ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ ‘ಅಪ್ಪನ ಮನೆ ಮಾರಾಟಕ್ಕಿದೆ’

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು.

ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಬಿಳೀ ಬಣ್ಣದ ಹುಂಡೈ ಕ್ರೇಟಾ ಕಾರು ನಂಜುಂಡಯ್ಯನ  ಮನೆ ಮುಂದೆ ಬಂದು ನಿಂತಿತು.  ಟಯರಿಗೆ ಅಂಟಿದ್ದ ಮಣ್ಣು ಉದಯವಾರದ ಡಾಂಬರಿನ ಸ್ಥಿತಿಯನ್ನು ಸಾರುತ್ತಿತ್ತು. ಧರ್ಮಸ್ಥಳಕ್ಕೆ ಹೋಗೋ ರಸ್ತೆ ಆದ್ದರಿಂದ ಪ್ರವಾಸಿಗಳು ಯಾರಾದರೂ ಬಂದಿರಬಹುದಾ ಅಂತ  ರಸ್ತೆ ಬದಿಯಲ್ಲಿ ಜೂಸು, ಕಬ್ಬಿನಹಾಲಿನ ಅಂಗಡಿಯವರು ಇಣುಕಿ ನೋಡಿದರು. ‘ಓ ನಮ್ ನಂಜುಂಡಯ್ಯನ್ ಮಗ, ಮನೆ ಮಾರಿ ಅಪ್ಪನ್ ಕರ್ಕೊಂಡ್ ಹೋಗೊಕ್ ಬಂದವ್ನೆ’ ‘ಇನ್ನು ನಂಜುಂಡಣ್ಣಂಗೂ ಈ ಊರಿಗೂ ಋಣ ಹರೀತು’. ಉದಯವಾರಕ್ಕೆ ಅಚ್ಚುಮೆಚ್ಚಾಗಿದ್ದ ನಂಜುಂಡ್  ಮೇಷ್ಟರನ್ನ ಕಳಿಸಿಕೊಡೋಕೆ ಎಲ್ರಿಗೂ ಬೇಸರವಿತ್ತು. ಸೀಟ್ ಬೆಲ್ಟ್ ತೆಗೆದ ಮನೋಜ್ ಇಳಿದ ತಕ್ಷಣ ಕಾರಿನ ಚಕ್ರಕ್ಕಂಟಿದ ಮಣ್ಣನ್ನು ನೋಡಿ ಹುಬ್ಬುಗಂಟಿಕ್ಕಿದ.

ಹೊಸ ಗಾಡಿ ಕೊಂಡ ಮೇಲೆ ಮೊದಲಬಾರಿ ಹುಟ್ಟೂರಿಗೆ ತಂದಿದ್ದ. ಪ್ರತಿ ಬಾರಿ ಮನೆಗೆ ಬಂದಾಗ ಇದ್ದ ಸಂಭ್ರಮ ಈಗಿಲ್ಲ. ಅಮ್ಮ ಹೋದ ಮೇಲೆ ಆ ಸಂಭ್ರಮದ ನಿರೀಕ್ಷೆ ಎಲ್ಲಿ? ಮನೆಯನ್ನು ಹೋಮ್ ಸ್ಟೇ ನಡೆಸೋರಿಗೆ ಮಾರಿ, ಅಪ್ಪನನ್ನು ಕರೆದುಕೊಂಡು ವಾಪಸ್ ಮುಂಬಯಿಗೆ ಹೋದ್ರೆ ಈ ಕೊಂಪೆಯ ಸಹವಾಸ ಮುಗೀತು ಅನ್ನೋದು ಇವನ ಲೆಕ್ಕಾಚಾರ.

‘ಕಿಶನ್… ಗೆಟ್ ಡೌನ್’ ಮನೋಜ್ ಕಾರಿನ ಡೋರ್ ತೆಗೆದ. ‘ಪಾಪಾ! ರೂಬಿ ಇಸ್ ನಾಟ್ ಕಮಿಂಗ್’ ಐದು ವರ್ಷದ ಕಿಶನ್ ಅಪ್ಪನಿಗೆ ಹೇಳಿದ. ಮಗನ ಹುಟ್ಟುಹಬ್ಬಕ್ಕೆ ಮೂರು ದಿನಗಳ ಹಿಂದೆ ತಂದಿದ್ದ ಗೋಲ್ಡನ್ ರಿಟ್ರೀವರ್ ನಾಯಿಮರಿ ಕಾರಿನ ಪ್ರಯಾಣದಿಂದ ಹೆದರಿ ಸೀಟಿನ ಮೂಲೆ ಸೇರಿತ್ತು. ‘ಎಳೀಬೇಡ ಕಿಶ್ ಅದಕ್ಕೆ ನೋವಾಗುತ್ತಲ್ವಾ? ನಿಧಾನ್ವಾಗ್ ಕರ್ಕೊಂಡು ಬಾ’.

ಇದ್ದಿದ್ದು ಅಪ್ಪ ಅಮ್ಮ ಇಬ್ಬರೇ.

ಬಾಳೆ, ತೆಂಗಿನ ಮರಗಳಿಂದ ಸುತ್ತುವರೆದ ಸುಮಾರು ಐವತ್ತು ವರ್ಷ ಹಳೆದಾದ ಮನೆ. ದೊಡ್ಡ ಕಾಂಪೌಂಡ್ ಗೆ ಚಿಕ್ಕ ಗೇಟು, ಒಳಗೆ ನಡೆದು ಹೋದರೆ ಕಾಲುದಾರಿಯ ಅಕ್ಕಪಕ್ಕ ಹೂಗಿಡಗಳು. ಮನೆಗೆ ಮಂಗಳೂರಿನ ಹಂಚು ಹೊದೆಸಿತ್ತು. ಕಾರ್ ಸೆಂಟರ್ ಲಾಕ್ ಕ್ಲಿಕ್ಕಿಸುತ್ತಾ ಮನೆ ನೋಡ್ತಾ ಬಂದ ಮನೋಜ್. ‘ನೋಡೋಕೆ ಪರ್ಫ಼ೆಕ್ಟ್ ಹೋಮ್ ಸ್ಟೇ ತರಾನೇ ಇದೆ, ಕ್ಲೀನ್ ಮಾಡ್ಸಿ ಒಂದ್ ಕೋಟ್ ಪೈಂಟ್ ಮಾಡಿಸಿದ್ರೆ ಆಯ್ತು. ನನ್ ಮದ್ವೇಗೆ ಅಂತ ಬಣ್ಣ ಹೊಡೆಸಿದ್ದು ಹಾಗೆ ಇದೆ’.

ಈಗ ಮೂರು ತಿಂಗಳ ಹಿಂದೆ ಆಮ್ಮ ಕಿಡ್ನಿ ಫ಼ೈಲ್ಯೂರ್ ಆಗಿ ತೀರಿಕೊಂಡ್ಲು, ಹೋಗೋ ವಯಸ್ಸಾಗಿರಲಿಲ್ಲ. ೫೪ ಅಷ್ಟೇ. ಗಟ್ಟಿಯಾಗಿದ್ದಳು, ಒಂದೇ ಸಲಕ್ಕೆ ೨೫ ತೆಂಗಿನಕಾಯಿ ಸುಲೀತಿದ್ಲು, ಸಕ್ಕರೆ ಖಾಯಿಲೆ ಇದೆ ಅಂತ ಡಾಕ್ಟರ್ ಹೇಳಿದ್ರು, ಆದ್ರೆ ಒಂದು ದಿನವೂ ಮಾತ್ರೆ ತೊಗೊಳ್ಳದೇ, ಪಥ್ಯ ಮಾಡದೇ ಹೋಗೇಬಿಟ್ಲು. ಇಲ್ಲದಿದ್ರೇ ನಾನು ಬರೋದಿನ ಕತ್ತು ಉದ್ದ ಮಾಡಿ ರಸ್ತೆಯನ್ನೇ ನೋಡ್ತಾ ನಿಂತಿರುತ್ತಿದ್ದಳು. ಅಪ್ಪನಾದ್ರೂ ಜಗಲಿ ಮೇಲೆ ಕೂತಿರುತ್ತಿದ್ದರು, ಆದ್ರೆ ಇವತ್ತು ಅವರ ಸುಳಿವೂ ಇಲ್ಲ. ಕಾಲಿನಿಂದಲೇ ಶೂ ತೆಗೆದು ಸಾಕ್ಸ್ ತೆಗೆಯುವ ಗೋಜಿಗೆ ಹೋಗದೇ ಒಳಗೆ ಹೋದ.

‘ಹೇ ಈಗ್ಲು ಅದನ್ನೇ ಮಾಡ್ತೀಯಲ್ಲೋ ಮಲ್ಲಿ.. ಮನೆಯೆಲ್ಲಾ ಒರೆಸಿಟ್ಟಿದೆ, ಅವ್ಳಷ್ಟು ಚಂದ ಇಟ್ಟುಕೊಂಡಿಲ್ಲ ಆದ್ರೂ ಧೂಳು ಧುಸಿ ತುಂಬಿಕೊಳ್ಳೋಕೆ ಬಿಟ್ಟಿಲ್ಲ’. ಮನೆಯೊಳಗೆ ಕಾಲಿಡುತ್ತಿದ್ದಂತೆ ನಂಜುಂಡಪ್ಪ ಕನ್ನಡಕ ಹಾಕಿಕೊಳ್ತಾ ಗದರಿಸುತ್ತಾ ಬಂದರು. ಅರವತ್ತೈದು ದಾಟಿದರೂ ಧ್ವನಿಯಲ್ಲಿ ಅದೇ ಗಟ್ಟಿತನವಿತ್ತು. ಮನೆಯೊಳಗೆ ಚಪ್ಪಲಿ, ಶೂ ಇರ್ಲಿ ಸಾಕ್ಸ್ ಕೂಡ ಹಾಕಿಕೊಂಡು ಬರುವಂತಿಲ್ಲ ಅಂತ ಗೊತ್ತಿತ್ತು, ಆದ್ರೆ ಇವನ ತಲೆಯಲ್ಲಿ ಇದು ಮನೆಯಾಗಿ ಉಳಿದಿರದೆ ಹೋಮ್ ಸ್ಟೇ ಆಗಲಿರುವ ಕಮರ್ಶಿಯಲ್ ಜಾಗವಾಗಿದ್ದರಿಂದ ನಿಯಮ ನೆನಪಾಗಲಿಲ್ಲ.

‘ಇನ್ನೂ ಎಲ್ಲಾ ಹಾಗೇ ಇದ್ಯಲ್ಲಪ್ಪ. ಇವತ್ತೇ ವಾಪಸ್ ಹೊರಡ್ಬೇಕು ಅಂತ ಹೇಳಿರ್ಲಿಲ್ವ?’ ಅಸಮಧಾನದಲ್ಲಿ ನುಡಿದ. ‘ಕಾಲಿಗ್ ಚಕ್ರ ಕಟ್ಕೊಂಡೇ ಬಂದಿದೀಯಲ್ಲ, ಎಲ್ಲಾ ಆಗುತ್ತೆ. ಕೂತ್ಕೋ’. ಅಷ್ತ್ರಲ್ಲಿ ಕಿಶನ್ ಶೂ ಸಮೇತ ತನ್ನ ನಾಯಿಮರಿಯನ್ನು ಓಡಿಸಿಕೊಂಡು ಮನೆಯೊಳಗೆ ಬಂದ. ನಂಜುಂಡ ಕಣ್ಣು ಬಾಯಿ ಬಿಟ್ಟು ನೋಡಿದ. ‘ಪಾಪಾ, ಎಷ್ಟ್ ದೊಡ್ ಮನೆ’ ಮುಂಬಯಿಯ ಅಪಾರ್ಟ್ಮೆಂಟ್ ನಲ್ಲಿ ನೂರಾರು ಫ಼್ಲಾಟ್ ಗಳ ನಡುವೆ ವಾಸವಾಗಿದ್ದ ಮಗೂಗೆ ಇಷ್ಟು ದೊಡ್ಡ ಮನೆಯೂ ಇರಬಹುದು ಅನ್ನೋ ಊಹೆ ಕೂಡ ಇರಲಿಲ್ಲ. ತಾತ ಮೊಮ್ಮಗನನ್ನು ಎತ್ತಿಕೊಂಡು ಹೋಗಿ ತಾವೇ ಶೂ ತೆಗೆದು ಒಳಗೆ ಕರೆದುಕೊಂಡು ಬಂದ್ರು.

ಹುಟ್ಟಿದಾಗ್ಲಿಂದ ನಂಜುಂಡಪ್ಪ ಮೊಮ್ಮಗನನ್ನ ಮೂರು ನಾಲ್ಕು ಸಲಕ್ಕಿಂತ ಹೆಚ್ಚಾಗಿ ನೋಡಿರ್ಲಿಲ್ಲ. ಸೊಸೆ ಕನ್ನಡದವಳಾದ್ರೂ ಮುಂಬಯಿಯಲ್ಲಿ ಬೆಳೆದವಳು , ನಮ್ಮ ಕಡೆ ಬಾಣಂತನ ಮಾಡೋ ಹಾಗೆ ಬೇರೆಯವರಿಗೆ ಬರಲ್ಲ ಅಂತ ಹಟ ಮಾಡಿ ಊರಿಗೆ ಕರೆಸಿಕೊಂಡು ನಿಂಗಮ್ಮ ಸಂಭ್ರಮದಲ್ಲಿ ಬಾಣಂತನ ಮಾಡಿದ್ದಳು. ಎಳೇ ಮಗೂಗೆ ನೀರು ಹಾಕೋದು ಜಗತ್ತಿನ ಅತೀ ನಾಜೂಕಿನ ಕೆಲ್ಸ. ಮೊಮ್ಮಗನ ಮೈಕೈಗಳಿಗೆ ಹರಳೆಣ್ಣೆ ಹಚ್ಚಿ, ಕೈ ಕಾಲು ಎಳೆದು, ಮೂಗಿನ ಕಂಬವನ್ನ ತೀಡಿದ್ದಳು. ‘ಮಗ ಅತ್ರೂ ಅಳಲಿ ಪರ್ವಾಗಿಲ್ಲ ಈಗ್ ಕಂಬ ಎತ್ಲಿಲ್ಲ ಅಂದ್ರೆ ಮೊಂಡ ಮೂಗು ಬರುತ್ತೆ’ ಸೊಸೆ, ಮಗ ಅಳ್ತಿದ್ದಾನೆ ಅಂತ ಭಯಪಟ್ಟಾಗ ನಿಂಗಮ್ಮ ಕಾಳಜಿಯಿಂದ ಹೇಳಿದ್ದಳು. 

ನಂಜುಂಡಪ್ಪ ಕಿಶನ್ ನ ಮುದ್ದು ಮುಖವನ್ನು ದಿಟ್ಟಿಸಿ ನೋಡ್ತಿದ್ದಾಗ ಅವನ ನೀಳವಾದ ಮೂಗು ಹೆಂಡತಿಯನ್ನು ಕಣ್ಣಪಾಪೆಗಳ ಮುಂದೆ ತಂದಿರಿಸಿತು. ಅವಳಿದ್ದಿದ್ದರೆ? ಮಗ ಮನೆಮಾರೋಕೆ ಬಿಡ್ತಿರ್ಲಿಲ್ಲ ಅನ್ನಿಸಿ ಮನಸ್ಸು ಕೊರಗಿತು.

‘ಲೇ ಮಲ್ಲಿ, ಯಾವಾಗ್ ಬಂದ್ಯೋ?’ ಲಕ್ಷ್ಮೀಶ ಹೆಗಲ ಮೇಲೆ ಹಲಸಿನ ಹಣ್ಣನ್ನು ಹೊತ್ತು ಕೂಗುತ್ತಾ ಬಂದ. ‘ಈಗ್ ತಾನೇ ಬಂದೆ’. ‘ಮಧ್ಯಾಹ್ನ ಊಟಕ್ಕೆ ನಮ್ಮನೇಗೇ ಬನ್ನಿ. ‘ಇಲ್ಲಪ್ಪಾ ತಡ ಆಗುತ್ತೆ ಇವತ್ತೇ ಹೊರಡ್ಬೇಕು ರಜೆ ತಗೊಂಡಿಲ್ಲ’. ‘ಅದೆಲ್ಲಾ ಬೇಡ ಈಗ ಹಲಸಿನ ಹಣ್ಣು ಬಿಡಿಸ್ತೀನಿ ಸ್ವಲ್ಪ ತಿಂದಿರಿ, ಸ್ವಲ್ಪಹೊತ್ತು ಕಳೆದ ಮೇಲೆ ಊಟ ಮಾಡಿ’ ಹಲಸಿನ ಘಮ ಮನೆ ತುಂಬಾ ಹರಡಿತು.

ಲಕ್ಷ್ಮೀಶ ಮನೋಜ್ ನ ಬಾಲ್ಯ ಸ್ನೇಹಿತ. ಸಣ್ಣ ಹೋಟೆಲ್ ನಡೆಸುತ್ತಾನೆ, ಧರ್ಮಸ್ಥಳಕ್ಕೆ ಹೋಗೋ ದಾರಿಯಲ್ಲಿರೋದರಿಂದ ಅವನ ವ್ಯಾಪಾರ ಚೆನ್ನಾಗೇ ಇದೆ, ಜೊತೆಗೆ ಅಪ್ಪನ ತೋಟದಿಂದಲೂ ವರಮಾನ ಬರುತ್ತೆ. ದೊಡ್ಡಮಗ ಆದ್ದರಿಂದ ತಾನೇ ಮುಂದೆ ನಿಂತು ಇಬ್ಬರು ತಂಗಿಯರ ಮದುವೆ ಮಾಡಿದ್ದಾನೆ, ಹೆಂಡತಿ ಮಕ್ಕಳನ್ನು ಬಿಟ್ಟು ಹದಿನೈದು ದಿನ ತಂದೆ ತಾಯಿಯರನ್ನ ಉತ್ತರ ಭಾರತ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಬಂದಿದ್ದ.

ಕಾಶಿಯಿಂದ ಅವನು ತಂದುಕೊಟ್ಟ ಗಂಗಾಜಲವನ್ನೇ ನಿಂಗಿಯ ಬಾಯಿಗೆ ಕಡೇದಾಗಿ ಬಿಟ್ಟಿದ್ದು. ತನ್ನ ಮಗ ಯಾಕೆ ಲಕ್ಷ್ಮೀಶನ ಹಾಗಿಲ್ಲ..? ಕಾರಣದ ಜಾಡು ಹಿಡಿದಾಗ ನಂಜುಂಡಪ್ಪನಿಗೆ ಸಿಕ್ಕ ಉತ್ತರ- ಅವನು ನನ್ನ ಮಗನ ಹಾಗೆ ಹೆಚ್ಚು ಓದಿಲ್ಲ. ಮಗ ಸಿಟಿಗೆ ಹೋಗಿ ಓದಲಿ ಅಂತ ಆಸೆ ಪಟ್ಟು ತಪ್ಪು ಮಾಡಿದ್ನಾ? ಹೆಚ್ಚು ಓದಿಸದೇ ಇದ್ದಿದ್ದರೆ ಇವತ್ತು ಅವನೂ ಲಕ್ಷ್ಮೀಶನ ಹಾಗೆ ಜೊತೆಗಿರುತ್ತಿದ್ನಾ? ನನ್ನ ಅಸ್ತಿತ್ವದ ಗುರುತಾಗಿರೋ ಮನೆಯನ್ನ ಶಾಶ್ವತವಾಗಿ ಬಿಟ್ಟು ಹೋಗೋದು ತಪ್ಪುತ್ತಿತ್ತಾ ಅಂತ ನಂಜುಂಡಪ್ಪನಿಗೆ ಅನ್ನಿಸದೇ ಇರಲಿಲ್ಲ. ಯುವಕರೆಲ್ಲಾ ಪೇಟೆಗೆ ಹೋಗಿ ಹಳ್ಳಿಗಳೆಲ್ಲಾ ವೃದ್ಧಾಶ್ರಮವಾಗ್ತಿರುವಾಗ ನಂಜುಂಡಪ್ಪನ ಕಣ್ಣಿಗೆ ಲಕ್ಷ್ಮೀಶ ವಿಶೇಷವಾಗಿ ಕಾಣುತ್ತಿದ್ದ.

‘ಇಲ್ಲಿ ರಿಸೆಪ್ಶನ್ ಬರುತ್ತೆ, ಮೂರು ಕೋಣೆಗಳು ಇದೆ, ಹಜಾರದಲ್ಲಿ ಬೆಡ್ ಹಾಕ್ಬೋದು,  ಒಳಮನೇಲ್ಲಿ ಡೈನಿಂಗ್ ಟೇಬಲ್ ಗಳನ್ನ ಜೋಡಿಸ್ಬೋದು ಇಲ್ಲಾಂದ್ರೆ ಇಲ್ಲೂ ಮಂಚಗಳನ್ನ ಹಾಕಿ ಫ಼್ಯಾಮಿಲಿ ರೂಮ್ ತರ ಮಾಡಿಕೊಳ್ಬೋದು ಅಂತ ಮನೆ ತೊರಿಸಿದ್ ತಕ್ಷಣ ಗಿರಾಕಿ ಪ್ಲಾನಿಂಗ್ ಶುರು ಮಾಡ್ಕೊಂಡ್ರು ಲಕ್ಷ್ಮೀ.

ಧರ್ಮಸ್ಥಳ, ಬೆಳ್ತಂಗಡಿ ಅಂತ ಟ್ರಿಪ್ ಬಂದೋರಿಗೆ ಉಳ್ಕೊಳ್ಳೋಕೆ ಹತ್ತಿರದಲ್ಲೇ ಒಳ್ಳೆ ಜಾಗ ಆಗುತ್ತೆ ಅಂತಾನೇ ನಾನ್ ಹೇಳಿದ್ ಅಷ್ಟ್ ದುಡ್ಡಿಗೆ ಮನೆ ಕೊಂಡುಕೊಳ್ತಿದ್ದಾರೆ ಕಣೋ’ ಸ್ನೇಹಿತನ ಉತ್ಸಾಹವನ್ನು ಲಕ್ಷ್ಮೀಶ ಗಮನಿಸದೇ ಇರ್ಲಿಲ್ಲ. ಇವ್ನು ಪಕ್ಕದ ಮನೆಯ ನಂಜುಂಡಪ್ಪ-ನಿಂಗಮ್ಮ ದಂಪತಿಯನ್ನ ಹುಟ್ಟಿದಾಗ್ಲಿಂದ ನೋಡಿಕೊಂಡು ಬಂದವನು, ಉದಯವಾರದ ನಂಜುಂಡಪ್ಪ ಮೇಷ್ಟ್ರಿಂದ ಗಣಿತ ಕಲಿತವರು ಪರೀಕ್ಷೆ ಮುಗಿದರೂ ಪಾಠವನ್ನ ಮರೀತಿರ್ಲಿಲ್ಲ. ಇವರ ಕ್ಲಾಸ್ ಶುರುವಾಗೋ ಮುನ್ನ ಹುಡುಗರು ಪ್ರತಿದಿನವೂ ಒಂದರಿಂದ ಇಪ್ಪತ್ತೈದರವರೆಗೂ ಮಗ್ಗಿ ಹೇಳಬೇಕಿತ್ತು.

ಹಾಗಾಗಿ ಇವತ್ತಿಗೂ ಲಕ್ಷ್ಮೀಶ ಒಂದು ದಿನವೂ ಹೋಟೆಲ್ ನಲ್ಲಿ ಬಿಲ್ ಮಾಡುವಾಗ ಕ್ಯಾಲ್ಕ್ಯುಲೇಟರ್ ಬಳಸಿಲ್ಲ. ಶಿಷ್ಯರಿಗೆ ಲೆಕ್ಕ ತಪ್ಪಾಗದಂತೆ ಕಲಿಸಿದ್ದ ಗುರುಗಳ ಜೀವನದ ಲೆಕ್ಕಾಚಾರವೇ ತಪ್ಪಿದಂತಿತ್ತು. ತಮ್ಮ ಕೊನೆಯುಸಿರಿರೋ ತನಕ ಇದೇ ಮನೇಲಿರ್ಬೇಕು ಅಂದುಕೊಂಡಿದ್ದು ಕೈಗೂಡುತ್ತಿಲ್ಲ. ಮಲ್ಲಿ, ನಿಮ್ಮಪ್ಪನ್ನ ಆಸೆಗೆ ಯಾಕೆ ಅಡ್ಡಿ ಆಗ್ತಿದ್ಯಾ ಅಂತ ಸ್ನೇಹಿತ ಅನ್ನೋ ಸಲಿಗೆಯಿಂದ ಕೇಳಬೇಕು ಅಂದುಕೊಂಡ. ನಂಜುಂಡಪ್ಪ ಮುಂಬೈಗೆ ಹೊರಡುತ್ತಿರುವುರ ಬಗ್ಗೆ ಊರಲ್ಲೆಲ್ಲಾ ಸುದ್ಧಿಯಾಗಿದೆ ಅಂದ್ರೆ ಅಪ್ಪ ಮಗನ ಸಮಾಲೋಚನೆಗೆ ಮುಕ್ತಾಯ ಹಾಡಿದಂತಿದೆ, ಮಲ್ಲಿಯ ವಿಶ್ವಾಸ ನೋಡುತ್ತಿದ್ದರೆ ಅವನು ಹೋಮ್ ಸ್ಟೇ ಅವರ ಕಡೆಯಿಂದ ಮುಂಗಡವನ್ನೂ ಪಡೆದಿರಬಹುದು, ಕಾಲ ಮಿಂಚಿದೆ ಅನ್ನಿಸಿ ಸುಮ್ಮನಾದ.

‘ನನ್ ತಂಗಿ ಗಂಡಾನೂ ಅದೇ ಕಂಪನೀಲಿ ಕೆಲ್ಸ ಮಾಡೋದು, ಬೆಂಗಳೂರಿನಲ್ಲಿ ಅದೇನೋ ಮಾನ್ಯತಾ ಟೆಕ್ ಪಾರ್ಕ್ ಅಂತಿದ್ಯಲ್ಲ ಅಲ್ಲಿ’. ‘ಬೆಂಗಳೂರೇ ನಂಗೂ ಇಷ್ಟ ಆಗಿತ್ತು, ಮಾರ್ಕೆಟಿಂಗ್ ಟೀಮ್ ಅಲ್ಲಿ ಬದಲಾದ್ದರಿಂದ ನನ್ನನ್ನ ಮುಂಬೈ ಗೆ ಟ್ರಾನ್ಸ್ಫ಼ರ್ ಮಾಡಿದ್ರು.. ಯಾವ್ದೇ ಆದ್ರೂ ಕಾಲಕ್ರಮೇಣ ಮನುಷ್ಯ ಹೊಂದುಕೊಂಡುಬಿಡ್ತಾನೆ’. ‘ಹಾಗೇನಿಲ್ಲಪ್ಪ, ನಮ್ ಜೊತೆ ಓದಿರೋರು ಎಷ್ಟೋಜನ ಇಲ್ಲಿಗ್ ಬಂದು ಹಳ್ಳಿನೇ ಚೆನ್ನಾಗಿದೆ, ಹೊಟ್ಟೆಪಾಡಿಗೆ ಅಂತ ಪಟ್ಟಣ ಹುಡ್ಕೊಂಡ್ ಹೋಗಿ ಬೇರು ಬಿಟ್ಟ ಗಿಡದ್ ತರ ಆಗ್ತೀವಿ ಅಂತಾರೆ. ಮೇಷ್ಟ್ರನ್ನಂತೂ ಭೇಟಿ ಆಗ್ದೇ ಹೋದೋರಿಲ್ಲ ಅಂತಿಟ್ಟುಕೋ’.

ಮನೋಜನಿಗೆ ಇದೆಲ್ಲಾ ಮನುಷ್ಯನ ಸಮರ್ಥನೆಗಳು ಅನ್ಸತ್ತೆ. ಪ್ರಾಕ್ಟಿಕಲ್ ಆಗಿ ನೋಡಿದ್ರೆ ಹಳ್ಳಿಯಲ್ಲಿ ಹುಟ್ಟಿದ್ರಿಂದ ತಾನು ಹಿಂದುಳಿದೆ, ಪಟ್ಟಣದಲ್ಲಿ ಓದಿ ವಿದೇಶದಲ್ಲಿ ಉನ್ನತಾಭ್ಯಾಸ ಮಾಡಿದೋರಿಗೆ ಸಿಗೋ ಮನ್ನಣೆ ನಮಗೆಲ್ಲಿ ಸಿಗುತ್ತೆ? ಯಾವಾಗ್ಲೋ ಒಮ್ಮೆ ಊರಿಗ್ ಬಂದು ಹಳೇ ಮನೆ, ಶಾಲೆ, ಮೇಷ್ಟ್ರು ಎಲ್ಲರನ್ನ ನೋಡಿ, ಹಳ್ಳೀನೇ ಚಂದ ಅಂತ ಡೈಲಾಗ್ ಹೊಡೆದು ವಾಪಸ್ ಪಟ್ಟಣದಲ್ಲಿ ಕಳೆದುಹೋಗೋ ಬೂಟಾಟಿಕೆ ನನ್ನದಲ್ಲ.

ಅಮ್ಮ ಹೋದ್ಮೇಲೆ ಅಪ್ಪನ್ನ ಒಬ್ಬನೇ ಬಿಡೋದು ಬೇಡ ಅಂತ ಮುಂಬಯಿಗೆ ಕರೆದುಕೊಂಡು ಹೋಗ್ತಿರೋದು, ಮನೇನ ಯಾರ್ ನೋಡ್ಕೋತಾರೆ? ಖಾಲಿ ಬಿಟ್ಟು ಧೂಳು ಹಿಡಿಯೋದ್ಯಾಕೆ? ಮಾರೋದೇ ಸರಿ ಅನ್ನೋದು ಇವನ ವಾದ. ‘ಮೂರ್ ಹೊತ್ತು ಮನೇಲಿದ್ದು ಕಿಶನ್ ನ ನೋಡಿಕೊಂಡ್ರೆ ನನ್ ಕೆರಿಯರ್ ಏನಾಗ್ನೇಕು? ನಿಮ್ಮಪ್ಪ ಇದ್ರೆ ನಂಗೂ ಸಹಾಯ ಆಗುತ್ತೆ’ ಹೆಂಡತಿ ಹೇಳಿದ್ದ ಈ ಮಾತೂ ಅವನ ನಿರ್ಧಾರಕ್ಕೆ ಪುಷ್ಠಿ ನೀಡಿತ್ತು.

ಲಕ್ಷ್ಮೀಶನ ಮನೇಲಿ ಅವನ ಹೆಂಡತಿ ಹಬ್ಬದೂಟ ಬಡಿಸಿದ್ಲು, ಊಟದ ನಂತ್ರ ಕಿಶನ್ ಲಕ್ಷ್ಮೀಶನ ಮಗಳ ಜೊತೆ ಆಟ ಆಡ್ತೀನಿ ಅಂತ ಕೂತ. ಮನೆಗೆ ತಂದಾಗಿನಿಂದ ಸರಿಯಾಗಿ ಊಟ ಮಾಡಿರದ ರೂಬಿಗೂ ಅವರ ಮನೆಯ ಹಾಲು ಅನ್ನ ರುಚಿಸಿತ್ತು. ಮನೇಲಿದ್ದ ಎರಡು ಆಕಳನ್ನು ಲಕ್ಷ್ಮೀಶನ ಮನೆಗೆ ಕೊಡುವ ವಿಷಯ ಇಟ್ಟುಕೊಂಡು ಸಂಜೆ ಐದಾದ್ರೂ ಅಪ್ಪ ಅವರಿವರ ಜೊತೆ ಹರಟುತ್ತಾ ಕೂತ್ರು. ಇಷ್ಟು ನಿಧಾನವಾದ್ರೇ ಇವತ್ತಿಗೆ ಕೆಲ್ಸ ಮುಗಿಯಲ್ಲ ಅಂತ ಮನೋಜ್ ತಾನೇ ಪ್ಯಾಕಿಂಗ್ ಮಾಡೋಕೆ ನಿಂತ. ‘ಅಪ್ಪ ಏನೇನ್ ಇಟ್ಕೋಬೇಕು ಹೇಳು ಒಂದು ದೊಡ್ ಬ್ಯಾಗ್ ಸಾಕಾಗುತ್ತಲ್ವ ಬೇರೆ ಎಲ್ಲಾ ಇಲ್ಲೇ ಇರ್ಲಿ’. ‘ನಿನ್ನ ಯೋಚ್ನೇನ ಬದಲಾಯಿಸೋಕಾಗ್ದೇ ಮನೇನ ಮಾರೋಕೆ ಒಪ್ಪಿದ್ದೀನಿ, ಆದ್ರೆ ಸಾಮಾನುಗಳನ್ನ ಏನ್ ಮಾಡ್ಬೇಕು ಅಂತ ನಾನ್ ನಿರ್ಧಾರ ಮಾಡ್ತೀನಿ. ನಿಂಗಿ ಈ ಮಂಚದ್ಮೇಲೇ ಕಣ್ಣು ಮುಚ್ಚಿದ್ಲು. ಇದನ್ನ ನಿಮ್ಮನೇಗ್ ಸಾಗಿಸೋಣ’. ‘ಹೇಗಪ್ಪ ಸಾಗ್ಸೋಕಾಗುತ್ತೆ? ಕಾರ್ ತಂದಿರೋದು ನಾನು, ಲಾರಿ ಅಲ್ಲ’ ‘ಲಾರೀನೇ ತರ್ಸು, ನಾನ್ ಎಲ್ಲಿರ್ತೀನೋ ಅಲ್ಲೇ ಈ ಮಂಚಾನೂ ಇರ್ಬೇಕು’ ನಂಜುಂಡಪ್ಪ ಹಟ ಮಾಡಿ ಮಂಚವನ್ನ ಬಿಡಲ್ಲ ಅನ್ನೋತರ ಅದರ ಮೇಲೆ ಕೂತರು.

ಮನೆಯ ಪೀಠೋಪಕರಣಗಳು ಅಜ್ಜನ ಕಾಲದ್ದು, ಆಂಟಿಕ್ ಲುಕ್ ಇದೆ ಅತಿಥಿಗಳಿಗೂ ಇಷ್ಟ ಆಗುತ್ತೆ ಅಂತ ಹೇಳಿ ಸೆಮಿ ಫ಼ರ್ನಿಶ್ಡ್ ಹೌಸ್ ಲೆಕ್ಕದಲ್ಲಿ ಮನೋಜ್ ಮನೆಯ ಬೆಲೆ ಮಾತಾಡಿದ್ದ. ಮಂಚವನ್ನು ಇಲ್ಲೇ ಬಿಟ್ಟುಹೋಗೋ ಹಾಗೆ ಮನವರಿಕೆ ಮಾಡೋ ಪ್ರಯತ್ನ ಮಾಡಿದ, ಕೂಗಾಡಿದ, ಮನವಿ ಮಾಡಿಕೊಂಡ. ಯಾವುದೇ ಕ್ಲೈಂಟ್ ನ್ನಾದ್ರೂ ಮಾತಿನಲ್ಲೇ ಒಪ್ಪಿಸುತ್ತಿದ್ದವನು, ಕಲಿತ ವಿದ್ಯೇನೆಲ್ಲಾ ಖರ್ಚು ಮಾಡಿದರೂ ಅಪ್ಪನನ್ನು ಒಪ್ಪಿಸೋಕೆ ಸಾಧ್ಯವಾಗಲಿಲ್ಲ. ಕತ್ತಲಾಯಿತು, ಅಪ್ಪ ಜಪ್ಪಯ್ಯ ಅಂದ್ರು ಮಂಚವನ್ನ ಬಿಟ್ಟು ಕದಲಲಿಲ್ಲ. ಮನೋಜ್ ‘ಸರಿ ಬಿಡಿ, ನಾಳೆ ಗಾಡಿ ತರಿಸ್ತೀನಿ, ಅದ್ರಲ್ಲಿ ಹಾಕಿಕೊಂಡು ಬೆಳಗ್ಗೇನೇ ಹೊರಡೋಣ’ ಅಂದ.

‘ಪಾಪಾ.. ಪಲ್ಲವಿ ನಾನು ರೂಬಿದು ಡ್ರಾಯಿಂಗ್ ಮಾಡಿದ್ದೀವಿ, ಪಲ್ಲವಿ ಮನೇಲಿ ಕೌ ಕಕ್ಕ ಮಾಡ್ತು, ರೂಬಿ ಅದಕ್ಕೆ ಹೆದ್ರಿ ಬೌ ಬೌ ಅಂತು, ಆಂಟಿ ಸ್ವೀಟ್ ಮಾಡ್ಕೊಟ್ರು, ಕೆಂಚ ಮತ್ತೆ ಕರಿಯ ನಾಯಿಗಳ ಜೊತೆ ಸೇರಿ ರೂಬಿ ಹಾಲು ಅನ್ನ ತಿನ್ನೋಕೆ ಶುರು ಮಾಡ್ತು, ಅವ್ರ್ ಮನೇಲಿ ಟಾಕಿಂಗ್ ಪ್ಯಾರೆಟ್ ಇದೆ ಗ್ರೀನ್ ಕಲರ್ ದು, ಮೊಲ ಇದೆ…’ ಇಡೀ ರಾತ್ರಿ ಕಿಶನ್ ಬಾಯಲ್ಲಿ ಲಕ್ಷ್ಮೀಶನ ಮನೇಲಿ ಆಡೋಕೆ ಹೋದಾಗ ಏನಾಯ್ತು ಅನ್ನೋದರ ಬಗ್ಗೆಯೇ ಮಾತು.

ಮಂಚದ ವಿಷ್ಯದಲ್ಲಿ ಮೂಡು ಹಾಳುಮಾಡಿಕೊಂಡಿದ್ದ ಅಪ್ಪ ಮಗನಿಗೆ ಕಿಶನ್ ನ ಮುಗ್ಧ ತೊದಲು ಮಾತು ನಗು ತರಿಸಿತು. ನಂಜುಂಡಪ್ಪನಿಗಂತೂ ಮೊಮ್ಮಗನ ಹಿಂದಿ-ಇಂಗ್ಲಿಷ್ ಮಿಶ್ರಿತ ಕನ್ನಡ ಭಾಷೆ ಅರ್ಥವಾಗದೇ ಇದ್ದಾಗ ಮನೋಜನೇ ವಿವರಿಸ್ಬೇಕಾಯಿತು. ಎದೆ ಮೇಲೆ ಮಲಗಿದ್ದ ಮೊಮ್ಮಗನ ಬೆನ್ನು ತಟ್ಟುತ್ತಾ ನಂಜುಂಡಪ್ಪ ಸೂರು ನೋಡುತ್ತಾ ಮಲಗಿದ್ದಾಗ ಇದೇ ಈ ಮನೆಯಲ್ಲಿ ಕೊನೇ ರಾತ್ರಿ ಅನ್ನೋದು ನೆನಪಾಗಿ ಹರಿದ ಕಣ್ಣೀರು ದಿಂಬನ್ನು ಒದ್ದೆಯಾಗಿಸಿತು.

‘ಇಲ್ ನೋಡು ರೂಬಿ’ ಬೆಳಬೆಳಗ್ಗೆ ಲಕ್ಷ್ಮೀಶನ ಮನೆಗೆ ಕಿಶನ್ ಅಪ್ಪ, ತಾತನ ಕೈ ಹಿಡಿದು ಎಳೆದುಕೊಂಡು ಬಂದಿದ್ದ. ಪೆನ್ಸಿಲ್ ನಲ್ಲಿ ಬರೆದು ಬಣ್ಣ ತುಂಬಿದ್ದ ಚಿತ್ರದಲ್ಲಿ ರೂಬಿ ಎಲ್ಲಿದೆ ಅಂತ ಹುಡುಕಬೇಕಿತ್ತು. ಎರಡು ಕಣ್ಣುಗಳು ಮತ್ತು ಬಾಲ ಇದ್ದಿದ್ದಕ್ಕೆ ಅದು ಒಂದು ನಾಯಿಮರಿ ಅಂದುಕೊಳ್ಳಬಹುದಾಗಿತ್ತು. ದೊಡ್ಡವರೆಲ್ರೂ ಮಕ್ಕಳ ಅದ್ಭುತ ಕಲಾಕೃತಿಗೆ ಶಬ್ಬಾಷ್ಗಿರಿ ಕೊಟ್ಟರು.

ಕಿಶನ್ ಮತ್ತು ಲಕ್ಷ್ಮೀಶನ ಏಳು ವರ್ಷದ ಮಗಳು ನಿಮ್ಮಲ್ಲಿ ಒಬ್ಬರ ಡ್ರಾಯಿಂಗ್ ಮಾಡ್ತೀವಿ ಅಂತ ಕೂತಾಗ ಅವರ ಕಲೆಗೆ ಸ್ಪೂರ್ತಿಯಾಗೋಕೆ ಭಯಪಟ್ಟು, ಮನೋಜ ತಡ ಆಗ್ತಿದೆ ಹೊರಡೋಣ ಅಂದ. ‘ಅಂಕಲ್ ಒಂದು ಪ್ರಶ್ನೆ.. ನಿಮ್ ಹೆಸ್ರು ಮಲ್ಲೀನಾ? ಮನೋಜ್-ಆ? ಕಿಶನ್ ನಿಮ್ ಹೆಸ್ರು ಮನೋಜ್ ಅಂದ,’ ಪಲ್ಲವಿ ಕೇಳಿದಳು.. ಮಲ್ಲಿಕಾರ್ಜುನನಿಗೆ ತನ್ನ ಊರು, ಹೆಸರು ಎಲ್ಲದರ ಬಗ್ಗೆ ಒಂದು ತರಹದ ಕೀಳರಿಮೆ. ಬೆಂಗಳೂರಿನಲ್ಲಿ ಓದುತ್ತಿದ್ದಾಗ ಹೆಸರನ್ನ ಬದಲಾಯಿಸಿಕೊಂಡಿದ್ದ. ‘ನಾನು ಈಗ ಮನೋಜ್ ಪುಟ್ಟಿ’ ಎಂದಾಗ ನಂಜುಂಡಪ್ಪ ಬಲವಂತವಾಗಿ ನಗು ಬೀರಿದ.

ಮನೆಯನ್ನೆಲ್ಲಾ ಒಂದು ಸಲ ಪರಿಶೀಲಿಸುತ್ತಾ ಮನೋಜ್ ತನ್ನ ಕೋಣೆಗೆ ಬಂದಾಗ ನೇತುಹಾಕಿದ್ದ ಅಪ್ಪ ಅಮ್ಮನ ಕಪ್ಪುಬಿಳುಪಿನ ಚಿತ್ರ ಕಂಡಿತು. ಬೀರೂ ಮೇಲಿನ  ಕನ್ನಡಿಯನ್ನು ನೋಡಿಕೊಂಡ. ಅಪ್ಪನ ರೂಪವೇ ನನಗೆ ಬಂದಿದೆ ಅನ್ನಿಸಿತು. ಚಿತ್ರದಲ್ಲಿ ಅಪ್ಪನಿಗೆ ಈಗ ನನಗಾಗಿರುವಷ್ಟೇ ವಯಸ್ಸಿದ್ದಿರಬಹುದು, ಇನ್ನೂ ಹತ್ತಿರ ಹೋಗಿ ನೋಡಿದ.. ಮೂಗು ಅಪ್ಪನ ಹಾಗೆ ಉದ್ದ ಇಲ್ಲ, ಅಮ್ಮನ ಮೊಂಡ ಮೂಗು ನನಗೆ ಬಂದಿದೆ, ಅದಕ್ಕೆ ಅಮ್ಮ ನನ್ನ ಮಗುವಿನ ಮೂಗಿನ ಕಂಬ ಉದ್ದವಿರಬೇಕೆಂದು ಆಗಾಗ ಹೇಳ್ತಿದ್ಲು ಅಂತ ನೆನಪಾಗಿ ಮುಗುಳ್ನಕ್ಕ. ಬೀರು ಮೇಲೆ ಅಂಟಿಸಿದ್ದ ಸ್ಟಿಕ್ಕರ್ ಗಳು ಅವನ ಬಾಲ್ಯವನ್ನ ನೆನಪಿಸಿತು.]

ಶಾಲಾ ಪ್ರವಾಸಕ್ಕೆಂದು ಹೋದಾಗ ಸ್ನೇಹಿತನ ಬ್ಯಾಗ್ನಿಂದ ಬಬಲ್ ಗಮ್ ಗೆ ಉಚಿತವಾಗಿ ಸಿಕ್ಕ ಕಾರ್ಟೂನ್ ಟ್ಯಾಟೋ ಗಳನ್ನ ಕದ್ದು ತಂದು ಬೀರೂ ಮೇಲೆ ಅಂಟಿಸಿದ್ದ. ಯಾವತ್ತಾದರೂ ಅವನಿಗೆ ಗೊತ್ತಾಗಿ ಬಿಟ್ಟರೆ ಅನ್ನೋ ಭಯದಲ್ಲಿ ಅವನ ಜೊತೆ ಜಗಳ ಮಾಡಿಕೊಂಡು ಅವನು ಮನೆಗೆ ಬರದ ಹಾಗೆ ಮಾಡಿದ್ದ. ಮೂಲೆಯಲ್ಲಿದ್ದ ಗೋಲಿ ಬೋರ್ಡ್ ನ ನೋಡಿದಾಗ ಲಕ್ಷ್ಮೀಶನ್ ಜೊತೆ ಗೋಲಿ ಆಡ್ತಿದ್ದು ನೆನಪಾಯಿತು. ಕಡೇಲಿ ಒಂದೇ ಗೋಲಿ ಉಳಿಸೋದು ಹೇಗೆ ಅಂತ ಇಂದಿಗೂ ನನಗೆ ಬರೋದಿಲ್ವಲ್ಲ.. ಮುಂದಿನ ಸಲ ಬಂದಾಗ ಲಕ್ಷ್ಮೀಶನ ಜೊತೆ ಆಡಿ ಕಲ್ತ್ಕೋಬೇಕು.. ‘ಮುಂದಿನ ಸಲ ಯಾವಾಗ್ ಬರ್ತೀನಿ?’ ಅರಿವಿಲ್ಲದೇ ಬಾಯಿಂದ ಬಂದ ಉದ್ಗಾರಕ್ಕೆ ಉತ್ತರ ಹೊಳೆಯಲಿಲ್ಲ.

ಹನ್ನೊಂದುಗಂಟೆ ಸುಮಾರಿಗೆ ಸಕಲೇಶಪುರದಿಂದ ಬಂದ ಮಹಿಂದ್ರಾ ಸುಪ್ರೋ ಲಗೇಜ್ ಗಾಡಿಯಲ್ಲಿ ಮಂಚ ತಗೆದುಕೊಂಡು ಹೋಗೋದು ಅಂತಾಗಿತ್ತು. ಮನೆಯೊಳಗೆ ಅದನ್ನ ಡಿಟಾಚ್ ಮಾಡುವಾಗ ನಂಜುಂಡಣ್ಣ ಮಂಚದ ಕೀಲುಗಳು ಎಲ್ಲಿಗೂ ತಾಕದೇ ಇರೋ ಹಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ಮಂಚವನ್ನ ಗಾಡಿಗೆ ಸಾಗಿಸಿ, ಕಡೆಯ ಬಾರಿ ಮನೆಯ ಬಾಗಿಲಿಗೆ ಬೀಗ ಹಾಕುವಾಗ ನಂಜುಂಡಣ್ಣನ ಕಣ್ಣು ತೇವಗೊಂಡವು.

ಎಲ್ಲೇ ಹೋದರೂ ನಮ್ಮ ಮನೆಗೆ ವಾಪಸ್ಸಾದಾಗ ಸಿಗೋ ನೆಮ್ಮದಿ ಇನ್ನೆಲ್ಲೂ ಸಿಗಲ್ಲ, ನನ್ನ ನೆಮ್ಮದಿಯನ್ನ ಕಳೆದುಕೊಂಡು ಹೋಗ್ತಿದ್ದೇನೆ, ನಾನು ಸತ್ತರೂ ಇಲ್ಲಿಗೆ ಬರೋದಕ್ಕೆ ಸಾಧ್ಯವಿಲ್ಲ ಅನ್ನೋ ನೋವು ಎದೆಯಲ್ಲಿ ಚುಚ್ಚಿತು. ಭಾರವಾದ ಹೆಜ್ಜೆ ಇಡುತ್ತಾ ಹೋಗಿ ಕಾರಿನ ಸೀಟ್ ಮೇಲೆ ಕೂತರು. ಅಷ್ತ್ರಲ್ಲಿ ಬಂದ ಊರಿನ ಕೆಲವರು ನಂಜುಂಡಣ್ಣ ಊರು ಬಿಟ್ಟು ಹೋಗ್ತಿದ್ದಾನೆ ಅಂತ ಕಣ್ತುಂಬಿಕೊಂಡು ಆಶೀರ್ವಾದ ತಗೊಂಡ್ರು. ಒಂದಿಬ್ಬರು ನಂಜುಂಡನ್ನ ಸಂಪರ್ಕ ಮಾಡೋದ್ ಹೇಗೆ ಅಂತ ಕೇಳಿ ಮನೋಜನ ನಂಬರ್ ನ ಕೈ ಮೇಲೆ ಬರೆದುಕೊಂಡ್ರು. ‘ಈಗ ಇದನ್ ಇಟ್ಕೊಳ್ಳಿ ಇನ್ನೊಂದೆರಡು ದಿನದಲ್ಲಿ ಅಪ್ಪ ಹೊಸಾ ಫೋನ್ ತಗೋತಾರೆ’ ಅಂದ.

‘ರೂಬಿ ಕಮ್, ಬಾ ರೂಬಿ’ ಕಿಶನ್ ತನ್ನ ಮುದ್ದಿನ ನಾಯಿ ಮರಿಯನ್ನ ಎಳೆದುತರೋಕೆ ಪ್ರಯತ್ನ ಮಾಡ್ತಿದ್ದ, ನಾಯಿ ಮರಿ ತನ್ನ ಕಾಲುಗುರುಗಳ ಪಂಜರ ಬಿಚ್ಚಿ ನೆಲವನ್ನ ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತ್ತು. ಪಲ್ಲವಿ ಮನೆಯವರನ್ನು ಬಿಟ್ಟು ಬರಲ್ಲ ಅಂತ ರಚ್ಚೆ ಹಿಡಿದಂತಿತ್ತು. ‘ಎಳೀ ಬೇಡ, ಎತ್ಕೊಂಡ್ ಬಾ ಕಿಶನ್’ ಮನೋಜ್ ಕೂಗಿ ಹೇಳಿದ. ಅದನ್ನೇ ನೋಡುತ್ತಿದ್ದ ನಂಜುಂಡಪ್ಪ ‘ನೀನು ಕರೆದುಕೊಂಡು ಹೋಗೋ ಕಡೆ  ಹೋಗ್ಬೇಕು, ನನಗೂ ಅದಕ್ಕೂ ಏನೂ ವ್ಯತ್ಯಾಸ ಇಲ್ಲ ಅಲ್ವಾ?’ ಎಂದ. ಮನೋಜ್ ಒಂದು ಕ್ಷಣ ಸ್ತಬ್ದನಾದ. ಈ ನಾಯಿ ಮರಿಗೆ ಇಷ್ಟು ಹಟವೇ! ಕೋಪ ಬಂದು ಕಾರಿನಿಂದ ಇಳಿದು ಮಗನನ್ನೂ ನಾಯಿಮರಿಯನ್ನೂ ಎಳೆದುಕೊಂಡು ಬಂದು ಹಿಂದಿನ ಸೀಟಿನಲ್ಲಿ ಕೂರಿಸಿದ. ಕಾರ್ ಹೊರಟಾಗ ಹಿಂದೆ ಲಗೇಜ್ ಗಾಡಿಯೂ ಹೊರಟಿತು.

ಕಿಟಕೆ ಏರಿಸಿ ಏಸಿ ಹಾಕಿದ್ದ ಕಾರಿನಲ್ಲಿ ಮೌನ ಗವ್ ಅನ್ನುತ್ತಿತ್ತು. ರೂಬಿ ಮೆಲ್ಲಗೆ ಕುಯ್ ಕುಯ್ ಅನ್ನೋಕೆ ಶುರು ಮಾಡ್ತು. ಒಂದೇ ದಿನಕ್ಕೆ ಹಚ್ಚಿಕೊಂಡಿರೋರನ್ನ ಬಿಟ್ಟುಬರೋದಕ್ಕೆ ಈ ಮೂಕಪ್ರಾಣಿ ಇಷ್ಟು ಹಟ ಮಾಡ್ತು, ಇನ್ನುಇಡೀ ಜೀವನ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದ ಮನೇನ, ಊರನ್ನ ತೊರೆಯೋದಕ್ಕೆ ಅಪ್ಪ ಇನ್ನೆಷ್ಟು ಕೊರಗುತ್ತಿರಬಹುದು? ಅಪ್ಪ ತನ್ನನ್ನ ತಾನು ಸ್ವಾತಂತ್ರ್ಯವಿಲ್ಲದ ನಾಯಿಮರಿಗೆ ಹೋಲಿಸಿಕೊಂಡ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಪ್ರತಿಧ್ವನಿಸಿತು, ಊರಲ್ಲಿ ಅವರಿಗಿರೋ ಮನ್ನಣೆ, ಬಾಂಧವ್ಯ, ಮನೆಯ ನೆನಪು, ಲಕ್ಶ್ಮೀಶನ ಗೋಲಿ, ಎಲ್ಲವೂ ಮನೋಜನ ಸ್ಮೃತಿಪಟಲದಲ್ಲಿ ಸರಿಯಿತು. ಫೋನ್ ರಿಂಗಾದಾಗ ಒಮ್ಮೆ ಬೆಚ್ಚಿದ. ಸ್ಟೇರಿಂಗ್ ತುದೀಲಿದ್ದ ಬಟನ್ ನ ಒತ್ತಿ ಬ್ಲೂಟೂತ್ ಮೂಲಕ ಫೋನ್ ರಿಸೀವ್ ಮಾಡಿದ. ‘ಸರ್, ನೀವು ಐ ಎಫ಼್ ಎಸ್ ಸಿ ಕೋಡ್ ಕಳ್ಸಿರ್ಲಿಲ್ಲ ಅಡ್ವಾನ್ಸ್ ಕಳಿಸೋಣ ಅಂತಿದ್ದೆ’. ಮನೆ ಖರೀದಿಗಾರ ಫೋನ್ ಮಾಡಿದ್ದ.

ಅಪ್ಪ ಬೇಸರದಲ್ಲಿದ್ದಾರೆ ಅಂತಾನೋ ಅಥವಾ ಎಷ್ಟೋ ದಿನಗಳ ನಂತರ ಹುಟ್ಟಿದ ಮನೆಯನ್ನ ನೋಡಿದರ ಸೆಳೆತವೋ ಏನೋ, ಇದು ನನ್ನ ನಿರ್ಧಾರವನ್ನ ಪರಿಶೀಲಿಸಿಕೊಳ್ಳೋದಕ್ಕೆ ಒದಗಿಬಂದಿರೋ ಕೊನೇ ಅವಕಾಶ ಅನ್ನಿಸಿತು. ತುಸು ಯೋಚಿಸಿ ‘ಸರ್, ಕ್ಷಮಿಸಿ ಸಧ್ಯಕ್ಕೆ ನಾನು ಮನೆ ಮಾರೋದು ಬೇಡ ಅಂದುಕೊಂಡಿದ್ದೀನಿ. ಅಡ್ವಾನ್ಸ್ ಹಾಕೋದ್ ಬೇಡ. ಐ ಚೇಂಜ್ಡ್ ಮೈ ಮೈಂಡ್. ಸಾರಿ’ ಅಂದ. ನಂಜುಂಡಣ್ಣನ ಮುಖ ಅರಳಿತು.

‘ಬೊಂಬೈ ಗೆ ಹೋಗಿ ನಮ್ಮನ್ನೆಲ್ಲಾ ಮರೀಬೇಡ ನಂಜುಂಡಣ್ಣ’ ಎಳ್ನೀರು ಕೊಚ್ಚುತ್ತಾ ಸೀನ ಕೂಗಿದಾಗ ನಂಜುಂಡಣ್ಣ ಕಾರಿನ ಕಿಟಕಿ ಇಳಿಸಿ ‘ಏ ಇಲ್ಲಪ್ಪಾ.. ನನ್ ಮೊಮ್ಮಗ ಅವ್ನ್ ಊರಿನ್ ಚಿತ್ರ ಬರ್ದಿದ್ದಾನೆ, ನೋಡ್ಕೊಂಡ್ ವಾಪಸ್ ಬರ್ತೀನಿ’. ನಂಜುಂಡಣ್ಣನ ಕಣ್ಣಲ್ಲಿ ವಿಶ್ವಾಸ ತುಂಬಿತ್ತು.

‍ಲೇಖಕರು Avadhi

June 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

43 ಪ್ರತಿಕ್ರಿಯೆಗಳು

  1. Sushmith K S

    ಕಥೆ ಸಲ್ಪ ಉದ್ದ ಆದರೂ ಚೆನ್ನಾಗಿದೆ ಅಂತ ಅನಿಸ್ತು..ಈಗಿನ ಕಾಲಕ್ಕೆ almost ಎಲ್ಲರ ಮನೆಯಲ್ಲೂ ನಡೆಯ ಬಹುದಾದಂತಹ ಘಟನೆ, ಅದ್ರಲ್ಲೂ ಮಕ್ಕಳು ಪೇಟೆಯಲ್ಲಿ, ಹೆತ್ತವರು ಊರಲ್ಲಿ ಅಂತ ಇದ್ರೆ ಕೇಳೋದೇ ಬೇಡ..ನಮಿಗೆ ಒಂದೊಂದ್ಸರಿ ಬಾಡಿದೆ ಮನೆ ಬಿಟ್ಟು ಹೋಗೋವಾಗ ಈ ಥರ feel ಆಗೋದುಂಟು..! ನಿಮಗೆ ಈ ಥರದ ಅನುಭವ ಆಗಿದ್ಯ?

    ಪ್ರತಿಕ್ರಿಯೆ
    • ರವಿ

      ನಮಸ್ತೆ ಮೇಡಂ

      ಕಥೆ ತುಂಬಾ ಚೆನ್ನಾಗಿದೆ ಮೇಡಂ,
      ಭಾಷೆಯ ಹಿಡಿತ ,ಭಾವ ಎಲ್ಲವೂ

      ಮನೆ ಎಂದರೆ ಕೇವಲ ನಾಲ್ಕಾರು ಬಣ್ಣ ಮಾಸಿದ ಗೋಡೆಗಳು ,ಹಳೆಯ ವಸ್ತುಗಳ ಕಟ್ಟಡವಲ್ಲ
      ಅದರಲ್ಲಿ ,ಖುಷಿ ದುಃಖ ಜಗಳ ಪ್ರೀತಿ ಭಾಂದವ್ಯ ಇಂತಹ ಅದೆಷ್ಟೋ ನೆನಪುಗಳು ತುಂಬಿರುತ್ತೆ ,
      ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ನಗರಕ್ಕೆ ವ್ಯಾಮೋಹಿತರಾಗಿ ತಾವು ಹುಟ್ಟಿ ಬೆಳೆದ ಊರು ,ಮನೆಯನ್ನು ಕಾಲನಂತರ ಮರೆತು ಬಿಡುವುದು ಪ್ರಸ್ತುತದಲ್ಲಿ ಸರ್ವೆ ಸಾಮಾನ್ಯವಾಗಿದೆ , ನಂಜುಂಡಣ್ಣ ನಂತಹ ಎಷ್ಟೋ ವಯಸ್ಸಾದ ವ್ಯಕ್ತಿಗಳು ತಮ್ಮ ಮಕ್ಕಳ ಒತ್ತಾಯಕ್ಕೆ ಮಣಿದು ತಾವು ಹುಟ್ಟಿ ಬೆಳೆದ ಊರು ,ಮನೆಯನ್ನು ತೊರೆಯುವ ಸ್ಥಿತಿ ದುಃಖಕರ ….

      ಕೊನೆಯಲ್ಲಿ ಮನೋಜನ ಮನಸ್ಥಿತಿ ಬದಲಾಗಿ ಮನೆಯನ್ನ ಮಾರದೆ ಇದ್ದಿದ್ದು ಕಥೆಗೆ ಸಂತಸದ
      ಅಂತ್ಯ ಸಿಕ್ಕಿದೆ …..

      ಹೀಗೆಯೇ ಸಾಗಲಿ ನಿಮ್ಮ ಈ ಕಥಾಯಾನ

      ಪ್ರತಿಕ್ರಿಯೆ
      • Mahadev S Patil Gadlegaon

        ಕನ್ನಡತಿ ಧಾರಾವಾಹಿಯಲ್ಲಿ ಒಂದು ಒಂದು ಪದಗಳಿಗೆ ಏನು ಏನು ಅರ್ಥ ಇದೇವ್ ತುಂಬಾ ಸೂಕ್ಷ್ಮ ಕೂಡತೀರಾ

        ಪ್ರತಿಕ್ರಿಯೆ
    • vinukumar

      ಹೀಗೆ ಸಾಗುತಿರಲಿ ನಿಮ್ಮ ಕಥಾ ಪಯಣ…….

      ಪ್ರತಿಕ್ರಿಯೆ
    • ಸುಧಾ ಎಮ್

      ನಿಜಕ್ಕೂ ಈ ಕಥೆ ತುಂಬಾ ಚೆನ್ನಾಗಿದೆ, ನಾನು ಕೂಡ ಒಂದು ಅನಿವಾರ್ಯ ಕಾರಣಗಳಿಂದ ಮನೆ ಮಾರಿ ಊರು ಬಿಟ್ಟ ಸಂದರ್ಭ ನೆನಪಿಗೆ ಬಂದು ಕಣ್ಣು ತುಂಬಿ ಬಂತು.
      ಹೇಗೇ ಸಾಗಲಿ ನಿಮ್ಮ ಸಾಹಿತ್ಯ ಯಾತ್ರೆ

      ಪ್ರತಿಕ್ರಿಯೆ
    • Supriya

      Sukshmavagi, manasige artha madisuva, egina peelige ge sariyada kathe…its beyond words akka…tumba chanagide…

      ಪ್ರತಿಕ್ರಿಯೆ
    • Suvarna yadav

      Kathe thumba chennagide mam, school alle kone books odiddu. Thumba dina admele ee thara kathe na odiddu . City janakke matte tam halli nenp agirutte idan odidmele. Mansige onthara hitha kodtu.Thanks mam .Innu ide reeti halavaru kathe bariri anta kelkotini

      ಪ್ರತಿಕ್ರಿಯೆ
    • Susheela

      ಭಾವನಾತ್ಮಕ ಸಂಬಂಧ ಮನ ಮಿಡಿಯುವ ಹೃದಯಕ್ಕೆ ಹತ್ತಿರವಾಗಿ ಕಥೆ ತುಂಬಾ ಚೆನ್ನಾಗಿದೆ ಶುಭವಾಗಲಿ

      ಪ್ರತಿಕ್ರಿಯೆ
    • ಧೀಷ್ಮಾ

      ನಂಜುಂಡಯ್ಯ ಮೇಷ್ಟ್ರ ಭರವಸೆಯ ಹಿಂದಿರುವ ಹೊಸ ಆಶಯದ ಕಥೆ ತುಂಬಾ ಚೆನ್ನಾಗಿದೆ

      ಪ್ರತಿಕ್ರಿಯೆ
    • Seema

      ಭಾವನೆಗಳ ಅನಾವರಣ ಇನ್ನೂ ಆಗಿದ್ದರೆ ಚಂದವಿರುತ್ತಿತ್ತೇನೋ ಅಂತ ಅನಿಸಿತು. ಆದರೂ ದೀರ್ಘವಾದ ಓದು ಸುಖಾಂತ್ಯವಾದಾಗ ಖುಷಿಯಾಯಿತು

      ಪ್ರತಿಕ್ರಿಯೆ
    • Rajeshwari kamadhenu

      E Kathe egin kalakke tumbane holutte bahala varshadinda upayogastiro vastugalu
      Mattu vahanagalagali avagalamele ontnara bandavya huttkondabittirotte innu maneyalli antu adida atagalu mattu chikkavarinda illiyavaragen memorygalu tumbane irrotte astondu hachkondirayevi . E kathe tumbane istavayitu .

      ಪ್ರತಿಕ್ರಿಯೆ
  2. Ananya

    nanu nivu social media dali hakodrolge odbitte website nalli agle upload madidru wait madoke aglila 2 days inda friday yavaga agutho antha wait madthaede nivu yavdu jagtide karkond hoktira your my favourite akka nimma kathe shyli adrali ero msg nivu tumba ista

    ಪ್ರತಿಕ್ರಿಯೆ
  3. Harsha

    ರಂಜಿನಿಯವರೆ ನಿಮ್ಮ ಕಥೆಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ…

    ಮೂರೂ ಕಥೆಗಳ ವಿಷಯ, ಬೆಳವಣಿಗೆ ತುಂಬಾ ಚೆನ್ನಾಗಿ ಮಾಡಿರುತ್ತೀರಿ… ಹಳ್ಳಿಗಳಷ್ಟೇ ಅಲ್ಲ ಎರಡನೇ ದರ್ಜೆಯ ಸಣ್ಣ ನಗರಗಳು ಇಂದು ಯುಕರಿಲ್ಲದೆ ಖಾಲಿ ಹೊಡೀತಿದ್ದವು….

    ಕೊರೋನಾ ಮಹಿಮೆಯಿಂದ ಮತ್ತೆ ಬೀದಿಗಳು ಯುವಕರಿಂದ ತುಂಬಿ
    ತುಳುಕುತ್ತಿವೆ…! ಅಪ್ಪ ಅಮ್ಮನ ಮುಖದಲ್ಲಿ ಸಂತಸ ತಂದಿದೆ…

    ನಮ್ಮ ಕಡೆ ನಿವೃತ್ತಿಯಾದ ಮೇಲೆ ಅಪ್ಪ ಅಮ್ಮ ಕಟ್ಟಿಸಿರೋ ದೊಡ್ಡಮನೆಗಳಿವೆ… ಆದರೆ ಜನರೇ ಇಲ್ಲ…

    ಗಣಿತದ ಮೇಷ್ಟ್ರ ಜೀವನದ ಲೆಕ್ಕ ತಪ್ಪಿಹೋಗೋದ್ರಲ್ಲಿತ್ತು ಅನ್ನೊ ವಾಕ್ಯ ಚೆನ್ನಾಗಿದೆ….

    ನಿಮ್ಮ ಪ್ರಯತ್ನ ಹೀಗೆ ಸಾಗಲಿ…ಇನ್ನಷ್ಟು ಹೊಸ ಪ್ರಚಲಿತ ವಿಷಯಗಳ ಬಗ್ಗೆ ಸುಂದರ ಕಥೆಗಳು ಮೂಡಿ ಬರಲಿ…

    ಮುಂದಿನ ಶುಕ್ರವಾರದ ನಿರೀಕ್ಷೆಯಲ್ಲಿರುತ್ತೇವೆ…

    ಪ್ರತಿಕ್ರಿಯೆ
  4. Manasa k r

    ತುಂಬಾ ಅರ್ಥಪೂರ್ಣ ಕಥೆ ಈಗ ಎಲ್ಲಾ ಮಕ್ಕಳು ಹೀಗೇ ಎಲ್ಲಾ ಮರೆತು ಬಿಡುತ್ತಾರೆ ತಮ್ಮ ಭವಿಷ್ಯ ಮಾತ್ರ ಕಣ್ಣು ಮುಂದೆ ಕಾಣುವುದು

    ಪ್ರತಿಕ್ರಿಯೆ
    • Kavitha gowda

      ಕತೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಹೀಗೆ ಸಾಗಲಿ ನಿಮ್ಮ ಕಥಾ ಸಂಕಲನ.

      ಪ್ರತಿಕ್ರಿಯೆ
  5. Keerthi Illoor

    If u don’t mind…..I want to tell one mistake in that ….dog picture melin second paragraph alli “arthavade” iddag Anat ide… I think adu “arthavagade” Anat agbeku anta Nanna abhhipraya ….. if I have mistaken sorry..

    Story was nice….I like this story…..❤

    ಪ್ರತಿಕ್ರಿಯೆ
  6. Keerthi illoor

    If u don’t mind…..I want to tell one mistake in that ….dog picture melin second paragraph alli “arthavade” iddag Anat ide… I think adu “arthavagade” Anat agbeku anta Nanna abhhipraya ….. if I have mistaken sorry..
    .
    .
    Story super ide….I liked it….❤

    ಪ್ರತಿಕ್ರಿಯೆ
  7. Nandi

    Waw thumba sundaravagi barediddiri, kannadathi serial nalli neev thumba chennagi Kannada matadtira,kathe thumba chenagide,nam amma nim serial daily nodtare, acting jothe Kannada kathe baritidira ,olledagli all the best madam

    ಪ್ರತಿಕ್ರಿಯೆ
  8. Nagaraja. P

    ತುಂಬಾ ಒಳ್ಳೆ ಕಥೆ. ಭಾವನೆಗಳಿಗೆ ಎಷ್ಟು ಸೆಳೆತ ಇರುತ್ತೆ ಅಂತ ಬಹಳ ಚೆನ್ನಾಗಿ ಬರೆದಿದ್ದೀರಿ. ಈಗ ಭಾವನೆಗಳಿಗೆ ಮನಸ್ಸಿಗೆ ಬೆಲೆ ಕೊಡೋರೇ ಇಲ್ಲ. ಕಳೆದ ವಾರದ ಕಥೆಯೂಕೂಡ ಬಹಳ ಚೆನ್ನಾಗಿತ್ತು. ನಿಮ್ಮ ಪ್ರಯತ್ನಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಿಮಗೆ ನನ್ನ ಹೃದಯದಲ್ಲಿ ನನ್ನ ತಂಗಿಯ ಸ್ಥಾನ ಕೊಟ್ಟಿದ್ದೇನೆ. ಹೀಗೆ ಮುಂದುವರೆಯಲಿ ಕಥಾಮಾಲಿಕೆ.
    ಧನ್ಯವಾದಗಳು.

    ಪ್ರತಿಕ್ರಿಯೆ
    • Shrishail

      ವಾಸ್ತವತೆಗೆ ತುಂಬಾ ಹತ್ತಿರವಾದಂತೆ ಕಥೆಯನ್ನು ಬರೆದಿದ್ದೀರಿ. ಕೊನೆಗೂ ಮನೋಜ್ ತಂದೆಯ ಭಾವನೆ ಗೌರವಿಸಿ, ತನ್ನ ನಿರ್ಧಾರ ಬದಲಿಸಿದ್ದು ಖುಷಿಯನ್ನು ತಂದಿತ್ತು.
      ನಿಮ್ಮ ಬರವಣಿಗೆ ಹಾದಿ ಹೀಗೆ ಸಾಗಲಿ..

      ಪ್ರತಿಕ್ರಿಯೆ
  9. Shivaleela

    ಹಾಯ್ ರಂಜನಿಯವರೆ ಇವತ್ತಿನ ಕಥೆ ತುಂಬಾ ಚೆನ್ನಾಗಿದೆ…..ಈ ಕಥೆ ಓದುತ್ತಾ ಮನಸ್ಸು ಭಾರ ವಾದಂತಾಯಿತು ಆದರೆ ಕೊನೆಯಲ್ಲಿ ಓದುವಾಗ ನನಗೆ ಗೊತ್ತಿಲ್ಲದೆ ಮನಸ್ಸು ಮತ್ತು ಮುಖದಲ್ಲಿ ನಗು ತುಂಬಿತು..ಹೀಗೆ ನಿಮ್ಮಕಥೆ ಮುಂದುವರೆಯಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ ❤❤

    ಪ್ರತಿಕ್ರಿಯೆ
  10. Chaitra hegde

    ನಿಮ್ಮ ಬರವಣಿಗೆ ನಿಮ್ಮನ್ನು ಗೆಲುವಿನತ್ತ ಸಾಗಿಸುತ್ತಿದೆ ಎನ್ನಲೂ ಇದೂ ಕೂಡ ಒಂದು ಉದಾಹರಣೆ… ಕಿರುತೆರೆ ಮತ್ತು ಬರಹದ ದಾರಿಯಲ್ಲಿ ಗೆಲುವು ಸಿಗಲಿ.. ನಿಮ್ಮ ಸ್ಪೂರ್ತಿಯಿಂದ ನಾನು ಬರಹದ ಪ್ರಯತ್ನ ಮಾಡಿದ್ದೇನೆ… ಹರಸಿ ಹಾರೈಸಿ…

    ಪ್ರತಿಕ್ರಿಯೆ
    • Padmahari

      Nanu padmavathi , nange nan amma yennadhru helidhre sariyagi keltha erlila because ha situation nange hartha hagthirlila but nanu madhuve hadhmele nan papu ge amma hadhaga nange eega havaga nan amma helidhu hartha hagtha edge …..
      Ondhu heloke esta padthini “Hanubhava” nam parents ge hagiroddrindha havru namge helodhu but navu edhuna hartha ne madkoladhe nam parents na nave upset madthivi….

      ಪ್ರತಿಕ್ರಿಯೆ
  11. RanjithaGirish

    ನಮಸ್ತೆ ಮೇಡಂ, ಮೂರು ಲೇಖನಿಯನ್ನು ಓದಿದ್ದೇನೆ , ಮೂರು ಲೇಖ ನೀವು ಸಹ ಈಗಿನ ವಾಸ್ತವತೆಯನ್ನು ಒಳಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರುವಂತಹ ಮನೆಗಳನ್ನು ಅದ್ಭುತವಾಗಿ ಓದುಗರಿಗೆ ಅರ್ಥವಾಗುವಂತಹ ಸರಳ ರೀತಿಯಲ್ಲಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದೀರಿ.
    ನಿಮ್ಮ ಹವ್ಯಾಸ ಈಗೆ ಮುಂದುವರೆಯಲಿ.
    ಈ ಕಥೆಯಲ್ಲಿ ಬರುವಂತಹ ಅಪ್ಪನ ಪಾತ್ರದ ಹೆಸರು ಹಾಗೂ ಮನೆಯ ಚಿತ್ರ ಎಲ್ಲವೂ ನಿಮ್ಮ ಕನ್ನಡತಿ ಧಾರಾವಾಹಿಯ ಭುವಿ ಪಾತ್ರದಾರಿಯ ತಂದೆ ಹಾಗೂ ಹಳ್ಳಿಮನೆಯ ನೆನಪನ್ನು ತರುತ್ತದೆ.
    ನಿಮ್ಮ ಮುಂದಿನ ಲೇಖನಕ್ಕಾಗಿ ಕಾಯುತ್ತಿರುತ್ತೇನೆ.

    ಪ್ರತಿಕ್ರಿಯೆ
  12. Swapna

    Such a nice story! It’s a big story to everyone, when we are kids parents Give us everything but when they become like kid we have to atleast listen to them

    ಪ್ರತಿಕ್ರಿಯೆ
  13. Pavan joshi

    ನಿಮ್ಮ ೩ನೇ ಅಂಕಣ ತುಂಬಾ ಚೆನ್ನಾಗಿದೆ ಏಕೆಂದರೆ ಈ ಅಂಕಣದಲ್ಲಿ ತಾಯಿಯ ಪಾತ್ರ ನನ್ನ ನಿಜ ಬದುಕಿನಲ್ಲಿ ನಡೆದಿದ್ದು ನಮ್ಮ ತಾಯಿ ತಿರಿಕೊಂಡು ಇವತ್ತಿಗೆ ೧೪ ದಿನವಾಯ್ತುಅಮ್ಮ ಮಿಸ್ ಯು

    ಪ್ರತಿಕ್ರಿಯೆ
  14. Kusuma

    ನನಗೆ ನಾನೇ ನಂಜಂಡಪ್ಪ ಅನ್ನ ಭಾವ
    ಮೂಡಿಸಿದ ಕಥೆ ಇದಾಗಿತ್ತು ಒಳ್ಳೆಯ ಕಥೆ

    ಪ್ರತಿಕ್ರಿಯೆ
  15. Manisha kotian

    ನನಗೆ ಈ ಕಥೆ ತುಂಬಾ ಇಷ್ಟ ವಾಯಿತು,ಚೆನ್ನಾಗಿದೆ..,,

    ಪ್ರತಿಕ್ರಿಯೆ
  16. vikkyhegde

    ಪ್ರತಿಯೊಂದು ದೃಶ್ಯವೂ ಕಣ್ಣೆದುರು ನಡೆಯುತ್ತಿದ್ದ ಹಾಗೆ ಅನ್ನಿಸಿತು ನಿಮ್ಮ ಕಥೆಯ ವರ್ಣನೆ…. ಈ ಕಥೆಯನ್ನು ಓದಿದ ಪ್ರತಿಯೊಬ್ಬ ಮನೋಜನೂ ಮಲ್ಲಿಕಾರ್ಜುನನಾಗಿ ಯೋಚಿಸಿ, ಮೇಷ್ಟ್ರ ಮನಸಿನ ತುಡಿತಕ್ಕೆ ನ್ಯಾಯ ಕೊಡಬೇಕೆಂಬ ಯೋಚನೆ ಬರಲೆಂಬ ಹಾರೈಕೆ…. ಅತ್ಯುತ್ತಮ ಕಥೆಗಾಗಿ ಧನ್ಯವಾದಗಳು…. ನಿಮ್ಮೀ ಪ್ರತಿಭೆ ಹೀಗೆಯೇ ಚಿಮ್ಮಲಿ… ಶುಭವಾಗಲಿ…

    ಪ್ರತಿಕ್ರಿಯೆ
  17. Yashaswini

    ಕಥೆ ತುಂಬಾ ಸೊಗಸಾಗಿದೆ. ಮನೆ ಕೇವಲ ವಸ್ತುಗಳಿಂದ ನಿರ್ಮಿತವಾದದ್ದು ಅಲ್ಲ ಅಲ್ಲಿ ಭಾವನೆಗಳು ಸಹ ಇರುತ್ತದೆ. ನಮ್ಮ ಜೀವನದ ಪ್ರತಿಯೊಂದು ನೆನಪು, ಆ ನೆನಪು ನಾವ್ ತೆಗೆದುಕೊಂಡ ನಿರ್ಧಾರವಾಗಿ ಜೀವನ ನಡಿಸ್ಟಿದೀವಿ ಅನ್ನೋದು ಒಂದು ಮಾತು ಆದ್ರೆ ಅದರ ಜೊತೆಗೆ ತಂದೆ ತಾಯಿ ಮನಸಿನ ಭಾವನೆಗಳನ್ನು,, ಈಗಿನ ಕಾಲದ ಸೋ ಕಾಲ್ಡ್ ಯಂಗ್ಸ್ಟಾರ್ಸ್ ಗೆ ಮನದಟ್ಟು ಆಗೋ ಹಾಗೆ ಕಥೆ ಮೂಡಿ ಬಂದಿದೆ@ranjaniragavan.

    ಪ್ರತಿಕ್ರಿಯೆ
  18. ಶ್ವೇತ ಎಸ್ ಪ್ರಮೋದ್

    ಕಥೆ ತುಂಬಾ ಚೆನ್ನಾಗಿದೆ ಅನ್ನೋದಕ್ಕಿಂತ ಮನಸ್ಸು ಮುಟ್ಟಿದೆ. ಅಪ್ಪನ ಹಳೆ ಮನೆ ಕಟ್ಟುವ ಗುರಿ ಇಟ್ಟುಕೊಂಡು ದುಡಿಯುತ್ತಿರುವ ಮಗಳು ನಾನು. ಅಪ್ಪ ನನ್ನ ಬಿಟ್ಟೋಗಿ ವರ್ಷಗಳೇ ಆಯ್ತು ಆದರೆ ಆ ಮನೆಯಲ್ಲಿ ಅಪ್ಪನ ನೆನಪಿದೆ. ನಿಮ್ಮ ಕಥೆ ಓದಿ ಆ ನೆನಪು ಕಣ್ಣೀರಾಗಿ ಬಂತು. ನಿಮ್ಮ ಮುಂದಿನ ಕಥೆಗೆ ನನ್ನ ಶುಭಾಕಂಕ್ಷೆಗಳು.

    ಪ್ರತಿಕ್ರಿಯೆ
  19. Mahesh

    ಕಥೆ ಅದ್ಬುತ ವಾಗಿದೆ… ಆದರೆ ನನಗು ಒಂದು ಕೊರಗು ಕಾಡುತಿದೆ ನನ್ನ ಊರು ರಾಯಚೂರಿನ ಒಂದು ಹಳ್ಳಿ ಉಮಲೂಟಿ
    ನಾನು ಈಗ ಬೆಂಗಳೂರುಲ್ಲಿ ಕೆಲಸ ಮಾಡುತ್ತ ಇದ್ದೇನೆ ನನ್ನ ಅಪ್ಪ ನಮ್ಮನ್ನು ಬಿಟ್ಟು 11ವರ್ಷ್ ಆಯಿತು ಈಗ ಅಮ್ಮ ನನ್ನು ಬಿಟ್ಟು ಬೆಂಗಳೂರು ಗೆ ಹೋಗಬೇಕೋ..? ಅಥವಾ ನಾನು ಇಲ್ಲಿಯೇ ಬಂದು ಇರಬೇಕು…? ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ…! ಇಲ್ಲಿಯೇ ಇದ್ದರೆ ಕೆಲಸ ಮಾಡುವದು ಹೇಗೆ..? ಇದಕ್ಕೆ ಉತ್ತರ ಸಿಗಬಹುದೇ…

    ಪ್ರತಿಕ್ರಿಯೆ
  20. kum. veerabhadrappa

    kathe hidisithu, avaru olleya kathegalannu bareyaballaru, abinandanegalu- kumvee

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: