ಕಳೆದ ವರ್ಷ ಹೀಗಿತ್ತು..

ಕೆ ಪುಟ್ಟಸ್ವಾಮಿ

2016 ಮುಗಿಯಿತು.

ಗೋಡೆಯ ಮೇಲಿನ ಕ್ಯಾಲೆಂಡರ್ ಮತ್ತೊಮ್ಮೆ ಬದಲಾಯಿತು. 2017ಕ್ಕೆ ಸ್ವಾಗತ.

ಆದರೂ ಕೆಲವೊಮ್ಮೆ ದಿನಾಂಕವನ್ನು ಬರೆಯುವಾಗ ಮನಸ್ಸಿನಲ್ಲಿ ಇನ್ನೂ ಉಳಿದಿರುವ 2016 ಇಸವಿಯನ್ನೆ ಅಪ್ರಜ್ಞಾಪೂರ್ವಕವಾಗಿ ನಮೂದಿಸುವ ರೂಢಿ ಕೆಲಕಾಲ ಇರುತ್ತದೆ. ಅಂತೆಯೇ 2016ರ ಕೆಲವು ಭಾವತೀವ್ರದ ಕ್ಷಣಗಳು ಮನಸ್ಸಿನಲ್ಲಿ ಕೆಲ ಕಾಲ ಕಾಡುವುದು, ಕೆಲವು ನಮ್ಮ ಸ್ಮೃತಿಯ ಬಾಗವಾಗುವುದು, ಭಾವಭಿತ್ತಿಯಲ್ಲಿ ರಂಗುರಂಗಿನ ಚಿತ್ರ ಬಿಡಿಸುವುದು ನಡದೇ ತೀರುತ್ತದೆ. ವೈಯಕ್ತಿಕ ಮಟ್ಟದಲ್ಲಿ ಅಂಥ ಕೆಲವು ಕಾಡಿದ, ಮತ್ತೆ ಮತ್ತೆ ನೆನಪಿಸಿಕೊಂಡು ಪುಲಕಿತವಾಗುವ, ಸಂಗತಿ, ವಿದ್ಯಮಾನ ಮತ್ತು ಘಟನೆಗಳ ಪಟ್ಟಿ ಇಲ್ಲಿದೆ.

1. ರಿಯೋ ಒಲಿಂಪಿಕ್ ಕೂಟದಲ್ಲಿ ಪಿ ವಿ ಸಿಂಧು ನಡೆಸಿದ ಹೋರಾಟ ನನ್ನನ್ನು ಅತಿ ಹೆಚ್ಚು ಪುಲಕಗೊಳಿಸಿದ ಘಟನೆ. ನೀಳ ಕಾಯದ ಸಿಂಧು ಆರೋಗ್ಯವಂತ ದೇಹ ಮತ್ತು ಆರೋಗ್ಯಪೂರ್ಣ ವ್ಯಕ್ತಿತ್ವದ ಮಾದರಿ ಕ್ರೀಡಾಪಟುವಿನ ಪ್ರತಿನಿಧಿ ಆಕೆ. ಆಕೆಯ ಕೌಶಲ್ಯ, ಗೆಲ್ಲಬೇಕೆಂಬ ಛಲ ನೋಡುತ್ತಿದ್ದರೆ ನನಗೆ ಸಾಕರ್ ದೊರೆ ಪೆಲೆ, ಅಥ್ಲೆಟ್ ಎಮಿಲಿ ಜಟೋಪೆಕ್, ಜೆಸ್ಸಿ ಓವೆನ್ಸ್, ಮ್ಯರಾಥಾನ್ ಓಟಗಾರ ಇಥಿಯೋಪಿಯಾದ ಅಬಿಬೆ ಬಿಕಿಲ, ಕೀನ್ಯಾದ ಕಿಪ್ಚೋಗೆ ಕೀನೊ ಮತ್ತು ನಮ್ಮದೇ ಕಪಿಲ್ ದೇವ್ ನೆನಪಾದರು.
ಫೈನಲ್ ನಲ್ಲಿ ಚಿನ್ನ ಗೆಲ್ಲದೇ ಹೋದರು ಸಹ ಆಕೆ ನಮ್ಮ ಪಾಲಿಗೆ ಚಿನ್ನದ ಹುಡುಗಿಯೇ ಆಗಿ ಉಳಿದದ್ದು ತನ್ನ ಅಪೂರ್ವ ಪ್ರತಿಭೆಯಿಂದ. ಅಂಥ ಶಿಲ್ಪವನ್ನು ಕಡೆದ ಕೋಚ್ ಗೋಪಿ ಚಂದ್ಗೂ ನಮ್ಮ ನಮನ ಸಲ್ಲುತ್ತವೆ. ಹಾಗೆಯೇ ಸಾಕ್ಷಿ ಮಲಿಕ್ ಮತ್ತು ದೀಪಾ ಕರ್ಮಾಕರ್ ಅವರ ಸಾಧನೆ ಭಾರತದ ಹೆಣ್ಣುಮಕ್ಕಳು “ಮಹಿಳೆಯರ ಜಗತ್ತು ಮನೆಯಲ್ಲಲ್ಲವೇ?” “ ಹೆಣ್ಣು ಮನೆಯ ಸಂಸಾರ ನೋಡಿಕೊಳ್ಳಬೇಕು, ಗಂಡು ದುಡಿದು ಹಾಕಬೇಕು” ಎಂದು ಆಗಾಗ ಬಡಬಡಿಸುವ ಮೋಹನ್ ಭಾಗವತ್ ಮತ್ತವರ ಅನುಯಾಯಿ ಸಾಧು ಸಾಧ್ವಿಯರ ಮೂತಿಗೆ ಇಕ್ಕಿದ ಪ್ರಹಾರದಂತೆ ಕಂಡಿತು.

2. ಇದಂತೂ ಅನಿರೀಕ್ಷಿತವಾಗಿ ಅಪ್ಪಳಿಸಿದ ಬರಹ, ವಸ್ತು ಮತ್ತು ನಿರೂಪಣೆಯ ಸ್ಫೋಟ ನನ್ನ ಮನದಲ್ಲಿ ಇನ್ನೂ ರಿಂಗಣಿಸುತ್ತಿದೆ. ಇದುವರೆವಿಗೂ ಎಲ್ಲಿ ಅಡಗಿತ್ತು ಈ ಪ್ರತಿಭೆ? ಇದ್ದಕ್ಕಿದ್ದಂತೆ ಸ್ಫೋಟಿಸಿದ್ದು ಹೇಗೆ ಎನ್ನುವದರ ಬಗ್ಗೆ ಚಿಂತಿಸುವುದಕ್ಕೂ ಬಿಡದೆ ಪದಗಳು ಚಿತ್ರಗಳ ಪ್ರವಾಹವನ್ನೇ ನಮ್ಮ ಮೇಲೆ ಕವುಚಿಕೊಂಡವು.

ಎಚ್ ಆರ್ ಸುಜಾತ ಅವರು ಹಾಸನ ಮತ್ತು ಸಕಲೇಶಪುರ ನಡುವೆ ಇರುವ ಆಲ್ದೂರು ಪ್ರದೇಶದ ಜನಜೀವನದ ಒಂದು ಸೀಳುನೋಟವನ್ನು ವಿಶಿಷ್ಟ ಬಗೆಯಲ್ಲಿ ಕಟ್ಟಿಕೊಟ್ಟರು. ಕವನ ಬರೆಯುತ್ತ, ರಂಗಭೂಮಿಯಲ್ಲಿ ಪ್ರಯೋಗ ನಡೆಸುತ್ತ, ಸಂಗೀತ, ಗಾಯನದಲ್ಲಿ ತೊಡಗಿಸಿಕೊಂಡಿದ್ದ ಸುಜಾತಕ್ಕ (ವಯಸ್ಸಿನಲ್ಲಿ ಚಿಕ್ಕವರಾದರೂ ನಾವೊಂದಷ್ಟು ಜನ ಕರೆಯುವುದೇ ಹಾಗೆ} ಇದ್ದಕ್ಕಿದ್ದಂತೆ ಈಪಾಟಿ ಅಮರಿಕೊಳ್ಳುತ್ತಾರೆ ಎಂದು ನಾನಂತೂ ನಿರೀಕ್ಷಿಸಿರಲಿಲ್ಲ.

ಸಂಕಷ್ಟ ಪಡುವವರಿಗೆ ಸಹಾಯದ ಕೈಚಾಚುತ್ತಾ, ಎಲ್ಲರ ಕಷ್ಟವೂ ತನ್ನದೆನ್ನುಕೊಳ್ಳುತ್ತಾ, ಕೆಲವೊಮ್ಮೆ ಸಹಾನುಭೂತಿಯಿಂದ, ಹಲವೊಮ್ಮೆ ಅಧಿಕಾರವಾಣಿಯಿಂದ ಸಂತೈಸುತ್ತಾ, ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಸುಜಾತಕ್ಕರ ಆಸ್ಫೋಟ ನಿಜಕ್ಕೂ ವಿಸ್ಮಯ. ಅವರು ನಿರೂಪಿಸವ ಕಥಾನಕಗಳಲ್ಲಿ ಭಾಷೆ ಭಾರವಾದಂತೆ, ವಿವರಗಳು ಗಿಡುಕಿರಿದಂತೆ, ಉಪಮೆಗಳು ಉಕ್ಕಿ ಹರಿದಂತೆ ಕಂಡರೂ ಅಂಚಿಗೆ ಸರಿಸಲಾದ ಸಮಾಜ ಮತ್ತು ಅದರ ಪಾತ್ರಗಳ ಬಗ್ಗೆ ಅವರು ತೋರುವ ಕಾಳಜಿ ಮತ್ತು ಎತ್ತಿಹಿಡಿಯುವ ಮಾನವ ಘನತೆ, ಬದುಕೆಂಬ ಬದುಕಿನ ವೈಶಾಲ್ಯ ಮತ್ತು ವೈವಿಧ್ಯ ಮಗ್ಗಲುಗಳ ಅನಾವರಣ ಉಳಿದೆಲ್ಲವನ್ನೂ ಗೌಣವಾಗಿಸುತ್ತದೆ.

ಕಳೆದುಹೋಗುತ್ತಿರುವ ಗ್ರಾಮೀಣ ಬದುಕಿನ ಸೊಗಡನ್ನು ಅದರೆಲ್ಲ ಘಮಲಿನೊಂದಿಗೆ ಮೊಗೆಮೊಗೆದು ಉಣಿಸುತ್ತಿರುವ ಸುಜಾತಕ್ಕರಿಗೆ ನಮೋ ನಮ: ನಾನೀಗ ಅವರ ಅಭಿಮಾನಿ ( ಇನ್ನೊಮ್ಮೆ ವಿವರವಾಗಿ ಬರೆಯೋಣ)

3. ಈ ವರ್ಷ ವೈಯಕ್ತಿಕವಾಗಿ ನನಗಾದ ಲಾಭ ಮತ್ತು ಅನುಭವ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 2016ರ ಆವೃತ್ತಿಯಲ್ಲಿ ಪ್ರದರ್ಶನ ಕಾಣಬೇಕಾದ ಭಾರತೀಯ ಪನೋರಮ ವಿಭಾಗಕ್ಕೆ ಚಿತ್ರಗಳನ್ನು ಆಯ್ಕೆ ಮಾಡುವ ತೀರ್ಪುಗಾರ ಮಂಡಳಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಲು ಬಂದ ಆಹ್ವಾನ.

ದೆಹಲಿಯಲ್ಲಿ ಮೂತ್ತೊಂದು ದಿನ ಸತತವಾಗಿ ದಿನಕ್ಕೆ ಐದು- ಆರರಂತೆ 148 ಸಿನಿಮಾಗಳನ್ನು ವೀಕ್ಷಿಸಿ (ಅದರಲ್ಲಿ 18 ಎರಡನೇ ಬಾರಿಗೆ) 22 ಚಿತ್ರಗಳನ್ನು ಆರಿಸುವ ಶ್ರಮದ ಕಾಯಕ. ಆದರೆ ಭಾರತದ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಒಂದೇ ಅವಧಿಯಲ್ಲಿ ನೋಡುವ ಅಪೂರ್ವ ಅವಕಾಶವನ್ನು ನಾನು ಆನಂದದಿಂದಲೇ ಅನುಭವಿಸಿದೆ. ಕನ್ನಡದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಅಧ್ಯಕ್ಷರಾಗಿದ್ದ ತೀರ್ಪುಗಾರ ಮಂಡಳಿಯಲ್ಲಿ ಭಾರತದ ಬೇರೆ ಬೇರೆ ಪ್ರಾಂತ್ಯದ 12 ಸದಸ್ಯರಿದ್ದರು. ಅವರೆಲ್ಲರ ಜೊತೆ ಮಾಡಿದ ಚರ್ಚೆ ನೆನಪಿನಲ್ಲಿ ಉಳಿಯುವಂತಹುದು.

ಇದರ ಅಂಗವಾಗಿ ಗೋವಾ ಚಿತ್ರೋತ್ಸವದಲ್ಲಿ ಭಾರತದ ಪ್ರಸಿದ್ಧ ನಿರ್ದೇಶಕ, ತಂತ್ರಜ್ಞರಾದ ಗೌತಮ್ ಘೋಷ್, ಎ.ಕೆ.ಬೀರ್, ನಾನಾ ಪಾಟೇಕರ್, ಅಸ್ಸಾಮಿನ ಮಂಜು ಬೋರಾ, ತಮಿಳಿನ ಅಗಸ್ತಿಯನ್, ಮೊದಲಾದವರನ್ನು ಮಾತನಾಡಿಸುವ, ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ. ಅವರೆಲ್ಲರಿಗೂ ಕನ್ನಡ ಚಿತ್ರಗಳ ಬಗ್ಗೆ ಇದ್ದ ಪ್ರೇಮ ನನ್ನನ್ನು ದಂಗುಬಡಿಸಿದ್ದು ನಿಜ. ಗಿರೀಶ್ ಕಾಸರವಳ್ಳಿ, ನಾಗಾಭರಣ ಮತ್ತು ಕಾರ್ನಾಡರು ಆ ಸರ್ಕ್ಯೂಟ್ನಲ್ಲಿ ಜನಪ್ರಿಯರು. ಎಸ್ಪಿಬಿ, ಸುಹಾಸಿನಿ, ರಮೇಶ್ ಸಿಪ್ಪಿ, ಮೊದಲಾದ ಪ್ರಸಿದ್ಧ ಸಿನಿಮಾಮಂದಿಯನ್ನು ಹತ್ತಿರದಿಂದ ನೋಡುವ ಅವಕಾಶ ದೊರೆಯಿತು.

4. ವರ್ಷದ ಕೊನೆಯಲ್ಲಿ ನಾನು 9 ವರ್ಷ, 4 ತಿಂಗಳು ಮತ್ತು 14 ದಿನ ಸೇವೆ ಸಲ್ಲಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಗೊಂಡಾಗ ನಾನು ಕರ್ತವ್ಯ ನಿರ್ವಹಿಸಿದ ಸಾರ್ವಜನಿಕ ಸಂಪರ್ಕ ವಿಭಾಗದ ಸಿಬ್ಬಂದಿ ನೀಡಿದ ವಿದಾಯ ಬದುಕಿನುದ್ದಕ್ಕೂ ನೆನೆಸಿಕೊಳ್ಳುವಷ್ಟು ಹೃದಯಸ್ಪರ್ಶಿಯಾಗಿತ್ತು. ಈ ಸುದೀರ್ಘಾವಧಿಯಲ್ಲಿ ತವರಿಗೆ ಬಂದ ಹೆಣ್ಣು ಮಗಳನ್ನು ಕಕ್ಕುಲಾತಿಯಿಂದ ಸಲಹುವ ತಾಯಿ, ತಂದೆ ಸೋದರರಂತೆ ನನ್ನನ್ನು ಸಲಹಿ ಸಹಕಾರ ನೀಡಿದ ಅವರ ಅಪರೂಪದ ಪ್ರೀತಿ ಮತ್ತು ಕರ್ತವ್ಯಪ್ರಜ್ಞೆಯನ್ನು ನಾನೆಂದಿಗೂ ಮರೆಯಲಾರೆ.

ಸ್ಥಾನಬಲದಿಂದ ಗೌರವ ಗಳಿಸಬಹುದು, ಅಧಿಕಾರ ಬಲದಿಂದ ವಿಧೇಯತೆಯನ್ನು ಕಮ್ಯಾಂಡ್ ಮಾಡಬಹುದು, ಆದರೆ ನಾನು ಅವರಿಂದ ಪಡೆದದ್ದು ಪ್ರೀತಿ. ಅದು ಹೇಗೆ ದಕ್ಕಿತೋ ನನಗೆ ತಿಳಿಯದು. ನಿವೃತ್ತಿಗೆ ಇನ್ನು ಏಳು ತಿಂಗಳು ಸೇವೆ ಉಳಿದಿದ್ದರೂ ಈಗಲೇ ನನ್ನ ಸೇವೆ ಮತ್ತು ವಿದಾಯ ಮುಗಿಯಿತೆಂಬ ಭಾವ ನನ್ನನ್ನು ಆವರಿಸಿಕೊಂಡಿತು. ಹಾಗಾಗಿ ಹೊಸ ವರ್ಷ ನನಗೆ ಅಂತಹ ಖುಷಿಯ ವಿಚಾರವಾಗಲೇ ಇಲ್ಲ. ಈಗ ನಾನು ಅವರೆಲ್ಲರ ಅಭಿಮಾನಿ

‍ಲೇಖಕರು admin

January 2, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: