ಥ್ಯಾಂಕ್ಸ್ ಪ್ಯಾಪಿ!!

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ. ಪ್ರತೀ ಗುರುವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

“No iron can pierce the heart with such force as a period put just at the right place.”

– Carver, Raymond. Where I’m Calling From. Random House. Kindle Edition.

ಸರಿಯಾದ ಸ್ಥಳದಲ್ಲಿಡುವ ಪೂರ್ಣವಿರಾಮ ಚುಚ್ಚುವಷ್ಟು ತೀಕ್ಷ್ಣವಾಗಿ ಯಾವ ಭರ್ಜಿಯೂ ಸಹ ಹೃದಯವನ್ನು ಇರಿಯಲಾರದು.

ಕಾರಣ ಇಲ್ಲದೇ ಸಂಬಂಧಗಳ ವಿಷಯದಲ್ಲಿ ಸುಮ್ಮನುಳಿಯುವ, ಇಲ್ಲದ ಕಾರಣಕ್ಕೆ ಸಂಬಂಧಗಳಿಂದ ಎದ್ದು ನಡೆಯುವ ಕ್ರಿಯೆ-ಪ್ರಕ್ರಿಯೆ ನಡೆದಾಗ ನೆನಪಾಗುವ ಸಾಲಿದು.

ತಿಳಿ ತಿಳಿದೂ ತಪ್ಪು ಮಾಡಿದಾಗಲೂ ಪಾಪಪ್ರಜ್ಞೆಯಿಲ್ಲದ ಹಸನಾದ ಬದುಕೊಂದನ್ನು ಬದುಕಲು ತೀರ್ಮಾನಿಸಿದ ನಂತರ ನಾನು ಸುಮ್ಮನುಳಿಯುವ, ಎದ್ದು ನಡೆಯುವ ಎರಡನ್ನೂ ಮಾಡಿದ್ದೇನೆ!

ಬೌದ್ಧಿಕ ವೇಗಕ್ಕೆ (Intellectual Speed) ಆಸ್ಪದ ಇಲ್ಲದ ಯಾವುದರಲ್ಲೂ ನನ್ನ ಮನಸ್ಸು ನಿಲ್ಲುವುದಿಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ… ಗಂಡನ ಸೋಮಾರಿತನದ ಬಗ್ಗೆ ಗೊಣಗದೆ, ಮಕ್ಕಳ ಸ್ಕೂಲು-ಫೀಸು, ಪ್ರೋಗ್ರೆಸ್ ರಿಪೋರ್ಟ್, ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ, ಮಳೆ ಬಂತು ಬಟ್ಟೆ ಒಳಗೆ ಹಾಕು, ಬಿಸಿಲು ಬಿತ್ತೇ ಹೊರಗೆ ಹಾಕು, ಕಾಂಪೌಂಡಿನೊಳಗೆ ಹಂದಿ-ನಾಯಿ ನುಗ್ಗುವ ಮೊದಲಾದ ಲೌಕಿಕ ವಿಷಯಗಳ ಬಗ್ಗೆ ಯೋಚಿಸದೆ-ಬರೆಯದೇ ಭೌತಿಕ ಮತ್ತು ನನ್ನ ಭಾವನಾ ಜಗತ್ತಿನ ನಡುವೆ ಒಂದು ಕ್ಷೇಮದ ಅಂತರ ಕಾಯ್ದುಕೊಂಡಿರುವುದು ನಿಜಕ್ಕೂ ನನ್ನನ್ನ ನನ್ನನ್ನಾಗಿ ಬದುಕಿಸಿದೆ.

ಅನಿಶ್ಚಯದಲ್ಲಿರುವ ಬೆರಗು, ವಿಸ್ಮಯಕ್ಕಾಗಿ ಎಲ್ಲರೊಡನಿದ್ದೂ ಎಲ್ಲರಂತಾಗದೆ ಸದಾ ಏನೋ ಒಂದು ಬಗೆಯ ಹುಡುಕಾಟದಲ್ಲಿ ಇದ್ದದ್ದನ್ನು ಬಿಟ್ಟು ಎದ್ದು ಹೊರಡುವಾಗ, ಸಂಗದೊಳಗಿದ್ದೂ ನಿಸ್ಸಂಗಿಯಾದಾಗ ನಾನೇಕೆ ಹೀಗೆ ಎನ್ನುವ ಪ್ರಶ್ನೆ ಒಳಗಿಂದ ಕಟಿಯುತ್ತದೆ. ಆಗ ನನ್ನಿಷ್ಟದ ಚಂದ್ರನಿಗಾಗಿ ಆಕಾಶದ ಕಡೆ ಮುಖ ಮಾಡುತ್ತೇನೆ.

ಎಲ್ಲ ಕಾಲದಲ್ಲೂ ಏಕಾಂತ ಮತ್ತು ಸ್ವಾತಂತ್ರ್ಯ (ಸ್ವೇಚ್ಛೆ ಅಲ್ಲ) ಪ್ರಾಣಕ್ಕಿಂತ ಮಿಗಿಲೆಂದು ಭಾವಿಸಿ ನಿನ್ನಂತೆ ಅತಿರೇಕದ ಅಂಚಿನಲ್ಲಿ ಬದುಕುವ-ಬದುಕಿದ ಜೀವಗಳಿವೆ. ಹೀಗೆ ಒಂದು ಚೌಕಟ್ಟಿನ ವಾಸ್ತವಕ್ಕೆ ವಿರುದ್ಧವಾಗಿ ಮನುಷ್ಯ ಈ ರೀತಿ ಜಗ್ಗದಿದ್ದ ಪಕ್ಷದಲ್ಲಿ ಜೀವನದಲ್ಲಿ ಸೃಜಶೀಲತೆಯೇ ಇರುತ್ತಿರಲಿಲ್ಲ; ನಮ್ಮನ್ನು ನೋಯಿಸುವ ಚರಿತ್ರೆಯ ವಿಫಲತೆ ಈಗಿರುವುದಕ್ಕಿಂತಲೂ ಹೆಚ್ಚು ಭಯಾನಕವಾಗಿರುತ್ತಿತ್ತು. ಮನಸ್ಸು ಹಿಗ್ಗುವುದರಿಂದ ಹುಟ್ಟುವ ಚೈತನ್ಯವೇ ಈ ಎಲ್ಲ ಚಲನೆಯ ಮೂಲವಲ್ಲವೇ? ಎಂದು ‘ಪ್ಯಾಪಿಲಾನ್’ ಅಂತರಿಕ್ಷದಿಂದ ಕಣ್ಣು ಮಿಟುಕಿಸುತ್ತಾನೆ.

“ಇಲ್ಲಿಂದ ಹೋದ ಮೇಲೆ ನೀನು ಒಂದೇ ಒಂದು ಟೆಕ್ಸ್ಟ್ ಮಾಡುವುದಿಲ್ಲ ಅಂತ ನನಗೆ ಗೊತ್ತಿದೆ. ಒಲವು ಮತ್ತು ಏಕಾಂತಕ್ಕೆ ಮೂರ್ತರೂಪ ಕೊಟ್ಟರೆ ಹುಟ್ಟಿದಂತಹ ನೀನು ನನ್ನಿಂದ ದೂರಾಗಿ ಅನುಕ್ಷಣ ಕೊಲ್ಲುವ ಬದಲು ಒಮ್ಮೆಲೇ ಕೊಲೆ ಮಾಡಿ ದಯಾಮಯಿಯಾಗು,” ಎಂದು ಅಕ್ಷರಶಃ ಮಂಡಿಯೂರಿ ನಿಯತ್ತಿನ ಪಶ್ಚಾತ್ತಾಪವೊಂದನ್ನು ಹುಟ್ಟುಹಾಕಲು ಯತ್ನಿಸಿದವರೆದುರು, ಗಂಡ ಮನೆ ಮಕ್ಕಳು ಎನ್ನುವ ಅನುದಿನದ ಅಂತರಗಂಗೆಗಿಂತ ಮಿಗಿಲಾದ ಬದುಕನ್ನು ಬದುಕಲು ತೋರಿಸಿ ಕೊಟ್ಟದ್ದು ಪ್ಯಾಪಿಲಾನ್ ಕೆಳಗಿನ ಸಾಲುಗಳು

“… ಸರಿ ಮುಂದೇನು ಮಾಡುವುದು? ಮಹಾ ಯುದ್ಧದ ಸಮಯ. ಪ್ರಪಂಚದೆಲ್ಲೆಡೆ ಆರ್ಥಿಕ ಹಿಂಜರಿತದಿಂದಾಗಿ ನಿರುದ್ಯೋಗ ತಾಂಡವವಾಡುತ್ತಿತ್ತು. ಜಾರ್ಜ್ ಟೌನ್ ಸಹ ಇದಕ್ಕೆ ಹೊರತಾಗಿರಲಿಲ್ಲ. ವ್ಯಾಪಾರ, ವ್ಯವಹಾರಕ್ಕೆ ಅವಕಾಶಗಳೇ ಇದ್ದಂತಿರಲಿಲ್ಲ. ಕ್ವಿಕ್-ಕ್ವಿಕ್ ಮತ್ತು ವ್ಯಾನ್ ಪುನಃ ತರಕಾರಿ ವ್ಯಾಪಾರಕ್ಕೆ ಮರಳಿದರು. ನನಗೇಕೋ ಅದು ಆಸಕ್ತಿ ಕೆರಳಿಸಲಿಲ್ಲ. ಆದರೆ ಸುಮ್ಮನೆ ಕಾಲಹರಣ ಮಾಡುವುದು ನನ್ನ ಜಾಯಮಾನವಲ್ಲ. ನಿಂತಲ್ಲಿ ಕುಳಿತಲ್ಲಿ ಚಡಪಡಿಸುತ್ತಿದ್ದೆ. ಹೌದು, ಮಹತ್ವದ್ದೇನಾದರೂ ಸಾಧಿಸಬೇಕು. ಹೀಗಿರುವಾಗ ನನ್ನ ಹಳೇ ಪರಿಚಯದ ಚಾಪರ್ ಸಿಕ್ಕಿದ. ಯಾವುದೋ ಮೂರುಕಾಸಿನ ಕೆಲಸದಲ್ಲಿದ್ದರೂ, ನನ್ನ ಹಾಗೇ ಕನಸು ಕಾಣುತ್ತಿದ್ದ. ಅವನ ಜೊತೆ ಇನ್ನೂ ಇಬ್ಬರು ಗೆಳೆಯರಿದ್ದರು, ಹುಟ್ಟಾ ಸಾಹಸಿಗರು. ಸರಿ, ಎಲ್ಲಾ ಸೇರಿ ಏನಾದರೂ ಹೊಸ ಸಾಹಸಕ್ಕೆ ಕೈಯಿಕ್ಕುವುದೆಂದು ನಿಶ್ಚಯಿಸಿದೆವು. ಆದರೆ..?

ಈ ನಡುವೆ ನನ್ನ ಮತ್ತು ಇಂದಿರಾಳ ಸಂಬಂಧದಲ್ಲಿ ಕಂದಕವೇರ್ಪಟ್ಟಿತು. ಇದು ಏಕೆ ಮತ್ತು ಯಾರು ಹೊಣೆ ಎಂದು ವಿವರವಾಗಿ ವಿಶ್ಲೇಷಿಸುವಷ್ಟು ಬುದ್ಧಿವಂತ ನಾನಲ್ಲ. ಅಲ್ಲದೆ ದಾಂಪತ್ಯ ಜೀವನದಲ್ಲಿ ತಣ್ಣಗೆ, ಅಂತರ್ಗಾಮಿಯಂತೆ ಹರಿಯುವ ಅಸಮಾಧಾನ, ಒಮ್ಮೆಲೇ ಆಸ್ಫೋಟಿಸಿ ನೆಮ್ಮದಿಗೆ ಭಂಗ ತರುವ ಪರಿಯನ್ನು ಅರ್ಥ ಮಾಡಿಕೊಳ್ಳುವುದು ಸುಲಭವೂ ಅಲ್ಲ. ಆದರೂ… ಏಕೆ ಹೀಗಾಯಿತು..? ನಾನು ಸ್ವತಂತ್ರ ಮನೋಧರ್ಮದವನಾದರೂ, ಸ್ವಚ್ಛಂಧ ಪ್ರವೃತ್ತಿಯವನಲ್ಲ. ಆಕೆಯ ನಂಬಿಕೆಗೆ ಯಾವುದೇ ರೀತಿಯ ದ್ರೋಹವನ್ನೂ ಬಗೆದಿರಲಿಲ್ಲ. ಆದರೂ… ನನ್ನ ಬಗ್ಗೆ ಅಪನಂಬಿಕೆಗಿಂತ ಹೆಚ್ಚಾಗಿ ಅಸ್ಥಿರತೆ ಅವಳನ್ನು ಕಾಡಿರಬಹುದು. ನನ್ನನ್ನು ಬಿಟ್ಟು ಒಂದು ಕ್ಷಣವೂ ಅತ್ತಿತ್ತ ಅಲುಗಾಡುತ್ತಿರಲಿಲ್ಲ. ಇದು ನನಗೆ ಇರುಸು ಮುರುಸು ಉಂಟು ಮಾಡುತ್ತಿತ್ತು. ಬೇಕಾಗೇ ನನ್ನ ಸ್ನೇಹಿತರ ಜೊತೆ ಹೊರಹೋಗುವುದು ಜಾಸ್ತಿ ಮಾಡಿದೆ. ಆದರೆ ಏನೇನೋ ನೆವ ಹೂಡಿ ಆಕೆ ಅಲ್ಲಿಗೂ ನನ್ನನ್ನು ಹಿಂಬಾಲಿಸತೊಡಗಿದಳು. ನನ್ನ ಮೇಲೆ ಅಧಿಪತ್ಯ ಸ್ಥಾಪಿಸಲು ಹೆಣಗುತ್ತಿದ್ದಳು. ನಾನು ಕುಪಿತನಾಗುತ್ತಿದ್ದೆ.

ಪುರುಷ ಜಗತ್ತು ಕೆಲವು ಹುಡುಗಿಯರಿಗೆ ಅರ್ಥವೇ ಆಗುವುದಿಲ್ಲ. ಹಿಂದೆ, ಲಾಲಿ, ಝೋರೀಮಾ, ಈಗ ಇಂದಿರಾ… ಅತ್ಯಂತ ನೇರ ನುಡಿಯ ಮುಗ್ಧೆಯರು. ತುಂಬಿ ತುಳುಕುತ್ತಿದ್ದ ತಮ್ಮ ಪ್ರೇಮ ಪಾತ್ರೆಯಿಂದ ನನ್ನನ್ನು ತಣಿಸಿದ್ದರು. ಆದರೆ ಬದುಕಿನಲ್ಲಿ ಕೇವಲ ಬರಿದೇ ಪ್ರೇಮಿಸುತ್ತಾ ಇರುವುದಕ್ಕಾಗುವುದಿಲ್ಲ. ಇದನ್ನು ಅವರಿಗೆ ಅರ್ಥಮಾಡಿಸಲು ಯತ್ನಿಸಿದಷ್ಟೂ ಆತಂಕಗೊಳ್ಳುತ್ತಿದ್ದರು, ಸಿಟ್ಟಿಗೇಳುತ್ತಿದ್ದರು. ನನಗಂತೂ ಇವರ ಮನನೋಯಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಮಾನವ ಬದುಕಿನ ಕ್ಲಿಷ್ಟತೆ..? ಒಂದು ಕಡೆ ನಿರುದ್ಯೋಗ, ಇನ್ನೊಂದೆಡೆ ಮಹತ್ವಾಕಾಂಕ್ಷೆ, ನಡುವೆ ಈ ಗೃಹ ಕಲಹದ ದುಗುಡ, ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು. ಆಗ ಚಾಪರ್, ಇಲ್ಲಿಂದ ಬೇರೆಡೆಗೆ ಓಡಿಹೋಗೋಣ ಎಂದು ಸೂಚಿಸಿದ!!!

ಹೋಗುವವರನ್ನು ಕತ್ತಿನ ಪಟ್ಟಿ ಹಿಡಿದು ಜಗ್ಗಿ ನಿಲ್ಲಿಸದೇ…
ಬೇಡವಾದರೆ, ಎಲ್ಲದರಿಂದ-ಎಲ್ಲರಿಂದ ಸ್ವಯಂ ಗಡಿಪಾರು ಆಗುವುದನ್ನು ಕಲಿಸಿ ಕೊಟ್ಟಿದ್ದಕ್ಕೆ…
-ಥ್ಯಾಂಕ್ಸ್ ಪ್ಯಾಪಿ!!

September 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಪ್ಯಾಪಿಲಾನ್ ಕುರಿತು ಎಪ್ಪತ್ತು ಮಕ್ಕಳಿದ್ದ ತರಗತಿಯಲ್ಲಿ ಒಮ್ಮೆ ಹೇಳಿದ್ದೆ…. ಅವರೆಲ್ಲP.C.M.E. ಕಾಂಬಿನೇಷನ್ ವಿದ್ಯಾರ್ಥಿಗಳು…… ಪ್ಯಾಪಿಲಾನ್ ,ಮಹಾಪಲಾಯನ ಕುರಿತು ಹೇಳಿ ತಿಂಗಳು ತುಂಬುವುದರೊಳಗೆ ಸುಮಾರು ನಲವತ್ತಕ್ಕಿಂತ ಹೆಚ್ಚು ಮಕ್ಕಳು ಈ ಪುಸ್ತಕಗಳನ್ನು ಕೊಂಡು ನನಗೆ ತೋರಿಸಿದ್ದರು.,.
    ನಿಮ್ಮ ಲೇಖನ ಮತ್ತೆ ಪ್ಯಾಪಿಲಾನ್ ಕಡೆಗೆ ದೂಡಿದೆ….ಚೆಂದ ಬರ್ದಿದೀರಿ ಮೇಡಂ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: