ದುಷ್ಯಂತನೆಂಬ ಭ್ರಮರದ ತೋಳಲ್ಲಿ..

ಸಂಧ್ಯಾರಾಣಿ 

ಶಾಕುಂತಲೆಯನ್ನು ಹಲವರು ಹಲವು ಬಗೆಯಲ್ಲಿ ಕಂಡಿದ್ದಾರೆ. ಬಸಪ್ಪ ಶಾಸ್ತ್ರಿಗಳ ’ಶಾಕುಂತಲ’ ದಿಂದ ಹಿಡಿದು ಕೆ ವೈ ನಾರಾಯಣ ಸ್ವಾಮಿಗಳ ’ಅನಭಿಜ್ಞ ಶಾಕುಂತಲ’ದ ವರೆಗೆ ಹಲವಾರು ನಾಟಕಗಳು ಹಲವಾರು ರೂಪದಲ್ಲಿ ಶಾಕುಂತಲೆಯನ್ನು ನಮ್ಮೆದುರಲ್ಲಿ ಕಟ್ಟಿಕೊಡುತ್ತದೆ.

ಅಲ್ಲಿ ಶಾಕುಂತಲೆ ಮುಗ್ಧೆಯಾಗಿ, ಶೋಷಿತೆಯಾಗಿ, ಶಪಿತೆಯಾಗಿ ನಮ್ಮ ಕಲ್ಪನೆಗೆ ದಕ್ಕುತ್ತಾ ಹೋಗುತ್ತಾಳೆ.

ಶಾಕುಂತಲೆಯನ್ನು ಅವಳ ಲೋಕದ ಜೊತೆಜೊತೆಯಲ್ಲಿ ಕಟ್ಟಿಕೊಟ್ಟ ನಾಟಕ ’ಲೋಕ ಶಾಕುಂತಲ’. ಕೆ ವಿ ಸುಬ್ಬಣ್ಣನವರು ಬರೆದ ಈ ನಾಟಕವನ್ನು ಚಿದಂಬರರಾವ್ ಜಂಬೆ ನಿರ್ದೇಶಿಸಿದ್ದಾರೆ.

ಈ ನಾಟಕ ನೋಡಿ ವೈದೇಹಿ ’ಶಾಕುಂತಲೆಯೊಂದಿಗೆ ಕಳೆದ ಅಪರಾಹ್ನ’ ಕಥೆ ಬರೆಯುತ್ತಾರೆ. ಅದನ್ನು ಕೆ ವಿ ಸುಬ್ಬಣ್ಣನವರು ಮತ್ತು ಕೃಷ್ಣಮೂರ್ತಿ ಕವತ್ತಾರ್ ಏಕವ್ಯಕ್ತಿ ಪ್ರದರ್ಶನದ ನಾಟಕವನ್ನಾಗಿಸಿದ್ದಾರೆ. ವೈದೇಹಿ ಶಾಕುಂತಲೆಯನ್ನು ಜಗವರಿತ, ಗಂಡನ್ನು ಅರ್ಥ ಮಾಡಿಕೊಂಡ ಪ್ರೌಢೆಯಾಗಿ ನಮ್ಮೆದಿರು ನಿಲ್ಲಿಸುತ್ತಾರೆ.

’ಅಂತರಂಗ’ ತಂಡಕ್ಕಾಗಿ ಜಂಬೆ ಮತ್ತೆ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಲೋಕಶಾಕುಂತಲದ ವಿಶೇಷವೆಂದರೆ ಇಲ್ಲಿ ಶಾಕುಂತಲ ದುಷ್ಯಂತರಷ್ಟೇ ಧ್ವನಿ ಉಳಿದ ಪಾತ್ರಗಳಿಗೂ ಇದೆ. ಭಾಗವತರಿಗೂ ಇದೆ, ಮೇಳಕ್ಕೂ ಇದೆ. ಇವರೆಲ್ಲರ ಒಳಗೊಳ್ಳುವಿಕೆಯಿಂದ, ಇವರೆಲ್ಲರ ಸಂವಹನದಿಂದ ನಾಟಕ ರೂಪುಗೊಳ್ಳುತ್ತಾ ಹೋಗುತ್ತದೆ. ನಾಟಕದಲ್ಲಿ ಯಕ್ಷಗಾನದ ಭಾಗವತಿಕೆ ಇದೆ, ಕಥಕ್ಕಳಿ, ಕೋಡಿಯಾಟ್ಟಂ ಹೆಜ್ಜೆಗಳ ನೃತ್ಯವಿದೆ, ಕಣ್ಣಿಗೆ ಭವ್ಯವೆನಿಸುವ ವಸ್ತ್ರಾಲಂಕಾರ ಮತ್ತು ಮುಖಾಲಂಕಾರ ಇದೆ. ನಾಟಕದಲ್ಲಿ ಪಾತ್ರಗಳಷ್ಟೇ ಮುಖ್ಯವಾಗುವುದು ಮೇಳ. ನಾಗರಾಜ್ ಮಾಸ್ತರ್ ಮೇಳ ಅದ್ಭುತವಾಗಿ ನಾಟಕದೊಳಗೆ ಹಾಸುಹೊಕ್ಕಾಡುತ್ತದೆ.

ನಾಟಕದಲ್ಲಿ ಭಾಷೆಯನ್ನು ಹಲವು ನೆಲೆಗಳಲ್ಲಿ ಬಳಸಿಕೊಳ್ಳಲಾಗಿದೆ. ಇಲ್ಲಿ ಸಂಸ್ಕೃತ ಇದೆ, ಕನ್ನಡ ಇದೆ, ಆದಿವಾಸಿಗಳ ಭಾಷೆಯ ಬಗ್ಗೆ ಹಾಸ್ಯ ಇದೆ, ನಗರದಲ್ಲಿ ’ಅಧಿಕಾರಿಗಳ ಭಾಷೆ’ ಇದೆ. ಜೊತೆಜೊತೆಗೆ ಸಂಗೀತದ ಭಾಷೆ ಸಹ ಇದೆ. ಆದರೆ ನಾಟಕದಲ್ಲಿ ಸಂಸ್ಕೃತ ಬಳಸುವುದಕ್ಕೆ ಯಾವ ವಿಶೇಷ ಕಾರಣಗಳೂ ಕಾಣುವುದಿಲ್ಲ. ಅದರ ಬದಲಾಗಿ ಕನ್ನಡವನ್ನೇ ಬಳಸಿದ್ದರೆ ನಾಟಕದ ಸಂಭಾಷಣೆ ಇನ್ನೂ ಆಪ್ತವಾಗುತ್ತಿತ್ತು ಅನ್ನಿಸುತ್ತದೆ. ಕೇವಲ ನಟನೆ ಮತ್ತು ಭಾವವನ್ನೇ ನೋಡಿ ಅರ್ಥಮಾಡಿಕೊಳ್ಳಬೇಕು ಎಂದಾಗ ನಮಗೆ ಅರ್ಥವಾಗದ ಆದಿವಾಸಿಗಳ ಭಾಷೆಗೂ, ನಾಟಕದಲ್ಲಿ ನಡುನಡುವೆ ಬರುವ ಸಂಸ್ಕೃತಕ್ಕೂ ವ್ಯತ್ಯಾಸ ಇರುವುದಿಲ್ಲ.

ಜಂಬೆಯವರು ನಾಟಕದಲ್ಲಿ ದೃಶ್ಯಗಳನ್ನು ಕಟ್ಟಿಕೊಡುವ ರೀತಿಯೇ ಮನೋಹರ. ನಾಟಕದ ಮೊದಲ ದೃಶ್ಯದಲ್ಲಿ ಜಿಂಕೆಗಳ ಆಟದಿಂದ, ಹಿನ್ನಲೆಯಲ್ಲಿ ಕೇಳಿಬರುವ ವೇದಪಠಣದಿಂದ ಯಾವುದೇ ರಂಗ ಉಪಕರಣಗಳ ನೆರವಿಲ್ಲದೆಯೇ ಅದು ಆಶ್ರಮ ಎನ್ನಿಸಿಬಿಡುತ್ತದೆ. ಶಕುಂತಲೆಯನ್ನು ಕಾಡುವ ಭೃಂಗದ ಆಟ, ರಾಜನ ಸೇನೆ ಬೇಟೆಗೆ ಬರುವ ದೃಶ್ಯಗಳೂ ಅಷ್ಟೇ ಸೊಗಸಾಗಿ ಬಂದಿವೆ.  ಆ ದೃಶ್ಯ, ಮತ್ತು ಆ ದೃಶ್ಯದಲ್ಲಿ ರಾಜ ತನ್ನ ಪರಿವಾರದಿಂದ ಬೇರೆಯಾಗುವುದು ಬಹಳ ಚೆನ್ನಾಗಿ ಮೂಡಿಬಂದಿದೆ. ಇದು ಒಂದು ಉದಾಹರಣೆ ಅಷ್ಟೆ, ಅನೇಕ ದೃಶ್ಯಗಳು ಹೀಗೆ ತಮ್ಮ ಕಟ್ಟುವಿಕೆಯ ರೀತಿಯಿಂದಲೇ ಮನಸ್ಸೆಳೆಯುತ್ತದೆ.

ಶಕುಂತಲೆ ಆಶ್ರಮವಾಸಿ, ಆಶ್ರಮದಲ್ಲಿರುತ್ತಲೇ ನಾಳಿನ ಕನಸನ್ನು ಕಾಣುತ್ತಿರುವ ತರುಣಿ. ಬರಲಿರುವ ದುಷ್ಯಂತನ ಮುನ್ಸೂಚನೆಯಾಗಿ ಭ್ರಮರ ಬಂದು ಅವಳ ಮೇಲೆ ಆಕ್ರಮಣ ಮಾಡುತ್ತದೆ. ಪಾಪದ ಹುಡುಗಿ ಶಕುಂತಲ, ಕೈಯಲ್ಲಿ ಓಡಿಸಬಹುದಾದ ಭ್ರಮರದಿಂದ ಪಾರಾಗಲು ಮನಸ್ಸನ್ನೇ ಆಕ್ರಮಿಸಿಕೊಳ್ಳುವ ದುಷ್ಯಂತನೆಂಬ ಭ್ರಮರದ ತೋಳುಗಳನ್ನು ಸೇರುತ್ತಾಳೆ.

ಆಮೇಲೆ ಶಕುಂತಲೆಯ ಕಥೆ ಏನಾಯಿತೆಂದು ಯಾರಿಗೆ ಗೊತ್ತಿಲ್ಲ?

ರಾಜ ಬಹುವಲ್ಲಭನಲ್ಲವೇ ಎನ್ನುವ ಅನುಸೂಯೆಯ ಪ್ರಶ್ನೆಗೆ ದುಷ್ಯಂತ ನಿರಾಕರಣವನ್ನೇನೂ ಕೊಡುವುದಿಲ್ಲ. ಅವಳನ್ನು ಪ್ರೀತಿಸುತ್ತೇನೆ ಎನ್ನುತ್ತಾನೆಯೇ ಹೊರತು ಅವಳನ್ನು ಮಾತ್ರವೇ ಪ್ರೀತಿಸುತ್ತೇನೆ ಎನ್ನುವುದಿಲ್ಲ. ಹೊಸಹುಡುಗಿಯ ಪರಿಚಯ ಆದ ನಂತರ ದುಷ್ಯಂತ ಸ್ವಪ್ನವೆಂಬ ಮೋಡಿಗೆ ಒಳಗಾಗುತ್ತಾನೆ. ಅದು ಅವನಿಗೆ ಸ್ವಪ್ನವಷ್ಟೇ, ವಾಸ್ತವವಲ್ಲ. ಅವನ ಜೀವನದಲ್ಲಿ ಅದಕ್ಕೆ ವಾಸ್ತವದ ಅಸ್ತಿತ್ವವೂ ಇಲ್ಲ. ಅರಣ್ಯದಲ್ಲಿ ಸಹಜ ಬದುಕಿನ ನಡುವಲ್ಲಿ ಬದುಕುವ ಶಕುಂತಲೆ ದುಷ್ಯಂತನನ್ನು ಸಹಜವಾಗಿಯೇ ಪ್ರೀತಿಸುತ್ತಾಳೆ, ಸಹಜವಾಗಿಯೇ ಪ್ರೇಮಿಸುತ್ತಾಳೆ.

ನಾಟಕದ ಈ ಭಾಗದಲ್ಲಿ ಕಣ್ವ ಮಹರ್ಷಿಯ ಆಶ್ರಮದ ಒಬ್ಬ ಋಷಿ ರಾಜನ ಈ ಆಗಮನವನ್ನು ಅರಣ್ಯದ ಮೇಲೆ ನಗರದ ಆಕ್ರಮಣ, ಪ್ರಕೃತಿಯ ಮೇಲೆ ಪುರುಷನ ಆಕ್ರಮಣ, ಮುಗ್ಧತೆಯ ಮೇಲೆ ನಾಗರೀಕತೆಯ ಆಕ್ರಮಣ ಎಂದು ಗಟ್ಟಿ ದನಿಯಲ್ಲಿ ಹೇಳುತ್ತಾನೆ. ಈ ವಾಕ್ಯ ಯಾಕೋ ಮನಸ್ಸಿನಲ್ಲಿ ನಿಂತಿತು. ಈ ದಿಸೆಯಲ್ಲಿ ನಾಟಕ ಇನ್ನೂ ಸ್ವಲ್ಪ ಸ್ಪಷ್ಟದನಿಯಲ್ಲಿ ಮಾತನಾಡಿದ್ದರೆ ಈ ಎಳೆಗಳು ನಾಟಕವನ್ನು ಬೇರೆಯದೇ ಹಂತಕ್ಕೆ ತೆಗೆದುಕೊಂಡು ಹೋಗಬಹುದಿತ್ತು ಅನ್ನಿಸಿತು.

ನಾಟಕದಲ್ಲಿ ದುಷ್ಯಂತನ ವ್ಯಕ್ತಿತ್ವವನ್ನು ಒಂದೊಂದು ಎಳೆಯಾಗಿ ಕಟ್ಟಿಕೊಟ್ಟ ರೀತಿ ಇಷ್ಟವಾಯಿತು. ಆಕ್ರಮಿಸುವುದು, ಅತಿಕ್ರಮಿಸುವುದು ಅವನ ಸ್ವಭಾವ. ಅವನು ಬೇಟೆಯಲಿ ಸುಖ ಕಾಣುವವನೇ ಹೊರತು ಗೆದ್ದಿದ್ದನ್ನು ಪರಿಪಾಲಿಸುವುದರಲ್ಲಿ ಅಲ್ಲ. ದೂರ್ವಾಸರ ಶಾಪಕ್ಕೆ ಗುರಿಯಾಗಿ ಅವನು ಶಕುಂತಲೆಯನ್ನು ಮರೆತ ಎಂದುಕೊಂಡರೂ ತಾನೊಲಿದು, ಹಗಲಿರುಳೆನದೆ ಕೂಡಿ ಬಿಟ್ಟುಬಂದ ಶಬರ ಕನ್ಯೆ ಅಗ್ನಿಪ್ರವೇಶ ಮಾಡಿದ ಕಥೆಯನ್ನು ಗೆಳೆಯನಿಗೆ ಹೇಳುವಾಗ ಅವನ ದನಿಯಲ್ಲಿ ಮರುಕದ, ನೋವಿನ, ಪಶ್ಚಾತ್ತಾಪದ ಪಸೆಯೂ ಇರುವುದಿಲ್ಲ.

ಮರೆವು ಶಾಪವಾಗುವುದು ಶಕುಂತಲೆಗೆ ಮಾತ್ರ. ದುಷ್ಯಂತನಿಗೆ ಮರೆವು ವರವೂ ಹೌದು, ವರದಾನವೂ ಹೌದು. ಹಂಸಪದಿಕೆಯೆನ್ನುವ ನೆಲಮೂಲದ ಹೆಣ್ಣನ್ನು ಅವಳ ನೆಲದಿಂದ ಬೇರ್ಪಡಿಸಿ ಕರೆತಂದವನಿಗೆ ಈಗವಳು ಗೆದ್ದ ನೆಲ. ದುಷ್ಯಂತನ ಸ್ವಭಾವವೇ ಅದು. ಅವನಲ್ಲಿರುವ ಕ್ರೌರ್ಯ ಮೀನುಗಾರರನ್ನು ಹಿಡಿದ ಅಧಿಕಾರಿಗಳ ವ್ಯಕ್ತ ಕ್ರೌರ್ಯವಲ್ಲ. ನಾಗರೀಕತೆಯ ಅಲಂಕಾರದ ಎಲ್ಲಾ ವಸ್ತ್ರಾಭೂಷಣಗಳ ಮರೆಯಲ್ಲಿ ತಣ್ಣಗೆ ಪ್ರವಹಿಸುವ ಪುರುಷತನದ ವಿಸ್ಮೃತಿಯ ಕ್ರೌರ್ಯ. ನಾಟಕ ಇದನ್ನು ನೇರವಾಗಿ ಹೇಳದೆಯೂ ಅನುಭವಕ್ಕೆ ತರುತ್ತದೆ. ನಾಟಕ ಗೆಲ್ಲುವುದು ಇಲ್ಲಿ.

ಇಲ್ಲಿ ದುಷ್ಯಂತನ ಪಾತ್ರಕ್ಕೆ ಹೆಚ್ಚಿನ ಪರಿವರ್ತನೆ ಇಲ್ಲ. ಆದರೆ ಶಕುಂತಲೆಯದು ಹಾಗಲ್ಲ, ಮೊದಲಿಗೆ ಅವಳು ಹದಿಹರೆಯದ ಮುಗ್ಧೆ, ನಂತರ ಪ್ರೇಮಿ, ಆಮೇಲೆ ತವರನ್ನು ಬಿಟ್ಟು ಗಂದನ ಮನೆಯಲ್ಲಿ ಏನಾಗುವುದೋ ಎಂದು ನಡೆಯುವ ಪ್ರಮದೆ. ತುಂಬಿದ ಸಭೆಯಲ್ಲಿ ಗಂಡ ತನಗೆ ಇವಳ ಪರಿಚಯವೇ ಇಲ್ಲವೆಂದಾಗ ಅವಳಲ್ಲಿದ್ದ ಸಿಟ್ಟೆಲ್ಲಾ ಮೂರ್ತರೂಪವಾಗಿ ಅವಳ ಬಾಯಿಯಿಂದ ಹೊರಡುವ ಒಂದೇ ಪದ ’ಅನಾರ್ಯ’. ಆ ಸಂದರ್ಭದಲ್ಲಿ ಆಕೆ ತುಂಬು ಗರ್ಭಿಣಿ. ಸಿಟ್ಟು ಆಕೆಯ ದನಿಯಲ್ಲಿ ಮಾತ್ರ ಇರಬೇಕು, ತುಂಬಿದ ಗರ್ಭ ಹೊತ್ತ ದೇಹ ಆ ಸಿಟ್ಟನ್ನು ಹೊರಹಾಕುವುದರಲ್ಲಿ ಸಹಕರಿಸುವುದಿಲ್ಲ. ಈ ಪರಿವರ್ತನೆಗಳನ್ನು ಸ್ವಲ್ಪ ಗಮನಿಸಬೇಕು ಅನ್ನಿಸಿತು.

ಶಕುಂತಲೆಯ ಇಷ್ಟು ನಾಟಕಗಳನ್ನು ನೋಡಿದ ಮೇಲೂ ಒಬ್ಬ ಹೆಣ್ಣಾಗಿ ವೈದೇಹಿ ಕಟ್ಟಿ ಕೊಡುವ ಶಕುಂತಲೆ ನಮಗೆ ಮುಖ್ಯವಾಗುವುದು ಉಂಗುರದ ಬಗ್ಗೆ ಅವಳು ಹೇಳುವ ಮಾತುಗಳಿಂದ. ಉಂಗುರ ತೋರಿಸಿ ನನ್ನ ಗುರುತನ್ನು ಸಾಬೀತುಪಡಿಸಿಕೊಳ್ಳುವ ದೌರ್ಭಾಗ್ಯಕ್ಕೆ ಹೇಸಿ, ನಾನು ಉಂಗುರ ಕಳೆದುಕೊಂಡೆ ಎಂದು ಹೇಳಿದೆ ಎನ್ನುವ ಮಾತುಗಳಿಂದ. ಲೋಕಶಾಕುಂತಲದಲ್ಲಿ ಶಕುಂತಲ ಮತ್ತೆ ಉಂಗುರ ತೆಗೆದುಕೊಳ್ಳಲು ನಿರಾಕರಿಸುತ್ತಾಳೆ. ಬಹುಶಃ ದುಷ್ಯಂತ ಹಿಂದಿರುಗಲು ಕಾರಣ ಉಂಗುರವಲ್ಲ, ಸರ್ವದಮನ ಎನ್ನುವುದು ಅವಳಿಗೆ ಗೊತ್ತಾಗಿರುತ್ತದೆ.

ಬಹಳ ಸಮಯದ ನಂತರ ಜಂಬೆಯವರ ನಿರ್ದೇಶನದ ನಾಟಕ ಪ್ರದರ್ಶನಗೊಂಡಿದೆ. ’ಅಂತರಂಗ’ ತಂಡಕ್ಕೆ ಅಭಿನಂದನೆಗಳು.

‍ಲೇಖಕರು admin

January 29, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Palahalli Vishwanath

    ಸೀತೆ, ಶಕು೦ತಲೆ, ದ್ರೌಪದಿ ಕೂಡ – ಎಲ್ಲ ಟ್ರಾಜಿಕ್ ಹೀರೋಯಿನ್ ಗಳು . ಇದು ನಮ್ಮ ಸ೦ಸ್ಕೃತಿ

    ಪ್ರತಿಕ್ರಿಯೆ
  2. ರಘುನಾಥ

    ಸೀತೆಕೂಡರಾಮನನ್ನುಅನಾರೈಎಂದುಜರಿಯುತ್ತಾಳೆನಿಮ್ಮರಂಗವಿಶ್ಲೇಷಣೆಚಂದವೀಣಾಅವರನಿರಾಕರಣಕಥೆಓದಿದಯವಿಟ್ಟು

    ಪ್ರತಿಕ್ರಿಯೆ
    • ಸಂಧ್ಯಾರಾಣಿ.

      Thank you sir. ಎದುರು ಮಾತಾಡಿ ಗೊತ್ತೇ ಇಲ್ಲದ ಹೆಣ್ಣು ‘ಅನಾರ್ಯ’ ಎಂದು ಮಾತನಾಡಿದಾಗ ಆ ಮಾತಿನ ಹಿಂದಿರುವ ಸಿಟ್ಟು ಎಷ್ಟು ದೊಡ್ಡದಿರಬೇಕು… ವೀಣಾ ಶಾಂತೇಶ್ವರ ಅವರ ಕಥೆನಾ ಸರ್ ನೀವು ಹೇಳಿದ್ದು? ಹುಡುಕುತ್ತೇನೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: