ಸಿನೆಮಾ ಕತೆ ಹೇಗೆ ಬರೆಯೋದು ನನಗೆ ಗೊತ್ತಿಲ್ಲಾ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ಅವಧಿಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು. 

ಬೆಳಗಿಂದ ತುಂಬಾ ಯೋಚನೆ ಮಾಡಿ ಆದದ್ದಾಗಲಿ ಕೇಳಿಯೇ ಬಿಡೋಣ ಅಂತ ನಿರ್ಧರಿಸಿ, ಸಂಜೆ ಒಂದು ಮೆಸೇಜ್ ಹಾಕಿದೆ, ಮೇಡಂ ಬ್ಯುಸೀನಾ ಅಂತ. ಸ್ವಲ್ಪ ಹೊತ್ತಿಗೆ ಸಂಧ್ಯಾ ಮೇಡಂ ಅವರೇ ಕಾಲ್ ಮಾಡಿದ್ರು, 

ಸಂಧ್ಯಾ ರಾಣಿ : ಏನ್ ಮಂಜು, ಏನ್ ವಿಷ್ಯಾ ಹೇಳಿ,

ನಾನು : ಏನಿಲ್ಲಾ, ಮೇಡಂ, ಹೊಸ ಕತೆ ಎಳೆ ಒಂದು ತಲೇಗ್ ಬಂತು, ನಿಮ್ ಹತ್ರ ಹೇಳೋಣ ಅಂತ ಅನ್ನಿಸ್ತು, ಅದಕ್ಕೆ ಮೆಸೇಜ್ ಮಾಡಿದ್ದೆ. 

ಸಂಧ್ಯಾ ರಾಣಿ : ಹೇಳಿ ಮಂಜು 

ನಾನು ಒಂದೇ ಉಸಿರಿಗೆ ಕತೆ ಎಳೆ ಹೇಳಿ, ಅವರ ಪ್ರತಿಕ್ರಿಯೆ ಏನು ಬರಬಹುದೋ ಎಂದು ಕಿವಿ ಚುರುಕಾಗಿಸಿಕೊಂಡು ನಿಂತಿದ್ದೆ, 

ಸಂಧ್ಯಾ ರಾಣಿ :  ‘ಸೂಪರ್ ಮಂಜು, ಸಕ್ಕತ್ತಾಗಿದೆ ನೀವು ಈ ಸಿನೆಮಾ ಮಾಡಿ. ಕನ್ನಡದಲ್ಲಿ ಒಳ್ಳೆ ಸಿನೆಮಾ ಆಗುತ್ತೆ, ಇಲ್ಲಿಯವರೆಗೂ ಯಾರೂ ಇಂತಹ ಪ್ರಶ್ನೆ ರೈಸ್ ಮಾಡಿಲ್ಲಾ.

ನಾನು : ಥ್ಯಾಂಕ್ಯೂ, ನಿಮಗೆ ನಿಜ್ವಾಗ್ಲೂ ಇಷ್ಟ ಆಯ್ತಾ?

ಸಂಧ್ಯಾ ರಾಣಿ : ನಿಜಾ ಇಷ್ಟಾ ಆಯ್ತು, ಕನ್ನಡದಲ್ಲಿ ಇಲ್ಲಿವರೆಗೂ ಯಾರೂ ಇಂತಹದ್ದೊಂದು ಟ್ರೈ ಮಾಡಿಲ್ಲಾ. ನೀವು ಮಾಡಿದ್ರೆ ಅರ್ಥಪೂರ್ಣವಾಗಿ ಮಾಡ್ತೀರಾ, ಆ ಸೂಕ್ಷ್ಮತೆ ನಿಮಗಿದೆ, ಮಾಡಿ. ಗೋ ಅಹೆಡ್.

ನಾನು : ನಿಮ್ಗೆ ನಿಜ್ವಾಗ್ಲೂ ಇಷ್ಟ ಆಗಿದ್ರೆ, ನಿಮ್ಮಿಂದ ಒಂದು ಹೆಲ್ಪ್ ಕೇಳ್ಬಹುದಾ?

ಸಂಧ್ಯಾ ರಾಣಿ : ಏನ್ ಹೆಲ್ಪ್ ಕೇಳಿ ಮಂಜು,

ನಾನು : ಈ ಎಳೇನಾ ಕಥೆಯಾಗಿ ನೀವೇ ಬರೆದು ಕೊಡಬೇಕು.

ಸಂಧ್ಯಾರಾಣಿ : (ನಕ್ಕು) ನಾನಾ? ಏನ್ ತಮಾಷೆ ಮಾಡ್ತಿದ್ದೀರಾ?

ನಾನು : ತಮಾಷೆ ಅಲ್ಲಾ, ನಾನು ಸೀರಿಯಸ್ ಆಗಿ ಕೇಳ್ತಿದ್ದೀನಿ. ಈ ಎಳೆಗೆ ನನಗೆ ಕಂಪ್ಲೀಟ್ ಆಗಿ ಹೆಣ್ಣಿನ ದೃಷ್ಟಿಕೋನ, ಹಾಗೂ ದೃಶ್ಯಗಳಲ್ಲಿ ಹೆಣ್ತನ ಇರಬೇಕು, ಅದನ್ನ ನೀವು ಮಾತ್ರ ನನಗೆ ಬರೆದುಕೊಡಬೇಕು ಅಂತ ಅನ್ನಿಸ್ತಿದೆ, ಪ್ಲೀಸ್ ಬರೆದುಕೊಡಿ.

ಸಂಧ್ಯಾರಾಣಿ : ನಾನು ಇಲ್ಲಿಯವರೆಗೂ ಯಾವ ಸಿನೆಮಾಗು ಬರೆದಿಲ್ಲಾ, ಸಿನೆಮಾ ಕತೆ ಹೇಗೆ ಬರೆಯೋದು ನನಗೆ ಗೊತ್ತಿಲ್ಲಾ,

ನಾನು : ನೀವು ನಾಟಕಗಳನ್ನು ಬರೆದಿದ್ದೀರಾ, ಸಿನೆಮಾನ ‘ನೋಡೋದು’ ಅದನ್ನು ‘ಓದೋದು’ ಓದಿದ್ದನ್ನ ‘ಗ್ರಹಿಸಿ’ ಆರ್ಟಿಕ್ಯುಲೇಟ್ ಮಾಡೋದು ನಿಮಗೆ ಗೊತ್ತು, ಸೋ ನಿಮ್ ಕೈಲಿ ಆಗುತ್ತೆ, ಪ್ಲೀಸ್ ಒಪ್ಕೊಳ್ಳೀ.

ಸಂಧ್ಯಾ ರಾಣಿ : ಇದು ದೊಡ್ಡ ಜವಾಬ್ದಾರಿ, ನನಗೆ ಸ್ವಲ್ಪ ಟೈಂ ಬೇಕು ಮಂಜು

ನಾನು : ಧಾರಾಳವಾಗಿ ಎಷ್ಟು ಬೇಕಾದ್ರು ಟೈಂ ತಗೊಳ್ಳಿ, ನಾಳೆ ಸಂಜೆ ಒಳಗೆ ಹೇಳಿ ಸಾಕು 

ಸಂಧ್ಯಾರಾಣಿ : ಅಬ್ಬಾ, ತುಂಬಾನೇ ಟೈಂ ಕೊಟ್ಟಿದ್ದೀರಾ, ನಾಳೆ ಆಗಲ್ಲಾ ನಾಡಿದ್ದು ಹೇಳ್ತೀನಿ.

ನಾನು : ಸರಿ ನಾಡಿದ್ದು ನಾನೇ ನಿಮ್ ಮನೇಗ್ ಬರ್ತೀನಿ. ನೇರವಾಗಿನೇ ಹೇಳಿ.  ಅಂತ ಪಟ್ ಪಟ್ ಮಾತಾಡಿ ಕಾಲ್ ಕಟ್ ಮಾಡ್ದೆ. ಒಳಗೆ ಡವ ಡವ ಅಂತ ಅಂತಿತ್ತು.

ಯಾಕೆಂದ್ರೆ, ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ಕಲಾವಲಯದಲ್ಲಿ ನನಗೆ ಸಾಕಷ್ಟು ಚರ್ಚೆ ಮಾತುಕತೆ ಮಾಡಿ ಅನುಭವ ಇತ್ತೇ ಹೊರತು ಕಲಾವಲಯದ ಆಚೆ ಯಾರೊಂದಿಗೂ ಇಂತಹ ವಿಷಯಗಳ ಕುರಿತಂತೆ ಚರ್ಚೆ ಮಾಡಿರಲಿಲ್ಲಾ.

ಸಂಧ್ಯಾ ಮೇಡಂ ಅವರ ಪರಿಚಯ ಏಳೆಂಟು ತಿಂಗಳಿನದಷ್ಟೇ. ಆಗಿನ್ನೂ ನಾವು ಫಾರ್ಮಲ್ ಮಾತುಗಳ ಆಚೆ ಬೇರೆ ಬೇರೆ ವಿಷಯಗಳ ಬಗ್ಗೆ, ರಾಜಕೀಯ, ಸಿದ್ದಾಂತ ಹಾಗೂ ಸಿನೆಮಾಗಳ ಬಗ್ಗೆ ತುಂಬಾ ಆಪ್ತವಾಗಿ ಜಗಳವಾಡುವಷ್ಟರ ಮಟ್ಟಿಗೆ ಪರಿಚಯ ಬೆಳೆದಿತ್ತು, ಜೊತೆಗೆ ಸಂಧ್ಯಾ ಮೇಡಂ ನನ್ನ ‘ಹರಿವು’ ಸಿನೆಮಾ ನೋಡಿ ನನ್ನ ಬಗ್ಗೆ ಸಾಕಷ್ಟು ಅಭಿಮಾನದಿಂದ ಮಾತಾಡಿದ್ದರು.

ಇಂತಹ ಸನ್ನವೇಶದಲ್ಲಿ ಸಡನ್ನಾಗಿ ಇಂತಹ ಕತೆಯ ಎಳೆಯನ್ನು ಅವರಿಗೆ ಹೇಳಿದ್ದು, ಮತ್ತು ಅದಕ್ಕೆ ಅವರಿಗೇ ಕತೆಯನ್ನು ಬರೆದುಕೊಡಿ ಎಂದು ಕೇಳುವಾಗ, ಕೇಳಿದ ನಂತರ ನನ್ನೊಳಗೆ ಆತಂಕ ಭಯ ಕಾಡಲು ಕಾರಣ ನನಗೆ, ನನ್ನೊಳಗೆ ನಾನು ಕಾಪಿಟ್ಟುಕೊಂಡಿದ್ದ ‘ಇಮೇಜ್’ ಬಗ್ಗೆ ಮೇಡಂ ಏನಂದು ಕೊಳ್ತಾರೋ ಎಂಬ ಪ್ರಶ್ನೆ ಮೂಡಿತ್ತು. 

ಕಾಲ್ ಕಟ್ ಆದಮೇಲೆ ಇದರ ಬಗ್ಗೇನೇ ಯೋಚನೆ ಮಾಡುತ್ತಿದ್ದೆ, ಆಗ ಮತ್ತೆ ಮತ್ತೆ ತಲೆಯೊಳಗೆ ಮೂಡಿದ ಪ್ರಶ್ನೆ ಈ ‘ಇಮೇಜ್’. ಅರೇ ನಾನು ಒಬ್ಬ ‘ಗಂಡಾಗಿ’ ನನ್ನ ಬಗ್ಗೆ ಬೇರೆಯವರು ಇಂತಹ ವಿಷಯದ ಬಗ್ಗೆ ಮಾತನಾಡಿದರೆ ಏನಂದು ಕೊಳ್ತಾರೋ ಎಂಬ ಆತಂಕ ಇಷ್ಟು ಕಾಡುತ್ತೆ ಅನ್ನೋದಾದ್ರೆ, ಸರ್ವ ರೀತಿಯಲ್ಲೂ ಹೆಣ್ಣನ್ನು ನಿರ್ಬಂಧಿಸಿರುವ ಈ ಸಮಾಜದಲ್ಲಿ, ಹೆಣ್ಣು ಹೇಗೆ ತನ್ನಾಸೆಯ ಬಗ್ಗೆ ಹೇಳಿಕೊಳ್ಳಬಹುದು? ಕೇಳಬಹುದು? ಅದಕ್ಕೆ ಸಮಾಜದ ಪ್ರತಿಕ್ರಿಯೆ ಹೇಗಿರಬಹುದು?

ಹೆಣ್ಣನ್ನ ಅಗೋಚರವಾಗಿ ನಿಯಂತ್ರಿಸುವ ಈ ‘ನಾಗರಿಕತೆ’ ಸಮಾಜವನ್ನೇ ಸಿನೆಮಾದಲ್ಲಿ ದೃಶ್ಯೀಕರಿಸಲು ಪ್ರಯತ್ನ ಮಾಡಿದರೆ ಹೇಗೆ? ಈ ಹೋರಾಟ ಬಾಹ್ಯಕ್ಕಿಂತ ಹೆಚ್ಚಾಗಿ ಆಂತರಿಕ ಹೋರಾಟಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟರೆ ಹೆಚ್ಚು ಎಫೆಕ್ಟಿವ್ ಆಗಬಹುದು. ನನಗೂ ಅದು ಚಾಲೆಂಜಿಂಗ್ ಆಗಿರುತ್ತದೆ, ಹೇಗಾದ್ರು ಮೇಡಂ ಓಕೆ ಅಂದ್ಬಿಟ್ರೆ ಸಾಕು, ಎದುರಿಗೆ ಹೋಗಿ ಕೂತು, ಅವ್ರು ಒಪ್ಲಿಲ್ಲಾ ಅಂತಂದ್ರೆ ಹೇಗಾದ್ರು ಮಾಡಿ ಕನ್ವಿನ್ಸ್ ಮಾಡಿ ಅವ್ರ ಒಪ್ಸೋಣ, ಹಾಗೇ ನನ್ನ ಆರ್ಥಿಕ ಮಿತಿಗಳನ್ನು ಅವರಿಗೆ ಮೊದಲೇ ಹೇಳಿಬಿಡೋಣ ಅಂತ ನಿರ್ಧರಿಸಿದೆ.

ಮುಂದಿನ ವಾರಕ್ಕೆ

‍ಲೇಖಕರು ಮಂಸೋರೆ

September 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗಣಪತಿ ಬಾಳೆಗದ್ದೆ

    ನಾನು ಇತ್ತೀಚೆಗೆ ಅವಧಿಯ ಓದುಗ. ಇಷ್ಟವಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: