ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾವಿಲ್ಲ ಮರಳಲು ಹೊರಳಲು..

ಸರೋಜಿನಿ ಪಡಸಲಗಿ

ನೀಲ ಬಯಲ ನೆರಳಲ್ಲಿ
ನೀಲ ಸಲಿಲದೊಡಲಲಿ
ಸರ್ರನೆ ಹುದುಗಿ ನೇಸರನ ಬಿಂಬ
ಕಂಡಿತೆ ಗಾಢ ಗೂಢತೆಯ ||
ಸಿಲುಕಿತೆ ಆ ಹುದುಲಲಿ
ಅಗಾಧ ಜಲರಾಶಿಯಲಿ
ತಿರುಗಿ ನೋಡದಂತೆ
ಮರಳಿ ಹೊರಳದಂತೆ ||

ನೀಲಬಯಲ ತುಂಬಿ ತೆಳು ಮೋಡ
ನೀಲ ಸಲಿಲದಿ ಅಲೆಯ ರಿಂಗಣ
ಮಬ್ಬು ಕವಿದರೂ ಕವಿಯದಂತಿರುವ
ಸಲಿಲದಂಚಿನುದ್ದಕೂ ಹೊನ್ನ ಕುಚ್ಚ ಮಿಂಚು
ನೆತ್ತಿ ಮೇಲೆ ಮುತ್ತ ಮಾಲೆಸಾರ್ವಭೌಮನಂತೆ
ಎಲ್ಲುಂಟು ತಾವಲ್ಲಿ ತಿರುಗಿ ನೋಡಲು
ಮರಳಿ ಹೊರಳಲು ||

ನೀಲಬಯಲ ಮೋಡದೆದೆಯ ಸಂದಿಯಿಂದ
ನೀಲ ಸಲಿಲದಲೆಯ ಅಂಗಣದಿ ನುಸುಳಿ
ಸುಳಿಯುತಿದೆ ಮೊಳಗುತಿದೆ ಮೋಹಕ ನಾದ
ಬಲು ಅಂಟು ಬಂಧದು ದೂರ ಸರಿಯದಂತೆ
ಸುತ್ತಿ ಸುರುಳಿ ಕಟ್ಟಿ ಅಲ್ಲೇ ಗಟ್ಟಿ ಇರಿಸುವಂತೆ
ಎಲ್ಲುಂಟು ತಾವಲ್ಲಿ ತಿರುಗಿ ನೋಡಲು
ಮರಳಿ ಹೊರಳಲು ||

ನೀಲ ಬಯಲಿನ ತಂಪು ಹರಡಿ
ನೀಲ ಸಲಿಲದಿ ಅದೇನೋ ಹಾಯಿ
ಈಜುತಿಹ ಪುಟ್ಟ ಹಕ್ಕಿ ಸಲಿಲದಾಳದಿಣುಕೆ
ಹೊಳೆವ ನಗು ಮೂಡಿ ಮೆಲ್ಲನುಲಿಯಿತು
ನೇಸರನು ತಂಪಾದನೆ ತನ್ನ ಠಾವು ಮರೆತನೆ
ಎದೆಯುಬ್ಬಿಸಿ ಹಕ್ಕಿ ಸಾಗಿತು ಭ್ರಮೆಯ ಹಿತದಲಿ
ತಾವಿಲ್ಲ ಆತಗೂ ತಿರುಗಿ ನೋಡಲು
ಮರಳಿ ಹೊರಳಲು ||

‍ಲೇಖಕರು Avadhi

4 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading