ಅಯ್ಯೋ! ಸಣ್ಣತಮ್ಮಣ್ಣನ ಜತೆ ಮಾತಾಡದು ಅಂದ್ರೆ ಹುಡುಗಾಟವಾ?

ಮೂಗಬಸವನ ದೆವ್ವ

ಕಾಮಾಲೆ ಕಾಯಲೆಲಿ ಪಾರಾಗಿ ಉಳುದ ಸಣ್ಣತಮ್ಮಣ್ಣ ಅನ್ನೋ ಹೊನ್ನಳ್ಳಿಯ ಹತ್ತು ವರ್ಷದ ಮಗ ಮತ್ಯಾವತ್ತೂವೆ ಹೊನ್ನಳ್ಳಿ ಕಡಿಕೆ ತಲೆ ಹಾಕ್ಕಂದೂ ನೋಡನಿಲ್ಲ. ಹೊಸಳ್ಳಿಯೋರು ಸೈತ ಅತ್ಲಾಗೆ ಆ ಹುಡುಗನ್ನ ಬುಡ್ನಿಲ್ಲ. ಇದು ಅತ್ತೇರಿಗೇ ಮಾವದಿರ್ಗೆ ಹೊಂದ್ಕಂದು ಇಲ್ಲೇ ಉಳಕತು. ಊರೋರ ಬಾಯಲ್ಲಿ ಹೊನ್ನಳ್ಳಿ ತಮ್ಮಣ್ಣ ಅನ್ನೋ ಹೆಸರು ಮಾತ್ರ ಅಂಗೆ ಉಳಸ್ಕತ್ತು.

ಕಾಮಾಲೆರೋಗ ಬಂದಾಗ ಏನಾಯ್ತೋ? ಏನೋ? ಹುಶಾರಾದ್ರೂವೆ ಅದರ ಕಿವಿ ತ್ವಾಟವ ಅದು ದೂರ ಮಾಡಿತ್ತು. ಹಂಗಾಗಿ ಜನರ ಸಂಗ ಅನ್ನದೂ ದೂರಾಯ್ತು. ಕೇಳುಸ್ಕಂಡ ಮಾತಿಗೆ ತಕ್ಕಂಗೆ ವಾಪಾಸ್ ಹೇಳಕೆ ಸರ್ಯಾಗಿ ಅದಕ್ಕೆ ಕಿವಿನೆ ಕೇಳ್ತಿರ್ನಿಲ್ವಾ? ಕಿವಡ ಅಂದ್ರೆ ಇದು ಲವಡಾ ಅನ್ಕಳದು. ಅವರು ಮಾತಾಡದಾಗ ಇದು ಬೇರೆ ಇನ್ನೇನೋ ಮಾತಾಡದು. ಆಗ ಊರು ಹುಡ್ಲು ನಗಾಡಬುಡವು. ಅದು ಇದ್ಯಾಕಿಂಗೆ ಈ ಜನ? ಅಂತ ಕಕ್ರಮಕ್ಕನೆ ಅವರ ನೋಡತಾ ನಿಂತ್ಕಳದು. ಇದು ಭಾವದೀರ ಕಣ್ಣಿಗೆ ಬಿದ್ರೆ ಅವರು ಬಂದಿದ್ದೆ ಹುಡ್ಲ ಗದರಿ ತಮ್ಮಣ್ಣನ್ನ ವೈಸ್ಕಳರು. ಹಿಂಗೆ ಭಾವದೀರ ಮರೇಲೆ ತಮ್ಮಣ್ಣ ಎಂಗೋ ಕಾಲ ಮಾಡದ ಕಲತಕತು.

ತಬ್ಲಿ ಮಗ ಅಂತವ ಎಂಗಸ್ರು ಮಕ್ಕಳು ಎಲ್ಲರುವೆ ವೈನಾಗೇ ಅದನ್ನ ಸಲುಹುದ್ರು. ಬೆಳದು ದೊಡ್ಡನಾಗಿ ಸಾಯ ತಂಕಲೂವೆ ಎದುರಿಗಿರರು ಮಾತಾಡುದ್ರೆ ಮಾತ್ರ ಕಕ್ರಮಕ್ರನೇ ಪೆದ್ದಪೆದ್ದನಂಗೆ ನೋಡದ ಮಾತ್ರ ಬುಡನೇ ಇಲ್ಲ. ಹಂಗೇಯ ಮೂಗ ಬಸವಣ್ಣನಂಗೆ ಬೆಳಗ್ಗಿಂದ ಸಾಯಂಕಾಲದ ತನಕ ಗೇಯತಲೇ ಇರದು. ಪಕ್ಕದಲ್ಲಿ ಯಾರು ಹೋದ್ರೂ ಅದರ ಪಾಡಿಗೆ ಅದು ಇರದು.

ಹಂಗಾಗೇಯೆ ಬೆಳಿತಾ ಬೆಳಿತಾ ವ್ಯವಸಾಯ ಅನ್ನದ ಅವನು ಅರದು ಕುಡುಕಂದಿದ್ದ. ವ್ಯವಸಾಯದ ಮನಿಗೆ ಜನ ಇದ್ದಷ್ಟೂ ಕೆಲ್ಸ ನುರಿತವೆ. ಎಲ್ಲರೂ ಹೇಳದಂಗೆ ಕೇಳತಾ, ಗಳಿಗೇಲೂ ಕೂರದೆ ಕೆಲಸ ಮಾಡೋ ತಮ್ಮಣ್ಣಂತೂವೆ ಎಲ್ರಿಗೂ ಬಲಗೈನಂಗೆ ಆಗೋದ. ಇವನ್ಯಾಕೆ ಈ ಮನಿಗೆ ಬಂದ? ಅಮ್ತ ಒಬ್ಬರೂ ಅವನ್ನ ದೂರನಿಲ್ಲ. ಅಲ್ಲಿ ಕೂತ್ಕ. ಇಲ್ಲಿ ಕೂತ್ಕ ಅಂತ ವಲವಾರ ಮಾಡನಿಲ್ಲ. ಎಲ್ರಿಗೂ ಬೆನ್ನು ತಿಕ್ಕಿ ನೀರು ಹೂದಂಗೇ ಅತ್ತೆದಿರು ಇದಕ್ಕೂ ಆಸೇಲಿ ಮೀಸಿ ಅವನ್ನ ಸಾಕುದ್ರು. ದೊಡ್ಡನ ಮಾಡುದ್ರು.

ಹಿಂಗೆ ನಡಿತಿರುವಾಗ, ಭಾವದೀರ ಮದ್ವೆ ಆದಮೇಲೆ ಇವನ ಮದ್ವೆ ಯೋಚನೆನೂ ಬಂತು. ಎಲ್ಲರಿಗೂ ತಂದಂಗೆ ಇವನುಗೂ ಚಂದೊಳ್ಳಿ ಚೆಲುವೇನೆ ತಂದ್ರು. ತಿದ್ದಿತೀಡಿದ ಗೊಂಬೆಯಂಗಿದ್ದ ಹುಡುಗೀಯ ಜೊತೇಲಿ ಈ ಮೂಗ ಬಸವಣ್ಣನ ಸಂಸಾರ ಶುರುವಾತು. ಹೊಸಳ್ಳಿ ಮಾವದೀರ ಮನೆ ಪಾಲಾಗಿ ಈಗ ಮೂರುಮನೆ ಆಗಿದ್ವು. ಆಗ ಎಲ್ಲರೂ ಮಾತಾಡಕಂದು ಆಸ್ತಿಯ ನಿಧಾನಕ್ಕೆ ಕೊಟ್ರಾತು ತಗ ಎಲ್ಲೋಯ್ತೀತೆ? ಈಗ ಊರು ಕಡೆಲಿರೊ ನಮ್ಮ ಜಾಗದಲ್ಲೇಯೆ ಮನೆ ಮಾಡಿಕೊಟ್ಟುಬಿಡನ ಅಂತೇಳಿ ಹಕ್ಕಿಗೂಡ ಕಟ್ಟುದಂಗೆ ಒಂದು ಸಣ್ಣಮನೆನೂ ಹಿತ್ಲುನೂ ಮಾಡಕೊಟ್ರು. ಊರ ಕಡೇಲಿದ್ದ ಜಾಗದಲ್ಲಿ ನೆಲಕಟ್ಟು ಏಳತು. ಗಂಡ ಹೆಂಡತಿ ವಾಸನೂ ಹಾಕುದ್ರು. ಊರಲ್ಲಿ ಒಂದು ನೆಳ್ಳು ಅಂತ ಅವನದಾಯ್ತು.

ಮನುಷ್ಯನ ಸಣ್ಣ ಬುದ್ಧಿ ಎಲ್ಲೋಯ್ತೀತೆ? ಅವನಿದ್ದ ಕಡೇಲೆ ಅದೂ ಇರ್ಬೇಕಲ್ಲ ಅನ್ನಹಂಗೆ ಎಲ್ರೂ ಇವನ್ನ ಕೆಲ್ಸಕ್ಕೆ ಕರ್ಯರೆ ಹೊರತು ಕೈಯೆತ್ತಿ ಆಸ್ತಿ  ಒಬ್ರೂ ಕೊಡನಿಲ್ಲ. ಆಗ ಇವರ ಕರಕಬಂದಿದ್ದ ಪಟೇಲಣ್ಣರೆ ನಿಂತ್ಕಂದು ತೀರ್ಮಾನ ಮಾಡಿ ಜಮೀನ ಅವರೆ ಮೊದ್ಲು ಬುಟ್ಟುಕೊಟ್ರು. ಮೂರೆಕರೆ ಹೊಲವಾ. ಒಬ್ರು ಕೊಡಲೋಬೇಡವೋ ಅಂತವ ಒಂದೆಕರೆ ಕೊಟ್ರು. ಇನ್ನೊಬ್ರು ಕೈ ಎತ್ತೇಬುಟ್ರು. ಆಗ ಇವ್ರೇನು ಮಾಡುದ್ರು. “ಬಾರ್ಲಾ ತಮ್ಮಣ್ಣ ನೀನು.

ನಿಂಗೆ ನಮ್ಮನೇದೆ ಎರಡು ಎಮ್ಮೆ ಕೊಡತೀನಿ. ಎತ್ತುಗಾಡಿ ಕೊಡುಸ್ತೀನಿ. ದುಡಕಂದು ತಿನ್ನು. ಇವತ್ತು ಮೂರೆಕರೆ ಇರದು ನಾಳೀಕೆ ಆರೆಕರೆ ಆತೀತೆ” ಅಂತ ಎಲ್ಲನೂ ಎಂಗೋ ಅಣಿ ಮಾಡಿಕೊಟ್ರು. ಅವತ್ತು ಕಂಪಣಿ ತ್ವಾಟದಿಂದ ಪಾರು ಮಾಡಿ ಉಳುಸ್ಕಂದು ತಂದೋರು ಇವತ್ತು ಇವನ ಕೈ ಬುಟ್ಟುಬುಟ್ಟಾರಾ? ಮಣಿಪುರದ ಅಯ್ನೋರ ನಾಕೆಕರೆ ಗದ್ದೆಯ ಕೇಳಿ ಇವನಿಗೆ ಭೋಗ್ಯಕ್ಕೆ ಹಾಕ್ಕೊಟ್ರು.

ಮುಕ್ಳಹರ್ಯ ದುಡುಯೊ ತಮ್ಮಣ್ಣಂಗೆ ಇದ್ಯಾವ ಲೆಕ್ಕ? ತನ್ನ ಮನೆ ಕೆಲಸನೂ ಮಾಡಕಂದು, ಬಾವದೀರ ಮನೆಗೂ ಕೈ ಜೋಡುಸ್ಕಂದು, ವಾರಕ್ಕೊಂದಪ ಸೌದೆ ಗಾಡಿನೂ ಹೊಡುದು ದುಡ್ಡ ಮಾಡಕಳದೂ ಅಲ್ಲದೇಯ

ಹುಣ್ಣಿಮೆ ದಿನದ ತಂಪು ಹೊತ್ನಲ್ಲೂ ಉಳುಮೆ ಅನ್ನಕಂದು ಆರು ಕಟ್ಟನು. ಬ್ಯಾಸಾಯ ಅಂದ್ರೆ ತಗ, ಹಂಗೆ…. ತಲೆ ಹುಯ್ಯಸ್ಕಳನು. ದುಡಿಮೆ ಮಾಡೋವಾಗ ಅದರ ಮೈ ಮೇಲೆ ಇರ್ತಿದ್ದದ್ದು ಆರುಗಚ್ಚೆ ಕೌಮಾಣ ಮಾತ್ರವ. ಹಿಂಗೆ ಕಚ್ಚೆಪಡೇಲಿ ಗೆಯ್ಯೋ ಮಕ್ಳು ಊರೊಳಗೆ ತಮ್ಮಣ್ಣ ಮತ್ತೆ ಸುಳ್ಳಕ್ಕಿ ಇಬ್ಬರೇಯ. ಇದರ ಜತೀಲೆ ತಮ್ಮಣ್ಣಂಗೆ ನಾಕು ಮಕ್ಕಳು ದಳದಳನೆ ಆದವು. ಇನ್ನೆಳ್ಡು ಆತಿದ್ದಂಗೆ ಪಟೇಲಣ್ಣನ ಆದೇಶದಂಗೆ ಆಪರೇಷನ್ ಅನ್ನದ ಮಾಡುಸ್ಕಂದರು. ಇವರ ಜೊತೆ ಆಪರೇಷನ್ನಿಗೆ ಅಂತ ಹೋದ ಸುಳ್ಳಕ್ಕಿ ಹೆಂಡತಿ ಪ್ರತಿ ಸಲದಂಗೆ ಈ ಸಲವೂ ಹೆದ್ರುಕೊಂಡು ಬಾಯಿ ಬಾಯಿ ಬಡಕಂಡು ಊರಿಗೆ ವಾಪಾಸ್ ಬಂದುಬುಟ್ಟಳು.

ಗೌಡ್ರು ಕೈಲಿ ಪ್ರತಿ ಸಲವೂ ಹಿಂಗೇ ಗದ್ರುಸ್ಕಳರು. “ವಂಗ ನನ್ನ ಮಕ್ಳಾ, ಊರು ಅನ್ನದು ಉದ್ಧಾರ ಆತೀತೇನ್ರೋ? ಆ ಡಾಕ್ಟ್ರು ಇವ ಯಾವ ಕಾಡಿಂದ ಹಿಡಕಬಂದ್ರಿ ಗೌಡ್ರೇ ಅಂತರೆ. ನಮ್ಮೂರ ಮಂಗಪಿ ಅವತಾರ ನೋಡುಬುಟ್ರೆ ನಂಗೇ…. ಹಂಗೆ ಒಂದು ಕಂಡುಗ ನಾಚ್ಗೆ ಆಯ್ತೀತೆ. ಥೂತ್” ಹಲ್ಲಲ್ಲ ಕಡಕಂದು ಬಯ್ಯೋ ಆ ಮಾತ ಕೇಳುಸ್ಕಂದೇ ಅವಳಿಗೆ ಹತ್ತು ಮಕ್ಕಳನ್ನ ದೇವರು ದಯಪಾಲಿಸಿಬಿಟ್ಟಿದ್ದ. ಗೌಡರ ಪರದಾಟ ನೋಡಿ ಸುಳ್ಳಕ್ಕಿ

ಆಗ ಕೈಕಟ್ಟೆ ಹಾಕ್ಕಂದು ಗೊತ್ತಿಲ್ಲದನಂಗೆ ತಲೆಬಗ್ಗಸ್ಕಂದು ಸುಮ್ಮಗೆ ಬೈಸ್ಕಂತಾ ನಿಂತ್ಕಳನು. ಇದ ನೋಡಿ ಗೌಡಮ್ಮಾರ್ಗೇ ನಗೆ ಉಕ್ಕುಕ್ಕಿ ಬರದು. ಗೌಡ್ರು ಅತ್ಲಾಗೆ ಹೋದಮೇಲೆ “ನೀವೆ ಹೇಳಿ ಗೌಡಮ್ಮಾರೆ, ಮಕ್ಳು ಆಗದು ನಮ್ಮ ಕೈಲಿ ಈತೇನಿ.” ಅನ್ನನು. “ಕೆಲ್ಸ ನೋಡಕ ಹೋಗು ಈಗ. ಆದ್ರೆ ಇನ್ನ ಒಂದೋ ಎರಡೋ ಆಯ್ತವೆ. ಆಪ್ಲೇಶನ್ನು ಅಂದ್ರೆ ಸಾಕು ಮಾಳಿ ಹೆದ್ರಕತಳೆ ಪಾಪಾ! ನೀನೇನು ಮಾಡತೀಯ? ಹೋಗೋ” ಸಮಾಧಾನ ಮಾಡ ಅವ್ರ ಮಾತಿಗೆ ಅವ್ನು ಸಮಾಧಾನಾಗಿ ” ನಾನೆ ಮಾಡುಸ್ಕಳನ ಅಂದ್ರೆ, ಏನ್ ಮಾಡಲಿ? ಆಪ್ಲೇಷನ್ನು ಗಂಡುಸ್ರು ಮಾಡುಸ್ಕಂದ್ರೆ ಮೈಬಲ ಕಡಿಮೆ ಆತೀತೆ ಅಂತಾರೇ ಕಣಿ. ಮೈ ಮುರ್ಯೋ ದುಡಿಲಿಲ್ಲ ಅಂದ್ರೆ ಈಗ ಮನ್ಲಿರೋ ಮಕ್ಳ ಸಾಕದೆಂಗೆ ನೀವೇ ಯೇಳಿ?” ಇವರಿಗೇ ಒಗಟಿಟ್ಟು ಅತ್ಲಾಗೆ ಕೆಲಸಕ್ಕೆ ಹೋಗನು.

ಆವತ್ತು ಚಾವಡೀಲಿ ಯಾರೂ ಇರಲಿಲ್ಲ. ಚಂದಮಾಮ ಓದತಾ ಕುಂತಿದ್ದೆ. ಮಾಡಿಮ್ಯಾಲೆ ಧಡ ಧಡ ಅನ್ನಕೆ ಶುರುವಾತು. ಎದ್ದು ನಡುಮನೆಗೆ ಹೋಗಾಕೆ ಭಯ. ಮಧ್ಯಾಹ್ನದ ಹೊತ್ನಲ್ಲಿ ಬಿಸ್ಲಿಳಿಯೋ ಧ್ಯಾನದಲ್ಲಿರೋ ಮನೆ ಅನ್ನದು ಸದ್ದಡಗಿ ಕುಂತಿತ್ತು. ಯಾರಂದ್ರೆ ಯಾರಿಲ್ಲ. ಮುಂದ್ಲ ಮನೆ ನೋಡುದೆ ಯಾರಿಲ್ಲ. ಬಲದ ಮನೆ ನೋಡುದ್ರೂ ಯಾರೂ ಕಾಣತಾ ಇಲ್ಲ. ಮನೆ ಕೊಟ್ಟಿಗೆ ಹಟ್ಟಿಕಲ್ಲು ಎಲ್ಲೂ ಒಂದೇ ಒಂದು ಶಬುದ ಅನ್ನದೆ ಇರನಿಲ್ಲ. ಇನ್ನ ನಡುಮನೆ ಹಾದು, ಏಣಿ ರೂಮ ಹಾದು, ಗವಿಯಂಗಿರೋ ಹಿಂದ್ಲ ಅಟ್ಟ ನಾನು ನುಸುಳೋದು ಕನಸೇ ಸೈ. ಶಬುದ ಇನ್ನೂ ಜೋರಾತು. ಆಚೀಚೆ ಮನೆ ಹುಡ್ಲು ಹೆದ್ರಸಕ್ಕೆ ಅಂತ ದಿನೆಲ್ಲಾ ಹೇಳೋ ಎಲ್ಲಾ ದೆವ್ವಗಳು ಒಮ್ಮಕೆ ನೆಪ್ಪಾಗೋದವು. ಮೊದ್ಲೇ ನಮಗೆ ದೆವ್ವದ ಕಥೆ ಕೇಳಿ ಉಚ್ಚೆ ಹುಯ್ಕಳಂಗೆ ಆತಿರದು. ಅಷ್ಟು ಭಯ ಆತಿರದು! ಆಗ, ಎದ್ದಿದ್ದೆ ಹೊರಗಿನ ಬೆಳಕ ನೋಡಕಂದು ಓಟ ಕಿತ್ತಿದ್ದೆ… ಆಚಿಗೆ ಓಡಹೋದೆ. ಸಧ್ಯ, ದೂರದಲ್ಲಿ ಹೊಲಗೇರಿ ಕಡಿಂದ ಅವ್ವ ಬರದು ಕಾಣುಸತು.

ನನ್ನ ಮಾತ ಕೇಳಸಕಂದ ಅವ್ವ ಧೀರೆ ಹಂಗೆ “ಕೊತ್ತಿ ಇರಬೇಕು ಬಾ” ಅಂದಿದ್ದೆ, ಮಾಡಿ ಮೆಟ್ಲ ಹತ್ತಿ ಹೋಯ್ತು. ಮೇಲಿಂದ ಇನ್ನೂ ಜೋರಾಗಿ ಶಬ್ಧ ಆತಾನೆ ಇತ್ತು. ನಾನು ಅದರ ಸೆರಗ ಹಿಡಕಂದೇ ಜತಿಗೋದೆ. ಮಾಡಿ ದಾಟಿ ಒಪ್ಪಾರ ಇಳಿಸಿರೋ ಸಣ್ಣ ಮಾಡಿ ಅಟ್ಟದಿಂದವ ಧಡ ಧಡನೆ ಸಾಮಾನು ತೆಗೆದಿಟ್ಟಂಗಾತಿತ್ತು. ಅವ್ವ ಹೋಗಿ ಸಣ್ಣ ಬಾಗ್ಲಿಂದ ಬಗ್ಗಿ ನೋಡಿದ್ದೆ “ಇದ್ಯಾಕಾ?” ಅಂತು. ಶಬ್ದಿಲ್ಲ. ನಾನೂ ಬಗ್ಗಿ ನೋಡಿದೆ. ಆಗ ಗೊತ್ತಾಯ್ತು. ತಮ್ಮಣ್ಣ ಏನೋ ಹುಡಾಕಾಡತೈತೆ. ಹಿತ್ತಲಬಾಗ್ಲಿಂದ ಬಂದಿರೋ ಸಣ್ಣತಮ್ಮಣ್ಣ ಸದ್ದಿಲ್ಲದಂಗೆ ಮಾಡಿ ಹತ್ತಿ, ಹಿಂದ್ಲ ಅಟ್ಟ ನುಸುದು, ಭತ್ತ ಬಿತ್ತ ಸಡ್ಡೇನೋ ಏನೋ ಹುಡಕಿ ತಗತಾ ಈತೆ. ಹೋಗಿ ಮುಟ್ಟಿ ಕರೆದೆ.

“ಜತಿಗೆ ಗೂಟ ಇಲ್ಲೊಂದ್ಜತೆ ಎಚ್ಚಾದವ ಇಟ್ಟಿದ್ದೆ. ಸಿಗ್ತಿಲ್ಲ” ಅಂತ ಪೆದ್ದುಪೆದ್ದಾಗಿ ನಗತು. ಸರಿ ಅಂತ ನಾವು ಇಳುದು ಬಂದ್ವಿ.

“ತುಂಬಕಂದಿರೋ ಸಾಮಾನ ತೆಗುದು ತೆಗದು ನೋಡತಾ ಅವನೆ. ಅದಕ್ಕೆ ಶಬ್ದ ಆದ್ರೆ…. ದೆವ್ವ ಕಂಡಂಗೆ ಆಡತೀಯಲ್ಲೇ! ಮುಂದೆ ಏನು ಕಥೆ? ಏನ್ಮಾಡತೀರೊ? ಕಾಣೆ ಕಣ್ರವ್ವಾ ನಾನು. ಮನೆ ವಳಗೆ ಹಿಂಗೆ ಹೆದ್ರುಕತೀರಲ್ಲಾ… ” ತಾಯಿ ಮನಸು ಅಲ್ಲೇ ಅಲವತ್ತುಕಳ್ತು. ತಟ್ಟನೆ ನೆನಪಾಗಿ ಕೇಳುದೆ.

“ಅವ್ವಾ, ತಮ್ಮಣ್ಣ ಮಾವ ರಾತ್ರಿ ಬೆಳಗೂ ದೆವ್ವದ ಕುಟೆ ಮಾತಾಡಕಂದೆ ಆರು ಹೊಡಿತಿತಂತೆ” ಅಲ್ಲೆಲ್ಲಿದ್ದನೋ?… ಹೊರಗಡಿಂದ ಬಂದ ಶೇಖ

“ಹೂಂ, ನಿಮ್ಮಪ್ಪಾರೂ… ದೆವ್ವ ಸಂಸಾರ ಮಾಡ ಹೊತ್ಗೆ ಮನಿಗೆ ಬತ್ತರೆ, ಬರೋವಾಗ ದೆವ್ವ ಅಡಿಗೆ ಮಾಡೋ ಒಲೇಲೇ ಬೀಡಿ ಕಚ್ಕಬತ್ತಾರೆ. ತಮ್ಮಣ್ಣ ನಿಮ್ಮಪ್ಪಾರ ಭಂಟ ಅಲ್ವಾ? ಅವನತ್ರ ದೆವ್ವಾನೇ ಬೀಡಿ ಕೇಳಿ ಇಸ್ಕಂದು ಸೇದ್ತಾವೆ ಕನ ಸೂಜು” ಅಂತ ತಲೆ ಮೇಲೆ ನಿಜ ಹೊಡದಂಗೆ ಹೇಳದ. ನನಗೆ ನಿಂತ ಕಡೇಲೆ ಎತ್ಲಾಗ ನೋಡಕ್ಕೂ ಹೆದ್ರುಕೆ. ಕೊಟ್ಟಿಗೆಗೆ ಇಳಿಯೋ ಮೆಟ್ಲ ಮೇಲೆ ಹೋಗಿ ಕುಂತುಬಿಟ್ಟೆ. ಯಾಕಂದ್ರೆ, ಹಿತ್ಲಲ್ಲಿ, ಕೊಟ್ಟಿಗೇಲಿ ದನ ಬರೋಕೆ ಮುಂಚೇಲಿ ಏನಾರ ಕಾರುಬಾರು ನಡೀತಾ ಇರತ್ತೆ ಅನ್ನದು ಗೊತ್ತಿತ್ತು. ಅವ್ವ ನಡುಮನಿಂದಲೇ ಗದ್ರಕತು.

“ಏ ಶೇಖ, ಮಗ ಯಾಕಿಂಗೆ ಹೆದ್ರುಸುತೀಲಾ? ಕನ್ನಮಕ್ಕಳು ಹೆದ್ರಕಬಾರದು. ಬರಿ ಸುಳ್ಳನೇ ಪೋಣುಸಿ ಪೋಣುಸಿ ಹೇಳತೀಯಲ್ಲೋ? ಸುಳ್ಳ ಹೇಳೋ ಸುಕ್ರ ಅಂದ್ರೆ…. ವಾಟೇ ಕೊಳವೇಲಿ ಒಂಭತ್ತು ಆನೆ ನುಗ್ಗಿ, ಮರಿ ಅನೆನೂ ನುಗ್ಗಿ ಮರಿ ಆನೆ ಬಾಲ ಬಂದು ಅದರೊಳಗೆ ಸಿಕ್ಕ ಹಾಕ್ಕಂಡಿತ್ತು ಅಂದ್ನಂತೆ ಕನೋ. ಯಾವನೋ ನಿನ್ನಂತೋನೆಯ! ಅವ್ನು” ಊರಗಲ ಬಾಯ ಮಾಡಕಂಡು ನಗಾಡತಾ ಬಚ್ಚಲು ಮನೆಗೆ ಹೋದ ಶೇಖ.

“ಮೂಲೇಲಿ ಮುದ್ಕಿ ಕುಯ್ತರಂತೆ ಏನು? ಹೇಳು ನೋಡನ. ನಿಮ್ಮ ಇಸ್ಕೂಲಲ್ಲಿ ಹೇಳಕೊಟ್ಟವ್ರಾ ಈ ಒಡಚಲ ಕಥೆಯಾ….” ಆಡಕಂಡು ಕೇಳದ.

ನಾ ಮಾತಾಡಲಿಲ್ಲ. “ಹಲಸ್ನಣ್ಣ” ಕುಯ್ಯುವಾಗೆಲ್ಲಾ ಇದೇ…. ರಾಗ ಹಾಡನು. ನಮ್ಮನೇ ಕಣದ ಹೊಲದ ಮರದಲ್ಲಿ ಮಸ್ತಾಗಿ ಹಲಸ್ನಣ್ಣು ಬಿಡದು. ಪ್ರತಿ ಬ್ಯಾಸಗೇಲೂ ಅದರ ಪೊಟರೆಗೆ ಕಲ್ಲು, ಮಣ್ಣ ತುಂಬುಸಿ ಅಪ್ಪ ಆ ಮರವ ಗಾಳಿ ಹೊಡತಕ್ಕೆ ಬಿದ್ದು ಹೋಗದಿರಂಗೇ ಕಾಪಾಡಕಳದು. ಮನೆ ಹತ್ರದಲ್ಲಿ ಇರೋ ಮರದಲ್ಲಿ ಮೈ ತುಂಬ ಕಾಯ ಬುಟ್ರೆ ಮನಿಗೆ ಹೆಚ್ಚಾಗಿ, ಜೀತದೋರು ಊರೋರು ತಿಂದು ಮುಗ್ಸುದ್ರೂ ಸೈತಾ ಮುಗಿತಿರನಿಲ್ಲ. ಅಷ್ಟು ಹಲಸಿನ ಭಾಗ ಬಚ್ಚಲು ಮನೆ ಮೂಲೇಲಿ ಇರವು. ಅದ್ರೊತ್ತಿಗಿರೊ ಒಂದು ಹಲಗೆ ಮ್ಯಾಲೆ ಕುಡ್ಲು ಮಚ್ಚು ಇಡೋರು. ಬೇಕಾದರು ಹೋಗಿ, ಎರಡೋ ಮೂರೋ ಶ್ಯಾಡೆ ಕುಯ್ಕಂದು, ಕುಡ್ಲ ಒಲೆ ಉರಿಗೆ ಹಿಡದು ಹುಲ್ಲಲ್ಲಿ ಸೀಟಿ ಅಂಟ ತೆಗದು ಅತ್ಲಾಗೆ ನೀರ ಒಲೆ ವಳಿಕೆ ಹಾಕರು.

ಆ ಹಲಸಿನ ಮರದ್ದೇ ಒಂದು ವಿಶೇಷ. ಮರದ ಮೇಲೆ ಕಾಯಿ ಬಲಿತ ಮೇಲೆ ಅವು ಸೀಳಿ ಒಡಕಳ್ಳವು. ಅಲ್ಲೇ ಬುಟ್ರೆ ಮರದ ಮೇಲೆ ’ಜು” ಅಂತಿರನಿಲ್ಲ. ಹಣ್ಣೂ ಆತಿರನಿಲ್ಲ. ಕೊಳತು ಹೋಗಬುಡವು. ಅವು ಬಲತು ಬಾಯ ಬುಟ್ಟುದ್ದ ನೋಡ್ಕಂದು ಅಪ್ಪ ಸೇದ ಹಗ್ಗ ತಕಹೋಗಿದ್ದೆ, ಹೊರಲಾರದಂಗಿರೋ ಭಾರೀ ನಾಕಾರು ಕಾಯಗಳ ನಿಧಾನುಕ್ಕೆ ಕೆಳಕ್ಕೆ ಇಳುಸಿ ಹೊರಸ್ಕಬರದು. ಮನೇಲಿ ತಂದು ಎರಡು ಭಾಗ ಹಾಕಿ ಇಡರು. ಆಗ ಅವು ಹಣ್ಣಾಗಿ ಘಮಲ ಬುಡವು. ಆ ನೀರಮನೆ ಮೂಲೆ ಯಾವಾಗಲೂ ಹಣ್ಣುಹಂಪಲ ತುಂಬಕಂದೇ ಇರದು. ಘಮ ಘಮ ಅಂತವ ಅಲ್ಲಿಂದ ಎಲ್ರನ್ನೂ ಕರಿತಾನೇ ಇರದು. ಬಂದವರು ನಮಗೂ ಹಣ್ಣ ಕುಯ್ಯಕೊಟ್ಟು, ಅವರೂ ಹಲಸಿನ ತೋಳೆ ಬುಡುಸಿ ತಿಂತಾತಿಂತಾ ಇಂಥ ಕಥೆಗಳ ಬಿಚ್ಚಬಿಚ್ಚಿ ಹೇಳರು.

ಆ ಹೊತ್ತಿಗೆ ಮಾಡಿ ಇಳುದ ಬಂದ ತಮ್ಮಣ್ಣ ಜತಿಗೆ ಗೂಟ ಹುಡುಕ್ಕಂದು ಕೈಲಿ ಹಿಡಕಬಂತು.

“ಕೋಳ್ಕೂಗೋ ಹೊತ್ತಿಗೆ ಗಾಡಿ ಹೂಡಬೇಕು” ನಿಧಾನಗತೀಲಿ ಅದರ ಮಾತು ಬಂತು.

“ನೀನು ಕಾಡಿನ ಸೌದೆ ಒಂದನ್ನೂ ಬುಟ್ಟುಗಿಟ್ಟೀಯಾ ಹಾಂ, ಸೌದೆ ಗಾಡಿ ಹೊಡದು ಹೊಡದು ನಮ್ಮೂರೋರನ್ನೇ ಮೀರುಸಿ ದೊಡ್ಡವಕ್ಕಲು ಆಗಬುಡತೀಯಾ ತಗ.” ಗಂಟೆದನಿ ಶೇಖ ಸಣ್ಣಾಳು.

ರಾಗ ಮಾತ್ರ ಕಹಳೆಲಿ ಬಂದಂಗೆ ಬರೋದು. ಇದು ಕೇಳುಸುದ್ದೆ ತಮ್ಮಣ್ಣ

“ಅಂಕೆ ಇಲ್ಲದ ಮುಕ್ಕನ್ನ ತಂದು” ಅಂತ ನಿಧಾನಕ್ಕೆ ಬಯ್ತು.

“ನೀನು ದೊಡ್ಡೋರ ಮನೆ ಮಗ. ನೀನು ದೊಡ್ಡ ಮನುಶನೆ ಆಗಪ್ಪಾ… ಈಗ, ನೀನು ನಿನ್ನ ದೆವ್ವ ಇಬ್ರೂ ಮಾತಾಡಕಳಾದ ಒಂದಪ ಹೇಳುಬುಡು ಮತ್ತೆ ಸೂಜು ಕೇಳಬೇಕಂತೆ.”

ಕಿವಿಬಡ್ಡಿಗೆ ಹೋಗಿ ಹೇಳಿ ಅದರ ಕಾಲುಮುಟ್ಟಿದ್ದೆ ನಾಟಕ ಮಾಡದ. ಅಪರೂಪಕ್ಕೆ ಅದರ ಮುಖದ ಮೇಲೆ ತೆಳ್ಳಗೆ ನಗೆ ಇಣಕು ಹಾಕತು. ಅವ್ವ ನೀರಿಗೋಗಿತ್ತು.

ಬೀಡಿ ಕಚ್ಚಕಂದು ಮೆಟ್ಲ ಮ್ಯಾಲೆ ಕುಕ್ಕರಗಾಲಲ್ಲಿ ಕುಂತ ತಮ್ಮಣ್ಣನ್ನ ನೋಡಿ

“ಹೇಳು ಮಾವಾ” ಅಂದೆ. ಶೇಖ ನಗ್ತಾ ನಿಂತಿದ್ದ. ಒಂದು ಧಮ್ ಎಳದಿದ್ದೆಯ ಶುರು ಮಾಡತು.

“ಹೂಂ… ತಿಂಗಳಬೆಳಕ ತಂಪು ಹೊತ್ನಲ್ಲಿ ಕೆಲ್ಸ ಬೇಗ ಬೇಗ ಸದ್ದಿಲ್ಲದಂಗೆ ಆಯ್ತದೆ. ಬೆಳಗೆ ಹೊತ್ತಿಗೆ ಬ್ಯಾರೆ ಏನಾರ ಕೆಲ್ಸ ಮಾಡಬೈದಲ್ಲಾ… ಅದುಕ್ಕೆ ನಾನು ರಾತ್ರಿ ಹೊತ್ನಲ್ಲಿ ಆರು ಹೂಡತೀನಿ. ಅದಕ್ಕೆ… ಆ ದೆವ್ವಕ್ಕೆ…. ಎಂಗೆ ಗೊತ್ತಾಯ್ತದೋ ಏನೋ?ನಾ ಕಾಣೆಪ್ಪಾ. ಊರು ಮಲಿಕ್ಕಳವರ್ಗೂ…..ಒಂದೇ ಒಂದು ಸದ್ದಿರಕುಲ್ಲ, ಸುಮ್ಮನಿರತೀತೆ. ಎಲ್ಲಾ ಸದ್ದಡಗಿದ ಮ್ಯಾಕೆ ಅಂಬಾರದಲ್ಲಿ ನೇಗಲು ನಕ್ಷತ್ರದ ಸಾಲು ಮೂಡಿ ನಮ್ಮ ಕಣ್ಣಿಗೆ ಕಾಣಸಕಬೇಕು.

ಆಗ… ಅದು ನನ್ನ ಹುಡುಕ್ಕಂದು ಗದ್ದೆತಕೆ ಬರಬೇಕು. ಬಂದಿದ್ದೆಯ “ತಮ್ಮಣ್ಣ” ಅಂತಿತೆ. ನಾನು ಒಂದ್ ಹೆಜ್ಜೆ ಇಟ್ಟರೆ ಅದೂ ಒಂದೆಜ್ಜೆ ಇಡತೀತೆ. ನಂಜೊತೇಲೆ ನಡಕ ಬತ್ತಾ ಇರತೀತೆ. ನಿಂತರೆ…. ಅದೂ ನಿಂತಕತೀತೆ.

ಹಿಂದಗಡೇಲೂ ಅಲ್ಲ. ಮುಂದ್ಗಡೇಲೂ ಅಲ್ಲ. ನನ್ನ ಬಲಚರಕ್ಕೆ ಎರಡು ಹೆಜ್ಜೆ ಹಿಂದಮಕ್ಕೆ ನನ್ನ ಪಕ್ಕದ ಅರೆಲಿ ನೇಗಲಿಗೆ ಎದ್ದ ಮಣ್ಣ ತುಳಕಂದು ಬರ್ತಾ ಇರತೀತೆ. ಕಾಲು ಕಾಣುಸ್ತವೆ. ಅವು ಹಿಂತಿರಕ್ಕಂದಿರ್ತಾವೆ. ಅದು ನಡಕ ಬರದು ಮಾತ್ರ ಮುಂದ್ಮುಂದಕ್ಕೆ.

“ತಿರುಗಿ ನನ್ನ ಮಖ ಮಾತ್ರ ನೋಡಬ್ಯಾಡ ನೀನು” ಅಂತೀತೆ.

“ನೋಡುದ್ರೆ ಏನಾತೀತೆ?” ಅಂದೆ.

“ನನ್ನ ತಲೆ ಆಕ್ಕಾಶಕ್ಕೆ ತಾಗತೀತೆ ಹೊರತು ನಿಂಗೆ ಕಾಣಕುಲ್ಲ.

ನಾನು ಅಂಬರದುದ್ದಕೂ ಚಾಚಕಂದು ನಿಂತಕಂದ್ರೆ ಚುಕ್ಕಿ ಮುಳುಗಿ…

ಚಂದ್ರ ಅನ್ನೂ ಚಂದ್ರ ನನ್ನ ಹೊಟ್ಟೆ ವಳಿಗೆ ಕರಗಿ….

ಜಗತ್ತೂ ಅನ್ನ ಜಗತ್ತೇ ಕಾರಗತ್ಲು ಆಗೋಯ್ತೀತೆ.

ಮತ್ಯಾವತ್ತೂ ಚಿಕ್ಕಿ ಹುಟ್ಟಕುಲ್ಲ. ಚಂದ್ರನೂ ಹುಟ್ಟಕುಲ್ಲ.

ತಿಂಗಳ ಬೆಳಕು ಈ ಜನ್ಮದಲ್ಲಿ ಯವತ್ತೂ ನಿಂಗೆ ಕಾಣಕುಲ್ಲ.

ಬ್ಯಾಡಾ… ನೀನೂ ರೈತನ ಮಗನೆ.

ನಾನೂ ರೈತನ ಮಗನೆ. ತಲೆ ಎತ್ತಿ ನಡಿಯಾದು ಬ್ಯಾಡಾ.

ತಲೆ ಬಗ್ಗಸ್ಕಂಡು ದುಡಿಮೆ ಮಾಡೋರು ಕನೊ ತಮ್ಮಣ್ಣ ನಾವು.

ಚುಕ್ಕಿ ಹುಟ್ಲಿಲ್ಲಾಂದ್ರೆ ಮಳೆ ಬೆಳೆ ಕಣಿಯ ಕಣಿಗುಟ್ಕಂಡು ಹೇಳೋರ್ಯಾರು? ನಿಂಗೆ ನಂಗೆ.

ನಾನೂ ನಿನ್ನ ಜತೆಲಿ ದಿನಾಲೂ ಇರ್ತೀನಿ. ಎಲ್ಲೂ ಬುಟ್ಟುಹೋಗಕುಲ್ಲ.

ಒಂದು ಬೀಡಿ ಕೊಡು ಮತ್ತೆ ನೋಡನ” ಅಂತ ಮಕ್ಕಳಂಗೆ ಕೈ ಒಡ್ಡತಿತೆ.

ಪಾಪಾ! ನಾ ಬಿಡಿ ಕಚ್ಚಿ ಅದುಕ್ಕೆ ಕೊಡತೀನಿ. ಬೆಂಕಿ ಗೀರುದ್ರೆ ಅದು ಓಡೋಗುಬುಟ್ರೆ ಅಂತ ಅತ್ತಲಾಗೆ ತಿರಿಕ್ಕಂಡು ಕಚ್ಚಿಕೊಡತೀನಿ. ಆಮೇಲೆ ದಿನಾ ನನ್ನೊಂದಿಗೆ ಮಾತಾಡರು ಯಾರು? ಬೀಡಿ ವಾಸನೆ ನನ್ನ ಮೂಗಿಗೆ ಹೊಡ್ಯೋಂಗೆ  ಎಂಗೆ ಸೇದತೀತೆ ಅಂತೇಯಾ ಪುಸ್ಸಪುಸ್ಸನೆ. ಬೆಳ್ಳಿ ಚುಕ್ಕಿ ಕಂಡೇಟುಗೆ ತಕ

“ಬೆಳಕರಿತಾ ಈತೆ, ಇನ್ನ ಮನಿಗೆ ಓಗು ನೀನು”, ಅಂತೇಳಿ ಅದು ಎತ್ತಲಾಗೋ ಕರಗಿ ಹೋತೀತೆ. ಅದು ಅಂಥ ಒಳ್ಳೆ ದೆವ್ವ. ಆಟೊತ್ತಿಗೆ ನಂದೂ ಅರೆ ಹೊಡದು ಮುಗದಿರತೀತಾ? ಎತ್ತು ಬುಟ್ಟಕಂದು ಮನೆ ಕಡಿಗೆ ಬತ್ತೀನಿ” ಅಂತ

ಅದು ಎದ್ದಿದ್ದೆ, ಕಾವ್ಲಲ್ಲಿ ಕಟ್ಟಾಕಿರೋ ಎತ್ತಬುಟ್ಕಬರಕೆ ಹೋಯ್ತು.

“ಎಂಗೇ ನಮ್ಮ ಹೊನ್ನಳ್ಳೀ ಸಣ್ಣತಮ್ಮಣ್ಣ? ನಮ್ಮುರಲ್ಲಿ ದೆವ್ವದ ಕುಟೆ ಮಾತಾಡನು ಅಂದ್ರೆ ಇವನೊಬ್ಬನೆ ಗೊತ್ತಾ? ನೋಡವ್ವಾ ಎಂಗೇ?….” ಅಂತ ಹುಬ್ಬ ಕುಣುಸದ ಶೇಖ.

ಆಗ, ಇನ್ನೂ ಭಯ ಎಚ್ಚಾಗಿ, ನನ್ನ ಜಾಗ ಕೊಟ್ಟಿಗೆ ಮೆಟ್ಲಿಗೆ ದಾಟಕ ಹೋಯತು. ಅಲ್ಲಾದ್ರೆ ಇನ್ನೂ ಹುಲ್ಲು ತಂದು ಹಾಕೋರು. ನೇಗಲು ನೊಗ ತಂದಿಡೋರು. ಎಲ್ಲಾ ಬತ್ತಾ ಇರ್ತಾರೆ. ದನ ಬಂದು ಹಾಲು ಕರ್ಯೋವರಗಾದರೂ ಅಲ್ಲಿ… ಜನ ಓಡಾಡತಾಲೇ ಇರ್ತಾರೆ. ಸಧ್ಯ! ಅಲ್ಲೀವರ್ಗೂ ಮನೆ ಸುತ್ತ ಇರೋ ದೆವ್ವದ ಕಾಟಂತೂ ಇರಕುಲ್ಲವಲ್ವಾ?

ತಮ್ಮಣ್ಣನ ಒಳ್ಳೆ ದೆವ್ವ ಬೀಡಿ ಕೇಳದಾ ನೆನಕತಾ ಮನಸಲ್ಲಿ ಅದರ ಚಿತ್ರ ಬಿಡುಸ್ತಾಬಿಡುಸ್ತಾ ಕೂತಕಂಡೆ. ಆದರೂ “ಅದರ ತಂಟಿಗೆ ಹೋಗ್ಬೇಡ” ಅಂತವ ಹೇಳಬುಡಬೇಕು ನಾಳಿಕೆ ತಮ್ಮಣ್ಣಮಾವಂಗೆ. ಪಾಪ ಮಾವ!  ಇನ್ನೊಂದು. ಅಯ್ಯೋ!…. ಸಣ್ಣತಮ್ಮಣ್ಣನ ಜತೆ ಮಾತಾಡದು ಅಂದ್ರೆ ಹುಡುಗಾಟವಾ? ತಮಟೇನೆ ಬಡಿಬೇಕು. ಕಹಳೆನೇ ಊದಬೇಕು ಅಂತ ಆಡಕತಾರೆ ಊರರು. ಬ್ಯಾಸಾಯದ ಸುದ್ದಿ ಹೇಳು. ಬೇಗ ತಿಳಿತಿತೆ. ಕೈ ಬಾಯ ಸನ್ನೇಲೆ ಅರ್ಥ ಆತೀತೆ. ಅದರ ಹತ್ರ ಅವ್ವ ಅಪ್ಪ ಎಂಗೆ…. ನಿಸೂರಾಗಿ ಮಾತಾಡತಾರೆ ಅಂತೀರ.

‍ಲೇಖಕರು admin

January 29, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: