ಅಂಗೋಲಾದಲ್ಲಿ ಬದುಕಬೇಕೆಂದರೆ ಧೈರ್ಯ ಮಾತ್ರವಲ್ಲ, ಜೇಬೂ ತುಂಬಿರಬೇಕು..

ದುಬಾರಿ ದೇಶದಲ್ಲಿ ಕಾಂಚಾಣವೇ ಹೀರೋ

ತಮ್ಮ ನೆಲ, ನಾಡನ್ನು ಬಿಟ್ಟು ದೂರ ಹೋದವರಿಗೆ ಆಗಾಗ ಮಣ್ಣಿನ ಸೆಳೆತವು ಹೆಚ್ಚಾಗಿ ಕೆಲವೊಂದು ಆಸೆ-ಆಕಾಂಕ್ಷೆಗಳು ಹುಟ್ಟುವುದು ಸಹಜ.

ಮಂಗಳೂರನ್ನು ಬಿಟ್ಟು ಉತ್ತರಭಾರತಕ್ಕೆ ಸೇರಿದ ನನಗೆ ಕರಾವಳಿಯ ಕುಚ್ಚಲಕ್ಕಿ, ಮೀನು, ಕೋರಿ-ರೊಟ್ಟಿ ಕಾಂಬೋಗಳು ಸಿಗದೆ ವರ್ಷಗಳೇ ಕಳೆದುಹೋಗಿದ್ದವು. ಅಂಥದ್ದರಲ್ಲಿ ಅಂಗೋಲಾ ನೆಲಕ್ಕೆ ಬಂದಿಳಿದ ನಂತರವಂತೂ ಮನೆಯಲ್ಲಿ ಸಿದ್ಧವಾಗುತ್ತಿದ್ದ ಭಾರತೀಯ ಖಾದ್ಯಗಳನ್ನು ಹೊರತುಪಡಿಸಿ ಬೇರೇನೂ ಸಿಗುವುದು ಗಗನಕುಸುಮವಾಗಿಬಿಟ್ಟಿತ್ತು. ಪ್ರತಿಯೊಂದಕ್ಕೂ ವೀಜ್ ನಿಂದ ಮುನ್ನೂರು ಚಿಲ್ಲರೆ ಕಿಲೋಮೀಟರುಗಳಷ್ಟು ದೂರವಿದ್ದ ರಾಜಧಾನಿ ಲುವಾಂಡಾಗೆ ತೆರಳುವುದು ಬಲು ಗೋಜಲಿನ ಕೆಲಸ. ಹೊಂಡಗಳು ಕಮ್ಮಿಯಾದರೂ ಅಂಕುಡೊಂಕಿನ ರಸ್ತೆಗಳಲ್ಲಿ ದೇಹವನ್ನು ಪುಡಿಗಟ್ಟುತ್ತಾ, ಪ್ರತೀ ಐವತ್ತು-ಅರವತ್ತು ಕಿಲೋಮೀಟರುಗಳಿಗೊಮ್ಮೆ ಲಂಚಕೋರ ಪೋಲೀಸರನ್ನು ಸಂಭಾಳಿಸುತ್ತಾ ಪ್ರಯಾಣಿಸುವುದೆಂದರೆ ನಿಜಕ್ಕೂ ದೊಡ್ಡ ವ್ಯಥೆ.

ಲುವಾಂಡಾದಲ್ಲಿ ಭಾರತೀಯ ರೆಸ್ಟೊರೆಂಟುಗಳು ಇಲ್ಲವೆಂದಲ್ಲ. ಬೆರಳೆಣಿಕೆಯಷ್ಟಂತೂ ಇದ್ದೇ ಇವೆ. ಆದರೆ ಸಮಸ್ಯೆಯೆಂದರೆ ಜೊತೆಗೇ ಇತರೆ ಸಮಸ್ಯೆಗಳೂ ಕಾಲೆತ್ತಿಕೊಂಡು ಬಂದುಬಿಡುತ್ತವೆ. ಈ ಮೊದಲೇ ತಿಳಿಸಿದಂತೆ ಪಾರ್ಕಿಂಗ್ ವ್ಯವಸ್ಥೆ ಇವುಗಳಲ್ಲೊಂದು. ನಂತರ ಬರುವುದು ದುಬಾರಿ ಜೀವನಮಟ್ಟ. ಒಮ್ಮೆ ಹೀಗಾಯ್ತು. ಭಾರತದಿಂದ ಅತಿಥಿಯೊಬ್ಬರು ಅಂಗೋಲಾಗೆ ಬಂದಿಳಿಯಲಿದ್ದಾರೆ ಎಂಬ ವರ್ತಮಾನವು ದೊರೆತಂತೆಯೇ ನಾವೆಲ್ಲರೂ ಲುವಾಂಡಾದಲ್ಲಿರುವ ಭಾರತೀಯ ರೆಸ್ಟೊರೆಂಟ್ ಒಂದಕ್ಕೆ ತೆರಳಿ ಈ ಅತಿಥಿಯೊಂದಿಗೆ ಗಡದ್ದಾಗಿ ಊಟ ಮಾಡುವುದೆಂದು ಯೋಚಿಸಿ ಖುಷಿಯಾದೆವು. ಈ ನಿಟ್ಟಿನಲ್ಲಿ ಒಂದೆರಡು ರೆಸ್ಟೊರೆಂಟುಗಳನ್ನು ಸಂಪರ್ಕಿಸಿ ಮಾತಾಡಿದ್ದೂ ಆಯಿತು. ಕೊನೆಗೂ ತಿಳಿದು ಬಂದಿದ್ದೇನೆಂದರೆ ವ್ಯಕ್ತಿಯೊಬ್ಬ ಒಂದೊಳ್ಳೆಯ ಭಾರತೀಯ ಊಟಕ್ಕೆ ಏನಿಲ್ಲವೆಂದರೂ ನೂರೈವತ್ತು ಡಾಲರುಗಳನ್ನು ವ್ಯಯಿಸಬೇಕಿತ್ತು.

ವೀಜ್ ನಂತಹ ಪ್ರದೇಶದಲ್ಲಿ ನೆಲೆಸಿದ್ದ ನಾನು ನೂರರಿಂದ ನೂರೈವತ್ತು ಡಾಲರುಗಳಲ್ಲಿ ಒಂದಿಡೀ ತಿಂಗಳ ಖರ್ಚನ್ನು ನಿಭಾಯಿಸುತ್ತಿದ್ದೆ. ಅಂಥದ್ದರಲ್ಲಿ ಇಲ್ಲಿ ಒಂದು ಹೊತ್ತಿನ ಊಟಕ್ಕೆ ಅಷ್ಟನ್ನು ನಾನು ತೆರಬೇಕಿತ್ತು. ಅಂತೂ ಈ ಬೆಲೆಯ ಬಗ್ಗೆ ತಿಳಿದಾಕ್ಷಣ ನಾವು ಪೆಚ್ಚಾಗಿ ಮುಖಮುಖ ನೋಡಿಕೊಂಡೆವು. ”ಭಾರತದಿಂದ ಬಂದವರಿಗೆ ಅಂಗೋಲಾದಲ್ಲೂ ಭಾರತದ ರೋಟಿ-ಸಬ್ಝಿಯನ್ನೇ ಏನು ತಿನ್ನಿಸುವುದು? ಇಲ್ಲಿದ್ದೇನಾದರೂ ತಿನ್ನಿಸೋಣ ಬಿಡಿ”, ಎಂದು ಒಬ್ಬಾತ ಆ ಕಾರ್ಮೋಡದಲ್ಲೂ ಬೆಳ್ಳಿಗೆರೆಯಂಥಾ ಮಾತಾಡಿದ. ನಾವು ಹೌದೌದೆಂದು ತಲೆಯಾಡಿಸುತ್ತಾ ಅಲ್ಲಿಂದ ಕಾಲ್ಕಿತ್ತೆವು.

ಅಂಗೋಲಾದಲ್ಲಿ ಬದುಕಬೇಕೆಂದರೆ ಧೈರ್ಯ ಮಾತ್ರವಲ್ಲ, ಜೇಬೂ ತುಂಬಿರಬೇಕು.

*********

”ತನ್ನ ಮೂರು ತಲೆಮಾರುಗಳು ತಿಂದಷ್ಟೂ ಕರಗಲಾರದಷ್ಟು ಈಯಪ್ಪ ಆಸ್ತಿ ಮಾಡಿಕೊಂಡಿದ್ದಾನೆ. ಆದರೂ ಈತನಿಗೆ ಸಾಕಾಗೋಲ್ವಲ್ಲಾ”, ಎಂದು ನಾವೆಲ್ಲರೂ ನಮ್ಮ ಕೆಲ ಕುಖ್ಯಾತ ರಾಜಕಾರಣಿಗಳನ್ನು ಕಂಡು ಗೊಣಗಿಕೊಳ್ಳುವುದು ಸಹಜ. ಏಕೆಂದರೆ ಆಸೆಗಳನ್ನೇನೋ ನೀಗಿಕೊಳ್ಳಬಹುದು. ಆದರೆ ದುರಾಸೆಗಳನ್ನು ಈಡೇರಿಸುವುದು ಸುಲಭದ ಮಾತಲ್ಲ. ”ನಾವು ಲಂಚ ತಿಂದಷ್ಟೂ ಕಮ್ಮಿಯೇ”, ಎಂದು ಕೆಲ ಅಂಗೋಲನ್ ಸರಕಾರಿ ಅಧಿಕಾರಿಗಳು ನನ್ನಲ್ಲಿ ತಮಾಷೆಯಾಗಿ ಹೇಳಿಕೊಳ್ಳುತ್ತಿದ್ದ ಸಂದರ್ಭಗಳಿವೆ. ವಿಡಂಬನೆಯೆಂದರೆ ಇದು ಒಂದು ಮಟ್ಟಿಗೆ ನಿಜವೂ ಕೂಡ. ಅಸಲಿಗೆ ಲುವಾಂಡಾದಂತಹ ದುಬಾರಿ ನಗರದಲ್ಲಿ ಆರಾಮದಾಯಕ ಜೀವನವನ್ನು ನಡೆಸಲು ಒಳ್ಳೆಯ ಸಂಬಳ ಗಿಟ್ಟಿಸುವ ಸರಕಾರಿ ಅಧಿಕಾರಿಗಳೂ ಒದ್ದಾಡುತ್ತಿರುತ್ತಾರೆ. ಸರಳವಾಗಿ ಹೇಗೋ ಇರೋಣ ಎಂದರೆ ಸಾಮಾಜಿಕ ಸ್ಥಾನಮಾನದ ಪ್ರಶ್ನೆ. ಕೊಂಚ ವಿಲಾಸವೂ ಇರಲಿ ಎಂದು ಯೋಚಿಸಿದರೆ ಅಗತ್ಯದ ಖರ್ಚಿನ ಬಳಿಕ ಜೇಬಿನಲ್ಲಿ ಉಳಿಯುವುದು ಏನೇನೂ ಇಲ್ಲವೆಂಬ ಗೋಳು. ಉದ್ದನೆಯ ಮನುಷ್ಯನೊಬ್ಬನಿಗೆ ಹೊದ್ದುಕೊಳ್ಳಲು ಚಿಕ್ಕ ಹೊದಿಕೆಯೊಂದನ್ನು ಕೊಟ್ಟರೆ ಆತ ಹೇಗೆ ಒದ್ದಾಡುತ್ತಾನೋ ಅಂಥಾ ಗೋಜಲು. ಪಾದಗಳನ್ನು ಮುಚ್ಚೋಣ ಅಂದರೆ ತಲೆ ಉಳಿದುಬಿಡುವ, ತಲೆ ಮುಚ್ಚಿಕೊಳ್ಳೋಣ ಎಂದರೆ ಪಾದಗಳು ಬಾಕಿಯಾಗುವ ಪರಿಸ್ಥಿತಿ.

ಅಂಗೋಲಾದ ದುಬಾರಿ ಜೀವನವನ್ನು ಹೀಗೆ ತಮ್ಮ ಭ್ರಷ್ಟತೆಗೆ ಸಮರ್ಥನೆಯಾಗಿ ಹೇಳಬಯಸುವ ಅಧಿಕಾರಿಗಳು ಇಲ್ಲಿ ಕಾಣಸಿಗುವುದು ಸಾಮಾನ್ಯ. ಅಂದಹಾಗೆ ಅಂಗೋಲಾದಲ್ಲಿ ಕಾಸು ಮಾಡಲು ರಾಜಕಾರಣದ ನಂತರ ಇಂಥಾ ದೊಡ್ಡ ಮಟ್ಟದ ಅವಕಾಶಗಳಿರುವುದು ಸೇನೆಯಲ್ಲಿ ಮಾತ್ರ. ಅಂಗೋಲಾದ ನಿತ್ಯ ಜೀವನದಲ್ಲಿ ಎಲ್ಲೆಲ್ಲೂ ನಮಗೆ ಕಾಣಸಿಗುವ ಪೋಲೀಸರು ಸಂಪಾದಿಸುವ ಕಾಸು ಈ ಹಿರಿಯ ಮಿಲಿಟರಿ ಅಧಿಕಾರಿಗಳಿಗೆ ಹೋಲಿಸಿದರೆ ಏನೇನೂ ಅಲ್ಲ. ಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿರುವುದು ಎಂದರೆ ದೊಡ್ಡ ಉದ್ಯಮಿಯಾದಂತೆಯೇ ಎಂಬ ಮಾತು ಅಂಗೋಲಾದಲ್ಲಿದೆ. ಶಕ್ತಿಕೇಂದ್ರಕ್ಕೆ ಬಹಳ ಸಮೀಪದಲ್ಲಿರುವ ಈ ಜನರಲ್ ಗಳು ಅಂಗೋಲಾದ ದೊಡ್ಡ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಶೇರುಗಳನ್ನು ಹೊಂದಿರುವವರು, ವಿದೇಶಗಳಲ್ಲಿ ಹೂಡಿಕೆಗಳನ್ನು ಮಾಡಿರುವವರು, ತೈಲ ಮತ್ತು ವಜ್ರದಂತಹ ದೇಶದ ದೈತ್ಯ ಉದ್ಯಮಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿರುವವರು.

ಭ್ರಷ್ಟಾಚಾರದ ವಿಚಾರಕ್ಕೆ ಬಂದರೆ ಅಂಗೋಲಾದ ಇತಿಹಾಸವೇ ಬಿತ್ತಲ್ಪಟ್ಟ ವಿಷಬೀಜದ ವಿವರಗಳನ್ನು ಧಾರಾಳವಾಗಿ ನೀಡುತ್ತದೆ. ಆಳುತ್ತಿದ್ದ ಪೋರ್ಚುಗೀಸರು ದೇಶ ಬಿಟ್ಟು ಹೊರನಡೆದ ನಂತರ ಅಂಗೋಲಾದಲ್ಲಿ ನಡೆದ ಗೊಂದಲಗಳು ಮತ್ತು ನಂತರ ನಡೆದ ಮಾರಣಹೋಮ ಇದಕ್ಕೆ ಸಾಕ್ಷಿ. ದೇಶದ ಅಧಿಕಾರವನ್ನು ಹಿಡಿಯಲು ಕಿತ್ತಾಡುತ್ತಿದ್ದ ಎಮ್.ಪಿ.ಎಲ್.ಎ (MPLA) ಮತ್ತು ಯುನಿಟಾ (UNITA) ಪಕ್ಷಗಳು ಎಷ್ಟರ ಮಟ್ಟಿನ ದುರಾಸೆಗಿಳಿದಿದ್ದರೆಂದರೆ ಅಧಿಕಾರವನ್ನು ಪಡೆಯಲು ಯಾವ ಮಟ್ಟಿಗೂ ಇಳಿಯಲು ಎರಡೂ ಪಕ್ಷಗಳು ತಯಾರಾಗಿದ್ದವು. ಕಮ್ಯೂನಿಸ್ಟ್ ಸಿದ್ಧಾಂತಗಳ ಬಗ್ಗೆ ಒಲವಿದ್ದ ಅಂಗೋಲಾದ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದ ಆಗಸ್ಟಿನೋ ನೇಟೋ ಸೋವಿಯತ್ ರಷ್ಯಾ ಮತ್ತು ಕ್ಯೂಬಾಗಳ ಬೆಂಬಲ ಪಡೆದರೆ, ಯುನಿಟಾ ಅಮೆರಿಕಾ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ನೆರವನ್ನು ಪಡೆದು ಯುದ್ಧಕ್ಕಿಳಿಯಿತು. ಇದರಿಂದಾಗಿ ಒಟ್ಟಿನಲ್ಲಿ ಆಗಿದ್ದೆಂದರೆ ಮನೆಜಗಳವನ್ನು ಬೀದಿಗೆ ತಂದು ರಂಪ ಮಾಡಿದರೆ ಎಲ್ಲರೂ ಹೇಗೆ ಮೋಜು ನೋಡುತ್ತಾರೋ ಅಂಥಾ ದುಸ್ಥಿತಿ ಅಂಗೋಲಾಕ್ಕೂ ಬಂದಿದ್ದು. ಶೀತಲ ಸಮರದ ಉತ್ತುಂಗದಲ್ಲಿದ್ದ ಆ ಅವಧಿಯಲ್ಲಿ ಈ ಎಲ್ಲಾ ರಾಷ್ಟ್ರಗಳಿಗೂ ತಮ್ಮ ಬಲಪ್ರದರ್ಶನಕ್ಕೆ ಅಂಗೋಲಾ ಒಂದು ವೇದಿಕೆಯಾಯಿತು. ಒಟ್ಟಿನಲ್ಲಿ ಎಲ್ಲರೂ ಬಂದು ತೊಡೆ ತಟ್ಟಿಕೊಂಡು, ತಮ್ಮ ತಮ್ಮ ಬೇಳೆ ಬೇಯಿಸಿಕೊಂಡು ಹೋದರು. ಕ್ಯೂಬಾ ಮಾತ್ರ ಇದಕ್ಕೆ ಅಪವಾದ.

ಅಷ್ಟಕ್ಕೂ ಎಂದೂ ಮುಗಿಯದ ಯುದ್ಧದಂತೆ ಕಾಣುತ್ತಿದ್ದ ಅಂಗೋಲಾದ ಸುದೀರ್ಘ ಆಂತರಿಕ ಯುದ್ಧಕ್ಕೆ ಸಂಪತ್ತು ಹರಿದು ಬರುತ್ತಿದ್ದಿದ್ದಾದರೂ ಎಲ್ಲಿಂದ? ಕ್ಯೂಬಾದ ನೆರವಿನಿಂದ ರಾಷ್ಟ್ರರಾಜಧಾನಿಯಾದ ಲುವಾಂಡಾವನ್ನು ವಶಪಡಿಸಿಕೊಂಡು ಅಧಿಕಾರಕ್ಕೆ ಬಂದ ಎಮ್.ಪಿ.ಎಲ್.ಎ ಪಕ್ಷವು ದೇಶದ ತೈಲೋದ್ಯಮವನ್ನು ಶಸ್ತ್ರಾಸ್ತ್ರಗಳ ಖರೀದಿಗೆಂದು ಬಳಸುತ್ತಿದ್ದರೆ, ಯುನಿಟಾ ಪಕ್ಷವು ದೇಶದ ವಜ್ರ ನಿಕ್ಷೇಪಗಳನ್ನು ಕೊಳ್ಳೆಹೊಡೆದು ಟನ್ನುಗಟ್ಟಲೆ ಸ್ಫೋಟಕಗಳನ್ನು ತರಿಸಿಕೊಂಡಿತು. ಎರಡೂ ಪಕ್ಷಗಳು ತಮ್ಮದೇ ದೇಶದ ಸಂಪನ್ಮೂಲಗಳನ್ನು ಮಿತಿಮೀರಿ ದುರ್ಬಳಕೆ ಮಾಡಿಕೊಂಡು ಬಾಣಲೆಯಲ್ಲಿ ಒದ್ದಾಡುತ್ತಿದ್ದ ದೇಶವನ್ನು ಬೆಂಕಿಗೆ ತಳ್ಳಿಬಿಟ್ಟರು. ದುರಾದೃಷ್ಟವಶಾತ್ ಇದರ ಬಿಸಿತಾಕಿದ್ದು ಮಾತ್ರ ಅಂಗೋಲನ್ ಜನತೆಗೆ. ಪೋರ್ಚುಗೀಸರ ಅವಧಿಯಲ್ಲಿದ್ದ ಬೆರಳೆಣಿಕೆಯ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು, ವ್ಯವಸ್ಥಿತ ಮಾರುಕಟ್ಟೆಗಳು ಆಂತರಿಕ ಯುದ್ಧದ ನೇರ ಹೊಡೆತಕ್ಕೊಳಗಾಗಿ ನೆಲಸಮವಾದವು. ಪೋರ್ಚುಗೀಸರು ಸ್ವತಃ ಎರಡನೇ ಲಿಸ್ಬನ್ ಎಂದು ಕರೆಯುತ್ತಿದ್ದ ಅಂಗೋಲಾದ ಹುವಾಂಬೋ ನಗರವು ಅಕ್ಷರಶಃ ಸ್ಮಶಾನವಾಯಿತು. ದೇಶದ ಕಟ್ಟಡಗಳು ಮೈತುಂಬಾ ಸಿಡುಬಿನ ಕಲೆಗಳನ್ನು ಹೊಂದಿರುವ ರೋಗಿಷ್ಟರಂತೆ ಅಸಂಖ್ಯಾತ ರೈಫಲ್ಲುಗಳು ಕಕ್ಕಿದ್ದ ಗುಂಡಿನ ತೂತುಗಳಿಂದ ತುಂಬಿಹೋದವು.

ಆ ದಿನಗಳಲ್ಲಿ ಆಡಳಿತಾರೂಢ ಪಕ್ಷವಾಗಿದ್ದ ಎಮ್.ಪಿ.ಎಲ್.ಎ ತನ್ನ ಬಜೆಟ್ ಸೆಷನ್ನುಗಳಲ್ಲಿ ಹರಹರಾ ಎಂದು ಏದುಸಿರು ಬಿಡುತ್ತಿದ್ದ ಕಾರಣವೂ ಇದೇ. ದೇಶದ ಅಭಿವೃದ್ಧಿಗೆಂದು ವ್ಯಯಿಸಬೇಕಿದ್ದ ನಿಧಿ ಢಾಳಾಗಿ ಹರಿದುಹೋಗುತ್ತಿದ್ದಿದ್ದು ಶಸ್ತ್ರಾಸ್ತ್ರಗಳ ಖರೀದಿಗೆ. ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಮೀಸಲಿಡಲಾಗುತ್ತಿದ್ದ ಸರ್ಕಾರಿ ನಿಧಿಯ ಗಂಟು ಚಿಕ್ಕದಾಗುತ್ತಾ ಹೋಯಿತು. ಇತ್ತೀಚಿನವರೆಗೂ ಚಿಲ್ಲರೆ ಕಾರಣಗಳಿಂದಾಗಿ ಹಲವು ಸರಕಾರಿ ಯೋಜನೆಗಳು ಅಂಗೋಲಾದಲ್ಲಿ ಹಳ್ಳಹಿಡಿದ ಉದಾಹರಣೆಗಳಿವೆ. ಪೋಲಿಯೋ ನಿವಾರಣೆಯಂಥಾ ಪುಟ್ಟ ಕ್ಯಾಂಪುಗಳಲ್ಲಿ ಪುಸ್ತಕ, ಪೆನ್ನು-ಪೆನ್ಸಿಲ್ ಖರೀದಿಗೂ ಕೆಲ ಸ್ಥಳೀಯ ಕಾರ್ಯಾಲಯಗಳಲ್ಲಿ ಹಣವಿಲ್ಲದ ಪರಿಸ್ಥಿತಿ. ಹೀಗಾಗಿ ತನ್ನದು ಎಂಬ ಸ್ವಂತಿಕೆಯ, ಹೆಮ್ಮೆಯ ಭಾವದಿಂದ ಕರೆದುಕೊಳ್ಳಬಹುದಾದ ಯಾವ ಉದ್ಯಮಗಳೂ, ವಿದ್ಯಾಸಂಸ್ಥೆಗಳೂ, ಸಂಶೋಧನಾ ಕೇಂದ್ರಗಳೂ ಅಂಗೋಲಾದಲ್ಲಿ ತಲೆಯೆತ್ತಲಿಲ್ಲ. ಅಂದಿನಿಂದ ಇಂದಿನವರೆಗೂ ಬಹುತೇಕ ಎಲ್ಲವನ್ನೂ ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಅಂಗೋಲಾದ್ದು.

ಇತ್ತ ಇಲ್ಲದ ಉದ್ಯೋಗಾವಕಾಶ, ನಿಲ್ಲದ ಆಂತರಿಕ ಯುದ್ಧ ಮತ್ತು ಇತರ ಸಂಕಷ್ಟಗಳ ಮಧ್ಯೆ ತಮ್ಮ ಹೊಟ್ಟೆಪಾಡಿಗೆಂದು ಅಂಗೋಲಾದ ಸ್ಥಳೀಯರು ಅವಲಂಬಿಸಿದ್ದು ಕೃಷಿಯನ್ನು. ಆದರೆ ಸರಕಾರಿ ವ್ಯವಸ್ಥೆಗಳು ತಮ್ಮ ಸ್ವಾರ್ಥಕ್ಕಾಗಿ ಇದಕ್ಕೂ ಕಲ್ಲು ಹಾಕಿದವು. ಹೀಗಾಗಿ ಆಂತರಿಕ ಯುದ್ಧದ ಅವಧಿಯಲ್ಲಿ ಬಹುಪಾಲು ಅಂಗೋಲನ್ನರು ಹಸಿವಿನಿಂದ ನರಳಬೇಕಾಯಿತು. ಇದರ ಬೇರೆ ಆಯಾಮಗಳ ಬಗ್ಗೆ ಮುಂದೆ ವಿವರವಾಗಿ ಬರೆಯಲಿದ್ದೇನೆ. ಒಟ್ಟಿನಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದ್ದ ಈ ಎರಡು ಪಕ್ಷಗಳು ದೇಶವನ್ನು ಅದ್ಯಾವ ಮಟ್ಟಿಗೆ ತಂದು ನಿಲ್ಲಿಸಿದ್ದರೆಂದರೆ ಮತ್ತೆ ಎದ್ದೇಳಲು ಒಂದು ಶತಮಾನವೇ ಬೇಕೆಂಬ ಮಟ್ಟಿಗೆ ಪರಿಸ್ಥಿತಿಯು ದುರ್ಭರವಾಯಿತು.

ಹಾಗಿದ್ದರೆ ಇಡೀ ದೇಶವೇ ಸಂಕಷ್ಟದಿಂದ ನರಳುತ್ತಿತ್ತೇ? ಖಂಡಿತ ಇಲ್ಲ. ಅಂಗೋಲಾದ ಸಿರಿವಂತ ವರ್ಗವು ಹಾಯಾಗಿಯೇ ಇತ್ತು. ಮೊದಲ ರಾಷ್ಟ್ರಾಧ್ಯಕ್ಷರಾದ ಆಗಸ್ಟಿನೋ ನೇಟೋರವರ ನಿಧನದ ನಂತರ ಉತ್ತರಾಧಿಕಾರಿಯಾಗಿ ಬಂದ ಜೋಸ್ ಡಿ ಸಾಂತುಸ್ ಬರೋಬ್ಬರಿ ಮೂವತ್ತಾರು ವರ್ಷಗಳ ಕಾಲ ಪಟ್ಟಭದ್ರರಾಗಿ ದೇಶವನ್ನು ತಮ್ಮಿಷ್ಟದಂತೆ ಆಳಿದರು. ಈ ಅವಧಿಯಲ್ಲಿ ತೈಲ, ವಜ್ರ, ಟೆಲಿಕಾಂ, ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನು ಸಾಂತುಸ್ ರವರ ಕುಟುಂಬವೇ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ದೇಶವನ್ನು ಖಾಸಗಿ ಆಸ್ತಿಯಾಗಿ ಮಾರ್ಪಡಿಸಿಕೊಂಡ ಅಧ್ಯಕ್ಷರು ಆಯಕಟ್ಟಿನ ಸ್ಥಾನಗಳಲ್ಲಿ ತಮ್ಮ ಕುಟುಂಬದ ಸದಸ್ಯರನ್ನು, ಮಿಲಿಟರಿ ವಿಭಾಗದ ಮಿತ್ರರನ್ನು, ಹಿತೈಷಿಗಳನ್ನು ಕೂರಿಸಿಬಿಟ್ಟು ಅಧಿಕಾರವನ್ನು ಸಂಪೂರ್ಣವಾಗಿ ಸವಿದರು. ಮೂವತ್ತಾರು ವರ್ಷ ದೇಶವನ್ನು ಆಳಿದ ಡಿ ಸಾಂತುಸ್ ಅಧಿಕಾರವನ್ನು ಬಿಟ್ಟುಕೊಟ್ಟಿದ್ದು 2017 ರ ಅಧ್ಯಕ್ಷೀಯ ಚುನಾವಣೆಯಲ್ಲಷ್ಟೇ. ಜೋ ಲಾರೆನ್ಸೋ ಸದ್ಯ ಅಂಗೋಲಾದ ಅಧ್ಯಕ್ಷರಾಗಿದ್ದರೂ ಎಂ.ಪಿ.ಎಲ್.ಎ ಪಕ್ಷದ ಸೂತ್ರವು ಇನ್ನೂ ಡಿ ಸಾಂತುಸ್ ರ ಹಿಡಿತದಲ್ಲೇ ಇದೆ. ಇನ್ನು ತಾನೋರ್ವ ಉದ್ಯಮಿ ಎಂದು ಹೇಳಿಕೊಳ್ಳುವ ಡಿ ಸಾಂತುಸ್ ರ ಹಿರಿಮಗಳಾದ ಇಸಾಬೆಲ್ ಡಿ ಸಾಂತುಸ್ ಆಫ್ರಿಕಾದ ಅತ್ಯಂತ ಶ್ರೀಮಂತ ಮಹಿಳೆಯೂ ಹೌದು.

ಜೋ ಲಾರೆನ್ಸೋ ರಾಷ್ಟ್ರಾಧ್ಯಕ್ಷರಾಗುವವರೆಗೂ ಸರಕಾರಿ ಸ್ವಾಮ್ಯದ, ಅಂಗೋಲಾದ ಅತೀ ದೊಡ್ಡ ತೈಲೋದ್ಯಮ ಸಂಸ್ಥೆಯಾದ ಸೊನಾಂಗೋಲ್ ನ ಮುಖ್ಯಸ್ಥರಾಗಿದ್ದವರು ಇಸಾಬೆಲ್ ಡಿ ಸಾಂತುಸ್. ಜೊತೆಗೇ ದೇಶದ ಇತರ ದೈತ್ಯಸಂಸ್ಥೆಗಳಲ್ಲಿ ದೊಡ್ಡ ಮಟ್ಟಿನ ಶೇರುಗಳನ್ನು ಹೊಂದಿರುವವರಲ್ಲದೆ ಅಲ್ಲಿಯ ಆಯಕಟ್ಟಿನ ಸ್ಥಾನಗಳನ್ನೂ ಅಲಂಕರಿಸಿರುವವರು ಈಕೆ. ಅಂಗೋಲಾದಲ್ಲಿ ದೊಡ್ಡ ಮಟ್ಟಿನ ಹೂಡಿಕೆಗಳನ್ನು ಮಾಡಲಿಚ್ಛಿಸುವವರು, ಉದ್ಯಮಗಳನ್ನು ಆರಂಭಿಸಲು ಕಾತರರಾಗಿರುವ ಉತ್ಸಾಹಿಗಳೆಲ್ಲಾ ಸೋನಾಂಗೋಲ್ ಸೇರಿದಂತೆ ಇಸಾಬೆಲ್ ರವರ ಇತರೆ ಉದ್ಯಮಗಳಿಗೆ ನೀಡಬೇಕಾದ ಕಾಣಿಕೆಗಳು, ಅವರಿಗೆ ಕಪ್ಪದಂತೆ ನೀಡಬೇಕಾಗಿರುವ ಇಂತಿಷ್ಟು ಪ್ರತಿಶತ ಶೇರುಗಳು… ಇತ್ಯಾದಿಗಳು ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಹಾಲಿವುಡ್ ನಟಿಮಣಿಯರೊಂದಿಗೆ, ವಿಶ್ವದ ವಿಲಾಸಿ ತಾಣಗಳಲ್ಲಿ, ಝಗಮಗಿಸುವ ಪಾರ್ಟಿಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ಕಾಣಿಸಿಕೊಳ್ಳುವ ಇಸಾಬೆಲ್ ಡಿ ಸಾಂತುಸ್ ಈ ಕಾರಣಕ್ಕಾಗಿ ಟೀಕೆಗೊಳಗಾದವರೂ ಹೌದು.

ಹೀಗೆ ಅಂಗೋಲಾದ ದುಬಾರಿ ಜೀವನದ ಮೂಲವನ್ನು ಹುಡುಕಹೊರಟರೆ ವ್ಯಾಪಕ ಭ್ರಷ್ಟಾಚಾರ, ಸಂಪನ್ಮೂಲಗಳ ದುರ್ಬಳಕೆ, ಆಂತರಿಕ ಯುದ್ಧ, ನಾಯಕರ ದೂರದೃಷ್ಟಿಯ ಕೊರತೆ, ಕುಸಿಯುತ್ತಿರುವ ಆರ್ಥಿಕತೆ… ಹೀಗೆ ಹಲವು ಸಂಗತಿಗಳು ತಲೆಯೆತ್ತಿ ನಿಲ್ಲುತ್ತವೆ. ಇಂದಿಗೂ ಅಂಗೋಲಾದ ತೊಂಭತ್ತು ಪ್ರತಿಶತಕ್ಕೂ ಹೆಚ್ಚಿನ ಆದಾಯವು ಹರಿದು ಬರುತ್ತಿರುವುದು ತೈಲದಿಂದ ಮಾತ್ರ. ಇನ್ನು ಆರ್ಥಿಕತೆಯ ವಿಚಾರದಲ್ಲಿ ತೈಲ ಮತ್ತು ವಜ್ರದ ಮೇಲಷ್ಟೇ ದೇಶವು ಇನ್ನೂ ಅವಲಂಬಿಸಿರುವುದು ವಿಷಾದದ ವಿಷಯವೇ ಸರಿ. ಮುಂದಿನ ಪೀಳಿಗೆಗೆಂದು ಸದ್ಯದ ಅಂಗೋಲನ್ ನಾಯಕರು ಏನನ್ನು ಬಿಟ್ಟುಹೋಗುತ್ತಿದ್ದಾರೆ? ಅವಕಾಶಗಳಿಲ್ಲದೆ ಕಂಗೆಟ್ಟುಹೋಗಿರುವ ಅಂಗೋಲನ್ ಯುವಕರು ಸ್ವತಃ ಹೇಳುವಂತೆ ನಿಟ್ಟುಸಿರು ಮಾತ್ರವೇ?

ಹೊಸ ರಾಷ್ಟ್ರಾಧ್ಯಕ್ಷರ ಮೇಲೆ ಈಗ ಭಾರೀ ನಿರೀಕ್ಷೆಗಳ ಹೆಣಭಾರವಿದೆ. ಆದರೆ ದೇಶದ ಸಮಸ್ಯೆಗಳ ಮಟ್ಟವೋ ಬೆಟ್ಟದಷ್ಟಿದೆ. ಮುಂದೇನಾಗಲಿದೆ? ಕಾಲವೇ ಹೇಳಬೇಕು!

‍ಲೇಖಕರು avadhi

September 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: