ನೆರೆ ಮನೆ ಮುರುದು ಬಿದ್ದರೆ ಕರ ಕಟ್ಟಕೆ ಜಾಗಾತು..

ಹೊಟ್ಟುರಿಯೆಂಬ ಬೇಗೆ

ಮನೆ ರಿಪೇರಿ ಮಾಡುವಾಗ ಭಣಗುಡೊ ಸಿಮೆಂಟ್ ಕಟ್ಟಡದ ಮುಂದೆ ಒಂದು ಸಿಮೆಂಟ್ ಪಾತಿ ಮಾಡಿಸಿ, ಈ ಅಪಾರ್ಟ್ಮೆಂಟ್ ಬಾಲ್ಕನಿಗಳಿಗೂ ಒಂದು ನೆರಳು ಒದಗಿಸೊ ಕಲ್ಪನೆ ಬಂತು. ರಸ್ತೆಯಲ್ಲಿ ಅಡ್ಡಾಡೊ ದನಗಳು ತಿನ್ನದೆ ಇರೊ ಹೊಂಗೆ ಸಸಿ ಒಂದನ್ನ ಹಿಡಕಂಡು ಬಂದು ಸಮೃದ್ಧಿಯಾದ ಗೊಬ್ಬರ ನೀರು ಸುರುದು ನೆಟ್ಟಾಯ್ತು.

ಒಂದೇ ಕಡ್ಡಿ ಮೇಲೆ ಒಂಟಿಕಾಲ ತಪಸ್ವಿಯಂಗೆ ಅಲ್ಲಿ ನಿಂತುಕೊಂದು ಬೀಸು ಗಾಳಿ ಜೊತೇಲ್ಲಿ ಅದು ಬೀಗತಿತ್ತು. ಗಿಡದ ರೆಂಬೇ ಮೇಲೆ ಯಾವಾಗ ಬಂದು ವಸಂತ ಕಣ್ಣು ಇಕ್ಕುತ್ತಾನೋ? ಆ ಕಣ್ಣಲ್ಲಿ ಚಿಗುರಿನ ಹೊಂಗನಸನ್ನ ಒಡಿತ್ತಾನೋ? ಮರ ಅಂಬುವ ಕನಸನ್ನ ತಂದು ಬೇರೂರುಸ್ತಾನೋ? ಅನ್ನಕಂತ ದಿನಾ ಅಡ್ಡಾಡೋವಾಗ ಅದರ ಮೇಲೆ ಒಂದು ಕಣ್ಣಿಟ್ಟುಕೊಂಡೇ ಓಡಾಡತಿದ್ದೆ.

ಆದರೆ ಆಗಿದ್ದೆ ಬೇರೆ ಕಥೆ..

ನಾಕು ದಿನದಲ್ಲಿ ಯಾರೋ ಪರಮ ಪಾಪಿಗಳು ಚಾಕುನಲ್ಲಿ ಕತ್ತರಿಸಿಬಿಟ್ಟಿದ್ದರು. ಆ… ಚಾಕು, ಅಕ್ಕರೆಯಿಂದ ಗಿಡ ನೆಟ್ಟಂಥ ನಮ್ಮ ಹೊಟ್ಟೆಗೆ ಬಂದು ತಿವಿದಂಗಾಗಿತ್ತು . ಗಿಡ ನಾವು ಹನಿಸೋ ನೀರಿನ ತೇವಕ್ಕೆ ಮತ್ತೆ ಹಸುರಾಯ್ತು. ಅದನ್ನು ನೋಡಿ ನಾವು ಹೊಟ್ಟುರುಕೊಂಡ ಸಂಕಟಕ್ಕೆ ಮದ್ದರ್ದು ಹಚ್ಚೋ ಹಂಗೆ ನಮ್ಮ ತುಟಿ ಮೇಲೆ ನಗೆ ತುಳುಕುಸೇ ಬಿಡ್ತು. ಎಂಥ ಛಾತಿನಪ್ಪ ಭೂಮ್ತಾಯ್ಗೆ? ಕೇವಲ ನಾಕು ದಿಸದ ಹಿಂದೆ ನಿಂತಿದ್ದ ಒಣ ಕೊಂಬೆ ಅನ್ನೋದು, ನಾಕು ಎಲೆಯ ತಳಿರ ಹೆತ್ತು ಹೊರ ಹಾಕಿದ್ದೆಯ, “ಏ ಹುಲುಮನುಷರೇ…. ನೋಡ್ಕಳ್ಳಿ ನನ್ನ ತಾಕತ್ತಾ?” ಎಂದು ಜಾಬು ಕಟ್ಟಿದ್ದೆ ಊರಿನ ಭವಿಷ್ಯ ಹೇಳೊ ಕುಟುಮರೋನಂಗೆ, ಇದ್ದಕಿದ್ದಂಗೆ…ತಲೆಗೆ ಹಸಿರೆಲೆ ಪೇಟ ಸುತ್ತಕಂದು ನಿಂತಕಂಡಿತ್ತು.

“ಆಗತೈತೆ, ಆಗತೈತೆ, ಒಳ್ಳೆದಾಗತೈತೆ, ಬರೋ ಕಾಲದಲ್ಲಿ ಮಳೆ ಬೀಳೋ ಕಾಲ ಕಾಣತೈತೆ, ಕುಟು ಕುಟು ಕುಟು, ಕುಟಂ” ಅಂತ ಗಾಳೀಲಿ ತಲೆ ಅಲ್ಲಾಡುಸ್ಕಂತಾ, ಬುಡುಬುಡುಕೇಯ ಆಡಿಸಿ ನಿಂತು ನುಡದಂಗಾಯತು.

“ಹೊಟ್ಟೆ ಕಿಚ್ಚಿನ್ ಮುಕ್ಕನ್ನ ತಂದು” ಅಂತ ಅದನ್ನ ಕೂದಾಕಿದವನನ್ನ ಲೆಕ್ಕಕ್ಕೂ ತಗೊಳ್ಳದೆ ಅದರ ಜೀವ ಪುಲಗರೆಯದ ನೋಡಿದ್ದೆ ಅದು ಎಷ್ತು ವಿಸ್ತಾರಕ್ಕೆ ಹರಡಕಬಹುದು ಅನ್ನ ಅಂದಾಜು ನಮ್ಮತಲೇಲಿ ಒಂದು ಚಿತ್ರವ ತಂದಿಟ್ಟಿತ್ತು. ನಾಕೇ ದಿನ ನಮ್ಮ ಸಂಭ್ರಮ. “ಮನುಶ್ಯನಂಥ ಪಾಪಿ ಈ ಜಗತ್ತಲ್ಲಿ ಯಾರಾರಾ ಇದಾರ? ತಡಿ ಮಾಡತೀನಿ ನಿಂಗೆ, ನನ್ ಮುಂದೆ ತಲೆ ಎತ್ಕಂದು ನಿಂತ್ಕತೀಯಾ?” ಅಂತ ಗಿಡದ ಮುಂದೆ ಹಲ್ಲು ಮಸೆದಿದ್ದೆ, ಕೈಯಲ್ಲಿ ಕತ್ತಿ ಹಿಡದಿದ್ದೆ, ಮತ್ತೆ ಅದರ ತಲೆ ಕಡಿದು ಕೆಡವಿ ಜುಟ್ಟು ಹಿಡದಿದ್ದೆ, ಬೇರ ಬೆರೆಸ್ಗೇ ಹಿಡಿದು ಅಲುಗಾಡಿಸಿದ್ದಂಥ ಗುರುತು ಅದರ ಸೀಳಿದ ಮೈಯ್ಯಲ್ಲಿ, ಕಾಣುಸತಿತ್ತು. ನೋಡಿದ್ದೆಯ ನಮ್ಮ ಕರುಳು ಸುಟುಸುಟುನೆ ಸೀದಂಗಾಯತು. ಇದನ್ನ ಕಂಡವರೆಲ್ಲ ಮುಂದಿನ ಮಾವಿನ ಮರದ ಮನೆಯವರ ಮೇಲೆ ಅನುಮಾನ ಹೇಳುದ್ರು. ಇರಬಹುದು. ಇಲ್ಲದೆನೂ ಇರಬಹುದು. ನಿವೃತ್ತಿ ಆಗಿರೋ ವಿದ್ಯಾವಂತ ಹಿರೀಕರಿಂದ ಇದು ಸಾಧ್ಯನಾ? ಅಂದು, ಇದನ್ನ ಮನಸ್ಸು ತಳ್ಳಿ ಹಾಕತು.

ಏನಾದರಾಗಲಿ? ಮಳೆ ಹುಯ್ಯದು ಬುಟ್ರೂ, ಬಸವಣ್ಣನ ಪರವಾನಾರ ಮಾಡಿ, ಕತ್ತೆ ಮದ್ವೆನಾರ ಮಾಡಿ, ಮಳೆ ಕರೀದೆ ಬುಟ್ಟಾಬುಟ್ಟಾರಾ ನೆಲವ ಉತ್ತಿ ಬಿತ್ತೋ ನಮ್ಮ ಹಿರೀಕರು. ಹಂಗೆ, ಈ ಸಲ ಆ ಗಿಡದ ಅಕ್ಕನ್ನೋ ತಂಗಿನ್ನೋ ತಂದು ನೆಟ್ಟು, ಅದರ ಸುತ್ತ ಮುಳ್ಳು ಬೇಲಿ ಹಾಕದರೂ ಸರಿ, ಹಸಿರ ಬೇರೂರಿಸಿಬುಡಾನ ಅಂತ ಪಿಲಾನು ಹಾಕಿದ್ದೂ ಅಲ್ಲದೆಯ, ಆ ಗಿಡಕ್ಕೆ ತುರುಕೆ ಸೊಪ್ಪಿನ ಗಿಡ ತಂದು ಕಟ್ಟುದ್ರೆ ಹೆಂಗೆ? ಅಂತ ಒಂದು ಕಿತಾಪತಿ ಯೋಚನೆ ಅನ್ನದು ತಲೆಗೆ ಹೊಳಿತು. ಮೋಸಕ್ಕೆ ಮೋಸ…. ಒಳಗಿನ ಲೆಕ್ಕಾಚಾರ ಎಚ್ಚೆತ್ಕಂದಿತ್ತು. ತನ್ನನ್ನು ತಾನು ಉಳಿಸಿಕೊಳ್ಳ ಲೆಕ್ಕಾಚಾರ ಇದು. ಆದರೆ ತುರಿಕೆ ಸೊಪ್ಪಿನ ಗಿಡ ಈ ಕಾಂಕ್ರೀಟ್ ಜಗತ್ತಲ್ಲಿ ಸಿಗತ್ತಾ? ಅಂತ ಅತ್ತಲಾಗೆ ತಲೆ ವದರಿ ಸುಮ್ಮಗಾದ್ವಿ.

ಹಳ್ಳಿಲಿ ಒಂದು ಗಾದೆ ಈತೆ. “ನೆರೆ ಮನೆ ಮುರುದು ಬಿದ್ದರೆ ಕರ ಕಟ್ಟಕೆ ಜಾಗಾತು” ಅಂಥ! ಇಂಥದ್ದೆ ಹೊಟ್ಟುರಿ ಅಂಬ ದಾಯಾದಿ ಮನಸ್ಸನ್ನ ಕೆಡಸಿದ ಗುದ್ದಾಟ ಒಂದು ಶುರುವಾದ ಪ್ರಸಂಗ, ಊರ ಪುಟದಿಂದ ತಂತಾನೆ ಎದ್ದು ಬಂದು, ನೋಡಿ ಅಂತ ಮನಸಲ್ಲಿ ನಿಂತ್ಕಂತು.

ಒಂದು ಎಮ್ಮೆ. ಹೆಣ್ಣೊಳಿ ಸಾಲು. ಮನೆ ಕೊಟ್ಟಿಗೆ ತುಂಬ ಅದರ ಮಕ್ಕಳು ಮೊಂಮಕ್ಕಳು ಅನ್ನವು ತುಂಬಿ ತುಳುಕಾಡವು. ನಸುಬೆಳಕು ಅನ್ನಾದು ರಜವಾಗೋ ಹೊತ್ತಿಗೆ ಒಂದು ಹಸುರುಲ್ಲಿನ ಹೊರಲಾರದ ಹೊರೆಯ ಆಳು ಮಕ್ಕಳು ಮೆರವಣಿಗೆ ಮಾಡಕಂದು ಬತ್ತಿರರು. ಒಬ್ಬೊಬ್ಬರಾಗಿ ತಂದು ಹಾಕುದ ಹುಲ್ಲು ಹೊರೆ ಕೊಟ್ಟಿಗೆ ಗೋಡೆಗೆ ವರಕ್ಕಂದು ಸಾಲುಕ್ಕೆ ಕುಂತಿರವು. ಎಂಟತ್ತು ಮುದುಕ್ರು ಬಂದು ಮಾತಿಗೆ ಕೂತಂಗೆ ಅವು ಹಂಗೇ ಗೋಡೆಗೆ ಬೆನ್ನು ಕೊಟ್ಟಕಂಡಿರವು. ಮಳೆಗಾಲದಲ್ಲಿ ಅದು ಆಳಿಗೆ ದಿವಸದ ವರ್ತನೆ ಕೆಲಸ. ಒಣಹುಲ್ಲ ಬ್ಯಾಸಿಗೆ ದಿನಕ್ಕೆ ಅಂತ ಕೊಣಬೆಲಿ ಮುಚ್ಚಿಟ್ಕಂದಿರರು.

ಹಸುರು ಹುಲ್ಲು ಮುಗಿಯೋವರ್ಗೂ ಮೇದು ಈ ಎಮ್ಮೆಕರ, ಕಡಸು, ದೊಡ್ಡೆಮ್ಮೆ,ಸಣ್ಣೆಮ್ಮೆ, ಕೆಂಬ್ರಿ, ಬಿಳೆಮ್ಮೆ, ಕರೆಮ್ಮೆ ಅನ್ನವು ತೊನಿತಾ, ಮನೆ ತುಂಬ ಹಾಲಿನ ಚಟ್ಟಿಲಿ ಕೆನೆಗಟ್ಟಕಂದು ಕಾಯತಿರವು. ಕೋಳಿ ಎಸ್ರಿಂದ ಹಿಡದು ಎಲ್ಲದಕ್ಕೂ ಅಗ್ರಣ್ಣೆ ಮಾಡದು ಅಲ್ಲದೇಯ ಅಜ್ಜಮ್ಮನ ನೆತ್ತಿಗೆ ಹದ ಹಾಕೋವರಗೂವೆ, ಗಂಡನ ಮನಿಗೆ ಹೊರಟಿರೋ ಹೊಸಾ ಮೊದಲಗಿತ್ತೀರು ತವರ ಬಣ್ಣ ಉಟ್ಟಕಂದು ಅಣ್ಣತಮ್ಮದೀರ ಮನಿಗೆ ಹೇಳೋಗೋಕೆ ಅಂತ ಬಂದು, ಕುಂತ್ಕಂದು ಮಡ್ಲಕ್ಕಿ ಹುಯ್ಸಕಳರು. ಅಂಗೆ ಬರೋರ ನೆತ್ತಿಗೂವೆ ಸೈತಾ ತಗ, ಅವ್ವ ಮಜ್ಜಿಗೆ ಮಡಕೆಗೆ ಕೈಹಾಕಿದ್ದೆಯ ಬೆಣ್ಣೆ ಮುದ್ದೆಯ ಮುರಿತಿರದು. ತಲೆ ತಂಪಾಗಿರಲಿ ಅನ್ನಕಂದು, ಉಂಡೊಟ್ಟೆ ತಣ್ಣಗಿರಲಿ ಅನ್ನಕಂದು ಎಮ್ಮೆಗಳು ಈ ಥರಕ್ಕೆ ಮನೆನೆಯ ಕರಾವಲ್ಲಿ ಮೀಸಬುಡವು.
ಇಂಥ ಎಮ್ಮೆ ತಳಿ ಊರಲ್ಲಿ ಎಲ್ಲರ ಮನೇಲೂ ಇರವು. ದನಿನ ಜೊತೆಲಿ ಈ ಜಗತ್ತಿಗೂ ನನಗೂ ಸಂಬಂದಿಲ್ಲದಂಗೆ, ಎಮ್ಮೆ ಮೇಲೆ ಮಳೆ ಹೂದಂಗೆ, ಅವು ಮೇಯಕ್ಕೆ ಹೋಗೋವಾಗ ಕೊನೆ ಸಾಲಲ್ಲಿ ನಿಧಾನಕ್ಕೆ ಅಳ್ಳಾಡದಂಗೆ ಹೋಯ್ತಿರವು. ತಲೆ ಮೇಲೆ ತಲೆ ಬಿದ್ರೂ ಸರಿ, ದನಗಳ ಹಿಂದಲೇ ಉಳಕಂದು ಕಚ್ಚಾಟ ಕೊರೆದಾಟನೆಲ್ಲಾ ಬಿಟ್ಟು ನೀರಲ್ಲಿ ನಿರಾಳಾಗಿ ಈಜು ಬೀಳವು. ಇಂಥ ಎಮ್ಮೆ ತನ್ನ ಕರಾನಾ…. ಕರೆಯೋ ಲಯ ನೋಡಬೇಕು ನೀವು. ಆ………ಆ…….ಆ……..ಯ್ ಅನಕಂದಿದ್ದೆ ಗಾಳಿ ಹರದಷ್ಟು ಉದ್ದಕ್ಕೆ, ಲಯ ಕಿವಿಲಿ ಅಲೆಯೋ ಅಷ್ಟರಮಟ್ಟಿಗೆ ಅವು, ಕರಿತಾಲೆ ಇರವು. ಹಕ್ಕಿ ಸಾಲು ಎಷ್ಟುದ್ದ ಹಾರುತಾವೋ ಅಷ್ಟುದ್ದಾಲೂ…… ಆಂಯ್ಗರ್ಯಾವು. ಮೈಮೇಲೆ, ಕಿವಿ ಚೊಟ್ರೆ ವಳೀ….ಗೆ ಅಂಟ್ಕಂದಿರ ಉಣ್ಣೀ, ಹೇನು ಚಿಗಟನಾ… ಕಿವಿಯ ಗಾಳೀಲಿ ಅಗಲುಸಕೋಂಡು ಹೆಂಗೆ ತೆಗುಸ್ಕತಾವೆ ಅಂದ್ರೆ, ಆ ಚೆಂದವ ಹಸ್ರುಲ್ಲಿನ ಹಡ್ಲಲ್ಲಿ ನಿಂತಕಂದೆ ನೋಡಬೇಕು. ಹಂಗಿರುತ್ತೆ. ಮೈ ಮೇಲೆಲ್ಲಾ ಹಕ್ಕಿ ಸಾಲು ಕುಂತಿದ್ರೂ ಸೈತಾ ಝುಮ್ ಅನ್ನಕುಲ್ಲ ಅವು ಅಳ್ಳಾಡುಕೂ ಇಲ್ಲ.

ಹತ್ರಕ್ಕೆ ಬರೋ ಉಣ್ಣೆಗೊರವ ಕೊಕ್ಕಿನ ತುದಿಲಿ ಕುಕ್ಕೋ ಚಂದಕ್ಕೆ ನಚ್ಚಗೆ ಮೈಚಳಿ ಬುಟ್ಟು, ಅಂಗೇ, ಕಣ್ಣಮುಚ್ಚಿ ನಿಂತಿರತಾವೆ. ಈ ಉಣ್ಣೆಗೊರವ ಅನ್ನವು ಕತ್ತ ವಾಲುಸ್ಕಂದು, ದೊಂಬರಂಗೆ ಮಯ್ಯ ಮುರಕಂದು ಬಗ್ಗಿ ಎದ್ದು… ಇದರ ಮೈಮೇಲಿರೋ ಉಣ್ಣೇಯ ಕುಕ್ಕಿ ಕೊಕ್ಕಲ್ಲಿ ಬಕ್ಕಂದು ಚಕ್ಕನೆ ಬಾಯಗಾಕ್ಕಂತಿರತಾವೆ. ನಾಕಾರು ಹಕ್ಕಿ ಒಂದರ ಮೇಲೆ ಒಂದು ಬಿದ್ದು ಕಚ್ಚಾಡುತಿದ್ರೂವೆ, ಎಮ್ಮೆ ಕಡೆಗಣ್ಣಲ್ಲೂ ಅವನ್ನ ತಿರುಗಿ ನೋಡದಿಲ್ಲ! ಅಂಥ ದಿಮಾಕು. ವಚ್ಚಗೆ ಬಿಸಿಲಲ್ಲಿ ಮೈ ಹರವಕಂದು ಸಿರಿ ಬಂದೋರ ಮನೇ ಎಂಗುಸ್ರು ಮೈಯೊಡ್ಡಕಂದು ನಿಂತಿರಂಗೆ ಮೆಲುಕು ಹಾಕಂದು ನಿಂತಿರತಾವೆ. ಪಾಪಾ! ತಿಕದಲ್ಲಿ ನಾಕು ಸೊಟಗ ಬಾಡು ಇಲ್ಲದಿದ್ರೂ, ಹೊಟ್ಟೇ ಹೊರ್ಯಕೆ ಬಂದಿರೋ ಎಣ್ಣು ಹುಡ್ಲು ಕೈಲಿ ಎಣ್ಣೆ ಹಾಕಿ ಮೈ ತಿಕ್ಕುಸ್ಕತಾರಲ್ಲಾ…. ಹಂಗೆ, ಅವು ಕಣ್ಣ ಮುಚ್ಚಕಂದು, ಹಕ್ಕಿ ಮಾತಿಗೆ ಕಿವಿ ಮಾತ್ರ ಅಳ್ಳಾಡುಸ್ಕಂದು, ಗಾಳಿ ಸುಯ್ಲಿಗೆ ಮುಖವೊಡ್ಡಕಂದು ಷೋಕಿ ಮಾಡತಿರತಾವೆ.

ಕರ ಹಾಕದಾಗ, ಅದ್ರಿಗೆ ಬಂದಾಗ ಎಲ್ಲೋ ವಸಿ ಘಾಶಿಯಾಗಿ ಆಡತಾವೆ. ಆಗಾ…ಅವು ಯಮಧರ್ಮರಾಯನಂಗೆ ಕಣ್ಣ ಅಳ್ಳಸಿ ಬುಟ್ಟಕಂದು ನೋಡದರೆ … ಹೊಸಬರ ಎದೇಲಿ ಗಕ್ಕನೆ ಗಾಬರಿ ಹುಟ್ಟುಸ್ತವೆ ಅನ್ನೋದೊಂದ ಬುಟ್ರೆ, ವದಿಯಾದು, ಹಾಯದು ಕಡಿಮೆ. ಯಾರಾದರೂ ದಪ್ಪನೆ ಎಂಗುಸ್ರು ನಡಕಂದು ಬತ್ತಾ ಇದ್ರೆ, ಊರು “ನೋಡು, ನೋಡು, ಗಬ್ಬದೆಮ್ಮೆ ಬಂದಂಗೆ ಎಂಗೆ ಮೈ ಅಳ್ಳಾಡದಂಗೆ ಬತ್ತಾವಳೆ” ಅನಕಂದು ನಗಾಡದು. ಅವಳ ಕಿವಿಗೆ ಬೀಳದಂಗೆ ತನ್ನ ಕಿವಿಲೇ ಪಿಸಗುಟ್ಟಕಂದು ಬಾಯ ಊರಗಲ ಕಿಸಕಂದು ಅದದೇ ಬಿದ್ದು ಬಿದ್ದು ನಗಾಡುದ್ರೂವೆ… ಅವರ ಪಾಡಿಗೆ ಅವ್ರು ಅತ್ಲಾಗ ಸುಮ್ಮಗೆ ಹೋಗೋರು. ತಮ್ಮ ಅಳ್ಳಾಡದಿರ ಮೈ ಹೊತ್ತಕಂದು ನಡಿಯಾದೆ ಕಷ್ಟ, ಇನ್ನ… ಇಂಥ ಚಿಲ್ರೆ ಮಾತು ಬೇರೆ ಕೇಳಕಂದು ನಿಂತ್ಕಂದಾರಾ? ಮೈ ಭಾರ ನಿಲ್ಲಸಕಂದು. “ಮಾಡೋ ಕೆಲ್ಸ ಬುಟ್ಟು ಇವರ ಕುಟೆ ಕಣಿ ಕೇಳಕೆ ತಿಕ್ಕಲಾ?”

ಇಂಥ ಒಂದು ಚೆಂದೊಳ್ಳಿ ಕನ್ನಗಡಸು ಮಿರಮಿರನೆ ಕೆಂಪಗೆ ಬಿಸ್ಲಲ್ಲಿ ಮಿಂಚಿ ಮಿರುಗುಡುತಾ ತನ್ನ ಚೊಚ್ಚಲ ಕರವ ಮನೇಲೆ ಬುಟ್ಟು ಮೇಯಕ್ಕೆ ಅಂತ ಗದ್ದೆ ಬದಿನಲ್ಲಿ ಗೂಟ ಹುಯ್ಸಕಂಡಿತ್ತು. ಆವತ್ತು, ಅದರ ಚಂದವ ನೋಡನಾರದೆ ದಾಯಾದಿ ಒಬ್ರು ಅದರ ಕಾಲಿನ ಮಂಡಿಚಿಪ್ಪಿಗೆ ದಪ್ಪ ಸೌದೆ ತಗಂಡು ಬಾರುಸ್ತಿದ್ದರು. ಅದು ತನ್ನ ಆಪತ್ತಿಂದ ಪಾರಾಗಕ್ಕೆ ಅಂತ ಹಗ್ಗ ಹರುಕಂದು ಗದ್ದೆ ಗೆರೆ ದಾಟಿ ಹಾರಕ್ಕೆ ಹೋಯ್ತು. ಆದರೆ ಗಾಬರೀಲಿ ಕೆಳಗಿದ್ದ ದೊಡ್ಡ ಧರೆ ಹಾರಿದ್ದೆ ಗದ್ದೆ ಗೆರೆ ದಾಟಿದ್ದೆ ಏನಾಯ್ತು? ಕಾಲು ಮುರ್ಕಂದು ಕಿಸರಗಾಲ್ಲಲ್ಲಿ ಗದ್ದೆ ಕಾವಲಿಗೆ ಪಾಪಾ ಅದು! ಅಷ್ಟು ಎತ್ತರದಿಂದ ಕೆಳಕ್ ಬಿದ್ದೋಯ್ತು. ಎದ್ದೇಳನಾರದೆ ಒದ್ದಾಡಿ ಅಲ್ಲೇ ಬಿದ್ದುಕೊಂಡು ಆಂ……..ಯ್ ಅನ್ನ ಆರ್ತನಾದ ಮಾಡತಾ ತನ್ನವರ ಆಂಯ್…ಗರಿತಾ ಕರುಳು ಹರಿತಿತ್ತು.

ಇದರ ಆಪತ್ತಿನ ಅರಚಾಟ ಕೇಳದಂಥವನು, ಕೆಳೂಗೆ ಅಲ್ಲೆ ಗದ್ದೆ ತೋಡಲ್ಲಿ ಊರಿನ ಕಣ್ಣ ನೆಟ್ಟಕಂದು ನಳ್ಳಿ ಹಿಡಿತಿದ್ದ ಜವರ ಅನ್ನೋ ಆಳುಮಗ, ದೂರದಿಂದ ಇದನ್ನ ಕಂಡವನೆ “ದೊಡ್ಡೋರ ಮನೆ ದೊಡ್ಡ ಮನುಷ! ನೋಡ್ರಪ್ಪಾ..ನೋಡಿ. ಹೆಂಗೆ ಸಣ್ಣ ಕೆಲ್ಸ ಮಾಡಿ ಸಣ್ಣನಾಗೋದ” ಅಂತ ಊರಿನ ಕಿವಿಗೆ ಆ ಸುದ್ದಿ ತಂದು ಒಪ್ಪುಸ್ದ. ಯಾರೂ ಇಲ್ಲ ಅನ್ನಕಂದು ಎತ್ತರದಲ್ಲಿದ್ದಂಥ… ಹೊಟ್ಟೇಲಿ ಮೆಣಸಿನಕಾಯಿ ಕಿವುಚ್ಕಂದು ಬಂದಿದ್ದಂಥ ದೊಡ್ಡ ಮನುಷ, ಮಾಡೋ ಹಲ್ಕಾ ಕೆಲ್ಸ ಮಾಡಿದ್ದೆ ಸರಸರನೆ ಏನೂ ಆಗಿಲ್ಲದರಂಗೆ ಮಠತೋಪು ದಾಟಿದ್ದೆ ತನ್ನ ಎಮ್ಮೆ ದಂಡಿಗೆ ಹೋದ. “ಅವರ ಮನೇಲೂ ಬೇಕಾದಂಗೆ ಎಮ್ಮೆ ರಾಸು ಇದವೆ ಅಂತಲಾದರೂ ಕರುಣೆ ಬ್ಯಾಡವಾ?ಈ ಮನುಶಂಗೆ. ಮೂಕಪ್ರಾಣಿ ಏನ್ ಮಾಡಿತ್ತು ಹೇಳು? ನಮ್ಮ ಹೊಟ್ಟೆ ಕಿಚ್ಚಿಗೆ” ಅಂತ ಊರು ಬ್ಯಾಸರಪಟ್ಕಂದು, ಒದ್ದಾಡಿ, ಹಂಗೇ ಮಲಮಲನೆ ಮರಗುಬುಡತು.

ಅಲ್ಲಿಂದ ಮಹಾಭಾರತದ ಯುದ್ಧದಲ್ಲಿ ಬೆವರಿಳಿಸಿ ಚಿಪ್ಪು ಸೇರಕಂಡಿದ್ದಂಥ ಅಣ್ಣತಮ್ಮರ “ದಾಯಾದಿ ಜಗಳ” ಅನ್ನೋ ಆಡುಮಾತು ಮುಸುಕಿನ ಗುದ್ದಾಟದಲ್ಲಿ ಕರುಳ ಬಿಚ್ಚಕಂದು ಶುರುವಾತು. ಬಯಲಾಟದ ಕಥೆ ಹಿಂಗೆ ಅಣ್ಣತಮ್ಮರ ಮನೇಲಿ ಮತ್ತೆ ವೇಶ ತೊಟ್ಕಂದದ್ದೂ ಅಲ್ಲದೆ ಮರ್ತು ಹೋಗಿದ್ದ ಪದ ಹೇಳಕಂದು, ಗೆಜ್ಜೆ ಗಳಿಗೆ ಅಳಕಂದು ಕಾಲಿಗೆ ಕಟ್ಟಕಂದು “ತಾ ತಕ ಧಿಮಿ ತಾ” ಅಂತ ಹೆಜ್ಜೆ ಹಾಕಂದು, ಬಂದು ನಿಂತ್ಕಂತು. ಅಂಥ ಆಟದಲ್ಲಿ ಹೊಟ್ಟೆ ಕಿಚ್ಚಿನ ಮೊಟ್ಟೆಕೋಳಿ ಇಡೊ ಮೊಟ್ಟೆನ ತಮ್ಮ ಮನೆ ವಳಿಗೆ ಒಡಿದಿರಂಗೆ ಎಚ್ಚರದಲ್ಲಿ ಅವರ ಸರಿಸಮಕ್ಕೆ ಹೆಜ್ಜೆ ಹಾಕಂದು ಈ ಮನೆ ಮಕ್ಳುಮರಿ ಎಲ್ಲರೂ ಸಜ್ಜಾದ್ರು.

ಆದ್ರೆ…. ಮನುಷ್ಯರ ತಿಕ್ಕಲಿಗೆ ಬಿದುರು ಅಡ್ಡೆ ಮೇಲೆ ಹೊತ್ತು ತಂದಹಾಕುದ ಎಮ್ಮೆ ಕಾಲು ಮುರದು, ಅದರ ಕಾಲಿಗೆ ಕಟ್ಟಿನ ಪಟ್ಟು ಹಾಕ್ಸಿ ಸರಿ ಮಾಡುದ್ರೂ ಸೈತಾ, ಅದರ ಪಾಡು ಯಾರ್ಗೂ ಬೇಡಪ್ಪಾ ದೇವರೇ ಅನ್ನಂಗಾಗಿತ್ತು. ಪಾಪ! ಕೊನೆಗೆ ಕುಂಟೆಮ್ಮೆ ಅಂತ ಊರು ಹೆಸ್ರಿಡುತು. ಅದು ಕುಂಟ ಕಾಲನ್ನ ಎಳೀತಾ ಓಡಾಡತಿತ್ತು. ಕೊನೆಗೆ ಎಮ್ಮೆಗೆ ಕುಂಟು ಮಾಡಿದ ಆ ಮಹಾಷಯರೂ ಸೈತಾ ಕಾಲಲ್ಲಿ ಕಲ್ಲೊತ್ತು ಆಗಿತ್ತು ಅಂಥ, ಆ ಅಣಿ ಕೊಡೊ ನೋವಿಗೆ ಹಿಂಗಾಲ ನೆಲದ ಮೇಲೆ ಊರುದೇಯ ಮೆತ್ತಕೆ ಮುಂಗಾಲಲ್ಲಿ ಎಗ್ರಿ ಎಗ್ರಿ ನಡ್ಯೋರು. ಊರು ಅವ್ರಿಗೆ ಮೆತ್ತಗಾಲ ಅನ್ನೋ ಹೆಸರು ಕೊಡತು.

ಹಿಂಗಿರೋವಾಗ ಇನ್ನೊಂದು ಪ್ರಸಂಗ ಕೇವಲ ಎರಡು ವರುಶದಲ್ಲೆ ನಡದುಹೋತು. ಕಷ್ಟಪಟ್ಟು ಆಚೆ ಮನೆ ಅಣ್ಣನ ಮಕ್ಕಳು ಮಾಡಿದ್ದ ತೋಟ ಒಂದಿನ ಇದ್ದಕ್ಕಿದ್ದಂಗೆ ಉರಿತಾ ನಿಂತಿತ್ತು. ಎಲ್ಲರೂ ಸೇರಿ ಅದನ್ನ ಆರಿಸಿದ್ರು. ಸಧ್ಯ! ಬೇಲಿ ಕಡಿಂದ ಹಾಕಿದ್ದ ಸೀಮೆಣ್ಣೆ ಹತ್ಕಂಡು ಎರಡು ಮಾವಿನ ಮರ ಪೂರತಿ ಉರ್ದು ಕರಕಲಾಗಿ ಹೋಗಿದ್ವು. ಹತ್ತಾರು ಮರ ಸುಟ್ಟು ನಿಂತಿದ್ದರೂವೆ ಬಂದ ಮಳೆ ಹನಿಗೆ ಅವು ಎಂಗೋ ಜೀವ ಉಳುಸ್ಕಂಡ್ವು ಅನ್ನೋದು ಬೇರೆ ಮಾತು.

ತೋಟದ ತೇವ, ಬೆಳೆದ ಹಸುರುಲ್ಲು ಮರಗಳನ್ನ ಕಾಯಕಂದಿತ್ತು. “ಕೊಲ್ಲೋ ದೇವ್ರು ಎದ್ರುಗಿದ್ರೆ, ಬೆನ್ನಲ್ಲೇ ಕಾಯೋ ದೇವ್ರು ಹುಟ್ಟಿರ್ತನೆ ತಗ..” ಊರು ಅನ್ನೋದರ ಅನುಭವದ ಮಾತು ಆವತ್ತು ನಿಜವಾಗಿತ್ತು. “ಸಾವು ನೋವು ಮನುಷಂಗೆ ಬರದೆ ಮರಕ್ಕೆ ಬತ್ತಿತೀನೋ ಮಗಾ….” ಅನ್ನೋ ಹಿರೇರ ಮಾತು ಸುಳ್ಳಾಗಿತ್ತು. ಮನುಶನ್ನ ಹತ್ತಕಂದು ಹೆಣಕಂದಿರೋ ಗಿಡ ಮರ ಒಂದೇ ಅಲ್ಲ, ಯಾವುದುಕ್ಕೂವೆ ಇಂಥ ಆಪತ್ತು ತಪ್ಪಿದ್ದಲ್ಲ ಕನಪ್ಪಾ…. ಬಂದೇ ಬತ್ತದೆ ಅಂತ ಸಣ್ಣಗೌಡ್ರು ಮರ್ತು ಹೋಗಿದ್ದ ಸೀಮೆಣ್ಣೆ ಬಾಟಲಿ ಆವತ್ತು ಸತ್ಯ ಮಾಡಿ ಸಾಕ್ಷಿ ಹೇಳತು. ಯಾವುದೇ ಸಾಮಾನು ಅನ್ನದು ಊರಿನ ಕಣ್ತಪ್ಸಿ ಊರೊಳಿಕೆ ಬರಕ್ಕಂತೂ ಆಯ್ತಿರಲಿಲ್ಲ. ಊರ ಕಣ್ಣ ಅಳತೆ ಅನ್ನದು ಆ ಕಾಲದಲ್ಲಿ
ಆ ಥರಕ್ಕೆ…. ಕಾವಲಿರತಿತ್ತು.

ಹಿಂಗೆ ಹೊಟ್ಟುರಿ ಹತ್ತುಸ್ಕಂದಂಥ ಆ ಮನುಷ ನಮ್ಮ ಕರುಳಿನ ಸೆಳೆತದ ಒಳಗಿನೋರೇ ಆಗಿದ್ರು. ನಮ್ಮ ತಾಲೂಕಲ್ಲೇ ಅವರು, ಸ್ವತಂತ್ರ ಬರಕ್ಕೆ ಮುಂದಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜಲ್ಲಿ ಇಂಟರ್ ಮೀಡಿಯೇಟ್ ಪಾಸು ಮಾಡಿದ ಮೊದಲನೆರಾಗಿದ್ರು. ತಾನಾಗೆ ಹುಡುಕ್ಕೊಂಡು ಬಂದಂಥ ತಾಲೂಕು ಆಫೀಸಿನ ಕೆಲ್ಸವ ತಿರ್ಕೆ ಜಂಭ ಮಾಡಿ ಬಿಟ್ಟೋರಾಗಿದ್ರು. ಅವರ ಅಪ್ಪಾರು ಮಾಡಿದ ದೊಡ್ಡ ಆಸ್ತಿನ್ನ ಬೆಂಗಳೂರಲ್ಲಿ ವಿದ್ಯೆಗಿಂತ ಹೆಚ್ಚಾಗಿ ಕಲಿತು ಬಂದ ತಿರಿಕೆ ಷೋಕೀಲಿ ಕಳಿತಾ, ಕಳಿತಾ ಮನೆ ತುಂಬ ಇದ್ದ ಮಕ್ಕಳ ಹೊಣೆಗಾರಿಕೇನೂ ಹೆಂಡತಿಗೆ ಅತ್ಲಾಗೆ ವರಗ್ಸಿ ಈಗ ಮೆತ್ತಗಾಲು ಹಾಕಂದು ಹೆಂಡತಿ ಬೆಣ್ಣೆ ಮಾರಿ ತರೊ ಸಂತೆ ಸಾಮಾನಿನ ಕುಕ್ಕೇಲಿ ಬರೊ ಬೀಡಿ ಬೆಂಕಿಪಟ್ನಕ್ಕೆ ಕಾಯೋ ಅಂಥರಾಗಿದ್ರು.

ಹಿಂಗೆ ಅಪ್ಪನ ದುಡ್ಡಲ್ಲಿ ವಿದ್ಯಾಭ್ಯಾಸಕ್ಕೆ ಹೋದ ಅವರು ಬೆಂಗಳೂರು ಕಾಲೇಜು ಮೆಟ್ಲು ಹತ್ತಿ ಬಂದಿದ್ದು ಗೊತ್ತಾಗದೀರಂಗೆ ಮುಪ್ಪಿನಲ್ಲಿ ಬದಲಾಗಿ ಹೋಗಿದ್ರು. ಎಮ್ಮೆ ಕಾಯಕ್ಕೆ ಕೊನಿಗೆ ಅವರನ್ನ ಮನೇರು ಹಾಕಂಡಿದ್ರು. ಅದುಕ್ಕೆ ಅವರು ಕಲಿತಿರೋ ಅಕ್ಷರ ಏನೂ ಬೇಕಾಯ್ತಿರ್ಲಿಲ್ಲವಾ? ದನ ದಿಸಾಲೂ ಪಾಠ ಆಗಿದ್ವಾ? ಅವು ಪಾಡಿಗ ಅವು ತಲೆ ಬಕ್ಕಂದು ಮೇಯ್ತಿರವಾ? ಕೆಲ್ಸ ಇಲ್ದೆ ಇವರು ದನಿನ ಬಾರೆ ಮೇಲೆ ಸುಮ್ಮಗೆ ಕುಂತಿರರಾ?

ಆಗ…. ಇಂಥ ಚಾಂಡಾಳ ಯೋಚನೆ ಅವರ ತಲಿಗ ಬರದು. “ಕುಂತ್ಕಂಡು ಕುಂಡ ಏನ್ ಮಾಡಕೊಂಡ ಅಂದ್ರೆ ತೊರಡು ಕೆರಕಂದು ಹುಣ್ಣು ಮಾಡಕೊಂಡ” ಅನ್ನ ಊರು ಕಟ್ಟುದ ಗಾದೆ ನಿಜ ಆಗದು. ವೇದ ಬೇಕಾದ್ರೆ ಸುಳ್ಳು ಆಗಬೋದು. ಗಾದೆ…. ಒಂದೊಂದಪ, ತನ್ನ ಮನೆ ಚಾವಡೀಲಿ ಮಕ್ಕಳು ಓದೋವಾಗ, ಬಾಯ ಪಾಠ ತಪ್ಪುವಾಗ ಸರಿಪಡಿಸದಿಕ್ಕೆ ಅಂತ ಅವರು ಅಪೂಪರಕ್ಕೆ ಬಾಯ್ ಬುಡೊರು. ಆಗ ಅವರು ಕಾಲೇಜು ಮೆಟ್ಟಿಲು ಹತ್ತಿ ಬಂದಿರೋದು ಅಲ್ಲಿರ್ತಿದ್ದ ಊರಿಗೆ ನೆಪ್ಪಾಗಬುಡದು.

ಆಗ ಮರೆಯಾಗಿರ್ತಿದ್ದ ಅವರ ಇಂಗ್ಲೀಷ್ ಭಾಷೆ ಮರ್ಯಾದೆ ಕೋಡು ಇದ್ದಕಿದ್ದಂಗೆ ಅವರ ತಲೆ ಮೇಲೆ ಬಂದು ಕೂತಕಂದು ಊರಿಗೆ ಕಾಣುಸ್ಕಳದು. ಅವರ ಸಣ್ಣ ಬುದ್ಧಿ ಆ ಚಣಕ್ಕೆ ಜನರ ಕಣ್ಣಲ್ಲಿ ಮರೆ ಆಗೋಗಬುಡದು. ಅರ್ಥವಾಗದ ಭಾಶೇಲಿ ಮಾತಾಡರಲ್ಲಾ ಬಿಳೇ ಸಾಹೇಬರು ಅವರಿಗೆ ಕೊಡೋ ಅಂಥ ಮರ್ಯಾದೆ ಈಗ ತಟಕ್ಕನೆ ಕಾಣುಸಕಂದಿದ್ದೆಯ, ಇಲ್ಲದ ಅಕ್ಕರೆ ಇವರ ಮೇಲೆ ಉಕ್ಕಿ ಹರುದಬುಡದು. ಆಗ ಎಲ್ರಿಗೂವೆ ದೊಡ್ಡಸಕುನೇಗೋಡ್ರು ಪಟ ಗಾಳೀಲಿ ತೂರಕಬಂದು ಮನಸಲ್ಲಿ ಅಷ್ಟೆತ್ತರಕ್ಕೆ ನಿಂತುಬಿಡೋದು.

ದೊಡ್ಡಸಕುನೇಗೌಡ್ರ ಪಟ ಆಗಾಗ ಊರ ಮನಸಲ್ಲಿ ಬಂದು ನಿಲ್ಲುತ್ತೆ ಅನ್ನೋದು ಆವತ್ತಿನ ದಿನದಲ್ಲಿ ಹೆಚ್ಚುಗಾರಿಕೆನೆ ಆಗಿತ್ತು ಯಾಕಂದ್ರೆ, ಊರಲ್ಲಿದ್ದ ಇವರ ಕುಟುಂಬ ಅನ್ನದು, ಸಣ್ಣ ಮನಸ್ಸಿನ ಸಣ್ಣಮರಿಗೌಡರ ಅಪ್ಪಾವರ ಕನಸಿನ ಕೂಸಾಗಿತ್ತು. ಹತ್ತೂರಲ್ಲಿ ಇದ್ದ ಜಗಳ ಈ ಮನೆಯ ಚಾವಡೀಲಿ ಬಗೆ ಹರಿಯೋವು. ಊರಿಗೆ ಇವರ ತಂದೆ ದೊಡ್ಡ ಗೌಡರು ಆಗಿದ್ರು. ಕೋರ್ಟು ಕಛೇರಿ ಕೆಲ್ಸಗಳು ಗೌಡ್ರ ಹತ್ತಿರ ಬಂದ್ರೆ ನುರಿತಾವೆ ಅಂತ ಸುತ್ತೇಳು ಊರಿಗೇ ಹೆಸರಾಗಿದ್ರು. ಇವರ ಮನೆಯ ಚಾವಡಿನ ದಾಟಿ ಹೋದ ಜಗಳ, ಇವರ ಏಳು ದಿನದ ಕಾಲ ಹಾದೀಲಿ ನಡದು, ಮೈಸೂರು ಕೋರ್ಟಲ್ಲಿ ಇತ್ಯರ್ಥ ಆಗಿ ಬರುತ್ತಿದ್ವು.

ಊರಲ್ಲಿ ಎಲ್ಲರೂ ನಂಬುತಿದ್ದ ಈ ದೊಡ್ಡ ಗೌಡರ ಕುಟುಂಬನ್ನ “ಗುಡಾಣದಲ್ಲಿ ಭತ್ತ ತುಂಬ್ಕೋತಾರೆ” ಅನ್ನೋ ಹಂಗಿಸೋ ಅವರ ಅಪ್ಪನ ಕಾಲದ ಊರ ಮಾತಿಂದ ಮನಸ್ಸು ನೋಯ್ಸಕಂಡಂಥ ಇವರು, ಈ ಕಾಲಕ್ಕೆ ತನ್ನ ಮೂರು ಅಣ್ಣತಮ್ಮರ ಮನೆಯ ವಾಡೆಗೆ ಲೆಕ್ಕವಿಲ್ಲದಷ್ಟು ಭತ್ತ ತಂದು ಸುರಿಯೋ ಮಟ್ಟಿಗೆ ಕುಟುಂಬನ, ತಂದು ಇವತ್ತು ನಿಲ್ಲಿಸಿದ್ರು. ನಾಕಾರು ಕುದುರೆ, ಎತ್ತಿನ ಗಾಡಿ ಅಲ್ಲದೆ ದರ್ಬಾರು ಗಾಡಿನ್ನೂ ಇಟ್ಟಕಂಡು ಅಣ್ಣ ತಮ್ಮಂದರು ಓಡಾಡುತಿದ್ದರು. ಆದ್ರೂ ಈ ಸಂಸಾರಕ್ಕೆ ಅವರು ಬೆನ್ನೆಲುಬಿನಂಗೆ ನಿಂತವರಾಗಿದ್ರು. ಹಂಗೇ ಊರ ಕಣ್ಣಲ್ಲಿ ಕಳೆ ಕಟ್ಟುವಷ್ಟು ಬಡಿವಾರ ಇಲ್ಲದಿರ ತೂಕದ ಮನುಷ್ಯರಾಗಿದ್ರು.

ಅಪ್ಪನ ಕುರಿ ಕಾಯೋ ಕಾಯಕದಿಂದ….ಎಚ್ಚೆತ್ತಕಂದು, ನೂರು ಎಕರೆಗೂ ಮೀರಿದ ಜಮೀನು, ಭತ್ತದ ವ್ಯಾಪಾರವನ್ನ ಇಟ್ಟುಕೊಂದು, ಎಲ್ಲರನ್ನೂ ಅವರ ನೆರಳಲ್ಲಿ ಹೊರಿತ್ತಿದ್ದ ಅವರ ಕುಟುಂಬ ಊರಿನ ಕಣ್ಣಂಗಿತ್ತು. ಅಂದಿನ ಹತ್ತಾರು ಊರಿನ ದೊಡ್ಡ ದೊಡ್ಡ ಗೌಡ್ರು ಮನೆಯೋರು ಇವರ ಸಂಬಂಧಕ್ಕೆ ಅಂತ ಚಾವಡೀ ಮೇಲಿದ್ದ ಕುರ್ಚಿ ಮೇಲೆ ಬಂದು ಕೂರೋರು. ಆಸೆ ಪಡಂಗಿದ್ದ ಇವರ ಮನೆ ಚಂದೊಳ್ಳಿ ಹೆಣ್ಣುಮಕ್ಕಳನ್ನ, ಸೊಸೇರ್ನ, ಇವರು ಜ್ವಾಪಾನ ಮಾಡತಿದ್ರು. ಇಂಥ ಗೌಡ್ರುಗೆ ಒಂದಾಸೆ. ತನ್ನ ನಾಕು ಗಂಡು ಮಕ್ಕಳು, ತಮ್ಮದೀರ ಎರಡು ಗಂಡು ಮಕ್ಳು ಓದಬೇಕು. ಎಲ್ರೂ ಇದ್ಯಾವಂತರಾಗಬೇಕು ಅನ್ನದು. ಆಗ ಅದಕ್ಕೆ ಸಜ್ಜಾದ್ರು. ಉಳುದೋರೆಲ್ಲಾ ಎಲ್.ಎಸ್. ಮೆಟ್ಲು ಹತ್ತುವಾಗ್ಲೇ ಅತ್ಲಾಗೆ ಪುಣುಪುಣುನೆ ಆಲೂರು ಇಸ್ಕೂಲು ಮೆಟ್ಲು ಇಳಕಂದು ಬಂದುಬುಟ್ರು. ನೇಗಲು ಮೇಣಿ ಮೇಲೆ ಕೈ ಇಟ್ಟು ಹೊಲಗದ್ದಿಗೆ ಇಳದ್ರು. ಊರ ಕಣ್ಣಳತೇಲೇ ಉಳುದು ಹೋದ್ರು.

ಅದ್ರಲ್ಲಿ ಅವರ ಒಬ್ಬ ಮಗ ಮಾತ್ರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಮೆಟ್ಟಿಲ ತುಳುದು, ಓದಿ ಇಂಟರ್ ಮೀಡಿಯೆಟ್ ಮುಗ್ಸಿ ಜೈ ಅನ್ಸಸಕಂಡ್ರು. ಅಪ್ಪನ ಎದೆ ಬೀಗೋ ಹಂಗೆ ಮಾಡುದ್ರು. ಬಿ.ಎ.ಮೆಟ್ಲನ್ನೂ ಹತ್ತಿದ್ರು. ಆದರೆ ಅದರ ಜತೆಲಿ ಹರಯದ ಪಾಠ ಹೆಚ್ಚಾಗಿ, “ಪರೀಕ್ಷೆ ಸಾಕು, ನಂಗೇನು ಮನೇಲಿ ಇರದ ತಿಂದು ಮುಗ್ಸುದ್ರೆ ಸಾಕು” ಅಂತ ಇವರೂವೆ ಇತ್ಲಾಗೆ ಊರ ಕಡಿಗೆ ಬಂದ್ರು. ಕಾಯಕಂದು ನಿಂತಿದ್ದ ಅತ್ತೆ ಮಗಳಿಗೆ ಹೂ ಮಾಲೆ ಹಾಕಿದ್ದೆಯ, ಊರಲ್ಲಿ ಸಣ್ಮರಿಗೌಡ್ರು ಪಟ್ಟಕ್ಕೆ ಬಂದ್ರು. “ಅಯ್ಯೋ, ನಾನು ಶೇಕದಾರ, ಅಮಲ್ದಾರ ಆಗನಾ? ಅವರು ಕೊಡ ಸಂಬಳ ನಮ್ಮನೆ ಎತ್ತಿನ ಹುಲ್ಲಿಗೆ, ಕುದುರೆಗ್ ಕೊಡೋ ಹುರುಳಿಗೆ ಎಟ್ಕಾದಾ? ಕಣ್ಣು ಎತ್ಲಾಗೆ ನೋಡುದ್ರೂ ಗದ್ದೆ ಹೊಲ, ಕಾಪಿ ತೋಟ ಅವೆ ನಮಗೆ ಅಲ್ವೇನೋ?” ತಮ್ಮದೀರ ಕುಟೆ ಅಂಗೆ ಅಂದವರೆ ತಗ….. ಬಂದ ಸರ್ಕಾರಿ ಕೆಲ್ಸಕ್ಕೆ ಎಳ್ಳು ನೀರ ಪೂರ್ತಿ ಬುಟ್ಟೇ ಬುಟ್ರು.

ಕಾಯಕಂಡಿರೋ ಮದ್ವೆ ಆದ ಹೆಣ್ತಿ ಬುಟ್ಟಿರ್ನಾರ್ದಂಗೆಯ, ಜೋಬಿಗೆ ಇಳೆಬುಟ್ಕಂದು ಬಂದಿದ್ದ ಬೆಂಗಳೂರಿನ ಚಟ ಮುಸುಕು ಹಾಕ್ಕಂಡು ವಳಗೇಯ…. ಮಿಸುಕಾಡಕಂದು, ಇವ್ರ ಚಂಗ್ಲು ಬುದ್ಧಿಯ ಕಾಯಕಂದು ಕುಂತಿದ್ವು. ಮೀನು ಗಾಣದಾಗೆ ಇಳುದು ಬರೋ ಎರೆಹುಳಕ್ಕೆ ಬಾಯ್ಬುಡತಾವಲ್ಲಾ ಹಂಗೆ… ಅವು ಇವ್ರ ತಲೆ ವಳಗೆ ಬಾಯ್ ಬಾಯ್ ಬುಡತಿದ್ವು. ಊರಲ್ಲಿರ ಜಮೀನ ಮೂಗೆತ್ತಂಗೆ ಗೇಯೋ ತಮ್ಮದೀರು ಉತ್ಕಂದು ಬಿತ್ಕಲ್ಲಿ ಅಂತೇಳಿದ್ದೆ….ಇವ್ರು, ಸಕಲೇಶಪುರದ ಕೆಂಪು ಹೊಳೆ ನಡುಮಧ್ಯದಲ್ಲಿ ಹರಿಯೋ ಕಾಡಲ್ಲಿರೊ ಯಾಲಕ್ಕಿ ತೋಟವ ತೆಗುದುಹಾಕಿ ಕಾಪಿತೋಟ ಮಾಡತೀನಿ ಅಂತವ ಹೋಗಿ ಅಲ್ಲಿ ಕುಂತ್ರು.

ತನ್ನ ಮಗನ ಇದ್ಯಾಭ್ಯಾಸವ ನಂಬಿದ ದೊಡ್ಡಗೋಡ್ರು ಸಮಾಧಾನಾಗಿ, “ಮಗ ಏನೋ ಮಾಡಕಳ್ಳಲಿ, ಕಣ್ ಮುಂದಿರ್ಲಿ” ಅಂತ ನಿಸೂರಾದ್ರು. ತಂಗಿ ಮಗಳು ಸೊಸೆ ಆಗಿದ್ದೂ ಅಲ್ಲದೇ ಚಂದೊಳ್ಳಿ ಸೊಸೆ “ಮಾವ ಮಾವ” ಅಂತವ ಚಿಲ್ಲಬಿಲ್ಲಿ ಹಂಗೆ ಆಡಕಂದು, ಗಿಣಗಿಣನೆ ಗಿಣಿಯಂಗೆ ಮಾತಾಡಕಂದು, ನೀರು ನಿಡಿ ಕೊಟ್ಕಂದು, ಬಿಸ್ಬಿಸಿ ಉಣ್ಣಕ್ಕಿಕ್ಕಂದು, ತಾವು ಕಟ್ಟುಸಿದ ಮಹಡಿ ಮನೆ ಮೆಟ್ಲು ಹತ್ತಿ ಇಳುದೂ ಮೇಲೆ ಕೆಳುಗೆ ಆ ದೊಡ್ಡ ಮನೆ ತುಂಬಲೂ ಓಡಾಡುತಿದ್ದರೆ ತಗಾ, ಅವರ ಜೀಮನೇ ಎರಡಾಗದು. ಆಗ…. ಬೀಗಿ ಬೀಳೋ ಇವರ್ನ ಕಂಡು, ಅವರ ಗೌಡಮ್ಮರು,” ನಿಂಗೆ, ಬಿಳೇ ಸೊಸೆ ಬಂದು ಒಲೆ ಗುಂಡೀಲಿ ಹೇತ್ರೂ ವೈನವೇ ಕನಪ್ಪಾ….” ಅಂತ ಆಗಾಗ ರಾಗಾವ ಹಾಡತಲೇ ಇವರಿಗೆ ಕಡಿವಾಣ ಹಾಕರು.

“ಲೇ ಲೇ ಲೇ… ನಿನ್ನ ಕೊಂಕು ಬುಡಕುಲ್ವಲ್ಲಾ ನೀನು…ಆ ಮಗ ಏನ್ ತಿಳಿದೀತೆ ಇನ್ನೂವೆ. ಸಣ್ಣ ಮೋತೆ ಅದು” ಅಂತ ಹೆಂಡತಿಯ ಬೈದ್ರೂವೆ, ಅವರ ಮೈಯ್ಯನೇ ನೋಡರು. ಗೊಬ್ಬೆ ಸೆರಗ ಬಿಗಿಯಾದ ಕಟ್ಟು ಹಾಕಿ ಉಟ್ಟಿರೋ ಅವರ ರವಿಕೆ ಇಲ್ಲದಿರ ಭುಜ ತೋಳು ಅನ್ನವು ಕಪ್ಪು ಹೊಗೆ ಸುತ್ತಕಂದಿರೋ ಊಟದ ಮನೇಲಿ ಹಂಗೇ ಬೆಳ್ಳಂಬೆಳ್ಳಗೆ ಇವರ ಕಣ್ಣಿನ ಬೆಳಕಾಗಿ ಹೊಳೆಯೋವು. ಅದ ಕಂಡು ಕಾಲೊಂದಿಗೆ, ಕಾಲುಸರದ ಸದ್ದು ನಗುತಾ ನಗುತಾ ದೂರಾಗದು. “ಮಳ್ಳಿ ತಗ ಇವಳು, ಸೊಸೆ ಕುಟ್ಟೆ ಕಿತ್ರೂ ಬರ್ದಂಗೆ ಇರ್ತಾಳೆ. ನನ್ ಮುಂದೆ ಕೊಂಕಾಡತಾಳೆ.” ಅನ್ಕನರು. ಮನೆ ಹೆಣ್ಣುಮಕ್ಕಳೂವೆ ಎಂಗೋ…ದೇವರ ದಯೆ! ಒಳ್ಳೆ ಮನೆ ಸೇರುದ್ರು. ಇನ್ನ ಮುಂದ್ಲ ಆರು ಹೋದಂಗೆ ಹಿಂದಲ ಆರು. ಉಳುದೋರುಗೂ ಇಂಗೆ ಅಪ್ಪಂಥ ಹೆಣ್ಣುಮಕ್ಕಳ ತಂದು ಮದುವೆ ಮಾಡುದ್ರೆ, ಚಂದೊಳ್ಳಿ ಮಕ್ಳು ಮನೇಲಿ ಆಡ್ಕಂಡಿದ್ರೆ…. ನನ್ನ ಜೀಮ ಸಮಾಧಾನ ಆಯ್ತದೆ ಕನಪ್ಪಾ… ಇನ್ನೇನು ಬೇಕು? ನಂಗೆ… ಅಂದುಕೊಂತಾ ಅವರು ತನ್ನ ಊರ ಕೆಲಸದಲ್ಲಿ ಮುಳುಗೋದ್ರು.

ಅಣ್ಣನ ಜತೆಲಿ ಕೈ ಕೂಡುಸ್ತಿದ್ದ ದೊಡ್ಡಗೌಡರ ತಮ್ಮಾರೊಬ್ರು ದುಡ್ಡಾಕಿ ಈ ಸಕಲೇಶಪುರದ ತ್ವಾಟವ ತಗಂಡಿದ್ರು. ಅವರು ಅಣ್ಣನ ಹೆಸರಲ್ಲೆ ಈ ತ್ವಾಟವ ಮಾಡಿದ್ರು. ಅಣ್ಣನ ಮೇಲಿಟ್ಟಿರ ಪ್ರೇಮ ಅವರ ಮಗನ್ನ ನಂಬುತು. ತನ್ನ ಮಗೇನು? ಅಣ್ಣನ ಮಗೇನು? ಎರಡೂ ಒಂದೇ ಕರುಳಲ್ವಾ? ಭೇದಭಾವ ಇಲ್ಲದ ಕಾಲ ಶಂಕೆಯ ತಂದು ಹತ್ರಕ್ಕೂ ಬುಟ್ಟಕಳಲಿಲ್ಲ.

ಇತ್ತಲ ಕಡೆ ಯಾಲಕ್ಕಿ ಬೆಳೆಯೋ ಹಣಾಲಲ್ಲಿ, ಕಾಪಿ ಹಾಕಕ್ಕೆ ಅಂತವ ಅಲ್ಲಿದ್ದ ಭಾರಿ ಮರವ ಕಡಿತಾ ಹೋದ್ರು. ಕಾಪಿಗೆ ನೆರಳು ಬಿಸಿಲು ಸಮವಾಗಿರಬೇಕು. ಮುಗಿಲೆತ್ತರಕ್ಕಿರ ಮರಗೋಳು, ತಣ್ಣಗೆ ಹರಿಯೋ ನೀರು, ಅದರ ಹಾಡಲ್ಲಿದ್ದ ನಿರುಮ್ಮಳ, ಹಕ್ಕಿಪಕ್ಕಿ ಹಾಡು, ಕಲರವ, ಕಾಡುಪ್ರಾಣಿ ಗೂಕು, ಒಳ್ಳೆ….ತಪಸ್ಸಿಗೆ ಕೂರೋಂಗಿರೋದು. ಇಂಥ ಏಕಾಂತ ಸಣ್ಣಮರಿಗೌಡ್ರನ್ನ ಇನ್ನೇನೋ ಕೇಳತಿದ್ದಂಗೆ, ಅಲ್ಲಿ ಇಲ್ಲಿ ಇದ್ದ ಸ್ನೇಹಿತ್ರು ಕಾಡಿನ ಹಾದೀಲಿ ರಾಜಾ ರಾಣಿ ಜೋಕರ್ನ ಕರಕಂದು ಇಲ್ಲಿಗೆ ಬಂದ್ರು. ಇವರ ಜತಿಗೆ ಜಂಟಿ ಆಗಿ, ದುಡ್ಡು ಅಡ ಇಡತಾ ಇಡತಾ ಅವರಾಟವ ಆಡತಾ ಹೋದ್ರು. ಇಸ್ಪೀಟೆಲೆ ಬೀಸಣಿಗೆಯ ಚಂದಕ್ಕೆ ಹಿಡಕಂಡು ಬಂದ ಹೊಸಬರು ಕಾಡಿನ ಹಣೆಬರಹವಾ ಗಾಳೀ ಬೀಸೋ ಹಸಿರು ಎಲೆ ಬೀಸಣಿಗೆಯ ಮೇಲೆ ಬರಿತಾ ಬರಿತಾ ಹೋದ್ರು. ರಾಜರು ಕೋಟೆ ಕಟ್ಟತಿರೋವಾಗಲೇ, ಕೋಟೆ ಅಡೀಲಿ ಮಣ್ಣಾಗೋ ಹಣೆಬರಹನೂ ಅವರ ಹಣೆ ಮೇಲೆ ಬರಿತಾ ಹೋದ ಹಂಗೆ, ಇಸ್ಪೀಟಿನ ಗೀಳು ಎಲ್ಲಾ ಹುನ್ನಾರನೂ ತೋರಸಕಂದು, ಆಪತ್ತಿನ ಬಲೆ ಹೆಣಕಂತಾ, ದೊಡ್ಡ ಮನೆಯೋರ ಕಾಡಿಗೆ ಬಲೆ ಬೀಸಕಂದು ಬಂತು.

ದೊಡ್ಗೌಡ್ರು ಅವರ ತಮ್ಮಾರು ಬದುಕಲ್ಲಿ ಕಂಡಂಥ ಕಡುಕಷ್ಟವ ನೀಸಿ, ಮೂವತ್ತು ವರ್ಷದಲ್ಲಿ ಬೇರು ಬಿಟ್ಟಿದ್ದಂಥ, ಇಷ್ಟು ವರುಶದ ಮೇಲೆ ಗರಿಗೆದರಿ ಹೊರವಾಗಿದ್ದಂಥ ಅವರಾಸೆಗಳಂಗೆ ಎಲ್ಲಾ ಹೆಮ್ಮರಗಳೂ ಕಾಡಲ್ಲಿ ಬೀಡುಬಿಟ್ಟಕಂಡಿದ್ವು. ಅವು ಒಂದೊಂದೇ ಉರುಳತಾ ಉರುಳುತಾ ಕಾಪಿ ತೋಟದ ಆಸೆ ಅನ್ನದು ಕಣ್ತಪ್ಪಿ ಆ ದಾರೀಯ ಬುಟ್ಟುಬುಡತು. ಇದ್ದಿಲು ಮಾಡಿ ಮಾರೋ ಚಟಕ್ಕೆ ಭದ್ರಾಗಿ ಅಂಟಕಂತು. ಎಷ್ಟು ಆಡಿದರೂ ಮುಗಿದಿರೊ ಇಸ್ಪೀಟಿನ ಆಟದಂಗೆ, ಎಷ್ಟು ಕಡಿದರೂ ಮುಗಿದಿರೊ ಸಂಪತ್ತಂಗೆ… ಕಾಡು ಅನ್ನದು ಮನುಷ ತೋಡಿದ ಗುಂಡಿಲಿ ಹೊಗೆ ಇಕ್ಕುಸ್ಕಂದು ದಮ್ ಕಟ್ಕಂದು ಉರಿತಾ ಉರಿತಾ…. ನೀರು ಹುಟ್ಟಿದ ಕಾಲದಿಂದ್ಲೂ ಬದುಕಿದ್ದ ಮರಗಳ ನಿಟ್ಟುಸಿರು ಈಗ ಗಂಟಲಲ್ಲೇ ಆರಿ, ಎದೆ ವಳಗೇ ಘನವಾಗಿ ಇದ್ದಿಲಾಗಿ ಹೋದವು.

ಪ್ಯಾಟೆ ಮುಕ ನೋಡಕ್ಕೆ ಅಂತಲೇ ಅವನ್ನ ಹೇರಿಕಂದು ಹೋಗೋಕೆ ಕುದುರೆ ಬಂದ್ವು. ಹೇರುಗತ್ತೆನೂ ಬಂದ್ವು. ಕಾಡಿನ ಹೊಳೇಲಿ ಹರೀತಾ ಅರಳಕಂಡಂಥ, ಬೀಸುಗಾಳೀಲಿ ತೂರಾಡಕಂಡು ಹಾಡಾದಂಥ, ಇನಿದನಿಯ ಹಸುರು ಜೋಗುಳದ ಚೆಲುವೀಗ, ಕಪ್ಪು ಮುಖ ಹೊತ್ಕಂದು ಪ್ಯಾಟೆಲ್ಲಿ ಮೈ ನಾಚಿಗೆ ಬುಟ್ಟು ನಿಂತ್ಕಂದು ಹರಾಜು ಹಾಕಸಕಂದು ಬೆಲೆಕಟ್ಟೋ ಸರಕಾಗಿ ಹೋಯ್ತು. ದುಡ್ಡು ಕೊಟ್ಟು ತಂದ ಪೇಟೇ ಜನದ ಮನೆಮನೆಲ್ಲಿರೋ ಇದ್ಲೊಲೇಲಿ, ನಿಗಿ ನಿಗಿ ಕೆಂಡದುಂಡೆಯಾಗಿ ಬುಸುಗುಟ್ಟಕಂಡು ಉಸುರು ಬುಟ್ಟರೂ “ಬಡವನ ಸಿಟ್ಟು ದವಡೆಗೆ ಮೂಲ” ಅಂತ ಕಣ್ಣಲ್ಲೇ ದುಖ ಇಂಗ್ಸಿ ತಮ್ಮನ್ನ ತಂದ ಆ ಗಾಳೀಯ ಸೆರಗಲ್ಲಿ ಕಣ್ಣೀರ ವರಸ್ಕಂದು ವಳಗೆ ಉರೀತಾ ಉರಿತಾ ಹೊರಗೆ ನಾಜೂಕಾಗಿ ಅನ್ನ ಅರಳೋಸದನ್ನ ಕಲ್ತವು. ತಂದೋರ ಬಟ್ಟೆನೂ ಇಸ್ತ್ರಿ ಮಾಡಿ ಕೊಟ್ವು. ಇಂಥ ಕಾಡಿನುಸಿರೇ ಘನವಾದಂಥ ಇದ್ದಿಲಿನ ಹಾಡಿಗೆ ಬೆಲೆ ತಾನಾಗೇ ಬಂತು.

ರಾಜಾ ರಾಣೀರು ಬಂದಂಗೆ ಅವರ ಹಿಡಿದ ಕತ್ತಿನೂ ಬಂದವು. ಕಿವಿ ಕಿತ್ತುಹೋಗೋ ಹಂಗೆ ಮಳೆ ಕರದೂ ಕರದು ಹೊಟ್ಟೆ ಹೊಡಕಂದು ಸತ್ತೋಗೋ ಮಳೆಚಿಟ್ಟೆ ಥರದಲ್ಲಿ…. ಗರಗರನೆ, ಗರಗರನೆ, ಗರಗಸದ ಸದ್ದು, ವರುಷೊಂಬತ್ತು ಕಾಲದಲ್ಲೂ, ಹಗಲು ರಾತ್ರಿ ಅನ್ನದೇ ಕತ್ತಿ ಹಲ್ಲಲ್ಲಿ ಹಾಡತಾಲೇ ಆಡತಾಲೇ ಇತ್ತು. ಇದನ್ನ ಕೇಳತಲೇ ಕೇಳತಲೇ ತನ್ನ ಮಕ್ಕಳ ಸಾವ ಕಂಡು ಹೊಳೆ ಅತ್ತಕಂದು ಸತ್ತಕಂದು ಹರಿತಾನೇ ಇತ್ತು. ದಿನಾ ಹರಡಕಂಡು ಇಸ್ಪೀಟು ಆಡೋ ಆಟದಲ್ಲಿ ಜೋಕರ್ ಹಲ್ಲು ಬುಟ್ಟಕಂದು ಬಂದು ಆಟ ಮುಗುಸೋ ಥರದಲ್ಲಿ ದಿನಾ ಮರಗಳು ದುಡ್ಡು ತರತಾ, ಮತ್ತೆ ಆಸೆ ಒಡ್ಡತಾ, ತಿಳೀದಿರ ಅಕ್ಷರ ಬರೆದಿರೋಂಥ ಚೋಟುದ್ದ ಇರೋ ಆ ಇಸ್ಪೀಟೆಲೆಗೆ, ಬಾನೆತ್ತರದ ಎಲೆಗಳ ಹುತ್ತವೇ ಆಗೋಗಿರೋ ಮರಗಳು ಅಡಿಯಾಳಾಗಿ ಅಡವಾಗಿ ಮಕಾಡೆ ಮಲಗಿದ್ವು. ಅದೂ…. ನಾಕಾರು ವರುಶ ರಾತ್ರಿಬೋಗೂ ಮುಗಿಯದ ಕಥೆ ಆಗಿದ್ದೆ, ಕಾಡನ್ನ ಮುಗುಸಿ ಗುಡುಸಿ ಗುಂಡಾಂತರ ಮಾಡಕಂಡು ಹೋಯ್ತು. ಬಿರುಗಾಳಿ ಬಂದು ಹೋದಂಗೆ ಕಾಡನ್ನ ಲೂಟಿ ಹೊಡೆದು ಬಿಟ್ಟುಬಿಟ್ಟಿತ್ತು. ಬಿದ್ದು ಹೋದ ತನ್ನ ಕೋಟೆ ನೋಡಕಂದು ನಡು ಮಧ್ಯದಲ್ಲಿ ಹರಿಯೋ ನೀರಿನ ಸದ್ದು ಏಕಾಂಗಿ ಆಗೋಗಿ ಗೊಳೋ ಅಂತ ಜೋರಾಗಿ ವರಲತಿತ್ತು .

ಇದರ ನಡುವೆ ಕಾಡಿನ ನಿಜವಾದ ವಾರಸುದಾರನಾದ ಚಿಕ್ಕಪ್ಪನ ಮಗ ಸ್ವಾಮಿ, ಮನೆ ಕಟ್ಟೋಕೆ ಅಂತ ತನ್ನ ಕಾಡಲ್ಲಿದ್ದ ಮರ ಕುಯ್ಸಿ, ಮರಮುಟ್ಟು ಮಾಡಕಂದು, ನಾಕಾರು ಮನೆ ಕಟ್ಟೋ ಬೇರೇರಿಗೆ ಮುಟ್ಟ ಮಾರಿ ಆ ದುಡ್ಡಲ್ಲಿ ಇವರಂಗೆ ಅವನೂ… ದೊಡ್ಡ ಮನೆ ಕಟ್ಸಿದ್ದ. ಸಾಲಾ ಸೋಲನೂ ಮಾಡಿದ್ದ. ಅದುಕ್ಕೆ ಅಂತ ದೊಡ್ಡಪ್ಪರಾದ ದೊಡ್ಡಸಕುನೇಗೌಡ್ರು ಬೆನ್ನೆಲುಬಂಗೆ ನಿಂತು ತಮ್ಮನ ಮಗನ ಶ್ರಮಕ್ಕೆ ಕೈ ಕೂಡುಸ್ತಿದ್ರು. ಇದು ದಾಯಾದಿ ಅಣ್ಣತಮ್ಮರ ನಡುಮಧ್ಯ ಇರ್ಸುಮುರ್ಸ ಹಚ್ಚತು. ಓದಿ ಬೂದಿ ಹಿರಿದಿದ್ದ ಸಣ್ಣಮರಿಗೌಡ್ರ ಹೊಟ್ಟುರಿಯ ಹೆಚ್ಚುಸ್ತಲೆ ಹೋಯ್ತು. ಅದೂ ಅಲ್ಲದೆ ಇವರ ಒಳಮರ್ಮ ಬಲ್ಲ ಆ ಕಷ್ಟ ಪಡಂಥ ಅಣ್ಣ ಈಗ ದಾಯಾದಿ ಕಳೆಲಿ ಇವರಿಗೆ ಕಾಣಸ್ಕಂತಿದ್ದ.

ಹಿಂದೆ ಇದ್ದ ನಾನು ಅವನು ಒಂದೆ ಅನ್ನೋ ಭಾವನೆ ಹೋಗಿ, ಇವ್ರಿಗೆ ಇಳೆಬಿದ್ದಿದ್ದ ಕಿಲಾಡಿ ವಿದ್ಯೆ ಬುದ್ದಿ ಆಗಾಗ, ಮೋಸದ ಹಾದಿಗೆ ಇವರನ್ನ ತಗಂದೋಗಿ ಕಣ್ ಕಟ್ಟಿ ಬುಟ್ಟಬುಡತಿತ್ತು. ಕೆಟ್ಟ ಬುದ್ಧೀನೂ ಕಲುಸ್ತುತಿತ್ತು. ಕೇವಲ ಹತ್ತು ವರ್ಶದಲ್ಲಿ ಬಿಸಿಲನ್ನೇ ವಳೀಕೆ ಬಿಟ್ಕೊಳ್ಳದಿರಂಥ… ದಟ್ಟವಾಗಿದ್ದ…. ಝೀಗುಡೋ ಕಾಡು ಇವರನ್ನ ವಳಗೆ ಬಿಟ್ಟಕಂಡು ಯಾವುದೇ ಮುಲಾಜಿಲ್ಲದಂಗೆ ಇವರ ತಿರುಕೆ ಸೋಕಿಗೆ ಪಾಳುಬಿದ್ದು ಕರಿ ಮಸಿ ಹೊತ್ತು ಬರಗಾಡಾಗಿ ಬರಿಗೈಯ ಮಾಡಕಂದು ನಿಂತಕಂಡಿತ್ತು.

ಕಾಡಿನ ವಡವೆ ಮಾರಿ ಉಟ್ಟ ಬಟ್ಟೆನೂ ಬಿಚ್ಚಿ ಮಾರಿದ್ದ ಆ ತಾಯ ಮೈಗೇ ಕೈಹಾಕಕ್ಕೆ ಈಗ ಸಣ್ಣಮರಿಗೌಡರ ಮನಸು ವಳಗೇ ತುಡಿತಿತ್ತು. ಅದುಕ್ಕೆ ಸರಿಯಾಗಿ ಅದನ್ನ ನ್ಯಾಯವಾಗಿ ಕೊಂಡಿದ್ದ ಚಿಕ್ಕಪ್ಪರೂ ಸತ್ತರು. ಈಗ ಯಾವುದೇ ಉತ್ಪಾದನೆ, ಸಂಪಾದನೆ ಕಾಣದೇ ಬರಿಗೈ ಆಗಿದ್ದ ಆ ಕಾಡನ್ನ ದುರ್ಯೋದನನ ಮನಸ್ಸು ಹೊಂಚು ಹಾಕಿ ದ್ರೌಪದಿ ಸೀರೆ ಎಳುಸದಂಗೆ, ಕೇವಲ ಅರೆದಂಡ ಬರೆದಂಡಕ್ಕೆ ಮಾರಿ ಅದನ್ನ ಅತ್ಲಾಗೆ ಹರಾಜು ಹಾಕಿ, ಕಂಡೋರ ಮಾಡಿಟ್ಟ ಆಸ್ತಿ ಮಾರಿ ಮತ್ತೆ ಊರ ಹಾದಿ ಹಿಡಕಬಂದ್ರು. ಊರಲ್ಲಿ ಯಾವತ್ತೂ ಬಾಯ ಮಾತಲ್ಲೂ ಸೈತಾ ಮಾತಿಗೆ ತಪ್ಪದೇ ಉಳಿದಿದ್ದ ಅವರ ಅಪ್ಪಾರ ಕೋಟಾ ಸಹಿನ್ನೂವೆ, ಸಕಲೇಶಪುರದ ತಾಲೂಕಾಪೀಸಲ್ಲಿ ಕಾಲ ಮೇಲೆ ಕಾಲು ಹಾಕಂದು ಕುಂತ ಇವರು ಯಾವುದೇ ಬೇಜಾರಿಲ್ಲದೆ ಹಾಕಿ ಬಂದಿದ್ರು.

ಆ ಹೊತ್ತಲ್ಲಿ, ಕಾಡಿನ ನಿಜವಾದ ವಾರಸುದಾರ ಆಗಿದ್ದ ಚಿಕ್ಕಪ್ಪ ಸತ್ತು, ಇದ್ದ ಅವರ ಒಬ್ಬನೇ ಮಗ ಸ್ವಾಮಿ ಅಪ್ಪನ ತಿಥಿ ಮಾಡತಿದ್ದರು. ದೊಡ್ಡಸಕುನೇಗೌಡ್ರು… ಬೆನ್ನೆಲುಬಾಗಿದ್ದ ತಮ್ಮನ ಸಾವಿನ ಮುಂದೆ ತಲೆ ಬಗ್ಗಸಿ ಕೈ ಹೊತ್ಕಂದು ಕುಂತಿದ್ರು…ನಂಬಿದ್ದ ಅಪ್ಪಾ ಅಣ್ಣತಮ್ಮರ ಕತ್ತು ಕುಯ್ದಂಥ ಸಣ್ಣಗೌಡರು ಗೊತ್ತಿಲ್ಲದಂಗೆ ಬಂದು ಊರು ಸೇರುದ್ರು. ಕೇವಲ ಸೊಲ್ಪ ದಿನದಲ್ಲಿ ಊರಿನ ಮನೆ ಮೇಟಿಯ ಕೈಗೆ ತಗಂದ್ರು. ಪತ್ತೆಯಾದ ಒಂದೋದೇ ಮಗನ ದುರಾಡಳಿತ ಕಂಡು ಗೌಡ್ರು ಕೊರುಗುಡುತ್ತಾ, ಕಾಯಿಲೆ ಕೋಳೀ ಹಂಗೆ ಕರುಗುತ್ತಾ ಹಾಸಿಗೆ ಹಿಡುದ್ರು. ಒಳ್ಳೆ ಅಪ್ಪಂಗೆ ಒಳ್ಳೆ ಮಕ್ಕಳು ಹುಟ್ಟೋದು ಕಷ್ಟ ಅಂತ ಊರು ಹಲ್ಲಿ ಅಂಗೆ ತನಗೆ ಗೊತ್ತಿದ್ದ ಶಕುನವಾ ಅದರ ಪಾಡಿಗೆ ಅದು ಲೊಚ್ಚಲೊಚ್ಚನೆ ನುಡಿತು.

ಅಂಗಂಗೆ ಮೇಲೆ ಮೇಲೆ ಊರಿನ ಕಣ್ಣಿಗೆ ಕಾಣೊಹಂಗೆ ಅಣ್ಣತಮ್ಮರು ಮಾತಾಡುದ್ರೂ ಸೈತ ತೋಟ ಮಾರಿ ಬಂದ ಇವರಿಂದ ದಾಯಾದಿಗಳು ದೂರಾದ್ರು. ಗೌಡರ ತಮ್ಮನ ಸೊಸೆ ಗಂಡಂಗೆ, ಕೈಗೆ ಬಂದ ಹೆಣ್ಣುಮಕ್ಕಳ ಮದುವೆ ಹೊತ್ತಲ್ಲಿ ಕೋರ್ಟಿನ ಸಾವಾಸ ನಮಗೆ ಬೇಡಕ್ಕೆ ಬೇಡ ಅಂತ ಗಂಡ ಸ್ವಾಮೀಯ ತಡೆ ಹಾಕುದ್ರು. ಬುದ್ಧಿ ಬಂದತಾವಳಿಂದಲೂ ಯಾಲಕ್ಕಿ ತ್ವಾಟದ ಆಳಿಗೆ ಉಪ್ಪು ಮೆಣಸಿನಕಾಯಿ ನಿಜವಾಗಿ ಹೊತ್ತವರು ಇವರೇ ಆಗಿದ್ರು. ತನ್ನ ತೋಟದ ನೆಪ್ಪಿಗೆ ಬಂದ ದುಖಃನಾ ಉಕ್ಕುಕ್ಕಿ ಹರಿಸಿದ ಸ್ವಾಮೀನ್ನ ನೋಡಿದ್ದೆ ಅವರ ಹನ್ನೆರಡು ವರುಷದ ಮಗ “ಮುಂದೆ ನಾನು ಈ ತೋಟಾನೆ ಮತ್ತೆ ತಗತೀನಿ ಸುಮ್ಕಿರಪ್ಪ ಅಳಬ್ಯಾಡ” ಅಂತ ಅನ್ಕಂದು ಅಪ್ಪ ಅಳದನ್ನ ನೋಡತಾ ನಿಂತ್ಕಂತು. ಯಾಕಂದ್ರೆ ಅವರಪ್ಪ ಅತ್ತಿದ್ದನ್ನ ಅದು ಯಾವತ್ತೂ ನೋಡಿರಲಿಲ್ಲ. ಇದ್ಯಾಭ್ಯಾಸ ಅಂತ ತಲೆ ಹುಯ್ಕಂಡು, ಮಕ್ಕಳನ್ನ ಓದ್ಸಕ್ಕೆ ಅವರು ಪಡ ಕಷ್ಟ, ಮನೆ ಕಟ್ಟಕ್ಕೆ ಪಟ್ಟ ಕಷ್ಟ, ಅದಕ್ಕೆ ಮಾಮೂಲಾಗಿ ಗೊತ್ತಿತ್ತು. ಆದ್ರೆ ಅಪ್ಪನ ಕಣ್ಣಲ್ಲಿ ಹರಿಯೋ ನೀರ ಅದು ಯಾವ ಗಳಿಗೇಲೂ ಕಂಡಿರ್ನಿಲ್ಲ.

ತ್ವಾಟ ಅಂತೂ ಇಂತೂ ಮೋಸದಿಂದ ಕೈ ಜಾರಿ ಹೋಗಿತ್ತು. ಹಿಂಗೆ ಊರೊಳುಗೆ ಮೈಮುರಕಂದು ದುಡುದು ಮೇಲೆ ಬರತಿರೊ ಸ್ವಾಮಿ ಸಂಸಾರ ಕಂಡು ಹೊಟ್ಟೇಲೆ ಕರುಬಕ್ಕೆ, ಎಲ್ಲೂ ಹೋಗದೆ ಈಗ ಊರಲ್ಲೆ ಇರೋ ಸಣ್ಣಮರಿಗೌಡ್ರು ಶುರು ಮಾಡುದ್ರು. ತನ್ನ ಜೊತೇಲಿ ಹುಟ್ಟಿದ ಮೂರು ಜನ ತಮ್ಮಂದಿರಿಗೂ ಬುಡದೇಯ…., ಅವರು ಪಾಲು ಹಂಚುವಾಗ ಮೋಸ ಮಾಡಿ ತಮಗೆ ತಂಪಾಗಿರೋ ಜಮೀನು ಇಟ್ಕಂಡ್ರು. ಇಂಥವರು ತಾಲ್ಲೂಕಲ್ಲೇ ಓದಿದೋರು ಅಂತ ಹೆಸರಾಗಿದ್ದರು. ಆದ್ರೆ, ಗುಣದಲ್ಲಿ ಸಣ್ಣಮರಿಗೌಡ್ರೆ ಆಗೋದ್ರು. ದೋಡ್ಡ ಗುಣ ಇಟ್ಟಕಂಡು ದೊಡ್ಡತನದಲ್ಲಿ ಕಟ್ಟಿದ್ದ ಮಹಡಿ ಮನೇಲಿ ಅವರಪ್ಪ ನೊಂದರೂ ಬೆಂದರೂ ಸಾಯೋವರೆಗೂ… ಸತ್ತ ಮೇಲೂ… ದೊಡ್ಡಸಕುನೇಗೌಡ್ರಾಗೇ ಉಳುದ್ರು. ಮನೆಗೆ ದೊಡ್ಡಗೌಡ್ರು ಮನೆ ಅಂತಲೇ ಹೆಸರಾಯ್ತು. ಆದರೆ ಆ ಮನೆಗೆ ಮತ್ತೊಬ್ಬರ ಹೆಸರು ಬೀಳಲೆ ಇಲ್ಲ.

ಇವರು ಮಾಡಿದ ಘನಂದಾರಿ ಕೆಲಸ ಅಂದ್ರೆ ಒಂದೇ…. ಮನೆ ತುಂಬ ಮಕ್ಳು ಮಾಡಿದ್ದು. ಕೊನೆಗೆ ಎಮ್ಮೆ ಕಾದಿದ್ದು. ವಿಧಿ ಇಲ್ಲದೆ, ಹೆಂಡತಿ ಹೇಳದಂಗೆ ಕೇಳಕಂದು ಅವಳ ಸೆರಗಿನ ಮರೇಲಿ ಬದುಕು ಸಾಗ್ಸಿದ್ದು. ಇದನ್ನ ಅವರಪ್ಪ ಕಣ್ಣಲ್ಲಿ ಕಂಡಿದ್ದು, ಸಾಯೋವಾಗ ಆ ಯೋಚನೇಲಿ ಮೂಲೆ ಹಿಡದಿದ್ದು, ಇದನ್ನ ಕಂಡು ಕುಟುಂಬದವರೆಲ್ಲಾ ನೊಯ್ತಿದ್ದುದು… ಆದ್ರೆ ಭೇಧವಿಲ್ಲದ ದೊಡ್ಡಗೌಡರ ಗುಣದಲ್ಲಿ ಮುಳುಗೆದ್ದಿದ್ದ ಅಣ್ಣ ತಮ್ಮರು ಅವರನ್ನ ಸಾಯೋವರ್ಗೂ ನಿಗಾ ಮಾಡಿದ್ದ ಕಂಡು ಊರು ಸಮಾಧಾನಾಗಿದ್ದು ಮಾತ್ರ ಸುಳ್ಳಲ್ಲ.

ದಾಯಾದಿ ಹೊಟ್ಟುರಿಯ ಮಹಾಭಾರತದ ಕಥೆ ಎಂದಿಗೂ ಮುಗಿಯೋಲ್ಲ. ಬಾಯಿಂದ ಬಾಯಿಗೆ ಗುಕ್ಕು ಕೊಟ್ಟು ತನ್ನ ವಂಶ ಬೆಳೆಸೋ ಹಕ್ಕಿ ರೆಕ್ಕೇಲಿ ಗರಿ ಬಿಚ್ಚಕಂತಾಲೆ ಇರುತ್ತೆ. ಏನು ಮಾಯದ ಮಾಟ? ಈ ಕಥೆಗಳದ್ದು! ಹೇಳದಷ್ಟೂ ಉದ್ದಕ್ಕೆ ಹಾರತಾನೇ ಇರ್ತಾವೆ. ಕೇಳದಷ್ಟೂ ಗೂಡೊಳಗೆ ಇಳುದು ಮೊಟ್ಟೆಗೆ ಕಾವು ಕೊಟ್ಟು ಒಡಿತಾ ಮತ್ತೆ ಮತ್ತೆ ಮರಿ ಮಾಡತಾನೆ ಇರ್ತವೆ. ದುಂಡೂರಕ್ಕೆ ಸೊನ್ನೆ ಸುತ್ತಿದಂಗೆ ಬದುಕ ಅರಳಿಸಿ, ಸತ್ತಾಗ ತಿರುಗಿ ಅದನ್ನ ತಾನೇ ಅಳಿಸಹಾಕಿ ಅಂಬಾರಕ್ಕೆ ಕಣ್ಣ ನೆಟ್ಟುಬುಡತಾವೆ. ಇದ್ದೋರ ಎದೇಲಿ ತೇಲೋ ಕಥೆಯ ಬುಟ್ಟು ಅಂಬಾರದಲ್ಲಿರೋ ಒಂದು ಚುಕ್ಕಿನ ತಂದು ಅವರ ಗೂಡಿಗೆ ನೆಟ್ಟು ಮುಂದುವರ್ಸಿ ನಿಲ್ಲುಸದೆ ಅಂತಲೇ ಚಿಗುರ ಹರಿಸಿ ಹಾರಿ ಬುಟ್ಟಿರ್ತವೆ.

‍ಲೇಖಕರು admin

January 1, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: