‘ಗೇ’ಯ ಕವಿತೆಗಳು

ಪ್ರೇಮ್, ಬೆಂಗಳೂರು


ರಂಗೋಲಿ ಬಿಡಿಸಿದಂತೆ
ನನ್ನ ಎದೆಯಂಗಳದಲ್ಲಿ
ನೂರಾರು ಹುಡುಗರ ಹೆಜ್ಜೆಗುರುತುಗಳು
ಕೆಂಪು ಚಿತ್ತಾರದಂತೆ ಹೊಳೆಯುತ್ತಿರುವ
ಆ ಜೋಡಿ ಹೆಜ್ಜೆಗಳಿವೆಯಲ್ಲ
ಅವು ನಾನು ಕದ್ದು ಮುಚ್ಚಿ ಪ್ರೀತಿಸಿದ
ನನ್ನ ಮೊದಲ ಗೆಳೆಯನ ಪಾದಗಳ ಗುರುತು
ಅಳಿಸಿದರೆ ಅಳಿಯಲೊಪ್ಪದ ಗಾಯದಂತೆ
ಅದರಿಂದ ರಕ್ತ ಜಿನುಗುತ್ತಲೇ ಇರುತ್ತದೆ…


ಸಮುದ್ರ ಗಂಡು
ನದಿಗಳೆಲ್ಲ ಹೆಣ್ಣು
ಎನ್ನುವ ಮನುಷ್ಯರ ನಿಯಮ ಮೀರಿ
ಅಮಾಯಕ ಗಂಡು ನದಿಯೊಂದು
ಹರಿದು ಕಡಲು ಸೇರಿತು
ಇಲ್ಲ ಎನ್ನದೆ ಕಡಲು
ನದಿಯನ್ನು ತನ್ನ ಬಾಹುಗಳಲ್ಲಿ
ತುಂಬಿಕೊಂಡಿತು !


‘ಇಬ್ಬರು ಹುಡುಗರು
ಪರಸ್ಪರ ಪ್ರೀತಿಸುವುದೆಂದರೆ
ಹೂವು-ಹಣ್ಣು ಬಿಡದ ಮರವೊಂದರ
ಆಶ್ರಯ ಪಡೆದಂತೆ…’
ಹಿರಿಯರು ಬುದ್ಧಿ ಮಾತು ಹೇಳಿದರು
ಹೂವು-ಹಣ್ಣು ಬಿಡದಿದ್ದರೇನಾಯಿತು ?
ಮರದಡಿಯ ನೆರಳ ತಂಪಿನಲ್ಲೇ
ಆ ಹುಡುಗರು
ನೂರುವರ್ಷ ಬಾಳಿದರು !


ಇಬ್ಬರು ಹುಡುಗರ
ಮೊದಲ ಭೇಟಿಯಲ್ಲೆ ಪ್ರೀತಿ
ಸಂಭವಿಸಿ ಬಿಟ್ಟಿತು
ತೀರ್ಪು ಹೇಳುವ ನ್ಯಾಯಾಧೀಶರೇ
ಹುಡುಗರಿಬ್ಬರು ನಿರಪರಾಧಿಗಳು
ತಪ್ಪಾದ ನೆಲದಲ್ಲಿ ಪ್ರೀತಿ ಬಿತ್ತಿದ
ದೇವರನ್ನು ಶಿಕ್ಷಿಸಲು ನಿಮಗೆ ಸಾಧ್ಯವೇ ?
ಇಷ್ಟಕ್ಕೂ ಅದು ತಪ್ಪಾದ ನೆಲವೇ ಆಗಿದ್ದರೆ
ಅಲ್ಲಿ ಪ್ರೀತಿ
ಮೊಳಕೆ ಒಡೆದದ್ದಾದರೂ ಹೇಗೆ !?


ಜಗತ್ತಿನ ಎಲ್ಲ ಧರ್ಮಗಳು
ಒಂದಾಗಿ ಗೇ ಗಳ ವಿರುದ್ಧ
ತೀರ್ಪು ನೀಡಿವೆ !
ಆದರೂ ನಮಗೆ ಹೆಮ್ಮೆಯಿದೆ
ಕ್ರಿಸ್ತನ ಶಿಲುಬೆಗೇರಿಸಿದವರು
ಗೇ ಗಳಲ್ಲ
ಪ್ರವಾದಿಗೆ ಕಲ್ಲೆಸೆದವರು
ಗೇ ಗಳಲ್ಲ
ಬಸವಣ್ಣ, ಶರಣಾದಿಗಳ ಕೊಂದವರು
ಗೇ ಗಳಲ್ಲ !!
ಈ ಜಗತ್ತಿನ ಮಹಾತ್ಮರೆಲ್ಲರೂ
ಪ್ರೀತಿಸಿದ ಕಾರಣಕ್ಕೆ
ಶಿಕ್ಷಿಸಲ್ಪಟ್ಟರು ಎನ್ನುವ
ಕಹಿ ಸತ್ಯ ನಮಗೆ ನೆನಪಿದೆ !
ಪ್ರೀತಿಯನ್ನು ದ್ವೇಷದ ಮೂಲಕ
ಒರೆಸಿ ಹಾಕುವುದು ಸುಲಭವಿಲ್ಲ
ಎನ್ನುವುದೂ ನಮಗೆ ಗೊತ್ತಿದೆ !!


ಹುಡುಗನೊಬ್ಬ
ಹುಡುಗಿಯ ಇಷ್ಟಪಟ್ಟಾಗ
ಪ್ರೇಮ, ಒಲವು, ಇಷ್ಕ್ ಎಂದೆಲ್ಲ
ಬಣ್ಣಿಸಿದವರು
ಹುಡುಗನೊಬ್ಬ ಹುಡುಗನ
ಇಷ್ಟ ಪಟ್ಟಾಗ
ಸಲಿಂಗ ಕಾಮಿಯೆಂದು
ಒಂದೇ ಪದದಲ್ಲಿ ತೀರ್ಪು ಕೊಟ್ಟು
ಅವನ ಪ್ರೇಮ, ಒಲವು, ಇಷ್ಕ್
ಇತ್ಯಾದಿಗಳನ್ನು
ಕೊಂದು ಹಾಕಿದರು !!


ನನ್ನ ಮುಂದೆ
ಒಂದೊಂದೇ ಬಟ್ಟೆ ಕಳಚಿ
ಬೆತ್ತಲಾಗುತ್ತಿರುವ ನನ್ನ ಹುಡುಗನೇ…
ಜೊತೆಗೆ ಆ ನಿನ್ನ
ಮುಖವಾಡ, ನಕಲಿ ಹೆಸರುಗಳನ್ನೂ
ಕಳಚಿಟ್ಟರೆ
ನಿನ್ನ ನಗ್ನತೆ ಪೂರ್ಣತೆಯನ್ನು
ಪಡೆಯುತ್ತದೆ….
ನನ್ನ ನಿನ್ನ ಪ್ರೀತಿಗೆ
ಅರ್ಥ ಬರುತ್ತದೆ.. !


ಗುಲಾಬಿ ಗಿಡದ ಮುಳ್ಳುಗಳಂತೆ
ನನ್ನ ಹುಡುಗನ ಕುರುಚಲು ಗಡ್ಡ
ನನ್ನ ಕೆನ್ನೆಯನ್ನು ತರಚಿದೆ …
ಅವನ ಗುಲಾಬಿ ಮೊಗ್ಗಿನಂತಹ
ತುಟಿಯನ್ನು ತಲುಪಬೇಕಾದರೆ
ಈ ಮುಳ್ಳುಗಳನ್ನು ದಾಟಿಯೇ ಹೋಗಬೇಕು !


ಜಗತ್ತನ್ನು ಎದುರಿಸಲಾಗದೆ
ಆ ಸಾರ್ವಜನಿಕ ಶೌಚಾಲಯದ ಮರೆಯಲ್ಲಿ
ನಾವು ಜೊತೆಯಾದ ದಿನ

ಗೋಡೆಗಳ ಮೇಲೆ ಚಿತ್ರಿಸಲ್ಪಟ್ಟ
ಅಶ್ಲೀಲ ಸಂದೇಶಗಳು ,
ಬೆತ್ತಲೆ ಗೆರೆಗಳ ಜೊತೆ
ಗೀಚಲ್ಪಟ್ಟ ಅನಾಮಿಕ ದೂರವಾಣಿ ಸಂಖ್ಯೆಗಳು

ಗಬ್ ಎಂದು ರಾಚುತ್ತಿದ್ದ ಆ
ಮಲ ಮೂತ್ರಗಳ ದುರ್ವಾಸನೆಗಳ ನಡುವೆ
ಕತ್ತಲಿಗೆ ಬಿಟ್ಟ ಟಾರ್ಚ್ ಲೈಟುಗಳಂತಿದ್ದ
ಹಸಿದ ಕಣ್ಣುಗಳು
ನಮ್ಮನ್ನು ತಿಂದು ಹಾಕುವಂತೆ
ನೋಡುತ್ತಿರುವಾಗ

ಮೈಥುನದ ಮೂಲಕ
ನಾವು ಪರಸ್ಪರ ವಿಸರ್ಜಿಸಿದ್ದು
ಈ ಜಗತ್ತಿನ ಕುರಿತ ಅಸಹ್ಯವನ್ನೇ ಅಲ್ಲವೇ ?

ನಮ್ಮ ನಡುವೆ ಉಸಿರಾಡುತ್ತಿದ್ದ
ನವಜಾತ ಶಿಶುವಿನಂತಹ ಪ್ರೇಮವನ್ನು
ಉಸಿರುಗಟ್ಟಿಸಿ ಕೊಂದದ್ದು
ಆ ಶೌಚಾಲಯದಲ್ಲೇ ಅಲ್ಲವೇ ?

‍ಲೇಖಕರು Admin

July 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: