ಕಾವ್ಯದ ಕಣ್ಣಲ್ಲಿ ಅಪ್ಪನ ಕತೆ- ಕ್ಯಾಪ್ಟನ್

ಎಚ್.ಆರ್. ರಮೇಶ

‘ಕ್ಯಾಪ್ಟನ್ ಕವಿತೆಗಳು’ ಇದು ಕನ್ನಡದ ಹೊಸತಲೆಮಾರಿನ ಸೂಕ್ಷ್ಮ ಸಂವೇದನೆಯುಳ್ಳ, ಹೊಸ ಬಗೆಯ ಕವಿತೆಗಳ ಮೂಲಕ ಕನ್ನಡದ ಓದುಗರ ಗಮನವನ್ನು ಸೆಳೆದಿರುವ ತೇಜಶ್ರೀ ಅವರ ಹೊಸ ಸಂಕಲನ. ಇಲ್ಲಿಯ ಕವಿತೆಗಳು ಕನ್ನಡಕ್ಕೆ ಹೊಸ ಬಗೆಯವು. ಅಂದರೆ ‘ಅಪ್ಪ’ನ ಕುರಿತು ಸರಣಿ ರೂಪದಲ್ಲಿ ಧ್ಯಾನಿಸಿ ರಚಿಸಲ್ಪಟ್ಟ ಕವಿತೆಗಳು. ಶೇಕ್ಸ್ ಪಿಯರ್ ನ ಸಾನೆಟ್ ಮತ್ತು ರಿಲ್ಕ್ ನ ಎಲಿಜಿಗಳ ಸರಣಿ ಕವಿತೆಗಳು ನೆನಪಾಗುತ್ತವೆ. ನಿಜ, ಇವರ ವಸ್ತು, ವಿಷಯಗಳು ಬೇರೆಯವು. 

ಇಲ್ಲಿಯ ನಿರೂಪಕಿ/ಕವಯತ್ರಿ ಅಪ್ಪನನ್ನು ತನ್ನ ಕಾವ್ಯದ ಮೂಲಕವೇ ಅರಿಯಬೇಕು, ಚಿತ್ರಿಸಬೇಕು ಎಂದುಕೊಂಡು ರಚಿಸಿರುವ ಕವಿತೆಗಳು. ಹಾಗಾಗಿ ಈ ಸಂಕಲನದ ಕವಿತೆಗಳು ಆತ್ಮಕಥನ ಮತ್ತು ಜೀವನ ಚರಿತ್ರೆಗಳ ಆಯಾಮವನ್ನು ಪಡೆದುಕೊಂಡಿವೆ.

ನೆನಪು ಬದುಕಿನ ಮೂಲ ಸೆಲೆ. ಮತ್ತು ಕಲೆಗೆ ಧಾತು ಶಕ್ತಿ. ಅದರಿಂದಾಗಿಯೇ ಭಾಷೆಯ ಉಗಮವಾಗಿದ್ದರೂ ಆಗಿರಬಹುದು! ನೆನಪು ಬದುಕನ್ನು ಅರಿಯುವ ದಾರಿ. ಆದರೆ ನೆನಪುಗಳು ಹಳವಂಡಗಳಾದರೆ ಅದು ಸೆಂಟಿಮೆಂಟಲಾಗಿ, ಮೆಲೋಡ್ರಮೆಟಿಕ್ ಆಗಿ ಆತ್ಮಮರುಕವಾಗುವ ಸಾಧ್ಯತೆಯೇ ಹೆಚ್ಚು. ಕಲೆಯಲ್ಲಿ ಇಂತಹ ಯಾವ ರಿಯಾಯತಿಗೆ ಜಾಗವಿರುವುದಿಲ್ಲ. ಎಷ್ಟೇ ಸ್ವಂತ ಅನುಭವವಾದರೂ ಭಾಷೆಯ ಮೂಲಕ ಅಭಿವ್ಯಕ್ತಗೊಂಡಾಗ ಅದಕ್ಕೆ ಸಾರ್ವತ್ರಿಕ ಆಯಾಮ ಮತ್ತು ಲೋಕದ ಭಿನ್ನ ಅಭಿಪ್ರಾಯದ ಪ್ರತಿಕ್ರಿಯೆಗಳು ಮಿಳಿತವಾಗುತ್ತವೆ.

ಕಲೆ ಮತ್ತು ಭಾಷೆ ಎರಡೂ ನಿಷ್ಠೂರಿಗಳೆ. ಕಲೆಯಲ್ಲಿ ‘ನಮ್ಮವರಾದರೆ ಕೆಳಗಿಂದ ಬರಲಿ ಸಟುಗ; ಅನ್ಯರಾದರೆ ಮೇಲಿಂದ ಬರಲಿ’ ಎನ್ನುವಂತಹದ್ದಕ್ಕೆ ಅವಕಾಶವಿರುವುದಿಲ್ಲ. ಇಂತಹ ಅಪಾಯಕ್ಕೆ ‘ಕ್ಯಾಪ್ಟನ್’ ಕವಿತೆಗಳ ನಿರೂಪಕಿ ಸಿಕ್ಕದೆ ಆದಷ್ಟೂ ನಿಷ್ಠೂರವಾಗಿಯೇ ಅಪ್ಪನ ಕುರಿತು ಅಭಿವ್ಯಕ್ತಿಸಿದ್ದಾರೆ. ಖ್ಯಾತ ಸಿತಾರ್ ವಾದಕಿ ಅನುಷ್ಕ ಶಂಕರ್ ತನ್ನ ಅಪ್ಪನ ಸಿತಾರದ ರಾಗಗಳನ್ನು ಹತ್ತಿರದಿಂದ ನೋಡಿ ಕಲಿತರೂ ತನ್ನ ಅಪ್ಪ ಮುಟ್ಟಿರದಿದ್ದ ರಾಗಗಳನ್ನು ಹಿಡಿಯಲು ತನ್ನ ಮಾಂತ್ರಿಕ ಬೆರಳುಗಳನ್ನು ಹಕ್ಕಿಯ ರೆಕ್ಕೆಗಳ ಮಾಡಿಕೊಂಡು ಹಾರಿದಂತೆ ಇಲ್ಲಿಯ ನಿರೂಪಕಿ ತನ್ನ ಅಪ್ಪನನ್ನು ಭಾಷೆ ಮತ್ತು ಸಂವೇದನೆಗೆ ಬೇಕಾಗಿರುವ  ಸೂಕ್ಷ್ಮತೆಯನ್ನು ಇಟ್ಟುಕೊಂಡು ಮತ್ತು ಧ್ಯಾನಸ್ಥವಾಗಿ ಅರಿಯಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದ ಮೂಲಕ ತಾನು ಬೆಳದು ಬಂದದ್ದನ್ನು ಮತ್ತು ಅಪ್ಪ ಬೆಳೆಸಿದ್ದನ್ನು ಹೇಳುತ್ತ ಹೋಗುವ ಪರಿ ಚೇತೋಹಾರಿಯಾಗಿದೆ.

ಇಲ್ಲಿ ನಿರೂಪಕಿಯ ಅಪ್ಪನ ಸಾವಿನ ಮುಂಚಿನ ಕ್ಷಣಗಳು ನಿಮಿತ್ತವಾಗಿ ಬಂದು ಅಪ್ಪ ಮತ್ತು ಮಗಳು;ಅಪ್ಪ ಮತ್ತು ಕುಟುಂಬ; ಜೊತೆಗೆ ಅಪ್ಪನ ‘ತಂದೆತನ’ದ ವಿವಿಧ ಮಜಲುಗಳನ್ನು ತೋರಿಸುವ ಪ್ರಾಮಾಣಿಕ ಪ್ರಯತ್ನ.

ಇಲ್ಲಿಯ ದಾಖಲೆಗೊಂಡಿರುವ ಅಪ್ಪ ಸಾಂಪ್ರದಾಯಿಕ ಮನೋಧರ್ಮದ ಅಪ್ಪ ಅಲ್ಲ; ಬದಲಿಗೆ ಅವರೊಬ್ಬ rational ಮನಸ್ಥಿತಿಯುಳ್ಳ ಸಮಾನತೆಯನ್ನು ಬಯಸುವ ಶುದ್ಧ ಅಂತಃಕರಣದ ಮಾನವ ಪ್ರೇಮಿ. ಆದರೆ ಅವರ ಸಾಮಾಜಿಕ ವ್ಯಕ್ತಿತ್ವವನ್ನು ತೋರಿಸಲು ಅಷ್ಟೊಂದು ಆಸ್ಥೆಯನ್ನು ನಿರೂಪಕಿ ತೋರಿಸಿದ ಹಾಗೆ ಕಾಣುತ್ತಿಲ್ಲ; ಬದಲಿಗೆ, ಅಪ್ಪನನ್ನು ಸಾಧ್ಯವಾದಷ್ಟೂ ಖಾಸಗಿಯಾಗಿಯೇ ನೋಡಲು ಇಷ್ಟಪಟ್ಟಿದ್ದಾರೆ. ಅದು ತೀವ್ರವಾಗಿ ಬಂದಿದೆ ಸಹ. ನಿರೂಪಕಿಯ ಮಾತಿನಲ್ಲೇ ಹೇಳುವುದಾದರೆ ‘ನೀನು ನನ್ನೆದೆಯ ಕವಿತೆಯಾಗಿ ಹೀಗೆ ಚಡಪಡಿಸುವೆಯೆಂದು ಅನ್ನಿಸಿಯೇ ಇರಲಿಲ್ಲ’.

ಇಲ್ಲಿಯ ಕವಿತೆಗಳನ್ನು ಓದುತ್ತಾ ಹೋದ ಹಾಗೆ ಥಟ್ಟನೆ ನೆನಪಿಗೆ ಬಂದದ್ದು ಸಿಲ್ವಿಯಾ ಪಾತ್‍ಳ ‘ಡ್ಯಾಡಿ’ ಎನ್ನುವ ಕವಿತೆ. ಆದರೆ. ತೇಜಶ್ರಿ ಮತ್ತು ಸಿಲ್ವಿಯ ಪಾತ್ ಇಬ್ಬರ ದೃಷ್ಟಿಕೋನ ಭಿನ್ನ. ವಿರುದ್ಧ. ಸಿಲ್ವಿಯಾಳು ಕವಿತೆಯಲ್ಲಿ “ಅಪ್ಪ” ‘ಅಧಿಕಾರ ಚಲಾಯಿಸುವ, ಸ್ವಾತಂತ್ರದ ರೆಕ್ಕೆಗಳನ್ನು ಕತ್ತರಿಸುವ , ಹೆಣ್ಣಿನ ಶೋಷಣೆಯನ್ನು ಮಾಡುವ ದಬ್ಬಾಳಿಕೆಯ ಸ್ವಭಾವದ ಮತ್ತು ಫ್ಯಾಸಿಸ್ಟ್ ಮನಸ್ಥಿತಿಯುಳ್ಳ ಗಂಡಸಾಗಿ ಕಂಡುಬರುತ್ತಾನೆ.

ಆದರೆ ತೇಜಶ್ರೀಯ ಕಾವ್ಯದ ಕಣ್ಣಲ್ಲಿ ‘ಅಪ್ಪ ಮತ್ತು ಅವನ ತಂದೆತನ’ಗಳ ಮಾನವೀಯ ದರ್ಶನವಾಗುತ್ತದೆ. ಇಲ್ಲಿ ಎಲ್ಲಿಯೂ ತಂದೆ ಪಿತೃಪ್ರಧಾನ ಸಮಾಜದ ಪ್ರತೀಕದಂತೆ ಕಾಣುವುದಿಲ್ಲ. ಇದು ಈ ಸಂಕಲನದಲ್ಲಿ ಮುಖ್ಯವಾಗಿ ಗಮನಿಸಿಬೇಕಾದ ಅಂಶ. 

ನೌಕೆ ಜೀವನದ ರೂಪಕ. ನೌಕೆಯ ಅಳಿವು ಮತ್ತು ಉಳಿವು ಅದರ ಚುಕ್ಕಾಣಿ ಮತ್ತು ಅದನ್ನು ಹಿಡಿದಿರುವ ಕ್ಯಾಪ್ಟನ್ ನ ಕೈಯಲ್ಲಿ. ಸಂಸಾರದ ನೌಕೆಯ ಚುಕ್ಕಾಣಿಯನ್ನು ಹಿಡಿದಿರುವ ಅಪ್ಪ. ಈ ಕಾರಣದಿಂದ ಮತ್ತು ಸಮಾನತೆಯನ್ನು ಬಯಸುವ ಮಾರ್ಕ್ಸಿಸ್ಟ್ ವಲಯದಲ್ಲೂ ಈ ಪದ ಹೆಚ್ಚಾಗಿ ಬಳಸಲ್ಪಡುತ್ತದೆ. ಮತ್ತು ಆಟದಲ್ಲಿ. ಈ ಎಲ್ಲವೂ ಇಲ್ಲಿಯ ಶೀರ್ಷಿಕೆ ‘ಕ್ಯಾಪ್ಟನ್’ಗೆ ಹೊಂದುತ್ತವೆ. ಮತ್ತು ನೀವು ಗ್ರಹಿಸಿದ ರೀತಿಯಲ್ಲೂ ಸಿಗುತ್ತ ಹೋಗುತ್ತದೆ.

ಇದನ್ನು ಹೇಳಿದ್ದಕ್ಕೆ ಕಾರಣ ತೇಜಶ್ರೀ ಸಂಕಲನದ ಪ್ರಾರಂಭದಲ್ಲಿ ಕವಿತೆಗಳಿಗೂ ಮುನ್ನ ಹೇಳಿರುವ ‘ಮಾತಿ’ಗೆ ಶೀರ್ಷಿಕೆಯನ್ನು ‘ಹಡಗು ಹತ್ತುವ ಮುನ್ನ’ ಎಂದು ಕೊಟ್ಟಿರುವುದರಿಂದ. ಸಂಸಾರ ಎನ್ನುವುದಕ್ಕಿಂತ ಬದುಕಿನ ಏರಿಳಿತಗಳನ್ನು ಕ್ಯಾಪ್ಟನ್/ಅಪ್ಪ ಹೇಗೆ ಎದುರಿಸುತ್ತ ಸಾಗಿದರು ಎನ್ನುವುದನ್ನು ತಾನೂ ಅದರ ಪಯಣದ ಒಂದು ಭಾಗವಾಗಿ ನೋಡಿದ್ದಾರೆ.

‘ಅಮ್ಮ’ನಷ್ಟು ಮೆಚ್ಚುಗೆಯನ್ನು ‘ಅಪ್ಪ’ಲೋಕದಲ್ಲಿ ಪಡೆಯದೇ ಇರುವುದ ಕಂಡರೆ ಮನಸ್ಸಿಗೆ ಒಂಥರ ಆಗುತ್ತದೆ. ಇಂಗ್ಲಿಷ್‍ನಲ್ಲಿ ‘ಮದರ್ ಈಸ್ ರಿಯಲ್; ಫಾದರ್ ಈಸ್ ಅನ್‍ರಿಯಲ್’ಎಂದು ಯಾರು ಸೃಷ್ಟಿಮಾಡಿದರೋ! ಅಪ್ಪನ ತ್ಯಾಗ, ಜವಾಬ್ದಾರಿ, ಒಳಸಂಕಟಗಳು ಅಪರಿಮಿತ. ಅದರೂ ಪುರುಷನನ್ನು ಆಕಾಶಕ್ಕೂ ಮತ್ತು ಹಣ್ಣನ್ನು ಭೂಮಿಗೂ ಹೋಲಿಸಿರುವುದನ್ನು ನೆನೆದಾಗ ಸ್ವಲ್ಪ ಸಮಾಧಾನವಾಗುತ್ತದೆ.

ಸಿಲ್ವಿಯಾ ಪಾತ್ ತನ್ನ ಕವಿತೆಯಲ್ಲಿ ಚಿತ್ರಿಸಿರುವಂತೆ ಪಿತೃಪ್ರಧಾನ ವ್ಯವಸ್ಥೆಯ ಪ್ರತೀಕವಾಗಿ  ವರ್ತಿಸುವ ಕ್ರೂರಿ ಅಪ್ಪಂದಿರಂತೂ ಇದ್ದಾರೆ ಜಗತ್ತಿನಲ್ಲಿ. ಆದರೆ ತೇಜಶ್ರೀ ಇಲ್ಲಿ ಕಾಣುತ್ತಿರುವುದು ಹೆಣ್ಣಿನ ಹೃದಯದ, ತಂದೆತನವನ್ನು ಇಟ್ಟುಕೊಂಡಿರುವ ಅಪ್ಪನನ್ನು.

ಮೊದಲ ಕವಿತೆ ಸಂಕಲನದ ಮುಂದೆ ಬರುವ ಕವಿತೆಗಳಿಗೆ ಮುನ್ನುಡಿಯಂತೆ ಇದೆ. ಮತ್ತು, ಇಡೀ ಸಂಕಲನದ ಸಾರವೂ ಇದೇ ಆಗಿದೆ. ಹಾಗಾಗಿ ಈ ಸಂಕಲನದ ಕವಿತೆಗಳ ನಿರೂಪಕಿ ಏನನ್ನು ಹೇಳುತ್ತಾರೋ ಅಥವಾ ಅಪ್ಪನನ್ನು ಹೇಗೆ ಕಾಣುತ್ತಾರೋ ಅದನ್ನು ಈ ಒಂದು ಎಂಟು ಸಾಲಿನ ‘ಅಪ್ಪ’ ಕವಿತೆಯಲ್ಲಿ ಕೀಟ್ಸ್ ಹೇಳುತ್ತಾನಲ್ಲ ಕವಿತೆಯೆಂದರೆ ಅದೊಂದು ಮುಷ್ಟಿಗ್ರಾಹ್ಯ / ಪಾಲ್ಪಬಲ್ ಹಾಗೆ ಹಿಡಿದಿಡಲು ಪ್ರಯತ್ನಿಸಿದ್ದಾರೆ.

ಎಂಟು ಸಾಲಿನ ಈ ಕವಿತೆಯಲ್ಲಿ ಬಾಲ್ಯ, ನಂತರದ ಬೆಳವಣಿಗೆ ಈ ಹಂತದಲ್ಲಿ ಅಪ್ಪ ಬೆಳೆದದ್ದು, ಬೆಳೆಸಿದ್ದು ಹಾಗೂ ನಂತರ ಬದುಕಿನ ಅನುಭವಕ್ಕೆ ತೆರೆದುಕೊಳ್ಳುತ್ತ ನಿರೂಪಕಿಗೆ ಅಪ್ಪನ ‘ಎತ್ತರ’ದ ವ್ಯಕ್ತಿತ್ವದ ಮನವರಿಕೆಯಾಗುವುದನ್ನು ಕಾಣಬಹುದು:

ಚಿಕ್ಕವಳಿರುವಾಗ ಅನ್ನಿಸುತ್ತಿತ್ತು /ಅಪ್ಪ ಎಷ್ಟು ದೊಡ್ಡವ ಅಂತ/ ದಿನಗಳೆದು ನಾನೂ ಸ್ವಲ್ಪ ಎತ್ತರ, ದಪ್ಪವಾದಂತೆ/ ಅಪ್ಪ ಅಷ್ಟೇನು ದೊಡ್ಡವನಲ್ಲ ಅನ್ನಿಸಿದ್ದು ಹೌದು./ ಇನ್ನೊಂದಿಷ್ಟು ದಿನ ಕಳೆದು/ ನಾನು ಅವನಷ್ಟೇ ಎತ್ತರಕ್ಕೆ ಬೆಳೆದಿದ್ದೇನೆ/ ಈಗ ನಿಜವಾಗಿ ಅನ್ನಿಸುತ್ತಿದೆ/ ಅಪ್ಪ ದೊಡ್ಡವ ಅಂತ.

ಈ ಕವಿತೆಯ ನಂತರ ಅಪ್ಪನ ಕುರಿತು ಇರುವ ನಲವತ್ತೊಂದು ಕವಿತೆಗಳು ಅಪ್ಪನ ವ್ಯಕ್ತಿತ್ವವನ್ನು ವಿವಿಧ ಸನ್ನಿವೇಶ, ಸಂದರ್ಭಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವುದನ್ನು ಕಾಣಬಹುದು. ಈ ನಲವತ್ತೊಂದು ಕವಿತೆಗಳ ಗುಚ್ಛದಲ್ಲಿ ಅಪ್ಪನ ಸಾವಿನ ಧ್ಯಾನವಿದೆ. ಸಾವು ನೆಪ ಮಾತ್ರ. ಅದರ ಮೂಲಕ ಅಪ್ಪನ ಜೊತೆ ಕ್ರಮಿಸಿದ ಬದುಕನ್ನು ನಿರೂಪಕಿ  ತಿಂಗಳ ಕೂಸಿನ ಬಾಯಿಗೆ ಮೂಗಿಟ್ಟು ಇದೆ ನನ್ನ ಕಡೆಯುಸಿರು ಎಂಬಂತೆ ಎಳೆದುಕೊಂಡ ಅವನು ದೀರ್ಘ ಉಸಿರನ್ನು ಎನ್ನುವ ಸಾಲುಗಳ ಕವಿತೆಗಳಿಂದ ಪ್ರಾರಂಭಿಸಿ ಒಂದರ ಒಳಗೆ ಇನ್ನೊಂದು ಒಂದನ್ನು ಕೂಡಿ ಮತ್ತೊಂದು ಹೆಣೆದ ಹೆಣಿಗೆಯ ಬಂಧದಿಂದ ಮಿನುಗುತ್ತಿದೆ ಸಂಬಂಧದ ಚೆಲುವು ಎನ್ನುವ ಸಾಲುಗಳಿರುವ ಕವಿತೆಯಲ್ಲಿ ಕೊನೆಯಾಗುವುದನ್ನು ಚಿತ್ರಿಸುತ್ತಾರೆ.

ಇಡೀ ಕವಿತೆಗಳ ಭಿತ್ತಿ ಸಾವು ಮತ್ತು ಅಪ್ಪ. ಆದರೆ ಮೇಲೆ ಹೇಳಿದಂತೆ ಸಂದರ್ಭ ಮತ್ತು ಸನ್ನಿವೇಶ ಬೇರೆ ಬೇರೆ. ಸಾವು ಎಂತಹವರನ್ನೂ ಸಹ ಕಲಕುತ್ತದೆ. ಪ್ರೀತಿಪಾತ್ರರಾದವರು ಅಗಲಿದಾಗಂತೂ ಅದನ್ನು ಸಹಿಸಿಕೊಳ್ಳುವುದಕ್ಕೆ ತುಸು ಕಷ್ಟವೇ. ಸಾವು ನೆನಪುಗಳನ್ನು ಚೆಲ್ಲಿ ಹೋಗುತ್ತದೆ. ನಿರೂಪಕಿ ಲೋಕ ಸಹಜ ಆಸೆಯನ್ನು ವ್ಯಕ್ತಪಡಿಸುತ್ತ ಹೇಳುತ್ತಾರೆ:

ಬದುಕಿನ ರುಚಿಯ ಇನ್ನಷ್ಟು ಸುಖವಾಗಿ/ ಅವನು ಸವಿಯುವುದ ನಾನು ನೋಡಬೇಕಿತ್ತು/ ಒಂದೇ ಒಂದು ಅವಕಾಶ ನೀಡಬೇಕಿತ್ತು.

ನಂತರದ ಮೂರನೇ ಕವಿತೆಯಲ್ಲಿ ಅಪ್ಪ ಬದುಕಿನ ರೀತಿಯನ್ನು ಹೀಗೆ ಹೇಳುತ್ತಾರೆ:

ಎದೆ ಮೇಲೆ ಮಣಭಾರದ ಕೋಟಲೆಗಳನ್ನು ಹೇರಿಕೊಂಡು/ ಎಪ್ಪತ್ತಾರು ಸಂವತ್ಸರ ಇನಿತಷ್ಟೂ ಕುಗ್ಗದೆ ನಡೆದವನಿಗೆ..

ನಾಲ್ಕನೇ ಕವಿತೆಯಲ್ಲಿ ಅವನ ಕೊನೆ ಕ್ಷಣಗಳನ್ನು ಬಹುಕಾಲ ಕಾಡುವಂತೆ ಚಿತ್ರಿಸಿದ್ದಾರೆ:

ಇಷ್ಟುಕಾಲ ಸಿಟ್ಟು ಮಾಸಿ/ ಮೆಲುನಗೆ ಮನೆಮಾಡಿತ್ತು ಅವನ ಕಣ್ಣಲ್ಲಿ/ ಆ ಬೆಳಗ್ಗೆ

ಹೀಗೆ ಹೇಳಿ ಕೊನೆಗೆ ಅವರು ಸರಿಯಾದ ನುಡಿಗಟ್ಟಿನಲ್ಲಿ ಏನನ್ನೋ ಹೇಳುವವರಿದ್ದರು, ಆದರೆ ಸಾವು ಆಗಲೇ ಸನಿಹದಲ್ಲಿಯೇ ಇದೆ:

ಆಯಸ್ಸಿನ ಬಿಡುನುಡಿಯು ತುಟಿಯಂಚಿಗೆ ಬಂದು/ ಅದುರುತ್ತಿತ್ತು ಸರಿಯಾದ ನುಡಿಗಟ್ಟಿಗೆ ಕಾದು.

ಬದುಕಿನ ಪಾಠಗಳನ್ನು, ಸೊಗಸನ್ನು ಅಪ್ಪನಿಂದ ಕಲಿತಬಗೆಯನ್ನು ಎಂಟನೇ ಕವಿತೆ ತುಂಬಾ ಮನೋಜ್ಞವಾಗಿ ಹಿಡಿದಿಡುತ್ತದೆ:

ಕಾಲುಗಟ್ಟುತ್ತಿದ್ದ ರಾಗೆತೆನೆಯ ಮುರಿದು ತಂದು/ ಒಂದೊಂದೇ ಕಾಚಕ್ಕಿಯ ಬಿಡಿಸಿ/..

ಹೊಸಕಿ ಹದವಾಗಿ ಅಂಗೈ ನಡುವೆ/ ಉಫ್ ನೆ ಸಿಪ್ಪೆಯ ತೂರಿ ಗಾಳಿಗೆ/ ಆ ಕೈಯಿಂದ ಈ ಕೈಗೆ ಈ ಕೈಯಿಂದ ಆ ಕೈಗೆ/ ಮೆಲ್ಲನೆ ಸುರಿಯುತ್ತ ಬಿಡಿಸಿಕೊಳ್ಳುತ್ತಿತ್ತು ಕಾಳು/ ಅಳಿದುಳಿದ ಸಿಬರ ನಂಟನ್ನು/ ಹೊಳೆಯುತ್ತಿದ್ದವು ರಾಗಿಮಣಿಗಳು ಬಿಳಿಮುತ್ತಂತೆ.

ಇಲ್ಲಿ ಅಭಿವ್ಯಕ್ತಗೊಂಡಿರುವ ಅಪ್ಪ ಸಾಂಪ್ರದಾಯಿಕ ಮನಸ್ಥಿತಿಯ ಅಪ್ಪ ಅಲ್ಲ, ಬದಲಿಗೆ ಮನುಷ್ಯ ಹೃದಯಗಳಿಗೆ ಮಿಡಿಯುವ, ವೈಜ್ಞಾನಿಕ ಮನೋಭಾವದ ಅಪ್ಪ. ಆದರೆ ಹುಸಿ ವೈಚಾರಿಕ ಮನಸ್ಸಿನ ಅಪ್ಪ ಅಲ್ಲ. ದೇವಸ್ಥಾನದಲ್ಲಿ ದೇವನಿದ್ದಾನೋ ಇಲ್ಲವೋ ಆದರೆ ಅದರೊಳಗೆ ಅಲೌಕಿಕ ಎನ್ನುವ ತಣ್ಣನೆಯ ಗಾಳಿಗೆ ಇಲ್ಲಿಯ ಅಪ್ಪ ಮನಸೋತಿದ್ದವರು:

ಮನೆಯ ಎದೂರಿಗೆ ಹನುಮಂತನ ಗುಡಿ/ ಕಪ್ಪು ಗಾರೆಯ ಪುಟ್ಟಗುಡಿಯೊಳಗೆ ಜೀವ ತಣ್ಣಗಾಗಿಸುವ ತಂಪು/ ಗುಡಿಯ ಒಳಹೊಕ್ಕರೆ ಇನ್ನಷ್ಟು ಮತ್ತಷ್ಟು ಎನ್ನುತ್ತ /

ಅಪ್ಪ ದೇವರ ನಂಬುತ್ತಿರಲಿಲ್ಲ/ ಕೆಲವೊಮ್ಮೆ ಈ ಗುಡಿಯ ತಂಪಿನಲ್ಲ/ ಕಾಲುಚಾಚಿ ನಿರಾಳ ಮಲಗಿಬಿಡುತ್ತಿದ್ದ.

ನಿನ್ನ ಜೋಡು ನನಗೆ ಯಾವಾಗಲೂ ಸೋಜಿಗ ಎನ್ನುವ ಸಾಲಿನಿಂದ ಆರಂಭವಾಗುವ ಕವಿತೆ ನಿರೂಪಕಿಯ ಅಪ್ಪನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತೆ ಇದೆ. ಜೋಡು ಬದುಕೇ ಆಗಿ ಮೂಡಿ ಬಂದಿದೆ. ಎಷ್ಟು ವರ್ಷಗಳಾದರೂ ಹರಿಯದ ಎಂಬಲ್ಲಿ ಬದುಕನ್ನು ತನಗೆ ಎದುರಾದ ಎಲ್ಲ ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿದ ಬದುಕಿದ ರೀತಿಯನ್ನು ಹೇಳುತ್ತಾರೆ. ಅಂದರೆ ನಿರೂಪಕಿ ಇಲ್ಲಿ ತನ್ನ ಅಪ್ಪನನ್ನು ಎಷ್ಟೊಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂಬುದನ್ನು ಕಾಣಬಹುದು. ತನ್ನ ಬದುಕಿನ ಉದ್ದಕ್ಕೂ ಅಪ್ಪನನ್ನು ನೋಡುತ್ತಲೇ ತಾನು ಬದುಕನ್ನು ಕಟ್ಟಿಕೊಂಡದ್ದನ್ನು ಕಾಣಿಸುತ್ತ ಹೋಗುತ್ತಾರೆ.

ಇಪ್ಪತ್ತಮೂರನೇ ಕವಿತೆಯಲ್ಲಿ ನಿರೂಪಕಿಗೆ  ಅಪ್ಪ ಕಾಣುವುದು ಹೀಗೆ: ಪ್ರತಿದಿನ ಬೆಳಗ್ಗೆ ನಿಗಿನಿಗಿಸುತ್ತ ಬರುತ್ತಾನೆ ಆ ಸೂರ್ಯ/ ಪದಗಳೊಳಗೆ ಮೂಡಲು ಕಂಪಿಸುವ ನಿನ್ನ ಬೆನ್ನು/ ನನ್ನ ಹಣೆಯಲ್ಲಿ ಕವಿತೆಯಂತೆ ಇಬ್ಬನಿಯಾಗಿ ಹೊಳೆಯುತ್ತ..

ಸಂಕಲನದ ಕೊನೆಯ ಪದ್ಯ ಗಾಂಧೀ ಫೋಟೋ ಆಲ್ಬಮ್. ಇಲ್ಲಿಯ ಅಪ್ಪನ ಚಿತ್ರ ತುಂಬ ಸಾಂದ್ರವಾಗಿ ಮೂಡಿಬಂದಿದೆ. ಅಪ್ಪನನ್ನು ಮನೋವೈಜ್ಞಾನಿಕವಾಗಿ ಅರಿಯಲು ಯತ್ನಿಸಿರುವುದನ್ನು ಕಾಣಬಹುದು:

ಹೂಮನಸ್ಸನ್ನರಳಿಸುವ ಜೀವತಂತ್ರ ಗೊತ್ತಿತ್ತು ನನ್ನಪ್ಪನಿಗೆ. ಇಲ್ಲಿಯ ‘ಜೀವತಂತ್ರ’ ಎನ್ನುವ ಪದವು ಹೊಸದಾಗಿ ಅಷ್ಟೇ ಕಾಣುವುದಿಲ್ಲ, ಬದಲಿಗೆ ನಿರೂಪಕಿ ಅಪ್ಪನನ್ನು ಎಷ್ಟೊಂದು ತೀವ್ರವಾಗಿ ಅರಿಯಲು ತುಡಿಯುತ್ತಿದ್ದರು ಎಂಬುದನ್ನು ಕಾಣುತ್ತೇವೆ. ಅಪ್ಪ ನಿರೂಪಕಿಗೆ ಗಾಂಧಿಯನ್ನು ಪರಿಚಯಿಸಿದ ಬಗೆ ಗಮನಸೆಳೆಯುವಂಥಹದ್ದು:

ಗಾಂಧೀ ಆಲ್ಬಮ್‍ನ್ನು ಕೈಯೊಳಗಿಟ್ಟು ಅವನು ಅಂದು/ ಜೀವವನು ಜೀವದ ಜೊತೆ ಬೆಸುಗೆ ಹಾಕುತ್ತ/ ಚರಿತ್ರೆಯ ಮೆಕ್ಕಲುಮಣ್ಣ ಹುಗಿದು ನನ್ನೆದೆಯೊಳಗೆ / ಮಣ್ಣಿಗೆ ಮಣ್ಣನ್ನು ಕಸಿಮಾಡಿದ್ದ.

ನಿರೂಪಕಿ/ ಕವಯತ್ರಿಗೆ ತನ್ನ ಅಪ್ಪ ಎಷ್ಟು ಗಾಢವಾಗಿ ಪ್ರಭಾವಿಸಿದ್ದರು ಮತ್ತು ಅನುಕ್ಷಣವೂ ಚರಾಚರಗಳಲ್ಲಿ ಕಾಣುತ್ತಿದ್ದರು ಎನ್ನುವುದು 26ನೇ ಕವಿತೆಯಲ್ಲಿ ತುಂಬಾ ಸಾಂದ್ರವಾಗಿ ಅಭಿವ್ಯಕ್ತಗೊಂಡಿದೆ:

ಬದುಕಿನಷ್ಟೂ ಗಳಿಗೆಗಳ ಇದ್ದಕಿದ್ದಂತೆ/ ಹೊಸ ಕೋನದಿಂದ ತೋರಿಸುತ್ತ/ ಆಡಿದ್ದ ಮಾತು ಕುಳಿತಿದ್ದ ತಾವು/ ತಳದ ನಿಲುವು, ನಡೆದ ಹಾದಿಗಳ

ನಿಶ್ಚಲ ನಿಂತಿದ್ದ ಜೀವದ ಕೊಳಕ್ಕೆ ಯಾರೋ ಎಸೆದ ಕಲ್ಲಂತೆ ನಿನ್ನ ಸಾವು/ ಕವಿತೆಯಲ್ಲದೆ ಮತ್ತಿನ್ನೇನೆ?

ಇಂಥಹ ಸಾಲುಗಳು ನೇರ ಮನಸ್ಸಿನೊಳಗೆ ಇಳಿಯುತ್ತವೆ. ಕೆಲ ಕ್ಷಣಗಳ ನಂತೆರ ಯೋಚಿಸಿದಾಗ ಎಮಿಲಿ ಡಿಕೆನ್ಸನ್‍ಳ ಧ್ಯಾನದಂತಹ ಕವಿತೆಗಳು ಭಾವವಾಗಿ, ಭಾವುಕವಾಗಿ ಎಲ್ಲ ಭಾವಗಳ ಮೀರಿ ಅಲೌಕಿಕದ ಅನುಭವವನ್ನು ಮತ್ತು ಅನುಭೂತಿಯನ್ನು ಕೊಟ್ಟಷ್ಟು ಇವು ಕೊಡುವುದಿಲ್ಲವಲ್ಲ ಎಂದು ಅನ್ನಿಸುತ್ತದೆ.

ಆದರೆ ಹೃದಯಕ್ಕೆ ತೀರ ಹತ್ತಿರದವರ ಅಗಲಿಕೆಯು ಕೊಡುವ ನೋವನ್ನು ಹೋಲಿಕೆ ಮಾಡುವುದು ಅಷ್ಟೊಂದು ಸಮಂಜಸವಲ್ಲ! ಆ ನೋವು ಎಲ್ಲ ಭಾಗಕ್ಕಿಂತಲೂ ಭಾರ. ಆ ಭಾರವನ್ನು (ಅಂದರೆ ನೋವಿನಿಂದ ಹೊರಬರುವುದನ್ನು) ಈ ಕವಿತೆಗಳ ನಿರೂಪಕಿ ಇಷ್ಟಿಷ್ಟೇ ಇಳಿಸಿಕೊಳ್ಳುತ್ತ ಹೋಗಿದ್ದಾರೆ ಈ ಕವಿತೆಗಳಲ್ಲಿ. ಭಾಷೆಯಾದರೂ ಸಂಪೂರ್ಣವಾಗಿ ನೋವನ್ನು ಹೋಗಲಾಡಿಸುತ್ತದೆಯೇ? ಭಾಷೆಗೆ ಅಂತರಾಳದ ನೋವು, ಸಂಕಟ, ದುಃಖ ಅಷ್ಟು ಸುಲಭಕ್ಕೆ ಸಿಗುತ್ತದೆಯೇ ಕರಗಿಸಲು? ಎಮಿಲಿ ಡಿಕೆನ್ಸನ್‍ಳ ಒಂದು ಕವಿತೆ:

ಪೇಯ್ನ್ ಹ್ಯಾಸ್ ನೋ ಫ್ಯೂಚರ್ ಬಟ್ ಇಟ್ಸೆಲ್ಫ್/ ಇಟ್ಸ್ ಇನ್‍ಫಿನಿಟ್ ರಿಯಲ್ಮ್ಸ್ ಕಂಟೈನ್/ ಇಟ್ಸ್ ಪಾಸ್ಟ್, ಎನ್‍ಲೈಟನ್ಡ್ ಟು ಪರ್‍ಸೀವ್/ನ್ಯೂ ಪಿರಿಯಡ್ಸ್ ಆಫ್ ಪೇಯ್ನ್

ಭಾಷೆ ಮತ್ತು ಅದರ ಲಯಗಳು ಇಲ್ಲಿನ ನಿರೂಪಕಿಗೆ ಅದೃಷ್ಟವೆಂಬಂತೆ ಸಿಕ್ಕು ಅಪ್ಪನ ಕುರಿತು ತನ್ನ ಅನುಭವಗಳನ್ನು ದಟ್ಟಕಾಡಿನ ನಡುವೆ ಸುಮ್ಮನೆ ತನ್ನಪಾಡಿಗೆ ತಾನು ಹರಿಯುವ ನೀರಿನಂತೆ ಹಂಚಿಕೊಂಡಿರುವ ತೇಜಶ್ರೀಯ ಈ ಕವಿತೆಗಳಲ್ಲಿ ಜಗದ ‘ತಂದೆತನ’ದ ಅಪ್ಪಂದಿರು ಪ್ರತಿಫಲನಗೊಳ್ಳುತ್ತ ಹೋಗುತ್ತಾರೆ. ಈ ಸರಣಿಯಲ್ಲಿನ ಅಲ್ಲೊಂದು ಇಲ್ಲೊಂದು ಕವಿತೆಗಳು ಭಾವುಕತನದ ಅಂಚಿಗೆ ಹೋಗಿ ಪಾರಾಗಲು ಭಾಷೆಯ ಬಲವನ್ನು ಪಡೆಯುವುದನ್ನು ಕಾಣಬಹುದಾದರೂ ಅಪ್ಪನ ಸಂಕೀರ್ಣ ವ್ಯಕ್ತಿತ್ವವನ್ನು ಇನ್ನಷ್ಟು ಆಳವಾಗಿ ಒಳಹೊಕ್ಕು ನೋಡಬೇಕಿತ್ತೇನೋ ಅನ್ನಿಸದೆ ಇರದು.

‍ಲೇಖಕರು Avadhi

September 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Kavya Kadame

    ತೇಜಶ್ರೀಯವರ ಕವಿತೆಗಳ ಸಾಂದ್ರತೆಯನ್ನು, ಅವುಗಳ ಬಹುರೂಪಗಳನ್ನು ಬಹು ತೀವ್ರವಾಗಿ ಕಟ್ಟಿಕೊಟ್ಟಿದ್ದೀರಿ ರಮೇಶ್ ಸರ್. ಪುಸ್ತಕವ ಓದಲೇ ಬೇಕು ಅಂತ ಆಸೆಯಾಯಿತು. 

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: