ಶ್ರೀನಿವಾಸ ಪ್ರಭು ಅಂಕಣ- ನನ್ನ ಮೊಟ್ಟಮೊದಲ ಶ್ರೋತೃ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

14

ಭಾನುವಾರ ಅಥವಾ ರಜೆಯ ದಿನಗಳಂದು ಮಧ್ಯಾಹ್ನದ ಊಟದ ಬಳಿಕ ಅಣ್ಣ ನಮ್ಮೆಲ್ಲರನ್ನೂ ಸುತ್ತ ಕೂರಿಸಿಕೊಂಡು ಜಯಶಂಕರ ಪ್ರಸಾದ್, ದ್ವಿಜೇಂದ್ರಲಾಲ ರಾಯ್ ಅವರ ನಾಟಕಗಳನ್ನೋ ಅಥವಾ ಭಾಸ-ಕಾಳಿದಾಸರ ನಾಟಕ-ಕಾವ್ಯಭಾಗಗಳನ್ನೋ ಓದುತ್ತಾ ಸೂಕ್ತ ವಿವರಣೆಗಳನ್ನೂ ನೀಡುತ್ತಿದ್ದರು. ಅದರಿಂದ ಪ್ರಭಾವಿತನಾದ ನಾನು ನನ್ನ ಪಠ್ಯದಲ್ಲಿದ್ದ ಕಾವ್ಯಭಾಗಗಳನ್ನು ಜೋರಾಗಿ, ಭಾವಪೂರ್ಣವಾಗಿ ಓದುತ್ತಿದ್ದೆ. ನನ್ನ ಮೊಟ್ಟಮೊದಲ ಶ್ರೋತೃ ಎಂದರೆ ನನ್ನ ತಂಗಿ ಪದ್ಮಿನಿ.

ಮೊದಲಿಗೆ ಮನೆಯಲ್ಲಿ ಅವಳನ್ನು ಎಲ್ಲರೂ ಮಿನ್ನಿ ಎಂದು ಕರೆಯುತ್ತಿದ್ದರೂ ತದನಂತರದಲ್ಲಿ ನಳಿನಿ ಅಕ್ಕ ಮಿಂಚಿ ಎಂದು ಮರು ನಾಮಕರಣ ಮಾಡಿ ಆ ಅಡ್ಡಹೆಸರೇ ಸ್ಥಿರವಾಗಿ ನಿಂತಿತು. ಮಿಂಚಿ ತನ್ನ ಗೆಳತಿಯರು ಮನೆಗೆ ಬಂದರೆ, ‘ಲೇ, ನಮ್ಮಣ್ಣ ಕನ್ನಡ ಪದ್ಯ ಎಷ್ಟು ಚೆನ್ನಾಗಿ ಹೇಳ್ತಾನೆ ಗೊತ್ತಾ? ಬನ್ನಿ ಕೇಳಿಸ್ತೀನಿ’ ಎಂದು ನನ್ನ ಬಳಿ ಬಂದು ಪದ್ಯ ಓದಲು ಕೇಳಿಕೊಳ್ಳುತ್ತಿದ್ದಳು. ನಾನೂ ಅಷ್ಟೇ ಉತ್ಸಾಹದಿಂದ ಶೀಲಾ, ಗಿರಿಜಾ, ತಬಸ್ಸುಮ್ ಮುಂತಾದ ನನ್ನ ತಂಗಿಯ ಗೆಳತಿಯರ ಮುಂದೆ ರಾಘವಾಂಕನ ವಶಿಷ್ಠ-ವಿಶ್ವಾಮಿತ್ರ ಸಂವಾದ ಕಾವ್ಯಭಾಗವನ್ನೋ, ಅಡಿಗರ ‘ಕಟ್ಟುವೆವು ನಾವು ಹೊಸ ನಾಡೊಂದನು’ ಕವಿತೆಯನ್ನೋ ಭಾವಪೂರ್ಣವಾಗಿ ಓದಿ ಆ ಹೆಣ್ಣುಮಕ್ಕಳ ಮೆಚ್ಚುಗೆಗೆ ಪಾತ್ರನಾಗಿ ರೋಮಾಂಚಿತನಾಗುತ್ತಿದ್ದೆ!

ಒಂದು ರಜೆಯ ದಿನ ಅಣ್ಣ ನಾಟಕವಾಚನ ಮುಗಿಸಿ ಕಾಫಿ ಹೀರುತ್ತಾ ಕುಳಿತಿದ್ದ ಸಮಯದಲ್ಲಿ ನಮ್ಮ ಮನೆಗೆ ಶ್ರೀಕಂಠ ಮೇಷ್ಟ್ರ ಆಗಮನವಾಯಿತು. ಶ್ರೀಕಂಠ ಮೇಷ್ಟ್ರು-ಕೆ.ಆರ್.ಶ್ರೀಕಂಠಯ್ಯ-ಸೆಂಟ್ರಲ್ ಕಾಲೇಜಿನಲ್ಲಿ ಮ್ಯಾಥಮ್ಯಾಟಿಕ್ಸ್ ಪ್ರೊಫೆಸರ್ ಆಗಿದ್ದರು. ಅವರ ಮಾರ್ಗದರ್ಶನದಲ್ಲೇ, ಪಿ ಯು ಸಿ ಯಲ್ಲಿ ಗಣಿತದಲ್ಲಿ ನೂರಕ್ಕೆ 99 ಅಂಕಗಳಿಸಿದ್ದ ಕುಮಾರಣ್ಣಯ್ಯ (ನೆನೆಸಿಕೊಂಡರೇ ಮೈ ನಡುಗುತ್ತದೆ!) ಬಿ ಎಸ್ಸಿ ಮ್ಯಾಥಮ್ಯಾಟಿಕ್ಸ್ ಆನರ್ಸ್ ಗೆ ಸೇರಿದ್ದ. ಶ್ರೀಕಂಠ ಮೇಷ್ಟ್ರಿಗೆ ಅಣ್ಣನ ಬಗ್ಗೆ ಅಪಾರ ಗೌರವ. ಅಣ್ಣನಿಗೂ ಅವರೆಂದರೆ ಬಲು ಪ್ರೀತಿ. ‘ಶ್ರೀಕಂಠು ನನ್ನ ದೊಡ್ಡ ಮಗನ ಹಾಗೆ’ ಎಂದು ಎಷ್ಟೋ ಸಲ ಅಣ್ಣ ಅಭಿಮಾನದಿಂದ ಉದ್ಗರಿಸಿದ್ದುಂಟು.

ಅಣ್ಣ ತುಂಬಾ ಉತ್ಸಾಹದಿಂದ ನಳಿನಿ ಅಕ್ಕನ ಮದುವೆ ಮೂರ್ತಿಯವರೊಂದಿಗೆ ನಿಶ್ಚಯವಾದ ಸಂಗತಿಯನ್ನು ಅವರ ಬಳಿ ಹೇಳಿದರು. ಶ್ರೀಕಂಠ ಮೇಷ್ಟ್ರೂ ಅಷ್ಟೇ ಸಂತೋಷ ಪಟ್ಟು ‘ಮದುವೆಯ ಖರ್ಚಿಗೆ ಏನು ವ್ಯವಸ್ಥೆ ಮಾಡಿಕೊಂಡಿದೀರಿ?’ ಎಂದರು. ‘ಚಿಂತೆಯಿಲ್ಲ ಶ್ರೀಕಂಠು.. ಹತ್ತಿರದ ಇಬ್ಬರು ಬಂಧುಗಳು ಸಂಪೂರ್ಣ ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ’ ಅಂದರು ಅಣ್ಣ. ‘ಒಳ್ಳೆಯದಾಯಿತು. ನನ್ನಿಂದ ಏನೇ ಅಳಿಲುಸೇವೆ ಆಗಬೇಕಿದ್ದರೂ ಯಾವ ಸಂಕೋಚವೂ ಇಲ್ಲದೆ ಕೇಳಿ’ ಎಂದು ನುಡಿದು ಮೇಷ್ಟ್ರು ಹೊರಡಲು ಅನುವಾದರು. ‘ಒಂದು ನಿಮಿಷ ತಡಿ ಶ್ರೀಕಂಠೂ.. ಬಂದೆ’ ಎಂದವರೇ ಅಣ್ಣ ಒಳಹೋಗಿ ಒಂದು ಕವರ್ ತೆಗೆದುಕೊಂಡು ಬಂದರು. ‘ತೊಗೋ ಶ್ರೀಕಂಠೂ, ಐನೂರು ರೂಪಾಯಿ ಇದೆ.. ಉಗಾದಿ ಸಮಯದಲ್ಲಿ ನಿನ್ನ ಕೈಲಿ ತೊಗೊಂಡಿದ್ದು… ನಳಿನೀದು ಕಡೇ ವರ್ಷ ಡಿಗ್ರೀದು ಸ್ಕಾಲರ್ ಷಿಪ್ ಹಣ ಮೊನ್ನೆ ಬಂತು.. ತೊಗೋಪ್ಪಾ.. ಮನೇಗೇ ಬಂದು ಕೊಡೋಣಾಂತಿದ್ದೆ.. ಹೇಗೂ ಬಂದಿದೀಯಲ್ಲಾ ಅಂತ ಇಲ್ಲೇ ಕೊಡ್ತಾ ಇದೀನಿ.. ಅನ್ಯಥಾ ಭಾವಿಸಬೇಡ’ ಅಂದರು ಅಣ್ಣ.

ನಿಜ ಹೇಳಬೇಕೆಂದರೆ ಶ್ರೀಕಂಠ ಮೇಷ್ಟ್ರಿಗೆ ಕೊಂಚ ಮುಜುಗರವೇ ಆಯಿತು. ‘ಅಯ್ಯೋ.. ನಾನು ಹಣಕ್ಕಾಗಿ ಬರಲಿಲ್ಲ.. ಈ ದಿಕ್ಕಿನಲ್ಲೇ ಸ್ವಲ್ಪ ಕೆಲಸವಿತ್ತು… ಹಾಗೇ ನಿಮ್ಮನ್ನು ಮಾತಾಡಿಸಿಕೊಂಡು ಹೋಗೋಣಾಂತ ಬಂದೆ… ಹಣಕ್ಕೇನೂ ಅರ್ಜೆಂಟ್ ಇಲ್ಲ.. ನಿಧಾನಕ್ಕೆ ಕೊಡಿ… ಛೇ.. ನಾನು ಬಂದಿದ್ದೇ ಅಚಾತುರ್ಯವಾಯಿತೇ’ ಎಂದು ಪರಿಪರಿಯಾಗಿ ಪೇಚಾಡಿಕೊಳ್ಳುತ್ತಿದ್ದ ಮೇಷ್ಟ್ರನ್ನು ಅಣ್ಣನೇ ಸಮಾಧಾನ ಪಡಿಸಬೇಕಾಯಿತು. ವಾಸ್ತವ ಸಂಗತಿ ಏನೆಂದರೆ ಅಣ್ಣನಿಗೆ ಬರುತ್ತಿದ್ದ ಸಂಬಳದಲ್ಲಿ ನೆಮ್ಮದಿಯಾಗಿ ಸಂಸಾರ ತೂಗಿಸಿಕೊಂಡು ಹೋಗುವುದು ದುಸ್ತರವಾಗಿತ್ತು.

ಒಂದು ಅನುಕೂಲ ಏನಾಗಿತ್ತೆಂದರೆ ನಮ್ಮೆಲ್ಲರಿಗೂ ಫ್ರೀಶಿಪ್ ಸೌಕರ್ಯ ದೊರೆತದ್ದರಿಂದ ಸ್ಕೂಲು-ಕಾಲೇಜುಗಳಿಗೆ ಫೀಸ಼್ ತುಂಬುವ ಗೋಜಿರಲಿಲ್ಲ. ಅದಲ್ಲದೆ ನಳಿನಿ ಅಕ್ಕ-ಕುಮಾರಣ್ಣಯ್ಯ ಇಬ್ಬರಿಗೂ ವರ್ಷಕ್ಕೆ ತಲಾ ಸಾವಿರ ರೂಪಾಯಿಗಳಷ್ಟು merit scholarship ಬರುತ್ತಿತ್ತು. ಆದರೆ ಆ ಹಣ ಕೈಸೇರುತ್ತಿದ್ದುದು ವರ್ಷದ ಕೊನೆಯಲ್ಲಿ! ಅಲ್ಲಿಯ ತನಕ ಮನೆ ನಡೆಸಿಕೊಂಡು ಹೋಗುವುದಾದರೂ ಹೇಗೆ? ಅಂಥ ಸಂದರ್ಭಗಳಲ್ಲೇ ಶ್ರೀಕಂಠ ಮೇಷ್ಟ್ರು ನಮ್ಮ ನೆರವಿಗೆ ಒದಗಿ ಬರುತ್ತಿದ್ದರು. ಅಣ್ಣ ಅಗತ್ಯ ಬಿದ್ದಾಗಲೆಲ್ಲಾ ಅವರಿಂದ ಹಣವನ್ನು ಪಡೆದುಕೊಂಡು ಬಂದು ಯಾರದಾದರೂ scholarship ಹಣ ಬರುತ್ತಿದ್ದಂತೆಯೇ ಮರಳಿಸಿಬಿಡುತ್ತಿದ್ದರು. ಶ್ರೀಕಂಠಮೇಷ್ಟ್ರು ಮಾತ್ರ ಎಂದೂ ಯಾವುದೇ ಕಾರಣಕ್ಕೂ ತಾವಾಗಿ ಹಣ ಮರಳಿಸಿರೆಂದು ಕೇಳಿದವರಲ್ಲ.

ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮವಾಗಲೀ ಅಲ್ಲಿ ಶ್ರೀಕಂಠ ಮೇಷ್ಟ್ರು ಇರಲೇಬೇಕು ಅನ್ನುವಷ್ಟರ ಮಟ್ಟಿಗೆ ಅವರು ನಮ್ಮ ಕುಟುಂಬದ ಅವಿಭಾಜ್ಯ ಅಂಗವೇ ಆಗಿ ಹೋಗಿದ್ದರು. ಇಂಥಾ ನಮ್ಮೆಲ್ಲರ ಅಚ್ಚುಮೆಚ್ಚಿನ, ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ವಿದ್ಯಾದಾನ ಮಾಡಿ ಅಭಿಮಾನಿ ವೃಂದಗಳನ್ನೇ ಹೊಂದಿದ್ದ, ಸದಾ ಜನಹಿತವನ್ನೇ ಬಯಸುತ್ತಿದ್ದ ಶ್ರೀಕಂಠ ಮೇಷ್ಟ್ರು ಇತ್ತೀಚೆಗಷ್ಷೇ ತೀವ್ರ ಅನಾರೋಗ್ಯದಿಂದ ತೀರಿಕೊಂಡರೆಂಬ ವರ್ತಮಾನ ಬಂತು. ನಿರ್ಮಲ ಪ್ರೀತಿ—ಅಂತಃಕರಣಗಳ, ವಾತ್ಸಲ್ಯ-ವಿಶ್ವಾಸಗಳ ಕೊಂಡಿಯೊಂದು ಕಳಚಿದಂತಾಗಿ ಹೃದಯ ಭಾರವಾಯಿತು.

ಅಕ್ಕ—ಅಣ್ಣಯ್ಯ ಇಬ್ಬರಿಗೂ merit scholarship ಬರುತ್ತಿತ್ತು ಎಂದೆನಲ್ಲಾ, ಅಣ್ಣ ಆಪ್ತೇಷ್ಟರ ಮುಂದೆ, ‘ನನ್ನ ಮಕ್ಕಳು ಜಾಣ ಮಕ್ಕಳು ಕಣ್ರೀ!.. ಮೆರಿಟ್ ಸ್ಕಾಲರ್ ಶಿಪ್ ತೊಗೊಂಡು ನನ್ನ ಹೆಗಲ ಮೇಲಿನ ಹೊರೆಯ ಭಾರಾನ ಕಡಿಮೆ ಮಾಡಿಬಿಟ್ರು!’ ಎಂದು ಕಣ್ಣು ತುಂಬಿಕೊಂಡು ಹೆಮ್ಮೆಯಿಂದ ನುಡಿಯುತ್ತಿದ್ದುದು ಇನ್ನೂ ನನ್ನ ಕಿವಿಗಳಲ್ಲಿ ಮೊರೆಯುತ್ತಿದೆ. ಇನ್ನೊಂದು ಮನತಟ್ಟುವ ಪ್ರಸಂಗವೂ ಇದೇ ಹೊತ್ತಲ್ಲಿ ನೆನಪಿಗೆ ಬರುತ್ತಿದೆ:

ಒಂದು ದಿನ ನಳಿನಿ ಅಕ್ಕ ತನ್ನದೇ ಕೆಲವು ಪುಸ್ತಕಗಳನ್ನು ಬಣ್ಣ ಬಣ್ಣದ ಕಾಗದಗಳಲ್ಲಿ ಸುತ್ತಿ ಉಡುಗೊರೆಯ ಹಾಗೆ ಸಿದ್ಧಪಡಿಸುತ್ತಿದ್ದಳು. ‘ಯಾರಿಗೆ ಪ್ರೈಜ಼್ ಕೊಡೋಕೆ ರೆಡಿ ಮಾಡ್ತಿದೀಯ ಅಕ್ಕಾ?’ ಎಂದು ಮಿಂಚಿ ಕುತೂಹಲದಿಂದ ಕೇಳಿದಳು. ಅಕ್ಕ ಸಣ್ಣಗೆ ನಕ್ಕು, ‘ನಾನು ಯಾರಿಗೂ ಪ್ರೈಜ಼್ ಕೊಡ್ತಿಲ್ಲ… ಕಾಲೇಜ್ ನವರೇ ನಂಗೆ ಈ ಪ್ರೈಜ಼್ ಕೊಡ್ತಾರೆ’ ಅಂದಳು. ಮಿಂಚಿಗೂ ಅಲ್ಲೇ ಇದ್ದ ನನಗೂ ತಲೆ ಬುಡ ಅರ್ಥವಾಗಲಿಲ್ಲ. ಆಮೇಲೆ ಅಕ್ಕನೇ ವಿವರಿಸಿ ಹೇಳಿದಳು. ಅಕ್ಕನಿಗೆ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತ್ತು.

ಕಾಲೇಜ್ ಆಡಳಿತ ವರ್ಗದವರು ಪ್ರೈಜ಼್ ಹಣವಾದ 25 ರೂಪಾಯಿಗಳನ್ನು ಅಕ್ಕನಿಗೆ ಕೊಟ್ಟು ‘ನಿಮಗೆ ಬೇಕಾದ ಪುಸ್ತಕಗಳನ್ನು ನೀವೇ ಕೊಂಡು ತಂದುಕೊಡಿ, ಅದನ್ನೇ ನಿಮಗೆ ಸ್ಟೇಜ್ ಮೇಲೆ ಬಹುಮಾನವಾಗಿ ಕೊಡುತ್ತೇವೆ’ ಎಂದಿದ್ದರಂತೆ. ಅಕ್ಕ, ‘ಹೊಸ ಪುಸ್ತಕಕ್ಕೆ ಯಾಕೆ ದುಡ್ಡು ದಂಡ ಮಾಡುವುದು? ಬಣ್ಣದ ಪೇಪರ್ ನಲ್ಲಿ ಇರುವ ಪುಸ್ತಕಗಳನ್ನೇ ಸುಂದರವಾಗಿ ಸುತ್ತಿಕೊಟ್ಟರಾಯಿತು; ಪುಸ್ತಕ ಹೊಸತೋ ಹಳೆಯದೋ ಎಂದು ಕಾಲೇಜ್ ನವರಿಗೆ ಹೇಗೆ ಗೊತ್ತಾಗುತ್ತದೆ?’ ಎಂದು ಆಲೋಚನೆ ಮಾಡಿ, ತನ್ನದೇ ಪುಸ್ತಕಗಳ ತನ್ನದೇ ಬಹುಮಾನವನ್ನು ಸಿದ್ಧಪಡಿಸಿ ಕೊಟ್ಟಿದ್ದಳು. ಬಹುಮಾನದ ಹಣ 25 ರೂಪಾಯಿಗಳನ್ನು ಸೀದಾ ಅಣ್ಣನ ಕೈಗೆ ಹಾಕಿ, ‘ಇಟ್ಟುಕೊಳ್ಳಿ ಅಣ್ಣಾ.. ಮನೆಯ ಖರ್ಚಿಗಾಗುತ್ತದೆ’ ಎಂದು ಹೇಳಿ ತನ್ನ ಜವಾಬ್ದಾರಿಯನ್ನು ಮೆರೆದು ಅಣ್ಣನ ಕಣ್ಣಲ್ಲಿ ನೀರು ತರಿಸಿದ್ದಳು.

ನಳಿನಿ ಅಕ್ಕನ ಬಿ ಎಸ್ಸಿ ಕೊನೇ ವರ್ಷದ ಪರೀಕ್ಷೆಗಳು ಮುಗಿದಿದ್ದವು. ನನ್ನ PUC ಪರೀಕ್ಷೆಗಳಿಗೆ ಹೆಚ್ಚುಕಡಿಮೆ ಒಂದು ತಿಂಗಳ ಸಮಯವಿತ್ತು. ಅಕ್ಕ ಪರೀಕ್ಷೆಯ ಫಲಿತಾಂಶಗಳು ಬರುವ ಮುನ್ನವೇ ಸುಮಾರು ಶಾಲೆಗಳಿಗೆ ಕೆಲಸಕ್ಕೆ ಅರ್ಜಿ ಹಾಕಿಕೊಂಡಿದ್ದಳು. ಒಂದು ಮಧ್ಯಾಹ್ನ ಎಲ್ಲರೂ ಮನೆಯಲ್ಲಿ ಇದ್ದ ಹೊತ್ತಿನಲ್ಲಿ ಅಪರಿಚಿತರೊಬ್ಬರು ನಳಿನಿ ಅಕ್ಕನನ್ನು ಹುಡುಕಿಕೊಂಡು ಬಂದರು. ಅಣ್ಣನೇ ಅವರನ್ನು ಒಳಗೆ ಕರೆದು ಕೂರಿಸಿ ಅವರು ನಮ್ಮಲ್ಲಿಗೆ ಬಂದ ಕಾರಣವನ್ನು ವಿಚಾರಿಸಿದರು.

ನಳಿನಿ ಅಕ್ಕನಿಗೆ ಯಾವುದೋ ಗಂಡನ್ನು ಸೂಚಿಸಲು ಬಂದಿರಬಹುದು ಎಂಬುದು ಅಣ್ಣನ ಮೊದಲ ಗ್ರಹಿಕೆಯಾಗಿತ್ತು. ಆದರೆ ಅವರು ತಾವು ಬಂದ ಕಾರಣವನ್ನು ವಿವರಿಸಿದ ಮೇಲೆ ನಾವೆಲ್ಲರೂ ಮೂಕ ವಿಸ್ಮಿತರಾಗಿಬಿಟ್ಟೆವು. ಅಣ್ಣನಿಗಂತೂ ತುಸು ಹೊತ್ತು ಮಾತೇ ಹೊರಡಲಿಲ್ಲ. ಆ ಆಗಂತುಕರ ಮಾತುಗಳಲ್ಲೇ ಹೇಳುವುದಾದರೆ: ‘ನನ್ನ ಹೆಸರು ರಾಮಚಂದ್ರಯ್ಯ. ಹಿರಿಯೂರು ಹೈಸ್ಕೂಲ್ ನ ಹೆಡ್ ಮಾಸ್ಟರ್. ಜೊತೆಗೆ ಸ್ಕೂಲಿನ ಆಡಳಿತದ ಮೇಲ್ವಿಚಾರಣೆಯನ್ನೂ ನಾನೇ ವಹಿಸಿ ಕೊಂಡಿದ್ದೇನೆ. ನಮ್ಮ ಶಾಲೆಗೆ ಅಧ್ಯಾಪಕರು ಬೇಕು ಎಂದು ನಾವು ಜಾಹೀರಾತು ನೀಡಿದ್ದೆವು. ನಿಮ್ಮ ಮಗಳು ನಳಿನಾಂಬಾ ಅವರು (ಅಕ್ಕನ ಮೊದಲ ಹೆಸರು ಇದ್ದದ್ದು ಹಾಗೆ!) ಕೆಲಸಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. ಅವರ ಅರ್ಜಿ ಹಾಗೂ ಸಲ್ಲಿಸಿರುವ ಸ್ವವಿವರಗಳ ಪಟ್ಟಿಯನ್ನು ನೋಡಿದ ಮೇಲೆ ನಮ್ಮ ಶಾಲೆಗೆ ಇಂಥಾ ಪ್ರತಿಭಾವಂತರ ಅಗತ್ಯ ಇದೆ ಎಂದು ನನಗನ್ನಿಸಿತು. ಬೇರೆ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದೆ. ನಿಮ್ಮ ವಿಳಾಸ ಇತ್ತಲ್ಲಾ, ಮುಖತಃ ಭೇಟಿಯಾಗಿ ನಮ್ಮ ಒಪ್ಪಿಗೆ ತಿಳಿಸಿ ನಿಮಗೂ ಬರಲು ಆಸಕ್ತಿ ಇದೆಯೇ ಎಂದು ವಿಚಾರಿಸಿಕೊಂಡು ಹೋಗಲು ಬಂದೆ. ನಮ್ಮ ತೀರ್ಮಾನ ಆಗಿಹೋಗಿದೆ. ನಳಿನಾಂಬಾ ಅವರು ಹೂಂ ಎಂದರೆ ಮುಂದಿನ ವಾರದಿಂದಲೇ ಕೆಲಸಕ್ಕೆ ಬರಬಹುದು. ಹೇಗೂ high first class ಫಲಿತಾಂಶದ ನಿರೀಕ್ಷೆಯಿದೆ ಎಂದು ಅರ್ಜಿಯಲ್ಲಿ ಬರೆದಿದ್ದೀರಿ. ನಮ್ಮ ಕಡೆಯಿಂದ ಯಾವ ತೊಂದರೆಯೂ ಇಲ್ಲ. ಬೇಕಿದ್ದರೆ ಒಂದೆರಡು ದಿನ ಕಾಲಾವಕಾಶ ತೆಗೆದುಕೊಂಡು ತಿಳಿಸಿದರೂ ಅಡ್ಡಿಯಿಲ್ಲ. ನಾವು ಕಾಯುತ್ತೇವೆ’. ಎಂದು ಅವರು ಮಾತು ಮುಗಿಸಿ ಪ್ರಶ್ನಾರ್ಥಕವಾಗಿ ಅಣ್ಣನನ್ನೂ ಅಕ್ಕನನ್ನೂ ನೋಡಿದರು.

ಆಗಿದ್ದ ಸಂತಸ-ವಿಸ್ಮಯಗಳ ಗುಂಗಿನಿಂದ ಹೊರಬಂದು ಅಣ್ಣ ಕಣ್ಸನ್ನೆಯಲ್ಲೇ ಅಕ್ಕನ ಒಪ್ಪಿಗೆಯನ್ನು ಪಡೆದುಕೊಂಡು ಮುಂದಿನ ಹತ್ತು ದಿನಗಳಲ್ಲೇ ಅಕ್ಕ ಕೆಲಸಕ್ಕೆ ಬರುತ್ತಾಳೆಂದು ಒಪ್ಪಿಗೆ ನೀಡಿ ರಾಮಚಂದ್ರಯ್ಯನವರನ್ನು ಬೀಳ್ಕೊಂಡರು. ಅಣ್ಣನಿಗಂತೂ ಇದು ದಿಟವೇ ಎಂದು ಚಿವುಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ ಬೆರಗು! ‘ಹೀಗೂ ಆಗುವುದುಂಟೇ… ಮನೆ ಬಾಗಿಲಿಗೆ ತಾವಾಗಿ ಬಂದು ಕೆಲಸಕ್ಕೆ ಆಹ್ವಾನ ನೀಡುವುದೆಂದರೆ ನಂಬಲು ಸಾಧ್ಯವೇ?’ ಎಂದು ಅಣ್ಣ ಒಂದೇ ಸಮನೆ ಆಶ್ಚರ್ಯದಿಂದ ಉದ್ಗರಿಸುತ್ತಿದ್ದರು.

ತಮ್ಮ ವಿದ್ಯೆ—ವಿದ್ವತ್ತಿಗೆ ತಕ್ಕ ಕೆಲಸ ಸಿಗದೆ, ಸಿಕ್ಕ ಅರೆಕಾಲಿಕ ವೃತ್ತಿಗಳು ಜಾತಿ-ವಶೀಲಿಗಳ ಕಾರಣಕ್ಕೆ ದೃಢೀಕರಣಗೊಳ್ಳದೆ ಬವಣೆಪಟ್ಟ ಅನುಭವಗಳ ಹಿನ್ನೆಲೆಯಲ್ಲಿ ಅವರಿಗೆ ಈ ಘಟನೆಯಿಂದ ಆ ಮಟ್ಟಿಗೆ ಆಶ್ಚರ್ಯವಾದುದು ಸಹಜವೇ ಆಗಿತ್ತು. ಗಸಗಸೆ ಪಾಯಸದ ಜತೆ ಸಂಭ್ರಮಾಚರಣೆಯೂ ನೆರವೇರಿ, ಪ್ರಾರಂಭದ ಕೆಲ ದಿನಗಳ ಮಟ್ಟಿಗೆ ಅಣ್ಣನೇ ಅಕ್ಕನ ಜೊತೆಯಲ್ಲಿ ಹಿರಿಯೂರಿನಲ್ಲಿದ್ದು ಎಲ್ಲಾ ವ್ಯವಸ್ಥೆ ಮಾಡಿಕೊಟ್ಟು ಬರುವುದೆಂದೂ ನಿರ್ಧಾರವಾಯಿತು.

ಎಲ್ಲರ ಮನಸ್ಸಿಗೆ ಅಷ್ಟು ಮುದ ನೀಡಿದ ಈ ಘಟನೆಯ ಬೆನ್ನಿಗೇ ನಾಲ್ಕಾರು ದಿನಗಳಲ್ಲೇ ಎಲ್ಲರನ್ನೂ ವಿಚಲಿತರನ್ನಾಗಿಸಿದ ಮತ್ತೊಂದು ಘಟನೆ ನಡೆಯಿತು.

ಒಂದು ಸಂಜೆ ನಾನು ಆಟ ಮುಗಿಸಿಕೊಂಡು ಬಂದು ಮನೆಯ ಒಳಗೆ ಕಾಲಿಡುತ್ತಿದ್ದಂತೆಯೇ ಇದ್ದಕ್ಕಿದ್ದ ಹಾಗೆ ಅಣ್ಣ ‘ದತ್ತಾ.. ದತ್ತಾ.. ಇದೇನು ಗತಿ ತಂದೆಯಪ್ಪಾ’ ಎಂದು ದುಃಖಿಸುತ್ತಿರುವುದು ಕೇಳಿಸಿತು. ನೋಡಿದರೆ ಅಣ್ಣ ಹಾಲ್ ನ ಮಧ್ಯಭಾಗದಲ್ಲಿ ಹಾಕಿದ್ದ ಚಾಪೆಯ ಮೇಲೆ ಅಂಗಾತ ಮಲಗಿ ಬಿಕ್ಕುತ್ತಿದ್ದಾರೆ.. ಸಂಕಟ—ದುಃಖಭಾರದಿಂದ ಕಣ್ಣೀರು ಧಾರೆಯಾಗಿ ಸುರಿಯುತ್ತಿದೆ… ಅಣ್ಣನ ಅಳಲಿನ ಧ್ವನಿ ಕೇಳುತ್ತಿದ್ದಂತೆಯೇ ಅಮ್ಮ, ಅಕ್ಕ, ಅಣ್ಣಯ್ಯ, ಮಿಂಚಿ ಎಲ್ಲರೂ ಹೊರಬಂದು ಅಣ್ಣನನ್ನು ಮೇಲೆಬ್ಬಿಸುತ್ತಾ, ‘ಯಾಕಣ್ಣಾ, ಏನಾಯ್ತು? ಯಾಕೆ ಹೀಗೆ ದುಃಖಿಸ್ತಿದೀರಿ? ಏನಾಯ್ತು ಹೇಳಿ’ ಎಂದು ವಿಚಾರಿಸತೊಡಗಿದರು. ನಾನೂ ಅವರನ್ನು ಸೇರಿಕೊಂಡೆ. ‘ಮುಗಿದು ಹೋಯಿತು.. ನನ್ನ ಕಥೆ ಮುಗಿದುಹೋಯಿತು…. ನಾನೇನೂ ಮಾಡೋಕಾಗಲ್ಲ.. ನನಗೆ ಯಾರು ದಾರಿ ತೋರಿಸೋರು? ನೀವೇ ಎಲ್ಲಾ ನೋಡಿಕೋಬೇಕು’ ಎಂದು ಅಣ್ಣ ಒಂದೇ ಸಮನೆ ಹಳಹಳಿಸುತ್ತಲೇ ಇದ್ದರು.

ಎಂಥ ಸಂದರ್ಭದಲ್ಲೂ ಧೃತಿಗೆಡದ ಅಣ್ಣ, ಆತ್ಮವಿಶ್ವಾಸದ ಪ್ರತಿರೂಪದಂತೆ ಎದೆಯುಬ್ಬಿಸಿ ತಲೆ ಎತ್ತಿ ನಡೆಯುತ್ತಿದ್ದ ಅಣ್ಣ ಹೀಗೆ ಹತಾಶೆಯಲ್ಲಿ ಬಡಬಡಿಸುತ್ತಿರುವುದು ನೋಡಿ ಎಲ್ಲರಿಗೂ ಒಂದೆಡೆ ಆಶ್ಚರ್ಯ, ಮತ್ತೊಂದೆಡೆ ಏನಾಗಿಹೋಯಿತೋ ಎಂಬ ಆತಂಕ. ಅದೇ ವೇಳೆಗೆ ಸರಿಯಾಗಿ ಮೂರ್ತಿ ಮಾವಯ್ಯನೂ ಆಕಸ್ಮಿಕವಾಗಿ ನಮ್ಮ ಮನೆಗೆ ಬಂದರು. ಆಗಲೇ ಅಲ್ಲೇ ಚಾಪೆಯ ಅಡಿಯಲ್ಲಿದ್ದ ಒಂದು ಇನ್ ಲ್ಯಾಂಡ್ ಪತ್ರ ನಳಿನಿ ಅಕ್ಕನ ಕಣ್ಣಿಗೆ ಬಿತ್ತು. ಪತ್ರ ಕೈಗೆತ್ತಿಕೊಂಡ ಅಕ್ಕ ಪ್ರಶ್ನಾರ್ಥಕವಾಗಿ ಅಣ್ಣನನ್ನು ನೋಡಿದಳು. ಅಣ್ಣ ಹೌದೆಂಬಂತೆ ತಲೆ ಆಡಿಸಿದರು. ಅಕ್ಕ ಪತ್ರವನ್ನು ಬಿಡಿಸಿ ಜೋರಾಗಿ ಓದಲಾರಂಭಿಸಿದಳು: ‘ನಳಿನಿಯ ಮದುವೆ ನಿಶ್ಚಯವಾದ ಸುದ್ದಿ ಕೇಳಿ ಬಹಳ ಸಂತೋಷವಾಯಿತು. ಮದುವೆಯ ಎಲ್ಲಾ ಶುಭಕಾರ್ಯಗಳೂ ನಿರ್ವಿಘ್ನವಾಗಿ ನಡೆಯಲೆಂದು ಹಾರೈಸುತ್ತೇನೆ. ಆದರೆ ಈ ಸಂದರ್ಭದಲ್ಲಿ ನನ್ನಿಂದ ಯಾವುದೇ ಸಹಾಯವನ್ನೂ ನಿರೀಕ್ಷಿಸಬೇಡಿ. ಹಿಂದೊಮ್ಮೆ ಕೈಲಾದ ಸಹಾಯ ಮಾಡುತ್ತೇನೆಂದು ಹೇಳಿದ್ದು ನಿಜ. ಆದರೆ ಈಗ ನಮ್ಮ ಮನೆಯ ಪರಿಸ್ಥಿತಿಯೂ ಹದಗೆಟ್ಟಿರುವುದರಿಂದ ನನ್ನ ಕೈಗಳು ಕಟ್ಟಿಹಾಕಿದಂತಾಗಿ ಬಿಟ್ಟಿವೆ. ಅನ್ಯಥಾ ಭಾವಿಸಬೇಡಿ.’ ಅಣ್ಣನ ಹತ್ತಿರದ ಬಂಧುವೊಬ್ಬರು ಬರೆದಿದ್ದ ಪತ್ರ ಅದು. ಅಣ್ಣ ಮತ್ತೆ ಬಿಕ್ಕತೊಡಗಿದರು: ‘ಮದುವೆ ಖರ್ಚಿನ ಬಗ್ಗೆ ಏನೂ ಯೋಚಿಸಬೇಡ. ನಾವು ನೋಡಿಕೋತೀವಿ ಅಂತ ನನಗೆ ಭರವಸೆ ಕೊಟ್ಟಿದ್ದೇ ಇಬ್ಬರು. ಒಬ್ಬ ಮೊನ್ನೆ ಸಿಕ್ಕವನು, ‘ನನ್ನ ಕೈಲಿ ಏನೂ ಸಹಾಯ ಮಾಡೋಕಾಗಲ್ಲ’ ಅಂತ ತಾರಮ್ಮಯ್ಯ ಆಡಿಸಿಬಿಟ್ಟ… ಇನ್ನೊಬ್ಬ ಹೀಗೆ ಪತ್ರ ಬರೆದಿದಾನೆ.. ನಾನೋ ಮೊದಲೇ ಪುರಂದರ ವಿಠಲ… ಈಗೇನು ಮಾಡಲಿ ಹೇಳಿ? ಯಾರ ಹತ್ರ ಭಿಕ್ಷೆ ಬೇಡಲಿ ಹೇಳಿ…’ ಅಣ್ಣನ ಮಾತುಗಳನ್ನು ಕೇಳಿ ನಮಗೂ ದುಃಖ ಒತ್ತರಿಸಿಕೊಂಡು ಬಂತು. ‘ನೀವು ಹೀಗೆಲ್ಲಾ ಅಳಬೇಡಿ.. ನಾವೆಲ್ಲರೂ ನಿಮ್ಮ ಜೊತೇಗಿದೀವಿ.. ಏನೇ ಕಷ್ಟ ಬಂದರೂ ಎಲ್ಲರೂ ಒಟ್ಟಿಗೇ ಎದುರಿಸೋಣ’ ಎಂದು ಅಣ್ಣನಿಗೆ ಸಮಾಧಾನ ಹೇಳುತ್ತಲೇ ಅಮ್ಮ-ಅಕ್ಕ-ಅಣ್ಣಯ್ಯರೂ ಅಳತೊಡಗಿದರು. ಎಲ್ಲರೂ ಅಳುತ್ತಿದ್ದುದು ನೋಡಿ ನಾನೂ ಮಿಂಚಿಯೂ ಜೋರಾಗಿಯೇ ಅಳತೊಡಗಿದೆವು.

ನಮ್ಮ ಸಾಮೂಹಿಕ ರೋದನವನ್ನು ನೋಡುತ್ತಿದ್ದ ಮೂರ್ತಿ ಮಾವಯ್ಯ, ‘ಸ್ವಲ್ಪ ಎಲ್ಲರೂ ಅಳು ನಿಲ್ಲಿಸಿ ಸುಮ್ಮನಿರ್ತೀರಾ? ಏನೂ ಆಗಬಾರದ್ದು ಆಗಿಹೋಗಿಲ್ಲ’ ಎಂದು ಎಲ್ಲರ ಅಳುವಿಗೆ ಕಡಿವಾಣ ಹಾಕಿ ಅಣ್ಣನತ್ತ ತಿರುಗಿ ಮಾತಾಡತೊಡಗಿದರು : ‘ನೋಡಿ ಮಾವಯ್ಯನೋರೇ, ಸ್ಪಷ್ಟವಾಗಿ ಹೇಳ್ತಿದೀನಿ ಕೇಳಿಸಿಕೊಳ್ಳಿ. ನಾನು, ಮದುವೆ ಗಂಡು, ನಿಮ್ಮ ಭಾವೀ ಅಳಿಯ ಹೇಳ್ತಿದೀನಿ-ನಮ್ಮ ಮದುವೆಗೆ ನೀವು ಒಂದು ಬಿಡಿಗಾಸೂ ಖರ್ಚು ಮಾಡಬೇಕಾಗಿಲ್ಲ. ನಳಿನಿ ಕುತ್ತಿಗೆಗೆ ಅರಿಶಿನದ ಕೊಂಬಿನ ತಾಳಿ ಕಟ್ಟಿ ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆ ಶಾಸ್ತ್ರ ಮುಗಿಸ್ತೀವಿ.. ಯಾವ ಆಡಂಬರವೂ ಬೇಡ.. ಅನಗತ್ಯ ಖರ್ಚೂ ಬೇಡ… ದೊಡ್ಡವರು ನಾಲ್ಕು ಜನ ತಲೆ ಮೇಲೆ ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡಿ ಸಾಕು’ ಅಂದರು ಮೂರ್ತಿ ಮಾವಯ್ಯ. ‘ಅಯ್ಯೋ.. ಹಾಗಂದರೆ ಹೇಗಾಗುತ್ತೆ ಮೂರ್ತಿಗಳೇ? ಲೋಕಾರೂಢಿ ಪ್ರಕಾರ ಎಲ್ಲಾ ನಡೀಬೇಕಲ್ಲವೇ? ಇಲ್ಲದಿದ್ದರೆ ಸುತ್ತಮುತ್ತಲ ಬಳಗದವರ ಆಡಿಕೊಳ್ಳೊ ಬಾಯಿಗೆ ಆಹಾರ ಆಗಿಬಿಡೋಲ್ಲವೇ ನಾವು?’ ಎಂದು ಅಣ್ಣ ಮತ್ತೆ ದುಃಖಿಸತೊಡಗಿದರು.

ಮೂರ್ತಿ ಮಾವಯ್ಯ ಸುಮ್ಮನಾಗಲಿಲ್ಲ. ‘ಮಣ್ಣಾಂಗಟ್ಟಿ.. ಯಾವ ಲೋಕಾರೂಢಿ ಬಗ್ಗೆ ಮಾತಾಡ್ತಿದೀರಿ? ನಮಗೆಲ್ಲಾ ಬದುಕಿನ ಪಾಠ ಹೇಳಿಕೊಟ್ಟ ನೀವೇ ಹೀಗೆ ಮಾತಾಡಿದರೆ ಹೇಗೆ? ನಮ್ಮ ಅನುಕೂಲಕ್ಕೆ, ನಮ್ಮ ಸಾಮರ್ಥ್ಯಕ್ಕೆ ತಕ್ಕಹಾಗೆ ನಾವು ಬದುಕಬೇಕು.. ಯಾರಿಗೂ ಯಾವ ಸಮಜಾಯಿಷೀನೂ ಕೊಡೋ ಅಗತ್ಯ ಇಲ್ಲ… ಇನ್ನೂ ಒಂದು ಮಾತು ಹೇಳಿಬಿಡ್ತೀನಿ ಕೇಳಿ: ನಳಿನೀಗೆ ಹಿರಿಯೂರಲ್ಲಿ ಕೆಲಸ ಸಿಕ್ಕಿದೆ ಅಲ್ಲವಾ? ನಮ್ಮ ಮದುವೆಯಾದ ಮೇಲೂ ಅವಳ ಪೂರ್ತಿ ಸಂಬಳ ನಿಮ್ಮ ಕುಟುಂಬಕ್ಕೇ ಮೀಸಲಾಗಿರುತ್ತೆ. ಕುಮಾರನ ಓದು ಮುಗಿದು ಅವನಿಗೊಂದು ಕೆಲಸ ಸಿಗೋವರೆಗೂ ಇದೇ ವ್ಯವಸ್ಥೆ ಮುಂದುವರಿಯುತ್ತೆ. ಇದು ಕೊನೆ, ಇನ್ನು ಈ ಥರದ ಕಾರಣಗಳಿಗಾಗಿ ಈ ಮನೆಯಲ್ಲಿ ಯಾರ ಕಣ್ಣಲ್ಲೂ ನೀರು ಬರಬಾರದು.. ಅಷ್ಟೇ!’ ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಿಬಿಟ್ಟರು ಮೂರ್ತಿ ಮಾವಯ್ಯ.

ಇಷ್ಟು ಹೇಳಿ ಮುಗಿಸುವ ವೇಳೆಗೆ ಸ್ವತಃ ಮಹಾ ಭಾವಜೀವಿಯಾದ ಅವರ ಕಣ್ಣಂಚಿನಲ್ಲೇ ನೀರು ತುಂಬಿ ನಿಂತಿತ್ತು! ಹೊಸ ಭರವಸೆಗಳು ಅಣ್ಣ-ಅಮ್ಮರ ಮುಖದಲ್ಲಿ ನೆಮ್ಮದಿ-ಸಮಾಧಾನದ ರೇಖೆಗಳನ್ನು ಮೂಡಿಸಿದರೆ, ‘ಇಂಥಾ ಉದಾತ್ತ ವಿಚಾರಗಳ ಆದರ್ಶಪುರುಷ ನಮ್ಮ ಕುಟುಂಬದವರೇ ಆಗುತ್ತಿದ್ದಾರಲ್ಲಾ’ ಎಂಬ ಹೆಮ್ಮೆಯಿಂದ ನಾವು ಬೀಗುತ್ತಿದ್ದೆವು. ನನಗಂತೂ ನಾನು ನೋಡಿದ ಎಲ್ಲಾ ಸಿನೆಮಾ ಹೀರೋಗಳಿಗಿಂತಲೂ ತುಂಬಾ.. ತುಂಬಾ ಒಳ್ಳೆಯವರಾಗಿ, ತುಂಬಾ ಗ್ರೇಟ್ ಆಗಿ ಕಂಡರು ಮೂರ್ತಿ ಮಾವಯ್ಯ!!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: