ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾವೊ ನೆನೆದು..

ಜಿ.ಪಿ. ಬಸವರಾಜು

ಸ್ವಯಂ ಅರಿವು ಮಿಂಚಿ
ಬಾನೆಲ್ಲ ಬೆಳಕಾಯಿತು,
ಒಂದೆ ಒಂದು ಕ್ಷಣ
ಮತ್ತೆ ಕತ್ತಲೆಯದೇ ರಾಜ್ಯ
ನಾವೆಲ್ಲ ಈ ರಾಜ್ಯದ
ಕಾಯಂ ಪ್ರಜೆಗಳು
ಅದು ನಮ್ಮೆಲ್ಲರ ಹೆಮ್ಮೆ


ತಾವೊ ನದಿ ಹರಿಯುತ್ತಿದೆ
ಎಂದೂ ಬತ್ತದಂತೆ
ಬಾಯಾರಿದವರೆಲ್ಲ ಬೊಗಸೆ-
ಯಲ್ಲಿ ಮೊಗೆಮೊಗೆದು
ಕುಡಿಯಬಹುದು, ಕುಡಿದಷ್ಟೂ
ನೀರು, ತಣಿಯುವುದು ದಾಹ
ಬಿರುಬೇಸಿಗೆಯಲ್ಲಿ ದಾರಿ-
ಹೋಕರಿಗೆಂದೇ ಹರಿಯುತ್ತಿದೆ
ಈ ನದಿ-ತಾವೊ ನಿರಂತರ


ನನಗೆ ಹೆಸರಿದೆ-
ನಾನು ವಸ್ತುವಲ್ಲ;
ವಸ್ತುವಿಗೆ ಹೆಸರಿಲ್ಲ
ಅದಕ್ಕಾಗಿಯೇ
ಅದು ಬಂದಿಯಲ್ಲ


ನಾನು
ನನ್ನ ಸುತ್ತ-
ನಾನೆ ನಾನು
ಬ್ರಹ್ಮಾಂಡ ಉರುಳಿಸುವ
ಭ್ರಮೆಯಲ್ಲಿ ಸಿಕ್ಕ ಸೆಗಣಿ
ಉಂಡೆಯ ತಳ್ಳುತ್ತಿರುವ
ಹುಳು;
ಕೋಶದೊಳಗೇ ಇದ್ದರೂ
ಜೀವಕ್ಕೆ ಚಿಟ್ಟೆಯ
ಕನಸಾದರೂ ಬಿದ್ದರೆ
ಬದುಕು ಭಾರವಾಗುವುದಿಲ್ಲ,
ಕಾಯುವ ತಪ ಗೊತ್ತಿದ್ದರೆ
ಕಾದಿರುವುದು ಚಿಟ್ಟೆಯ ಪಟ್ಟ


ದೊರೆಯ ಹೆಸರೇ ನೆನಪಿಲ್ಲ
ಅವನು ಎಂದೂ ನಮ್ಮ
ಮುಂದೆ ಬಂದು ನಿಲ್ಲುವುದಿಲ್ಲ
ಅವನ ದಂಡವೊಂದೇ ನಮ್ಮೆದುರು
ಏಟು ಬಿದ್ದಾಗಲೆಲ್ಲ
ಬೆಚ್ಚುತ್ತೇವೆ, ಬೈಯ್ಯುತ್ತೇವೆ
ಮಿತಿಮೀರಿದರೆ ಉರಿದುರಿದು
ಬೆಂಕಿಯಾಗುತ್ತೇವೆ; ಆ ಬೆಂಕಿಯಲ್ಲಿ
ಸುಟ್ಟುಹೋಗುತ್ತಾನೆ ದೊರೆ
ಮತ್ತು
ನಮ್ಮನ್ನು ದಂಡಿಸುವ ದಂಡ


ತಾವೊ ಬಂದ ದಿನ
ಬೀದಿ ಖಾಲಿಯಾಗಿತ್ತು
ಖಾಲಿಯನ್ನು ನೋಡಿಯೇ
ಅವನು ಬರುತ್ತಾನೆ;
ಬೀದಿ ತುಂಬಿದ ದಿನ
ಬರಲು ತಾವೊಗೆ ಜಾಗವೇ
ಇರುವುದಿಲ್ಲ


ತಾವೊ ಸಿಂಹಾಸನ
ಖಾಲಿಯೊ ಭರ್ತಿಯೊ
ಇಡೀ ದಿನ ಚರ್ಚಿಸಿದರೂ
ತುಂಬಲಿಲ್ಲ ಏನೂ
ತಲೆ ಖಾಲಿ ಖಾಲಿ

‍ಲೇಖಕರು avadhi

24 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading