ಜಿ ಎನ್‌ ನಾಗರಾಜ್‌ ಅವರ ಹೊಸ ಅಂಕಣ ‘ಸಮುದ್ರ ಮಂಥನ’ ಆರಂಭ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ , ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಸಮುದ್ರ ಮಂಥನದಿಂದಲೇ ಆರಂಭಿಸೋಣ..

ಸಮುದ್ರ ಮಂಥನ- ಭಾರತೀಯರಲ್ಲಿ ಎಷ್ಟೊಂದು ನೆನಪುಗಳನ್ನು ಉಕ್ಕಿಸುತ್ತದೆ ಈ ಎರಡು ಪದಗಳು. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ವರ್ಷಗಳಿಂದ ವಿವಿಧ ರೂಪ, ಕಥಾನಕಗಳ ಮೂಲಕ ಜನರ ಮನಸ್ಸನ್ನು ಆವರಿಸಿದೆ ಈ ಪುರಾಣ ಕತೆ. ದೇಶದಾಚೆಗೆ ಮಲೇಷಿಯಾದಿಂದ ಲಾವೋಸ್‌ವರೆಗೂ ಹಬ್ಬಿ ಆಂಗ್ಕೋರ್‌ವಾಟ್‌ನ ಪ್ರಸಿದ್ಧ ದೇವಾಲಯದ ಭಿತ್ತಿ ಶಿಲ್ಪವಾಗಿದೆ.

ಹಾಲಿನ‌ ಕಡಲು, ದೇವತೆಗಳು, ರಾಕ್ಷಸರು, ವಾಸುಕಿ, ಮಂದರ ಪರ್ವತ, ಕೂರ್ಮಾವತಾರ, ಅಮೃತ, ಹಾಲಾಹಲ, ಸುರೆ, ಲಕ್ಷ್ಮಿ, ಧನ್ವಂತರಿ, ಅಪ್ಸರೆಯರು, ಕೌಸ್ತುಭ ಮೊದಲಾದ ರತ್ನಗಳು, ಕಾಮಧೇನು, ಐರಾವತ, ಉಚ್ಛೈಶ್ರವಸ್, ಪಾರಿಜಾತ, ನೀಲಕಂಠನಾದ ಶಿವ, ವಿಷ್ಣು, ಮೋಹಿನಿ, ಹರಿಹರ ಪುತ್ರ ಅಯ್ಯಪ್ಪ, ರಾಹು, ಕೇತು, ಸೂರ್ಯ- ಚಂದ್ರ ಗ್ರಹಣಗಳು ಮೊದಲಾದ ಕಲ್ಪನೆಗಳು ಸಮುದ್ರ ಮಂಥನ ಎಂಬ ಎರಡೇ ಪದಗಳ ಒಡಲಿನಲ್ಲಿ ಕಿಕ್ಕಿರಿದು ತುಂಬಿಕೊಂಡಿವೆ.

ಸಾವು, ಅಮೃತತ್ವ, ಮೋಸ, ಕುತಂತ್ರ, ಆಸೆ, ದುರಾಸೆ, ದುಡಿಮೆ, ಪ್ರತಿಫಲ, ಅನ್ಯಾಯ, ಜನಾಂಗ ಬೇಧ, ಅಧಿಕಾರ, ಆಕ್ರಮಣ ಮೊದಲಾದ ಸಾಮಾಜಿಕ, ಆರ್ಥಿಕ, ರಾಜಕೀಯ, ನೀತಿಶಾಸ್ತ್ರ ಹಾಗೂ ತತ್ವಜ್ಞಾನದ ಆಯಾಮಗಳನ್ನು ಪಡೆದುಕೊಂಡಿದೆ. ಎಷ್ಟೊಂದು ರೀತಿಯಲ್ಲಿ ಜನಗಳ ಮನಸ್ಸಿನಾಳದಲ್ಲಿ ನೆಲೆ ಪಡೆದುಕೊಂಡಿದೆ. ಚಿಂತನೆ, ನಂಬಿಕೆ, ನಡೆವಳಿಕೆಗಳನ್ನು ಪ್ರಭಾವಿಸಿದೆ. ಹಲವು ದೇವಾಲಯಗಳು, ಮೂರ್ತಿಗಳು, ಹಬ್ಬಗಳು, ಜಾತ್ರೆಗಳು, ಯಾತ್ರೆಗಳು, ಆಚರಣೆಗಳು, ಮೂಢ ನಂಬಿಕೆಗಳಿಗೆ ಕಾರಣವಾಗಿದೆ. ‌

ಸಮುದ್ರ ಮಂಥನ ಎಂಬ ಈ ಕಲ್ಪನೆಗಳ‌ ಸಮುಚ್ಚಯ ಭಾಗವತ, ವಿಷ್ಣು ಪುರಾಣ, ಮಹಾಭಾರತಗಳಲ್ಲಿ ತನ್ನ ಸಂಕೀರ್ಣ ‌ಸ್ವರೂಪದಲ್ಲಿ ರೂಪು ತಳೆದಿದೆ. ಆದರೆ ಇದರಲ್ಲಿ ಅಡಕವಾದ ಕೆಲವು ವಿಷಯ, ವಿಚಾರಗಳು ಈ ಪುರಾಣಗಳು ರಚನೆಯಾದ ಕಾಲಕ್ಕಿಂತ ಹಲವು ಶತಮಾನಗಳ ಹಿಂದೆಯೇ ಬೀಜ ರೂಪದಲ್ಲಿದ್ದ ಗುರುತುಗಳನ್ನು ಪ್ರಾಚೀನ ಕಾಲದಿಂದಲೇ ಕಾಣುತ್ತೇವೆ. ಅವು ಇತಿಹಾಸಪೂರ್ವ ಕಾಲದ ಮಾನವರ ಆಸೆ, ಕನಸುಗಳನ್ನು ಬಿಂಬಿಸುತ್ತವೆ. ತಾವು ಕಾಣುವ ವಾಸ್ತವವನ್ನು ಅರ್ಥವಿಸಿಕೊಳ್ಳಲು ರೂಪಿಸಿಕೊಂಡ ಸರಳ ರೂಪಕಗಳಾಗಿವೆ. ದನಗಳಂತಹ ಪಶುಪಾಲಕ ಸಮುದಾಯಗಳಿಗೆ ಹಾಲು ಅವರ ಎಲ್ಲ ಸುಖ, ಸಂಪತ್ತಿನ ಮೂಲವಾಗಿತ್ತು ಎಂಬುದನ್ನು ಊಹಿಸಿಕೊಳ್ಳುವುದೇನೂ ಕಷ್ಟವಲ್ಲ.

ತಮ್ಮ ಬದುಕು ಸಮೃದ್ಧವಾಗಿರಬೇಕು ಎಂದರೆ ಅಪಾರವಾದ ಹಾಲು ಉತ್ಪನ್ನವಾಗಬೇಕು. ಅದರಿಂದ ಪಡೆದ ಮೊಸರು, ಬೆಣ್ಣೆ, ತುಪ್ಪ, ತಿನಿಸುಗಳನ್ನು ತಾವೂ ಯಥೇಚ್ಛವಾಗಿ ಬಳಸುವುದರ ಜೊತೆಯಲ್ಲಿ, ಅವುಗಳನ್ನು ವಿನಿಮಯ ಮಾಡಿಕೊಂಡು ತಮ್ಮ ಜೀವನಕ್ಕೆ ಬೇಕಾದ ಇತರ ಅಗತ್ಯಗಳನ್ನು, ಉಡುಗೆ ತೊಡುಗೆ, ಅಲಂಕಾರಗಳನ್ನು ಪಡೆಯಬೇಕು. ಆರೋಗ್ಯವಾಗಿ ಮತ್ತು ಸುಖವಾಗಿ ಬಾಳಬೇಕು ಎಂಬ ಅವರ ಬಾಳಿನ ಕನಸು ಅಗಾಧವಾದ ಹಾಲಿನ ಕಡಲನ್ನು, ಅದನ್ನು ಕಡೆಯಲು ಬೇಕಾದ ಬೃಹತ್ ಪರಿಕರಗಳನ್ನು ಕಲ್ಪಿಸಿಕೊಂಡಿದೆ. 

ನಮ್ಮ ಪುರಾಣಗಳಲ್ಲಿ ಜಗತ್ತಿನ ಸಪ್ತ ಸಾಗರಗಳ ಕಲ್ಪನೆಯಲ್ಲಿ ಎರಡು ಮಹಾ ಸಾಗರಗಳು- ಹಾಲು ಮತ್ತು ಮೊಸರಿನ ಸಾಗರಗಳು. ವಿಷ್ಣು ಕ್ಷೀರ ಸಾಗರ ಶಯನ. ಈ ಎಲ್ಲ ಕಲ್ಪನೆಗಳು ಪಶುಪಾಲಕರ ಲೋಕದಲ್ಲಿ ಎಲ್ಲೆಲ್ಲೂ ಹಾಲೇ ವಿಜೃಂಭಿಸುವ ಆದಿಮ ಕಲ್ಪನೆಯ ಬಿಂಬ. ಕೃಷಿಕರ ಮನಸ್ಸಿನ ತುಂಬಾ ಧಾನ್ಯಗಳ ರಾಶಿ ತುಂಬಿಕೊಂಡಂತೆ.

ಲಕ್ಷ್ಮಿ ಎಂಬ ರೂಪದಲ್ಲಿ ಅಪಾರ ಸಂಪತ್ತು, ಇತರ ಧನ‌ಕನಕ ವಸ್ತು ವಾಹನಗಳಿಗೆ ಮೂಲಾಧಾರ ದೊಡ್ಡ ಪ್ರಮಾಣದ ಹಾಲು ಮತ್ತು ಅದನ್ನು ಕಡೆಯುವುದೇ ಮೂಲ ಎಂಬ ಆಶಯವೇ ಪಶುಪಾಲಕ ಸಮುದಾಯಗಳಲ್ಲಿ ಬೇರು ಉಳಿಸಿಕೊಂಡವರು ರಚಿಸಿದ ಪುರಾಣಗಳಲ್ಲಿನ ಸಮುದ್ರ ಮಂಥನದ ಕಲ್ಪನೆಯ ಮೂಲ. ಉತ್ತರ ಭಾರತದಲ್ಲಿ ದೀಪಾವಳಿ‌ಯನ್ನು ಲಕ್ಷ್ಮಿ ಹುಟ್ಟಿದ ದಿನದ ಸಂಭ್ರಮವನ್ನು ಮೆರೆಸುವ ಹಬ್ಬವೆಂದು ಆಚರಿಸಲಾಗುತ್ತದೆ. (ಜೊತೆಗೆ ವಿಷ್ಣುವಿನ ಪೂಜೆಯೇನೂ ಕಾಣುವುದಿಲ್ಲ.) ದೀಪಾವಳಿಯ ಸಮಯ, ಗಂಗಾ ನದೀ ಬಯಲಿನಲ್ಲಿ ನದಿ, ಉಪನದಿಗಳು ತುಂಬಿ ಹರಿದು ದನಗಳಿಗೆ ಮೇವು ಯಥೇಚ್ಛವಾಗಿ ದೊರೆಯುವ ಸಮಯ.

ಗೋವಳರ ಮನೆಗಳಲ್ಲಿ ವಿವಿಧ  ಉತ್ಪನ್ನಗಳು, ತಿನಿಸುಗಳನ್ನು‌ ಮಾಡುವಷ್ಟು ಹಾಲು ಉಕ್ಕಿ ಹರಿಯುವ ಸಮಯವೂ ಹೌದೆನ್ನುವುದು ಕೇವಲ ಕಾಕ‌ತಾಳಿಯವಲ್ಲ.‌ (ಮಲನ ಐಯ್ಯಂಗಾರ್ ಎಂಬುವರು ಕುವೆಂಪುರವರ ಚಿಂತನೆಯ ಗೃಹ ಸರಸ್ವತಿ ಎಂಬ ಪುಸ್ತಕ ಮಾಲೆಗೆ ಬರೆದ ‘ನಮ್ಮ ದನಗಳು’ ಎಂಬ ಪುಸ್ತಕ ಈ ಮೂಲ ಕಲ್ಪನೆಯನ್ನು ಅರ್ಥಪೂರ್ಣವಾಗಿ ವಿವರಿಸಿದೆ. ನಮ್ಮ ಇತಿಹಾಸದ ಅಧ್ಯಯನಗಳಲ್ಲಿ ಎಲ್ಲಿಯೂ ಸೇರಿಸಲ್ಪಡದ ಈ ಪುಸ್ತಕ ಭಾರತದ ಇರಿಹಾಸದ ಬಗ್ಗೆ ,ಆರ್ಯ, ದ್ರಾವಿಡ, ಜನ‌ಸಮುದಾಯಗಳ ಬದುಕಿನ ಬಗ್ಗೆ ಅನೇಕ ಮುಖ್ಯ ವಿಷಯಗಳನ್ನು ಹೇಳುತ್ತದೆ. ನಂಬಲರ್ಹ ಸಾಕ್ಷ್ಯಾಧಾರಗಳನ್ನು ನೀಡುತ್ತದೆ.)

ಸಾವನ್ನು ಅರ್ಥ ಮಾಡಿಕೊಳ್ಳುವ, ಅದನ್ನು ಗೆಲ್ಲುವ ಅಮೃತತ್ವದ ಕನಸೂ ಕೂಡಾ ಬಹಳ ಪ್ರಾಚೀನ ಕಾಲದಿಂದಲೇ ಮಾನವರನ್ನು ಕಾಡಿದೆ. ಬೇಟೆಯ ಮೇಲೆ ಅವಲಂಬಿಸಿದ ಮನುಷ್ಯ ಸಮುದಾಯಕ್ಕೆ ಆಹಾರದ ಲಭ್ಯತೆ ಬಹಳ ಅನಿಶ್ಚಿತವಾಗಿತ್ತು. ಅಂತಹ ಸಮಯದಲ್ಲಿ ಪಶು ಸಂಗೋಪನೆಯನ್ನು ಕಂಡುಕೊಂಡು, ಅದರಿಂದ ಹಾಲು, ಮಾಂಸಗಳನ್ನು ಪಡೆದುಕೊಂಡದ್ದು ಮಾನವ ನಾಗರೀಕತೆಯಲ್ಲಿ ಒಂದು ದೊಡ್ಡ ನೆಗೆತ. ಅವರ ಮೇಲೆ ಸದಾ ತೂಗಾಡುತ್ತಿದ್ದ ಹಸಿವಿನ ಸಾವುಗಳಿಂದ ಮುಕ್ತಿ. ಪುಷ್ಟಿಕರ ಆಹಾರದ ಲಭ್ಯತೆಯಿಂದ ಮತ್ತಷ್ಟು ಹೆಚ್ಚು ಕಾಲ ಬದುಕುವ ಸಾಧ್ಯತೆಗಳು ಹಾಲಿನ ಕಡಲಿನ ಮಂಥನದಿಂದ ಧನ್ವಂತರಿ, ಅವನ ಕೈಯಲ್ಲಿ ಅಮೃತ ಎಂಬ ಕಲ್ಪನೆಗೆ ದಾರಿ ಮಾಡಿಕೊಟ್ಟಿದೆ.

ಸೂರ್ಯ ಮತ್ತು ಚಂದ್ರ ಗ್ರಹಣಗಳು ಅಂದಿನ ಮಾನವರಿಗೆ ಬಹು ಗೂಢವಾದ, ಭಯ, ಆತಂಕವನ್ನುಂಟು ಮಾಡುವ ಪ್ರಕೃತಿ ವ್ಯಾಪಾರದ ಚೋದ್ಯಗಳು. ಅವುಗಳನ್ನು ವಿವರಿಸಿಕೊಳ್ಳುವುದಕ್ಕೆ ಈ ಆಕಾಶಕಾಯಗಳನ್ನು ನುಂಗುವ ಪ್ರಾಣಿಗಳನ್ನು ಕಲ್ಪಿಸಿಕೊಂಡಿರುವುದು ಬುಡಕಟ್ಟು ಜನರಿಗೆ ಅಸಹಜವೇನಲ್ಲ.

ಹಾಲು ಚೆಲ್ಲಿದಂತಹ ಬೆಳುದಿಂಗಳು ಎಂಬ ಅಭಿವ್ಯಕ್ತಿ, ಸಾಹಿತ್ಯದಲ್ಲಿ ಮಾತ್ರವಲ್ಲ, ಸಾಮಾನ್ಯ ಜನರಲ್ಲಿಯೂ ಸಾಮಾನ್ಯ. ಇಂತಹ ತುಲನೆಗಳ ಫಲವಾಗಿ ಚಂದ್ರನೂ ಹಾಲಿನ ಕಡಲಿನಿಂದಲೇ ಹುಟ್ಟಿದನೆಂಬ ಭಾವನೆ ಮೂಡಿದೆ. ಹಾಲಿನ ಕಡಲಿನಿಂದಲೇ ಹಾಲಿನ‌ ಮೈ ಬಣ್ಣದ ಅಪ್ಸರೆಯರು, ಅಚ್ಛ ಬಿಳಿಯ ಬಣ್ಣದ ಐರಾವತ  ಹುಟ್ಟಿ ಬರುವುದು ಆ ಕಾಲದ ಕಿನ್ನರ ಕತೆಗಳ ಕಲ್ಪನೆಗಳೇ. ಇಂತಹ ಅನೇಕ ಆದಿಮ ಬುಡಕಟ್ಟು ಜನರ ಸರಳ ನಂಬಿಕೆ , ಕಲ್ಪನೆಗಳನ್ನು ಪೋಣಿಸಿ  ಸಮುದ್ರ ಮಂಥನದ ಕಲ್ಪನೆಗಳ ಸಮುಚ್ಚಯವನ್ನು ಪುರಾಣಗಳ ಕಾಲದಲ್ಲಿ ಹೆಣೆದಿರುವುದು ಕಾಣಬರುತ್ತದೆ. ಈ ಹೆಣಿಕೆಯ ಉದ್ದೇಶ ಕೂಡಾ ಈ ಕಲ್ಪನೆಗಳ ಒಡಲೊಳಗಿನಿಂದಲೇ ಸ್ಪಷ್ಟವಾಗುತ್ತದೆ.

ಈ ಪುರಾಣ ಕತೆಯಲ್ಲಿ ಕಣ್ಣಿಗೆ ಹೊಡೆಯುವಂತೆ ಎದ್ದು ಕಾಣುವ ಅಂಶಗಳಿವು:

ರಾಕ್ಷಸರು ತಮ್ಮ ದೈಹಿಕ‌ ಬಲದಿಂದ ದೇವತೆಗಳನ್ನು‌ ಸೋಲಿಸುತ್ತಿದ್ದರು; ಅವರನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಅಮೃತವನ್ನು ಪಡೆಯುವ ಯೋಚನೆ; ಹಾಲು ಕಡಲನ್ನು ಕಡೆಯುವ ಶಕ್ತಿಯೂ ಇಲ್ಲದೆ ರಾಕ್ಷಸರನ್ನು ಕಡೆತದಲ್ಲಿ ಒಳಗೊಳ್ಳುವ ಹಾಗೂ ಸರಿಪಾಲು ನೀಡುವ ಒಪ್ಪಂದ;
ತಮ್ಮ ಶ್ರಮಕ್ಕೆ ಪ್ರತಿಫಲವಾಗಿ ಮತ್ತು‌ ಆದ ಒಪ್ಪಂದದಂತೆ ಸರಿಪಾಲು ಪಡೆಯಬೇಕಾದ ರಾಕ್ಷಸರಿಗೆ ಲಕ್ಷ್ಮಿ ಮತ್ತಿತರ ಸಂಪತ್ತಿನ ವಂಚನೆ. ಮುಖ್ಯವಾಗಿ ಅಮೃತದಲ್ಲಿಯೂ ವಂಚನೆ; ಮೂಲ ಯೋಜನೆಯಿಂದ ಆರಂಭಿಸಿ ಎಲ್ಲ ಹಂತದಲ್ಲಿ ವಿಷ್ಣುವಿನ, ಅವನ ಅವತಾರಗಳ ಕುಯುಕ್ತಿಗಳ ಪ್ರಧಾನ‌ಪಾತ್ರ; ಅವನ ವಾಹನ ಗರುಡನೇ ಅಲ್ಲವೇ ಈ ಅಮೃತ ಕುಂಭವನ್ನು ಹಾರಿಸಿ ಮೋಹಿನಿಯ ಕೈಗಿತ್ತದ್ದು. ಈ ಅನ್ಯಾಯ, ವಂಚನೆಗಳ ಬಗ್ಗೆ ಯಾವ ಅಳುಕೂ ಇಲ್ಲದೆ, ವಿಷ್ಣುವಿನ ಹೆಗ್ಗಳಿಕೆ ಎಂದು ಬಣ್ಣಿಸಿದ ವಿಷ್ಣು ಪುರಾಣ, ಭಾಗವತಗಳು. ಲಕ್ಷ್ಮಿ ಹುಟ್ಟಿದ ದಿನದ ಹಿಂದಿನ ದಿನ ನರಕ ಚತುರ್ದಶಿ, ಮರು ದಿನ ಬಲಿ ಪಾಡ್ಯಮಿ.

ಪಶುಪಾಲಕ ಸಮುದಾಯದ ಕೃಷ್ಣ ಮತ್ತು ಸತ್ಯಭಾಮೆಯರಿಂದ ಭೂಮಿಯ ಪುತ್ರ, ರಾಕ್ಷಸನೆಂದು ಬಿಂಬಿಸಲ್ಪಟ್ಟ ನರಕನ‌ ಸಂಹಾರ, ರಾಕ್ಷಸ ರಾಜನೆಂದು ಕರೆಯಲ್ಪಟ್ಟ, ಬೆಳೆಗಳ ಸಮೃದ್ಧಿಯನ್ನು ನೋಡಿ ಸಂತೋಷ ಪಡುವ ಬಲಿಯ ಪರಾಕ್ರಮಕ್ಕೆ ಅಂಜಿ  ಪಾತಾಳಕ್ಕೆ ತುಳಿಯುವ ಕಥಾನಕಗಳೂ ಇಂತಹ ವಂಚನೆಗಳ  ಬೇರೆ ಬೇರೆ ರೂಪಗಳಾಗಿವೆ .

ಇಂತಹ ಎಷ್ಟೊಂದು ಕತೆಗಳು ಹರಡಿವೆ ಪುರಾಣಗಳ ತುಂಬಾ. ಮಹಾಭಾರತದಲ್ಲಿಯಂತೂ ಕುತಂತ್ರಗಳ, ವಂಚನೆಗಳ ಸುಗ್ಗಿ. ಅದರಲ್ಲಿ ಬೇರೆಯ ಜನಾಂಗಕ್ಕೆ ಮಾಡುವ ವಂಚನೆಯಿರಲಿ ತಮ್ಮದೇ ದಾಯಾದಿಗಳಿಗೂ ವಂಚನೆ ಮಾಡುವುದೇ ಧರ್ಮ ಎಂಬುದನ್ನು ಸಮರ್ಥಿಸಲು ಗೀತೋಪದೇಶ.

ಅಧಿಕಾರಕ್ಕಾಗಿ ಬಡಿದಾಟ,ಆಕ್ರಮಣ,ಯುದ್ಧ, ಸಾಮೂಹಿಕ ಕೊಲೆಗಳು,ಅವುಗಳನ್ನು ಸಮರ್ಥಿಸುವುದಕ್ಕಾಗಿ ಬೇರೆ ಸಮುದಾಯ,ಜನಾಂಗಗಳ  ರಾಕ್ಷಸೀಕರಣ. ವಂಚನೆ, ಕುತಂತ್ರ,ಅನ್ಯಾಯಗಳೇ ಸರಿಯಾದ ಮಾರ್ಗ ಎಂಬ ಪ್ರತಿಪಾದನೆ .ಅದೇ ಕಟ್ಟಲೆ, ನಿಯಮಗಳಾಗಿ ರೂಪು ಪಡೆಯುವುದು.

ದೇವರು, ಅವತಾರ ಎಂಬ ರೂಪಗಳು, ದೇವಾಲಯ, ಆರಾಧನೆ,ಆಚರಣೆಗಳ ಮೂಲಕ ಧಾರ್ಮಿಕ  ರೂಪು ಪಡೆದು ವ್ಯಾಪಕ ಪ್ರಸರಣ.
ಜನ ಸಾಮಾನ್ಯರು ತಮ್ಮ ಜೀವನಾನುಭವದಿಂದ ಪಡೆದ- ನಾವು ಚೆನ್ನಾಗಿ ಬದುಕಬೇಕೆಂದರೆ ಬೇರೆಯವರೂ ಬದುಕಲು ಬಿಡಬೇಕು; ಪರಸ್ಪರ ಸಹಕರಿಸಬೇಕು; ಇದೇ ಮನುಷ್ಯತ್ವ ಎಂಬ ಅರಿವನ್ನು ಮಸಳಿಸಬೇಕು. ಹಸಿರ ಸಿರಿಯನ್ನು, ಜನರ  ಸಂತೋಷವನ್ನು  ಕಂಡು ಸಂಭ್ರಮ ಪಡುವ ಬಲಿಯ ನ್ಯಾಯವನ್ನು ಪಾತಾಳಕ್ಕೆ ತುಳಿಯಬೇಕು. ಅಧಿಕಾರದ ಕಿತ್ತಾಟದಲ್ಲಿ ಮಾಡುವ ಎಲ್ಲ ಕುತಂತ್ರಗಳೂ ಧರ್ಮ ಎಂದು ಸಾಮಾನ್ಯ ಜನರಲ್ಲಿ ಒಪ್ಪಿಗೆಯನ್ನು ಸೃಷ್ಟಿಸಬೇಕು ಎಂಬುದೇ ಸಮುದ್ರ ಮಂಥನ ಪುರಾಣದ ಗುರಿ. ವಿಷ್ಣು ನ್ಯಾಯವೇ ನ್ಯಾಯ ಎಂಬುದನ್ನು ಸ್ಥಾಪಿಸುವುದೇ ಗುರಿ. ಈ ಗುರಿ ಸಾಧನೆಯಲ್ಲಿ ಪೂರ್ಣ ಯಶಸ್ಸನ್ನು ಪಡೆಯಲಾಗದಿದ್ದರೂ ಇಂತಹವನ್ನು ಮೆಚ್ಚಿ ತಲೆದೂಗುವ, ಸಹಿಸಿಕೊಳ್ಳುವ ಮನಸ್ಸನ್ನಂತೂ ಸೃಷ್ಟಿಸಿದೆ ಎಂದು ಹೇಳಬಹುದಲ್ಲವೇ?

ಕೊರೊನಾ ಕಾಲದ ವಿಷ್ಣು ನ್ಯಾಯ
ಇಂತಹ ಸಮುದ್ರ ಮಥನ ಅಂದಿನಿಂದ ಇಂದಿನವರೆಗೆ ಸಾವಿರಾರು ವರ್ಷಗಳ ಕಾಲ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಒಟ್ಟಾಗಿ ಬದುಕುವ ಬಯಕೆಯಿಂದ ಹುಟ್ಟುವ ಸಾಮಾನ್ಯರ ನ್ಯಾಯದ ಹಂಬಲವನ್ನು ಮೂಲೆಗುಂಪು ಮಾಡಿ ಅಧಿಕಾರ ನ್ಯಾಯದ ಹೇರಿಕೆ ನಿರಂತರವಾಗಿ ಮುಂದುವರೆಯುತ್ತಲೇ ಇದೆ. ವಿಷ್ಣು ನ್ಯಾಯ ಭರತ ಖಂಡ, ಜಂಬೂದ್ವೀಪಗಳನ್ನು ಮಾತ್ರ ಅಲ್ಲದೆ ಇಡೀ ಮನುಷ್ಯ ಲೋಕವನ್ನು ಮೀರಿ, ಭೂ ವ್ಯೋಮ ಪಾತಾಳಗಳನ್ನೆಲ್ಲಾ ಆವರಿಸಿಕೊಂಡು ಕೇವಲ ಕಲ್ಪನೆಯಾಗಿದ್ದ ತ್ರಿವಿಕ್ರಮನ ಕಥಾನಕವನ್ನು ನಿಜವಾಗಿಸಿ ಬೃಹದಾಕಾರದ ತ್ರಿವಿಕ್ರಮನಾಗಿ ಬೆಳೆಯುತ್ತಲಿದೆ.

ಇಂದು ನಮ್ಮ ನಿಮ್ಮೆಲ್ಲರ ಹಲ ಹಲವು‌ ಸಂಕಟಗಳ ಮೂಲದಲ್ಲಿ  ಈ ವಿಷ್ಣು ನ್ಯಾಯದ ತ್ರಿವಿಕ್ರಮಾವತಾರದ ವಿವಿಧ ಅವತಾರಗಳನ್ನು ಕಾಣಬಹುದು. ನಮ್ಮನ್ನು ಇಂದು ಕಾಡುತ್ತಿರುವ ಮಹಾನ್ ಮರಣ ಭಯ ಕೊರೊನಾ ಅಥವಾ ಕೋವಿಡ್-19. ಇಡೀ ಮನುಷ್ಯ ಲೋಕ ಈ ತಕ್ಷಣದ ಮರಣ ಭಯದ ನಿವಾರಣೆಗೆ ಅಮೃತಕ್ಕಾಗಿ ಹುಡುಕಾಟ, ಪರದಾಟ ನಡೆಸಿದೆ. ವಿಜ್ಞಾನ ಸಮುದ್ರ ಮಂಥನ ನಡೆದು ಅಮೃತದ ತಾತ್ಕಾಲಿಕ ರೂಪಗಳಾಗಿ ಕೆಲ ‌ವ್ಯಾಕ್ಸೀನುಗಳು ಹೊರಬಂದಿವೆ. ಈ ಅಮೃತಗಳನ್ನು ಗರುಡ ಹಾರಿಸಿ  ವಿಷ್ಣುವಿನ  ಕೈಗಿತ್ತಿದ್ದಾನೆ. ವಿಷ್ಣು ನ್ಯಾಯ ಆರಂಭವಾಗಿದೆ. ಸುರರಿಗೊಂದು ನ್ಯಾಯ, ಸುರರಲ್ಲದವರಿಗೊಂದು ನ್ಯಾಯ, ಸುರೇಂದ್ರರಿಗೊಂದು, ನರೇದ್ರರಿಗೊಂದು ನ್ಯಾಯ.

‍ಲೇಖಕರು Avadhi

May 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: