ಕ್ವೀನ್ಸ್ ರಸ್ತೆಯಲ್ಲ, ಮಹಾತ್ಮ ಗಾಂಧಿ ರಸ್ತೆ ನನ್ನ ಡೆಸ್ಟಿನಿಯಾಗಿತ್ತು..

ವರ್ಷ ೧೯೬೭. ಹೊಸ ವರ್ಷದ ಉದಯವಾಗಿತ್ತು. ಅದು ಸಾಮಾನ್ಯ ವರ್ಷವಾಗಿರಲಿಲ್ಲ. ಬೇವು-ಬೆಲ್ಲ ಎರಡನ್ನೂ ಕೊಟ್ಟ ವರ್ಷ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಗಾಳಿ, ಹೊಸ ಸಂಚಲನ, ಜೊತೆಗೊಂದಿಷ್ಟು ವಿಷಾದಗಳ ಬೇವುಬೆಲ್ಲ ನೀಡಿದ ವರ್ಷ.

೧೯೨೭ರಲ್ಲಿ ಮೈಸೂರಿನಲ್ಲಿ ವಾರಪತ್ರಿಕೆಯಾಗಿ ತಲೆ ಎತ್ತಿದ ಪಿ.ಆರ್. ರಾಮಯ್ಯನವರ `ತಾಯಿ ನಾಡು’ ೧೯೨೯ರಲ್ಲಿ ಬೆಂಗಳೂರಿಗೆ ಬಂದು ದಿನ ಪತ್ರಿಕೆಯಾಯಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ `ತಾಯಿನಾಡು’  ೧೯೪೮ರಲ್ಲಿ ರೋಟರಿ ಮುದ್ರಣ ಯಂತ್ರ ಹೊಂದಿ ಕನ್ನಡದ ಪ್ರಪ್ರಥಮ ಬ್ರಾಡ್ ಶೀಟ್ ಎಂಬ ಹೆಗ್ಗಳಿಕೆಯನ್ನು ಗಳಿಸಿತು.

೧೯೫೭ರಲ್ಲಿ  ಎಂ.ಎಸ್. ರಾಮಯ್ಯನವರಿಗೆ ಹಸ್ತಾಂತರಗೊಂಡಿದ್ದ `ತಾಯಿ ನಾಡು’  ೧೯೬೭ರಲ್ಲಿ ಕೊನೆಯುಸಿರೆಳೆದು ಇತಿಹಾಸದ ಪುಟಗಳನ್ನು ಸೇರಿತು. ಇದು ಬೇವು. ಬೆಲ್ಲವೆಂದರೆ ಹೊಸದೊಂದು ದಿನಪತ್ರಿಕೆಯ ಆಗಮನದ ಸುದ್ದಿಯನ್ನು ವಸಂತದ ಗಾಳಿ ತಂದಿತ್ತು.  ನಮ್ಮಂಥವರ ಉತ್ಸಾಹಕ್ಕೆ ರೆಕ್ಕೆಗಳು ಮೂಡಿದ್ದವು`.

‘ಇಂಡಿಯನ್ ಎಕ್ಸಪ್ರೆಸ್’ನ ಗೋಯಂಕಾ ಅವರು ಕನ್ನಡದಲ್ಲಿ ದಿನ ಪತ್ರಿಕೆಯೊಂದನ್ನು ತರಲಿದ್ದಾರೆಂಬ ಸುದ್ದಿ  ಹೊಸ ಸಂಚಲನವನ್ನುಂಟುಮಾಡಿ ಹಿರಿಯ ಪತ್ರಕರ್ತರು, ನನ್ನಂಥ ಉದಯೋನ್ಮುಖ ಪತ್ರಕರ್ತರು ಎಲ್ಲರೂ ತಮ್ಮ ಜಾತಕಗಳನ್ನು ಮತ್ತೊಮ್ಮೆ ನೋಡಿಕೊಳ್ಳುವಂತೆ ಮಾಡಿತ್ತು.`ಕನ್ನಡ ಪ್ರಭ’ ಕಲರವ ಶುರುವಾಗಿತ್ತು. ಪ್ರಜಾವಾಣಿಯ ಹಿರಿಯ ಪತ್ರಕರ್ತರುಗಳಾದ ನಾರಾಯಣ ಸ್ವಾಮಿ, ಜಿ.ಎಸ್.ರಾಮ ರಾವ್, ಎಚ್.ಎನ್. ಮೂರ್ತಿ ಮೊದಲಾದವರು ಬರಲಿರುವ `ಕನ್ನಡ ಪ್ರಭ’ ಸೇರಿದ್ದರು. `ತಾಯಿ ನಾಡು’ನಿಂದ ಜಗ್ಗು ನಾರಾಯಣ್, ಸಂಪಿಗೆ ಸುಬ್ಬಣ್ಣ, ಎಸ್.ದೇವನಾಥ್, `ಸಂಕ’ದಿಂದ ರಂಗನಾಥ್ ಮೊದಲಾದವರುಗಳನ್ನು `ಕಪ್ರ’ ಸೆಳೆದುಕೋಡಿತ್ತು. `ಸಂಕ’ದಿಂದ ಪಿ.ರಾಮಣ್ಣ, ಜಿ.ಎಸ್. ಸದಾಶಿವ, ಕೆ.ಎಸ್. ನಾಗಭೂಷಣಂ `ಪ್ರಜಾವಾಣಿ’ ಸೇರಿದ್ದರು. ನಾನು ನಿರೀಕ್ಷೆಯಲ್ಲಿ ಬೇಯುತ್ತಿದ್ದೆ.

೧೯೬೭ನೆ ಇಸವಿ ನವೆಂಬರ್ ೪ರಂದು `ಕನ್ನಡ ಪ್ರಭ’ ಪ್ರಕಟಣೆ ಶುರುವಾಯಿತು. ವಿಶ್ವ ಕರ್ನಾಟಕ, ದೇಶ ಬಂಧು, ಡೆಕ್ಕನ್ ಹೆರಾಲ್ದ್, ಕೈಲಾಸ ಮೊದಲಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಎನ್.ಎಸ್.ಸೀತಾರಾಮ ಶಾಸ್ತ್ರಿ ಸಂಪಾದಕರು. ಮದ್ರಾಸಿನ ಅಮೆರಿಕ ರಾಯಭಾರ ಪ್ರತಿನಿಧಿ ಕಚೇರಿಯಲ್ಲಿ ಕನ್ನಡ ವಿಭಾಗದ ಸಂಪಾದಕರಾಗಿದ್ದ ಕೆ.ಎಸ್. ರಾಮಕೃಷ್ಣ ಮೂರ್ತಿ ಜಂಟಿ ಸಂಪಾದಕರು. ರಾಮಕೃಷ್ಣ ಮೂರ್ತಿ ಯುನೈಟೆಡ್ ಸ್ಟೇಟ್ಸ್ ಇನಫರ್ಮೇಷನ್ ಸರ್ವಿಸ್ ಸೇರುವ ಮುನ್ನ ಪ್ರಜಾವಾಣಿಯಲ್ಲಿದ್ದರು. ಇವರ ತಮ್ಮ ಕೆ.ಎಸ್. ರಾಮಸ್ವಾಮಿಯವರೂ ಪ್ರಜಾವಾಣಿಯಲ್ಲೇ ಉಪಸಂಪಾದಕರಾಗಿದ್ದರು. ರಾಮಕೃಷ್ಣ ಮೂರ್ತಿ ತಮ್ಮನಾದ್ದರಿಂದ ‘ಸೋದರ’ನೆಂದೇ ಕರೆಯಲ್ಪಡುತ್ತಿದ್ದರು.

ನನ್ನೊಳಗಣ ಪುಳಕ ಚಡಪಡಿಕೆಯಾಗಿ ಪರಿವರ್ತನೆ ಹೋದಿತ್ತು. ನನಗೆ `ಸಂಕ’ದಿಂದ ಬಿಡುಗಡೆ ಬೇಕಿತ್ತು. ಅಮುಕುವ ವಾತಾವರಣದಲ್ಲಿ ಕೊನರುವುದು ಸಾಧ್ಯವಿರಲಿಲ್ಲ. ಕನ್ನಡ ಪ್ರಭ ನನ್ನ ಇಷ್ಟವಾಗಿರಲಿಲ್ಲ. ಮೊದಲ ಸಂಚಿಕೆ ನೋಡಿದ ಮೇಲೆ ನನ್ನ  ನಿರ್ಧಾರ ಇನ್ನಷ್ಟು ಗಟ್ಟಿಯಾಗಿತ್ತು. ಕ್ವೀನ್ಸ್ ರಸ್ತೆಯಲ್ಲ, ಮಹಾತ್ಮ ಗಾಂಧಿ ರಸ್ತೆ ನನ್ನ ಡೆಸ್ಟಿನಿಯಾಗಿತ್ತು. ಆದರೆ ಯಾರನ್ನು ಕಾಣಬೇಕು, ಯಾರಿಗೆ ಅರ್ಜಿ ಸಲ್ಲಿಸಬೇಕು ಎಂಬುದು ತಿಳಿದಿರಲಿಲ್ಲ.

ಕನ್ನಡ ಪ್ರಭ ಮೊದಲ ಸಂಚಿಕೆ ನನಗೆ ನಿರಾಶೆಯುಂಟುಮಾಡಿತ್ತು. ಅದರಲ್ಲಿ ಸೃಜನಶೀಲತೆಯ ಕುರುಹೇನೂ ಕಾಣಿಸಿರಲಿಲ್ಲ. ದೈನಿಕ ಧಾರಾವಾಹಿಯೊಂದೇ ವಿಶೇಷವಾಗಿತ್ತು. ಸಾಪ್ತಾಹಿಕದಲ್ಲಿ ಬರಬೇಕಾದ್ದು ಸುದ್ದಿಯ ಜಾಗವನ್ನು ಆಕ್ರಮಿಸಿತ್ತು. ಈ ಆಟ’ನನಗೆ ಸರಿ ಎನಿಸಲಿಲ್ಲ. ಸಂಪಾದಕ ಸೀತಾರಾಮ ಶಾಸ್ತ್ರಿಯವರ ಬಿಗಿತನವೂ ನನಗೆ ಪರಿಚಯವಿತ್ತು. ನಾನು ತಾಯಿ ನಾಡು’ ಸೇರುವ ಮುನ್ನ ಅವರನ್ನು ಭೇಟಿಯಾಗಿದ್ದೆ. ಆಗ ‘ತಾಯಿನಾಡು’ ಜೊತೆ ಎಂ.ಎಸ್.ರಾಮಯ್ಯನವರು ಗೋಕುಲ’ ವಾರ ಪತ್ರಿಕೆ ಮತ್ತು ‘ಕೈಲಾಸ’ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ‘ಗೋಕುಲ’ಕ್ಕೆ ಖಾದ್ರಿ ಶಾಮಣ್ಣ ಸಂಪಾದಕರು, ಅವರಿಗೆ ಸಹಾಯಕರು ಬಾ.ಸು.ಕೃಷ್ಣ ಮೂರ್ತಿ. ‘ಕೈಲಾಸ’ಕ್ಕೆ ಸೀತಾರಾಮ ಶಾಸ್ತ್ರಿ  ಸಂಪಾದಕರು. ಅವರಿಗೆ ಎಸ್. ವೆಂಕಟ ರಾವ್ ಸಹಾಯಕರು. ಎಸ್,ವೆಂಕಟ ರಾವ್ ‘ಭಾರತೀಪ್ರಿಯ’ ಎಂಬ ಕಾವ್ಯನಾಮದಲ್ಲಿ ಆ ವೇಳೆಗಾಗಲೆ ಹೆಸರಾಂತ ಕಥೆಗಾರರಾಗಿದ್ದರು.

‘ಗೋಕುಲ’ ಜನಪ್ರಿಯ ವಾರ ಪತ್ರಿಕೆಯಾದರೆ ‘ಕೈಲಾಸ’ ಪ್ರಬುದ್ಧ ಮಾಸ ಪತ್ರಿಕೆಯಾಗಿತ್ತು. ‘ಗೋಕುಲ’ದಲ್ಲಿ ನನ್ನ ಲೇಖನಗಳು ಪ್ರಕಟವಾಗುತ್ತಿದ್ದವು. ‘ಕೈಲಾಸ’ಕ್ಕೆ ನಾನು ಕಳುಹಿಸಿದ ಕಥೆಗಳು ಪ್ರಕಟವಾಗಲೂ ಇಲ್ಲ, ಹಿಂದಿರುಗಿ ಬರಲೂ ಇಲ್ಲ. ನನ್ನ ಕಥೆಗಳ ಬಗ್ಗೆ ತಿಳಿಯಲು ಹಾಗೂ ಅಲ್ಲಿ ನನಗೆ ಉದ್ಯೋಗಾವಕಾಶವಿದೆಯೇ ಎಂದು ತಿಳಿಯಲು ಶಾಸ್ತ್ರಿಗಳನ್ನು ಒಂದು ದಿನ ಅವರ ಕಚೇರಿಯಲ್ಲಿ ಭೇಟಿಯಾದೆ. ಶಾಸ್ತಿçಗಳ ಮುಖದಲ್ಲಿ ನನ್ನಂತೆಯೇ ನಗೆಯ ಒಂದು ರೇಖೆಯೂ ಇರಲಿಲ್ಲ. “ಏನು ಬಂದದ್ದು?’ ಎಂದಷ್ಟೆ ಅವರು ಕೇಳಿದ್ದು. “ಸದ್ಯಕ್ಕೆ ಇಲ್ಲಿ ಕೆಲಸ ಯಾವುದೂ ಖಾಲಿ ಇಲ್ಲ. ಕಥೆಗಳ ಬಗ್ಗೆ ನೀವು ಅವರನ್ನು ಭೇಟಿ ಮಾಡಿ” ಎಂದು ಭಾರತೀಪ್ರಿಯರತ್ತ ನನ್ನನ್ನು ಸಾಗ ಹಾಕಿದರು.

ಟಿನೊಪಾಲ್ ಹಾಕಿ ಒಗೆದು ಇಸ್ತ್ರಿ ಮಾಡಿದ ಅಚ್ಚ ಬಿಳುಪಿನ ಕಚ್ಚೆ ಪಂಚೆ ,ಜುಬ್ಬ, ತಲೆಯಲ್ಲಿ ಅಷ್ಟೇ ಬಿಳುಪಿನ ಪುಡಿಗೂದಲು- ಇದು ಭಾರತೀಪ್ರಿಯರ ಸ್ವಚ್ಛ ವ್ಯಕ್ತಿತ್ವದ ಬಾಹ್ಯ ನೋಟ. ಭಾರತೀಪ್ರಿಯರು ನನ್ನನ್ನು ಕೂಡಿಸಿಕೊಂಡು ನನ್ನ ಕಥೆಗಳ ಬಗ್ಗೆ ಹೇಳಿದರು, ಕೈ ಇನ್ನೂ ಪಳಗಬೇಕೆಂದರು. ಪತ್ರಕರ್ತನಾಗುವ ಆಸೆ ಒಳ್ಳೆಯದೇ ಆದರೆ ಅದರಿಂದ ಹೊಟ್ಟೆ ತುಂಬುವುದಿಲ್ಲ ಯೋಚಿಸಿ ಎಂದು ಬುದ್ಧಿ ಮಾತೂ ಹೇಳಿದರು. “ಪತ್ರಕರ್ತನಾಗಬೇಕಾದರೆ ಪ್ರಪಂಚದ ಎಲ್ಲ ವಿಷಯಗಳ ಬಗ್ಗೆ ಜ್ಞಾನವಿರಬೇಕು. ಪತ್ರಕರ್ತನ ತಲೆ ವೇಸ್ಟ್ ಪೇಪರ್ ಬ್ಯಾಸ್ಕೆಟ್ ಇದ್ದ ಹಾಗೆ, ಬೇಕಾದ್ದು, ಬೇಡವಾದ್ದು ಎಲ್ಲವೂ ಅಲ್ಲಿ ಬಂದುಬೀಳಬೇಕು. ಎಂದೋ ಒಂದು ದಿನ ಅದು ಉಪಯೋಗಕ್ಕೆ ಬರುತ್ತದೆ. ಚೆನ್ನಾಗಿ ಓದಿ ಜ್ಞಾನ ಬೆಳೆಸಿಕೊಳ್ಳಿ” ಎಂದು ಉಪದೇಶಿಸಿ ನನ್ನನು ಕಳುಹಿಸಿಕೊಟ್ಟರು.

ಭಾರತೀಪ್ರಿಯರ ಬಗ್ಗೆ ನಾನು ಒಂದೆರಡು ಮಾತುಗಳನ್ನು ಬರೆಯಲೇಬೇಕು. ಅವರ `ಮೋಚಿ’ ಎಂಬ ಕಥೆ ಬಹಳ ಪ್ರಸಿದ್ಧವಾದುದು. ಕನ್ನಡದ ಪ್ರಮುಖ ಆಂಥಾಲಜಿಗಳಲ್ಲಿ ಸ್ಥಾನ ಗೆದ್ದುಕೊಡಿರುವ ಕಥೆ. ಅವರು ಇನ್ನೂ ಹಲವಾರು ಉತ್ತಮ ಕಥೆಗಳನ್ನು ಬರದಿದ್ದಾರೆ. ಬಹಳ ಶಿಸ್ತಿನ ಮನುಷ್ಯ. ಆರೋಗ್ಯಕರ ಮನಸ್ಸು. ಅವರ ವೃದ್ಧಾಪ್ಯ ದಿನಗಳು ಹಣದ ಮುಗ್ಗಟ್ಟಿನಿಂದಾಗಿ ಕಷ್ಟದ ದಿನಗಳಾಗಿದ್ದವು.

ಇದು ಹೇಗೋ ಹಿರಿಯಣ್ಣ ಮಾಸ್ತಿಯವರಿಗೆ ಗೊತ್ತಾಯಿತು. ಕಷ್ಟದಲ್ಲಿರುವ ಸಹಲೇಖಕರ ನೆರವಿಗೆಂದೇ ಮಾಸ್ತಿಯವರು ಆ ವೇಳೆಗೆ `ಲೇಖಕ ಸಾಹ್ಯ ನಿಧಿ’ ಎಂದು ಒಂದು ಪುದವಟ್ಟು ಇಟ್ಟಿದ್ದರು.ಇದರಿಂದ ಭಾರತೀಪ್ರಿಯರಿಗೆ ಸಹಾಯಮಾಡಬೇಕೆಂಬುದು ಮಾಸ್ತಿಯವರ ಇಚ್ಛೆ. ಆದರೆ ಭಾರತೀಪ್ರಿಯರ ಮನಸ್ಸಿಗೆ ನೋವಾಗಬಾರದು. ಒಂದು ದಿನ ಒಂದಷ್ಟು ಹಣವನ್ನು ಕವರಿನಲ್ಲಿ ಹಾಕಿಕೊಂಡು ಮಾವಿನಕೆರೆ ರಂಗನಾಥನ್ ಅವರನ್ನು ಜೊತೆಗೆ ಕರೆದುಕೊಂಡು ಭಾರತೀಪ್ರಿಯರ ಮನೆಗೆ ಮಾಸ್ತಿಯವರು ಹೋಗುತ್ತಾರೆ. ಭಾರತೀಪ್ರಿಯರ ಆರೋಗ್ಯ ವಿಚಾರಿಸಿ, ಬೇಗ ಗುಣವಾಗಿ ಎಂದು ಹಾರೈಸಿ ಧೈರ್ಯದ ಮಾತುಗಳನ್ನು ಆಡುತ್ತಾರೆ. ನಂತರ ಹೊರಡುವ ಮುನ್ನ ಅವರ ಮನೆಯವರನ್ನು ವಿಚಾರಿಸುವ ನೆಪದಲ್ಲಿ  ಒಳಗೆ ಹೋಗಿ ದುಡ್ಡಿನ ಕವರನ್ನು ಶ್ರೀಮತಿ ಭಾರತೀಪ್ರಿಯರಿಗೆ ಕಾಣುವಂತೆ ದೇವರ ಮಂದಾಸನದ ಬಳಿ ಸದ್ದುಮಾಡದೆ ಇರಿಸಿ ವಾಪಸಾಗುತ್ತಾರೆ.

ಪತ್ರಕರ್ತ ಸದಾ ಜ್ಞಾನದಾಹಿಯಾಗಿರಬೇಕು ಎನ್ನುವ ಅರ್ಥದ ಭಾರತೀಪ್ರಿಯ ಅವರ ಮಾತುಗಳು ಇಂದಿಗೂ ನನ್ನನ್ನು ಪುನರ್‌ನವೀಕರಿಸಿಕೊಳ್ಳಲು ಎಚ್ಚರಿಸುತ್ತಲೇ ಇರುತ್ತದೆ. ಪತ್ರಕರ್ತನಾದವನು ಸಕಲ ಜ್ಞಾನವಲ್ಲಭನಲ್ಲವಾದರೂ ಅವನಿಗೆ ಜಗತ್ತಿನ ಸಕಲ ವಿಷಯಗಳಲ್ಲಿ ಪ್ರಾಥಮಿಕ ಜ್ಞಾನವಾದರೂ ಇರಲೇ ಬೇಕು ಎಂದು ನನಗೆ ಭಾರತೀಪ್ರಿಯರ ಮಾತುಗಳಿಂದ ವೇದ್ಯವಾಯಿತು.ಇಲ್ಲವಾದಲ್ಲಿ, ಇಂತಿಷ್ಟು ಗೋಲುಗಳಿಂದ ಕರ್ನಾಟಕ ಮಹಾರಾಷ್ಟ್ರದ ಮೇಲೆ  ರಣಜಿ ಕ್ರಿಕೆಟ್ ವಿಜಯ ಸಾಧಿಸಿತು ಎಂದೋ ಇಂತಿಷ್ಟು ರನ್ನುಗಳಿಂದ ಹಾಕಿ ಪಂದ್ಯ ಗೆದ್ದಿತು  ಎಂದೋ ಬರೆದು, ಬರೆದವರು ಹಾಗೂ ಪತ್ರಿಕೆ ನಗೆಪಾಟಲಿಗೆ ಈಡಾಬೇಕಾಗುತ್ತದೆ.

ಆಗಿನ ದಿನಗಳಲ್ಲಿ ಕನ್ನಡ ಪತ್ರಿಕಾ ವೃತ್ತಿಯಲ್ಲಿ ಶೃಂಗವೆಂದರೆ ಪ್ರಜಾವಾಣಿ. ಮಹಾತ್ಮಗಾಂಧಿ ರಸ್ತೆಯ ಪ್ರಜಾವಾಣಿ ತರುಣ ಪತ್ರಕರ್ತರ ಗುರಿ, ಆದರ್ಶ ಎಲ್ಲವೂ ಆಗಿತ್ತು. ಕನ್ನಡ ಪ್ರಭ ಶುರುವಾಗಿ ಪತ್ರಕರ್ತರ ವಲಸೆ ಒಂದು ನಿಲುಗಡೆಗೆ ಬಂದಿತ್ತು. ಪ್ರಜಾವಾಣಿಯಲ್ಲಿ ಯಾರನ್ನು ಕಾಣುವುದು, ಹೇಗೆ ಎಂದೇನೂ ತಿಳಿಯದೆ ಸದಾಶಿವನಲ್ಲಿ  ಸಂಕಟ ತೋಡಿಕೊಂಡೆ. “ವೇಕೆನ್ಸಿ ಇದೆಯೋ  ಇಲ್ಲವೋ ತಿಳಿಯದು. ನಿಮಗೆ ವೈ.ಎನ್.ಕೆ. ಪರಿಚಯವಿದೆಯಲ್ಲ, ಅವರನ್ನು ನೋಡಿ”ಎಂದು ಸದಾಶಿವ ಸೂಚಿಸಿದರು. 

ವೈ.ಎನ್.ಕೆ.ಯವರೊಂದಿಗೆ ನನ್ನ ಪರಿಚಯ ಗಾಂಧೀಬಜಾರಿನಲ್ಲಿ `ನಮಸ್ಕಾರ ಸಾರ್’ ಎನ್ನುವಷ್ಟಕ್ಕೆ ಮಾತ್ರ ಸೀಮಿತಗೊಂಡಿತ್ತು.  ಭಾನುವಾರಗಳಂದು  ವಿದ್ಯಾರ್ಥಿ ಭವನದ ಎದುರು ಅವರನ್ನು  ಸುತ್ತುಗಟ್ಟಿ ಅವರ ಶ್ಲೇಷಾತ್ಮಕ (ಪನ್‌ಭರಿತ) ಮಾತುಗಳನ್ನು ಆಲಿಸುತ್ತಿದ್ದ ಗುಂಪಿನಲ್ಲಿ ನಾನೂ ಒಬ್ಬನಾಗಿರುತ್ತಿದ್ದೆ. ಈ ಭಾನುವಾರ ಅವರನ್ನು ಮಾತನಾಡಿಸುವ ಧೈರ್ಯಮಾಡಬೇಕು ಎಂದು ನಿರ್ಧರಿಸಿದೆ. ಅಂದು ಭಾನುವಾರ ಗುಂಪು ಬರ್ಖಾಸ್ತ್ ಮಾಡಿ ಮುಂದೆ ಅಡಿ ಇಟ್ಟ ವೈ.ಎನ್.ಕೆ. ಹಿಂದಿದ್ದ ನನ್ನು ಕಂಡು-

“ರಂಗನಾಥ ರಾವ್ ಆರ್ ಯು ಇಂಟರೆಸ್ಟೆಡ್ ಇನ್ ಜಾಯಿನಿಂಗ್ ಪ್ರಜಾವಾಣಿ?’

-ಎಂದು ಕೇಳಿದರು. ಬಯಸಿದ ಬಳ್ಳಿ ಕಾಲಿಗೆ ಸುತ್ತಿಕೊಂಡಂತಾಗಿತ್ತು.

“ಸರ್ಟನ್‌ಲೀ ಸರ್”

ಎಂದೆ ನಾನು ಭರಪೂರ ಉತ್ಸಾಹದಲ್ಲಿ.

“ಹಾಗಿದ್ದಲ್ಲಿ ನಾಳೆ ಬೆಳಿಗ್ಗೆ ಆಫೀಸಿಗೆ ಬಂದು ಕಾಣಿ” ಎಂದು ನಡೆದುಬಿಟ್ಟರು ವೈ.ಎನ್.ಕೆ.

ಆಗ ರಾತ್ರಿ ಪಾಳಿಯಲ್ಲಿದ್ದ ನಾನು ಬೆಳಿಗ್ಗೆ ಹತ್ತಕ್ಕೆಲ್ಲ ಮನೆ ಬಿಟ್ಟು ಹನ್ನೊಂದಕ್ಕೆ ಪ್ರಜಾವಾಣಿ’ ಸೇರಿ ವೈ.ಎನ್.ಕೆ ಮುಂದೆ ನಿಂತೆ. ಅವರು ಆಗತಾನೆ ಬಂದಿದ್ದರು. ವೈ.ಎನ್.ಕೆ ಸುದ್ದಿ ಸಂಪಾದಕ ಖಾದ್ರಿ ಶಾಮಣ್ಣನವರ ಬಳಿಗೆ ಕರೆದುಕೊಂಡು ಹೋಗಿ “ಶಾಮಣ್ಣ, ಇವರು ರಂಗನಾಥ ರಾವ್’ ಎಂದು ಪರಿಚಯಿಸಿದರು. ಖಾದ್ರಿಯವರಿಗೆ ನನ್ನ ಮುಖ ಪರಿಚಯವಿತ್ತು. ಅವರ ತಮ್ಮ ಅಚ್ಯುತನ್ ಜೊತೆ ಒಂದೆರಡು ಸಲ ಅವರ ಮನೆಗೆ ನಾನು ಹೋಗಿದ್ದುಂಟು.

ಕೂತ್ಕೊಳ್ಳಿ ಎಂದ ಖಾದ್ರಿಯವರು- “ಹೇಗಿದೆ ಹೊಸ ಪತ್ರಿಕೆ ಕನ್ನಡ ಪ್ರಭ? ಅಲ್ಲಿಗೇಕೆ ನೀವು ಹೋಗಲಿಲ್ಲ? ಎಂದು ಕೇಳಿದರು. “ದೈನಿಕ ಧಾರಾವಾಹಿಯೊಂದೇ ಅದರ ಐಡೆಂಟಿಟಿಯಂತೆ ಕಾಣುತ್ತೆ ಸರ್” “ಹೌದು. ಅದೇ ಅದರ ನಾವೆಲ್ಟಿ” ಎಂದು ಉತ್ತರಿಸಿ ಆಗ ಬೆಳಗಿನ ಪಾಳಿಯಲ್ಲಿದ್ದ ಮುಖ್ಯ ಉಪಸಂಪಾದಕ ಬಿ.ಎಂ. ಕೃಷ್ಣಸ್ವಾಮಿಯವರತ್ತ ತಿರುಗಿ, “ಬಿ.ಎಂ.ಕೆ ಇವರಿಗೊಂದಿಷ್ಟು ಕಾಪೀಸ್ ಕೊಡಿ ಭಾಷಾಂತರಿಸಲು” ಎಂದರು.

ಬಿ.ಎಂ.ಕೆ ದೇಶವಿದೇಶಗಳ ಐದಾರು ಸುದ್ದಿಗಳನ್ನು ಕೊಟ್ಟರು. ಬರೆಯಲು ಕಾಗದ ಕೊಡಿಸಿದರು. ಅರ್ಧಮುಕ್ಕಾಲು ಗಂಟಯಲ್ಲಿ ಮುಗಿಸಿಕೊಟ್ಟೆ. ಖಾದ್ರಿಯವರು ಸಂಪಾದಕ ಟಿ.ಎಸ್. ರಾಮಚಂದ್ರರಾಯರ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿದರು. ನಾನು ನನ್ನ ಪ್ರವರ ಹೇಳಿಕೊಂಡೆ.

“ಎಲ್ಲ ಸರಿ, ಶ್ಯಾಮ ರಾಯರು ನಿಮ್ಮನ್ನು ಬಿಟ್ಟುಕೊಡುವರೆ?”

“ಒಲ್ಲದ ಮನಸ್ಸಿನವರನ್ನು ಹೇಗೆ ಹಿಡಿದಿಟ್ಟುಕೊಳ್ಳಲು ಸಾಧ್ಯ ಸಾರ್?”

ಟಿಎಸ್ಸಾರ್ ನಕ್ಕು ಬಿಟ್ಟರು. ಅಲ್ಲಿಗೆ ಮುಗಿಯಿತು ಸಂದರ್ಶನ.

“ಅಯ್ತು ನೋಡೋಣ”

ನಾನು ನಮಸ್ಕಾರ ಹೇಳಿ ಹೊರ ಬಂದು ಖಾದ್ರಿಯವರಿಗೆ ಕಾದೆ. ಖಾದ್ರಿಯವರುನೋಡೋಣ ಹೋಗಿಬನ್ನಿ’ ಎಂದರು.

ಇಷ್ಟಾದದ್ದು ೧೯೬೭ರ ನವೆಂಬರಿನ ಒಂದು ಸೋಮವಾರ. ಬುಧವಾರ ರಾತ್ರಿ ಹನ್ನೊಂದರ ಸುಮಾರಿಗೆ ಇಂದಿರಾತನಯರು ಫೋನ್ ಮಾಡಿ-

“ನಾಳೆ ಬೆಳಿಗ್ಗೆ ನೀವು ಖಾದ್ರಿ ಶಾಮಣ್ಣನವರುನ್ನು ಕಾಣಿ’ ಎಂದರು.

“ಶ್ಯಾಮ್ ಅಲ್ಲವೆ ಮಾತಾಡಿದ್ದು?” ಎಂದು ಕೇಳಿದರು ಮುಖ್ಯ ಉಪಸಂಪಾದಕ ಎನ್.ವಿ.ಜೋಶಿ. ಅವರು ವಾಸನೆ ಹಿಡಿದಿದ್ದರು. ರಾತ್ರಿ ಎಡಿಷನ್ ಮುಗಿದು ಮನೆಗೆ ಹೊರಡುವಾಗ ಜೋಶಿ,”ಏನೋ ನಾಳೆ ಡ್ಯೂಟೀಗೆ ಬರ‍್ತಿ ತಾನೆ?” ಎಂದು ಕೇಳಿದರು.

“ಬರ‍್ದೇ ಏನ್ಸಾರ್…”

ಜೋಶಿ ನಕ್ಕುಬಿಟ್ಟರು.

ಮರುದಿನ ಗುರುವಾರ ಬೆಳಿಗ್ಗೆ ಹತ್ತಕ್ಕೆಲ್ಲ ಪ್ರಜಾವಾಣಿ ಆಫೀಸಿನಲ್ಲಿದ್ದೆ. ಖಾದ್ರಿಯವರು ಆಗ ತಾನೆ ಬಂದು ಕರೆಕ್ಷನ್ ಕಾಪಿ ಮಾಡುತ್ತಿದ್ದರು. ಕೂತ್ಕೊಳ್ಳಿ ಎಂದು ಹೇಳಿದವರೇ ಮರು ಉಸುರಿನಲ್ಲೆ ಕೇಳಿದರು:

“ಯಾವತ್ತಿನಿಂದ ಬರ್ತೀರಿ?’

ನಾನು ಉತ್ತರಿಸುವುದಕ್ಕೂ ಮೊದಲೇ-

“ಇವತ್ತಿನಿಂದಲೇ ಬನ್ನಿ.ರಾತ್ರಿ ಪಾಳಿಗೆ. ಹೋಗಿ ‘ಸಂಕ’ ಪರ್ಲು ಹರಕೊಳ್ಳಿ” ಎಂದು ಉಪದೇಶಿಸಿದರು.

ನಾನು ಪ್ರಜಾವಾಣಿಯಲ್ಲೇ ಒಂದು ಕ್ವಾರ್ಟರ್ ಶೀಟ್ ತೆಗೆದುಕೊಂಡು ರಾಜೀನಾಮೆ ಪತ್ರ ಬರೆದು ಸಿದ್ಧ ಪಡಿಸಿಕೊಂಡು ಸೀದಾ ರೆಸಿಡೆನ್ಸಿ ರಸ್ತೆಗೆ ಹೋಗಿ ನಾಗೇಶ ರಾಯರ ಮುಂದೆ ಕುಳಿತೆ. “ರಾತ್ರಿ ಪಾಳಿ ಅಲ್ಲವೇ? ಏನು ಬೆಳಿಗ್ಗೆ ಬಂದದ್ದು?” ಎಂದು ನಾಗೇಶ ರಾಯರು ಕೇಳಿದರು. ರಾಜೀನಾಮೆ ಪತ್ರವನ್ನು ಅವರ ಕೈಯಲ್ಲಿಟ್ಟೆ.

“ಎಂ.ಜಿ. ರೋಡೋ ಕ್ವೀನ್ಸ್ ರೋಡೋ?’ “ಮಹಾತ್ಮ ಗಾಧಿ ರಸ್ತೆ ಸಾರ್” -ನಾನು ಉಬ್ಬಿದ ದನಿಯಲ್ಲಿ ಹೇಳಿದೆ. “ಒಳ್ಳೆಯದಾಗಲಿ. ಆದರೆ ನೀವು ಇದನ್ನು ಸಂಪಾದಕರಿಗೆ ಕೊಡಬೇಕು” ಎಂದು ರಾಜೀನಾಮೆಯನ್ನ ಹಿಂದಿರುಗಿಸಿ “ಇದಾರೆ ಹೋಗಿ ನೋಡಿ” ಎಂದರು. ರೆಕ್ಕೆ ಬಾಗಿಲು ತೆರೆದುಕೊಂಡು ಒಳಗೆ ಅಡಿ ಇಟ್ಟು ನಮಸ್ಕಾರ ಸಾರ್ ಎಂದೆ’. “ಏನು ಬಂದಿ?” ರಾಜೀನಾಮೆ ಪತ್ರವನ್ನು ಅವರ ಮುಂದಿಟ್ಟೆ. ಅದನ್ನು ಕೈಗೆತ್ತಿಕೊಂಡು ಕಣ್ಣಾಡಿಸಿದರು, ನಂತರ ಹರಿದು ಕಸದ ಬುಟ್ಟಿಗೆ ಹಾಕಿ- “ರಾತ್ರಿ ಪಾಳಿ ಅಲ್ಲವೆ. ಹೋಗು ರಾತ್ರಿ ಕೆಲಸಕ್ಕೆ ಬಾ. ಪ್ರೊಬೇಷನರಿ ಪೀರಿಯಡ್ ಮುಗಿದು ಕಾಯಮ್ಮಾದ ಮೇಲೆ ಐದು ವರ್ಷ ಸೇವೆ ಕಡ್ಡಾಯ. ಇದು ಕಂಪನಿಯ ಸ್ಟಾಂಡಿಂಗ್ ಆರ್ಡರ್. ತಿಳೀತಾ, ಹೋಗು” ಎಂದರು ಶಾಮರಾಯರು.

“ಸಾರ್ ನನ್ನ ಮನಸ್ಸು ಈಗ ಬೇರೆ ಕಡೆ ಇದೆ.ಇಲ್ಲಿದ್ರೂ ನಾನು ಮನ:ಪೂರ್ವಕ ಕೆಲಸಮಾಡುವುದು ಸಾಧ್ಯವಿಲ್ಲ ದಯವಿಟ್ಟು ರಾಜೀನಾಮೆ ಸ್ವೀಕರಿಸಿ ಬಿಟ್ಟುಕೊಡಿ” ನಾನು ಅತ್ಯಂತ ವಿನಿಯದಿಂದ ಕೇಳಿಕೊಂಡೆ. “ಬೇರೆ ಕಡೆ ಇದೆಯೋ ಮನಸ್ಸು! ರಂಗನಾಥ ರಾವ್ ಮೈಂಡ್ ಇಟ್, ನೀನು ಇಲ್ಲೇ ಇರು; ಎಲ್ಲೇ ಇರು; ಇಫ್ ಐ ಮೈಂಡ್ ಐ ಕೆನ್ ಮೇಕ್ ಯುವರ್ ಕೆರಿಯರ್ ಆರ್ ಮಾರ್ ಯುವರ್ ಕೆರಿಯರ್. ಅರ್ಥ ಮಾಡಿಕೊ” ಎಂದವರೇ “ನೀನಿನ್ನು ಹೋಗು” ಎಂದು ಆಜ್ಞಾಪಿಸಿದರು.

ಜೋರು ಗಂಟಲಿನ ಅವರ ಕೊನೆಯ ಮಾತುಗಳು ಹೊರಗಿದ್ದವರಿಗೂ ಕೇಳಿಸಿತ್ತು. ಹೊರಗೆ ಬಂದ ಕೂಡಲೇ ನಾಗೇಶ ರಾಯರು ಕರೆದು ತಮ್ಮ ಮುಂದೆ ಕೂಡಿಸಿಕೊಂಡರು. ಬರ‍್ತೀನಿ ಸಾರ್ ಎಂದೆ. ಕಾಫಿ ಬರುತ್ತೆ ಎಂದು ತಮ್ಮ ಕೆಲಸದಲ್ಲಿ ಮಗ್ನರಾದರು. ಕಾಫಿ ಆಯಿತು. “ಆತುರ ಪಡಬೇಡಿ. ಯೋಚನೆ ಮಾಡಿ. ರಾತ್ರೀ ಬರ‍್ತೀರಿ ತಾನೆ” ಎಂದ ಕೇಳಿ ಬೀಳ್ಕೊಟ್ಟರು.

ಅಲ್ಲಿಂದ ನೇರ ಜಿ.ಪಿ.ಒ.ಗೆ ಹೋಗಿ ಮುಖ್ಯ ಸಂಪಾದಕರಾದ ರಂಗನಾಥ ದಿವಾಕರ ಅವರ ಬೆಂಗಳೂರು ಮತ್ತು ಹುಬ್ಬಳ್ಳಿ ವಿಳಾಸಕ್ಕೆ ಎರಡು ರಾಜೀನಾಮೆ ಪತ್ರಗಳನ್ನು ಬರೆದು ರಿಜಿಸ್ರ‍್ಡ್ ಅಕ್ನಾಲೆಜ್ ಮೆಂಟ್ ಡ್ಯೂ ಪೋಸ್ಟಿನಲ್ಲಿ ಕಳುಹಿಸಿದೆ. ಅದರ ಪ್ರತಿ ಇಟ್ಟುಕೊಳ್ಳಲು ಮರೆಯಲಿಲ್ಲ. ಶಾರಾ ಅವರ ‘ಮೇಕ್ ಆರ್ ಮಾರ್’ ಬೆದರಿಕೆಗೆ `ಗೋಲಿಮಾರೋ’ ಎಂದು ಮನೆ ಸೇರಿದಾಗ ಸಂಜೆಯಾಗಿತ್ತು. ಅಮ್ಮನಿಗೆ, ಅಣ್ಣನಿಗೆ ಪ್ರಜಾವಾಣಿ ಸೇರುತ್ತಿರುವ ವಿಷಯ ತಿಳಿಸಿದೆ.

“ಸಂಬಳ ಎಷ್ಟು”?

“ಗೊತ್ತಿಲ್ಲ”

। ಮುಂದಿನ ವಾರಕ್ಕೆ ।

September 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ನೆನಪುಗಳ ಮೆರವಣಿಗೆ ಚೆನ್ನಾಗಿದೆ.

    ಪ್ರತಿಕ್ರಿಯೆ
  2. ಸಿ. ಎನ್. ರಾಮಚಂದ್ರನ್

    ಪ್ರಿಯ ಜಿ. ಎನ್. ಆರ್: ನಿಮ್ಮ ಕಲ್ಲುಮುಳ್ಳಿನ ಪಯಣ ಕುತೂಹಲಕರವಾಗಿದೆ, 50 ವರ್ಷಗಳ ಹಿಂದಿನ ವ್ಯವಸ್ಥೆಗಳ ವಿರುದ್ಧ ನಿಮ್ಮ ಹೋರಾಟ ರೋಚಕವಾಗಿದೆ. ಧನ್ಯವಾದಗಳು.

    ಪ್ರತಿಕ್ರಿಯೆ
  3. ಲಕ್ಷ್ಮಣ ಕೊಡಸೆ

    ಆ ದಿನಗಳ ನೆನಪು ಕುತೂಹಲಕರ… ನಮ್ಮ ಮೂರು ದಶಕಗಳ ವೃತ್ತಿ ಬದುಕಿನ ಪಯಣವನ್ನೂ ನೆನಪಿಸಿ ದಾಖಲಿಸುವಂತೆ ಉತ್ತೇಜನಕಾರಿಯಾಗಿದೆ.. ಮುಂದಿನ ಕಂತಿಗೆ ಕಾಯುವಂತಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: