ದರ್ಶನ್ ಜಯಣ್ಣ ಸರಣಿ – ಆಡು ಮುಟ್ಟದ ಸೊಪ್ಪಿಲ್ಲ

ದರ್ಶನ್ ಜಯಣ್ಣ

7

ನನ್ನಪ್ಪ
ನಾನೆಂದೋ ಓದಿದ ಕವಿತೆಯ
ಅವ್ವನ೦ತೆ !
ದುಡಿದದ್ದು ಪಡೆದದ್ದು ಬಡಿದಾಡಿದ್ದು
ಎಲ್ಲ ನಮಗಾಗಿಯೇ !

ಉಣುವಾಗ ಉಣದೆ
ತೊಡುವಾಗ ತೊಡದೆ
ಆಗೊಮ್ಮೆ ಈಗೊಮ್ಮೆಯೂ ವಿಲಾಸಿಯಾಗದೆ
ಹರುಷದ ಕೂಳು ನೆಚ್ಚಿದರೆ
ವರುಷದಕೂಳು ಹಾಳು ಎನ್ನುತ್ತಿದ್ದ !

ಮರಳು ಸಿಮೆ೦ಟು ಇಟ್ಟಿಗೆಯವರು ಸಾಲದಕ್ಕೆ ಮೇಸ್ತ್ರಿಯೊಡನೆಯೂ ಗುದ್ದಾಡಿ ಮನೆಕಟ್ಟಿದ !

ಬಾಗಿಲುಗಳ ಬಡಿಯಲಿಲ್ಲ
ಮಠಗಳಿಗೆ ಹೋಗಲಿಲ್ಲ
ಮನೆಯೇ ಮ೦ತ್ರಾಲಯ ಅವಗೆ
ಕಾಯಕ ಕೈಲಾಸ !

ಆಡುಮುಟ್ಟದ ಸೊಪ್ಪಿಲ್ಲ
ಅವಮಾಡಿರದ ಕಸುಬಿಲ್ಲ
ಗ್ರ೦ಥಿಗೆಯಿ೦ದ ಗಿರ್ಮಿಟ್ಟಿನವರೆಗೆ
ಪಟ್ಟಾಕಿಯಿ೦ದ ಸ್ಪಿರಿಟ್ಟಿನವರೆಗೆ !

ಯಾವ ಕಣ್ಣ ಕುತ್ತೋ
ಯಾರ ಶಾಪ ಬಿತ್ತೋ
ಕು೦ತಲ್ಲೆ ಕು೦ತಿಹನು
ಈಗ ಮೌನಿಯಾಗಿ !

ತಾನೇ ಹೊಡೆಸಿದ
ಪಾ೦ಪ್ಲೆಟ್ಟುಗಳು ಹೇಳುತಿವೆ
‘ಮನೋವ್ಯಾಧಿಯೇ ಮಾನವನ ಮೊದಲ ಖಾಯಿಲೆ’
ಯೆ೦ದು ಕೂಗಿ !

(ಅಪ್ಪ ಸಾಯುವ ಕೆಲವು ವರ್ಷಗಳ ಮುಂಚೆ ಬರೆದದ್ದು ಆಗ ಪ್ರಕಟಸಲು ಧೈರ್ಯ ಮನಸು ಎರಡು ಬರಲಿಲ್ಲ)

‘ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ’ ಎನ್ನುತ್ತದೆ ನಾಣ್ಣುಡಿ. ಆದರೆ ಹನಿಗಳು ಕೂಡುತ್ತಿದ್ದರೂ ಅದು ಹಳ್ಳವಾಗುವವರೆಗೆ ತಾಳ್ಮೆ ಇರಬೇಕೆಲ್ಲ? ಹಾಗೆಯೇ ಹನಿಗಳಾದರೋ ಅಥವಾ ತೆನೆಯಾದರೋ ಅವಾಗೆಯೇ ಬಂದು ಬೀಳುವುದಿಲ್ಲವಲ್ಲ. ಅದಕ್ಕಾಗಿ ಕಷ್ಟ ಪಟ್ಟು ದುಡಿಯಬೇಕು. ಇದನ್ನು ಏಕೆ ಹೇಳಿದೇನೆಂದರೆ ಅಪ್ಪನಿಗೆ ಅಂತಹ ತಾಳ್ಮೆ, ಛಾತಿ ಮತ್ತು ಹಠ ಇತ್ತು. 15 x 10 ರ ಅಂಗಡಿಯಲ್ಲಿ ಏನೆಲ್ಲಾ ವ್ಯಾಪಾರ ಮಾಡುತ್ತಿದ್ದರೆಂದು ನೆನಪಿಸಿ ಕೊಂಡರೇ ಆಶ್ಚರ್ಯವಾಗುತ್ತದೆ.

ಅಪ್ಪ ಶುರುವಿನಲ್ಲಿ ಇಟ್ಟಿದ್ದು ಬೆಣ್ಣೆ ಗುಲ್ಕನ್, ಬ್ರೆಡ್ಡು ಜಾಮ್ ನ ಅಂಗಡಿ. ಅದು ತುಮಕೂರಿನ M. G ರಸ್ತೆಯಲ್ಲಿ. ಆಮೇಲೆ ಅದರ ಜೊತೆಗೆ ಚುರುಮುರಿ, ಖಾರ ಮಿಕ್ಸ್ ಚರ್ ಇತ್ಯಾದಿ. ಇದರಿಂದ ಅಷ್ಟೇನು ಲಾಭ ಬಾರದಿದ್ದ ಕಾರಣ ನಂತರದ ದಿನಗಳಲ್ಲಿ ಗಸಗಸೆ ಮತ್ತು ಬಾದಾಮಿ ಹಾಲನ್ನು ಜೊತೆಗೆ ಮಾಡಲು ಶುರುವಿಟ್ಟರು. ವ್ಯಾಪಾರ ನಿಧಾನವಾಗಿ ವೃದ್ಧಿಸಲಾರಾಂಭಿಸಿದಾಗ ಇದ್ದ 10 x 5 ರ ಅಂಗಡಿ ಸಾಲಲಿಲ್ಲ.

ನಂತರ ವಿವೇಕಾನಂದ ರಸ್ತೆಯಲ್ಲಿ 15 x 10 ಅಂಗಡಿಯೊಂದನ್ನು ಬಾಡಿಗೆಗೆ ವಿಚಾರಿಸಿದರು. ಆದರೆ ಮುಂಗಡ ಹಣ ಹತ್ತು ಸಾವಿರವಾಗಿದ್ದರಿಂದ (1990) ಅದರ ಆಸೆ ಬಿಟ್ಟು ಬಿಟ್ಟರು. ಆದರೆ ಅಂಗಡಿ ಮಾಲೀಕರಾದ ಲಿಂಗಣ್ಣನವರಿಗೆ ಏನನಿಸಿತೋ ಏನೋ, ಅಪ್ಪನನ್ನು ಚಿಕ್ಕಂದಿನಿಂದ ನೋಡಿದ್ದ ಅವರು ಅಪ್ಪನನ್ನು ಪುನಃ ಕರೆದು ‘ಅಂಗಡಿ ಮಾಡಿಕೊಂಡು ಹೋಗು.ಅಡ್ವಾನ್ಸ್ ಆಮೇಲೆ ಕೊಡುವಿಯಂತೆ ಆದರೆ ಬಾಡಿಗೆ ಸರಿಯಾಗಿ ಕೊಡಬೇಕು ನೋಡು’ ಅಂದರಂತೆ. ಅಪ್ಪ ಅವರಿಗೆ ವಂದಿಸಿ ಅಲ್ಲಿಯೇ ಅಂಗಡಿ ಶುರುಮಾಡಿಬಿಟ್ಟರು. ಮೊದಲ ಅಂಗಡಿಗಿಂತಾ ಇದು ದೊಡ್ಡದಾದ್ದರಿಂದ, ಇಲ್ಲಿ ತಮಗೆ ಚೆನ್ನಾಗಿ ತಿಳಿದಿದ್ದ ಗ್ರಂಥಿಗೆ ವ್ಯಾಪಾರವನ್ನೂ ಅದರ ಜೊತೆಗೆ ಡ್ರೈ ಫ್ರೂಟ್ಸ್, ಗಿಡಮೂಲಿಕೆಗಳು ಇತ್ಯಾದಿಗಳನ್ನೂ ತುಂಬಿದರು.

ಅಂಗಡಿಗೆ ಬೇಕಾದ ಫರ್ನಿಚರ್ ಗಳನ್ನ ಅವರ ಗೆಳೆಯರೊಬ್ಬರಿಂದ ಅರ್ಧ ಬೆಲೆಗೆ ಕೊಂಡರು.
ಹೇಗೂ ನಮ್ಮ ತಿಂಡಿ ತಿನಿಸಿನ ಅಂಗಡಿ ಸಂಜೆಯಮೇಲೆ ನಡೆಯುತ್ತಿದ್ದರಿಂದ ಬೆಳಿಗ್ಗೆ ಗ್ರಂಥಗೆ ವ್ಯಾಪಾರ ನಡೆಸುತ್ತಿದ್ದರು. ನಿಜಹೇಳಬೇಕೆಂದರೆ ಅರ್ಧದಷ್ಟು ಪದಾರ್ಥಗಳು ಅದರಲ್ಲೂ ತಿಂಡಿ ತಿನಿಸುಗಳು ಇಲಿ ಮತ್ತು ಇತರೆ ಕೀಟಗಳ ಉಪದ್ರದಿಂದ ಹಾಳಾಗುತ್ತಿತ್ತು. ಈಗಿನ ಹಾಗೆ ಆಗ ಏರ್ ಟೈಟ್ ಬಾಕ್ಸ್ ಗಳು ಸಿಗುವ ಹಾಗೆ ಇದ್ದಿದ್ದರೆ…. ಎಂದು ಅಮ್ಮ ಅದೆಷ್ಟು ಬಾರಿ ಹೇಳಿರುವಳೋ ಲೆಕ್ಕವಿಲ್ಲ!

ಆಗೆಲ್ಲಾ ಜಾಡಿಗಳು, ದೊಡ್ಡ ಗಾಜಿನ ಬಾಟಾಲಿಗಳು, ಆಲೂಮಿನಿಯಂ ಟಿನ್ ಗಳು, ಗೋಣಿ ಚೀಲಗಳು ಇವುಗಳಲ್ಲಿಯೇ ಪದಾರ್ಥಗಳನ್ನು ಇಡುತ್ತಿದ್ದೆವು.
ಜನ ಕಣ್ಣಿಂದ ನೋಡಿಯೇ ಕೇಳಬೇಕಲ್ಲ?

ಇದರ ಮಧ್ಯೆ ಅಂಗಡಿ ಬಂಡವಾಳಕ್ಕೆ ಇನ್ನಷ್ಟು ಹಣ ಬೇಕಿದ್ದರಿಂದ ಅಪ್ಪ ಸ್ಥಳೀಯ ಬ್ಯಾಂಕ್ ಒಂದರಲ್ಲಿ ಲೋನಿಗೆ ಅರ್ಜಿ ಹಾಕಿದರು. 20 ಸಾವಿರ ಹಣ ಮಂಜೂರಾಗಿತ್ತಾದರೂ ಬ್ಯಾಂಕಿನವರು ಶೂರಿಟಿಗೆ ಯಾವುದಾದರೂ ಆಸ್ತಿ ಪತ್ರ ಇಡಬೇಕೆಂದು, ಇಲ್ಲವಾದರೆ ಯಾರಿಂದಲಾದರೂ ಶೂರಿಟಿ ಕೊಡಿಸಬೇಕೆಂದರು. ಅಪ್ಪನಿಗೆ ಈ ಎರಡೂ ಅನುಕೂಲಗಳಿಲ್ಲದ್ದರಿಂದ ಸುಮ್ಮನಾದರು.

ಈ ವಿಷಯವನ್ನು ಹೇಗೋ ತಿಳಿದ ಅಂಗಡಿಯ ಮಾಲಿಕರಾದ ಕಾರ್ ಲಿಂಗಣ್ಣನವರು ಅಪ್ಪನ ಹತ್ತಿರ ಈ ವಿಚಾರವಾಗಿ ಕೇಳಿದಾಗ ಅಪ್ಪ ಬೇಸರದಿಂದ ‘ಹೌದು ಸ್ವಾಮಿ, ನಾನೂ ಒಂದಿಬ್ಬರ ಬಳಿ ಶೂರಿಟಿ ಕೇಳಿದೆ ಯಾರೂ ಕೊಡಲಿಲ್ಲ ಸುಮ್ಮನಾದೆ’ ಎಂದಾಗ… ‘ಹೌದೋ? ಹಾಗಾದರೆ ಅರ್ಜಿತಾ’ ಎಂದರು. ಅಪ್ಪ ಆಶ್ಚರ್ಯದಿಂದ ಅರ್ಜಿಯನ್ನು ಅವರ ಕೈಲಿಟ್ಟಾಗ ಅವರೇ ಸಹಿ ಹಾಕಿ ಬಿಟ್ಟರು! ಅಂದಿನಿಂದ ನಾವು ಅವರನ್ನು ಎಲ್ಲರು ಕರೆಯುವಂತೆ  ಕಾರ್ ಲಿಂಗಣ್ಣನವರು ಎನ್ನದೆ ‘ಯಜಮಾನ್ರು’ ಅನ್ನ ತೊಡಗಿದೆವು. ಈ ಪದ್ಧತಿ ಇವತ್ತಿಗೂ ಮುಂದುವರೆದಿದೆ.

ಬ್ಯಾಂಕ್ ಲೋನ್ ಪಡೆದು ಅಪ್ಪ ನಂತರ ಶುರುಮಾಡಿದ್ದು ಅಯ್ಯಪ್ಪಸ್ವಾಮಿ ಇರುಮುಡಿ ಸಾಮಾನು ವ್ಯಾಪಾರ. ಇದು ಭಾಗಷಃ ಸೀಸನಲ್ ಆಗಿರುವ ವ್ಯಾಪಾರ. ಒಂದು ವಿಶು ಪೂಜೆಯ ಹೊತ್ತಿಗೆ ಅಂದರೆ ಏಪ್ರಿಲ್ನ ದಿನಗಳಲ್ಲಿ ಮತ್ತೊಂದು ಮಂಡಲಪೂಜೆ ಅಂದರೆ, ನವೆಂಬರ್ ನಲ್ಲಿ ಶುರುವಿಟ್ಟು ಮಕರ ಜ್ಯೋತಿಯವರೆಗೆ ಇರುತ್ತದೆ. ಈ ವ್ಯಾಪಾರ ಹೆಚ್ಚು ಶ್ರಮವನ್ನು ಬೇಡುತ್ತಿತ್ತು.

ಅಪ್ಪ ಇರುಮುಡಿ ಸಾಮಾನಿಗೆ ಬೇಕಾದ ಬತ್ತದ ಅವುಲು, ಪನ್ನೀರು, ಇರುಮುಡಿ ಬ್ಯಾಗೂ , ತುಪ್ಪದ ಕಾಯಿ ಮತ್ತು ಅದಕ್ಕೆ ತುಪ್ಪ ತುಂಬಿಸಿ ಮುಚ್ಚಲು ಬೇಕಾದ ಜೇನುಮೇಣ -ಕಾರ್ಕು, ಊದುಬತ್ತಿ, ವಾವರ ಸ್ವಾಮಿಗೆ ಚುಟ್ಟ, ಭಸ್ಮ, ಕರ್ಪೂರ ಎಲ್ಲವನ್ನು ನಾವೇ ತಂದು ರೆಡಿ ಮಾಡುತ್ತಿದ್ದೆವು. ಕೆಲವಷ್ಟು ವರ್ಷಗಳು ವ್ಯಾಪಾರ ಚೆನ್ನಾಗಿಯೇ ನಡೆದರೂ ನಮ್ಮಲ್ಲಿಯೇ ಕೊಳ್ಳುತ್ತಿದ್ದ ದೇವಸ್ಥಾನದವರು, ಗುರುಸ್ವಾಮಿಗಳು ನಂತರ ತಾವೇ ಇವೆಲ್ಲದರ ಉದ್ಯಮವನ್ನೇ ಶುರುವಿಟ್ಟ ಮೇಲೆ ನಮಗೆ ಹೆಚ್ಚು ಗಿಟ್ಟುತ್ತಿರಲಿಲ್ಲ. ಆಗ ಅಪ್ಪ ಈ ವ್ಯಾಪಾರವನ್ನು ಕೊಂಚ ಕಡಿಮೆ ಮಾಡಿಕೊಂಡು ಸಂಜೆಯ ತಿಂಡಿ ತಿನಿಸಿನ ವ್ಯಾಪಾರವನ್ನು ಹೆಚ್ಚು ಮಾಡಿಕೊಳ್ಳುವ ಉದ್ದಿಷ್ಯದಿಂದ ಹಲವಾರು ವಿಶೇಷ ರೀತಿಯ ಜ್ಯೂಸುಗಳನ್ನು (ಗುಲಾಬಿ, ತುಳಸಿ, ಸಬ್ಜ, ಲಾವಂಚ, ಸೊಗದೆಬೇರು ಅಥವಾ ನನ್ನಾರಿ), ಕಷಾಯಗಳನ್ನು (ಅಳಲೆಕಾಯಿ, ಜಾಕಾಯಿ, ನೆಲ್ಲಿಚೆಟ್ಟು) ಮುರಬ್ಬಗಳನ್ನು (ಬೆಟ್ಟದ ನೆಲ್ಲಿಕಾಯಿ, ಶುಂಠಿ ಇತ್ಯಾದಿ) ಅದರ ಜೊತೆಗೆ ಕೊಬ್ಬರಿಯ ವಾಟರ್ ಜ್ಯಾಮ್, ಫ್ರೂಟ್ ಸಲಾಡು ಇತ್ಯಾದಿಗಳನ್ನು ಶುರುಮಾಡಿದರು.

ಸಾಮಾನ್ಯವಾಗಿ ತಿಂಡಿ ತಿನಿಸು ಅಂಗಡಿಗಳೆಂದರೆ ಪಾನಿಪೂರಿ, ಚುರುಮುರಿ, ಬೋಂಡಾ ಬಜ್ಜಿ, ಹೋಟೆಲ್ಲುಗಳು, ಬೇಕರಿಗಳು, ಸಮೋಸ ಕಚೋರಿ, ಖಾರ, ಸಿಹಿ ತಿನಿಸುಗಳು ಎನ್ನುವ ಸಮಯದಲ್ಲಿ ನಮ್ಮಪ್ಪನ ಅಂಗಡಿ ತುಂಬಾ ವಿಶೇಷವಾಗಿತ್ತು. ಅಪ್ಪ ಅಂಗಡಿಗೆ ಬಂದವರಿಗೆ ವ್ಯಾಪಾರದ ಜೊತೆಗೆ ಉಚಿತವಾಗಿ ಆಯುರ್ವೇದದ ಮಹತ್ವ, ಮನೆಮದ್ದು ಹೇಳುತ್ತಿದ್ದುದರಿಂದ ನಿಧಾನವಾಗಿ ಜನಸಂದಣಿ ಹೆಚ್ಚಾಗತೊಡಗಿತು. ಅಪ್ಪ- ಅಮ್ಮ ಮತ್ತು ಆಗಾಗ ನಾನು ಮತ್ತು ಇನ್ನಿಬ್ಬರು ಸಹಾಯಕರು ನೋಡಿಕೊಂಡರೂ ಸಾಕಾಗದ ಹಾಗೆ ಸಂಜೆ ಹೊತ್ತು ಜನ ಇರುತ್ತಿತ್ತು. ಪಾರ್ಕಿಂಗ್ ರಸ್ತೆಯ ಬದಿಯೇ ಆದುದರಿಂದ ಪೋಲೀಸರು ಆಗಾಗ ತಕರಾರು ಮಾಡಿ ತಾವೂ ತಿಂದು ಮನೆಗೂ ಕಟ್ಟಿಸಿಕೊಂಡು ಹಣ ಕೊಡದೆ ಹೋಗುತ್ತಿದ್ದದ್ದು ರೂಡಿಯಾಗಿತ್ತು!

ಇದು ಆತಿಯಾದಾಗಲೂಮ್ಮೆ ಅಪ್ಪ ಜನರ ಮುಂದೆ ಪೊಲೀಸರೊಬ್ಬರನ್ನು ಕುರಿತು ಗೋಳಾಡಿದಾಗ ಆತ ಅದನ್ನೇ ಮನಸಿನಲ್ಲಿಟ್ಟುಕೊಂಡು ಅತೀ ಜನಸಂದಣಿ ಇದ್ದಾಗೊಮ್ಮೆ ಪಾರ್ಕಿಂಗ್ ಎಲ್ಲಾ ರಸ್ತೆಯ ಮೇಲೆಯೇ ಇದೆಯೆಂದು ಇನ್ಸ್ಪೆಕ್ಟರ್ ಒಬ್ಬರನ್ನು ಕರೆದುಕೊಂಡು ಬಂದು ಅಂಗಡಿಯನ್ನೇ ಮುಚ್ಚಿ ಹಾಕಿಸಿದ್ದ. ಅದಾದ ನಂತರದ ದಿನಗಳಲ್ಲಿ ಅಪ್ಪ ಯಾವ ಪೋಲೀಸಿನವರಿಂದಲೂ ದುಡ್ಡು ನಿರೀಕ್ಷಿಸಲಿಲ್ಲ… ಅವರು ತಾವಾಗಿಯೇ ಕೊಟ್ಟದ್ದು ಕಡಿಮೆಯೇ!

ನಾನು ಇಷ್ಟೊಂದು ವ್ಯಾಪಾರ ವಹಿವಾಟೆಲ್ಲ ನೋಡಿ ಬೆಳೆಯುತ್ತಾ ನಾವ್ಯಾಕೆ ಇನ್ನೂ ಶ್ರೀಮಂತರಾಗದೆ ಇನ್ನೂ ಬಾಡಿಗೆಮನೆಯಲ್ಲಿಯೇ ಇದ್ದೀವಲ್ಲ ಎಂದು ಅಪ್ಪ ಅಮ್ಮನನ್ನು ಒಮ್ಮೆ ಕೇಳಿದೆ. ಆಗ ಅಪ್ಪ ಮಳೆ ಬಂದಾಗ, ಕ್ರಿಕೆಟ್ ಮ್ಯಾಚಿದ್ದಾಗ, TV ಯಲ್ಲಿ ಒಳ್ಳೆಯ ಸಿನೆಮಾ ಬಂದಾಗ, ಮಿಂಚು ಗುಡುಗು ಬಂದಾಗ ಜನ ಹೊರಬಾರದೇ ನಮ್ಮಲ್ಲಿ ಉಳಿದುಬಿಡುತ್ತಿದ್ದ ಗಸಗಸೆ ಹಾಲು, ಫ್ರೂಟ್ ಸಲಾಡು, ಕೆಲ ಬಗೆಯ ಜೂಸುಗಳು, ಖಾರಕ್ಕೆ ಹಚ್ಚಿದ್ದ ಈರುಳ್ಳಿ, ಟೊಮೇಟೊ, ಕ್ಯಾರೆಟ್ಟು ಗಳನ್ನು ಚೆಲ್ಲಾಬೇಕಾದ ಪರಿಸ್ಥಿತಿಯ ಬಗ್ಗೆ ಮನದಟ್ಟು ಮಾಡಿದರು. ಅದರ ಬೆನ್ನಲ್ಲೇ ಕಾಸು ಕೊಡದ ಕೆಲ ಗಿರಾಕಿಗಳು, ಕತ್ತಲಲ್ಲಿ ಅತ್ತಲೇ ಜಾರಿಬಿಡುವ ಕೆಲವರು, ರಶ್ ನಲ್ಲಿ ನಾಲ್ಕು ತಿಂದು ಎರಡೆನ್ನುವವರು, ಬಿಟ್ಟಿ ತಿನ್ನುವ ಪೊಲೀಸ್ನವರು, ಕೊಡದ ನೋಟಿಗೆ ಚಿಲ್ಲರೆ ಕೊಡಿ ಎನ್ನುವವರು, ಐವತ್ತು ಕೊಟ್ಟು ನೂರು ಕೊಟ್ಟೆ ಚಿಲ್ಲರೆ ಕೊಡಿ ಎಂದು ಚಮಕಾಯಿಸುವ ಮಹಾಮಹಿಮರ ಬಗ್ಗೆ ಹೇಳಿದಾಗ ನನಗೆ ತೀವ್ರ ಸಿಟ್ಟು ಮತ್ತು ಅಸಹನೆಯಾಗುತ್ತಿತ್ತು.

ಅಪ್ಪ ಆಗೆಲ್ಲ ಹೇಳುತ್ತಿದ್ದದ್ದು ಈಗಲೂ ನೆನಪಿದೆ ‘ನೋಡು ಇದಕ್ಕೇ ನಾನು ನಿಮ್ಮ ಅಮ್ಮ ಇಷ್ಟೆಲ್ಲಾ ಒದ್ದಾಡೋದು, ಒಂದೊಂದು ಹೊಸ ಐಟಂ ನಲ್ಲೂ ನೂರು ರೂಪಾಯಿ ಬಂದರೆ ಬರ್ಲಿ ಬಿಡು. ಹಾಲಿಗೋ, ಕರೆಂಟಿಗೋ ಅಥವಾ ಮತ್ತೇನಕ್ಕೋ!’

ನಮ್ಮ ಸಾಯಂಕಾಲದ ಕಾಂಡಿಮೆಂಟ್ಸ್ ಮತ್ತು ಜ್ಯೂಸು ಸೆಂಟರ್ (‘ಸದ್ಗುರು ಪ್ರಕೃತಿ ಪಾನೀಯ ಕೇಂದ್ರ’) ಜನ ಜಂಗುಳಿ ಇಂದ ನೆಡೆಯುವ ಮೊದಲು ನಾವು ಮನೆಯಲ್ಲಿಯೇ ನಿಪ್ಪಟ್ಟು, ಚಕ್ಕುಲಿ, ಪುರಿ ಒಗ್ಗರಣೆ, ಸಂಕ್ರಾಂತಿಗೆ ಸಕ್ಕರೆ ಅಚ್ಚು, ಎಳ್ಳು -ಕಡ್ಡಳೆ – ಬೆಲ್ಲ, ಅಪ್ಪನಿಗೆ ತಯಾರಿಸಲು ಬರುತ್ತಿದ್ದ ಮುಲಾಮುಗಳು, ಹಲ್ಲುಪುಡಿ, ಗುಲ್ಕನ್ನು, ಡ್ರೈ ಫ್ರೂಟ್ಸ್ ಮಿಕ್ಸ್ ಎಲ್ಲವನ್ನೂ ಸಣ್ಣ ಪ್ರಮಾಣದಲ್ಲಿ ತಯಾರಿಸಿ ಅಂಗಡಿಯಲ್ಲಿ ಮಾರುತ್ತಿದ್ದೆವು. ಅದಕ್ಕೇ ಶುರುವಿನಲ್ಲಿ ಹೇಳಿದ್ದು ‘ಆಡು ಮುಟ್ಟದ ಸೊಪ್ಪಿಲ್ಲ, ನಮ್ಮಪ್ಪನಿಗೆ ಗೊತ್ತಿರದ ವಿದ್ಯೆಯಿಲ್ಲ!’ ಎಂದು.
ಭುಜಂಗಯ್ಯನದ್ದು ದಶವತಾರವಾದರೆ ಜಯಣ್ಣನದ್ದು ಅಪರಾವಾತಾರ ಎಂದು ಎಷ್ಟೋ ಸಲ ನಾನೇ ಅಪ್ಪನನ್ನು ಅಣಕಿಸುತ್ತಿದ್ದೆ!

ಅಪ್ಪನಿಗೆ ಸುಮಾರು ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಗೊತ್ತಿತ್ತು. ಬಾರದುದರ ಕುರಿತು ಆಸಕ್ತಿ ಇತ್ತು. ಇನ್ನು ಏನೇನನ್ನೋ ಮಾಡಬೇಕೆಂಬ ಆಸೆ ಹಂಬಲವಿತ್ತು. ಹಲವಾರು ಬಾರಿ ನಮ್ಮ ಅಂಗಡಿಯನ್ನು ಕವರ್ ಮಾಡಲು ಬಂದ ಪೇಪರ್ ಮತ್ತು TV ರಿಪೋರ್ಟರ್ ಗಳನ್ನು ಅಪ್ಪ ನಯವಾಗಿಯೇ ನಿರಾಕರಿಸುತ್ತಿದ್ದರು. ಅವರಿಗೆ ಪ್ರಚಾರ ಬೇಕಿರದಿದ್ದರೂ ದೊಡ್ಡದಾಗಿ ಏನಾದರೂ ಮಾಡುವ ಇರಾದೆ ಕಡೆವರೆಗೂ ಇತ್ತು.

ಅಮ್ಮನ ಆಂಬೋಣ ಇಷ್ಟೆಲ್ಲಾ ಮಾಡುವ ಬದಲು ಯಾವುದಾದರೊಂದು ಕಸುಬನ್ನು ದೊಡ್ಡದಾಗಿ ಮಾಡಿ ಹೆಸರು ಮತ್ತು ಹಣ ಸಂಪಾದಿಸಬಹುದಿತ್ತು ಎಂದು. ಆದರೆ ಅಪ್ಪನಿಗೆ ಗುಲ್ಕನ್ ಫ್ಯಾಕ್ಟರಿಯ ಅನುಭವದಿಂದ ಕೈಸುಟ್ಟು ಕೊಂಡಮೇಲೆ ಏನನ್ನಾದರೂ ದೊಡ್ಡದಾಗಿ ಮಾಡಲು ಹಿಂಜರಿಕೆಯಿತ್ತು. ಆದರೆ ಸಣ್ಣ -ಸಣ್ಣ ವ್ಯಾಪಾರದಲ್ಲಿ ಅವರಿಗೆ ಯಾವ ತೃಪ್ತಿಯೂ ಇದ್ದಂತಿರಲಿಲ್ಲ.

ಒಟ್ಟಿನಲ್ಲಿ ಅಪ್ಪನ ಇಡೀ ಜೀವನ ಒಂದು ರೀತಿಯ ಧಾವಂತ, ಹುಡುಕಾಟ ಮತ್ತು ಯಾವುದೋ ಅನ್ವೇಷಣೆಯಲ್ಲಿಯೇ ಕಳೆದು ಹೋಯಿತು !

| ಇನ್ನು ನಾಳೆಗೆ |

‍ಲೇಖಕರು Admin

August 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: