇ ಕಮ್ಮಿ ಭಯಾನಕವೆಂದು ಒಪ್ಪಿಕೊಳ್ಳುತ್ತಿದ್ದಾರೆ. ಇಲ್ಲಿನ ಅನೇಕ ರಸ್ತೆಗಳೊಂದರಲ್ಲಿ ಒಂದೆರಡು ರೌಂಡ್ ಹಾಕಿಸಿದರಾಯಿತು. ಸಲೀಸಾಗಿ ಪ್ರಸವಿಸುತ್ತಾರೆ. ದಾದಿ-ಆಯಾಗಳಿಗೆ ಕೊಡುವ ಅರ್ಧದಷ್ಟು ಕೊಟ್ಟರೆ ಅವರನ್ನು ವಾಪಸ್ಸು ಮನೆಗೂ ಸೇರಿಸಿಬಿಡುತ್ತೇವೆ. ನಮ್ಮಗಳ ಈ ಸೈಡ್ ಬಿಸಿನೆಸ್ ಹಾಗೇ ಸಾಗಿರಲೆಂದು ನಮ್ಮ ಕೆಲವು ಮುಖಂಡರುಗಳು ಸೂಕ್ತ ಅಧಿಕಾರಿಗಳನ್ನು ಭೇಟಿಮಾಡಿ ಕೆಲವು ಮುಖ್ಯ ರಸ್ತೆಗಳನ್ನು ರಿಪೇರಿ ಮಾಡಿಸಲೇಬಾರದೆಂದು ಅರ್ಜಿ ಹಾಕಿದ್ದಾರೆ!”
“ಕೃಷ್ಣಾ….ಮುರಾರೇ….” ಜೋರಾಗಿ ಕೇಳಿ ಬಂತು ಮೊರೆ.
“ಆಹಾ! ಎಷ್ಟು ಮುಕ್ತವಾಗಿ ಮೊರಯಿಡುತ್ತಿದ್ದಾರೆ. ಯಾರಯ್ಯ?”
“ಓ! ಅದಾ? “ಕೃಷ್ಣಪ್ಪ ದಕಾಯಿತರ ಸಮಿತಿ (ರಿ)” ರವರ ಸ್ತೋತ್ರ ಗೀತೆ. ಕೇಳಿ!”
“ಕೃಷ್ಣ….ಬೆಣ್ಣೆ ಕದ್ದ.. ಸೀರೆ ಕದ್ದ..ಸ್ತ್ರೀಯನ್ನು ಕದ್ದ…. ಕಳ್ಳರ ಕಳ್ಳ..” ಎಂದು ಊದ್ದಕ್ಕೂ ಕದ್ದ..ಕಳ್ಳ ಎಂಬ ಪದಗಳಿಗೆ ದಿವ್ಯ ಪಟ್ಟಕಟ್ಟಿ, ತಾವೂ ಆ ದೈವದ ಅನುನಾಯಿಗಳೆಂದು ಎದೆ ಸೆಟೆಸಿ ಘೋಶಿಸಿಕೊಳುತ್ತಿರುವರು. ಸರ್ಕಾರಿ ಕಛೇರಿಗಳಲ್ಲಿ, ಆಸ್ಪತ್ರೆಗಳಲ್ಲಿ, ಮಠ-ಮಂತ್ರಾಲಯಗಳಲ್ಲಿ, ಸಂತೆ-ಸಂತರುಗಳ ಮಧ್ಯದಲ್ಲಿ, ಕುಂತಲ್ಲಿ-ನಿಂತಲ್ಲಿ, ನಿದ್ರಾ-ಸುಪ್ತಾವಸ್ತೆಗಳಲ್ಲಿ ಶ್ರೀಕೃಷ್ಣನ ಪರಮ ಭಕ್ತರೆಂದು ಸ್ವಾರ್ಥಸಹಿತ ಸೇವೆ ಸಲ್ಲಿಸಿಕೊಳುತ್ತಿರುವರು! ಅವರಲ್ಲಿ ತೀರ ನಿಶ್ಪ್ರಯೋಜಕರು ಮಾತ್ರ ದರೋಡೆಕೋರರು, ಅಪಹರಣಕಾರರು ಮತ್ತು ಭೂಗತ ದೊರೆಗಳೂ ಆದರು.”
ಮೂಲತಃ ನೀಲವರ್ಣಕಾಯದವನಾದ ಮೇಘಶ್ಯಾಮನ ವದನಾರವಿಂದ ಅತೀವ ಮುಜುಗರದಿಂದಾಗಿ ಕೆಂಪಾಗಲೂ ಸಾಧ್ಯವಾಯಿತು! ಜರಾಸಂದ-ಕಂಸ-ಶಕಟ-ಕಾಳಿಂಗನನ್ನು ಕೊಂದ ಕತೆ ಇವರುಗಳು ಕೇಳಿದರೆ ಇನ್ಯಾವ ಕಾರ್ಯಗಳನ್ನು ದೇವರ ಕಾರ್ಯ-ಸ್ವಕಾರ್ಯವೆಂದು ಶುರು ಹಚ್ಚಿಕೊಳ್ಳುತ್ತಾರೆಂದು ಯೋಚಿಸುತ್ತಲೇ ಸಣ್ಣಗೆ ನಡುಗಿದ ಗಿರಿಧಾರಿ!
“ರಥವನ್ನು ಇಲ್ಲಿಂದ ವೇಗವಾಗಿ ಚಲಿಸುವನಾಗು ಸಾರಥಿ,” ಎಂದನು ಬೆವರನ್ನು ಒರೆಸಿಕೊಳ್ಳುತ್ತ. ಸ್ವಲ್ಪ ದೂರ ಹೋದ ಮೇಲೆ, ತಪ್ಪಿಯೂ ಹಿಂತಿರುಗಿ ನೋಡದೆ, “ಸಾರಥಿ, ಸ್ವಲ್ಪ ತಡೆ. ನನ್ನ ತಲಪುದಾಣ ಬದಲಿಸಿದ್ದೇನೆ. ದೇವಸ್ಥಾನಕ್ಕೆ ಆಮೇಲೆ ಹೋದರಾಯಿತು. ಮೊದಲು ನನ್ನನ್ನು ನಿನ್ನ ಅರಸನ ಬಳಿ ಕರೆದುಕೊಂಡು ಹೋಗುವವನಾಗು. ಪ್ರಜೆಗಳ ಯೋಗಕ್ಷೇಮ ಯಾಕೋ ಸರಿಯಿಲ್ಲೆಂದೆನಿಸಿದೆ.”
“ಸಾರ್! ನಮ್ಮದು ಪ್ರಜಾಪ್ರಭುತ್ವ. ಇಲ್ಲಿ ರಾಜ ಇರ. ಕೇವಲ ಹುದ್ದೆ ಮಾತ್ರವಿದ್ದು ಅದನ್ನು ಓರ್ವ ಚುನಾಯಿತ ಅಭ್ಯರ್ಥಿ ಅಲಂಕರಿಸುತ್ತಾನೆ. ಮೊದಲು ಆ ಹುದ್ದೆಯನ್ನು ಮಿನಿಸ್ಟರ್ ಎಂದು ಕರೆಯುತ್ತಿದ್ದೆವು. ಆದರೆ ಆ ನಾಮಧೇಯವನ್ನು ಸರ್ವಸಮ್ಮತದಿಂದ “ಧೃತರಾಷ್ಟ್ರ” ಎಂದು ಬದಲಿಸಿದ್ದೇವೆ. ಈಗ ನಮ್ಮನ್ನು ಆಳುತ್ತಿರುವವನು ಆರನೆಯ ಧೃತರಾಷ್ಟ್ರ. ಗೃಹಪಿತರಿಗೆ ಅಷ್ಟಾಗಿ ಬೆಲೆಕೊಡದ ನಮ್ಮ ನಾಡಿನಲ್ಲಿ ರಾಷ್ಟ್ರಪಿತ ಬಾಪೂಜಿ ಎಂಬುವರಿದ್ದರು. ಅವರ ಆದರ್ಶಗಳನ್ನು ಸ್ವಲ್ಪವಾಗಿಯೇ ಮಾರ್ಪಾಟಿಸಿ ಅನುಸರಿಸುವಾತ ನಮ್ಮ ಆರನೆಯ ಧೃತರಾಷ್ಟ್ರ. ಅದಕ್ಕೆ ಕೆಟ್ಟದ್ದಲ್ಲದ್ದನ್ನು ನೋಡುವುದಿಲ್ಲ, ಕೆಟ್ಟದ್ದಲ್ಲದ್ದನ್ನು ಕೇಳುವುದಿಲ್ಲ, ಕೆಟ್ಟದ್ದಲ್ಲದ್ದನ್ನು ಹೇಳುವುದಿಲ್ಲ.”
ಅರಸನನ್ನು ಕಾಣುವ ಬಯಕೆ ಕುರುಡಾಯಿತು. ಹೆಳವರ ರಾಜ್ಯದಲ್ಲಿ ಕುರುಡನೇ ರಾಜ!
“ಸಾರ್! ನೋಡಿ ನಿಮ್ಮ ಜನ್ಮ ಸ್ಥಾನ ಬಂತು ನೋಡಿ.”
“ಆಂ! ಮಥುರೆಗೇ ಬಂದುಬಿಟ್ಟೆವೆ?”
“ಅಯ್ಯೋ ಅಲ್ಲ ಸಾರ್! ನಾವೀಗ ಜೈಲು- ಅದೇ ಕಾರಗೃಹದ ಎದುರು ಸಾಗುತ್ತಿದ್ದೇವೆ.”
“ಓ!” ನಿಟ್ಟುಸಿರಿಟ್ಟ ವಾಸುದೇವ. “ನನ್ನ ಮಾತಾ ಪಿತೃಗಳಾದ ದೇವಕಿ ವಸುದೇವರು ಎಷ್ಟು ಪ್ರಾಯಸಪಟ್ಟರು. ಕಾರಗೃಹವಾಸ ಅಲ್ಲಿದವರೇ ಬಲ್ಲರು.”
“ಹೌದು ಸರ್. ಏನ್ ಮಜ! ಸೆಲ್ ಫೋನು, ಕಲರ್ ಟೀ.ವಿ; ಕೋಳಿ-ಕುರಿ ಊಟ, ಕೊಲೆಗಡುಕರಿಂದ ಇಪ್ಪತ್ತುನಾಲ್ಕು ಗಂಟೆ ಪೋಲೀಸರ ರಕ್ಷಣೆ ಇನ್ನೆಲ್ಲಿ ಸಿಗಬೇಕು? ಕಾಕ್ರಿ-ಪೀಕ್ರಿ ಕಳ್ಳರನ್ನು ಬಿಟ್ಟು ಅಲ್ಲಿರೋರು ಯಾರೂ ಹೊರಗೆ ಬರಲು ಇಷ್ಟಪಡುವುದೇ ಇಲ್ಲ. ನಮ್ಮನ್ನು ಆಳುತ್ತಿದ್ದ ಐದನೆಯ ಧೃತರಾಷ್ಟ್ರ ಕೂಡ ಚಾರ್ಜ್ ಶೀಟ್ ಹಾಕಿಸಿಕೊಂಡರೂ, ಜೈಲಿನಿಂದಲೇ ಚುನಾವಣೆಗೆ ನಿಂತು ಗೆದ್ದು ಬಂದವನು! ಮುಂದಿನ ಚುನಾವಣೆಯ ಹೊತ್ತಿಗೆ ಕಾರಾಗೃಹದಲ್ಲೇ ಒಂದು ಶಾಸಕರ ಭವನ ಕಟ್ಟಲ್ಪಡುತ್ತದೆ. ನಮ್ಮ ದೇಶದ ಇತಿಹಾಸವೇ ಹಾಗೆ ಸಾರ್! ಹಿಂದೆ ಗಾಂಧಿ, ನೆಹರು, ಮತ್ತಿತರೆ ನೇತಾರರೂ ಕಾರಾಗೃಹದಲ್ಲಿದ್ದು ನಾಡ ಸೇವೆ ಮಾಡಲಿಲ್ಲವೆ?” ರಾಜೀವಲೋಚನನ ಕಣ್ಣುಗಳಿಗೆ ಕಪ್ಪು ಮುಸುಕಿದಂತಾಗಿ, ತಲೆ ಗಿರ್ರೆಂದಿತು!
ದೇವಸ್ಥಾನವನ್ನು ಹುಡುಕುತ್ತಲೇ ಸಾಗಿತ್ತು ಆಟೊ. ಬವಳಿಯಿಂದ ಸಾವರಿಸಿಕೊಂಡ ಮುರಾರಿ ರಣ ಕಹಳೆಗಳ ಶಬ್ದಕ್ಕೆ ಕಣ್ಣು ಬಿಟ್ಟ. ಅಕ್ಷೋಹಿಣಿ ಸೈನ್ಯದಲ್ಲಿದ್ದದ್ದಕ್ಕಿಂತ ಭಿನ್ನವಾದ, ಭಯಾನಕವಾದ, ಡಿಕ್ಕಿ ಹೊಡೆದು ಅಥವ ಕೇವಲ ಸ್ಪರ್ಷದಿಂದಲೇ ಕೊಲ್ಲಬಲ್ಲ ಅನೇಕ ಸಾರಿಗೆಗಳು ಕಣ್ಣಿಗೆ ಬಿದ್ದವು. ಅಶ್ವದಳವನ್ನು ನಾಚಿಸುವಂತೆ ಮೂರು ಜನರನ್ನು ಕುಳ್ಳಿರಿಸಿಕೊಂಡು ಸಾಗುವ ದ್ವಿಚಕ್ರಗಳು; ಮಾನವ-ಕುದುರೆ-ಎತ್ತು-ಕತ್ತೆ, ನಾಯಿ, ಬೆಕ್ಕು ಮತ್ತಿನ್ನಿತರೇ ಪ್ರಾಣಿಗಳು ಎಳೆದುಕೊಂಡು ನಿಧಾನವಾಗಿ ಚಲಿಸುವ ಗಾಡಿಗಳು; ಕಸ ಹೊತ್ತು-ಚೆಲ್ಲುತ್ತಾ ಸಾಗುವ ಘಂ ಎನ್ನುವ ಬಸುರಿ ಲಾರಿಗಳು, ಬಸ್ಸುಗಳ ಮೇಲೇರಿ-ಒಳಗೆ ತುರುಕಿಕೊಂಡಿದ್ದ ಜನ ಯುದ್ದಕ್ಕೇ ಸಿದ್ಧರಾಗಿದ್ದಂತಿತ್ತು! ಇಷ್ಟು ವಾಹನಗಳ ನಡುವೆ ಪ್ರಾಣವನ್ನೇ ಪಣವಿಟ್ಟು ನಡೆದಾಡಿ-ನುಸುಳಿಕೊಳ್ಳುತ್ತಿದ್ದ ಪದಾತಿಗಳ ಪಡೆ ಬೇರೆ! ಮಹಾಭಾರತದ ಯುದ್ದವೇ ನೀರಸವೆನಿಸಿಬಿಟ್ಟಿತು!
ಆಗೀಗ ಕೊಡವಿಕೊಂಡು, ಜ್ವಾಲಾಮುಖಿಯಾಗಿ, ಧಾರಾಕರದ ಮಳೆ- ಸುನಾಮಿಗಳಾಗಿ ಬೇಸರಿಸಿಕೊಳ್ಳುತ್ತಿದ್ದ ಧರಣಿಯ ಮೊರೆಯನ್ನು ಇನ್ನುಮೇಲಾದರೂ ಸೀರಿಯಸ್ಸಾಗಿ ಪರಿಗಣಿಸಬೇಕೆಂದು ಸಂಕಲ್ಪಿಸಿಕೊಂಡ ಶ್ರೀಕೃಷ್ಣ.
“ಸಂಜಯ! ನಿಲ್ಲಿಸು! ಇಲ್ಲಿ ದೇವಾಲಯವಿರಬಹುದು. ಅನೇಕರು ಹೊರನಿಂತಿರುವಂತಿದೆ. ಇದೇನು! ಅಜ್ಞಾತವಾಸದ ಬೃಹನ್ನಳೆಯ ಅವಳಿಗಳಂತಿದ್ದಾರೆ ಈ ಭಕ್ತರು!?”
“ಸಾರ್! ಇದು ಟೆಂಪಲ್ ಅಲ್ಲ. ಕಾಲೇಜು! ನೀವು ಹೇಳುತ್ತಿರುವರು ಭಕ್ತರಲ್ಲ-ವಿಧ್ಯಾರ್ಥಿಗಳು. ಎಲ್ಲರೂ ಉದ್ದನೆಯ ಕೂದಲು, ಕಿವಿಗೊಂದಕ್ಕೆ ಓಲೆ, ಮೈಗೇ ಅಂಟಿಕೊಂಡಂತೆ ಅಂಗಿಗಳು ಹಾಕಿಕೊಂಡಿರೋದ್ರಿಂದ ನಿಮಗೆ ಹುಡುಗ-ಹುಡುಗಿಯರು ಎಂದು ತಿಳಿಯದೆ ಕನ್‌ಫ್ಯೂಸ್ ಆಗಿದೆ. ಇವತ್ತು ಇವರುಗಳಿಗೆ ಪರೀಕ್ಷೆ ಇರುವುದರಿಂದ ಸ್ವಲ್ಪ ಜನಸಂದಣೆ ಅಷ್ಟೆ. ಇತರೇ ದಿನಗಳಲ್ಲಿ ಆಗೊಬ್ಬರು ಈಗೊಬ್ಬರು ಇಲ್ಲಿ ಸುಳಿದು ಹೋಗುತ್ತಾರೆ. ಕೆಲವರು ಪರೀಕ್ಷೆಗೂ ಬರಲು ಪುರುಸೊತ್ತಾಗದಿದ್ದರೆ ತಮ್ಮ ಫೋಟೋಗಳನ್ನೇ ರವಾನಿಸಿ, ಅವುಗಳ ಕೈಲೇ ಉತ್ತರವನ್ನು ಬರೆಯಿಸಿ ಉತ್ತಮ ಶ್ರೇಣಿಗಳಲ್ಲಿ ಉತ್ತೀರ್ಣರಾಗಿ ಜಗತ್ತನ್ನು ಜೀರ್ಣೋದ್ಧಾರ ಮಾಡುತ್ತಾರೆ!” ಸಾಂದೀಪನಿಯ ನೆನಪಾಗಿ ಕಾಲೇಜಿನ ಹೆಸರು ನೋಡಲು-“ಏಕಲವ್ಯ ಸಂಸ್ಥೆ- ಗುರು ಅಥವ/ಮತ್ತು ಶಿಷ್ಯರ ಗೈರುಹಾಜರಿಯಲ್ಲೇ ವಿಧ್ಯೆ ವಿತರಿಸುವ ಸಂತೆ” (ಸರ್ಕಾರದಿಂದ ಅಂಗೀಕರಿಸಲ್ಪಟ್ಟಿದೆ) ಎಂದಿತ್ತು!
ಮತ್ತಷ್ಟೂ ಹುಡುಕಿದ ನಂತರ ದೇವಸ್ಥಾನ ಸಿಕ್ಕೇಬಿಟ್ಟಿತು! ತನ್ನ ಭಕ್ತರನ್ನು ಕಾಣುವ ಹವಣಿಕೆಯಲ್ಲಿ ಉಲ್ಲಾಸದಿಂದ ಆಟೋ ಇಳಿದ ಪರಮಾತ್ಮ. ಹರಿ ಇದ್ದಷ್ಟೊತ್ತು ಸೆಟಕೊಂಡು ಸತ್ಯ ಹೇಳುತ್ತಿದ್ದ ಸಂಜಯನ ನಾಲಗೆಗೆ ಒಮ್ಮೆಲೇ ಬಿಡುಗಡೆ ಸಿಕ್ಕಿತು. ” ಯೋ! ನಿಲ್ಲಯ್ಯ! ಪರವಾಗಿಲ್ಲ ಕಣಯ್ಯ ನೀನೂ! ಇಷ್ಟೊತ್ತು ಊರೆಲ್ಲಾ ಸುತ್ತಾಡಿಸಿ ಹಾಗೇ ಹೋಗ್ತಿದ್ದೀಯ! ಮೀಟರ್ ಮೇಲೆ ಒಂದೂವರೆ ಕೊಡು,” ಎಂದು ಹೇಳುತ್ತಾ ಕೇಶವ ಮರೆತಿದ್ದ ಮುಕುಟವನ್ನು ಆತನಿಗೆ ಕಾಣದಂತೆ ಸೀಟಿನ ಹಿಂದಕ್ಕೆ ತಳ್ಳಿದ್ದೂ ಆಯಿತು.
ನಿಟ್ಟುಸಿರಿಟ್ಟ ಶ್ರೀಹರಿ. ತನ್ನ ಉಪಸ್ಥಿತಿ-ಅನುಪಸ್ಥಿತಿಯಿರಲಿ ಸದಾ ತಮ್ಮ ತನವನ್ನೇ ಕಾಪಾಡಿಕೊಳ್ಳುವ ಪ್ರಾಮಾಣಿಕರಿದ್ದಾರೆಯೇ ಎಂದು ಯೋಚಿಸತೊಡಗಿದ. ವಿಶಾಲ ಜಗತ್ತಿನಲ್ಲಿ ಕೇವಲ ಈರ್ವರು ಕಣ್ಮುಂದೆ ಬಂದರು. ಒಂದು ಮುಗ್ಧ ಮಗು- ಸಾಕ್ಷಾತ್ ಸತ್ಯಸಂಧ ; ಮತ್ತೋರ್ವ ವಕೀಲ-…
ವಿಶೇಷ ಪೂಜೆ ಎಂದು ಮಾಹಿತಿ ಇದ್ದ ಶ್ರೀಕೃಷ್ಣನನ್ನು ನಿರ್ಜನವಾದ ದೇವಸ್ಥಾನ ಸ್ವಾಗತಿಸಿತು. ಅಯ್ಯೋ ಎಷ್ಟು ನೊಂದು ಹೋದರೋ ನನ್ನ ಭಕ್ತರು ಎಂದು ನೊಂದ ಶ್ರೀಹರಿ. ಅರ್ಚಕರೂ ಗರ್ಭಗುಡಿಯ ಬಾಗಿಲು ಹಾಕುತ್ತಿದ್ದರು! ಶ್ರೀಕೃಷ್ಣನಿಗೆ ಬೆನ್ನುಮಾಡಿ ಬೀಗ ಹಾಕುತ್ತಿದ್ದವರಿಗೆ ಸಾಕ್ಷಾತ್ ದೇವನ ದರ್ಶನವಾಗಲೇ ಇಲ್ಲ. ದೇವರು ಕೊಟ್ಟರೂ, ಪೂಜಾರಿ ಬಿಟ್ಟ.
ಹಿಂತಿರುಗಿ ನೋಡದೆಯೇ,” ಏನ್ರಿ! ಈ ಹೊತ್ತಿನಲ್ಲೇನ್ರಿ ದೇವಸ್ಥಾನಕ್ಕೆ ಬರೋದು? ಟಿ.ವಿಯಲ್ಲಿ ಸೀರಿಯಲ್ಲುಗಳು ಶುರುವಾಗುವ ಹೊತ್ತಾಯಿತು. ಪಾಪ ಅದಕ್ಕೆ ಎಲ್ಲರೂ ದಿಢೀರ್ ಪೂಜೆ ಮುಗಿಸಿ ಹೊರಟು ಹೋದರು. ನಾನೂ ಮೊನ್ನೆ ಫ್ಲಾಟ್ ಸ್ಕ್ರೀನ್ ಪ್ಲಾಸ್ಮಾ ಟಿ.ವಿ ಖರೀದಿಸಿದ್ದೀನಿ. ನೀವು ನಾಳೆ ಬನ್ನಿ ಪ್ರಸಾದ ಕೊಡ್ತೀನಿ,” ಎಂದು ನಡದೇ ಬಿಟ್ಟ!…
…..”ಭಾಮ! ರಾಧೆ! ಅಯ್ಯೋ ಸ್ವಾಮಿ ಮೂರ್ಚೆ ತಪ್ಪಿದ್ದಾರಲ್ಲ! ಹಿಂದೆ ಅರ್ಜುನನಿಗೆ ವಿಶ್ವರೂಪದರ್ಷನ ಮಾಡಿಸಿದಾಗಲೂ ಇವರು ಇಷ್ಟು ಸುಸ್ತಾಗಿರಲಿಲ್ಲ. ಅದೆಲ್ಲಿಂದ ಬಂದರೋ, ಏನು ಕಂಡರೋ!!” ಎಂದು ರುಕ್ಮಿಣಿ ಕಣ್ಣೀರಿಟ್ಟು ಗಾಳಿಬೀಸಿದಾಗ ಶ್ರೀಕೃಷ್ಣನ ಕಣ್ಣು ತೆರೆಯಿತು!

‍ಲೇಖಕರು avadhi

October 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: