ತೇಜಸ್ವಿ ಲೋಕದಲ್ಲೊಂದು ಸುತ್ತು

ಪ್ರಿಯದರ್ಶಿನಿ ಎಸ್ ಶೆಟ್ಟರ

ಪೂರ್ಣಚಂದ್ರ ತೇಜಸ್ವಿ – ಎಂಬ ಹೆಸರು ಕೇಳಿದಾಕ್ಷಣ ನಮಗರಿವಿಲ್ಲದಂತೆ ಒಂದಷ್ಟು ಕುತೂಹಲ, ಬೆರಗು, ರೋಮಾಂಚನ ನಮ್ಮನ್ನು ಆವರಿಸುವುದು ನಿಜ. ಕನ್ನಡದ ಮನಸ್ಸುಗಳ ಪಾಲಿಗೆ ವಿಸ್ಮಯ, ನಿಗೂಢ, ಆದರ್ಶ ಹಾಗೂ ಅನ್ವೇಷಣೆಗಳ ಕಣಜ ಈ ಮೂಡಿಗೆರೆಯ ಮೋಡಿಗಾರ. ತೇಜಸ್ವಿಯವರ ಕುರಿತು ಸಾಕ್ಷ್ಯಚಿತ್ರ ಮಾಡಲು ‘ಮಾಯಕಾರನ ಜಾಡು ಹಿಡಿದು ಹೊರಟ’ ಕೆ. ಎಸ್. ಪರಮೇಶ್ವರಅವರು ೨೦೧೨ರಲ್ಲಿ ‘ಮತ್ತೆ ಮತ್ತೆ ತೇಜಸ್ವಿ’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದರು.

ನಂತರ ಆ ಅನುಭವಗಳನ್ನೆಲ್ಲ ಪತ್ರಕರ್ತ ಹಾಗೂ ‘ಅವಧಿ’ಯ ಸಂಪಾದಕರಾದ ಶ್ರೀ ಜಿ. ಎನ್. ಮೋಹನ ಅವರ ಆಶಯದ ಮೇರೆಗೆ ಬರಹ ರೂಪಕ್ಕಿಳಿಸಿದ್ದಾರೆ. ಹೀಗೆ ‘ಅವಧಿ’ಯಲ್ಲಿ ಪ್ರಕಟವಾದ ‘ತೇಜಸ್ವಿಯನ್ನು ಹುಡುಕುತ್ತಾ’ ಎಂಬ ಅಂಕಣಗಳ ಗುಚ್ಛವೇ ‘ತೇಜಸ್ವಿ ಸಿಕ್ಕರು’ ಎಂಬ ಪುಸ್ತಕವಾಗಿ ಓದುಗರ ಮುಂದಿದೆ.

ಇತ್ತೀಚಿಗಷ್ಟೇ ನಾನು ಓದಿ ಮುಗಿಸಿದ ಈ ಕೃತಿಯ ಮೊದಲನೇ ಪುಟದಲ್ಲಿನ ಬರಹ ‘ತೇಜಸ್ವಿ ಎಂಬ ಗುಂಗೀ ಹುಳ’ – ಇಡೀ ಪುಸ್ತಕಕ್ಕೆ ಟ್ರೈಲರ್‌ನಂತಿದೆ. ಇದರ ಕಡೆಯ ಸಾಲು ಹೀಗಿದೆ: ‘…

ಈ ಕೃತಿ ಓದಿದ ನಂತರ ತೇಜಸ್ವಿ ಮೇಲಿನ ಪ್ರೀತಿ ಒಂದು ಹಿಡಿ ಹೆಚ್ಚಾಗುವುದು ಖಂಡಿತಾ…’ ಬರೀ ಒಂದು ಹಿಡಿ ಪ್ರೀತಿ ಮಾತ್ರವಲ್ಲ, ಬೊಗಸೆಗಳಷ್ಟು ಲವಲವಿಕೆ, ಹಿಡಿಯೊಳಗೆ ಸಾಲದಷ್ಟು ಉತ್ಸಾಹ, ನಮ್ಮ ಹವ್ಯಾಸದೆಡೆಗಿನ ಆಸಕ್ತಿ, ತೇಜಸ್ವಿಯವರ ಪುಸ್ತಕಗಳ ಕುರಿತು ಇನ್ನಿಲ್ಲದಷ್ಟು ಕುತೂಹಲ, ಇತ್ಯಾದಿ… ಇತ್ಯಾದಿ… ಯಾವುದೋ ಕಥೆ- ಕಾದಂಬರಿಯಂತೆ ಹೀಗೆ ಶುರು ಮಾಡಿ ಹಾಗೆ ಓದಿ ಮುಗಿಸುವ ಪುಸ್ತಕ ಇದಲ್ಲವೇ ಅಲ್ಲ. ಇದನ್ನೋದಿ ಮುಗಿಸಿದ ಮೇಲೆ ತೇಜಸ್ವಿಯವರ ಕೃತಿಗಳ ಮರು ಓದು ಎಷ್ಟು ಅಗತ್ಯ ಎಂಬುದು ನನ್ನರಿವಿಗೆ ಬಂದಿದೆ.

ತೇಜಸ್ವಿಯವರ ಕುಟುಂಬದವರು, ಸ್ನೇಹಬಳಗ, ಸಹಪಾಠಿಗಳು, ಸಮಾನ ಮನಸ್ಕರು, ರಂಗಕರ್ಮಿಗಳು, ವಿಜ್ಞಾನದ ವಿದ್ಯಾರ್ಥಿಗಳು, ರಿಪೇರಿ ಅಂಗಡಿಯವರು, ಬಿರಿಯಾನಿ ಅಂಗಡಿಯವರು, ಸಿನಿಮಾರಂಗದವರು, ಪ್ರಕಾಶಕರು, ಇನ್ನೂಅನೇಕರು ಅವರ ಕುರಿತು ಮೆಲುಕು ಹಾಕಿದ ಘಟನೆಗಳು ಇಲ್ಲಿ ದಾಖಲಿಸಲ್ಪಟ್ಟಿವೆ. ಅವರು ಅಡ್ಡಾಡಿದ್ದ ಜಾಗಗಳು, ಒಡನಾಡಿದ್ದ ಜೀವಗಳು ಹಾಗೂ ಅವರ ಕೃತಿಗಳಲ್ಲಿ ಮೂಡಿ ಬಂದ ಕೆಲವು ಸ್ಥಳಗಳು, ವ್ಯಕ್ತಿಗಳು, ಪಾತ್ರಗಳು – ಹೀಗೆ ಬಹಳಷ್ಟು ವಿಷಯ ವೈವಿಧ್ಯತೆ ಮನ ಮುಟ್ಟುವಂತೆ ಚಿತ್ರಿತವಾಗಿದೆ.

ಈ ಮೂಲಕ ಲೇಖಕರು ತೇಜಸ್ವಿಯವರ ಸ್ವಭಾವ, ಮಗು-ಸಹಜ ಕುತೂಹಲ, ಹುಡುಕಾಟದ ಪ್ರವೃತ್ತಿ, ಹೋರಾಟದ ಮನೋಭಾವ, ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ತೇಜಸ್ವಿಯವರು ಆರಂಭದಲ್ಲಿ ಬರೆದ ಕಥೆಗಳಿಂದ ಹಿಡಿದು ಇತ್ತೀಚಿನ ಮಿಲೇನಿಯಂ ಸರಣಿಯವರೆಗಿನ ಬರವಣಿಗೆಯನ್ನುಅವರ ಆಪ್ತರು ನೆನಪಿಸಿಕೊಳ್ಳುತ್ತಾರೆ. ಅಲ್ಲಲ್ಲಿ ಓದುಗರು ತಾವೀಗಾಗಲೇ ಓದಿರಬಹುದಾದ ತೇಜಸ್ವಿಯವರ ಪುಸ್ತಕಗಳನ್ನು ಹೆಚ್ಚು ನಿಚ್ಚಳಗೊಳಿಸುವ ಶಕ್ತಿ ಪ್ರಸ್ತುತ ಪುಸ್ತಕಕ್ಕಿದೆ.

ತೇಜಸ್ವಿಯವರ ಹವ್ಯಾಸಗಳಾಗಿದ್ದ ಫಿಶಿಂಗ್, ಸಂಗೀತಾಭ್ಯಾಸ, ಫೋಟೋಗ್ರಫಿ, ಚಾರಣ, ಶಿಕಾರಿ, ಯಂತ್ರಗಳೆಡೆಗಿನ ಆಕರ್ಷಣೆ, ರಿಪೇರಿ ಕೆಲಸಗಳೆಡೆಗಿನ ಉತ್ಸಾಹ ಮತ್ತು ಪರಿಸರದ ಬಗೆಗಿನ ಕಾಳಜಿ – ಹೀಗೆ ಒಬ್ಬ ವ್ಯಕ್ತಿಯ ಹಲವಾರು ಆಸಕ್ತಿಗಳ ಕುರಿತು ಸ್ವಾರಸ್ಯಕರ ಮಾಹಿತಿಗಳು ಇಲ್ಲಿ ಅಡಕವಾಗಿವೆ. ಶುರುವಾತಿನಲ್ಲಿ ಅಷ್ಟೇನೂ ವಿಶೇಷವೆನಿಸದ ಈ ಕೃತಿ ಬರುಬರುತ್ತಾ ಓದುಗರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಲೇಖಕರು ತೇಜಸ್ವಿಯವರ ದಿನಚರಿಯ ಹಲವಾರು ವಿಷಯಗಳನ್ನು ಪರಿಚಯಿಸುತ್ತಾ ಹೋಗಿದ್ದಾರೆ.

ಈ ಪುಸ್ತಕ ಇಷ್ಟವಾಗುವುದಕ್ಕೆ ಮತ್ತೊಂದು ಕಾರಣವೆಂದರೆ, ಲೇಖಕರು ತಮ್ಮತಂಡದ ಜೊತೆಗೆ ಓದುಗರನ್ನೂ ತೇಜಸ್ವಿ ಪ್ರಪಂಚದಲ್ಲಿ ಸಂಚರಿಸುವಂತೆ ಮಾಡುತ್ತಾರೆ. ಅವರ ಪ್ರಯಾಣದ ವಿವರ, ಹೋಟೆಲ್‌ನಲ್ಲಿನ ಊಟೋಪಚಾರ, ತೇಜಸ್ವಿಯವರ ಹಿತೈಷಿಗಳೊಂದಿಗಿನ ಮಾತುಕತೆ, ಅನೇಕ ಸ್ಥಳಗಳ, ಗುಡ್ಡ- ಬೆಟ್ಟ, ಕಾಡು, ನದಿತೀರಗಳ ಭೇಟಿ- ಇವೆಲ್ಲ ಓದುಗರಿಗೆ ವರ್ಚುವಲ್‌ ಟೂರ್‌ನ ಅನುಭವ ನೀಡುತ್ತವೆ.

ಇಡೀ ಪುಸ್ತಕ ಓದಿದ ನಂತರ ನನಗನಿಸಿದ್ದು, ಈ ಕೃತಿಗೆ ಒಂದು ಪರಿವಿಡಿ ಅವಶ್ಯಕವಾಗಿದೆ ಹಾಗೂ ಕೊನೆಗೆ ಒಂದು ಅನುಬಂಧ ಇದ್ದಿದ್ದರೆ, ಓದುಗರಿಗೆ ಇಲ್ಲಿ ದಾಖಲಿಸಿರುವ ಜಾಗಗಳ, ವ್ಯಕ್ತಿಗಳ ಮತ್ತು ಪುಸ್ತಕಗಳ ಹೆಸರುಗಳನ್ನು ತಮಗೆ ಬೇಕಾದಾಗ ಹುಡುಕಲು ಸಹಾಯವಾಗುತ್ತಿತ್ತು. ಯಾಕೆಂದರೆ ಕೃತಿಯಲ್ಲಿ ಉಲ್ಲೇಖವಾದ (ಬ್ಯಾಕ್‌ ರೆಫರೆನ್ಸ್) ಯಾವುದಾದರೂ ವಿಷಯಕ್ಕಾಗಿ ತಡಕಾಡಲು ಬಹಳ ಶ್ರಮ ಹಾಗೂ ಸಮಯ ಬೇಕಾಗುತ್ತದೆ.

ಜೊತೆಗೆ ತೇಜಸ್ವಿಯವರ ಅಪರೂಪದ ಭಾವಚಿತ್ರಗಳು, ಅವರು ತೆಗೆದ ಪಕ್ಷಿಗಳ, ಪ್ರಕೃತಿಯ ಹಾಗೂ ಅವರ ಕುರಿತು ಮಾತನಾಡಿದವರ ಭಾವಚಿತ್ರಗಳು, ಅಲ್ಲಲ್ಲಿ ಕೆಲವು ರೇಖಾಚಿತ್ರಗಳನ್ನು ಬಳಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ‘ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯ ಚಿತ್ರವನ್ನು ನೋಡದೇ ಇರುವವರು ಮೊದಲು ಈ ಪುಸ್ತಕ ಓದಿ ನಂತರ ಸಾಕ್ಷ್ಯಚಿತ್ರ ನೋಡಿದರೆ, ಇಲ್ಲಿ ಬಿಟ್ಟು ಹೋಗಿರುವ ಕೆಲ ಸಂಗತಿಗಳು ಅಲ್ಲಿದೊರೆತು ತೇಜಸ್ವಿಯವರನ್ನು ಹುಡುಕುವ ಹಾಗೂ ಕೈಲಾದಷ್ಟು ದಕ್ಕಿಸಿಕೊಳ್ಳುವ ಪ್ರಯತ್ನ ಪೂರ್ಣವಾಗುತ್ತದೆ. ಕ್ಯಾಮರಾಮನ್‌ ದರ್ಶನ್ ಹೆಬ್ಬಾಳ್ ಅವರು ಮಲೆನಾಡಿನ ದೃಶ್ಯಗಳನ್ನು ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ.

ಎರಡೂವರೆ ತಾಸಿನ ಸಾಕ್ಷ್ಯ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಪುಸ್ತಕ ಹಾಗೂ ಸಾಕ್ಷ್ಯ ಚಿತ್ರ ಎರಡನ್ನೂ ಅವಲೋಕಿಸಿದಾಗ ಟೀಂ ಎಫರ್ಟ್ ಎದ್ದು ಕಾಣುತ್ತದೆ. ತೇಜಸ್ವಿ ಎಂಬ ಬಹುಮುಖ ಪ್ರತಿಭೆಯ ಕುರಿತ ಬಿಡಿಬಿಡಿಯಾದ ಬರಹಗಳನ್ನು ಒಂದೆಡೆ ತಂದು ಪ್ರಕಟಿಸಿದ ಬಹುರೂಪಿ ಪ್ರಕಾಶನ ಓದುಗರ ಕುತೂಹಲ ತಣಿಸಿದೆ. ಯುವ ಮನಸ್ಸುಗಳು, ಅದರಲ್ಲೂ ಸಾಹಿತ್ಯಾಸಕ್ತ ವಿಜ್ಞಾನದ ವಿದ್ಯಾರ್ಥಿಗಳು ಓದಲೇಬೇಕಾದ ಕೃತಿ ಇದು.

ಇತ್ತೀಚೆಗೆ ಅನೇಕರು ಓದು, ಉದ್ಯೋಗ, ಕುಟುಂಬ, ಜವಾಬ್ದಾರಿಯಂತಹ ದಿನಂಪ್ರತಿಯ ಪ್ರಪಂಚದಲ್ಲಿ ಕಳೆದೇ ಹೋಗುತ್ತಾರೆ. ಮಿಲೇನಿಯಲ್‌ ತಲೆಮಾರಿನವರಿಗೆ ತೇಜಸ್ವಿಯವರ ಬದುಕು- ಬರಹ ಓದಿದಾಗ ‘ಹೀಗೂ ಬದುಕಬಹುದೇ? ಇಷ್ಟು ಜೀವಂತಿಕೆಯಿಂದ, ಲವಲವಿಕೆಯಿಂದ ಇರಬಹುದೇ?’ಎಂದೆನಿಸದೇ ಇರದು!

ವಜನತೆಯಷ್ಟೇ ಅಲ್ಲ, ಅಕ್ಷರ ಲೋಕದಲ್ಲಿ ಆಸಕ್ತಿಯಿರುವ ಎಲ್ಲ ವಯೋಮಾನದವರಿಗೂ ತೇಜಸ್ವಿಯವರ ಹಾಗೂ ಅವರ ಬರಹಗಳಲ್ಲಿನ ಪಾತ್ರಗಳ ಬಗ್ಗೆ ಒಂದು ಬಗೆಯ ಕೌತುಕ ಇದ್ದದ್ದೇ. ಒಂದೇ ಒಂದು ಜೀವನವನ್ನು ಹಲವು ಆಯಾಮಗಳ ಮೂಲಕ ಸಾರ್ಥಕಗೊಳಿಸುವ ಅವರ ಪರಿ ಆಶ್ಚರ್ಯವನ್ನುಂಟು ಮಾಡುತ್ತದೆ. ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ತೇಜಸ್ವಿಯವರು ತಮ್ಮ ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನವನ್ನು ತಮ್ಮ ಬರವಣಿಗೆಗಳಿಗೆ ಅಳವಡಿಸಿದ ರೀತಿ ಎಂತಹವರನ್ನೂ ಬೆರಗುಗೊಳಿಸುತ್ತದೆ.

ಒಟ್ಟಾರೆ ಹೇಳುವುದಾದರೆ, ‘ತೇಜಸ್ವಿ ಸಿಕ್ಕರು’ ಪುಸ್ತಕ ಓದಿದ ನಂತರ ತೇಜಸ್ವಿಯವರ ಕುರಿತ ಕುತೂಹಲ ಓದುಗರನ್ನು ಮೊದಲಿಗಿಂತ ಹೆಚ್ಚಾಗಿ ಕಾಡಲು ಶುರುವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ!

ಈ ಕೃತಿಯನ್ನು ಕೊಳ್ಳಲು- ಇಲ್ಲಿ ಕ್ಲಿಕ್ಕಿಸಿ

‍ಲೇಖಕರು Avadhi

May 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: