ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿರುವಿ ಬಿದ್ದ ಪುಟಗಳು

ಶ್ರೀವಿಭಾವನ

1
ಹಳೆಯದಾಗಿದೆ ಮತ್ತೊಂದು ಹೊಸ ಕ್ಯಾಲೆಂಡರ್
12 ಪುಟಗಳೂ ತಿರುವಿ ಬಿದ್ದಿವೆ.
2

ವರ್ಷದ ಮೊದಲ ದಿನ
12 ಪುಟಗಳನ್ನೂ ಮುದ್ದಿಸಿದ್ದೆ.
ದಿನ-ವಾರ-ತಿಂಗಳಿಗೊಂದಂತೆ
ಕನಸುಗಳನ್ನು ಜೋಡಿಸಿದ್ದೆ.
ನನಸಾಗಿರುವುದು ಒಂದಿಷ್ಟೆ
ಉಳಿದೆಲ್ಲವೂ ಈಗ ಕಾಲಗರ್ಭದ
ಅನಾಥ ಶಿಶುಗಳಷ್ಟೇ.

3

ಕಾಲಕ್ಕೀಗ ಬೆಳಕಿನ ವೇಗ
ರಾತ್ರಿ-ಹಗಲುಗಳ ನಡುವೆ
ಎಲ್ಲೋ ಕಳೆದುಹೋಗಿವೆ ಸಮಯ
ಕ್ಯಾಲೆಂಡರ್‍ನಲ್ಲಿ ಹಾಕಿದ ಗುರುತುಗಳಿಗಿಲ್ಲ
ಯಾವುದೇ ಜೀವದ ಹಂಗು
ಹಳೆ ಕ್ಯಾಲೆಂಡರ್‍ನ ಜತೆ
ಜೀವ ಪಡೆಯದೇ ಸಾವನ್ನಪ್ಪಿವೆ.
4

ಹೊಸ ಕ್ಯಾಲೆಂಡರ್ ತೂಗುಹಾಕಿದ್ದೇನೆ
ಮತ್ತೆ ಪೆನ್ಸಿಲ್ ಹಿಡಿದು ಗುರುತು ಹಾಕುವ ಕೆಲಸ
ಅವುಗಳ ಮೂಲಕ ಒಂದಿಷ್ಟು ಕನಸುಗಳು.
ಎಷ್ಟಕ್ಕೆ ಜೀವ ತುಂಬುವುದೋ ಗೊತ್ತಿಲ್ಲ.

‍ಲೇಖಕರು admin

2 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading