ಸಿಂಗಾಪುರದಿಂದ ರಂಜನಾ ಹೆಗಡೆ- ಸಣ್ಣದೊಂದು ಸಲಾಂ ನೀಡಿ ಬಿಡಬೇಕು

ರಂಜನಾ ಹೆಗಡೆ

ಕೊರೋನಾದ ಎರಡನೆಯ ಅಲೆಯು ಹರಡಿ ಹಣ್ಣಾಗಿಸುತ್ತಿರುವ ಹೊತ್ತಿನಲ್ಲಿ, ಜಗತ್ತಿನಾದ್ಯಂತ ವೈದ್ಯವೃಂದವನ್ನು ನೆನಪಿಸಿಕೊಳ್ಳದವರಾರು? ಹಲವರಿಗೆ ನಿರಾಳತೆಯ, ಇನ್ನು ಕೆಲವರಿಗೆ ಕರಾಳತೆಯ ದರ್ಶನವಾಗುತ್ತಿರುವ ಹೊತ್ತಿನಲ್ಲಿ ವೈದ್ಯರಾಗಿ ನನ್ನನ್ನು ವಿಶೇಷವಾಗಿ ಸೆಳೆದವರು ಮನ ಮಂಡಲದಲ್ಲಿ ಸುಳಿದು ಹೋದರು. ಎದುರು ಹಾದರೆ ಮುಖ ಗುರುತಿಸುವೆನೋ ಇಲ್ಲವೋ ತಿಳಿಯದು. ಆದರೆ ನಡೆದ ಘಟನೆ ಎಂದೆಂದಿಗೂ ನೆನಪಿನಂಗಳದಲ್ಲಿ ಭದ್ರವಾಗುಳಿಯುವಂಥದ್ದು.

ಮಗುವಿಗೆ ಆಗಾಗ ಬಿಟ್ಟೂ ಬಿಡದೇ ಅನಾರೋಗ್ಯ ಕಾಡಿದ ಸಮಯವದು. ಮತ್ತೆ ಮತ್ತೆವೈದ್ಯರ ಭೇಟಿ ಸಾಮಾನ್ಯ ಎನ್ನುವ ಹಾಗಿತ್ತು. ದವಾಖಾನೆಗೆ ಹೋಗುವುದೆಂದರೇ ಬೇಡ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಮುಖ ಚಿಕ್ಕದಾಗಿಸಿಕೊಳ್ಳುವ ಕಂದ! ಆದರೂ ಬಿಡಲಾಗದೇ ಎಳೆದುಕೊಂಡು ಓಡುವ ನಾನು… ಹೀಗೇ ಒಂದು ಸಂಜೆ ಕಿವಿ ನೋವೆನ್ನುತ್ತಿದ್ದ ಮಗಳ ಜೊತೆ ದವಾಖಾನೆಯಲ್ಲಿ ಹೆಸರು ನೋಂದಾಯಿಸಿ ಹಜಾರದಲ್ಲಿ ಸಾಲಾಗಿ ಜೋಡಿಸಿದ ಖುರ್ಚಿಗಳಲ್ಲಿ ಸರದಿಗಾಗಿ ಕಾಯುತ್ತಾ ಕುಳಿತಿದ್ದ ಸನ್ನಿವೇಷ.

ನಾವು ಕುಳಿತ ಜಾಗ ನೇರವಾಗಿ ವೈದ್ಯರ ಕೋಣೆಯ ಕದ ತೆರೆದರೆ ಎದುರೇ ಕಾಣುವಂಥದ್ದು. ಕಾಯುತ್ತಾ ಕುಳಿತಾಗ ಸಮಯ ಕೊಲ್ಲಲು ಒಂದಿಷ್ಟು ಕಥೆಗಳನ್ನು ಮಗಳಿಗೆ ಹೇಳುತ್ತಾ  ಇರುವಾಗ, ನಮಗಿಂತ ಮುಂಚೆ ಸರದಿಯಲ್ಲಿರುವ ಅಪ್ಪನೊಬ್ಬ ಸುಮಾರು ೪ ವಯಸ್ಸಿನ ಮಗನನ್ನು ಎತ್ತಿಕೊಂಡು ವೈದ್ಯರ ಕೋಣೆ ಹೊಕ್ಕ. ವೈದ್ಯರ ಮುಖ ನೋಡಿದ್ದೇ ಮಗು ಗಟ್ಟಿಯಾಗಿ ತಂದೆಯನ್ನು ತಬ್ಬಿಕೊಂಡು ಕುಳಿತುಬಿಟ್ಟಿತು. ಅದು ಗಾಬರಿಗೊಂಡಿತ್ತೆಂಬುದು ಮುಖದಲ್ಲಿ ಸ್ಪಷ್ಟವಾಗಿ ಗೋಚರವಾಗಿತ್ತಿತ್ತು.

ವೈದ್ಯರು ನಗುತ್ತಾ ‘ಹಾಯ್, ಹಲೋ’ ಎಂದು ಮಾತನಾಡಿಸಲು ಮಾಡಿದ ಪ್ರಯತ್ನ ಕೊಂಚ ಫಲ ಕಂಡು,  ಒಂದೂ ಮಾತನಾಡದೇ ಇದ್ದರೂ  ಮುಖ ಭಾವ ಕೊಂಚ ನಿರಾಳವಾಗಿ ಅಪ್ಪನಿಗಂಟಿಕೊಂಡು ತೊಡೆಯಮೇಲೆ ಕುಳಿತಿತು. ಆಗ  ವೈದ್ಯರು ತಪಾಸಣೆ ಮಾಡಲೋಸುಗ ಬಾಗಿಲು ಮುಚ್ಚಲಣಿಯಾಗಿದ್ದೇ ಮತ್ತೆ ಗಾಬರಿಗೊಂಡು ತಂದೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ವೈದ್ಯರು ಬಾಗಿಲು ತೆರೆದೇ ಇಟ್ಟು ಮಗುವನ್ನು ಮಾತಿಗೆಳೆಯಲಾರಂಭಿಸಿದರು.

‘ನೀನು ಮನೆಯಲ್ಲಿ ಏನೇನು ಮಾಡುತ್ತೀಯಾ? ಶಾಲೆಯಲ್ಲಿ ಸ್ನೇಹಿತರು ಯಾರು?’ ಎಂದು ಒಂದೆರಡು ಪ್ರಶ್ನೆ ಕೇಳಿ, ನಂತರ ‘ನಿನಗೆ ಕಾರ್ಟೂನ್ ಇಷ್ಟ ಆಗುತ್ತಾ? ಯಾವ ಕಾರ್ಟೂನ್ ಇಷ್ಟ?’ ಎನ್ನುತ್ತಾ ತಮ್ಮ ಮೊಬೈಲ್ ಹೊರ ತೆಗೆದಾಗ ಉತ್ತರಿಸಿದ ಮಗುವಿನ ಮಾತು ನಾವು ಕುಳಿತಲ್ಲಿಯವರೆಗೆ ಕೇಳುವಷ್ಟು ಸ್ಪಷ್ಟ ಮತ್ತು ಗಟ್ಟಿಯಾಯಿತು. ಹೇಳಿದ ಯಾವುದೋ ಒಂದು ಕಾರ್ಟೂನ್ ಹಚ್ಚಿದಾಗ ಮಗುವಿನ ಮುಖದ ಗಾಬರಿಯೆಲ್ಲಾ ಹೋಗಿ ಇಷ್ಟಗಲವಾಯ್ತು.

೧-೨ ನಿಮಿಷ ನೋಡುವಷ್ಟರಲ್ಲಿ ವೈದ್ಯರು ಕಾರ್ಟೂನ್ ನಿಲ್ಲಿಸಿ ‘ನನ್ನ ಬಳಿ ಇಂಥಾ ಅನೇಕ ಕಾರ್ಟೂನ್ಗಳಿವೆ ನಿಮ್ಮ ಅಪ್ಪನಿಗೆ ಕಳಿಸಿರ್ತೀನಿ ಮನೆಗೇ ಹೋಗಿ ನೋಡುವೆಯಂತೆ’ ಎನ್ನುತ್ತಾ ಮಾತನ್ನು ಮುಂದುವರೆಸಿ ‘ಈಗ ಎರಡೇ ನಿಮಿಷ ಬಾಗಿಲು ಹಾಕಲಾ? ನಿನ್ನ ಹೊಟ್ಟೆಯನ್ನು ನೋಡಬೇಕು’ ಎಂದರು. ತತ್ ಕ್ಷಣ ಮಗು ಬೇಡ ಎಂಬಂತೆ ಅಡ್ಡಡ್ಡ ತಲೆ ಆಡಿಸಿತು. ಆದರೆ ಆ ವೈದ್ಯರು ಬಿಡಬೇಕಲ್ಲ! ಕಳೆದ ೩-೪ ನಿಮಿಷಗಳಲ್ಲಿ ಕೊಂಚಮಟ್ಟಿಗಿನ ಭದ್ರತಾ ಭಾವ ಹುಟ್ಟು ಹಾಕಿ, ಅಲ್ಪ ಸ್ನೇಹ ಸಂಪಾದಿಸಿದ್ದರಲ್ಲಾ, ಅದರ ಉಪಯೋಗ ಪಡೆಯುತ್ತಾ ‘ನೀನು ಶಾಲೆಯಲ್ಲಿ ಟಾಯ್ಲೆಟ್ಟಿಗೆ ಹೋಗುವಾಗ ಬಾಗಿಲು ಹಾಕಿರ್ತೀಯೋ ಇಲ್ಲಾ ತೆಗೆದೋ?’ ಎಂದರು. ಮಗು ‘ಹಾಕಿಕೊಂಡು’ ಅಂತು. ‘ಹೊರಗಡೆ ಸುತ್ತಾಡಲು ಹೋದಾಗ ಬಟ್ಟೆ ಎತ್ತಿ ಎಲ್ಲರಿಗೂ ಮೈ ತೋರಿಸ್ತೀಯಾ?’ ಎಂದರು. ಮಗು ಇದಕ್ಕೂ ‘ಇಲ್ಲ’ ಎಂದು ಉತ್ತರಿಸಿತು.

ನಮ್ಮ ಪ್ರೈವೇಟ್ ಪಾರ್ಟ್ಸ ಬೇರೆ ಯಾರಾದ್ರೂ ನೋಡಬಾರದಲ್ಲವಾ? ನೋಡು ಅಲ್ಲೆಲ್ಲಾ ಜನ ಕೂತಿದ್ದಾರೆ. ನಿನ್ನನ್ನು ಹುಷಾರಾಗಿ ಮಾಡಲು ಕೊಂಚ ಹೊಟ್ಟೆ ನೋಡಬೇಕಿತ್ತಲ್ಲಾ! ಎರಡೇ ಎರಡು ನಿಮಿಷ ಅಷ್ಟೇ, ಆಮೇಲೆ ನೀನು ಮನೆಗೆ ಹೋಗಬಹುದು ಅಂದರು. ಆಗ ಮಗು ಬಾಗಿಲು ಮುಚ್ಚಲು ತಾನೇ ಒಪ್ಪಿಕೊಂಡಿತು, ಆಕ್ಷಣ ಬಾಗಿಲು ಮುಚ್ಚಿದ ವೈದ್ಯರ ಕಂಡು ನನ್ನ ಮಗಳ ಭಯವೂ ಓಡಿ ಹೋಗಿದ್ದು ಸುಳ್ಳಲ್ಲ. ಮಗುವನ್ನು ಆಟವಾಡಿಸಿ ಗೊತ್ತೇ ಆಗದಂತೆ ಚುಚ್ಚುಮದ್ದು ಕೊಡುವ ವೈದ್ಯರ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಪುಟ್ಟ ಮಗುವಿನ ಅಮ್ಮನಾದ ನಾನೂ ಕಣ್ಣರಳಿಸಿ ನೋಡಿದ್ದೆ. ಈಗ ಇನ್ನೊಂದು ರೂಪವನ್ನು ಕಣ್ಣಾರೆ ನೋಡಿದಂತಾಯ್ತು.

ಇನ್ನೊಮ್ಮೆ ನನ್ನ ಆರೋಗ್ಯದಲ್ಲಿ ಏರುಪೇರಾಗಿ ವೈದ್ಯರ ಬಳಿ ಹೋದ ಸಂದರ್ಭ. ನೋಡಲು ಸುಮಾರು ಅರವತ್ತು ವಯಸ್ಸು ಮೇಲ್ಪಟ್ಟವರಂತಿರುವ ಪಕ್ಕಾ ಸಿಂಗಾಪುರದ (ಚೀನೀ) ವೈದ್ಯರು. ನನ್ನ ಪೂರ್ವಾಪರವನ್ನೆಲ್ಲಾ ಕಂಪ್ಯೂಟರಿನ ತಮ್ಮ ಡೇಟಾಬೇಸಿನಲ್ಲಿ ನೋಡಿ, ಜನ ಜಾಸ್ತಿಯಿಲ್ಲದ್ದಕ್ಕೋ, ಮತ್ತೆ ಮತ್ತೆ ಹೋಗುವ ಹಳೆಯ ಗಿರಾಕಿಯೆಂದೋ! ಖಾಯಿಲೆಯ ಬಗ್ಗೆ ಕೇಳುವ ಮುನ್ನ ಮಾತಿಗೆಳೆಯುತ್ತಾ, ‘ನಿನ್ನ ಅಡ್ಡ ಹೆಸರು ಹೆಗಡೆ ಎಂದಿದೆಯಲ್ಲಾ ಭಾರತದ ಯಾವ ಪ್ರಾಂತ್ಯದವರು ನೀವು?’ ಎಂದವರು ನಾನು ಬಾಯಿ ತೆರೆಯುವ ಮುನ್ನವೇ ಮುಂದುವರೆಸಿ ‘ತಮಿಳಿನವಳಂತೇನೂ ಕಾಣುವುದಿಲ್ಲ, ತೆಲುಗಿನವರಲ್ಲಿ ನಿಮ್ಮಂಥ ಅಡ್ಡ ಹೆಸರಿಲ್ಲ, ಇನ್ನು ಗುಜರಾತಿಯಾ?’ ಎಂದರು.

ಅವರ ತರ್ಕಕ್ಕೆ ನಾನು ನಗುತ್ತಾ ‘ಇಲ್ಲ ನಾನು ಪಕ್ಕಾ ದಕ್ಷಿಣ ಭಾರತದವಳು’ ಎಂದೆ. ‘ದಕ್ಷಿಣ ಭಾರತದಲ್ಲಿ ಎಲ್ಲಿ?’ ಎಂಬ ವೈದ್ಯರ ಪ್ರಶ್ನೆಗೆ ‘ಎಲ್ಲಿ ಅಂದರೆ ಇವರಿಗೇನು ತಿಳಿಯುತ್ತೆ, ಸುಮ್ಮನೇ ಪ್ರಶ್ನೆ ಕೇಳ್ತಾರೆ’ ಎಂದು ಮನದಲ್ಲಿ ಅಂದುಕೊಳ್ಳುತ್ತಾ ‘ಕರ್ನಾಟಕ, ಬೆಂಗಳೂರು’ ಎಂದೆ. ಅದಕ್ಕವರು ‘ಓಹೋ ಬೆಂಗಳೂರಾ? ಟ್ರಾಫಿಕ್ ಬಹಳವಾಗಿದೆ ಅಲ್ಲಿ’ ಎಂದು ಪಕ್ಕಾ ನಮ್ಮ ಊರಕಡೆಯವರಂತೆ ನುಡಿದಾಗ ನಾನು ಅವಾಕ್ಕಾದೆ.

‘ಆಗಾಗ ಬೆಂಗಳೂರಿಗೆ ಹೋಗುತ್ತಿರುತ್ತೀರಾ? ಫ್ಯಾಮಿಲಿಯೆಲ್ಲಾ ಅಲ್ಲೇ ಇದೆಯಾ?’ ಎಂದು ಮತ್ತೆ ಮಾತು ಮುಂದುವರಿಸಲಾಗಿ, ನಾನು ‘ನಮ್ಮೂರು ಅಪ್ಪಟ ಬೆಂಗಳೂರಲ್ಲ, ಬೇರೆ ಇದೆ. ಶಿರಸಿ. ಕಾರವಾರ ಅಂತೆಲ್ಲಾ ಅಂದರೆ ನಿಮಗೆ ಗೊತ್ತಾಗಲ್ಲ’ ಅಂದೆ. ಅದಕ್ಕವರು ಬಿಡದೇ ‘ಅದು ಯಾವ ಕಡೆ ಬರುತ್ತೆ ಹೇಳಿ?’ ಅಂದರು. ನಾನು ‘ಹುಬ್ಬಳ್ಳಿ ನಿಮಗೆ ಗೊತ್ತಾಗಲಿಕ್ಕಿಲ್ಲ, ಗೋವಾ ಗೊತ್ತಾ? ಅದು ಕಾರವಾರಕ್ಕೆ ಹತ್ತಿರ’ ಎಂದೆ. ‘ಗೋವಾ ಗೊತ್ತಿಲ್ಲದೇ ಹೇಗೆ? ಹೀಗೆ ಹೇಳಿ ನೀವು. 

ಬೆಂಗಳೂರೆಲ್ಲಿ, ಗೋವಾ ಎಲ್ಲಿ, ಬೆಂಗಳೂರಿನವರು ಅಂದಿರಿ ಮತ್ತೆ! ಬೆಂಗಳೂರಿಂದ ಗೋವಾ ಸುಮಾರು ೫೦೦ ಕಿಲೋಮೀಟರ್ ದೂರ ಇದೆ, ಎರಡೂ ಒಂದೇ ಹೇಗೆ ಆಗುತ್ತೆ’ ಅನ್ನುವುದೇ! ಮುಂದುವರೆಸಿ, ಗೋವಾದ ಅಳತೆ, ಪೋರ್ಚುಗೀಸರು, ಭಾರತೀಯ ಸಿನಿಮಾಗಳು, ಗೋವಾದ ಸ್ಥಳಗಳು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳತೊಡಗಿದರು

ತಬ್ಬಿಬ್ಬಾದ ನಾನು ‘ನೀವು ಹೇಗೆ ಬಲ್ಲಿರಿ ಇದೆಲ್ಲಾ? ಭಾರತಕ್ಕೆ ಬಂದಿದ್ದಿರಾ?’ ಎಂದರೆ, ‘ಹೌದಮ್ಮಾ ಬಂದಿದ್ದೆ, ನಿಮ್ಮ ಮುಂಬೈ, ಚೆನ್ನೈ ಎಲ್ಲಾ ನೋಡಿದೀನಿ. ಮತ್ತೆ ಬರಬೇಕು’ ಎಂದರು. ಜೊತೆಗೆ ಉತ್ತರದಲ್ಲಿರುವ ಕೆಲವು ರಾಜ್ಯಗಳು, ದಕ್ಷಿಣದ ಕೆಲವು ಪ್ರದೇಶಗಳನ್ನು ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲದಷ್ಟು ಚೆನ್ನಾಗಿ ವಿವರಿಸಿದಾಗ ನನಗೆ ಏನು ಹೇಳಬೇಕೆಂಬುದೇ ತಿಳಿಯದಾಯ್ತು.

ಅವರೇ ಮುಂದುವರೆದು ‘ನಿಮ್ಮ ಕಡೆ ಇಂಥದ್ದೇ ಅಡ್ಡ ಹೆಸರು ಇಡುತ್ತಾರಾ? ನಾನು ಕೇಳಿರಲಿಲ್ಲ ಇನ್ನೂ’ ಎನ್ನುತ್ತಾ ಮತ್ತೆ ಮೊದಲನೆಯ ವಿಷಯಕ್ಕೇ ಬಂದಾಗ, ನಾನು ‘ಎಲ್ಲರೂ ಅಲ್ಲ, ನಮ್ಮೂರ ಕಡೆ ಕೆಲವರಿಗೆ ಈ ಅಡ್ಡ ಹೆಸರಿರುತ್ತೆ, ಜೊತೆಗೆ ಇನ್ನೂ ತರಹೇವಾರಿ ಹೆಸರು ಕೂಡಾ’ ಎನ್ನುತ್ತಾ ನಕ್ಕೆ.

ಇಷ್ಟು ಮಾತುಕಥೆಗಳ ನಂತರ ಬಂದಿದ್ದು ನನ್ನ ಅನಾರೋಗ್ಯದ ವಿಷಯಕ್ಕೆ! ಇಂತಹ ಅನೇಕರು ನಮ್ಮ ಕಣ್ಣ ಮುಂದೆ ಸುಳಿದಾಡುತ್ತಲೇ ಇರುತ್ತಾರೆ, ಎಡತಾಕುತ್ತಲೇ ನಡೆದಾಡುತ್ತಾರೆ. ಗುರುತಿಸಬೇಕು, ಗಮನಿಸಬೇಕು, ಸಣ್ಣದೊಂದು ಸಲಾಂ ನೀಡಿ ಬಿಡಬೇಕು ಮನಸ್ಸಿನಿಂದ…

‍ಲೇಖಕರು Avadhi

June 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: