ಅದು ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲ..

ಮದ್ಯದ ಲಾಬಿಯನ್ನು ಕೃಷ್ಣ
ಬಗ್ಗು ಬಡಿದಿದ್ದು ಹೀಗೆ.

ಆರ್.ಟಿ. ವಿಠ್ಢಲಮೂರ್ತಿ

ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲ.

ಒಂದು ಸಲ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋದರು. ಆ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರಿಗೆ ಹುಷಾರಿರಲಿಲ್ಲ.

ಸರಿ, ಇವರು ಆರೋಗ್ಯ ವಿಚಾರಿಸಲು ಹೋದ ಸಂದರ್ಭದಲ್ಲಿ ಹೆಗಡೆ ತಮ್ಮ ವಕೀಲರೊಂದಿಗೆ ಮಾತನಾಡುತ್ತಿದ್ದರು. ತಮ್ಮ ಚಿಕಿತ್ಸೆ ಬೇಕಾದಷ್ಟು ಹಣ ಹೆಗಡೆ ಅವರ ಹತ್ತಿರ ಇರಲಿಲ್ಲ. ಹಾಗಂತಲೇ ತಮಗಿದ್ದ ಆಸ್ತಿಯೊಂದನ್ನು ಮಾರಿ ಚಿಕಿತ್ಸಾ ವೆಚ್ಚಕ್ಕೆ ಹೊಂದಿಸಲು ಅವರು ಯೋಚಿಸಿದ್ದರು.

ಎಸ್.ಎಂ.ಕೃಷ್ಣ ಈ ಬೆಳವಣಿಗೆಯನ್ನು ನೋಡಿದರು. ಅದಾದ ನಂತರ ಹೆಗಡೆಯವರನ್ನು ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ಕರ್ವಾಟಕದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ, ಮೌಲ್ಯಾಧಾರಿತ ರಾಜಕಾರಣದ ಮಾತನಾಡಿ ಜನರ ಮನ ಗೆದ್ದಿದ್ದ, ಒಂದು ಹಂತದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ತುಂಬ ಎತ್ತರಕ್ಕೇರಿದ್ದವರು ಹೆಗಡೆ.

ಅಂತವರನ್ನು ಒಬ್ಬ ಮುಖ್ಯಮಂತ್ರಿ ಹೋಗಿ ಭೇಟಿ ಮಾಡುವುದು,ಕುಶಲೋಪರಿ ವಿಚಾರಿಸುವುದು ಒಳ್ಳೆಯ ಸಂಪ್ರದಾಯ. ಆಯಿತು.ಈ ಭೇಟಿ ನಡೆದ ನಂತರ ಒಂದು ದಿನ ಕೃಷ್ಣ ಟೆನ್ನಿಸ್ ಆಟದಲ್ಲಿ ಮಗ್ನರಾಗಿದ್ದರು. ಆ ಸಂದರ್ಭದಲ್ಲಿ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು, ಅವರನ್ನು ಭೇಟಿ ಮಾಡಿ, ಹೆಗಡೆಯವರ ವಿಷಯ ಪ್ರಸ್ತಾಪಿಸಿದರು.ಆ ಅಧಿಕಾರಿಯ ಹೆಸರು ಶ್ರೀ ಜಯಪ್ರಕಾಶ್.

ಅವರ ಜತೆ ಮಾತನಾಡುತ್ತಾ ಎಸ್.ಎಂ.ಕೃಷ್ಣ ಕೇಳಿದರು: ಮಿಸ್ಟರ್ ಜಯಪ್ರಕಾಶ್, ಹಲ ಮದ್ಯದ ದೊರೆಗಳು ರಾಜಕಾರಣಿಗಳಿಗೆ ಅದು ಕೊಟ್ಟರಂತೆ, ಇದು ಕೊಟ್ಟರಂತೆ ಅಂತ ಜನ ಮಾತನಾಡುತ್ತಾರೆ.ಇದೆಲ್ಲ ನಿಜವೇ? ಹಾಗಿದ್ದರೆ ಹೆಗಡೆಯವರು ಚಿಕಿತ್ಸೆಗೆ ಹಣ ಹೊಂದಿಸಲು ಏಕೆ ಆಸ್ತಿ ಮಾರುವ ಸ್ಥಿತಿ ಬರುತ್ತಿತ್ತು? ಎಂದು ಕೇಳಿದರು.

ಅದಕ್ಕುತ್ತರಿಸಿದ ಜಯಪ್ರಕಾಶ್, ಸಾರ್, ಹಲ ಮಂದಿ ಮದ್ಯದ ದೊರೆಗಳ ಕತೆ ಹೀಗೆಯೇ. ತಮಗೆ ನೂರು ರೂಪಾಯಿ ಲಾಭವಾಗುತ್ತದೆ ಎಂದಾಗ ಐದೋ, ಹತ್ತೋ ರೂಪಾಯಿಗಳನ್ನು ರಾಜಕಾರಣಿಗಳಿಗೆ ಕೊಡುತ್ತಾರೆ. ರಾಜಕಾರಣಿಗಳು ಕಷ್ಟ ಅಂತ ತಮ್ಮ ಬಳಿ ಬಂದವರಿಗೆ ಕೊಡುವುದರಿಂದ ಹಿಡಿದು, ಹಲ ಕಾರಣಗಳಿಗೆ ಆ ಹಣವನ್ನು ಕೊಟ್ಟು ಬಿಡುತ್ತಾರೆ. ಈ ಮಧ್ಯೆ ಹಲ ಜನರೂ, ಈ ರಾಜಕಾರಣಿಗೆ ಇಂತಹ ಮದ್ಯದ ದೊರೆ ಇಷ್ಟು ದುಡ್ಡು ಕೊಟ್ಟನಂತೆ, ಅಷ್ಟು ದುಡ್ಡು ಕೊಟ್ಟನಂತೆ ಎಂದು ಪುಗಸಟ್ಟೆ ಪ್ರಚಾರ ಮಾಡುತ್ತಾರೆ. ಆದರೆ ಇಂತಹ ಮದ್ಯದ ದೊರೆಗಳಿಂದ ರಾಜ್ಯಕ್ಕೇನೂ ಲಾಭವಿಲ್ಲ ಸಾರ್. ಒಂದು ಸಲ ಪಾನೀಯ ನಿಗಮ ಸ್ಥಾಪಿಸಿ. ನಮ್ಮ ಸರ್ಕಾರದ ಬೊಕ್ಕಸವೂ ತುಂಬುತ್ತದೆ. ಮಧ್ಯದ ಲಾಬಿಯನ್ನೂ ಬಗ್ಗು ಬಡಿದಂತಾಗುತ್ತದೆ ಎಂದರು.

ಸರಿ, ಜಯಪ್ರಕಾಶ್ ಅವರ ಸಲಹೆ ಪಡೆದ ಕೃಷ್ಣ ತದ ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಹೆಗಡೆಯವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವಂತೆ ನೋಡಿಕೊಂಡರು. ಆನಂತರ ಸೀದಾ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಕರೆಸಿಕೊಂಡರು. ಪಾನೀಯ ನಿಗಮ ಸ್ಥಾಪನೆಯ ಕುರಿತು ಮಾಹಿತಿ ಪಡೆದರು. ಅದರ ಪ್ರಕಾರ, ಪಕ್ಕದ ಆಂಧ್ರಪ್ರದೇಶದಲ್ಲಿ ಮದ್ಯದ ಮೂಲಕ ಬರುವ ಆದಾಯವನ್ನು ಹೆಚ್ಚಿಸಿಕೊಳ್ಳಲು ಒಂದು ಯತ್ನ ಆರಂಭವಾಗಿತ್ತು.

ಕರ್ನಾಟಕದಲ್ಲಿ ಅದುವರೆಗೂ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆದ ನಂತರ ಲಭ್ಯವಾಗುತ್ತಿದ್ದ ಮೊಲಾಸಿಸ್ (ಕಾಕಂಬಿ) ಎಷ್ಟು? ಅದನ್ನು ಯಾವ್ಯಾವ ಡಿಸ್ಟಿಲರಿಗಳು ಎಷ್ಟೆಷ್ಟು ಪ್ರಮಾಣದಲ್ಲಿ ಪಡೆಯುತ್ತವೆ? ಇದರ ಆಧಾರದ ಮೇಲೆ ಡಿಸ್ಟಿಲರಿಗಳು ಎಷ್ಟು ಮದ್ಯವನ್ನು ಉತ್ಪಾದಿಸುತ್ತವೆ? ಎಂಬ ಕುರಿತು ಸರ್ಕಾರಕ್ಕೆ ಮಾಹಿತಿಯೇ ಸಿಗುತ್ತಿರಲಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಬರುವ ಆದಾಯದ ಪ್ರಮಾಣ ಕೇವಲ ಒಂದು ಸಾವಿರ ಕೋಟಿ ರೂಗಳ ಆಸು ಪಾಸಿನಲ್ಲಿತ್ತು.

ಮತ್ತು ಇದೇ ಕಾರಣಕ್ಕಾಗಿ ಹಲ ಮಂದಿ ಮದ್ಯದ ದೊರೆಗಳು ಒಂದು ಸಾವಿರ ಕೇಸು ಮದ್ಯವನ್ನು ಉತ್ಪಾದಿಸಲು ಪರವಾನಗಿ ಪಡೆದು ಹತ್ತು ಸಾವಿರ ಕೇಸು ಮದ್ಯವನ್ನು ಉತ್ಪಾದಿಸುತ್ತಿದ್ದರು. ಹೀಗೆ ಉತ್ಪಾದಿಸುತ್ತಿದ್ದ ಹೆಚ್ಚುವರಿ ಮದ್ಯವೇ ಸೆಕೆಂಡ್ಸ್, ಈ ಸೆಕೆಂಡ್ಸ್ ಮಧ್ಯವೇ ಮಾರುಕಟ್ಟೆಗೆ ಬರುತ್ತಿತ್ತು. ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ನಷ್ಟವಾಗುತ್ತಿತ್ತು.

ಇದರಲ್ಲೇ ನಗಣ್ಯ ಅನ್ನಿಸುವಷ್ಟು ಭಾಗ ಕೆಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ತಲುಪಿಸಲಾಗುತ್ತಿತ್ತು. ಆದರೆ ಹೊರಗೆ, ಕೆಲ ರಾಜಕಾರಣಿಗಳು, ಅಧಿಕಾರಿಗಳಿಗೆ ಹಣ ಕೊಟ್ಟಂತೆ ಮಾಡುತ್ತಿದ್ದ ಹಲ ಮದ್ಯದ ದೊರೆಗಳು ದಂಡಿಯಾಗಿ ಹಣ ಗಳಿಸುತ್ತಿದ್ದರು.
ಇಂತಹ ಒಬ್ಬ ಮದ್ಯದ ದೊರೆ ಯಾವ ಮಟ್ಟಕ್ಕೆ ಬೆಳೆದಿದ್ದರೆಂದರೆ ಒಂದು ಸರ್ಕಾರವನ್ನೇ ಬೀಳಿಸುವ ಮಟ್ಟಕ್ಕೆ ಪ್ರಭಾವಿಯಾಗಿದ್ದರು. ಚುನಾವಣೆಯ ಸಂದರ್ಭದಲ್ಲಿ ಅಧಿಕಾರಕ್ಕೆ ಯಾವ ಪಕ್ಷ ಬರುತ್ತದೆ? ಎಂಬ ಸುಳಿವು ಪಡೆದಿದ್ದ ಈ ಮದ್ಯದ ದೊರೆ ಹೆಚ್ಚು ಕಡಿಮೆ ಐದು ಕೋಟಿ ರೂಗಳಷ್ಟು ಹಣವನ್ನು ನಿಧಿಯ ರೂಪದಲ್ಲಿ ನೀಡಿದ್ದರು. (ಅಗ ಜಾಗತೀಕರಣ ದೇಶಕ್ಕೆ ನುಗ್ಗಿರಲಿಲ್ಲ)

ಆದರೆ ಮುಂದೆ ಅಧಿಕಾರಕ್ಕೆ ಬಂದ ಸರ್ಕಾರದ ಮುಖ್ಯಮಂತ್ರಿ ಹಾಗೂ ಹಣಕಾಸು ಮಂತ್ರಿ ಜತೆಗೂಡಿ ಇಂತವರನ್ನು ಯಕ್ಕಾ ಮಕ್ಕಾ ಬಾರಿಸಿ,ಹಣ ಸಂಗ್ರಹಿಸಿ ಬೊಕ್ಕಸಕ್ಕೆ ತುಂಬಿಸತೊಡಗಿದಾಗ ಈ ಮಧ್ಯದ ದೊರೆಯ ಕಣ್ಣು ಕೆಂಪಾಯಿತು. ಹೀಗಾಗಿ ಸದರಿ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಆ ಮದ್ಯದ ದೊರೆ ನಿರ್ಧರಿಸಿದರು. ಮುಂದಿನದು ಇತಿಹಾಸ.

ಅದೇನೇ ಇರಲಿ, ಆದರೆ ಹೆಗಡೆಯವರ ಕುರಿತು ಇದ್ದ ಮಾಹಿತಿಗೂ, ವಾಸ್ತವಕ್ಕೂ ಇದ್ದ ಅಂತರವನ್ನು ಅರಿತ ಎಸ್.ಎಂ.ಕೃಷ್ಣ ಸಹಜವಾಗಿ ಅಸಮಾಧಾನಗೊಂಡರು. ತದ ನಂತರ ಅವರ ಸೂಚನೆಯಂತೆ, ಹಲ ಅಧಿಕಾರಿಗಳ ಸತತ ಶ್ರಮದಿಂದ ಪಾನೀಯ ನಿಗಮದ ರೂಪುರೇಷೆಗಳು ತಯಾರಾದವು. ಅದರ ಪ್ರಕಾರ, ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುತ್ತಿದ್ದ ಮೊಲಾಸಿಸ್ ಪ್ರಮಾಣ ಎಷ್ಟು? ಯಾವ ಡಿಸ್ಟಿಲರಿಗೆ ಎಷ್ಟು ಮೊಲಾಸಿಸ್ ಬೇಕು? ಪಡೆಯುವ ಮೊಲಾಸಿಸ್ ನ್ನು ಬಳಸಿ ಸದರಿ ಡಿಸ್ಟಿಲರಿ ಎಷ್ಟು ಮದ್ಯ ಉತ್ಪಾದಿಸಬಹುದು? ಎಂಬುದನ್ನೆಲ್ಲ ಲೆಕ್ಕ ಹಾಕಲಾಯಿತು.

ಅಷ್ಟೇ ಅಲ್ಲ,ಮುಂದಿನ ದಿನಗಳಲ್ಲಿ ಡಿಸ್ಟಿಲರಿಗಳು ಉತ್ಪಾದಿಸುವ ಮದ್ಯವನ್ನೆಲ್ಲ ಸರ್ಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್ ಸಂಸ್ಥೆಗೆ ತಲುಪಿಸಬೇಕು. ಈ ಸಂಸ್ಥೆಯೇ ಮದ್ಯದ ವ್ಯಾಪಾರಿಗಳಿಗೆ ಮದ್ಯ ಪೂರೈಸಿ ಹಣ ಕೊಡಬೇಕು ಎಂಬುದು ನಿರ್ಧಾರವಾಯಿತು. ಹೀಗೆ ಪಾನೀಯ ನಿಗಮದ ರೂಪು ರೇಷೆ ತಯಾರಾಗುತ್ತಿದ್ದಂತೆಯೇ ಒಂದು ದಿನ ಇದ್ದಕ್ಕಿದ್ದಂತೆ ಎಸ್.ಎಂ.ಕೃಷ್ಣ ಘೋಷಿಸಿ ಬಿಟ್ಟರು.
ಇದರಿಂದಾಗಿ ಸರ್ಕಾರಕ್ಕೆ ಅದುವರೆಗೆ ಬರುತ್ತಿದ್ದ ಆದಾಯ ಹಲವು ಪಟ್ಟು ಹೆಚ್ಚಾಯಿತು. ಮದ್ಯಪಾನ ಒಳ್ಳೆಯದಲ್ಲ ಎಂಬುದೇನೋ ಸರಿ. ಆದರೆ ಅದರ ಹೆಸರಿನಲ್ಲಿ ಒಂದು ಲಾಬಿಯೇ ಶುರುವಾಗಿ, ಜನ ಆಯ್ಕೆ ಮಾಡಿದ ಸರ್ಕಾರದ ಮೇಲೇ ಸವಾರಿ ಮಾಡುವ ಮಟ್ಟಕ್ಕೆ ಬೆಳೆದರೆ ಪ್ರಜಾಪ್ರಭುತ್ವದ ಗತಿ ಏನಾಗಬೇಕು?

ಈ ವಿಷಯದಲ್ಲಿ ಎಸ್.ಎಂ.ಕೃಷ್ಣ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಯಾಕೆಂದರೆ ದಶಕಗಳ ಕಾಲ ತಲೆ ಎತ್ತಿ ನಿಂತಿದ್ದ, ಸರ್ಕಾರಗಳನ್ನೇ ಅಲುಗಾಡಿಸುತ್ತಿದ್ದ ಮದ್ಯದ ಲಾಬಿಯನ್ನು ಅವರು ಬಗ್ಗು ಬಡಿದರು. ಸರ್ಕಾರಕ್ಕೆ ನ್ಯಾಯವಾಗಿ ಬರಬೇಕಾದ ತೆರಿಗೆ ಹಣ ಬರುವಂತೆ ನೋಡಿಕೊಂಡರು.

ಅಂದ ಹಾಗೆ ಈ ವಿಷಯದಲ್ಲಿ ಹಿರಿಯ ಅಧಿಕಾರಿ ಜಯಪ್ರಕಾಶ್ ಅವರಿಗೆ, ತೆರೆಯ ಹಿಂದೆ ದುಡಿದ (ಹಲವರನ್ನು ಈಗಲೂ ನಾನು ಭೇಟಿ ಮಾಡುತ್ತಿರುತ್ತೇನೆ. ಅವರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಲು ಸಾಧ್ಯವಿಲ್ಲ) ಹಲವಾರು ಅಧಿಕಾರಿಗಳ ಶ್ರಮವನ್ನು ಅಭಿನಂದಿಸಲೇಬೇಕು.

ಕುತೂಹಲದ ಸಂಗತಿ ಎಂದರೆ, ಈ ವರ್ಷ ರಾಜ್ಯ ಸರ್ಕಾರದ ಅಬಕಾರಿ ಆದಾಯದ ಗುರಿ ಎಷ್ಟು ಗೊತ್ತಾ? ಬರೋಬ್ಬರಿ 14,400 ಕೋಟಿ ರೂಪಾಯಿ. ಒಬ್ಬ ಮುಖ್ಯಮಂತ್ರ್ರಿಗೆ, ಸರ್ಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ ಅಗಾಧವಾದುದನ್ನು ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿ.

‍ಲೇಖಕರು admin

January 29, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: