ನಂದಿನಿ ಹೆದ್ದುರ್ಗ ಹೊಸ ಕವಿತೆ ‘ಎಷ್ಟೆಂದರೆ ಏನುತ್ತರ ಕೊಡಲಿ ಹೇಳು..’

 ನಂದಿನಿ ಹೆದ್ದುರ್ಗ

ಎಷ್ಟೆಂದರೆ ಏನುತ್ತರ ಕೊಡಲಿ ಹೇಳು.
ಕಡಲೆನ್ನಲೇ..?
ಬರೀ ಮೂರು ಪಾಲು.
ಮುಗಿಲೆನ್ನಲೇ..?
ಖಾಲಿ ಕಣ್ಣ ಮಿತಿ.
ಭುವಿಯೆನ್ನಲೇ..?
ಹಸೀ ಸುಳ್ಳು.

ನಿನ್ನ ಮೂರಕ್ಷರದ ಹೆಸರ ತುಂಡರಿಸಿ
ಮುದ್ದಾಗಿ ಕರೆವಾಗ ಹರಿವ
ಹೊಸ ರಾಗದಷ್ಟು…
ನನ್ನ ಅಂಗಳಕೆ ನಿತ್ಯ ಮುಂಜಾನೆ
ಬಂದು ಚಿಂವುಗುಡುವ ಪುಟ್ಟ ಹಕ್ಕಿಯ
ಕಣ್ಣ ಹಸಿವಿನಷ್ಟು.
ಹಸಿದ ಹಸುಗೂಸು
ನಡುರಾತ್ರಿ
ಮೊಲೆ ಕುಡಿವ ಸದ್ದಿಗೆ ಜಗದ
ಎದೆಯೊಳಗೆ ಜಿನುಗುವ ತೇವದಷ್ಟು.

ಬಲಗಾಲಿಟ್ಟು ಬಾ ಎನ್ನಲಿಲ್ಲ ನೀನು.
ಕಿರುಬೆರಳ ಹಿಡಿದು ಹೆಜ್ಜೆ ಹಾಕಲಿಲ್ಲ.
ಬಯಸಿ ಕೂಡುವೆವು
ಬಯಕೆ ಅಗ್ನಿಗೆ ಹವಿಸ್ಸು
ನಡುವೆ ಏನಿಲ್ಲವೆನ್ನುವ
ಒಂದೇ ಭಾವ.

ತಿಳಿದಿದೆ
ತಣಿಯಲಾರೆ ನಾನೆಂದಿಗೂ
ನಿನ್ನ ಇಂಚುಗಳ ಹೊಂಚಿರುವ ನಾನು
ಬಟ್ಟೆಗಳ ಹಂಗಿನಲಿದ್ದೇನೆ ಇನ್ನೂ
ನನ್ನ ನೀಳ ಕೊರಳ ಆರಾಧಕನೇ
ಕನಸಿನಲ್ಲಾಗುವ ಕ್ರಿಯೆಗಳ
ಲೇಖನ ತಯಾರಾಗಿದೆ

ಪ್ರತಿ ಭೇಟಿಯಲ್ಲು ಗೊಣಗುವೆ
‘ಮತ್ತಿದು ಕೊನೆಯ ಬಾರಿ’
ನನ್ನ ಪರಿಧಿಯೊಳಗುಳಿಸಿ
ಹೋಗುವ ನಿನ್ನ ಅರ್ಧಚಂದ್ರ
ಮತ್ತೆ ಕಾವಲಾಗುತ್ತಾನೆ.
ನೀಡಿಯೂ ನಿರಾಸೆಯಾಗುವ
ತಪ್ಪೆಂದು ಗೊತ್ತಿದ್ದೂ
ಹುಟ್ಟುವ ಈ ಒಲುಮೆಗೆ

ಇನ್ನೊಂದು ‘ಕೊನೆಯ ಬಾರಿ’
ಹುಟ್ಟುತ್ತದೆ ಹುಲ್ಲುಬೀಜದಂತೆ
ನೋವಿಗೆ ಹಸಿದು ನನ್ನೆರಡೂ
ತೋಳುಗಳ ತೆರೆಯುತ್ತೇನೆ.
ನಿನ್ನ ಆವರಿಸುವ ಅಮಲು
ಹೊಸದಾಗಿ ಶುರುವಾಗುತ್ತದೆ.
ಒಂದಷ್ಟು ಹೊತ್ತು ಕೂತು
ಮಾತಾಡಿ ಹೋಗಿಬಿಡು
ಮುಂದಿನದು ಕಣ್ಣ ಕರ್ತವ್ಯ

ನಡುವೆಂಬ ಇಳಿಜಾರಿನಲ್ಲಿ
ಕೆಳಗುರುಳಿ ಬಿದ್ದು
ಬೊಗಸೆಯೊಡ್ಡಿರುವವನೇ
ಬಯಕೆ ಆಯಸ್ಸು ವ್ಯಯವಾಗುತ್ತಿದೆ
ಮುಂಚಿನಂತೆಯೇ ಮುತ್ತೊಂದು
ಕದ್ದು
ಹದವಾಗಿ ಕುದಿಯಬೇಕೆಂದು
ನನಗಂತೂ ಅನಿಸುತಿದೆ.

ನಾಳೆ ನಡೆಯುವ ‘ಕೊನೆಯಲ್ಲಿ’
ಕ್ರಿಯಾಪರ್ವ ಸಂಭವಿಸುವುದೇ..?
ನನ್ನ ಇಂಚುಗಳೂ
ಕೊಂಚ ಸಡಿಲಾಗಬೇಕಿದೆ.
ಬಾ ಬಳಿಗೆ… ಈ ಇಲ್ಲಿಗೆ.
ಕೊ ಕೆಳಗೆ…ಮ್…ಮೆಲ್ಲಗೆ…
ಹಸಿದು ಅರಳಿದ್ದೇನೆ.
ಬಿರು ಬೇಸಿಗೆ.
ನೂಲಿನ ಹಂಗು ಬೇಡ ನಮಗೆ.
ಅದೆಷ್ಟು ಅಚ್ಚೊತ್ತಿದ್ದೀಯಾ ನಿನ್ನ
ನನ್ನ ಹಸಿ ಮೈಯ ಮೇಲೆ.
ಬೆಳಕಲ್ಲಿ ಬಾಳಬೇಕಿದೆ.
ತುಸು ನಿಗಾ ವಹಿಸಬಾರದೇ..?

‍ಲೇಖಕರು nalike

July 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಬಾಗೇಪಲ್ಲಿ ಕೃಷ್ಣಮೂರ್ತಿ

    ಎಷ್ಟೋ ಒಂದಷ್ಟು ಎಂದು ಹೇಳಲಾಗದ ಸ್ಥಿತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: