
…..
ಗಿರಿಜಾಶಾಸ್ತ್ರಿ / ಮುಂಬಯಿ.
“ಆತ್ಮಕ್ಕೆ ಯಾವ ಚರಿತ್ರೆಯನ್ನು ಬರೆಯುತ್ತೀರಿ?”
ನೀವು ಯಾಕೆ ಆತ್ಮ ಚರಿತ್ರೆಯನ್ನು ಬರೆಯಲಿಲ್ಲ ? ಎಂಬ ಪ್ರಶ್ನೆಗೆ ಮಂಗಳಮ್ಮ ಕೊಟ್ಟ ಉತ್ತರ ಇದು.
“ನಾ ತೊಟ್ಟ ದೇಹಗಳ ಲೆಕ್ಕ ಇಡುವವರ ಸೊಕ್ಕ ಯಮ ನೋಡಿ ನಕ್ಕ” (ಬೇಂದ್ರೆ) ಹಾಗೆ ಇತ್ತು ಅವರು ನನ್ನ ಪ್ರಶ್ನೆಗೆ ಕೊಟ್ಟ ಉತ್ತರ.
ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಸದ್ದಿಲ್ಲದೇ ಇಂದಿಗೂ ಕಾರ್ಯಪ್ರವೃತ್ತಾಗಿರುವ ಮಂಗಳಮ್ಮನವರ ಪರಿಚಯ ಹೆಚ್ಚಿನ ಮೈಸೂರಿಗರಿಗೇ ಇಲ್ಲ.
ಇದುವರೆಗೂ ಯಾವ ಸಾಹಿತಿಗಳಾಗಲೀ, ಮಹಿಳಾಪರ ಚಳವಳಿಗಳ ನೇತಾರರಾಗಲೀ ಅವರನ್ನು ಬಂದು ಭೇಟಿಮಾಡಿಲ್ಲ. ನನ್ನಣ್ಣ ಸೀತಾರಾಮನಿಗೆ ಮಾತ್ರ, ಇಂತಹ ಸದ್ದಿಲ್ಲದೇ ಸೇವಾನಿರತರಾದ ಕಾಡಮಲ್ಲಿಗೆಗಳ ಪರಿಮಳ ಹೇಗೋ ಮೂಗಿಗೆ ಹತ್ತಿಬಿಡುತ್ತದೆ. ಮಾರುಕಟ್ಟೆಯ ಮಲ್ಲಿಗೆಯನ್ನು ಪತ್ತೆಹಚ್ಚುವುದು ಸುಲಭ ಆದರೆ ಕಾಡಮಲ್ಲಿಗೆಗಳನ್ನಲ್ಲ. ಹೀಗೆ ಪತ್ತೆ ಹಚ್ಚುವುದಕ್ಕೆ ನಿಸ್ವಾರ್ಥವನ್ನು ಆತ್ಮಸಾತ್ ಮಾಡಿಕೊಂಡಿರಬೇಕು. ಅದರ ಅಭಿರುಚಿ ಇರಬೇಕು. ಆ ಮಲ್ಲಿಗೆಯ ಪರಿಮಳದ ಹಾದಿಯನ್ನು ಕಂಡುಹಿಡಿಯಬೇಕು, ಅವುಗಳ ಮಹತ್ವವನ್ನು ಅರಿತುಕೊಳ್ಳುವ ಕಣ್ಣುಗಳಿರಬೇಕು. ಸೀತಾರಾಮನ ಕಣ್ಣಿಗೆ ಇಂತಹ ಕಾಡುಮಲ್ಲಿಗೆಗಳು ಬಿದ್ದದ್ದೇ ತಡ “ಇಂಥವರನ್ನು ನೀನು ನೋಡಲೇಬೇಕು” ಎಂದು, ಯಾವಾಗಲೂ ಮಹಿಳಾಪರ ವಕಾಲತ್ತು ವಹಿಸುವ ಮುಂಬಯಿಯಲ್ಲಿರುವ ನನಗೆ ಬುಲಾವ್. ಹೀಗೆ ಅಣ್ಣನ ಈ ಕರೆಗೆ ಓಗೊಟ್ಟು ಮೈಸೂರಿಗೆ ಧಾವಿಸಿ ಸಂದರ್ಶಿಸಿದ ಪ್ರಾತಃಸ್ಮರಣೀಯರು ಎಷ್ಟೋ.
ಮಂಗಳಮ್ಮನವರನ್ನು ನೋಡಲೇಬೇಕೆಂದು ಸೀತಾರಾಮನಿಂದ ಹೀಗೆ ಒಮ್ಮೆ ಕರೆಬಂದಾಗ ವೃದ್ಧೆ ಅಮ್ಮನನ್ನು ನೋಡಲು ಬೆಂಗಳೂರಿಗೆ ಹೋಗಿದ್ದವಳು, “ಎರಡು ದಿವಸವೂ ಇರದೇ ಹೊರಟೇ ಬಿಟ್ಟೆಯಲ್ಲೇ” ಎಂದು ಅಮ್ಮನ ಅಲವರಿಕೆಗಳನ್ನೂ ಲೆಕ್ಕಿಸದೇ ಮೈಸೂರಿಗೆ ರೈಟ್ ಎಂದಿದ್ದೆ. ಕತೆಗಾರ್ತಿ ಉಭಯಭಾರತಿಯವರೂ ನನ್ನೊಂದಿಗೆ ಬಂದಿದ್ದರು. ಸೀತಾರಾಮನ ಮಾರ್ಗದರ್ಶನದಲ್ಲಿ ನಮ್ಮನ್ನು ನನ್ನ ತಮ್ಮ ನಟರಾಜ ತನ್ನ ಕಾರಿನಲ್ಲಿ ಕರೆದೊಯ್ದಿದ್ದ.
ನಮ್ಮ ಬರುವನ್ನೇ ಕಾಯುತ್ತಿದ್ದ ಹಾಗೆ ಮಂಗಳಮ್ಮನವರು ಯಾವುದೋ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ನಮ್ಮನ್ನು ಬರಮಾಡಿಕೊಂಡರು. ನೀಟಾಗಿ ಹಿಂದಕ್ಕೆ ಬಾಚಿದ ತಲೆ. ದಂತದ ಮೈಬಣ್ಣ, ಲಕ್ಷಣವಾದ ಮುಖ, ಎದ್ದುಕಾಣುವ ಕಿವಿಗಳು, ವಿಶಾಲ ಕಣ್ಣುಗಳು ಹಳದಿಬಣ್ಣದ ಸೀರೆಯುಟ್ಟು ಕುರ್ಚಿಯ ಮೇಲೆ ಶಿಸ್ತಾಗಿ ಕುಳಿತ ಇವರಿಗೆ ತೊಂಬತ್ತೆರೆಡು ವರುಷವೇ? ಎನ್ನುವ ವಿಸ್ಮಯದ ಜೊತೆಗೆ ಅವರ ಸರಳತೆ ನಮ್ಮೆಲ್ಲರ ಗಮನ ಸೆಳೆಯಿತು. ಅವರು ಎಷ್ಟು ಸರಳವೆಂದರೆ -ಹುಡುಕಿದರೂ ಅವರ ಮೈಮೇಲೆ ಗುಲಗಂಜಿ ತೂಕದಷ್ಟೂ ಚಿನ್ನ ಕಾಣದಿರುವುದು. ಉಭಯಭಾರತಿಯವರು ತಂದಿದ್ದ ಶಾಲನ್ನು ಹೊದೆಸಿ ಫಲಗಳನ್ನು ನೀಡಿದಾಗ, “ನನ್ನದೇನಿಲ್ಲಮ್ಮ ಎಲ್ಲ ಅವರ ಕೃಪೆ” ಎಂದು ರಾಮಕೃಷ್ಣ ಪರಹಂಸರ ಭಾವಚಿತ್ರದ ಪದತಲದಲ್ಲಿ ಅವುಗಳನ್ನು ಇರಿಸಿದರು.
1925 ರಲ್ಲಿ ಜನಿಸಿದ ಸಿ.ಎಸ್.ಮಂಗಳಮ್ಮ ಹಿಂದಿ ಭಾಷೆಯ ಪ್ರಚಾರಕ್ಕಾಗಿ ತಮ್ಮನ್ನು ತಾವು ಮುಡಿಪಾಗಿರಿಸಿಕೊಂಡವರು. ಜೈನರ ಹೆಣ್ಣು ಮಕ್ಕಳು ಇತರ ಹೆಣ್ಣುಮಕ್ಕಳಿಗಿಂತಲೂ ಹೆಚ್ಚು ನಿರ್ಬಂಧಿತರಾಗಿದ್ದರು. ಅವರನ್ನೂ ಸೇರಿಸಿದಂತೆ, ಮನೆಯಲ್ಲಿ ತಮಗೆ ಸಿಗುತ್ತಿದ್ದ ಮಿಗುಸಮಯವನ್ನು ಕಲಿಕೆಯಲ್ಲಿ ತೊಡಗಿಸುವ ಇಚ್ಛೆಯಿದ್ದ ಅನೇಕ ಯುವತಿಯರನ್ನು ಅವರನ್ನೆಲ್ಲಾ ತಮ್ಮ ಹಿಂದಿ ಪಾಠಗಳಿಂದ ಆಕರ್ಷಿಸಿ ಒಟ್ಟುಗೂಡಿಸಿದರು.
ನಡುಮನೆಯನ್ನೂ ದಾಟದ ಸಾವಿರಾರು ಮಹಿಳೆಯರನ್ನು ವಿದ್ಯಾವಂತರನ್ನಾಗಿ ಮಾಡುವುದರ ಮೂಲಕ ಅವರನ್ನು ಹೊಸ್ತಿಲಾಚೆಗೆ ಸೆಳೆತಂದರು. ಅವರಲ್ಲಿ ಅನೇಕರ ಜೀವನೋಪಾಯಕ್ಕೂ ಅನುಕೂಲ ಒದಗಿಸಿದರು. ನಾಲ್ಕುದಶಕಗಳ ಕಾಲ ಹೀಗೆ ಹಿಂದಿ ಪ್ರಚಾರ ಮಾಡುತ್ತಲೇ ತಾವೂ ಕೂಡ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ರಾಷ್ಟ್ರಭಾಷಾ ಪ್ರವೀಣ್ [ಎಂ.ಎ. (ಹಿಂದಿ) ಗೆ ಸಮಾನ) ಪರೀಕ್ಷೆಗೆ ಕುಳಿತು ಉತ್ತೀರ್ಣರಾದರು. ಹೆಚ್ಚಿನ ಹೆಣ್ಣುಮಕ್ಕಳು ಗೃಹ ಉದ್ಯೋಗಕ್ಕೇ ಮೀಸಲಾಗಿ ಕತ್ತಲ ಲೋಕದಲ್ಲಿ ಕಳೆದು ಹೋಗುತ್ತಿದ್ದ ಕಾಲದಲ್ಲಿ ಮಂಗಳಮ್ಮ ಸ್ನಾತಕೋತ್ತರ ಪದವೀಧರರಾದರು.
ಹಾಗೆಂದು ಅವರು ಗೃಹಕೃತ್ಯಗಳನ್ನೆಂದೂ ನಿರಾಕರಿಸಲಿಲ್ಲ. ಎಲ್ಲರ ಹಾಗೆ ಅಡುಗೆ. ಮಕ್ಕಳು, ಮನೆ, ಅತಿಥಿಗಳ ಸೇವೆ ಇವುಗಳು ಇದ್ದದ್ದೇ. ಜೊತೆಗೆ ಹಾಸಿಗೆ ಹತ್ತಿ ಮಲಗಿದ್ದ ಮಗಳ ಶುಶ್ರೂಷೆ. “ಬೆಳಗಿನ ನಾಲ್ಕುಗಂಟೆಗೆ ಎದ್ದು ಹತ್ತು ಗಂಟೆಗೆಲ್ಲ ಮನೆ ಕೆಲಸಗಳನ್ನು ಮುಗಿಸಿಕೊಂಡು ಪಾಠ ಹೇಳುತ್ತಿದ್ದೆ” ಎನ್ನುವ ಮಂಗಳಮ್ಮ ಯಾವುದೇ ಶುಲ್ಕವನ್ನು ಬೇಡುತ್ತಿರಲಿಲ್ಲ, ಅನುಕೂಲಸ್ಥರು ತಾವಾಗಿಯೆ ಕೊಟ್ಟರೆ ಉಂಟು ಇಲ್ಲದಿದ್ದರೆ ಪುಕ್ಕಟೆಯಾಗಿಯೇ ಶಿಕ್ಷಣನೀಡುತ್ತಿದ್ದರು.
ಹಿಂದಿ ಶಿಕ್ಷಣವೇ ಅಲ್ಲದೆ, ಅವರು ಹಚ್ಚಿಕೊಂಡ ಸಾಮಾಜಿಕ ಕಾರ್ಯಗಳೂ ಹಲವಿಧ. ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಪತಿಯನ್ನು ಸೇರಿಕೊಂಡ ಮಂಗಳಮ್ಮನವರ ಪಾಲಿಗೆ ಮುಂದೆ ಅದೇ ಮಂಡ್ಯ ಪಟ್ಟಣವೇ ಅವರ ಕಾರ್ಯಕ್ಷೇತ್ರವಾಯಿತು. ಮಂಡ್ಯದ ಆಸ್ಪತ್ರೆಯ ವಿಸಿಟರ್ಸ್ ಬೋರ್ಡ್ ಗೆ ಐದು ವರ್ಷಗಳ ಎರಡು ಅವಧಿಗೆ ಅವರು ಸದಸ್ಯೆಯಾಗಿ ದುಡಿದದ್ದಲ್ಲದೇ, ಎರಡು ಶಾಲೆಗಳ ಬೆಟರ್‍ಮೆಂಟ್ ಕಮಿಟಿಯಲ್ಲಿ, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿಯಾಗಿದ್ದರು. ತಮ್ಮ ಸಮಾಜ ಸೇವೆಗಾಗಿ ರೋಟರಿಯವರಿಂದ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು.
ಅಲ್ಲದೇ ಗಮಕ ವ್ಯಾಖ್ಯಾನ ಮತ್ತು ಉಪನ್ಯಾಸಗಳಲ್ಲೂ ಇವರದು ಎತ್ತಿದ ಕೈ. ನಾಲ್ವಡಿ ಕೃಷ್ಣರಾಜ ಒಡೆಯರು ಇವರಿಗೆ ಕುಮಾರಿ ಪೂಜೆಯನ್ನು ಮಾಡಿದಾಗ ಅಲ್ಲಿ ಪರಿಚಯವಾದ ಮಹಾರಾಣಿ ಪ್ರತಾಪರುದ್ರ ಕುಮಾರಿಯವರಿಂದಲೇ ತಮಗೆ ಧೈರ್ಯ ಎನ್ನುವುದು ರಕ್ತಗತವಾಯಿತೆಂದು ಹೇಳಿಕೊಳ್ಳುತ್ತಾರೆ. “ನಾನು ಯಾವತ್ತೂ ಜೋಲು ಮುಖ ಹಾಕಿಕೊಂಡವಳಲ್ಲ” ಎನ್ನುವ ಮಂಗಳಮ್ಮನರು, ಬೌದ್ಧಿಕ ಬೆಳವಣಿಗೆಯಲ್ಲಿ ಸವಾಲುಗಳನ್ನೆದುರಿಸುತ್ತಿರುವವರ ಪುನರ್ವಸತಿ ಮತ್ತು ಕ್ಷೇಮಾಭಿವೃದ್ಧಿಗಾಗಿ
ಸೇವೆ ಸಲ್ಲಿಸುತ್ತಿರುವ ಮೈಸೂರಿನ ಚೇತನಾ ಟ್ರಸ್ಟ್ ಸಂಸ್ಥೆಯವರು, ಶಸ್ತ್ರಚಿಕಿತ್ಸೆಗೆ ಒಳಗಾಗಹೊರಟವರಿಗೆ ಧೈರ್ಯ ತುಂಬಲು ತಮ್ಮನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿದ್ದುದಾಗಿ ಹೇಳುತ್ತಾರೆ. (ಡಾ. ಎಚ್. ಪಾಂಡುರಂಗ ವಿಠಲ ಅವರಿಗೆ ನೀಡಿದ ಸಂದರ್ಶನ) ಇತರರ ಕಷ್ಟಕ್ಕೆ ನೆರವಾಗಬೇಕು ಎಂದು ಅವರಿಗೆ ಯಾವಾಗಲೂ ಅನ್ನಿಸುತ್ತಿತ್ತೆಂದು ಹೇಳುತ್ತಾರೆ. ಆ ಸಂಸ್ಥೆಯಲ್ಲಿ ಕೆಲವು ವರ್ಷಗಳ ಕಾಲ ನಿಷ್ಕಾಮ ಸೇವೆಯನ್ನು ಸಲ್ಲಿಸಿದ ಶ್ರೇಯಸ್ಸು ಅವರದು.
ಇಡೀ ರಾಷ್ಟ್ರ ಸ್ವಾತಂತ್ರ್ಯ ಚಳವಳಿಯ ಹುರುಪಿನಲ್ಲಿದ್ದ ಕಾಲ. ಮಂಗಳಮ್ಮನವರ ‘ಹಿಂದಿ’ ಕಲಿಕೆಯ ಹಂಬಲದ ಹಿಂದೆ ರಾಷ್ಟ್ರದ ಏಕತೆಗೆ ಹೋರಾಡಬೇಕೆನ್ನುವ ಅಭೀಪ್ಸೆಯೇ ಇರಬೇಕು. ಅವರ ಬದುಕಿನ ಮೈಲಿಗಲ್ಲೆಂದರೆ 1942 ನೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ವಿಶೇಷ ಪ್ರಮಾಣ ಪತ್ರವನ್ನು ದೊರಕಿಸಿಕೊಂಡಿದ್ದು. ತಮ್ಮ ಹಿಂದಿ ಪ್ರಚಾರ ಸೇವೆಗೆ ಕೂಡ ಬಿ.ಡಿ. ಜತ್ತಿಯವರಿಂದ ‘ತಾಮ್ರಪತ್ರ ಪ್ರಶಸ್ತಿ’ ಯನ್ನು ಗಳಿಸಿಕೊಂಡ ಕೀರ್ತಿ ಅವರದು.
ಇಪ್ಪತ್ತನೇ ಶತಮಾನದ ಮೂರನೇ ದಶಕದಲ್ಲಿ ಹುಟ್ಟಿದ ಮಹಿಳೆಯೊಬ್ಬಳಿಗೆ ಇಷ್ಟೆಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸುಲಭವೇನಾಗಿರಲಿಲ್ಲ. “ಗಂಡಸರ ಜೊತೆ ಮಾತನಾಡುತ್ತಾಳೆ” ಎಂಬ ಕಟಕಿಗಳನ್ನೂ ಅವರು ಸಮಾಜದಿಂದ ಕೇಳಬೇಕಾಗಿತ್ತು. ಇಂತಹವುಗಳನ್ನು ಮೀರಿ ಅವರು ತಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಮುನ್ನಡೆದರು. ಇದಕ್ಕೆ ಅವರಿಗೆ ರಾಮಕೃಷ್ಣ ಪರಮಹಂಸರ ಜೀವನಗಾಥೆ ಮತ್ತು ವಿಚಾರಗಳೇ ದಾರಿ ದೀಪಗಳಾಗಿದ್ದವು. “ರಾಮಕೃಷ್ಣ ಪರಮಹಂಸರನ್ನೇ ಜನ ಹುಚ್ಚರೆಂದರು, ಆದರೂ ಅವರು ತಮ್ಮ ಕೆಲಸವನ್ನು ಬಿಟ್ಟರೆ?” ಎಂದು ಅವರು ಕೇಳುತ್ತಾರೆ.
ಮಂಗಳಮ್ಮನವರ ಸಹೋದರರಿಬ್ಬರೂ ರಾಮಕೃಷ್ಣಾಶ್ರಮಕ್ಕೆ ಸೇರಿದುದರಿಂದಾಗಿ, ಅದರ ಚಿಂತನೆಗಳು ಇವರ ಮೇಲೆ ಬಹಳ ಪ್ರಭಾವ ಬೀರಿದವು. ರಾಮಕೃಷ್ಣ ಪರಮಹಂಸರು ತಮ್ಮ ಜೀವನದ ಚಾಲನ ಶಕ್ತಿ ಎಂದು ಅನನ್ಯವಾಗಿ ನಂಬುವ ಹಾಗೆಯೆ ಬದುಕುವ ಮಂಗಳಮ್ಮನವರು ‘ಮಂಡ್ಯದಲ್ಲಿ ರಾಮಕೃಷ್ಣ್ರಭಾವಪ್ರಚಾರಕ್ಕಾಗಿ ಶ್ರಮಿಸಿದ ಪ್ರಥಮ ಮಹಿಳೆ’ ಎನ್ನುತ್ತಾರೆ, ಅವರ ‘ಚಿಂತನ ಧಾರೆ’ ಪುಸ್ತಕವನ್ನು ಪ್ರಕಟಿಸಿದ ಈಶ್ವರಿ ಪ್ರಕಾಶನದವರು.
ಮಂಗಳಮ್ಮನವರ ತಂದೆ ಸೀತಾರಾಮ ಶಾಸ್ತ್ರಿಗಳು ಮೈಸೂರಿನ ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಅರ್ಚಕರಾಗಿದ್ದ ಸಂದರ್ಭದಲ್ಲಿ ನಡೆದ ಅಪೂರ್ವ ಘಟನೆಯನ್ನು ಮಂಗಳಮ್ಮ ಹಂಚಿಕೊಳ್ಳುತ್ತಾರೆ. ಅವರ ತಂದೆಯವರು ಧ್ಯಾನಸ್ಥರಾಗಿ ಬೆಟ್ಟದ ಮೇಲಿನ ಒಂದು ಬಂಡೆಯ ಮೇಲೆ ಕುಳಿತಿದ್ದಾಗ ಒಬ್ಬ ಸನ್ಯಾಸಿ ಅವರ ಎದುರು ಬಂದು ನಿಂತನಂತೆ. ಆ ಸನ್ಯಾಸಿ ಬೇರೆ ಯಾರೂ ಆಗಿರದೇ ಮುಂದೆ ಧಾರ್ಮಿಕ ಕ್ರಾಂತಿಯನ್ನೇ ಎಸಗಿದ ಸ್ವಾಮಿ ವಿವೇಕಾನಂದರಾಗಿದ್ದರು ಎಂಬುದನ್ನು ಬಹಳ ಸಂಭ್ರಮದಿಂದ ಮಂಗಳಮ್ಮ ವಿವರಿಸುತ್ತಾರೆ. ಪರಿವ್ರಾಜಕರಾಗಿ ಬಂದಿದ್ದ ವಿವೇಕಾನಂದರು ಮಹಾರಾಜರ ಅತಿಥಿಗಳಾಗಿ ತಂಗಿದ್ದರು. ಮಹಾರಾಜರು ಅವರಿಗೆ ಒಂದು ಕುದುರೆ ಸಾರೋಟನ್ನೂ ಕೊಡಲು ಮುಂದಾಗಿದ್ದರು. ಅಲ್ಲದೆ ಬೆಂಗಳೂರಿನ ಬಳೆ ಪೇಟೆಯ ಯಾವುದೋ ಜಗುಲಿಯ ಮೇಲೆ ವಿವೇಕಾನಂದರು ಕುಳಿತಿದ್ದಾಗ ಶೆಟ್ಟರೊಬ್ಬರು ಅವರಿಗೆ ಆಹಾರವನ್ನು ನೀಡಿದರು. ಮುಂದೆ ವಿವೇಕಾನಂದರು ಪ್ರವರ್ಧಮಾನಕ್ಕೆ ಬಂದಾಗ ಅವರು ಕುಳಿತಿದ್ದ ಜಗಲಿಯ ಕಲ್ಲನ್ನು ರಾಮಕೃಷ್ಣಾಶ್ರಮದ ಮ್ಯೂಸಿಯಮ್‍ನಲ್ಲಿಡಲಾಯಿತು ಎಂಬ ಹತ್ತಾರು ಸ್ವಾರಸ್ಯಕರ ಘಟನೆಗಳು ಮಂಗಳಮ್ಮನವರ ನೆನಪಿನಿಂದ ಇಂದಿಗೂ ಮರೆಯಾಗಿಲ್ಲ.
ಮಂಗಳ ಚಿಂತನ :
“ಶುಭ್ರ ಆಕಾಶದಲ್ಲಿ ಆವಿಯಿಂದ ಮೋಡ ಕಟ್ಟುತ್ತದೆ. ಗಾಳಿ ಸೋಕಿದಾಗ ನೀರಿನ ಹನಿಯಾಗಿ , ಧಾರೆಯಾಗಿ ಭೂಮಿಯ ಮೇಲೆ ಬೀಳುತ್ತದೆ. ಮಳೆಯಾಗಿ ಬಿದ್ದ ಪ್ರತಿ ಹನಿಯೂ ಜಗತ್ತಿಗೆ ಹಿತವನ್ನುಂಟು ಮಾಡಿ , ಹರಿಯುತ್ತಾ ಸಮುದ್ರವನ್ನು ಸೇರುತ್ತದೆ. ಅಂತೆಯೇ ಮಾನವನ ಮನಸ್ಸಿನ ಭಾವನೆಗಳು ಹೆಪ್ಪುಗಟ್ಟಿ, ಚಿಂತನೆಯ ಹನಿ ಹನಿಯಾಗಿ ಹೊರಬಿದ್ದು ಜನಮನಕ್ಕೆ ತಂಪೆರೆದು ಅಂತರಾಳವನ್ನು ಸೇರುತ್ತದೆ. ಗುರಿ ಮುಟ್ಟುತ್ತದೆ”. (ಚಿಂತನ ಧಾರೆ ; ಮುನ್ನುಡಿ).
ಜನಮನಕ್ಕೆ ತಂಪೆರೆಯ ಬೇಕಾದರೆ ಲೇಖಕಿಯೊಬ್ಬಳ ಚಿಂತನೆಯ ಹನಿಮುತ್ತುಗಳು ಸಹೃದಯರ ಮನಮುಟ್ಟುವ ಅವಶ್ಯಕತೆ ಇರುತ್ತದೆ. ಅಂತಹ ಅಮೂಲ್ಯ ಚಿಂತನೆಗಳನ್ನು ಪ್ರಕಾಶಕ್ಕೆ ತಂದವರು ಮಂಗಳಮ್ಮನವರ ಆತ್ಮೀಯ ಶಿಷ್ಯರಾದ ಮಂಡ್ಯದ “ಕೊಳಲು” ಪತ್ರಿಕೆಯ ಡಿ.ಎನ್ ಶ್ರೀಪಾದು ಅವರು. “ಇದು ನನ್ನೊಬ್ಬಳ ಚಿಂತನೆಯಲ್ಲ ಮಾನವ ಸಹಜವಾದ ಚಿಂತನೆಗಳು. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಚಿಂತನಶೀಲರೇ ಅಲ್ಲವೇ ಎನ್ನುವ ಅವರ ವಿನಯ ದೊಡ್ಡದು. ಶುಭಾಶಯವನ್ನು ಕೋರುವುದರಿಂದ ಅದಕ್ಕೆ ಪಾತ್ರರ್ರಾಗುವವರಿಗೆ ಎಂತಹ ಆತ್ಮಸ್ಥೈರ್ಯವನ್ನು ಒದಗಿಸುತ್ತದೆ, ಹಳೆಯದು ಉದುರದೇ ಹೊಸತು ಚಿಗುರದು ಎಂಬುದು ನಿಜವಾದರೂ, ಕಾಲದ ನಿರಂತರತೆಯಲ್ಲಿ ಉದುರುವ ಚಿಗುರುವ ಎಲ್ಲದಕ್ಕೂ ಪರಂಪರೆಯೆಂಬ ಬೇರೊಂದು ಇದ್ದೇ ಇರುತ್ತದೆ” ಎಂಬ ಮಂಗಳಮ್ಮನವರ ಮಾತುಗಳು ಅವರ ಚಿಂತನೆಯ ಸ್ವೋಪಜ್ಞತೆಯ ಮೇಲೆ ಬೆಳಕು ಚೆಲ್ಲುತ್ತವೆ. ಮಂಗಳಮ್ಮನವರ ಪ್ರಕಾರ ಶುಚಿ ಎನ್ನುವುದು ಮನಸ್ಸಿಗೆ ಸಂಬಂಧಿಸಿದ್ದು. ಹೊರಗಿನ ಆವರಣಗಳ ಮೇಲಾಗಲೀ, ವ್ಯಕ್ತಿಗಳು ಮಾಡುವ ಕೆಲಸಗಳ ಮೇಲಾಗಲೀ ಅವು ಅವಲಂಬಿಸಿರುವುದಿಲ್ಲ.
ಮಂಗಳಮ್ಮನವರ ಪ್ರಕಾರ ತಪಸ್ಸೆಂದರೆ ಕೇವಲ ಕಣ್ಣುಮುಚ್ಚಿ ಒಂದೆಡೆ ಕುಳಿತುಕೊಳ್ಳುವುದಲ್ಲ. ಸಾಧನೆಯೇ ತಪಸ್ಸು. “ಮನುಷ್ಯ ತನ್ನ ಜೀವನದಲ್ಲಿ ಒಂದು ಉದ್ದೇಶವನ್ನಿಟ್ಟುಕೊಂಡು, ಆ ಕಾರ್ಯವನ್ನು ಸಾಧಿಸುವ ಸಲುವಾಗಿ ಎಷ್ಟೇ ಅಡೆತಡೆಗಳು ಬಂದರೂ ಎಲ್ಲವನ್ನೂ ಎದುರಿಸಿ ಗುರಿ ಮುಟ್ಟುವುದು. ಗುರಿಮುಟ್ಟಿದ ನಂತರ ಅಲ್ಲಿಗೆ ಆ ಸಾಧನೆ ನಿಲ್ಲುವುದಿಲ್ಲ. ಅದನ್ನು ಪ್ರಚುರ ಪಡಿಸಿ ಸಮಾಜಕ್ಕೆ ಒಂದು ರೀತಿಯ ಸಂಸ್ಕøತಿಯ ಕೊಡುಗೆಯಂತೆ ನೀಡುವುದು ಸಾಧನೆಯ ಫಲ….ಇನ್ನೊಬ್ಬರನ್ನು ತುಳಿದು ತಾನು ಮೇಲೇರುವುದು ಮಾನವೀಯತೆಯಲ್ಲ” ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಧೈರ್ಯ, ದಾನ, ದುಡಿಮೆಯ ಮಹತ್ವ, ಪರೋಪಕಾರ, ಸೇವಾ ಮನೋಭಾವ ಮುಂತಾದ ಮೌಲ್ಯಗಳ ಕುರಿತಾಗಿ ಬಹಳ ಇತ್ಯಾತ್ಮಕ ನಿಲುವನ್ನು ಹೊಂದಿರುವ ಅವರು, ಪ್ಲಾಸ್ಟಿಕ್ ಕಸಗಳು, ವಾಯು ಪ್ರದೂಷಣೆ, ನೀರಿನ ಕೊರತೆ ಮುಂತಾದ ಆಧುನಿಕ ಸಮಸ್ಯೆಗಳ ಕುರಿತ ನೂರಾರು ಚಿಂತನೆಯ ತುಣುಕುಗಳ ಮೇಲೂ ತಮ್ಮದೇ ಆದ ಒಳನೋಟಗಳನ್ನು ಹರಿಸುತ್ತಾರೆ. ಅವು ಮೇಲುನೋಟಕ್ಕೆ ಬಹಳ ಸರಳವಾಗಿ ಕಂಡರೂ ಅವುಗಳ ಒಡಲಲ್ಲಿ ಅಡಗಿರುವ ಅವರ ಪ್ರಗತಿಪರ ಧೋರಣೆಯನ್ನು ಯಾರಾದರೂ ಮೆಚ್ಚಲೇಬೇಕು. “ಕನಕದಾಸ, ಪುರಂದರ ದಾಸ, ಬಸವಣ್ಣ, ಕಬೀರ್, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಬಂಕಿಮ ಚಂದ್ರ, ರವೀಂದ್ರನಾಥ್ ಟ್ಯಾಗೋರ್, ಗಾಂಧಿ, ಮಹಾದೇವಿ ವರ್ಮಾ, ಮೊದಲಾದವರ ವಿಚಾರಗಳು, ಸಾಧಕರ ಸೂಕ್ತಿಗಳು ಗಾದೆ ಮಾತುಗಳು, ವಿವಿಧ ಭಾಷೆಯಲ್ಲಿನ ಜಾನಪದ ನಾಣ್ಣುಡಿಗಳು ಅವರ ಚಿಂತನೆಯ ಸ್ವರೂಪದ ಮೇಲೆ ಪ್ರಭಾವ ಬೀರಿವೆ. (ಡಾ. ಎಚ್ ಪಾಂಡುರಂಗ ವಿಠಲ)
ಆಧುನಿಕತೆಯನ್ನು ಆತುಕೊಂಡ ಮಂಗಳಮ್ಮ :
ಮೂಢನಂಬಿಕೆಗಳನ್ನು ಮಂಗಳಮ್ಮ ಎಂದೂ ಪ್ರೋತ್ಸಾಹಿಸಿಲ್ಲ. ಅವರದು ಅಪ್ಪಟ ಧನಾತ್ಮಕ ಚಿಂತನೆ. ಅದೇ ಅವರ ಎಣೆಯಿಲ್ಲದ ಹುರುಪಿನ, ಸೋಲಿಲ್ಲದ ಚೈತನ್ಯದ ಮೂಲ ಶಕ್ತಿ. ಇಂದಿಗೂ ಮಂಗಳಮ್ಮ ಕುರ್ಚಿಯಲ್ಲಿ ಯಾವುದೇ ಒರಗುದಿಂಬುಗಳ ಆಧಾರವಿಲ್ಲದೆ ನೆಟ್ಟಗೆ ಕೂರುತ್ತಾರೆ. ಈಗಲೂ ಓದು ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಂಗಳಮ್ಮನವರಿಗೆ ವಯಸ್ಸಾದವರನ್ನು ಕಾಡುವ ಯಾವುದೇ ಖಾಯಿಲೆಗಳಿಲ್ಲ. ಇದ್ದರೂ ಸೇವಾಕಾರ್ಯಗಳ ಮುಂದೆ ಅವು ಗೌಣ, ಅಥವಾ ಸೇವಾಕಾರ್ಯಗಳೇ ದೇಹದ ಉರವಣೆಗಳನ್ನು ಗೆಲ್ಲುತ್ತವೆ ಎಂಬ ನಂಬಿಕೆ. ಮಂಗಳಮ್ಮ ಎಷ್ಟು ಆಧುನಿಕರು ಎಂದರೆ ಕಂಪ್ಯೂಟರ್ ಮುಂದೆ ಕುಳಿತು ಇಮೇಲ್ ಪತ್ರಗಳನ್ನು ಓದುತ್ತಾರೆ. ಮಗ ನರಹರಿಯವರ ನೆರವನ್ನು ಪಡೆದು ಪತ್ರಗಳಿಗೆ ಉತ್ತರಿಸುತ್ತಾರೆ.
ವಿಶ್ವಪ್ರಿಯ ಸನ್ಯಾಸಿ;
ಸ್ವ್ವಾಮಿ ರಂಗನಾಥಾನಂದ, ಸ್ವಸ್ಥ ಬದುಕಿಗೆ ಭಗವದ್ಗೀತೆ ಮತ್ತು ಸಹಸ್ರಕಿರಣ, ನುಡಿ ನಮನ ಹಾಗು ತೋಚಿದ್ದು ಗೀಚಿದ್ದು, ಮಹಾಭಾರತ ಕಥಾಸಂಗ್ರಹ, ಸಂಕ್ಷಿಪ್ತ ರಾಮಾಯಣ, ಶಾರದಾ ದೇವಿಯವರ ಜೀವನ ಚರಿತ್ರೆ (ಸಾಂಗತ್ಯ), ಮರುಳು ಮುನಿಯನ ಕಗ್ಗಕ್ಕೆ ಬರೆದ ಸರಳ ವಿಶ್ಲೇಷಣೆ ಮುಂತಾದ ಕೃತಿಗಳನ್ನು ಪ್ರಕಟಿಸಿರುವುದೇ ಅಲ್ಲದೇ ಇನ್ನೂ ಅವರ ಇನ್ನೂ ಹಲವಾರು ಪುಸ್ತಕಗಳು ಈಗ ಬೆಳಕು ಕಾಣಲು ಕಾಯುತ್ತಿವೆ. ಇದರ ಜೊತೆಗೆ ಅನೇಕ ಲೇಖನಗಳು, ಕವನಗಳು ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ವಯಸ್ಸಾದ ಮೇಲೆ ಅನೇಕ ದೌರ್ಬಲ್ಯಗಳ ದಾಸರಾಗಿ ವಿಲಕ್ಷಣತೆಗೆ ಬಲಿಯಾಗುವವರೇ ಹೆಚ್ಚು. ಮಂಗಳಮ್ಮ ತಾವು ಸಣ್ಣ ವಯಸ್ಸಿನಿಂದಲೂ ಮೌಲ್ಯಾಧಾರಿತ ಬದುಕನ್ನು ಬದುಕಿದುದರಿಂದಲೋ ಏನೋ ವಯಸ್ಸಾದ ಮೇ¯ ಅವರ ಅಧ್ಯಯನದ ಚಟುವಟಿಕೆಗಳು ಇನ್ನೂ ಹೆಚ್ಚಾಗಿವೆ. ಹಾಗೆಂದೇ ಅವರು ನಂಬುತ್ತಾರೆ. ದೀರ್ಘಾಯುಷಿಗಳಾಗಿ ಬದುಕುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಬದಲಾಗಿ ಸಮಾಜಕ್ಕೆ ಎಷ್ಟು ಉಪಯೋಗಿಯಾಗಿ ಬದುಕುತ್ತೇವೆ ಎಂಬುದೇ ಮಹತ್ವದ ಸಂಗತಿ ಎಂದು ಅವರು ನುಡಿಯುತ್ತಾರೆ.
ಅನನ್ಯ ಚೈತನ್ಯ :
ನಮಗೆ ಕಾಫಿ ಮಾಡಿಕೊಡಲೆಂದು ಅಡುಗೆ ಮನೆಯ ಕಡೆ ನಡೆದರು. ಈ ವಯಸ್ಸಿನಲ್ಲಿ ಅವರಿಂದ ಕಾಫಿ ಮಾಡಿಸಿಕೊಂಡು ಕುಡಿಯುವುದು ಸಾಧುವಲ್ಲವೆಂದು ನಾನು ಅವರನ್ನು ತಡೆದೆ. ಆದರೆ ಅಷ್ಟರಲ್ಲೇ ಅವರು ದುಡು ದುಡು ನಡೆದು ಅಡುಗೆಯಮನೆ ಸೇರಿಯಾಗಿತ್ತು. ಅವರನ್ನು ಹಿಂಬಲಿಸಿ ನಾನೂ ಹೋದೆ. ಎಷ್ಟು ಸರಳ, ಸ್ವಚ್ಛ ಅಡುಗೆ ಮನೆ! ಅಲ್ಲಿಯೆ ದೇವರಿಗೊಂದು ಗೂಡು. ಆದರೆ ಅಲ್ಲಿ ಇರುವ ದೇವರುಗಳಾದರೂ ಯಾರು? ರಾಮಕೃಷ್ಣ ಪರಮಹಂಸ ಮತ್ತು ಶಾರದಾ ದೇವಿ ! ಎಣಿಸಿದಂತೆ ನಾಲ್ಕೇ ನಾಲ್ಕು ಭಾವಚಿತ್ರಗಳು ಎಲ್ಲವುಗಳ ತಲೆಯ ಮೆಲೊಂದೊಂದು ಪುಟ್ಟ ಹೂ. ಅವುಗಳನ್ನು ಬಿಟ್ಟರೆ ಬೇರೆ ಅಲಂಕಾರಗಳಿಲ್ಲ. ದೀಪ, ಧೂಪ, ನೈವೇದ್ಯಗಳ ಆಡಂಬರವಿಲ್ಲ. ಮಂಗಳಮ್ಮನವರ ಸರಳ ವ್ಯಕ್ತಿತ್ವದ ಪ್ರತೀಕಗಳಾಗಿ ಅವರ ದೇವರುಗಳು ಕಂಡವು.
“ನಿನ್ನಡೆಗೆ ಬರುವಾಗ ಸಿಂಗರದ ಹೊರೆಯೇಕೆ?”(ಕುವೆಂಪು) ಎಂಬುದಕ್ಕೆ ಸಾಕ್ಷಿಯಾಗಿ ಅವುಗಳು ಅಲ್ಲಿ ವಿರಾಜಮಾನವಾಗಿದ್ದವು. ಈ ‘ದೇವರುಗಳು’ ಸಾರಿದ ಮೌಲ್ಯಗಳನ್ನು ಆತ್ಮಸಾತ್ ಮಾಡಿಕೊಂಡಿರುವ ಮಂಗಳಮ್ಮನವರಿಗೆ ಯಾವುದೇ ರೀತಿಯ ಗೊಂದಲಗಳಿಲ್ಲ. ಇಂಥದ್ದು ತನಗೆ ಸಿಗಲಿಲ್ಲವಲ್ಲಾ ಎನ್ನುವ ಕೊರಗಾಗಲೀ, ಯಾವುದೇ ನಿರಾಶೆ, ಹತಾಶೆಗಳಾಗಲೀ ಇಲ್ಲ. ಸಂಪೂರ್ಣ ತೃಪ್ತಿಯ ಕಾಂತಿ, ಸ್ಥಿರವಾಗಿ ಕುಳಿತ 92 ವಸಂತಗಳನ್ನು ಕಳೆದ ಮಂಗಳಮ್ಮನವರ ಮುಖದ ಮೇಲೆ ಮಿನುಗುತ್ತಿತ್ತು. ಗೇಟಿನವರೆಗೂ ಬಂದು ನಮ್ಮನ್ನು ಬೀಳ್ಕೊಟ್ಟರು. ಹೊರಗೆ ನಿಂತು ಅವರು ಕೈಬೀಸುತ್ತಿದ್ದ ಚಿತ್ರವೇ ನನ್ನ ಕಣ್ಣಮುಂದಿದೆ. ಜೀವ ಅರ್ಥಪೂರ್ಣವಾಗಿ ಮಾಗುವುದೆಂದರೆ ಇದೇ ಏನೋ!






ಒಂದು ಸುಂದರ ಜೀವನಶೈಲಿಯ ಪರಿಚಯ. ಮನಸ್ಸು ಪ್ರಫುಲ್ಲಿತವಾಯ್ತು.
ನಿಮ್ಮ ಬರೆಹಗಳ ವೈಶಿಷ್ಟ್ಯ ನನಗ್ಯಾವತ್ತೂ ಇಷ್ಟ, ಗಿರಿಜಾ ಅವರೇ.
-ಅಹಲ್ಯಾ
Great personality….Saasira pranaamagalu…
You have With your inimitable style brought forth a hidden gem into public contious
dhanyavadagalu snehitare