ದಲಿತ ಲೋಕದ ಅರಿವು..

ಸತಿಶ ಕುಲಕರ್ಣಿ

ಖ್ಯಾತ ಕವಿ ಸಿದ್ಧಲಿಂಗಯ್ಯ ಇನ್ನಿಲ್ಲ ಎಂದು ಕೇಳಿದಾಗ ತಟ್ಟನೆ ಕಣ್‌ಹನಿ ಒಡೆದವು. ೧೯೭೯ ರಿಂದ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಚಳವಳಿಯ ಮೂಲಕ ಕೂಡಿ ಬೆಳೆದ ನನ್ನಂಥವರಿಗೆ ಇದೊಂದು ದೊಡ್ಡ ಆಗಾತ. ಸತತ ನಾಲ್ಕು ದಶಕಗಳ ಕಾಲದ ಸ್ನೇಹ ಇಷ್ಟು ಬೇಗನೆ ಮುಗಿದದ್ದು ಬೇಸರ ತಂದಿತು. ಯಾರೇ ಕವಿಗಳೇ ಎಂದು ಹೇಳಿದಾಗ ಸಿದ್ಧಲಿಂಗಯ್ಯ ಕಣ್ಣೆದರು ಬರುತ್ತಿದ್ದರು. ಅಂತಹದೊಂದು ಛಾಪನ್ನು ಎಲ್ಲರ ಮನಸ್ಸಿನಲ್ಲಿ ಬಿತ್ತಿದ್ದರು. ಅಧಿಕಾರ, ಸ್ಥಾನಮಾನ, ಜನಪ್ರೀತಿ ಎಲ್ಲದರ ನಡುವೆ ಯಾರ ಸ್ನೇಹವನ್ನೂ ಕಡೆದುಕೊಳ್ಳದ ಸಿದ್ಧಲಿಂಗಯ್ಯ, ಎಷ್ಟೇ ವಿಚಾರ ಅಭಿಪ್ರಾಯ  ಭೇದಗಳು ಇದ್ದಾಗಲೂ ಅವರ ಒಂದು ಮಗು ನಗು ಎಲ್ಲವನ್ನು ಮರೆಸಿ ಬಿಡುತ್ತಿತ್ತು.

೧೯೭೯ ಮಾರ್ಚ ೯, ೧೦ ಹಾಗೂ ೧೧ ರಂದು ಬೆಂಗಳೂರಿನಲ್ಲಿ ನಡೆದ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳದ ದಿನದಿಂದ  ಕಂಡು ನೋಡಿ ಕೂಡಿ ಬೆಳೆದ ಪ್ರೀತಿ ವಿಶ್ವಾಸ ನಮ್ಮವು. ಜನರಿಂದ ದೂರ ಸರಿದು ಯಾವುದೋ ಒಂದು ಭ್ರಮಿಕ ಸುಳಿಗೆ ಕನ್ನಡ ಕಾವ್ಯ ಸಿಕ್ಕಾಗ ಅದಕ್ಕೊಂದು ಹೊಸ ಲೋಕ, ಹೊಸ ವಿಸ್ತಾರ ಕಟ್ಟಿ ಟ್ರೆಂಡೊಂದನ್ನು ಸೃಷ್ಠಿ ಮಾಡಿದ ಕವಿ ಸಿದ್ಧಲಿಂಗಯ್ಯ. ಚಮತ್ಕಾರಿಕ ತರ್ಕ, ತಾತ್ವಕ ಸ್ಪರ್ಷ, ಹೋರಾಟದ ಕಿಚ್ಚು ಮೈ ಮನಸ್ಸಿಗೆ ಹಚ್ಚುವ ಬೆಂಕಿ ಕಾವಿನ ಕಾವ್ಯ ಬರೆದವರು. ಒಮ್ಮೆ ಓದಿದದರೆ ಸಾಕು  ಮರೆಯಲಾಗದ್ದು., ಒಮ್ಮೆ ಕೇಳಿದರೆ ಸಾಕು ನಿರಂತರವಾಗಿ ಮೈ ಮನದಲ್ಲಿ ಗುಂಯಿ ಗುಡುವ ಕಾವ್ಯ ಶೈಲಿಯದು.

ನಾಡಿನ ನೂರಾರ ಸಂಘಟನೆಗಳ ದಲಿತ, ಸಮುದಾಯ, ಬಂಡಾಯ ಹಾಗೂ ಎಲ್ಲ ಜನಪರ ಹಾಡುಗಾರರು ಹಾಡದೆ ಇರಲಾಗದ ಕವಿಗಳು. ಗಟ್ಟಿ ಸಾಲುಗಳು ಅವುಗಳ ಹಿಂದೆ ನುಡಿದು ಗಿಜುಗೂಡುತ್ತಿದ್ದ ತಮ್ಮಟೆಯ ಲಯ, ಯಾವ ಕಾಲಕ್ಕೂ ಮರೆಯಲಾಗುವುದಿಲ್ಲ. ನಾಲ್ಕಾರು ಕವನ ಸಂಕಲನಗಳೇ ಅವರ ಇಡೀ ಕನ್ನಡ ಕಾವ್ಯ ಕಣ್ಬಿಟ್ಟು ನೋಡುವಷ್ಟು ಸಶಕ್ತ.

೨೦೧೮ ರಿಂದ ಕೇಂದ್ರ ಸಾಹಿತ್ಯ ಅಕಾಡೆಮಿ (ದೆಹಲಿ)ಯಲ್ಲಿ ಕನ್ನಡ ಭಾಷಾ ಸಲಹಾ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಸಮಿತಿಗೆ ಕರ್ನಾಟಕದ ಸಂಚಾಲಕರು ಅವರೇ ಆಗಿದ್ದರು. ಡಾ. ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ನಾನು, ಡಾ. ಸರ್ಜೂ ಕಾಟ್ಕರ, ಡಾ. ಬಾಳಾ ಸಾಹೇಬ ಲೋಕಾಪೂರ, ಮನು ಬಳೆಗಾರ, ಎಚ್, ಎಸ್, ಶಿವಪ್ರಕಾಶ ಹಾಗೂ ಪದ್ಮಿನಿ ನಾಗರಾಜ ಸದಸ್ಯರಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದೆವು. ಜನವರಿ ೨೫, ೨೦೨೦ ಅವರ ಕೊನೆ ಭೇಟಿ ಅಕಾಡೆಮಿಯ ಮೀಟಿಂಗಿನಲ್ಲಿ ಆಗಿತ್ತು. ಆನಂತರ ಒಂದೇ ಒಂದು ವರ್ಚುವಲ್ ಮೀಟಿಂಗ ನಡೆದಿತ್ತು.

ನಕ್ಕು ನಗಿಸಿ ಗಂಭೀರವಾಗಿ ನಡೆದು ಬರುತ್ತಿದ್ದ ಸಿದ್ಧಲಿಂಗಯ್ಯನವರ ವ್ಯಕ್ತಿತ್ವ ಮತ್ತು ಕಾವ್ಯ ಪ್ರಭಾವ ಇಂದಿಗೂ ಗಾಢವಾಗಿ ಆವರಿಸಿದೆ.  ನಿನ್ನೆ ದಿನ, ನನ್ನ ಜನ ಬೆಟ್ಟದಂತೆ ಬಂದರು/ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು – ಈ ಸಾಲುಗಳನ್ನು ಶೂದ್ರ ಪತ್ರಿಕೆಯಲ್ಲಿ ಮೊದಲ ಬಾರಿಗೆ ಓದಿದಾಗ ರೋಮಾಂಚನಗೊಂಡಿದ್ದೆ. ಯಾರಿಗೆ ಬಂತು ಎಲ್ಲಿಗೆ ಬಂತು ೪೭ ರ ಸ್ವಾತತ್ರ್ಯ ಹಸಿವಿನಿಂದ ಸತ್ತವರು ಸೈಜುಗಲ್ಲು ಹೊತ್ತೋರು ಭಕ್ತರಪ್ಪ ಭಕ್ತರೊ – ಈ ಎಲ್ಲ ಹಾಡುಗಳು ಮೈ ಮನ ಸುಳಿಯಲ್ಲಿ ಈಗಲೂ ಸುಳಿತ್ತವೆ.

ಕಾವ್ಯಕ್ಕೊಂದು ಘರ್ಷಣ ಭಾವ ತಂದು, ಅಗ್ರಹಾರ ಪರಂಪರೆಯ ಹಿನ್ನೆಲೆಯಿಂದ ಬಂದ ನನ್ನಂತವರಿಗೆ ಅರಿವಿನ ಬೀಜ ಸಾಮಾಜಿಕ ನಿಜ ಚಿತ್ರಗಳನ್ನು ತೋರಿಸಿದ ಕವಿ. ಅವರ ಎಂ.ಎಲ್.ಸಿ ಯಾನ, ಅಮಿತಾ ಶಾ ಭೇಟಿ, ಸಿನೇಮಾದ ಪ್ರೀತಿ ಪ್ರೇಮದ ಹಾಡುಗಳ ಬರೆದಾಗ ಒಂದಿಷ್ಟು ಬೇಸರವೂ ಆಗಿತ್ತು. ಆದರೆ ಆ ಪುಟ್ಟ ನಾಲ್ಕು ಫೂಟಿನ ಕವಿ ಭೇಟಿಯಾದಗಲೆಲ್ಲ ನುಚ್ಚು ನೂರಾಗುತ್ತಿದ್ದವು. ಕೋಟ್ಯಂತರ ಜನರ ಕಣ್ಮಣಿಯಾಗಿದ್ದ ಕವಿ ಸಿದ್ಧಲಿಂಗಯ್ಯ ಕೋವಿಡ್ ಎಂಬ ಕರಾಳ ಕಾಲದಲ್ಲಿ ಮುಖ ತೋರಿಸದೆ ಮರೆಯಾದದ್ದು ಕಾಲದ ವಿಡಂಬನೆಯಾಗಿದೆ. ನಮಗೆ ಸೊಕ್ಕು ಇದ್ದಂತೆ ಕಾಲಕ್ಕೂ ಮಣಿಸುವ ತಾಕತ್ತು ಇದೆ ಎಂದು ಕೋವಿಡ ತೋರಿಸಿದೆ.

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: