ಸರ್, ಧ್ಯಾನವೆಂದರೆ ಇದೇ ತಾನೆ?

ಸಂಚಯ ಪ್ರಹ್ಲಾದ್ ತಮ್ಮ ಹೊಸ ಸಂಕಲನ “ದಯಾ…ನೀ, ಭವಾ…ನೀ” ಇದೇ ಭಾನುವಾರ ೨೬/೦೧/೨೦೨೦ ರಂದು ಸುಚಿತ್ರದಲ್ಲಿ ಬಿಡುಗಡೆ ಆಗಲಿದೆ.
ಸಂಕಲನದ ಮುನ್ನುಡಿ ಜಿ.ಕೆ.ರವೀಂದ್ರ ಕುಮಾರ್ ಬರೆಯಬೇಕಿತ್ತು. ಅವರ ಅಕಾಲಿಕ ಸಾವಿನಿಂದಾಗಿ ಮುನ್ನುಡಿ ಇಲ್ಲದೇ ಪುಸ್ತಕ ಪ್ರಕಟವಾಗುತ್ತಿದೆ.

ಪುಸ್ತಕದ ಕರಡು ಓದಿ ಪ್ರಹ್ಲಾದ್ ಗೆ ಬರೆದಿದ್ದ ಪತ್ರವನ್ನೇ ಬೆನ್ನುಡಿಯಾಗಿ ಅವರು ಹಾಕಿಕೊಂಡಿದ್ದಾರೆ.

ಡಿ.ಎಸ್. ರಾಮಸ್ವಾಮಿ

ಪ್ರಿಯ ಪ್ರಹ್ಲಾದ್

ನಿಮ್ಮ ಸಂಕಲನದ ಪಿಡಿಎಫ್ ಪ್ರತಿ ತಲುಪಿದೆ. ನಿಮ್ಮ ಹೊಸ  ಸಂಕಲನಕ್ಕೆ ನನ್ನನ್ನೆರಡು ಮಾತು ಬರೆಯಲು ಕೇಳಿದ್ದು ಆಶ್ಚರ್ಯ ಹುಟ್ಟಿಸಿದೆ. ಏಕೆಂದರೆ ನಮ್ಮಲ್ಲಿ ಬಹುತೇಕರು  ಸ್ವ ಪ್ರತಿಷ್ಠೆ ಮತ್ತು ಒಣ ಸಿದ್ಧಾಂತಗಳನ್ನು ಮೆರೆಸಲು ಈ ನಡುವೆ ಕವಿತೆಯನ್ನೂ ಗುರಾಣಿಯಂತೆ ಬಳಸುತ್ತಿರುವ ಸಂಧಿಗ್ದ ಕಾಲವಿದು. ಈ ಇಂಥ ಕಾಲದಲ್ಲಿ ನಮ್ಮ ಸಂಕಲನಗಳಿಗೆ ಮುನ್ನುಡಿ ಹಿನ್ನುಡಿ ಬೆನ್ನುಡಿಗಳಿಗೆ ನಾವಾಶ್ರಯಿಸುವುದು ಪೀಠಾಧಿಪತಿಗಳ ಬೆನ್ನು ಕೆರೆಯುವ ಸನ್ನಿಧಾನಕ್ಕೆ ಮತ್ತು ಆ ಅಂಥ ಗುರು ಪೀಠ ನಮ್ಮನ್ನು ನಮ್ಮ ಸಂಕಲನವನ್ನು ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಲ್ಲಲ್ಲೆಲ್ಲ ತೂರಿಸುವ ಹಿತಾಸಕ್ತಿ ಮತ್ತು ಶಕ್ತಿ ಹೊಂದಿದೆಯೇ ಅಂತ ಪ್ರಕಾಶನದ ಕರಾರಿಗೆ ಸಹಿ ಹಾಕುವ ಮೊದಲು ಖಾತರಿ ಮಾಡಿಕೊಳ್ಳುತ್ತೇವೆ.

ಈ ಇಂಥ ಸಂಧಿ (ವಾತದ) ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಏನೇನೂ ಅಲ್ಲದ ಆದರೆ ಬದುಕಿನ ಬಂಡಿಗೆ ಕವಿತೆಯೊಂದೇ ಮೆಟ್ಟಿಲು ಅಂತ ನಂಬಿ ಅದನ್ನೇ ಆಶ್ರಯವಾಗಿಟ್ಟುಕೊಂಡಿರುವ ನನ್ನಂಥ ಅದೆಷ್ಟೋ ಮಂದಿ ಸಾಹಿತ್ಯೋಪಾಸಕರೆಲ್ಲರ ಪರವಾಗಿ ಅಭಿನಂದಿಸುತ್ತೇನೆ, ಶುಭಾಶೀರ್ವಾದಗಳು ನಿಮಗೆ ಎಲ್ಲೆಡೆಯಿಂದ ಹರಿದು ಬರಲಿ ಎಂದೂ ಹಾರೈಸುತ್ತೇನೆ.

ಇನ್ನು ನಿಮ್ಮ ಈ ಹೊಸ ಸಂಕಲನದ ಪದ್ಯಗಳನ್ನು ಕುರಿತು ಹೇಳುವ ಮೊದಲು ನೀವೇ ಕಟ್ಟಿ ಬೆಳೆಸಿದ ‘ಸಂಚಯ’ದ ಮೂಲಕ ಅದೆಷ್ಟು ಹೊಸ ಪ್ರತಿಭೆಗಳಿಗೆ ಹಾರುಮಣೆಯಾದಿರಿ ಮತ್ತು ಪ್ರಕಾಶನದ ಗಂಧ ಗಾಳಿಯ ಅರಿವೇ ಇಲ್ಲದ ನನ್ನಂಥ ಎಷ್ಟೊಂದು ಅನಾಮಿಕ ಮಿಂಚುಹುಳುಗಳನ್ನು ಮಿನುಗುವ ನಕ್ಷತ್ರಗಳನ್ನಾಗಿಸಿದಿರಿ. ಹಾಗೆ ಮೆರೆಯ ಹೊರಟ ಅದೆಷ್ಟೋ ಮಿಣುಕುಗಳು ಉಲ್ಕೆಗಳಂತೆ ಉರಿದು ಹೋದದ್ದೂ ಈಗ ಇತಿಹಾಸ. ಇರಲಿ, ಗಾಯದ ಕಲೆ ಕಂಡ ಕೂಡಲೇ ಅನುಭವಿಸಿದ ನೋವಿನ ಯಾತನೆ ನೆನಪಾಗುವುದು ಸಹಜ.

ಶ್ರೀನಿವಾಸ ರಾಜು ಮೇಶ್ಟ್ರು ಮತ್ತು ನೀವು ಪ್ರತಿ ವರ್ಷ ಕಾವ್ಯ ಸ್ಪರ್ಧೆ ನಡೆಸಿ ಕೈ ತುಂಬ ಪುಸ್ತಕಗಳನ್ನು ಕೊಡುತ್ತಿದ್ದಿರಿ. ಯಾವ ಪ್ರವೇಶ ಶುಲ್ಕವೂ ಇಲ್ಲದ ಆ ಸ್ಪರ್ಧೆಗೆ ನಾಮುಂದು ತಾಮುಂದೆಂದು ಬರುತ್ತಿದ್ದ ಅದೆಷ್ಟು ಕವಿತೆಗಳಿಗೆ ಸಂಚಯ ಆಶ್ರಯ ಕೊಟ್ಟು ಸಲಹಿತು. ನೆನೆದಾಗಲೆಲ್ಲ ನಿಮ್ಮ ನಿಸ್ಪೃಹ ಸಾಹಿತ್ಯ ಸೇವೆ ಕಣ್ಣ ಮುಂದೆ ಕಟ್ಟುತ್ತದೆ. ಇನ್ನು ಸಾಹಿತ್ಯ ಪತ್ರಿಕೆಗಳ ನಿಯತ ಪ್ರಸಾರವೇ ಇಲ್ಲದ ಕಾಲದಲ್ಲಿ ನೀವು ಸಂಚಯ ನಡೆದಷ್ಟೂ ಕಾಲವೂ ನಿಯಮಿತವಾಗಿ ನಿಯತಕಾಲಿಕವಾಗಿ ನಡೆಸಿದಿರಿ. ಸಂಯುಕ್ತ ಸಂಚಿಕೆ ಎಂದು ಅಚ್ಚು ಹಾಕಿ ನಾಮ ಹಾಕುವವರ ನಡುವೆ ನಿಮ್ಮದು ಏಕಾಂಗಿ ಹೋರಾಟವಾಗಿತ್ತು.

ವಿಶೇಷ ಸಂಚಿಕೆಗಳ ಮೂಲಕ ಸಂಚಯ ಸಾಹಿತ್ಯ ಚರಿತ್ರೆಯಲ್ಲಿ  ಇತಿಹಾಸದ ಪುಟಗಳನ್ನೇ ಬರೆಯಿತು. ಲಂಕೇಶ್, ತೇಜಸ್ವಿ, ಡಾ‌. ರಾಜ್, ಹಿಂದ್ ಸ್ವರಾಜ್ ಒಂದೇ ಎರಡೇ? ಈಗಲೂ ನನ್ನ ಪುಸ್ತಕದ ಕಪಾಟಲ್ಲಿ ಸಂಚಯದ ಸಂಚಿಕೆಗಳು ಸುಭದ್ರವಾಗಿ ಕೂತಿವೆ, ರೆಫರೆನ್ಸಿಗೆಂದು ತೆಗೆದಾಗಲೆಲ್ಲ ಮತ್ತೇನೋ ಹೊಸ ದಾರಿ ಕಾಣಿಸಿದ್ದೂ ಉಂಟು.

“ಡ್ರೀಮರ್” (1995) ನಿಮ್ಮ ಮೊದಲ ಸಂಕಲನ. ಆಮೇಲೆ ನನ್ನಂಥವರ ಒತ್ತಾಯಕ್ಕೆ ತಂದದ್ದು “ನಾಳೆಯಿಂದ”.(2005) ೯೦ರ ದಶಕದ ಮೊದಲ ಸಂಕಲನದ ೧೧ ವರ್ಷಗಳ ತರುವಾಯ ಬಂದ ‘ನಾಳೆಯಿಂದ’ ಸಂಕಲನ ‘ಡ್ರೀಮರಿನ ಕನಸುಗಳು ಕರಗಿ ಹೋದ ಕುರುಹುಗಳಾಗದೇ ನಾಳೆಯಿಂದಲಾದರೂ ಮತ್ತೆ ಯತ್ನಿಸಿ ಸಫಲನಾಗುವ ಕನಸಿನ ವಿಸ್ತರಣೆಯೇ ಆಗಿತ್ತು. ನವ್ಯದ ಪ್ರಭಾವಳಿಯಲ್ಲೇ ಅರಳಿದ್ದ “ಡ್ರೀಮರ್” ‘ನಾಳೆಯಿಂದ’ ತರುವಾಗಲೇ ಸಾಕಷ್ಟು ಮಾಗಿದ್ದ. ನವ್ಯದ ಸಹಜ ಪ್ರತಿಮೆಗಳಾದ “ಸ್ವ” ಮತ್ತು ಎಲ್ಲವನ್ನೂ ಕಟೆದು ಕಟ್ಟುವ ಕನಸುಗಳಿದ್ದ ಡ್ರೀಮರ್ ನಾಳೆಯಿಂದ ತರುವಾಗ ವಯಸ್ಸಿನಲ್ಲಿ ನಿರ್ಧಾರದಲ್ಲಿ ಮತ್ತು ಅನುಭವ ಜನ್ಯ ಬದುಕ ಶ್ರೀಮಂತಿಕೆಯಿಂದ ಮಾಗಿದ್ದ. ಹಾಗಾಗಿ ಯಾವತ್ತಿಗೂ ಪೋಸ್ಟ್ ಪೋನ್ ಮಾಡುತ್ತಲೇ ಇರುವ ನಮ್ಮ ಕೆಲಸ ಕಾರ್ಯಗಳ ವೈಖರಿಗೆ ನೀವು ಕೊಟ್ಟ ದಿಟ್ಟ ಉತ್ತರ ಅದಾಗಿತ್ತು. ಸ್ವತಃ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕನಾಗಿ ನೀವು ಸಂಕಿರಣ ಶೀರ್ಷಿಕೆಯ ಮೂಲಕ ಅದೆಷ್ಟು ಹೊಸ ಪ್ರತಿಭೆಗಳ ಪುಸ್ತಕಗಳಿಗೆ ಅವರಿವರಿಗೆ ಹೇಳಿ, ಬೇಡಿ ವಿಮರ್ಶೆ ಬರೆಸಿದಿರಿ. ದುರಂತ ಅಂದರೆ ನಿಮ್ಮ ಪುಸ್ತಕಗಳ ಬಗ್ಗೆ ಈ ಯಾವ ಮಹನೀಯರೂ ಸೊಲ್ಲೇ ಎತ್ತಲಿಲ್ಲ.

ಸದ್ಯ ಇದೀಗ ನೀವು ಸಂಚಯದ ಪ್ರಕಟಣೆ ನಿಂತ ಮೇಲೆ ಪುನಃ ಪದ್ಯದ ಸಂಗಕ್ಕೆ ಬಿದ್ದಿರಿ. ಯಾವತ್ತೂ ಬರಹಗಾರನಿಗೆ ಕವಿತೆಯೇ ತಂಗುದಾಣ, ನಿಲುದಾಣ ಮತ್ತು ಹಲವೊಮ್ಮೆ ಅಡಗು ತಾಣ. ಯಾಕೆಂದರೆ ನಮ್ಮೊಳಗಿನ ಕನಸು, ಊಹೆ, ಅನಿಸಿಕೆ, ಸಮಾಜದ ಮೇಲಣ ಟಿಪ್ಪಣಿಗಳಿಗೆ ಕವಿತೆಯ ಪೋಷಾಕು ತೊಡಿಸಿ ನಮ್ಮ ಒಳ ಮನಸ್ಸಿನ ಮಾತನ್ನು ಹೇಳುತ್ತೇವೆ. ಅದು ಮುಟ್ಟ ಬೇಕಾದವರಿಗೆ ಮುಟ್ಟಿತೋ ಇಲ್ಲವೋ ನಮ್ಮ ಶಂಖ ನಾವು ಊದುತ್ತಲೇ ಇರುತ್ತೇವೆ. ಎಲ್ಲೋ ಅಪರೂಪಕ್ಕೆ ಕೆಲವರು ಕ್ಲಿಕ್ಕಾಗಿ ಬಹುಮಾನ, ಪ್ರಶಸ್ತಿ, ಪಾರಿತೋಷಕಗಳ ಪಡೆದು ಇದ್ದಲ್ಲೇ ಸುತ್ತ ತೊಡಗುತ್ತಾರೆ‌. ಆದರೆ ಸಾಂಸ್ಕೃತಿಕ ಲೋಕದ ಸಕಲೆಂಟು ದೇವರ ಸಂಪರ್ಕವಿದ್ದೂ ನೀವು ಸಂಕೋಚದಲ್ಲೇ ಉಳಿದು ಬಿಟ್ಟಿರಿ. ಆ ನಿಮ್ಮ ಸಂಕೋಚವೇ ನಿಮ್ಮೆಲ್ಲ ಪದ್ಯಗಳ ಆತ್ಮವಾಗಿ ಮತ್ತು ನೀವು ನಡೆಯುತ್ತಿರುವ ನಿಮ್ಮದೇ ದಾರಿಯ ಪ್ರತಿಫಲನವಾಗಿಯೂ ನನಗೆ ಸ್ಪಷ್ಟವಾಗಿ ಕಾಣುತ್ತಿದೆ.

ಇನ್ನು ನಿಮ್ಮ ಈ “ದಯಾ..ನೀ  ಭವಾ..ನೀ” ಸಂಕಲನದ

ಪದ್ಯಗಳನ್ನು ಓದುತ್ತ ಓದುತ್ತ ಟಿಪ್ಪಣಿಸುತ್ತ ಹೋದ ಹಾಗೆ ಇಲ್ಲಿನ ಎಲ್ಲ ಪದ್ಯಗಳೂ ನಿಮ್ಮ ಮೊದಲೆರಡು ಸಂಕಲನಗಳ ಮುಂದುವರೆದ ತಂತುವಾಗಿಯೇ ನನಗೆ ಕಂಡಿದೆ. ಹಾಗೆ ನೋಡಿದರೆ ಎಲ್ಲ ಕವಿಗಳ ಹಣೆಬರಹವೂ ಇಷ್ಟೇ ಆಗಿದೆ. ಆಗಿರಬೇಕು ಕೂಡ. ತಾನು ಬಯಸಿದ ತಾನು ನಂಬಿದ ಸಿದ್ಧಾಂತದ ಪರ ವಕಾಲತ್ತು ಹಾಕುವ ಕವಿಯೊಬ್ಬ  ಎಷ್ಟೆಲ್ಲ ಸಂಕಲನ ತಂದರೂ ತಾನು ನಂಬಿದ ಸಿದ್ಧಾಂತಕ್ಕೆ ನಿಷ್ಠೆ ಇಟ್ಟುಕೊಂಡಿದ್ದು  ಸಂಕಲನದಿಂದ ಸಂಕಲನಕ್ಕೆ ಮತ್ತಷ್ಟು ವ್ಯಾಪಿಸುತ್ತ ಹೋಗುತ್ತಾನೆ. ಎಲ್ಲೊ ಕೆಲವರು ಶೋಕಿಗೆ ಅಥವ ಲೋಕಪ್ರಿಯತೆಯ ಹಂಬಲಕ್ಕೆ ಬಿದ್ದು ತಮ್ಮ ಸೊಂಟ ತಾವೇ ಮುರಿದುಕೊಂಡು ಅಲ್ಲಿಂದಿಲ್ಲಿಗೆ ಕುಪ್ಪಳಿಸುತ್ತ ಎಲ್ಲಿಯೂ ಸಲ್ಲದವರಾಗುತ್ತಾರೆ ಮತ್ತು ಒಟ್ಟೂ ಕಾಣ್ಕೆಯ ಕಾರಣದಿಂದ ಹೊರಗೇ ಉಳಿಯುತ್ತಾರೆ.

ನಿಮ್ಮ “ಡ್ರೀಮರ್” ಪುಸ್ತಕದ ಮುನ್ನುಡಿಯಲ್ಲಿ ಎಕ್ಕುಂಡಿ ಅದೆಷ್ಟು ಚೆನ್ನಾಗಿ ನಿಮ್ಮ ಪದ್ಯಗಳನ್ನು ಬಗೆಯುತ್ತಲೇ ಅವನ್ನು ಧ್ಯಾನಿಸುವ ಆಪ್ತ ಶೈಲಿಯನ್ನು ಹೇಳಿಕೊಟ್ಟಿದ್ದಾರೆಂದರೆ ಅವರ ಮಾತಿನ ಮುಂದೆ ನಾನೇನು ಹೇಳಿದರೂ ಅದು ಪೇಲವವೇ ಆಗುತ್ತದೆ. ಇರುವ ಕೇವಲ ೧೮ ಕವಿತೆಗಳಲ್ಲೂ ಅದೇನು ನವ್ಯದ ಪ್ರತಿಮೆಗಳನ್ನು ಇಡಿಕರಿಸಿಟ್ಟಿದ್ದೀರಿ ಎಂದರೆ ಈ ಕಾಲದ ಹುಡುಗರು ತಮ್ಮ ನೂರು ಪದ್ಯಗಳಲ್ಲೂ ಅಲ್ಲಿನ ರೂಪಕ ಮತ್ತು ಪ್ರತಿಮೆಗಳನ್ನು ಮತ್ತೆ ಸೃಷ್ಟಿಸಲಾರರು.

ರಸ್ತೆ ಬದಿಯಂಗಡಿಯಲ್ಲಿ

ಬಿಡಿಸಿಟ್ಟ ಹಣ್ಣು

ಮುತ್ತಿರುವ ನೊಣದ ಹಿಂಡಲ್ಲೂ

ಅಲ್ಲೊಂದು ಜೇನು    (ಪ್ರತೀಕ್ಷೆ) ಅಂತ ಧೇನಿಸಿದ ನೀವು

ಗಂಡು ಬಿಕ್ಕುವ ಹಾಗಿಲ್ಲ ಹೆಣ್ಣು ನಕ್ಕ ನೆನಪಿಲ್ಲ

ಬೆಳುಕು ಬೀರಿದ್ದ ಪ್ರಖರ ಬಲ್ಬುಗಳು

ಬರ್ನಾಗಿ ಬಿತ್ತು ಕನಸು,

ನೇಯುವ ಗಿರಣಿ ಬೆಂಕಿ ನುಂಗಿತ್ತು(ಬೃಹನ್ನಳೆಯ ಸ್ವಗತ)

ಅಂತ ಹೇಳುವಾಗ ಬದುಕಿನ ಎರಡೂ ತುದಿಗಳನ್ನು ಅದೆಷ್ಟು ಸಲೀಸಾಗಿ ದಾಟಿಬಿಡುತ್ತೀರಲ್ಲ ಅದೇ ನನ್ನ ಪಾಲಿನ ಸೋಜಿಗ.

ಡ್ರೀಮರಿನ ಎಲ್ಲ ಪದ್ಯಗಳೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನವ್ಯದ ಭರ್ಜರಿ ಪೋಷಾಕು ತೊಟ್ಟಿವೆ. ಆ ಪೋಷಾಕಿಗೆ ಮುಖ್ಯವಾಗಿ ಅಡಿಗ ಕ್ವಚಿತ್ತಾಗಿ ರಾಮಾನುಜನ್ ಮತ್ತು ಅಪರೂಪಕ್ಕೆ ಎಕ್ಕುಂಡಿ ಬಟ್ಟೆ ಕೊಟ್ಟಿದ್ದಾರೆ.

ಗೋತಾ ಹೊಡೆದ ಗಾಳಿಪಟ

ಕರೆಂಟು ಕಂಬಿಯ ಮೇಲೆ

ತಲೆ ಕೆಳಗು ಮಲಗಿತ್ತು    (ಗಾಳಿಪಟ)

ಅನ್ನುವಾಗ ಯಾವ ಯಾವುವೋ ಕಾರಣಕ್ಕೆ ಉತ್ಸಾಹ ಕಳಕೊಂಡ ನಮ್ಮೆಲ್ಲರ ಬದುಕಾಗಿ ಆ ಗಾಳಿಪಟ ಕಾಡುತ್ತದೆ.

ಇನ್ನು ಸಂಕಲನದ ಶೀರ್ಷಿಕೆಯೂ ಆಗಿರುವ “ಡ್ರೀಮರ್” ಓದಿದ ಮೇಲೆ ಅಂತರ್ಜಾಲದಲ್ಲಿ ಅದಕ್ಕೆ ಪ್ರೇರಣೆಯಾದ ಜಪಾನೀ ಕತೆಯನ್ನು ಹುಡುಕಿ ಓದಿದೆ. ತಲ್ಲಣಿಸಿದೆ. ಏಕೆಂದರೆ ಎಲ್ಲವನ್ನೂ ಮರೆತು ಭ್ರಮೆಯಲ್ಲಿ ಕೊಂಚಕಾಲ ಮಾತ್ರವೇ ಇರಬಲ್ಲೆವು. ಆಮೇಲೆ ಕಾಡುವುದು ಮತ್ತದೇ ನಮ್ಮ ಸುತ್ತಣದ ನಮ್ಮ ಜೊತೆಗಾರರ ಬದುಕೇ! ವಾಸ್ತವದ ಗಹಗಹಿಕೆಯ ಮುಂದೆ ಕ್ಷಣ ಸುಖದ್ದು ಬರಿಯ ಅಮಲು.

ಕಡೆಗೂ ನಾವು ಬಯಸುವುದೇನು ಪ್ರಹ್ಲಾದ್, “ಸಾಬರ ಹುಡುಗ ಮತ್ತು ಹಳೇ ಮರ” ಕವಿತೆಯ ಸಾಲು;

ಕೊಡು ಕೊಡು ನನಗೊಂದೇ ಒಂದು ಹೂ ಕೊಡು!

ಅಂಗಿಗಿಟ್ಟು ಗುನುಗುವೆ ನನ್ನ ಹಾಡು!

ಆದರೆ ಸದ್ಯದ ವರ್ತಮಾನ ಹೂವನ್ನಿರಲಿ ಒಣ ಎಲೆಯನ್ನೂ ಕೊಡದಷ್ಟು ಕಠಿಣವಾಗಿದೆ, ಕ್ರೂರವೂ ಆಗಿದೆ.

ಇನ್ನು ನಿಮ್ಮ ಎರಡನೆಯ ಸಂಕಲನ “ನಾಳೆಯಿಂದ” ದ ಕೆಲವು ಪದ್ಯಗಳ ಸಾಲು ಸ್ಮರಿಸಿ ಮುಂದಕ್ಕೆ ತೆರಳುತ್ತೇನೆ.

ಈ ಸಂಕಲನದಲ್ಲಿ ಒಟ್ಟಾಗಿ ಇರುವುದು ಕೇವಲ ೨೫ ಕವಿತೆಗಳು. ತಾನು ಹೇಳ ಹೊರಟದ್ದನ್ನು ಎಲ್ಲಿ ಓದುಗ ದೊರೆ ಗಮನಿಸುವುದಿಲ್ಲವೋ ಎನ್ನುವ ಕಾರಣ ಕೊಟ್ಟು ನೂರು ಪದ್ಯಗಳನ್ನು ಅಡಿಕಿರಿಸಿ ಯಾವುದನ್ನೂ ಓದದಂತೆ ಮಾಡಿಕೊಂಡ ಹಲವು ಕವಿಗಳು ನಮಗೆ ಗೊತ್ತಿದ್ದಾರೆ. ನಾನೀಗಾಗಲೇ ಹೇಳಿದಂತೆ ಸಂಕಲನದಿಂದ ಸಂಕಲನಕ್ಕೆ ಕವಿಯ ಪಯಣದ ಹಾದಿ ಮುಂದುವರೆಯುವುದೇ ವಿನಾ ಅವನು ನಂಬಿದ ದಾರಿಯಲ್ಲ. ಹಾಗಾಗಿ ಕವಿ ಸೃಷ್ಟಿಸಿಕೊಂಡ ದಾರಿ ಇದುವರೆಗೂ ಯಾರೂ ಸವೆಸದ ಮತ್ತು ಆ ಕವಿಯೇ ಕಂಡು-ಕೊಂಡ ಕಚ್ಚಾ ರಸ್ತೆ ಆಗಿರಬೇಕು ಎನ್ನುವುದು ಲಾಕ್ಷಣಿಕರ ಅಭಿಮತ. ಇಲ್ಲಿರುವ ೨೫ ಕವಿತೆಗಳೂ ಡ್ರೀಮರಿನ ಮುಂದುವರೆದ ಕನಸುಗಳೇ. ಎಲ್ಲೋ ನವ್ಯದ ಬಿಸುಪು ಕಡಿಮೆಯಾದಂತೆ ಕಂಡು ಆಡುನುಡಿ ಕಂಡಿದೆ ಅಂದ ಮಾತ್ರಕ್ಕೇ ಇವು ಯಾವುವೂ ನವ್ಯದ ಮೂಸೆಯಲ್ಲಲ್ಲದೆ ಬೇರೆಲ್ಲಿಂದಲೂ ಉದಯಿಸಿಲ್ಲ.

ಎಚೆಸ್ವಿ ಮುನ್ನುಡಿ ಇರುವ ಈ ಸಂಕಲನದ ಶೀರ್ಷಿಕೆಯೇ ಬಹುಮುಖ್ಯ ಪದ “ನಾಳೆಯಿಂದ”. ನಮ್ಮ ಸೋಲನ್ನು ಒಪ್ಪಿಕೊಳ್ಳದ ಮತ್ತು ಅನಿಸಿದ್ದನ್ನು ಮಾಡಲಾಗದ ನಾವು ಸುಳ್ಳು ಸುಳ್ಳೇ ಮತ್ತೆ ಮತ್ತೆ ಹೇಳಿಕೊಳ್ಳುವ ಮಾತೆಂದರೆ

” ನಾಳೆಯಿಂದ”, ಇಂಗ್ಲಿಶಿನಲ್ಲಿ procrastination ಎಂಬ ಪದಕ್ಕೆ ತೀರ ಸಮೀಪದ್ದು. ಒಂದಲ್ಲ ಒಂದು ಕಾರಣ ಕೊಟ್ಟು ಮಾಡಬೇಕಾದ ಕೆಲಸವನ್ನು ( ಕಳ್ಳಂಗೊಂದು ಪಿಳ್ಳೆ ನೆವ) ಮುಂದಕ್ಕೆ ಹಾಕುವುದಕ್ಕೆ ನಾಳೆಯಿಂದ ಅಂತ ಜಾರಿಕೊಳ್ಳುತ್ತೇವಲ್ಲ ಅದೇ ಆಗಿದೆ. ಪ್ರಾಯಶಃ ಮತ್ತೆ ಪದ್ಯ ಬರೆಯಲು ತೊಡಗುತ್ತೇನೆಂದು ನೀವು ಅವತ್ತೇ ನಿರ್ಧರಿಸಿದ್ದಿರೋ ಹೇಗೆ??

 

ಜಗದ ಮೋಡದ ಮಾಡಿಗೆ

ಯಾರು ಹೆಸರಿಟ್ಟವರು

ಏರಿದಷ್ಟೂ ಎವರೆಷ್ಟು

ಉಳಿಯುತ್ತದೆ ರವಷ್ಟು ( ಮೆಟ್ಟಲಾರದ ಮುಗಿಲು)

ಅಂತ ಆರಂಭವಾಗುವ ಪದ್ಯ ಆ ಹಿಮದ ಆಲಯದ ಏರುವೆತ್ತರ ಬಿಟ್ಟು

ಮುದುರಿ ನಿಂತ ಕುದುರೆಗೆ

ಕೆನೆತವಿಲ್ಲ ಆವತ್ತಿನ ಮೊರೆತವಿಲ್ಲ

ಅಂತ ಮುಂದುವರೆದು ಕಡೆಗೆ ನಿಲ್ಲುವುದು ಹೀಗೆ;

ಮೆಟ್ಟಿ ಬಾವುಟ ನೆಟ್ಟ

ಪ್ರತಿ ಎತ್ತರದ ತುದಿಗೂ

ಒಂದೊಂದು ಬಟಾಬಯಲು

ಮೆಟ್ಟಲಾರದ ಮುಗಿಲು.

ಅಲ್ರೀ ನಮ್ಮೆಲ್ಲರೊಳಗಿನ ದೌರ್ಬಲ್ಯವನ್ನು ಹೀಗೆ ಅನಾಮತ್ತು ಎತ್ತಿ ಆಡುತ್ತೀರಲ್ಲ, ಹಾಗೇ ತಲೆಗೆ ಮೊಟಕುತ್ತೀರಲ್ಲ, ನಿಮ್ಮನ್ನು ನವ್ಯದ ಶಾಲೆಯ ತಂಟೆಕೋರ ವಿದ್ಯಾರ್ಥಿ ಅನ್ನದೇ ವಿಧಿಯಿಲ್ಲವಲ್ಲ!

ಹತ್ತಿ ಹತ್ತಿ ಎತ್ತರಕ್ಕೆ

ಇನ್ನೂ ಎತ್ತರಕ್ಕೆ

ಕಾಣಲಾರದು ಯಾವ

ಜಗದ ನೋವು ( ಭೀಮಣ್ಣನ ರಾಮಕಲಿ)

ಭೀಮಸೇನ ಜೋಷಿಯವರ ‘ರಾಮ್ ಕಲಿ’ ರಾಗ ಕೇಳಿ ಅಂತ ಪದ್ಯದ ತಳದಲ್ಲಿ ನಿಮ್ಮ ಟಿಪ್ಪಣಿ ಇದೆ. ನಿಜವಾದ ರಾಮನನ್ನು (ರಾಮ ಅಂದರೆ ಆನಂದ) ಅನುಸರಿಸಿದರೆ ಹತ್ತಿಯಂತೆ ಹಗುರಾಗಿ ಎಂಥ ಎತ್ತರಕ್ಕೂ ಹತ್ತಿ ನಿಂತು ಜಗದೆಲ್ಲ ನೋವ ಪರಿಹಾರ ಅಂತ ಅರ್ಥೈಸಿಕೊಂಡೆ. ಜೀವ ನಿರುಮ್ಮಳವಾಯಿತು.

ಇನ್ನು ‘ಒಂದು ವಿರಳ ಭೇಟಿ’ ಅನ್ನುವ ಸರಳ ಪದ್ಯ ಓದುವಾಗ ಯಾಕೋ ಪ್ರತಿಭಾ ನಂದಕುಮಾರರ “ನಾವು ಹುಡುಗಿಯರೇ ಹೀಗೆ” ನೆನಪಾಯಿತು. ಆ ಪದ್ಯದಲ್ಲಿ ಕವಿ ಗೆಳತಿಯ ಜೊತೆ ಏನೇನನ್ನೋ ಮಾತಾಡುತ್ತ ಮತ್ತೆ ಹಳೆಯ ಸ್ನೇಹವ ನೆನೆದು ಕಡೆಗೆ ಅವನ ಅವಳಲ್ಲೂ ತನ್ನ ಬಿಂಬವನ್ನೇ ಕಾಣುತ್ತಾಳೆ. ಆದರೆ ನಿಮ್ಮ ಈ ಪದ್ಯದ ಸರಾಗ ಓಟ ಆ ಪದ್ಯದ ಹಾಗೇ ಲಯವರಿತ ಹದದಲ್ಲಿ ಓಡುತ್ತೋಡುತ್ತಲೇ ಆಪತ್ತಿಗೆ ಆಗದ ಗೆಳೆಯನನ್ನು ಸ್ಮರಿಸುತ್ತದೆ. ಗೇಲಿ ಮಾಡುತ್ತದೆ ಮತ್ತು ಈ ಎರಡೂ ಪದ್ಯಗಳಲ್ಲಿ ಅಡಗಿರುವ ಗಂಡು ಹೆಣ್ಣುಗಳ ವಿಷಾದ ಇದೆಯಲ್ಲ ಅದನ್ನು ನೀವಿಬ್ಬರೂ ಕವಿಗಳು ಅದೆಷ್ಟು ಚಂದಾಗಿ ಓದುಗನಲ್ಲಿ ಕಸಿಮಾಡಿ ಹಿಂಸಿಸುತ್ತೀರೆಂದರೆ ನೀವು ಯಾವತ್ತೂ ಕವಿಯಾಗೇ ಹುಟ್ಟಿರೆಂದು ಶಪಿಸುವಷ್ಟು!!

ಹಬೆ ಮೈಯ ಪೌಡರು ಹೂ

ಸು ವಾಸನೆಗಳ ಅಡರು

ಸಿಹಿಯಂಗಡಿಯ ಷೋಕೇಸಿನೊಳಗೆ

ಸಿಕ್ಕ ನೊಣಗಳ ಹಾಗೆ….(ಲಿಫ್ಟಿನೊಳಗಿನ ಕನ್ನಡಿ)

ಅದೆಷ್ಟು ಸಲೀಸಾಗಿ ಸಾಗುವ ಲಿಫ್ಟಿನ ಪ್ರತಿಮೆಯ ಮೂಲಕ ಏರುವ ಇಳಿಯುವ ಬದುಕಿನ ರೀತಿಯನ್ನು ಕರೆಂಟು ತಪ್ಪಿದ ಸ್ತಬ್ಧ ಸ್ಥಿತಿಗೆ ನೂಕಿ ದಿನದ ತೇರಿಗೆ ಹೋಲಿಸುತ್ತಲೇ ( ತೇರು ಅಂದರೆ ಚಟ್ಟ ಅನ್ನುವ ಅರ್ಥವೂ ಇದೆ) ಮತ್ತೊಂದು ವಿಸ್ಮಯಕ್ಕೆ ನೂಕುವುದು ಅದು ಸಾಧ್ಯವಾಗುವುದು ಭಾಷೆಯ ಮೇಲೆ ಅಪರಿಮಿತ ಹಿಡಿತದಿಂದಲೇ ಹೊರತು ತೋರಿಕೆಯ ಭಾಷೆಯಿಂದ ಅಲ್ಲ ಅಂತ ಸಾಬೀತು ಪಡಿಸುತ್ತೀರ.

ನಿಮ್ಮೀ ಸಂಕಲನದ ಅತ್ಯಂತ ರೋಚಕ ಮತ್ತು ವ್ಯಂಗ್ಯದ ನೆರಳಲ್ಲೇ ಅರಳಿರುವ “ಬನಶಂಕರಿಯ ಹಿರಿಯ ಕವಿಗಳು” ಕವಿತೆಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಲಾರೆ. ಮುಂದೊಂದು ದಿನ ನಮ್ಮ ನಂತರದ ಕವಿಗಳು ಇದೇ ಇದೇ ಮಾತನ್ನು ನಮ್ಮತ್ತಲೂ ತೂರಿಬಿಡದಿದ್ದರೆ ಆಮೇಲೆ ಕೇಳಿ.

‘ಹಾಳು ಕೋಳಿಯ ಕೂಗಿಗೆ’ ಅನ್ನುವ ಕವಿತೆ ಎಲ್ಲಿಂದಲೋ ಹೊರಟು ಮತ್ತೆಲ್ಲಿಗೋ ಜಿಗಿದು ಕೆಂಟುಕಿ ಬಾಣಲೆಯಲ್ಲೂ ಉರುಳಿ ಗವಿ ಗಂಗಾಧರನಿಗೂ ನಮಿಸಿ ಷರೀಫಜ್ಜನ ಕೋಡಗ ನುಂಗಿದ ಕೋಳಿಯನ್ನೂ ತೋರುತ್ತದಲ್ಲ ಆ ಪ್ರಜ್ಞೆಗೆ ಕನ್ನಡ ಪರಂಪರೆಯ ಸೂಕ್ಷ್ಮ ತಿಳುವಳಿಕೆ ಇಲ್ಲದಿದ್ದರೆ ಇಂಥ ನೇಯ್ಗೆ ಕಡು ಕಷ್ಟದ್ದು.

ಪ್ರಾಯಶಃ ನಿಮ್ಮ ಮಗಳ ಬಾಲ್ಯದ ಅವತರಿಣಿಕೆಯಾದ “ಮುನ್ನಿಯ ಸಾಲುಗಳು” ಪ್ರತಿ ಅಪ್ಪಂದಿರೂ ಅಚ್ಚರಿಯಿಂದ ಬೆರಗು ಗಣ್ಣಲ್ಲಿ ತಮ್ಮ ತಮ್ಮ ಮಕ್ಕಳನ್ನು ಕಾಣಬೇಕಿರುವ ರೀತಿಯ  ಅತ್ಯಾಪ್ತ ಚಿತ್ರದ ಮರು ಜೋಡಣೆ.

ಈ ಸಂಕಲನದ ಅತಿ ಮುಖ್ಯ ಪದ್ಯ ” ಬದಲಾವಣೆ”. ಯಾವ ಕಾರಣಕ್ಕೆ ಅದು ಮುಖ್ಯ ಅಂತ ವಕಾಲತ್ತು ಹಾಕುವ ಮೊದಲು ಆ ಪದ್ಯದಲ್ಲಿ ಜಿಯಾಗ್ರಫಿಕ್ ಚಾನೆಲ್ಲಿನ ಚಿತ್ರದಲ್ಲಿ ಕಣ್ಣ ನೆಟ್ಟಿರುವಾಗ ಅಪ್ಪ ಛಾನೆಲ್ ಬದಲಾಯಿಸು ಅನ್ನುತ್ತಾನೆ ಅಂತ ಸುರುವಾಗುವ ಪದ್ಯ ಮತ್ತೆಲ್ಲೆಲ್ಲೋ ಓಡಾಡಿ ದಣಿದು ಆಸ್ಪತ್ರೆಯ ಸಾವ ಸಮ್ಮುಖದಲ್ಲೂ ಛಾನೆಲ್ ಬದಲಾಯಿಸು ಎನ್ನುವಾಗ ಬದುಕಿನ ಛಾನೆಲ್ಲನ್ನೋ ಟಿವಿಯ ಛಾನೆಲ್ಲನ್ನೋ ಅಥವ ಒಟ್ಟೂ ತತ್ವ ನಿಷ್ಠೆಯ ಛಾನೆಲನ್ನೇ ಬದಲಿಸಬೇಕೋ ಅನ್ನುವ ದ್ವಂದ್ವಕ್ಕೆ ನೂಕುತ್ತಲೇ ಕಡೆಯಲ್ಲಿ ಮಗಳು ” ಪಪ್ಪಾ ಛಾನೆಲ್ ಬದಲಾಯಿಸು” ಅನ್ನುವಾಗ ಮುಟ್ಟಿಸುವ ಒಳೇಟು ಅಷ್ಟು ಸುಲಭಕ್ಕೆ ಮರೆಯಲು ಸಾಧ್ಯವೇ ಆಗದಂತಹುದು.

ಇನ್ನು ನಾನು ಹೆಸರಿಸದೇ ಬಿಟ್ಟ ಪದ್ಯಗಳೆಲ್ಲ ನಗರ ಜೀವನದ ಹತಾಶೆಯ ಚಿತ್ರಣಗಳು. ಒಂದಕ್ಕಿಂತ ಒಂದು ಒಯ್ಯುವ ಪರಿಜುಗಳು ನಮ್ಮ ನಮ್ಮ ಓದಿಗೆ ನಮ್ಮ ನಮ್ಮ ಅನುಭವದ ಒರತೆಗೆ ಸಿಕ್ಕಾಗ ಮಾತ್ರ ಅರಳಬಲ್ಲ ವಿಷಾದಗಳ ಒಟ್ಟು ಮೊತ್ತ.

ನಿಮ್ಮ ಹೊಸ ಸಂಕಲನ “ದಯಾ ನೀ ಭವಾ ನೀ” ಕೂಡ ಇಂಥ ವಿಷಾದಗಳನ್ನೇ  ತನ್ನೊಳಗೆ ಹುದುಗಿಸಿಕೊಂಡ ಕಾರಣದಿಂದಲೇ ಇಲ್ಲಿನ ೪೦ ಕವಿತೆಗಳ ಕೊಲಾಜ್ ಒಂದೇ ಓದಿಗೆ ದಕ್ಕಿಬಿಡುವ ಸಾಧ್ಯತೆಗಳಿಂದ ಅಂತರ ಕಾಪಾಡಿಕೊಂಡಿದೆ. ಒಬ್ಬ ಕವಿಯ ಒಂದೆರಡು ರಚನೆ ಗಮನಿಸಿ ಮುಂದಿನವೂ ಹೀಗೇ ಇರಬಹುದೆನ್ನುವ ಅಂದಾಜನ್ನು ಹಾಗೇ  ವಿಮರ್ಶಕ ಬುದ್ಧಿಯ ಅವಸರವನ್ನೂ ಇಲ್ಲಿನೆಲ್ಲ ಪದ್ಯಗಳೂ ಪ್ರಶ್ನಿಸುತ್ತವೆ. ಎ‍ದೆ ಗೂಡಿಗೆ ಕೈ ಹಾಕಿ ಉಸಿರ ಕಟ್ಟಿಸುತ್ತವೆ. ಸಂಕಟವನ್ನೇ ಸ್ಥಾಯಿಯನ್ನಾಗಿರಿಸಿಕೊಂಡಿರುವ ಇಲ್ಲಿನ ಪದ್ಯಗಳ ಬಗ್ಗೆ ಬರೆಯುವಾಗ ವರ್ತಮಾನದ ಪದ್ಯದ ಸಂಕಟ ಮತ್ತು ತೋರುಗಾಣಿಕೆಯ ಕವಿಸಂತತಿ ನನ್ನ ಕಣ್ಣ ಮುಂದೆ ಸುಳಿಯುತ್ತಿದೆ. ಆದರೂ ನವ್ಯದ ಕಡೆಕಡೆಯ ಫಸಲು ನವ್ಯೋತ್ತರ ಕಾಲದ ಅವಸರದ ಹೆರುವಿಕೆಯನ್ನು ಪ್ರಶ್ನೆ ಮಾಡುತ್ತಲೇ ಕವಿತೆಗೆ ಇರಲೇ ಬೇಕಾದ ಘನಸ್ತಿಕೆ ಮತ್ತು ಆಂತರಿಕ ಶಕ್ತಿಯ ಅಗತ್ಯವನ್ನು ಒತ್ತಿ ಹೇಳುತ್ತಿದೆ.

ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ ಅನ್ನಿಸಿದ್ದೆಲ್ಲವನ್ನೂ ಬರೆದು ಬರೆದ ತಕ್ಷಣವೇ ಪ್ರಕಟಿಸಿಯೂ ಬಿಡುವ ಅವಕಾಶವಿರುವ ವಾಟ್ಸ್ ಅಪ್ ಮತ್ತು ಮುಖಪುಸ್ತಕಗಳಲ್ಲಿ ವಿಪು(ಫ)ಲ ಕಾವ್ಯ ಕೃಷಿ ನಡೆಯುತ್ತಿದೆ. ಒಬ್ಬ ಕವಿ ತನ್ನ ಕಾವ್ಯ ಸೃಷ್ಟಿಗೆ ತನ್ನದೇ ಆದ ಮನೋಧರ್ಮವೊಂದನ್ನು ಸ್ಥಾಪಿಸಿಕೊಂಡಿರುತ್ತಾನೆ ಮತ್ತು ಸ್ಥಾಪಿಸಿಕೊಂಡಿರಲೇ ಬೇಕು. ಬದುಕಿನಲ್ಲಿ ನಿತ್ಯ ಕಾಡುತ್ತಲೇ ಇರುವ ಮೂಲಭೂತ ಸಮಸ್ಯೆಗಳಿಗೆ ಅವನು ನೀಡುವ ಪ್ರತಿಕ್ರಿಯೆ ಮತ್ತು ಅಂಥ ಸಮಸ್ಯೆಗಳು ಆ ಕವಿಯ ಭಾವಕೋಶದ ಮೇಲೆ ಕೆತ್ತಿದ ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತ್ಯಂತರಗಳು ಅವನ ಕಾವ್ಯ ಕ್ರಿಯೆಗೆ ಪುಷ್ಟಿ ನೀಡುತ್ತವೆ. ವರ್ತಮಾನದ ಸಂಗತಿಗಳಿಗೆ ತಟ್ಟನೆ ನೀಡಿ ಬಿಡುವ ಪ್ರತಿಕ್ರಿಯೆಗಳು ಬರಿಯ ಹೇಳಿಕೆಗಳಾಗೇ ಉಳಿದುಬಿಡುತ್ತವೆ. ಹಾಗಾದಾಗ ಅಪ್ಪಟ ಕಾವ್ಯ ಹುಟ್ಟಲಾರದು. ಹೀಗೆ ಲೋಕದ ಸಂಗತಿಗಳಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡುವಲ್ಲಿ ಇರುವ ಅತಿ ಸೂಕ್ಷ್ಮ ಸಂಗತಿಯೇ ಕಾವ್ಯವಾಗಿ ಅರಳುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವ ಹಲವು ಸಾಧ್ಯತೆಗಳ ಅರಿವಿನ ಜೊತೆಗೇ ಖಾಸಗಿ ಅನುಭವವನ್ನು ಪರಂಪರೆಯ ಕಣ್ಣಿನಿಂದ ನೋಡುವ ವ್ಯವಧಾನವೂ ಕವಿಗೆ ಇರಬೇಕಾಗುತ್ತದೆ. ನಮ್ಮ ಅನೇಕ ಯುವ ಕವಿಗಳಿಗೆ ಈ ತಾಳ್ಮೆ ಮತ್ತು ಸಂಯಮಗಳು ಇಲ್ಲದಿರುವುದರಿಂದಲೇ ಅವರಿಗೆ ಆ ಕ್ಷಣದಲ್ಲಿ ಅನ್ನಿಸಿದ್ದನ್ನು ಓದುಗರೂ ಕಾವ್ಯವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಿಟ್ಟಿದೆ.

ಸ್ವಮಗ್ನ ಸ್ಥಿತಿಗಳಲ್ಲಿ ಅನ್ನಿಸಿದ್ದನ್ನು ಕಾವ್ಯವೆನ್ನುವ ಆಧುನಿಕ ಕಾಲದಲ್ಲಿ ನವ್ಯದ ಶಾಲೆಯ ಕಡೆಯ ಬೆಂಚಿನ ವಿದ್ಯಾರ್ಥಿಗಳಾದ ನಮ್ಮ ತಲೆಮಾರಿನ ಕಡೆಯ ಕೊಂಡಿ ಪ್ರಾಯಶಃ ನೀವೆ. ನವ್ಯದ ಪ್ರತಿಮೆ ಮತ್ತು ರೂಪಕಗಳಾಚೆಗೂ ಹೃದಯದೊಳಕ್ಕೂ ಇಳಿಯುವ ಸಾರ್ಥಕ ಸಾಲುಗಳು ನಿಮ್ಮ ಹೊಸ ಸಂಕಲನದ ಕವಿತೆಗಳಲ್ಲಿ ಢಾಳಾಗಿವೆ.

ನಿಮ್ಮ “ನಾಳೆಯಿಂದ” ಸಂಕಲನದ ಮುನ್ನುಡಿಯಲ್ಲಿ ಎಚೆಸ್ವಿ ಕವಿತೆಯ ನಿರ್ಮಾಣದ ಹಂತದಲ್ಲಿ ಕವಿಗೆ ಬೇಕಾದ “ಸಂಯೋಜನೆ”ಯ ಬಗ್ಗೆ ಹೇಳುತ್ತ ಮೌನದ ಬಯಲು ಮತ್ತು ಶಬ್ದದ ಮಿನುಕಿನ ಅಂತಃಪಠ್ಯದ ಕುರಿತು ಸ್ಪಷ್ಟ ಮಾತಲ್ಲಿ ಹೇಳಿದ್ದಾರೆ. ಮುಂದುವರೆದ ಅವರು ಕವಿತೆಯ ಸಂಯೋಜನೆಯು ಅರ್ಥ ಮತ್ತು ಅದರ ಪ್ರವಹನದ ಶಕ್ತಿಯ ಮೇಲೆ ನಿಂತಿದೆ ಎನ್ನುತ್ತಲೇ ನಿಮ್ಮ ಕವಿತೆಗಳಲ್ಲಿ ಆ ಅರ್ಥ ಮತ್ತು ಸಂವಹನತೆಯ ನಡುವೆ ಬಿಕ್ಕಟ್ಟುಗಳಿವೆ ಎಂದೂ ಹೇಳುತ್ತಾರೆ. ಅವರ ಆ ಮಾತಿಗೆ ಆ ಸಂಕಲನದ ಯಾವ ಪದ್ಯಗಳು ಕಾರಣವಾದವೋ ತಿಳಿಯದ ಸಂಗತಿ. ಆದರೆ ಹಿರಿಯರ ಆ ಆರೋಪವನ್ನು ನಿಮ್ಮ ಈ ಹೊಸ ಸಂಕಲನದ ಕವಿತೆಗಳು ನಿಕಷಕ್ಕೊಡ್ಡಿಕೊಂಡು ಅಪ್ಪಟ ಅಪರಂಜಿ ಎಂದು ತಮಗೆ ತಾವೇ ಶಿಫಾರಸು ಮಾಡಿಕೊಂಡಿವೆ. ಪದ್ಯಕ್ಕೆ ಬೇಕೇ ಬೇಕಾದ ಲಯ, ಅರ್ಥ ಮತ್ತು ಕವಿಯು ಸ್ವತಃ ನಂಬಿರುವ ಸಿದ್ಧಾಂತದಾಚೆಗೆ ತತ್ವಗಳಾಚೆಗೆ ಇಲ್ಲಿನ ಕವಿತೆಗಳು ಹೋಗಿಲ್ಲ ಅನ್ನುವುದು ಅತ್ಯಂತ ಸಮಾಧಾನದ ಸಂಗತಿ.

ಬೀಗದ ಕೈ ತಿರುವಿದಾಗ

ಅದೇ ಪರಿಚಿತ ಚಿಲಕದ ಸದ್ದು

ಎದೆ ತುಂಬುವ ಆಪ್ತ ಗಾಳಿ

ಎಲ್ಲ ಮೂಲೆಗಳಲ್ಲೂ ಅವಿತ ಅದದೇ ಮೌನ

ಎಂದು ಆರಂಭವಾಗುವ ಸಂಕಲನದ ಮೊದಲ ಪದ್ಯ

“ಮರಳಿ ಮನೆಗೆ” ಮೂಲಕ ನೀವು ಸದ್ಯದ ಪದ್ಯಗಳ ಘಾಟಿಂದ ತಪ್ಪಿಸಿಕೊಂಡು ಸ್ವಮಗ್ನತೆಯಲ್ಲೇ ಕವಿತೆ ಅರಸುವ ನವೋದಯದ ಆಶಯಕ್ಕೆ ಹೊರಳುತ್ತೀರಿ

ಬನ್ನಿ ಸಮಯಗಳೇ

ದೇಶ ಕಾಲಗಳೇ

ತೆರೆದ ಮನವಿದೆ

ಮಿಡಿವ ಎದೆಯಿದೆ

ಅವತರಿಸುವ ಕವಿತೆಗಾಗಿ

ಮಣೆಯ ಹಾಸಿ ಕಾದಿದೆ.

“ಅಕ್ಷರ ದೋಣಿ” ಯದೂ ಇದೇ ಆಶಯವಾದರೂ ಕವಿತೆಯು ಎದೆಹೊಳೆಯ ಹಾಡು ತೋರಿದ ಹಾದಿ ಎನ್ನುತ್ತೀರಿ. ಹರೋಹರ”  ಭವದ ಕಾವಡಿ ಹೊತ್ತು ದಿಕ್ಕು ದೆಸೆಯಿಲ್ಲದೆ ಅಲೆಯುತ್ತಿರುವ ನಗರ ಬದುಕಿನ ಮಜಲಾದರೆ,ನನಗೆ ನಿಜಕ್ಕೂ ಇಷ್ಟವಾದ ಕವಿತೆ “ಸಂಡೇ ಬಜಾರ್”.

ಯಾರ ಮನೆಯದೋ ಸ್ವಿಚ್ಚು

ಇನ್ಯಾರ ಮನೆಯದೋ ವೈರು-ದೀಪ

ಮತ್ಯಾರ ಮನೆಗೋ ಬೆಳಕು.

ಹೌದು ಹೀಗೆ ಯಾರದೋ ಮನೆಯಲ್ಲಿ ವೇಶ್ಟು ಅಂತ ಬಿಸುಡಿದ್ದು ಮತ್ಯಾರಿಗೋ ಅಮೂಲ್ಯವಾಗುವುದು ಆ ವಸ್ತುವಿನ ಅಗತ್ಯ ಇದ್ದವರಿಗೆ ಮಾತ್ರ.

ಎಲ್ಲ ತಲ್ಲಣಗಳೂ ತಣ್ಣಗಾದ ಹೊತ್ತಲ್ಲಿ

ಸಹನೆ ಎನ್ನುವುದು ಹಸಿವು ಕಲಿಸಿದ ಪಾಠ.

ಸಂಕಲನದ ಶೀರ್ಷಿಕೆ ಕವಿತೆ ” ದಯಾ…ನೀ, ಭವಾ…ನೀ” ಮೇಲ್ನೋಟಕ್ಕೆ ಪರ್ವಿನ್ ಸುಲ್ತಾನರ ಕಛೇರಿಗೆ ನಿಮ್ಮ ಟಿಪ್ಪಣಿಯಂತೆ ಕಂಡರೂ ಬದುಕ ಕಛೇರಿಯಲ್ಲಿ “ಅವನ” ದಯೆಯಿಂದ ಲೌಕಿಕದ “ಭವ” ವನ್ನು ಗೆಲ್ಲಲು ಪ್ರಾರ್ಥಿಸಿದಂತಿದೆ. ನಿಮ್ಮ ಇಂಥದೇ ಮತ್ತೊಂದು ಕವಿತೆ “ಭೀಮಣ್ಣ ರಾಮಕಳಿ” ನೆನಪಿಸಿತು ಕೂಡ. ಆರ್ತತೆಯೇ ಆವರಣವಾಗಿರುವ ಕವಿತೆ ಇದು.

“ಧಣಿ ನಿಮ್ಮ ಗುಣಗಳ” ಮೂಲಕ ವ್ಯಂಗ್ಯಕ್ಕೂ ಕೈ ಚಾಚುವ ನೀವು ಪ್ರಬಂಧಗಳ ಮೂಲ ಗುಣವನ್ನು ಈ ಕವಿತೆಯಲ್ಲಿ ಅಡಕಿರಿಸಿ ದೇವನೂರರು ಬೇಡವೆಂದ ಸಮಸ್ತವನ್ನೂ ತಮ್ಮದಾಗಿಸಿಕೊಂಡ ಸಿದ್ದಲಿಂಗಯ್ಯನವರ ಬಗ್ಗೆ ಕುಹಕ ಆಡಿದ್ದೀರಿ. ಆದರೆ ಅವರ “ಎದೆಗೆ ಬಿದ್ದ ಅಕ್ಷರ” ಹಾಗೆಲ್ಲ ಸುಲಭಕ್ಕೆ ಸಿಗುವ ಅನುಭವದ ಮೂಟೆ ಅಲ್ಲವಲ್ಲ?

“ವ್ಯಾಖ್ಯಾನ”  ಸಾವಿನ ಸುದ್ದಿ ಮುಟ್ಟಿಸುವ ವ್ಯಾಕುಲತೆಯನ್ನು ಬಗೆದರೆ “ತಿಟ್ಟತ್ತಿ ತಿರುಗಿ” ದ್ವನಿಸುವುದೂ ಬದುಕಿನ ನಶ್ವರತೆಯನ್ನೇ. ಮುಂದಿನ ಕವಿತೆ ” ಮಧ್ವ ಸರೋವರದಲ್ಲಿ” ಮೂಲಕ ಮತ್ತದೇ ವಿಹ್ವಲ ಬದುಕಿನ ಯಕ್ಷಪ್ರಶ್ನೆಗಳನ್ನೇ ಸಮರ್ಥವಾಗಿ ಎತ್ತಿ ಆಡುವ ನೀವು

ಯಾವ ಮೋಹನ ಮುರಲಿ ಎಷ್ಟು ಕರೆದರೂ

ಹೊಟ್ಟೆ ತುಂಬಿದ ಮೇಲೆ ಇಷ್ಟ ದೇವನ ಲೀಲೆ

ಮುಂದುವರೆದು

ಚೆಲ್ಲಾಪಿಲ್ಲಿಯಾದ ಲಕ್ಷ ಬಿಂಬಗಳಲ್ಲಿ

ಮುಳುಗದ ತೇಲು ಚಿತ್ರಗಳು

ಮೂಲ ಬಿಂಬದ ಹಾಗೇ

ಪ್ರತೀ ಬಿಂಬ ( ಪ್ರತಿಬಿಂಬ ಅಲ್ಲ!) ಒಳಗೂ ಹೊರಗೂ

ಅವನು ಇವನು, ಬೇಹೂಬು…

ದಡಕ್ಕೆ ನಿಲ್ಲಬೇಕೆ

ಮುಗಿಯುತ್ತಿಲ್ಲ ಜಿಜ್ಞಾಸೆ.

ಪ್ರಾಯಶಃ ಇಂಥ ಜಿಜ್ಞಾಸೆಗಳೇ ಇಲ್ಲದಿರುತ್ತಿದ್ದರೆ ಚಿಂತನೆ ಮತ್ತು ತತ್ವಕ್ಕೆ ಎಲ್ಲಿ ಬೆಲೆ ಇರಿತ್ತಿತ್ತು. ಶಂಕರ, ಮಧ್ವರ ಸಿದ್ಧಾಂತಗಳ ನಡುವೆ ಏನೇ ವ್ಯತ್ಯಾಸ ಇದ್ದರೂ ಅವರವರಿ ಕಾಣಿಸಿದ ಸತ್ಯ ಅವರವರಿಗೆ ಕಂಡದ್ದು ಮತ್ತು ಕಾಣದ್ದು. ಹಾಗೆ ನೋಡಿದರೆ ನೀವು ಈ ಪದ್ಯದಲ್ಲಿ ಹೇಳಿದ ಹಾಗೆ ನೀರಿಗಿಳಿಯಬೇಕೆ? ಬೆವತ ಮೈ ಹೊತ್ತು ದಡಕ್ಕೇ ನಿಲ್ಲಬೇಕೆ ಅನ್ನೋದು ನಿರಂತರದ ದ್ವಂದ್ವ. ಈ ಶೀರ್ಷಿಕೆಯೇ ಈ ಸಂಕಲನಕ್ಕೆ ಹೆಚ್ಚು ಸೂಕ್ತ ಅ‌ನ್ನಿಸಿದರೂ ಮೊದಲೇ ಊಹಾ ಪ್ರಪಂಚದಲ್ಲೇ ಗುದಮುರಿಗೆ ಕಟ್ಟುವ ಗೆಳೆಯರಿಗೆ ಇನ್ನೂ ಸುಲಭದ ಅವಕಾಶ ಒದಗುತ್ತಿತ್ತೋ ಏನೋ??

“ನಿತ್ಯ ನಾರಕಿಗಳು” ಕೂಡ ಮತ್ತೊಂದು ವ್ಯಂಗ್ಯದ ಮೊನಚಲ್ಲಿ ಲಂಕೇಶರನ್ನು ವಿಡಂಬನೆ ಮಾಡಿದ್ದೀರಿ.

ಪದ್ಯದ ಕೊನೆ ಇಷ್ಟವಾಯ್ತು….

ಕೊಳೆಯುತ್ತಿದೆ ನಾರಣಪ್ಪನ ಹೆಣ

ಮುಗಿಯುತ್ತಿಲ್ಲ ಹೊಸಕಾಲದ ಆಚಾರ್ಯ ಜಿಜ್ಞಾಸೆ

ನಿತ್ಯ ನರಕ.

ಅಲೀಬಾಬ ನಿಮ್ಮ ಕವಿತೆಗಳಲ್ಲಿ ಸರ್ವೇ ಸಾಮಾನ್ಯ ಬರುವ ಪ್ರತಿಮೆಗಳಲ್ಲೊಂದು. ಬಾಗಿಲು ತೆರೆಯೇ ಸೇಸಂ ಅಂತ ಕಾಯುತ್ತಲೇ ಇರುವ ನಾವೆಲ್ಲರೂ ಒಂದು ಲೆಕ್ಕದಲ್ಲಿ ಇರದ ರಾಶಿಗೆ ಕನಸುತ್ತಿರುವ ಅಲೀಬಾಬರೇ ಹೌದು.

ಈ ಸಂಕಲನದ ತುಂಬು ಶಕ್ತ ಕವಿತೆ “ಕಲ್ಲು ಕರಗಲೊಲ್ಲದು ಅಲ್ಲಮ”. ಅದೇನು ಪ್ರತಿಮೆಗಳನ್ನು ಅಡಕಿರಿಸಿ ನವ್ಯದ ಮೂಲ ನಿಷ್ಠೆಯನ್ನು ಪ್ರತಿಷ್ಟಾಪಿಸಿದ್ದೀರಿ. ಓದುವಾಗ ಕಣ್ಮುಂದೆ ಸುಳಿಯುವ ಪರಂಪರೆಯ ವ್ಯಾಲ್ಯು  ಮತ್ತು ಆಧುನಿಕತೆಯ ಡಂಬಾಚಾರ ಆ ಕ್ಷಣಕ್ಕಾದರೂ ದಕ್ಕಿ  ಓದಿನ ನಡಿಗೆಗೆ ಗಾಂಭೀರ್ಯವನ್ನೂ ಸೌಂದರ್ಯವನ್ನೂ ಒದಗಿಸುತ್ತವೆ.

“ಪ್ರಥಮ ಪುರುಷರ ನಡುವೆ” ಥರದ ಪದ್ಯ ಬರೆಯುವುದಕ್ಕೆ ತಕ್ಕ ಧೈರ್ಯವೇ ಬಾರದ ಕಾಲದಲ್ಲಿ ಅದನ್ನು ಪ್ರಕಟಿಸಿ ಯುದ್ಧಕ್ಕೆ ತೊಡೆ ತಟ್ಟಿದ್ದೀರಲ್ಲ, ನಿಮಲ್ಲಿ ಇರುವ ಭ್ರಾಂತಿ ಕಳೆಯುವ ಬಗ್ಗೆ ನನಗೆ ಅನುಮಾನಗಳಿವೆ!!

ಅಸಹಿಷ್ಣುತೆ, ವಾಟ್ಸಪ್ ಗೆಳೆಯ, ಕ್ಲೀನಿವಾರ ಓದಬಹುದಾದ ಪದ್ಯಗಳಾದರೂ ಆ ಪದ್ಯಗಳ ಒಳದನಿ ಈ ಕಾಲದ ಹುಡುಗರ ಪೇಟೆಂಟ್! ಗೌರೀ ದುಃಖ ಆಚರಣೆಯ ವಿಧಿ ವಿಧಾನ ಗೊತ್ತಿಲ್ಲದವರಿಗೆ ಅರ್ಥವಾಗದ ಪದ್ಯ. “ಪಾರಿಜಾತ” ಆ ಹೂವಿನ ಬಗ್ಗೆ ಹೇಳುತ್ತಿದ್ದರೂ ಅರಳಿದ ಕೂಡಲೇ ಬಿದ್ದು ಹೊಗುವ ಬದುಕಿನ ಬಗ್ಗೆಯೂ ಇರಬಹುದೆ ಎನ್ನುವುದು ಬರಿಯ ಗುಮಾನಿಯಲ್ಲ, ಅದೇ ವಾಸ್ತವ. “ಕಾಫಿ ಬ್ರೇಕ್” ಪದ್ಯ ಸವಿತಾ ನಾಗಭೂಷಣರ “ಜಾತ್ರೆಯಲ್ಲಿ ಶಿವ” ಪದ್ಯ ನೆನಪಿಸಿತು.

ಮುಂದೆ ಭವಾನಿ

ಹಿಂದೆ ಸದಾ

ಶಿವ

ಸಾಗುತ್ತಲೇ ಇರಬೇಕು

ಅನ್ನುವಾಗ ಮೊದಲು ಹೇಳಿದ ಪದ್ಯದಿಂದ ಈ ಪದ್ಯ ಸಂಪೂರ್ಣವಾಗಿ ಭಿನವಾಗುತ್ತದೆ.

ಅಪ್ಪನ ನೆನಪನ್ನು ಶೋಧಿಸುವ ದಪ್ಪ ರವೆ ವುಂಡೆ ಮತ್ತು ಸಹಯಾನ ಬದುಕು ಕಲಿಸಿದ ಅಪೂರ್ವ ಪಾಠ.

“ಹಗಲ ಹೊಳೆ” ಕವಿತೆ ನಗರ ಜೀವನದ ಸಾರ್ಥಕ ಚಿತ್ರಣವಾದರೆ “ಇಳಿಸಿದ ಜೋಳಿಗೆ” ಹರೋಹರದ ಮುಂದುವರಿಕೆಯಾಗಿಯೂ ಕಾಡುತ್ತಲೇ ನೀವು ಕಾವಡಿಯಂತೆ ಹೊತ್ತು ತಿರುಗುತ್ತಿದ್ದ ಸಂಚಯವನ್ನು ನೆನಪಿಸಿದ ಸಂಗತಿಯಾಗಿ ತೋರಿತು.

“ನಾಮದ ಮಹಿಮೆ” ನಾಮದ ಚಿಲುಮೆಯ ಇತಿಹಾಸ ಹೇಳುತ್ತಲೇ ಹೆಸರಿನ ಮಹತ್ವವನ್ನೂ ಮಹತ್ತನ್ನೂ ಏಕ ಕಾಲದಲ್ಲು ಗ್ರಹಿಸುತ್ತೀರಿ. ಸಂಕಲನದ ಕಡೆಯ ಪದ್ಯಗಳು ಚಿ. ಶ್ರೀನಿವಾಸ ರಾಜು ಅವರೊಟ್ಟಿಗಿನ ನಿಮ್ಮ ಗಾಢ ಸಂಬಂಧ ಮತ್ತು ಅವರ ಪ್ರಭಾವಗಳನ್ನು ನಿರ್ವಚಿಸುತ್ತಲೇ ಅವರು ಬಿಟ್ಟುಕೊಟ್ಟ ನಿರ್ವಾತಕ್ಕೆ ಮತ್ತೊಬ್ಬ ವ್ಯಕ್ತಿ ಹೊಂದುವುದಿಲ್ಲ ಅನ್ನುವ ಸತ್ಯವನ್ನು ಸುಲಭವಾಗಿ ಹೇಳುತ್ತಲೇ ಅನ್ಯರ ಪ್ರಭಾವಕ್ಕೆ ಒಳಗಾಗುವ ನಮ್ಮ ಸಂಕೀರ್ಣತೆಯನ್ನೂ ಯಶಸ್ವಿಯಾಗಿ ತೆರೆದಿಡುತ್ತವೆ.

ಪ್ರಹ್ಲಾದ್, ನಿಮ್ಮ ಈ ಸಂಕಲನದ ಓದು ಮತ್ತೆ ಮತ್ತೆ ಕನ್ನಡ ಕವಿತೆ ಪರಂಪರೆಯ ಅದೆಷ್ಟು ಪೂರ್ವ ಸೂರಿಗಳನ್ನು ಆಗಾಗ ಸಂಧಿಸುತ್ತ, ಮುಟ್ಟುತ್ತ ಮತ್ತೆ ಬಿಟ್ಟುಕೊಳ್ಳುತ್ತ ಕಡೆಗೆ ಕಟ್ಟಿಕೊಳ್ಳುತ್ತ ಹೋದುವೆಂದರೆ ಇಲ್ಲಿ ಬರದೆ ಉಳಿದ ಯಾವ ಹಿರೀಕ ಕವಿಯೂ ಉಳಿಯಲೇ ಇಲ್ಲ. ಮುಖ್ಯವಾಗಿ ಅಡಿಗ, ಎಕ್ಕುಂಡಿ, ಆಗಾಗ ಕೆ.ಎಸ್.ನ, ಕ್ವಚಿತ್ತಾಗಿ ರಾಮಾನುಜಂ ಬೇಂದ್ರೆ ಕುವೆಂಪು ಕೂಡ. ಸರ್, ಧ್ಯಾನವೆಂದರೆ ಇದೇ ತಾನೆ? ಸ್ನಾನ ಮಾಡುವಾಗ ಕೂಡ ಗಂಗೆ ಯಮುನೆಯರನ್ನೇ ಆವಾಹಿಸಿಕೊಳ್ಳುವ ಪರಂಪರೆಯ ನಾವು ‌ನಮ್ಮ ಬರಹಕ್ಕೆ ಪೂರ್ವ ಸೂರಿಗಳನ್ನು ನೆನೆಯದೇ ಮುಂದಣ ಹೆಜ್ಜೆ ಇಟ್ಟೇವೆ? ಆದರೂ ಆ ಪೂರ್ವಜರ ಜೊತೆಯ ಜಗಳ ಪ್ರೀತಿ ತಕರಾರುಗಳೇ ಇಲ್ಲಿನ ಎಲ್ಲ ಪದ್ಯಗಳ ಹಿಂದಣ ಶಕ್ತಿಯಾಗಿದೆ ಮತ್ತು ಪ್ರಾಯಶಃ ಬದುಕಿನ ಓಟದ ಪರಿವೆಯಿಲ್ಲದೇ ಮುಖಪುಸ್ತಕ ಮತ್ತು ವಾಟ್ಸ್ ಅಪ್ ಕವಿಗಳಿಗೆ ಈ ಪದ್ಯಗಳ ರುಚಿ ಗೊತ್ತಾಗುವುದಿಲ್ಲ ಅನ್ನುವ ಅಸಮಧಾನದ ಮಾತುಗಳೊಂದಿಗೆ ಮಂಗಳ ಹಾಡುತ್ತಿದ್ದೇನೆ. ಮತ್ತೊಮ್ಮೆ ಸಂಕಲನದ ಶುಭಾಷಯಗಳು. ಎಲ್ಲೆಡೆಯಿಂದಲೂ ಒಳ್ಳೆಯದೇ ಹರಿದು ಬರಲಿ.

‍ಲೇಖಕರು avadhi

January 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: