ದಿನಿ ತೀರ್ಥಹಳ್ಳಿಯ ‘ನಿಗೂಢ ಶಿಕಾರಿ’

ದಿನಿ ತೀರ್ಥಹಳ್ಳಿ

ಕಗ್ಗತ್ತಲಿನ ಕಪ್ಪು ಮೋಡಗಳು ಆವರಿಸಿದ್ದ ಅಮವಾಸ್ಯೆಯ ಹಿಂದಿನ ರಾತ್ರಿ ಅದು. ಕಾಣದ ದಾರಿಯಲ್ಲೇ ಎಡವುತ್ತ ಗರಗ ಗುಡ್ಡದ ಕಾಡಿನ ಕೊನೆಯ ಅಂಚಿನಲ್ಲಿದ್ದ ‘ಸೀನು’ ಊರಿನ ದಾರಿಯನ್ನು ತಪ್ಪಿಸಿಕೊಂಡಿದ್ದ. ಶಿಕಾರಿಗೆಂದು ಬಂದ ತಾನೇ ಶಿಕಾರಿ ಆಗುತ್ತೇನೆಂದು ಬಹುಶಃ ಕನಸಿನಲ್ಲಿಯೂ ಕೂಡ ಅವನು ಎಣಿಸಿರಲಿಲ್ಲ..! ಇದು ತನ್ನ ಜೀವನದಲ್ಲಿ ಕೊನೆಯ ಶಿಕಾರಿಯಾಗಿ ಹೋಗುತ್ತದೆ ಎಂದು ಅಂದುಕೊಂಡಿರಲಿಲ್ಲ;

ಎದೆಯಲ್ಲಿ ಆಗಿದ್ದ ಗಾಯದಿಂದ ರಕ್ತದ ಹನಿಗಳು ಹರಿದು ನೆಲಕ್ಕೆ ತೊಟ್ಟಿಕ್ಕುತ್ತಿತ್ತು. ತುಂಬಾ ನೋವಿಂದ ಪ್ರಾಣ ಸಂಕಟ; ಹೆಜ್ಜೆ ತೆಗೆಯಲು ಕೂಡ ಶಕ್ತಿ ಕಳೆದು ಹೋಗಿತ್ತು. ಸೂರ್ಯ ಜಾರಿ ಗಂಟೆಗಳೆ ಮುಗಿದಿತ್ತು. ಸುತ್ತಲೂ ಕಪ್ಪು ಮುಚ್ಚಿದ ಕತ್ತಲು, ಎಲ್ಲೂ ಸವೆದ ದಾರಿ ಕಾಣಲಿಲ್ಲ. ತಲೆಯಲ್ಲಿ ಕಟ್ಟಿಕೊಂಡಿದ್ದ ಟಾರ್ಚ್ ಸಹ ಬಂದಾಗಿ ಹೋಗಿತ್ತು. ಅಷ್ಟರಲ್ಲಿ ಹಿಂದಿನಿಂದ ಕ್ಷಣ ಕ್ಷಣಕ್ಕೂ ಕಿವಿಗೆ ಹತ್ತಿರಾಗುತ್ತಿದ್ದ ಯಾವುದೋ ಹೆಜ್ಜೆಯ ದ್ವನಿ.. ‘ಇಲ್ಲ.. ಇಲ್ಲ..!! ಇನ್ನಿಲ್ಲಿರುವುದು ಸರಿಯಲ್ಲ’ ಎಂದನಿಸಿತ್ತು ಅವನಿಗೆ.

ಅರ್ಧ ಮೈಲಿ ದೂರದಲ್ಲಿ ಸೋಮವಾರ ಹಳ್ಳ ಸೇತುವೆ ಸಣ್ಣಗೆ ಕಾಣಿಸಿದ್ದರಿಂದ ಸ್ವಲ್ಪ ಸಮಾಧಾನ ಮಾಡಿಕೊಳ್ಳತ್ತಾ ನಿಧಾನವಾಗಿ ಆಕಡೆ ಮುಖ ಮಾಡಿದ. ಸಮಯ ಸುಮಾರು ತಡರಾತ್ರಿ ಒಂದು ಆಗಿರಬಹುದು, ಹಿಂದೆ ಹಿಂಬಾಲಿಸಿ ಬಂದ ಶಬ್ದ ಒಮ್ಮೆಲೇ ಅತಿಯಾಗಿ ಬೆನ್ನಿನ ಹಿಂದೆಯೇ ಬಂದು ನಿಂತಂತೆ ಅನಿಸಿ ಎದೆ ಮತ್ತೂ ಹೆಚ್ಚು ಹೊಡೆದುಕೊಳ್ಳುತಿತ್ತು. ಹಾಗೆ ನಿಧಾನವಾಗಿ ತಿರುಗಿ ನೋಡಿದಾಗ ಅಸ್ಪಷ್ಟವಾದ ಆಕೃತಿಯೊಂದು ಎದುರಲ್ಲಿ ನಿಂತಿದ್ದು ಕಂಡು ಭಯದಿಂದ ಹೌಹಾರಿ ಬೆಚ್ಚಿದ. ಎದುರಿಗೆ ‘ರಜಾಕ್’ ನಿಂತಿದ್ದ. ರಕ್ತದ ಮಡುವಿನಲ್ಲಿದ್ದ ಸೀನು ಆಗಲೆ ನಿತ್ರಾಣದಿಂದ ನೆಲಕ್ಕೆ ಕುಸಿದು ಬಿದ್ದ.

ಸುಮಾರು ೯೦ರ ದಶಕದ ಆದು. ಮಲೆನಾಡಿನ ಪುಟ್ಟ ಹಳ್ಳಿ. ಭೇಟೆ, ಶಿಕಾರಿ ಜನರ ದಿನನಿತ್ಯದ ಕಸುಬುಗಳ ಒಂದು ಭಾಗವೇ ಆಗಿತ್ತು. ಅದರಲ್ಲೂ ಮಲೆನಾಡು ಅಂದ್ರೆ ಕೇಳಬೇಕೆ..? ಅಲ್ಲಿ ಊರಿಗಂಟಿಕೊಂಡು ಕಾಡುಗಳು. ಹೆಚ್ಚಂದರ ಜನ ಒಂದೊತ್ತಿನ ಊಟ ಬಿಡಬೋದು ಶಿಕಾರಿ ಬಿಡಲ್ಲ. ಇಂಥ ವಾತವರಣದಲ್ಲಿ ಬೆಳೆದ ಸೀನು ಮತ್ತು ರಜಾಕ್ ಒಂದೇ ಹಳ್ಳಿಯವರು ಹಾಗೂ ಚಿಕ್ಕಂದಿನಿಂದ ಖಾಸಾ ದೋಸ್ತಿಗಳು. ಇಬ್ಬರಿಗೂ ಶಿಕಾರಿ ಅಂದ್ರೆ ಎಲ್ಲಿಲ್ಲದ ಒಲವು ಮತ್ತೆ ಒಬ್ಬರನ್ನೊಬ್ಬರು ಬಿಟ್ಟು ಶಿಕಾರಿಗೆ ಹೋದವರಲ್ಲ. ರಜಾಕ್ ಗುರಿಯಲ್ಲಿ ನಿಸ್ಸೀಮನು, ಆದ್ದರಿಂದ ಬೇಟೆಯ ಗುಂಪಿನಲ್ಲಿ ದೊಡ್ಡವರಿಂದ ಹಿಡಿದು ಎಲ್ಲರಿಗೂ ಅವನೆಂದರೆ ಅಪಾರ ಪ್ರೀತಿ. ಒಟ್ಟಿನಲ್ಲಿ ರಜಾಕ್ ಮತ್ತು ಸೀನು ಶಿಕಾರಿ ತಂಡದೊಂದಿಗೆ ಇದ್ದರೆಂದರೆ ಅವತ್ತು ಶಿಕಾರಿ ಖಂಡಿತ, ಯಾರು ಖಾಲಿಯಾಗಿ ಬಂದ ದಿನವಿಲ್ಲ.

ಊರಿನಲ್ಲಿ ಶಿಕಾರಿ ಅಂದ್ರೆ ಹಬ್ಬದ ಸಂಬ್ರಮ. ವಾರದಲ್ಲಿ ಕನಿಷ್ಠ ಎರಡು ಸಲ ಶಿಕಾರಿಗೆ ಹೋಗುತ್ತಿದ್ದರು. ಅದಕ್ಕಾಗಿಯೇ ಊರಿನ ಪಂಚಾಯ್ತಿ ಅಧ್ಯಕ್ಷ ದಾಸಪ್ಪಣ್ಣನ ಒಂದು ಹಳೆಯ ಮುರಕಲು ಜೀಪು, ಜೀಪು ಹೊರಟು ಬಂತ್ತೆಂದರೆ ಎಲ್ಲಾ ಬೇಟೆಗೆ ಹೊರಡುವರೆಂಬ ಸೂಚನೆ. ಸಾಮಾನ್ಯವಾಗಿ ೮ರಿಂದ ೧೦ ಜನರ ತಂಡವಿತ್ತು ಅದರ ಜೊತೆಗೆ ಶಿಕಾರಿಗಾಗಿಯೇ ಜನ್ಮಸಿದ್ದ ಹಕ್ಕು ಪಡೆದ ಬೇಟೆ ನಾಯಿಗಳು. ಅವುಗಳನ್ನು ತಯಾರು ಮಾಡೋದೇ ಬೇಡವಾಗಿತ್ತು, ಶಿಕಾರಿಯ ಸುದ್ದಿ ಯಾರಾದರೂ ಮಾತಾಡಿದ್ರು ಅದರ ಹಿಂದಿನ ದಿನದಿಂದಲೇ ಅನ್ನ ನೀರು ಬಿಟ್ಟು ಉಪವಾಸ ಕುಳಿತಿರುತಿದ್ದವು. ಬೇಟೆಯ ಪಾಲಿನ ಒಂದು ಭಾಗ ಅವುಗಳಿಗೂ ಇತ್ತು.

ಇನ್ನು ಶಿಕಾರಿಗಾಗಿ ದಟ್ಟವಾದ ಕಾಡೊಳಗೆ ನುಗ್ಗುತ್ತಿದ್ದರು ಹೆಚ್ಚಾಗಿ ಹಂದಿ, ಕುರಿ, ಸಾರಂಗ ಮತ್ತು ಕಡವೆ ಇವರ ಹವ್ಯಾಸಿ ಬೇಟೆ ಪ್ರಾಣಿಗಳು. ಸಣ್ಣ ಪುಟ್ಟ ಪ್ರಾಣಿಗಳನ್ನು ಮುಟ್ಟುವ ಗೋಜಿಗೆ ಹೋಗುತ್ತಿರಲಿಲ್ಲ. ಪ್ರಾಣಿಗಳನ್ನು ಹೊಡೆದ ಮೇಲೆ ಕಾಡಿನಲ್ಲಿಯೆ ಹಸಿಗೆ ಮತ್ತು ಒಂದರ್ಧ ಮಾಂಸವನ್ನು ಅಲ್ಲೆ ಚೆನ್ನಾಗಿ ಹುರಿದು ಗಡದ್ದಾಗಿ ತಿಂದು ಬರುತ್ತಿದ್ದರು. ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ಮೊದ್ಲೇ ತೆಗೆದುಕೊಂಡು ಹೋಗಿರುತ್ತಿದ್ರು. ಕಾಡಿನಲ್ಲಿ ಮಸಾಲೆ ಹೊಗೆ ಹಾಕೋದೆ ಅವರು ಶಿಕಾರಿಯ ವಿಜಯದ ಸಂಕೇತ.

ಶಿಕಾರಿ ಗುಂಪಲ್ಲಿ ರಜಾಕ್ ಮತ್ತು ಸೀನು ಇಬ್ಬರು ಒಟ್ಟಿಗೆ ಇರುತ್ತಿದ್ದರು. ಅವರ ಸ್ನೇಹ ಎಷ್ಟಿತ್ತೆಂದರೆ ಯಾವಾಗಲಾದರೂ ಕಡಿಮೆ ಮಾಂಸ ದೊರೆತಾಗ ರಜಾಕ್ ತನ್ನ ಪಾಲಿಂದನ್ನು ಸೀನುವಿನ ಮನೆಗೆ ಕಳ್ಸಿ ಊಟಕ್ಕೆ ಮಾತ್ರ ಹೋಗುತ್ತಿದ್ದ. ಆದರೆ, ಒಂದೊಮ್ಮೆ ವೈಯುಕ್ತಿಕ ವಿಚಾರದಲ್ಲಾದ ಕ್ಷುಲ್ಲಕ ಕಾರಣ ಅವರ ಸ್ನೇಹಕ್ಕೆ ಮುಳುವಾಯಿತಲ್ಲದೆ ಆಗದೋರ ಗಾಳಿಮಾತುಗಳಿಂದ ಒಳಗೊಳಗೆ ಸೇಡಿನ ಹೊಗೆಯಾಡಲು ಸಹ ಕಾರಣವಾಯಿತು. ಅಂದಿನಿಂದ ಇಬ್ಬರು ಶಿಕಾರಿಗೆ ಹೋಗುವುದೇ ನಿಲ್ಲಿಸಿದ್ರು.

ಸ್ವಲ್ಪ ದಿನಗಳ ನಂತರ ಸ್ವತಃ ರಜಾಕನೇ ಒಂದು ಸಂಜೆ ಇಂದು ನಾವಿಬ್ಬರೇ ಶಿಕಾರಿಗೆ ಹೋಗೋಣ ಎಂದಿದ್ದ. ಅದೂ ಅಲ್ಲದೆ ಮೊದಲಿಂದಲೂ ಗೆಳೆಯರಾದ ನಾವೇಕೆ ಶತೃಗಳಾಗಬೇಕೆಂದು ಸೀನು ಸರಿ ಎಂದ. ರಜಾಕ್ ಶಿಕಾರಿ ಕೋವಿ ಹಿಡಿದ, ಸೀನು ತನ್ನ ಪ್ರೀತಿಯ ನಾಯಿ ಟಾಮಿಯನ್ನು ಕರೆದುಕೊಂಡ. ಇಬ್ಬರು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿದ್ದ ಗರಗ ಗುಡ್ಡದ ದಟ್ಟಡವಿಯೊಳಗೆ ಹೋದರು.

ರಜಾಕ್ ಭಯದಿಂದ ಬೆವೆತು ಹೋಗಿದ್ದ. ಕುಸಿದು ಮಲಗಿದ್ದ ಸೀನುವಿನ ಹತ್ತಿರ ಬಂದು ನಡಗುವ ಕೈಗಳಿಂದ ಅವನ ಕೈ ನಾಡಿ ಮಿಡಿತ ಪರೀಕ್ಷಿಸಿದಾಗ ಇಲ್ಲ..! ಸೀನುವಿನ ದೇಹ ಆಗಲೆ ತಣ್ಣಗಾಗಿತ್ತು. ‘ಅಯ್ಯೋ ದೇವರೆ ಇಗೇನು ಮಾಡಲಿ..?’ ಎಂದು ದಿಗ್ಬ್ರಾಂತನಾದ. 

ಸೀನುವಿನ ದೇಹ ಹೊತ್ತುಕೊಂಡು ಊರಿಗೆ ಹೋದ ಮತ್ತು ಶಿಕಾರಿಯ ಸಂದರ್ಭದಲ್ಲಿ ಹುಲಿ ಅಟ್ಟಿಸಿಕೊಂಡು ಬಂದು ಅವನನ್ನು ಸಾಯಿಸಿದ್ದಾಗಿ ತಿಳಿಸಿದ. ಗೆಳೆಯನ ಅಸಹಜ ಸಾವಿಂದ ನೊಂದಿದ್ದ ರಜಾಕ್ ಊರಿನಲ್ಲಿ ಎಲ್ಲರೊಡಗೂಡಿ ಗೆಳೆಯನ ಅಂತಿಮ ಸಂಸ್ಕಾರದಲ್ಲಿ ಬಾಗಿಯಾದ.

ಒಂದು ವರ್ಷ ಆದರೂ ಸೀನುವಿನ ಸಾವು ಊರಿನವರನ್ನು ಮರೆಸಿರಲಿಲ್ಲ. ಅವನನ್ನು ರಜಾಕ್ ಹಳೆಯ ದ್ವೇಷದಿಂದ ಕೊಲೆ ಮಾಡಿದ್ದಾನೆಂಬ ಗುಸು ಗುಸು ಗುಮಾನಿಗಳು. ಅದಕ್ಕೆ ಪೂರಕವಾಗಿ ರಜಾಕ್ ಘಟನೆ ನೆಡೆದ ಕೆಲವು ದಿನಗಳಲ್ಲಿ ಸಂಸಾರದೊಂದಿಗೆ ಊರು ಬಿಟ್ಟ ಮತ್ತು ಅಂದು ಸೀನು ಕೊಲೆಯ ಪ್ರಕರಣವು ದಾಖಲಾಗಲಿಲ್ಲ, ಮರಣೋತ್ತರ ಪರೀಕ್ಷೆಯೂ ಆಗಿರಲಿಲ್ಲ.

ಅವತ್ತು ಶಿಕಾರಿಗೆಂದು ಹೋಗಿದ್ದ ಸೀನುವಿನ ನಾಯಿ ಟಾಮಿ ಆ ದಿನ ಕೆಲವೇ ಗಂಟೆಗಳಲ್ಲಿ ಹಿಂತಿರುಗಿತ್ತು. ಸೀನು ಮರಣದ ನಂತರ ಅದು ಮಂಕಾಗಿ ಹೋಗಿತ್ತು. 

ಹಾಗಾದರೆ ಊರಿನವರು ಹೇಳುವ ಪ್ರಕಾರ ಸೀನುವಿದ್ದು ಸಹಜ ಸಾವು ಅಲ್ಲವಾ..? ಅಥವಾ ಹೌದಾ ಎನ್ನುವುದು ಬರಿ ಅವರವರ ದೃಷ್ಟಿಕೋನಗಳ ಒಮ್ಮತಗಳು ಮತ್ತು ಊಹೆಗಳು.

ದೃಷ್ಟಿಕೋನಗಳ ಆಧಾರದ ಮೇಲೆ ಹೇಳುವುದಾದರೆ ರಜಾಕ್ ಹೇಳಿದ ಹಾಗೆ ಆವತ್ತು ಸೀನುವನ್ನು ಹುಲಿ ಬೆನ್ನಟ್ಟಿ ಬಂದು ಸಾಯಿಸಿತ್ತು. ಪಾಪ ರಜಾಕ್ ಮರವನ್ನು ಹತ್ತಿ ಹೇಗೋ ಜೀವ ಉಳಿಸಿಕೊಂಡಿದ್ದ. ಅಥವಾ..

ದೃಷ್ಟಿಕೋನಗಳ ಆಧಾರದ ಮೇಲೆ ಹೇಳುವುದಾದರೆ ಆವತ್ತು ಸೀನುವನ್ನು ರಜಾಕನೆ ಹಳೆಯ ದ್ವೇಷದಿಂದ ಗುಂಡಿಕ್ಕಿ ಕೊಲೆಮಾಡಿದ್ದ. ಸೀನು ಕಾಡಿಂದ ತಪ್ಪಿಸಿಕೊಂಡು ಬರುವಾಗ ಮುಳ್ಳುಗಳು ಪರಚ್ಚಿದ್ದರಿಂದ ಗಾಯಗಳಾಗಿತ್ತು. ಅದನ್ನೇ ಉಪಾಯ ಮಾಡಿ ಹುಲಿ ಸಾಯಿಸಿತೆಂಬ ನೆಪ ಹೇಳಿದ್ದ. ಅಥವಾ..

ದೃಷ್ಟಿಕೋನಗಳ ಆಧಾರದ ಮೇಲೆ ಹೇಳುವುದಾದರೆ ಆವತ್ತು ಶಿಕಾರಿಯ ಸಂದರ್ಭದಲ್ಲಿ ರಜಾಕನು ಎದುರಿನಿಂದ ಬಂದ ಯಾವುದೊ ಪ್ರಾಣಿಗೆ ಹೊಡೆಯುವ ಭರದಲ್ಲಿ ಗುಂಡು ತಪ್ಪಿ ಸೀನುವಿಗೆ ಹೊಡೆದಿದ್ದಾನೆ. ಮುಂದೆ ಅದರಿಂದ ಮನನೊಂದ ರಜಾಕ್ ಯಾರಿಗೂ ಸಿಗದಂತೆ ಊರು ತೊರೆದು ಹೋಗಿರಬಹುದೆಂಬ ಊಹೆ.

ಮೇಲಿನ ಎಲ್ಲಾ ನಿಲುವುಗಳು ಕೇವಲ ದೃಷ್ಟಿಕೋನಗಳ ಆಧಾರಗಳು. ಬಹುಶಃ ರಜಾಕ್ ಇದ್ದಿದ್ದರೆ ಎಲ್ಲದಕ್ಕೂ ಉತ್ತರ ಸಿಗುತಿತ್ತೇನೋ..? ಎಲ್ಲಾ ಗೊತ್ತಿದ್ದ ಟಾಮಿ ಸತ್ಯವನ್ನು ತನ್ನೊಡಲೊಳಗೆ ಮುಚ್ಚಿಟ್ಟುಕೊಂಡು ಮಣ್ಣಲ್ಲಿ ಮಣ್ಣಾಯಿತು.

( ಸುಮಾರು ೯೦ರ ದಶಕದಲ್ಲಿ ಮಲೆನಾಡಿನ ಹಳ್ಳಿಯೊಂದರಲ್ಲಿ ನೆಡೆದ ಘಟನೆ. ನನ್ನ ಸ್ನೇಹಿತನ ಅಜ್ಜ ಹೇಳಿದ್ದು, ನಿಮ್ಮ ಎದುರು ತೆರೆದಿಡುವ ಸಣ್ಣ ಪ್ರಯತ್ನ. ನಿಮ್ಮ ಅನಿಸಿಕೆ ತಿಳಿಸಿ.)

‍ಲೇಖಕರು Avadhi

April 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಸತ್ಯ ತಿಳಿಸುವವರು ಯಾರು? ಎಲ್ಲಾ ನಾವು ಊಹೆ ಮಾಡಿಕೊಂಡಂತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: