ತುಣುಕು ರೊಟ್ಟಿ, ಮಡಿ-ಮೈಲಿಗೆ ಇತ್ಯಾದಿ…

ಮಾರುತಿ ದಾಸಣ್ಣವರ

ಮರೆತು ಹೋದ ಡೈರಿಯ ಪುಟಗಳು- 1

ನಾನಾಗ ಕನ್ನಡ ಸಾಲಿಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದೆ. ಅಂಡರ್ ವಿಯರ‍್ರುಗಳ, ಬನಿಯನ್ನುಗಳ ಆವಿಷ್ಕಾರವಾಗಿದ್ದರೂ ನಾವೆಲ್ಲಾ ಕೇವಲ ಅಂಗಿ ಮತ್ತು ಶಾಲೆಗೆ ಹೋಗುವ ಹಾಫ್ ಪ್ಯಾಂಟುಗಳನ್ನು ಮಾತ್ರವೇ ಧರಿಸುತ್ತಿದ್ದ ಹಳೆಯ ಶಿಲಾಯುಗವದು. ಸಿರಿವಂತರ ಮಕ್ಕಳು ಹಾಕಿಕೊಳ್ಳುತ್ತಿದ್ದರಾದರೂ ಅಂಗಿಯ ಮೇಲಂಗಿ, ಚೆಡ್ಡಿಯ ಮೇಲೆ ಚೆಡ್ಡಿಯನ್ನೇಕೆ ಹಾಕೋಬೇಕು ಎಂಬುದು ನನ್ನ ಮತ್ತು ನನ್ನಂಥವರ ಭಾರೀ ಸಮರ್ಥನೆಯಾಗಿತ್ತು ಅದಕ್ಕೆ.

ಇದ್ದಕ್ಕಿದ್ದಂತೆ ಒಂದು ದಿನ ‘ನಾಡ್ದು ಪ್ರವಾಸಕ್ಕ ಹೋಗೂದೈತಿ ಎಲ್ಲಾರೂ ನಿಮ್ಮನ್ಯಾಗ ಕೇಳಿ ನಾಕು ನಾಕು ರೂಪಾಯಿ ಇಸಗೊಂಡ ಬರ‍್ರಿ’ ಎಂದು ಅನೌನ್ಸು ಮಾಡುವುದರ ಮೂಲಕ, ನಾವಿಸರ‍್ರು ಪ್ರವಾಸಕ್ಕೆ ಹೋಗುವ ಖುಷಿಯನ್ನೂ ಅಂದುದಿನ ಅನ್ನವನ್ನು ಅಂದೇ ದುಡಿದು ತಿನ್ನುತ್ತಿದ್ದ ಅಪ್ಪ ಅವ್ವನನ್ನು ನಾಕು ರೂಪಾಯಿ ಹೇಗೆ ಕೇಳುವುದು ಎಂಬ ದಿಗಿಲನ್ನೂ ಏಕಕಾಲಕ್ಕೆ ಸೃಷ್ಟಿಸಿಬಿಟ್ಟರು.

ಆದರೂ ಅವ್ವ ಯಾರ ಹತ್ತಿರವೋ ಸಾಲ ಮಾಡಿ ನಾಲ್ಕು ರೂಪಾಯಿ ತಂದು ನನ್ನ ಕೈಗೆ ಕೊಟ್ಟಾಗ ನನಗೆ ಮುಗಿಲು ಮೂರೇ ಗೇಣು. ಅಂತೂ ಮರುದಿನ ನಮ್ಮ ಒಂದು ದಿನದ ಪ್ರವಾಸ ಹೊರಟಿತು ಅದೂ ಡೊಳ್ಯಾರ ಲಸುಮಣ್ಣನ ಎತ್ತಿನ ಗಾಡಿಯಲ್ಲಿ. ಎಲ್ಲ ಹುಡುಗ ಹುಡುಗಿಯರೂ ಓಡಿ ಹೋಗಿ ಸಂಭ್ರಮದಿಂದ ಆ ಎತ್ತಿನ ಗಾಡಿಯಲ್ಲಿ ಕುಳಿತೆವು. (ನಮ್ಮ ಶಾಲೆಯಲ್ಲಿದ್ದದ್ದೇ ಎಂಟ್ಹತ್ತು ಜನ ಹುಡುಗರು, ಮತ್ತು ನಾಲ್ಕೈದು ಜನ ಹುಡುಗಿಯರು). ಸ್ವಲ್ಪ ದೂರ ಕ್ರಮಿಸುತ್ತಲೇ ಗಾಡಿ ನಿಂತಿತು. ಅಲ್ಲಿ ಹರಿಯುತ್ತಿದ್ದ ಘಟಪ್ರಭೆಯನ್ನು ದಾಟಬೇಕಿತ್ತು. ಆಗ ಪಾಟೀಲ್ ಸರ‍್ರು ‘ಏ ಇಳರ‍್ಯೋ’ ಎಂದರು.

ನಾವೆಲ್ಲ ಚಂಗು ಚಂಗನೇ ಜಿಗಿದಿಳಿದು ಸಾಹಸ ಪ್ರದರ್ಶಿಸಿದೆವು. ಅವರು ಮತ್ತೆ ‘ಏ ಚೆಡ್ಡಿ ಕಳೀರೋ’ ಎಂದಾಗ ಮಾತ್ರ ಗಲಿಬಿಲಿಯಾಯ್ತು. ಆದರೂ ದೂಸರಾ ಮಾತಾಡದೇ ಚಡ್ಡಿ ತೆಗೆದು ಮೇಲಿನ ಅಂಗಿಯಿಂದಲೇ ಮಾನಾ ಮುಚ್ಚಿಕೊಳ್ಳುವ ಸಾಹಸ ಮಾಡತೊಡಗಿದೆವು. ಚಕ್ಕಡಿಯಲ್ಲೇ ಬಿಡಲಾಗಿದ್ದ ಹುಡುಗಿಯರು ಬೇರೆ ಕಿಸಕ್ ಕಿಸಕ್ ಎಂದು ನಗುತ್ತಿದ್ದುದು ನಮ್ಮ ಅಸಾಧ್ಯ ಅಭಿಮಾನವನ್ನು ಕೆಣ ಕೆಣಕಿ ಕೋಪ ತರಿಸುತ್ತಿತ್ತು. ಅಂತೂ ಹೊಳೆ ದಾಟಿಯಾದ ಮೇಲೆ ಕಂಕುಳೊಳಗಿಟ್ಟುಕೊಂಡಿದ್ದ ನಮ್ಮ ಚಡ್ಡಿಗಳನ್ನು ಬೇಗ ಏರಿಸಿಕೊಂಡು ಮತ್ತೆ ಚಂಗನೇ ಜಿಗಿ ಜಿಗಿದು ಹತ್ತಿ ಕುಳಿತು ಅದೆಲ್ಲವನ್ನೂ ಮರೆತೆವು.

ಸಮೀರವಾಡಿ ಸಕ್ಕರೆ ಕಾರ್ಖಾನೆಯನ್ನು ತಲುಪಿದಾಗ ಸುಮಾರು ೧೧.೦೦ ಗಂಟೆಯಾಗಿರಬಹುದು. ಅಲ್ಲಿದ್ದ ಹೊಗೆಯುಗುಳುವ ದೊಡ್ಡ ಕೊಳವೆ ಕಬ್ಬನ್ನು ಅರೆಯುತ್ತಿದ್ದ ದೊಡ್ಡ ದೊಡ್ಡ ಯಂತ್ರ, ಸಕ್ಕರೆ ಮಾಡುವ ರೀತಿ ಎಲ್ಲವುಗಳನ್ನು ನೋಡಿ ಬೆರಗಾದೆವು. ಎಲ್ಲಾ ಕಡೆ ಸುತ್ತಿ ಹೊರಗೆ ಬರುವ ಹೊತ್ತಿಗಾಗಲೇ ಮಧ್ಯಾಹ್ನ ೨.೦೦ ಗಂಟೆಯಾಗಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದ ಅನುಭವ ಆಗ ನಮಗಾಯ್ತು.

ಎಲ್ಲರೂ ಬೆಟ್ಟದ ಮೇಲಿರುವ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಅದರ ಅಂಗಳದ ಮರದ ನೆರಳಲ್ಲಿ ದುಂಡಾಗಿ ಕುಳಿತು ನಾವು ತಂದ ಬುತ್ತಿ ಬಿಚ್ಚಿದರೆ ಚಪಾತಿ, ಉದರಬ್ಯಾಳಿ, ಎಣ್ಣೆಗಾಯಿ, ಉಪ್ಪಿನಕಾಯಿ, ಮೊಸರು ಕಲಸಿದ ಅನ್ನ, ಚವಳಿಕಾಯಿ ಪಲ್ಯ ಹೀಗೇ ಹಲವಾರು ಭಕ್ಷ್ಯಗಳು ನಮ್ಮ ಹಸಿವನ್ನು ಇನ್ನೂ ಮಜವಾಗಿಸಿದವು. ತಮ್ಮ ತಮ್ಮ ಅಕ್ಕ ಪಕ್ಕ ಕೂತವರಿಗೆ ಚಟ್ನಿ, ಪಲ್ಯ, ಚಪಾತಿಗಳನ್ನು ಕೊಡುತ್ತ ತೆಗೆದುಕೊಳ್ಳುತ್ತ ಉಂಡ ಆ ಊಟ ಮತ್ತಷ್ಟು ರುಚಿಯಾಯ್ತು. ನಾನೂ ಕೂಡ ನನ್ನ ಬಳಿಯೇ ಕುಳಿತಿದ್ದ ಹಳಬರ ವಿಠ್ಠಲನಿಗೆ ರೊಟ್ಟಿ ಮತ್ತು ಉದರ ಬ್ಯಾಳಿ ಕೊಟ್ಟೆ. ಅವನೂ ನನಗೆ ಚಪಾತಿ ಬೆಂಡಿಕಾಯಿ ಪಲ್ಯ ಕೊಟ್ಟ. ಗಡದ್ದಾಗಿ ಊಟ ಮಾಡಿದೆವು.

ಆಮೇಲೆ ನಮ್ಮ ಪ್ರವಾಸ ಮಹಾಲಿಂಗಪುರದತ್ತ ಸಾಗಿತ್ತು. ಅಲ್ಲಿ ಪ್ರಸಿದ್ಧ ನಾಟಕ ಕಂಪನಿಯೊಂದು ‘ಶ್ರೀ ಮಹಾಲಿಂಗೇಶ್ವರ ಮಹಾತ್ಮೆ’ ಎಂಬ ನಾಟಕವನ್ನು ಸತತ ಮೂರು ತಿಂಗಳಿಂದ ಆಡುತ್ತಿತ್ತು. ಸುತ್ತಲ ಹಳ್ಳಿಗಳಿಂದ ಆ ನಾಟಕವನ್ನು ನೋಡಲು ಜನ ಗಾಡಿ ಕಟ್ಟಿಕೊಂಡು ಬರುತ್ತಿದ್ದರು. ಆ ನಾಟಕದಲ್ಲಿ ಬರುವ ಮಹಾಲಿಂಗೇಶ್ವರ ಸ್ವಾಮಿ ಮತ್ತವನ ಪವಾಡಗಳು, ಬಡವರ ಕುರಿತ ಅವನ ಕಾಳಜಿ ಕರುಣೆಗಳು ತುಂಬಾ ಇಷ್ಟವಾದವು. (ಆದರೆ ನಾಟಕ ನೋಡುವುದಕ್ಕೂ ಬಸ್ಸಿಗೆ ಟಿಕೇಟು ತಗೊಂಡ ಹಾಗೆ ಟಿಕೇಟು ತಗೋಬೇಕು ಎಂಬುದು ಮಾತ್ರ ತುಂಬಾ ವಿಚಿತ್ರವಾಗಿ ಕಂಡಿತು.)

ನಾಟಕದ ನಂತರ ಪೇಟೆಯಲ್ಲಿ ಸುತ್ತಾಡಿಸಲಾಯ್ತು. ಅಲ್ಲಿರುವ ದುಬಾರಿ ಆಟಿಕೆಗಳೂ ಪೆನ್ನು, ಪೆನ್ಸಿಲ್, ನೋಟ್ ಪುಸ್ತಕಗಳನ್ನೂ ಹಾಗೇ ಸುಮ್ಮನೇ ನೋಡಿದೆವು. ಆಮೇಲೆ ಹಿಂತಿರುಗಿ ಹೊರಟಿತು ನಮ್ಮ ಪ್ರವಾಸ. ಮತ್ತದೇ ಘಟಪ್ರಭೆಯನ್ನು ದಾಟುವ ಪ್ರಹಸನ. ಈ ಬಾರಿ ಅಂಥಾ ಗಲಿಬಿಲಿಯೇನೂ ಆಗಲಿಲ್ಲ. ಮನೆ ತಲುಪುವ ಹೊತ್ತಿಗೆ ರಾತ್ರಿ ೧೦.೦೦ ಗಂಟೆಯಾಗಿತ್ತು. ನಾನು ಆ ದೈತ್ಯರೂಪದ ಸಕ್ಕರೆ ಕಾರ್ಖಾನೆ, ಪಂಚಲಿಂಗೇಶ್ವರನ ಗುಡಿಯ ಮುಂದಿನ ತಂಪಾದ ನೆರಳು, ಆ ನೆರಳಲ್ಲಿ ಕುಳಿತು ಗೆಳೆಯರೊಂದಿಗೆ ಹಂಚಿಕೊಂಡು ಉಂಡ ಊಟ, ಮಹಾಲಿಂಗೇಶ್ವರನ ಆ ಪವಾಡಗಳನ್ನು ಕಣ್ತುಂಬಿಕೊಂಡು ಮಲಗಿದೆ.

*

ಬೆಳಗಿನ ಸವಿನಿದ್ದೆಯನ್ನು ಕೆಡಿಸುವ ಒಂದು ಸಣ್ಣ ಗಲಾಟೆ ಕೇಳಿ ಕಿರಿ ಕಿರಿಯಾಗಿ ಕಣ್ಣುಜ್ಜುತ್ತ ಅಲ್ಲೇ ಬಿದ್ದುಕೊಂಡು ಕೇಳಿಸಿಕೊಳ್ಳತೊಡಗಿದೆ. ‘ನೋಡು ಮುತ್ತವ್ವ ಯಾರು ಎಲ್ಲಿರಬೇಕು ಅಲ್ಲೇ ಇರಬೇಕು. ಒಂದು ಧರ್ಮ ಇಲ್ಲ ಒಂದ ಕರ್ಮ ಇಲ್ಲ. ಎಲ್ಲಾ ಏಕಲದಾಕಲ ಮಾಡಾಕ ಹೊಂಟೀರೇನು’ ಎನ್ನುತ್ತಿದ್ದಳು ಒಬ್ಬ ಹೆಂಗಸು. ಓಹ್ ಗೊತ್ತಾಯ್ತು ಅವಳು ಹಳಬರ ವಿಠ್ಠಲನ ಅವ್ವ. ಅದಕ್ಕೆ ಅಜ್ಜಿ ದೀನತೆಯಿಂದ ಹೇಳುತ್ತಿದ್ದಳು. ‘ಏನೋ ಹುಡಗೋರ ಬಿಡಯವ್ವಾ ತಪ್ಪ ಮಾಡ್ಯಾವು ಹೊಟ್ಯಾಗ ಹಾಕ್ಕೋ’ ಎಂದು. ಅದಕ್ಕವಳು ಇನ್ನೂ ಜೋರಾಗಿ ಬೈಯತೊಡಗಿದಾಗ ಅಜ್ಜಿಗೂ ರೇಗಿತು. ‘ಅಯ್ಯ ಸಣ್ಣ ಮಕ್ಕಳು ಕೊಟ್ಟರ ಏನು ತಪ್ಪಾತು? ನಾವೇನ ಅದರಾಗ ಇಸಾ ಹಾಕಿರಲಿಲ್ಲ ತಗೋರಿ’ ಎಂದಳು. ನನಗೆಲ್ಲ ಸ್ಪಷ್ಟವಾಗತೊಡಗಿತು.

ನಿನ್ನೆ ಪಂಚಲಿಂಗನ ಸನ್ನಿಧಾನದಲ್ಲಿ ಊಟ ಮಾಡುವಾಗ ನಾನು ವಿಠ್ಠಲನಿಗೆ ರೊಟ್ಟಿ ಮತ್ತು ಪಲ್ಯ ಕೊಟ್ಟಿದ್ದೇ ಈ ರಂಪಾಟಕ್ಕೆ ಕಾರಣವೆಂದು. ನಾವು ಕೀಳು ಜಾತಿಯವರು. ನಮ್ಮ ಮನೆಯಲ್ಲಿ ಮಾಡಿದ ಅಡುಗೆಯನ್ನು ಅವನಿಗೆ ಕೊಟ್ಟಿದ್ದೇ ಮಹಾ ಪಾತಕವಾಗಿತ್ತು. ಪಾಪ ಅದರಿಂದ ಅವರ ಧರ್ಮ ಭ್ರಷ್ಟವಾಗಿತ್ತು. ಆತ ಪಾಪ ಪ್ರವಾಸದ ಹುರುಪಿನಲ್ಲಿ ಈ ಊಟದ ವಿಷಯವನ್ನೂ ಹೇಳಿಬಿಟ್ಟಿದ್ದ. ಹೀಗೆಲ್ಲ ರಂಪವಾಗುತ್ತದೆಂದು ಗೊತ್ತಿದ್ದರೆ ಅವನಾದರೂ ಯಾಕೆ ಹೇಳುತ್ತಿದ್ದ ? ಅಲ್ಲಾ ಎಲ್ಲರೂ ಮಾಡಿದಂತೆ ನಾನೂ ಮಾಡಿದ್ದೆ. ಆದರೆ ನಾನು ಮಾಡಿದ್ದು ಮಾತ್ರ ಹೀಗೆ ಅಪರಾಧವೇಕಾಯ್ತು? ಎಂಬ ಪ್ರಶ್ನೆ ಬೆಳೆದು ದೊಡ್ಡದಾಗತೊಡಗಿತು.

ಆಕೆ ಹೋದ ಮೇಲೆ ಅಜ್ಜಿ ಖಂಡಿತವಾಗಿಯೂ ಸಿಂದಿ ಚಬಕಾ ತಗೊಂಡು ಇಕ್ಕರಿಸುತ್ತಾಳೆಂಬ ಭಯಕ್ಕೆ ಸಣ್ಣಗೇ ಕಂಪಿಸತೊಡಗಿದೆ. ಸಧ್ಯ ಹಾಗಾಗಲಿಲ್ಲ. ಅಜ್ಜಿ ಸುಮಾರು ಹೊತ್ತು ಏನೇನೋ ಗೊಣಗುತ್ತಲೇ ಇದ್ದಳು.; ‘ನಾವ ಮಾಡಿದ ಅಡಿಗಿ, ಅಡಿಗಿ ಅಲ್ಲೇನು? ಕೋಳಿ ತಂದು ಕೊಟ್ಟು ಆ ದೇಸಾಯಿ ನಮ್ಮ ಮನ್ಯಾಗ ಅಡಿಗಿ ಮಾಡಿಸಿಕೊಂಡ ಉಣ್ತಾನಲ್ಲ, ಆ ರಾಮತೀರ್ತ ಸ್ವಾಮಿ ಬಂದಾಗೆಲ್ಲ ಆ ನಮ್ಮ ಮನೀಗೂ ಬರ‍್ತಾನ, ಅವನೂ ಊಟಾ ಮಾಡ್ತಾನ. ಅವರಿಗಿಂತ ಹೆಚ್ಚಾತೇನ ಇಕೀ ಜಾತಿ? ಹೋಗ ಯವ್ವಾ ಹೋಗು’ ಹೀಗೇ ಏನೇನೋ.

ಆಗ ‘ಅವರೂ ನಮ್ಮ ಮನೆಯಲ್ಲಿ ಉಣ್ಣುತ್ತಾರೆ ನಿಜ, ಆದರೆ ಅವರು ರಾತ್ರಿ ಕತ್ತಲಲ್ಲಿ ಯಾರಿಗೂ ಕಾಣದಂತೆ ಬಂದು ತೀರಾ ಒಳಗೆ ಅಡಿಗೆ ಮಾಡುವ ಒಲೆಯ ಹತ್ತಿರ ಕೂತು ಉಂಡು, ಯಾರೂ ನೋಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಬುದಗ್ಗನೇ ಹೋಗಿಬಿಡುತ್ತಾರೆ. ಅದೇಕೆ ಹಾಗೆ ?’ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಬೆಳೆದು ದೊಡ್ಡದಾಗುತ್ತಿರುವಷ್ಟರಲ್ಲೇ ‘ಏ ಸಾಲಿಗಿ ಹೋಗೂದಿಲ್ಲೇನೋ’ ಎಂಬ ಅಜ್ಜಿಯ ಕೂಗಿಗೆ ಎಚ್ಚೆತ್ತವನಂತೆ ಎದ್ದು ಓಡಿ ಹೋದೆ.

‍ಲೇಖಕರು Admin

July 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: