ತ್ರಿಪುರದ ಮೊದಲ ಕಾದಂಬರಿ ಸಿಪಿಎಂ ಲೇಖಕನದ್ದು..

ಈ ಸಪ್ತ ಸಹೋದರಿಯರೇ ವಿಶಿಷ್ಟ… ಒಂದೊಂದು ರಾಜ್ಯದಲ್ಲಿ ಒಂದೊಂದು ವಿಶೇಷತೆಗಳು ಕಣ್ಣಿಗೆ ಬೀಳದೇ ಇರದು. ಭಾರತದ ಉಳಿದ ಭಾಗಗಳ ಜನರಿಗೆ, ಈ ರಾಜ್ಯಗಳ, ಮೇಲೆ ನೀಗದ ಕುತೂಹಲ. ಇಲ್ಲಿನ ಜನರ ಚಹರೆಗಳು ಒಟ್ಟು ಭಾರತದವರ ಚಹರೆಗಿಂತಾ ಕೊಂಚ ಭಿನ್ನ. ಮಂಗೋಲಾಯ್ಡ್ ಜನಾಂಗಕ್ಕೆ ಸೇರಿದ ಬುಡಕಟ್ಟುಗಳೇ ಇಲ್ಲಿ ಹೆಚ್ಚಾಗಿರುವ ಕಾರಣ ಚೀನಿಯರನ್ನು ಹೋಲುವುದರಿಂದ ಇವರನ್ನು ನಮ್ಮವರೆಂದು ಸಂಪೂರ್ಣ ಒಪ್ಪಿಕೊಳ್ಳದ ಮನಸ್ಥಿತಿಯವರೂ ಇದ್ದಾರೆನ್ನುವುದೇ ಆಶ್ಚರ್ಯ.

 ಇಡೀ 7 ರಾಜ್ಯಗಳ ಒಟ್ಟು ಜನಸಂಖ್ಯೆ ನಮ್ಮ ದೇಶದ ಮತ್ತೊಂದು ಜನಸಾಂದ್ರಿತ ರಾಜ್ಯ ಒರಿಸ್ಸಾ ರಾಜ್ಯವೊಂದರ ಜನಸಂಖ್ಯೆಗೆ ಸಮ!

 ಈ ಸಪ್ತ ರಾಜ್ಯಗಳೂ ನಮ್ಮ ಭಾರತಕ್ಕೆ ಹೇಗೆ ಸಂಪರ್ಕ ಹೊಂದಿದೆಯೆಂದು ನೋಡಿದರೆ ಅಚ್ಚರಿಯಾಗುತ್ತದೆ, ‘ಸಿಲಿಗುರಿ ಕಾರಿಡಾರ್’ ಅಥವಾ ‘ಚಿಕನ್ಸ್ ನೆಕ್’ ಎಂಬ ಚಿಕ್ಕ ಜಾಗವೊಂದರ ಪ್ರವೇಶವೊಂದರಿಂದ ಈ ಈಶಾನ್ಯ ರಾಜ್ಯಗಳು ಭಾರತಕ್ಕೆ ಅಂಟಿಕೊಂಡಿವೆ.

 ಶೇಕಡ ತೊಂಬತ್ತರಷ್ಟು ಈಶಾನ್ಯ ರಾಜ್ಯಗಳ ಗಡಿಗಳು, ಚೀನಾ, ಮಯನ್ಮಾರ್, ಭೂತಾನ್ ಹಾಗೂ ಬಾಂಗ್ಲಾದೇಶದೊಂದಿಗಿದೆ.

 1963ರ ವರೆಗೆ ಅಸ್ಸಾಂ, ಮಣಿಪುರ ಹಾಗೂ ತ್ರಿಪುರಗಳು ಮಾತ್ರ ರಾಜ್ಯಗಳೆಂದು ಕರೆಸಿಕೊಂಡಿದ್ದವು. 1963ರಲ್ಲಿ ನಾಗಾಲ್ಯಾಂಡ್ ಅಸ್ಸಾಂನಿಂದಲೂ, 1972ರಲ್ಲಿ ಮೇಘಾಲಯ, 1987ರಲ್ಲಿ ಅರುಣಾಚಲಪ್ರದೇಶ, 1987ರಲ್ಲಿ ಮಿಜೋರಾಂ ತಮ್ಮತನವನ್ನು ಸ್ಥಾಪಿಸಿಕೊಂಡವು.

 ಜೀವವೈವಿಧ್ಯದಲ್ಲಿ ಅಪಾರ ಸಂಪತ್ತನ್ನು, ವಿಭಿನ್ನತೆಯನ್ನು ಹೊಂದಿರುವ ಪ್ರಪಂಚದ ಏಳು ಸ್ಥಳಗಳಲ್ಲಿ ಈ ರಾಜ್ಯಗಳೂ ಸೇರಿವೆ.

 ಪ್ರಪಂಚದ ಆರ್ಕಿಡ್ ಹೂವಿನ ಪ್ರಭೇದಗಳಲ್ಲಿ ಶೇಕಡ 70ರಷ್ಟು ಈಶಾನ್ಯ ರಾಜ್ಯಗಳಿಗೆ ಸೇರಿದ್ದು!

 ಪ್ರಪಂಚದ ನದಿಯ ಮಧ್ಯೆಯಿರುವ ಜೀವಂತ ದ್ವೀಪಗಳಲ್ಲಿ ಬ್ರಹ್ಮಪುತ್ರಾ ನದಿಯಲ್ಲಿರುವ ಮಜುಲಿಯು ಈ ರಾಜ್ಯಗಳಲ್ಲಿದೆ.

 ಈಶಾನ್ಯ ರಾಜ್ಯಗಳಲ್ಲಿ ಹರಿಯುವ ಬ್ರಹ್ಮಪುತ್ರಾ ಪ್ರಮುಖ ನದಿ, ಮೂರು ದೇಶಗಳಲ್ಲಿ ಬಾಗಿ ಬಳುಕುತ್ತಾ ಹರಿವ ಭಾರತದ ಏಕೈಕ ನದಿ.

 ಶೇಕಡ 70ರಷ್ಟು ಈಶಾನ್ಯ ರಾಜ್ಯಗಳು ಗುಡ್ಡಗಾಡುಗಳಿಂದ ಕೂಡಿದೆ.

 ಇಲ್ಲಿನ ಭಾಷೆ ಹಾಗೂ ಸಂಸ್ಕøತಿಗಳು ಟಿಬೇಟಿಯನ್, ಏಷಿಯನ್ ಹಾಗೂ ಪಶ್ಚಿಮ ಭಾರತಗಳ ಮಿಶ್ರಣವಾಗಿದೆ.

 ಭಾರತದ ಅತ್ಯಂತ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಏಳು ಉದ್ಯಾನಗಳು ಇಲ್ಲಿವೆ. (ಕಾಜಿರಂಗ ಹಾಗು ಮಾನಸ್ ಒಳಗೊಂಡಂತೆ)

 ಇಡೀ ಭಾರತದಲ್ಲಿ ಒಂದು ಕೊಂಬಿನ ಘೇಂಡಾಮೃಗ ಅಥವಾ ಖಡ್ಗಮೃಗದ ಪ್ರಭೇದ ಕೇವಲ ಈ ರಾಜ್ಯಗಳಲ್ಲಿರುವಂಥದ್ದು.

 ಭಾರತದ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಎರಡು ರಾಜ್ಯಗಳು ತ್ರಿಪುರ ಮತ್ತು ಮಿಜೋರಾಂ.

 ಈ ರಾಜ್ಯಗಳಲ್ಲಿ ಸರಿಸುಮಾರು 220 ಭಾಷೆಗಳನ್ನು ಆಡುವ ಜನ ಪಂಗಡಗಳಿವೆ!.

 ಭಾರತದ ಸಂಗೀತವು ಈ ರಾಜ್ಯಗಳಲ್ಲಿ ಅತ್ಯಂತ ವೈಬ್ರೆಂಟ್ ಅಂಡ್ ಆಕ್ಟಿವ್ ಆಗಿದೆ.

 ಭಾರತದ ಅತಿಹೆಚ್ಚಿನ ಚಹಾ ಉತ್ಪಾದನೆ ಈಶಾನ್ಯ ರಾಜ್ಯಗಳಿಂದ ಆಗುತ್ತದೆ.

 ವರದಕ್ಷಿಣೆ ಪದ್ಧತಿ ಹಾಗೂ ವರದಕ್ಷಿಣೆಯ ಕಿರುಕುಳ ಇಲ್ಲಿಲ್ಲ.

 ಮೊಗಲರ ಆಳ್ವಿಕೆಯಲ್ಲಿ ಈಶಾನ್ಯ ರಾಜ್ಯಗಳನ್ನು ಅವರು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತದಲ್ಲಿ ಮುಸ್ಲಿಂ ಆಡಳಿತಕ್ಕೆ ಕೈವಶವಾಗದೇ ಉಳಿದ ಈಶಾನ್ಯ ರಾಜ್ಯಗಳು ಎಂಬ ಹೆಗ್ಗಳಿಕೆ ಇವರಿಗಿದೆ.

 600 ವರ್ಷಗಳಷ್ಟು ಅಂದರೆ 1228-1826ಅಇತನಕ ಆಳಿದ ಅಹೊಂ ವಂಶವು ಇಡೀ ಭಾರತದ ಚರಿತ್ರೆಯಲ್ಲೇ, ಒಂದೇ ರಾಜಮನೆತನ ಇಷ್ಟು ದೀರ್ಘ ಆಳ್ವಿಕೆ ಇನ್ನೆಲ್ಲೂ ಮಾಡಿರುವ ದಾಖಲೆಯಿಲ್ಲ.

 ಚಿರಾಪುಂಜಿಯಲ್ಲ, ಈಗ ಮೇಘಾಲಯದ ಮಾವ್‍ಸ್ಯನ್‍ರಂ((MAWSYNRAM)) ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಾಗ.

 North Easter Council(NEC) 1971ರಲ್ಲಿ ಸ್ಥಾಪಿತವಾಗಿತ್ತು. ಇಡೀ 8(ಸಿಕ್ಕಿಂ ಸೇರಿದಂತೆ) ರಾಜ್ಯಗಳ ಒಟ್ಟು ಅಭಿವೃದ್ಧಿಗೆ ಇದು ಕಾರ್ಯನಿರ್ವಹಿಸುತ್ತಿದೆ.

 ಅಸ್ಸಾಂ ರೈಫಲ್ – ಭಾರತದ ಬೃಹತ್ ಹಾಗೂ ಅತ್ಯಂತ ಪ್ರಾಚೀನ ಭಾರತೀಯ ಸೈನ್ಯದ ತುಕಡಿ. ಇದರಲ್ಲಿ ಕೇವಲ ಈಶಾನ್ಯ ರಾಜ್ಯದ ಸೈನಿಕರ ನೇಮಕಾತಿಯಾಗುತ್ತದೆ. ಗೋರ್ಖಾ ರೆಜಿಮೆಂಟ್‍ನಲ್ಲಿ ಸಿಕ್ಕಿಂನ ಸೈನಿಕರದು ಸಿಂಹಪಾಲಿದೆ.

 ಭಾರತದ ಅತಿ ಚೊಕ್ಕಟ ರಾಜ್ಯಗಳೆಂದರೆ, ಈಶಾನ್ಯ ರಾಜ್ಯಗಳು.

 ಸೂರ್ಯ ಉದಯಿಸುವ ನಾಡೆಂದು ಅರುಣಾಚಲಪ್ರದೇಶವನ್ನು ಕರೆಯುತ್ತೇವೆ.

 ಭಾರತದ ಮೊಟ್ಟಮೊದಲ ಎಣ್ಣೆಯ ಬಾವಿ ಕೊರೆದದ್ದು 1901ರಲ್ಲಿ, ಅಸ್ಸಾಂನ ಡಿಜ್ ಬೋಯಿಯಲ್ಲಿ, ಇದು ಇನ್ನೂ ಜೀವಂತವಾಗಿದೆ!

 ಕಾಂಜೀವರಂ, ಬನಾರಸ್ ಹೀಗೆ ನಾವು ರೇಷ್ಮೆಯ ವಿವಿಧ ರೂಪಗಳನ್ನು ಹೇಳುತ್ತೇವೆ. ಈಶಾನ್ಯ ರಾಜ್ಯಗಳಲ್ಲಿ 3 ವಿಧದ ರೇಷ್ಮೆ ಉತ್ಪಾದನೆಯಾಗುತ್ತದೆ.White pat, Goldan Mnga, warm ªÀÄvÀÄÛ Eri silk.

 ಕೇರಳವನ್ನು “ದೇವರ ನಾಡು“ ಎಂದರೆ, ಕಾಶ್ಮೀರವನ್ನು “ಭೂಮಿಯ ಮೇಲಿನ ಸ್ವರ್ಗ” ವೆನ್ನುತ್ತೇವೆ. ಮೇಘಾಲಯಕ್ಕೆ ‘ಪೂರ್ವದ ಸ್ಕಾಟ್ಲೆಂಡ್’ ಎಂದು ಕರೆಯುವ ವಾಡಿಕೆಯಿದೆ.

ತ್ರಿಪುರದ ಸಾಹಿತ್ಯ ಚರಿತ್ರೆಯನ್ನು ದೊರೆತ ಆಧಾರಗಳನ್ನಾಧರಿಸಿ ಕಟ್ಟುವುದಾದರೆ, 1431ರಲ್ಲಿ ತ್ರಿಪುರದ ಅರಸ ಧರ್ಮಮಾಣಿಕ್ಯನ ಆಸ್ಥಾನ ಪಂಡಿತರಾದ ಶುಕ್ರೇಶ್ವರ್ ಮತ್ತು ಬಾಣೇಶ್ವರ್ ರಚಿಸಿದ ‘ರಾಜ ಮಾಲಾ’ ಎಂಬ ಕೃತಿಯೇ ಲಿಖಿತ ದಾಖಲೆಯಲ್ಲಿ ಸಿಕ್ಕ ಮೊಟ್ಟಮೊದಲ ಕೃತಿ. ಬಂಗಾಳಿ ಭಾಷೆಯಲ್ಲಿರುವ ಈ ಮೂಲ ಕೃತಿಯ ಉದ್ದೇಶ, ಆಗಿನ ಕಾಲದಲ್ಲಿ ಭಾರತದಾದ್ಯಂತ ಇದ್ದಂತಹದೇ ಮಾದರಿಯಲ್ಲಿದೆ. 10-11ನೇ ಶತಮಾನದಲ್ಲಿ ಪಂಪ, ರನ್ನ, ಜನ್ನರೇ, ಅರಸೊತ್ತಿಗೆಯಲ್ಲಿ ತಮ್ಮನ್ನು ಪೋಷಿಸಿದ ರಾಜಾಶ್ರಯದ ಚಕ್ರವರ್ತಿಯನ್ನೋ ರಾಜನನ್ನೋ ಮಹಾಭಾರತದ ಬಹುಪ್ರಸಿದ್ಧ ರಾಜರಿಗೆ ಹೋಲಿಸಿ, ಪಾರಮಾರ್ಥಿಕ ಕಾವ್ಯವನ್ನು ರಚಿಸಿರುವಂತೆ, 15ನೇ ಶತಮಾನದಲ್ಲೂ ತ್ರಿಪುರದಲ್ಲಿ ಈ ಶುಕ್ರೇಶ್ವರ್-ಬಾಣೇಶ್ವರ್ ಎಂಬ ಜಂಟಿ ಕವಿಗಳು ಮಾಡಿರುವುದೂ ಅದನ್ನೇ. ಈ ಆಸ್ಥಾನ ಪಂಡಿತರು, ತಮಗೆ ಆಶ್ರಯ ನೀಡಿದ ಧರ್ಮಮಾಣಿಕ್ಯ ಎಂಬ ಅರಸನನ್ನು ‘ರಾಜ ಮಾಲಾ’ ಕಾವ್ಯದ ತುಂಬಾ ಹೊಗಳಿದ್ದಾರೆ.

ಆದರೆ, ನಮ್ಮ ಚರಿತ್ರೆಯ ಶ್ರೀ ವಿಜಯ ರಾಜ, ಕವಿಯೂ ಆಗಿದ್ದಂತೆ, ತ್ರಿಪುರದ ರಾಜ ವೀರಚಂದ್ರ ಮಾಣಿಕ್ಯ ಒಬ್ಬ ಕವಿಯಾಗಿದ್ದ ರಾಜ. ಈತ ವೈಷ್ಣವ ಪಂಥದವನಾಗಿದ್ದು ಶ್ರೀಕೃಷ್ಣನ ಅಪಾರ ಭಕ್ತನಾಗಿದ್ದರಿಂದ, ‘ಚಂದ್ರೋದಯ್ ಹೊರಗಿತಿ’ ಎಂಬ ರಾಧೆ ಮತ್ತು ಕೃಷ್ಣರ ಮತ್ತು ಗೋಪಿಕೆಯರಾಡುವ ರಾಸಲೀಲೆಯನ್ನು ತನ್ನ ಕಾವ್ಯದ ವಸ್ತುವಾಗಿಸಿಕೊಂಡ. ಬಂಗಾಳದಲ್ಲಿರುವಂತೆ, ವಸಂತ ಮಾಸದ ಹೂವರಳುವ ಸಮಯ ಇಲ್ಲಿಯೂ ಶ್ರೇಷ್ಠವಾಗಿರುವುದರಿಂದ ಹಾಗೂ ಆ ಸನ್ನಿವೇಶ, ತುಂಬಾ ರಸಮಯವಾಗಿ ಶೃಂಗಾರಮಯವೂ ಆಗಿರುವುದರಿಂದ, ಬಣ್ಣದ ಹಬ್ಬ ‘ಹೋಲಿ’ ಅಥವಾ ಕಾಮನ ಹುಣ್ಣಿಮೆಯಲ್ಲಿ ನಡೆಯುವ ರಾಸಲೀಲೆ ಈ ಕಾವ್ಯದ ಬಹುಭಾಗವನ್ನಾವರಿಸಿಕೊಂಡಿದೆ.

ವೀರಚಂದ್ರ ರಾಜನ ಆಳ್ವಿಕೆಯ ಸಮಯದಲ್ಲಿ “ಧೂಮಕೇತು” ಎಂಬ ಮಾಸ ಪತ್ರಿಕೆಯನ್ನು ಮಹಿಂದ್ರೋ ಚಂದ್ರೋ ದೇವವರ್ಮ ಎಂಬ ಸಾಹಿತಿ ಹೊರತರುತ್ತಿದ್ದರೆ, ‘ಅರುಣ್’ ಎಂಬ ಮಾಸಪತ್ರಿಕೆಯನ್ನು ಚಂದ್ರೋದಯ ಬಿದ್ದ ವಿನೋದ್ ಎಂಬುವವರು ಮುದ್ರಿಸಿ, ಪ್ರಚಾರ ಮಾಡುತ್ತಿದ್ದುದು, ಅಂದರೆ ಎರಡು ಪತ್ರಿಕೆಗಳು ಆಗ ಮುದ್ರಣವಾಗುತ್ತಿದ್ದುದ್ದನ್ನು ಗಮನಿಸಬಹುದು.

ಶಾಂತಿನಿಕೇತನದ ಸುಪ್ರಸಿದ್ಧ ಬಂಗಾಲಿ ಕವಿ ಶ್ರೀ ರವೀಂದ್ರನಾಥ ಠ್ಯಾಗೂರರ ‘ಭಗ್ನ ಹೃದಯ’ ಪುಸ್ತಕವನ್ನು ಓದಿದ ವೀರಚಂದ್ರ ಅವರಿಗೆ ತನಗಾದ ಪತ್ನಿ ವಿಯೋಗದ ದುಃಖ ಮರೆಯಲು ಮೊರೆ ಹೋಗಿದ್ದು, ರವೀಂದ್ರರ ಬರಹದ ಜಗತ್ತಿಗೆ. ಅವರ ಅಭಿಮಾನದ ದ್ಯೋತಕವಾಗಿ ಅವರಿಗೆ ‘ಕವಿ’ ಎಂಬ ರಾಜ ಮರ್ಯಾದೆಯ ಬಿರುದನ್ನು ನೀಡಿದರು.
ಇದೊಂದು ರೀತಿಯ ವಿಶಿಷ್ಟ ಪ್ರಸಂಗ! ಖ್ಯಾತ ಕವಿ, ಚಿಂತಕ ಕಲಾವಿದ ರವೀಂದ್ರನಾಥ ಠಾಗೋರ್‍ರಿಗೆ ತ್ರಿಪುರದ ಮೂರು ತಲೆಮಾರಿನ ರಾಜವಂಶದವರಿಂದ ಮೂರು ಬಿರುದುಗಳು ಲಭಿಸಿದವು! ಒಂದೇ ಕವಿಗೆ ಹೀಗೆ ಒಂದೇ ರಾಜ್ಯ ಮೂರು ತಲೆಮಾರಿನ ರಾಜರುಗಳಿಂದ ರಾಜಬಿರುದು ದೊರೆತ ಮತ್ತೊಂದು ಉದಾಹರಣೆ ನಮ್ಮ ಚರಿತ್ರೆಯಲ್ಲಿ ಸಿಗುವುದಿಲ್ಲ!

ಮಹಾರಾಜ ವೀರಚಂದ್ರನಿಂದ ತನ್ನ 12ನೇ ವಯಸ್ಸಿನಲ್ಲೇ ‘ಕವಿ’ ಪದವಿ ಪಡೆದ ರವೀಂದ್ರರಿಗೆ ನಂತರ, ವೀರಚಂದ್ರರ ಪುತ್ರ ರಾಧಾ ಕಿಶೋರ್ ಮಾಣಿಕ್ ಬಹದ್ದೂರ್ ‘ವಿಶ್ವ ಕವಿ’ ಎಂಬ ಇನ್ನೊಂದು ರಾಜ ಪದವಿಯನ್ನು ನೀಡಿ ಸತ್ಕರಿಸುತ್ತಾನೆ! ಆನಂತರ ಮಹಾರಾಜರಾದ ರಾಧಾ ಕಿಶೋರ್ ಮಾಣಿಕ್ ಬಹದ್ದೂರ್ ಅವರ ಸುಪುತ್ರ ವೀರ ವಿಕ್ರಮ ಮಾಣಿಕ್ಯ ಬಹದ್ದೂರ್, ರವೀಂದ್ರರಿಗೆ ‘ಭಾರತ ಭಾಸ್ಕರ’ ಎಂಬ ಅತ್ಯುನ್ನತ ಬಿರುದು ಕೊಟ್ಟು ರಾಜ ಮರ್ಯಾದೆಗಳೊಂದಿಗೆ ಸನ್ಮಾನಿಸುತ್ತಾನೆ!
ಈ ನೈಜ ಘಟನಾವಳಿಗಳನ್ನು ಕೇಳಿದಾಗ, ರವೀಂದ್ರರ ಅಭಿಮಾನಿಗಳಾದ ನಮ್ಮಂತಹ ಬರಹಗಾರರ ಮೈಮನಗಳಲ್ಲಿ ರೋಮಾಂಚನವಾಗದೇ ಇರದು!

ನನಗೆ, ಈ ರಾಜ ಕುಟುಂಬದ ಬಗ್ಗೆ ಇನ್ನೂ ವಿಶೇಷ ವ್ಯಾಮೋಹ ಮೂಡಲು ಇನ್ನೂ ಒಂದು ಪ್ರಮುಖ ಕಾರಣವಿದೆ. ಇನ್ನೊಂದು ಬಹಳ ಆಸಕ್ತಿದಾಯಕ ವಿಷಯವೆಂದರೆ, ಈ ಕವಿರಾಜ, ವೀರಚಂದ್ರರ ಮಗಳು ಅನಂಗ ಮೋಹಿನಿದೇವಿಯನ್ನು ಹೊಸ ತಲೆಮಾರಿನ ಆಧುನಿಕ ಕಾವ್ಯದ ಜನಕಳೆಂದು ಕರೆಯಲಾಗಿದೆ! ಅನಂಗ ಮೋಹಿನಿದೇವಿ, ಯುವರಾಣಿಯಾಗಿದ್ದಾಗ, ಕೌಮಾರ್ಯದ ಸುಕೋಮಲ ಭಾವನಮಯ ಜಗತ್ತಿನಲ್ಲಿರುವಾಗಲೇ ಕವಿತೆ ರಚನೆಯಲ್ಲಿ ಆಸಕ್ತಿ ತಳೆದಳು.

ಇಂತಿಪ್ಪ ಸೊಗಸಾದ ಹೆಸರಿನ ರಾಜಕುಮಾರಿ ಅನಂಗ ಮೋಹಿನಿದೇವಿ, ತನ್ನ ಮೊದಲ ಕವನ ಸಂಕಲನವನ್ನು ‘ಕನ್ನಿಕಾ’ ಎಂಬ ಶೀರ್ಷಿಕೆಯಲ್ಲಿ 1902ರಲ್ಲಿ ಜನವರಿ 2ನೇ ತಾರೀಖಿನಂದು ಬಿಡುಗಡೆ ಮಾಡುತ್ತಾಳೆ! ನಂತರ 1910ರಲ್ಲಿ ಕವಿಗಳ ಅತ್ಯಂತ ಮುಖ್ಯ ರಸಗಳಲ್ಲೊಂದಾದ ಶೋಕರಸ ಆಧಾರಿತ “ಶೋಕಗಾಥಾ” ಅಥವಾ “ಶೋಕಕಥೆ” ಎಂಬ ಎರಡನೇ ಕವಿತಾ ಸಂಕಲನ ತಂದ ಕೀರ್ತಿ, ರಾಜಕುಮಾರಿ ಅನಂಗ ಮೋಹಿನಿದೇವಿಯದು.

ಇಡೀ ರಾಜ ಕುಟುಂಬದಲ್ಲಿ ಕವಿಗಳೂ, ಕಥೆಗಾರರೂ, ನಾಟಕಕಾರರು ಕಂಡುಬರುತ್ತಾರೆ ಹಾಗೂ ಈ ಸಾಹಿತ್ಯ ಪ್ರಕಾರಗಳಲ್ಲಿ ಇವರು ಹಲವು ಪ್ರಥಮಗಳಿಗೆ ಕಾರಣೀಭೂತರಾಗುತ್ತಾರೆ!

ಅನಂಗ ಮೋಹಿನಿದೇವಿಯ ತಮ್ಮ, ರಾಜಕುಮಾರ 1900ರ ಸಮಯದಲ್ಲೇ “ಪತಿವ್ರತಾ” ಎಂಬ ನಾಟಕವನ್ನು ರಚಿಸುತ್ತಾನೆ. ಕುಮಾರ ಮಹೀಂದ್ರ ದೇಬ್‍ವರ್ಮನ್ ಎಂಬ ಈ ಯುವರಾಜನ ಜೊತೆ ಮಹಾಕವಿ ರವೀಂದ್ರನಾಥ ಠ್ಯಾಗೋರರು ನಟಿಸಿದ್ದರು ಎಂಬುದೂ ಅಚ್ಚರಿಯ ಸಂಗತಿ! ಬಂಗಾಲಿಯಲ್ಲಿ ರಚಿತವಾದ ಈ ನಾಟಕ ನಂತರ, ತ್ರಿಪುರಾದ ಅಧಿಕೃತ ರಾಜ್ಯಭಾಷೆಯಾದ ಕೊಕ್‍ಬರೋ ಭಾಷೆಯಲ್ಲಿ ನಂತರ ಪ್ರಕಟಗೊಂಡಿತು.

ಇನ್ನು ಕಥಾ ಪ್ರಕಾರಕ್ಕೆ ಬರುವುದಾದರೆ, ಮತ್ತೆ 1930ರಲ್ಲಿ ದೇವವರ್ಮನ್ ಎಂಬ ಬುಡಕಟ್ಟಿನ ರಾಜವಂಶದ. ಅಜಿತಬಂಧು ದೇವವರ್ಮ “ರಾಯ್ ಮುಕ್ತೋ’ ಎಂಬ ಕಥೆಯನ್ನು ಬರೆದರು, ಅದು “ರೋಬಿ” ಎಂಬ ಆಗಿನ ಕಾಲದ ಪ್ರಸಿದ್ಧ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಯ್ತು. 1933ರಲ್ಲಿ ಅಜಿತ ಬಂಧುವಿನ ಇನ್ನೊಂದು ಕಥೆ “ಪರಿಚಯ” ಪ್ರಕಟವಾಯ್ತು. 1934ರಲ್ಲಿ ಬಂದ ಸತೀಶ್ ದೇವವರ್ಮರ “ಕೆರಾನಿ ಪೊರಾದ್” ಹಾಗು ವೀರೇಂದ್ರ ಭಟ್ಟಾಚಾರ್ಯರ “ಮಾಯಾಪುರಿ” ಕಥೆಗಳು ಈ ಕಥಾಚರಿತ್ರೆಯ ದಾಖಲೆಯಲ್ಲಿ ಪ್ರಮುಖವೆನಿಸುತ್ತದೆ.

ಆದರೆ, ತ್ರಿಪುರದ ಕತೆಗಾರರಿಗೆ ಹೆಸರು ಮತ್ತು ಮನ್ನಣೆ ತಂದುಕೊಟ್ಟ ಕತೆಗಾರರೆಂದರೆ, ವಿಮಲ್ ಚೌಧರಿ – 50 ವರ್ಷಗಳಲ್ಲಿ 50ಕ್ಕೂ ಹೆಚ್ಚು ಕತೆಗಳನ್ನು ಬರೆದವರು. 1947ರಲ್ಲಿ ಸ್ವಾತಂತ್ರ್ಯ ಚಳುವಳಿಯ ತಳಮಳದ ಒಳಕುದಿಗಳನ್ನು ಒಬ್ಬ ಬುಡಕಟ್ಟಿನವನ ಮೂಲಕ ಜಗತ್ತಿಗೆ ಪರಿಚಯಿಸಿ, ಆತನನ್ನು ಪ್ರಪಂಚಕ್ಕೆ ತೋರಿಸಿ “ಹೀರೊ” ಮಾಡಿದ ಮೊಟ್ಟಮೊದಲ ಕತೆಗಾರ. 1947ರ ದೇಶ ವಿಂಗಡನೆಯ ಬಗ್ಗೆ ವಿಮಲ್ ಚೌಧರಿಯವರು ಬರೆದ “ಅನುಭವ” ಎಂಬುದು ಇನ್ನೊಂದು ಕಥೆ. 1949 ಸ್ವಾತಂತ್ರ್ಯ ಸಂಗ್ರಾಮವಾದ ಮೇಲೆ ಅವರು ಬರೆದ “ತೋರೆ ನಹಿ ಕೊರಿಬಾಯ್” We don’t fear you! ಎಂಬ ಕಥೆ ವಿವಾದಾತ್ಮಕವೆಂದು, ಆ ಕಥೆ ಪ್ರಕಟವಾದ ಪತ್ರಿಕೆಯನ್ನು ಸರ್ಕಾರ ನಿಷೇಧಿಸಿದ ಘಟನೆಯೂ ತ್ರಿಪುರಾದ ಸಾಹಿತ್ಯಿಕ ಚರಿತ್ರೆಯಲ್ಲಿ ದೊಡ್ಡ ಸಂಗತಿ.

ತ್ರಿಪುರ, ಪಾಕಿಸ್ತಾನಕ್ಕೆ ಸೇರಬೇಕೆಂಬ ಒತ್ತಡವಿದ್ದ ಕಾಲದಲ್ಲಿ, ಅನೇಕ refugees ಇದ್ದಿದ್ದರಿಂದ, ಅವರು ಬಂಡೇಳುತ್ತಾರೆಂಬ ಕಾರಣಕ್ಕೆ ತ್ರಿಪುರ, ಭಾರತದಲ್ಲೇ ಉಳಿಯಿತು. ಈ ಬಗ್ಗೆ ಕೂಡ ವಿಮಲ್ ಚೌಧರಿಯವರ “ಅನುಭವ” ಕಥೆ ಬೆಳಕು ಚೆಲ್ಲಿದೆ! ಇವರ ಮತ್ತೊಂದು ಕಥೆ “ಮಾನುಷೆ ಚಂದ್ರವಿಜಯ್ ತಾರಾನಾಥ್‍ನಲ್ಲಿ Man has gone to the moon alright, but what about a poor tribal man “Taranath”?ಎಂಬ ಸಶಕ್ತ ವ್ಯಂಗ್ಯಭರಿತ ಕಥೆಯನ್ನು ಅಂದಿನ ಕಾಲಮಾನದಲ್ಲೇ ಬರೆದು, ತ್ರಿಪುರದ ಕಥಾ ಚರಿತ್ರೆಯ ಭಗೀರಥ ಎನಿಸಿಕೊಂಡ ಕೀರ್ತಿ ಇವರದು.

ವಿಶ್ವದೇವ ಭಟ್ಟಾಚಾರ್ಯ, ಕಾಲೀಪದೋ ಚಕ್ರವರ್ತಿ ಹಾಗೂ ವಿಮಲ್ ಶಿಂಘೋ ಇವರು ಇಲ್ಲಿನ ಇನ್ನಿತರ ಪ್ರಮುಖ ಕತೆಗಾರರಾಗಿ ಕಂಡುಬರುವ ಚೇತನಗಳು.

ಇನ್ನು, ಸಾಹಿತ್ಯದ ಮೊತ್ತೊಂದು ಜನಪ್ರಿಯ ಮಾಧ್ಯಮ ಕಾದಂಬರಿಯತ್ತ ಹೊರಳಿಕೊಂಡರೆ, ಸ್ವಾತಂತ್ರ್ಯ ಸಂಗ್ರ್ರಾಮದ ನಂತರ 1948ರಲ್ಲಿ ಬಂದ ಸಿ.ಪಿ.ಎಂ ಕಮ್ಯುನಿಷ್ಟ್ ಪಕ್ಷದ ನಾಯಕರಾದ ಬೀರೇನ್‍ದತ್ತ ಅವರ “ಗ್ರಾಮೇರ್ ಮೇ” ಎಂಬ ಕಾದಂಬರಿಯನ್ನೂ ಮೊದಲ ಕಾದಂಬರಿ ಎನ್ನಲಾಗುತ್ತದೆ. ಆದರೆ ಈ ಕಾದಂಬರಿ ಪ್ರಕಟಗೊಂಡದು 1980ರಲ್ಲಿ! ಶುಧೋನ್ನ ದೇಬವರ್ಮರ – “ಹಾಚುಕ್ ಹುರಿಯೋ” ಕಾದಂಬರಿ, ‘ವಿಮಲ್ ಶಿಂಗೋರ’ ‘ಲಾಂಗ್ ತೊರೈ’ ಕಾದಂಬರಿಗಳು 1948-1955ರ ಒಳಗೆ ರಚಿತವಾದರೂ, ಅವು ಬೆಳಕು ಕಂಡಿದ್ದು 1980ರ ದಶಕದಲ್ಲಿ.

‍ಲೇಖಕರು Avadhi Admin

September 10, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: