ತಾಳಮದ್ದಲೆ ಮತ್ತು ಮಮತಾ

ಅಭಿನವ ಪ್ರಕಾಶನ ತಾಳಮದ್ದಲೆಯ ಬಗ್ಗೆ ಅಪರೂಪದ ಕೃತಿಯನ್ನು ಹೊರತಂದಿದೆ. ಇದರ ಸಂಪಾದಕರು ಮಮತಾ ಜಿ. ತಾಳಮದ್ದಲೆಯ ದನಿ ಕೇಳುತ್ತಲೇ ಬೆಳೆದ ಮಮತಾ ಕಟ್ಟಿಕೊಂಡದ್ದು ಆ ಲೋಕದ ಸಂಭ್ರಮವನ್ನು ಇಲ್ಲಿ ಅವರು ಯಕ್ಷಗಾನದ ಲೋಕ ತಮಗೆ ಕೊಟ್ಟ ಬಳುವಲಿಯನ್ನು ಬಣ್ಣಿಸಿದ್ದಾರೆ

ಮಮತಾ ಜಿ


ನಾನು ಹುಟ್ಟಿದ್ದು, ಬೆಳೆದದ್ದು ಎಲ್ಲ ರೀತಿಯಲ್ಲಿಯೂ ಸಂವೃದ್ಧವಾದ ಮಲೆನಾಡಿನ ಒಂದು ಪುಟ್ಟಹಳ್ಳಿ, ಸಾಗರ ಸಮೀಪದ ಬೆಳೆಯೂರಿನಲ್ಲಿ. ಸುತ್ತಲೂ ಕಾಡು, ತೋಟ- ಬರೀ ಹಸಿರು. ಅಜ್ಜ(ಶ್ರೀನಿವಾಸಪ್ಪ ಬೆಳೆಯೂರು) ಸರ್ವವನ್ನು ಬಲ್ಲ ಮೇಧಾವಿ. ಅಜ್ಜಿಯ ರುಚಿರುಚಿಯಾದ ತಿಂಡಿಗಳಂತೆ ಅಜ್ಜನ ಕಥೆಗಳು ನಮ್ಮ ಮನಸ್ಸಿನಾಳಕ್ಕೆ ಇಳಿಯುತ್ತಿದ್ದವು. ಅದೆಷ್ಟು ಕಥೆಗಳು? ಅವನು ಹೇಳದ ಕಥೆಯಿಲ್ಲ, ಪ್ರಸಂಗವಿಲ್ಲ. ಅಪ್ಪ(ಗಣೇಶ ಭಟ್)ನ ಪ್ರೀತಿ, ಅಮ್ಮ(ಶಾಂತಾ)ಳ ಶ್ರದ್ದೆ, ಚಿಕ್ಕಮ್ಮಂದಿರ ವಾತ್ಸಲ್ಯ, ಊರ ಜನರ ಪ್ರೋತ್ಸಾಹ, ಗೆಳೆಯರ ಒಡನಾಟದಂತೆ ಯಕ್ಷಗಾನ-ತಾಳಮದ್ದಲೆಯು ನನ್ನ ಬದುಕನ್ನು ರೂಪಿಸಿತು.

ಅಜ್ಜ ಮತ್ತು ಮಾವಂದಿರು ಯಕ್ಷಗಾನದ ವೇಷಧಾರಿಗಳು. ಐದು ವರ್ಷದವಳಿರು ವಾಗಲಿಂದಲೇ ಯಕ್ಷಗಾನವನ್ನು ನೋಡುತ್ತಾ ಬೆಳೆದೆ. ಆಗ ಊರಿನ ರಸ್ತೆಗಳಲ್ಲಿ ಸಾಮಾನ್ಯ ವಾಗಿ ಇಂಥ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆಟ ಶುರುವಾಗುವುದಕ್ಕೆ ಮುಂಚೆಯೇ ಬಿಳಿ ಹುಲ್ಲನ್ನು ಹಾಸಿ ನಮ್ಮ ಜಾಗವನ್ನು ಕಾದಿರಿಸಬೇಕಿತ್ತು. ಹೊದಿಕೆ ಹೊದ್ದು ಮುಂದಿನ ಸಾಲಿನಲ್ಲಿಯೇ ಕುಳಿತುಬಿಡುತ್ತಿದ್ದೆವು. ಅಲ್ಲಲ್ಲಿ ಮಂಡಕ್ಕಿ, ಚಕ್ಲಿ ಅಂಗಡಿಗಳು. ಆಗಾಗ ಎದ್ದು ಹೋಗಿ ತಂದು ತಿನ್ನುವುದು- ವೇಷಧಾರಿಗಳೆಲ್ಲ ನಮ್ಮವರೇ. ಕೋಡಂಗಿ ಪಾತ್ರವಂತೂ ಬಲು ಮಜಾ ತರುತ್ತಿತ್ತು. (ಅವತ್ತಿನ ಪ್ರಸಂಗಗಳೆಲ್ಲ ಈ ಹೊತ್ತಿಗೂ ನನ್ನ ಕಣ್ಣ ಹಾದು ಹೋಗುತ್ತವೆ) ನಿದ್ರೆಗೆಟ್ಟು ಯಕ್ಷಗಾನ ನೋಡಲು ಹಿಂದಿನ ಮಧ್ಯಾನ್ಹ ಪೂರ್ತಿ ನಿದ್ದೆ ಮಾಡಿರುತ್ತಿದ್ದೆವು. ಇಡೀ ರಾತ್ರಿ ಕೂತಹಾಗೆ ಕೂತು ಕುತೂಹಲದಿಂದ ಕುಣಿತ ನೋಡಿ ಬೆಳಿಗ್ಗೆ ಮಲಗಿದರೆ ರಾತ್ರಿಗೇ ಎಚ್ಚರ. ಈ ಮಧ್ಯೆ ಮಾವಂದಿರು ನನಗೆ ಮಸಿಕೆಂಡದಿಂದ ಮೀಸೆ ಬರೆದುಬಿಟ್ಟಿರುತ್ತಿದ್ದರು. ಎಚ್ಚರಾದಾಗ ನೋಡಿದರೆ ನನ್ನ ಮುಖ ರಾತ್ರಿ ಕುಣಿದ ವೇಷಗಾರನನ್ನು ನೆನಪಿಗೆ ತರುತ್ತಿತ್ತು. ಹೀಗೆ ಮಾಡಿದವರ ಮೇಲೆ ಕೋಪವು, ಏನು ಮಾಡಲಾಗದ ಅಸಹಾಯಕತೆಯೂ ಒಮ್ಮೆಲೇ ಬಂದುಬಿಡುತ್ತಿತ್ತು. ತಮ್ಮಂದಿರಾದರೋ ಮನೆಯಲ್ಲಿದ್ದ ಸೀರೆಗಳನ್ನೆಲ್ಲ ಸುತ್ತಿಕೊಂಡು ವೇಷಧಾರಿಗಳಾಗಿ ನಿಂತಿರುತ್ತಿದ್ದರು.

ಅಜ್ಜಿ(ಲಕ್ಷ್ಮಮ್ಮ) ಹೇಳುತ್ತಿದ್ದ ಕಥೆಗಳು/ಅನುಭವಗಳು ಒಮ್ಮೊಮ್ಮೆ ಕಾಡಿನ ಬಗೆಗೆ ಹೆದರಿಕೆ ಹುಟ್ಟಿಸುತ್ತಿತ್ತು. ಇಂಥ ಮರದಲ್ಲಿ ಇಂಥ ಪ್ರೇತ ಇದೆ, ಇಂಥ ದಿನ ಹಾವೊಂದು ಮಗುವಿನ ತಲೆಯ ಹತ್ತಿರ ಸಿಂಬಿಯಂತೆ ಕೂತಿತ್ತು ಹೀಗೆ… ತೋಟದಲ್ಲಿ ತಿರುಗಾಡಬೇಕಾದರೆ ಗಟ್ಟಿಯಾಗಿ ಯಕ್ಷಗಾನ/ತಾಳಮದ್ದಲೆಯ ಹಾಡುಗಳನ್ನು ಹಾಡುವುದೊಂದೇ ಉಪಾಯ. ಅದು ನನ್ನಲ್ಲಿ ಎಂಥಾ ಧೈರ್ಯವನ್ನು ತರುತ್ತಿತ್ತೆಂದರೆ ಯಾವ ದಾರಿಯಲ್ಲಾದರೂ (ಕತ್ತಲೆಯಲ್ಲೂ) ಹೋಗಬಲ್ಲೆ ಎಂಬಷ್ಟು. ಒಮ್ಮೆ ಹೀಗೇ ಅಯಿತು. ಬೆಳಗಿನ ಹೊತ್ತು ನಾನೊಬ್ಬಳೇ ಎಲೆ ಕುಯ್ಯಲು ಹೋಗಿದ್ದೆ. ತೋಟದಲ್ಲಿ ಗುಂ ಗುಂ ಎಂಬ ಶಬ್ದ. ಅಜ್ಜಿ ಹೇಳಿದ್ದ ಕಥೆ ನೆನಪಿಗೆ ಬಂತು. ಜೋರಾಗಿ ಓಡತೊಡಗಿದೆ. ಹಿಂದೆಯೇ ಮನೆಗೆ ಬಂದ ಮಾವ ‘ಅಮ್ಮೀ ಎಂಥಾರು ಶಬ್ದ ಬಂತಾ?’ ಕೇಳಿದ. ನಾನಾಗ ಹೇಳಿದೆ: ‘ಅದು ನೀನೇ ಕೂಗಿದ್ಯಾ’ …ಮಾವ ನಗಾಡಿದ.

ಮನೆಯಲ್ಲಿ ನನ್ನನ್ನು ಒಬ್ಬ ಹೆಣ್ಣುಮಗಳಾಗಿ ಬೆಳೆಸದೆ ಇಬ್ಬರು ತಮ್ಮಂದಿರ ಜೊತೆ ಮಗನಂತೆ ಬೆಳೆಸಿದರು. ಹೀಗಾಗಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಕೆಳದಿ, ಬೇಳೂರು, ಕಾನುಗೋಡು, ಬನದಕೊಪ್ಪ, ಸಾಗರ (ಕೆಲವೊಮ್ಮೆ ಶಿವಮೊಗ್ಗ) ಎಲ್ಲೇ ಯಕ್ಷಗಾನ, ತಾಳಮದ್ದಲೆಗಳು ನಡೆದರೂ ಹೋಗುತ್ತಿದ್ದೆವು. ನೋಡನೋಡುತ್ತಲೇ ನನ್ನಲ್ಲಿದ್ದ ವೇಷಗಾರನೂ ಬಣ್ಣಹಚ್ಚತೊಡಗಿದ. ತಮ್ಮಂದಿರು ಹೆಣ್ಣುವೇಷಧಾರಿಗಳು, ನಾನು ಗಂಡು ವೇಷಧಾರಿ. ಚಿಕ್ಕಮ್ಮ(ಸುಶೀಲ) ನಮಗೆಲ್ಲ ಹಿಂದೆ ನಿಂತು ವೇಷಭೂಷಣಗಳನ್ನು ಕಟ್ಟುವುದು, ಬಣ್ಣ ಹಚ್ಚುವುದು ಮುಂತಾಗಿ ನೆರವಾಗುತ್ತಿದ್ದರು. ಕಟ್ಟುಪಾಡಿಲ್ಲದ ಸರ್ಕಾರಿ ಪ್ರಾಥಮಿಕ ಶಾಲೆ. ಓದಿದ್ದೇ ತಿಳಿಯಲಿಲ್ಲ. ಬರೆದರೂ ಮುಗಿಯದ ಹೋಮ್ ವರ್ಕ್ ಪುಸ್ತಕಗಳು. ಶಾಲೆ-ಕಾಲೇಜಿನ ಕಾರ್ಯಕ್ರಮಗಳಲ್ಲಿ ಯಕ್ಷಗಾನದ ಕೆಲವು ಪ್ರಸಂಗಗಳಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದು ಯಕ್ಷಪಯಣ ಮುಂದುವರೆಯಿತು. ನನ್ನ ಮಾಸ್ತರಾಗಿದ್ದ ಮೋಹನ ಗಣಪತಿ ಹೆಗಡೆಯವರ ಪ್ರೋತ್ಸಾಹವನ್ನಂತೂ ಮರೆಯುವ ಹಾಗಿಲ್ಲ.

ಮಲೆನಾಡಿನ ಮಣ್ಣಿಗಿರುವ ವಿಶೇಷತೆಯೇ ಅಂಥದ್ದು. ಅಮ್ಮನ ರುಚಿಯ ಮಿಡಿ ಉಪ್ಪಿನಕಾಯಿಯಂತೆ- ಪ್ರತಿಯೊಂದು ಮನೆಯ ಮಿಡಿಯಂತೆ ಯಕ್ಷಗಾನದ ವೇಷಗಾರರು- ಈ ಹೊತ್ತಿಗೂ ಯಕ್ಷಗಾನದಲ್ಲಿ ಯಾರು ಯಾವ ವೇಷ ಹಾಕುತ್ತಾರೆಂಬುದೇ ಮುಖ್ಯ. ಇಂಥವರು ಧರ್ಮರಾಯ, ಕೃಷ್ಣ ಹೀಗೆ…ಅಂಥವರ ಕುಣಿತದಿಂದಲೇ ಆಟ ಕಳೆಕಟ್ಟು-ತ್ತಿದ್ದುದು. ಮುಖ್ಯ ಪಾತ್ರ ಮಾಡುವ ಬಾಲಣ್ಣನದು(ಬಾಲಕೃಷ್ಣ)ಪವಾಡ. ದೇಹ ಸೌಖ್ಯವಿಲ್ಲದ ಕಾರಣ ಹೇಳಿ, ‘ಸುಮ್ನೀರ್ರಾ ಎಂಗ್ಯೆಂತೂ ಆಗ್ಯೆಲ್ಲೆ ರಂಗಸ್ಥಳಕ್ಕೆ ಹೋದರೆ ಎಲ್ಲ ಸರಿಹೋಗ್ತು’ ಎಂದು ವೇಷ ಕಟ್ಟಿ ನಿಲ್ಲುತ್ತಿದ್ದ. ದತ್ತಣ್ಣನ ಕೋಡಂಗಿ ಪಾತ್ರಕ್ಕಾಗಿ ರಾತ್ರಿಯಿಡೀ ಕಾಯುತ್ತಿದ್ದೆವು. ಸ್ತ್ರೀ ವೇಷಧಾರಿಗಳನ್ನು ಅವರು ಉಟ್ಟಿರುತ್ತಿದ್ದ ಅವರ ಹೆಂಡತಿಯರ ಸೀರೆಯಿಂದ ಗುರುತಿಸುತ್ತಿದ್ದೆವು. ಚಂದ್ರಣ್ಣನ ಪಾತ್ರವಂತೂ ಹೆಣ್ಣೇ ಎನ್ನುವಂತಿರುತ್ತಿತ್ತು.

ಮನೆಯ ಹತ್ತಿರವೇ ಒಂದು ನೇರಳೆಯಮರ. ಅದರ ಹಣ್ಣನ್ನು ಹೆಕ್ಕುವಾಗಲೆಲ್ಲ ಅಜ್ಜ ಹೇಳುತ್ತಿದ್ದ ಮಹಾಭಾರತದ ಜಂಬು ನೇರಳೆಯ ಕಣ್ವ‌ಋಷಿ ಕಥೆ ಕಣ್ಣಮುಂದೆ…

‘ದೊಡ್ಡ ನೇರಳೆ ಮರ. ಆ ಮರದಲ್ಲಿ ವರ್ಷಕ್ಕೆ ಒಂದೇ ನೇರಳೆ ಹಣ್ಣು ಬಿಡುತ್ತಿತ್ತು…’

ದೊಡ್ಡ ತಮ್ಮ ರಾಘವೇಂದ್ರನ ಪ್ರಶ್ನೆ ತಟ್ಟನೆ ಬರುತ್ತಿತ್ತು.‘ಅಜ್ಜ ಅದ್ಯಾಕೆ ಒಂದೇ ಹಣ್ಣು ಬಿಡ್ತು. ಬೇರೆ ಮರ ಭರ್ತಿ ಹಣ್ಣು ಬಿಡ್ತು ಅಲ್ದಾ’.

ಸಣ್ಣ ತಮ್ಮ ಜಗದೀಶನಿಗೆ ಮುಂದೆ ಕಥೆ ಕೇಳುವ ಆತುರ ‘ಸುಮ್ನೆ ಕುತ್ಕಳ ಬರೀ ಎಂತ್ಯಂತೋ ಪ್ರಶ್ನೆ ಕೇಳಡ, ಅಜ್ಜಂಗೆ ಹೇಳಕ್ಕೆ ಬಿಡು’.

‘ಆ ಮರದ ವಿಶೇಷನೇ ಅಂಥದ್ದು’ ಅಜ್ಜ ಕಥೆಯನ್ನು ಮುಂದುವರೆಸುತ್ತಿದ್ದ. ಕಣ್ವ ಋಷಿ ಆ ಮರದ ಕೆಳಗೆ ತಪಸ್ಸು ಮಾಡಿ ಆನಂತರ ಈ ಹಣ್ಣನ್ನು ತಿನ್ನುತ್ತಿದ್ದ. ಪಾಂಡವರು ವನವಾಸದ ಸಮಯದಲ್ಲಿ ಈ ಮರದ ಹಣ್ಣು ಕಣ್ಣಿಗೆ ಬಿತ್ತು.

ಮತ್ತೆ ದೊಡ್ಡ ತಮ್ಮ ‘ಮರ ಅಲಗಾಡ್ಸಿದ್ವಾ?’ ಮುಗ್ದ ಪ್ರಶ್ನೆ. ನಾನು ದೊಡ್ಡಕೆ ಕಣ್ಣು ಬಿಟ್ಟೆ. ಸುಮ್ಮನಾದ.

ಅರ್ಜುನ ಆ ಹಣ್ಣನ್ನು ಕೆಳಕ್ಕೆ ಬೀಳಿಸಿದ. ದಾರಿಹೋಕನೊಬ್ಬ ‘ನೀವು ತಪ್ಪು ಮಾಡಿದಿರಿ ಋಷಿಯ ಶಾಪಕ್ಕೆ ಗುರಿಯಾಗುವುದೇ ಸಮ’ ಎಂದ. ಧರ್ಮರಾಯ ಭಯಪಟ್ಟು ಕೃಷ್ಣನನ್ನು ಪ್ರಾರ್ಥಿಸಿದ. ಕೃಷ್ಣ ಪ್ರತ್ಯಕ್ಷನಾಗಿ ‘ನೀವು ಜೀವನದಲ್ಲಿ ಮಾಡಿರುವ ತಪ್ಪುಗಳನ್ನು ಆ ಮರದ ಕೆಳೆಗೆ ಹೋಗಿ ಹೇಳಿಕೊಂಡರೆ ಹಣ್ಣು ಮತ್ತೆ ಆ ಜಾಗವನ್ನು ಸೇರಿಕೊಳ್ಳುತ್ತದೆ’ ಎಂದ. ಅಜ್ಜ ಒಂದು ಕ್ಷಣ ಕತೆ ನಿಲ್ಲಿಸಿ ನಮ್ಮೆಲ್ಲರ ಮುಖವನ್ನೊಮ್ಮೆ ನೋಡಿದ.

ಕೃಷ್ಣನ ಮಾತನ್ನು ಒಪ್ಪಿದ ಪಾಂಡವರು ಒಬ್ಬೊಬ್ಬರಾಗಿ ತಮ್ಮ ಜೀವನದಲ್ಲಿ ಮಾಡಿದ ತಪ್ಪುಗಳನ್ನೆಲ್ಲ ಹೇಳಿಕೊಂಡರು. ಮೊದಲು ಧರ್ಮರಾಯ ತನ್ನ ಸತ್ಯ ಮತ್ತು ನ್ಯಾಯದ ಮಾರ್ಗವನ್ನು ಹೇಳಿದ. ಆ ನೇರಳೆ ಹಣ್ಣು ಭೂಮಿಯಿಂದ ಅರ್ಧ ಮೇಲಕ್ಕೆ ಬಂದು ನಿಂತಿತು. ನಂತರ ಅರ್ಜುನ, ಭೀಮ, ನಕುಲ, ಸಹದೇವ. ಕೊನೆಗೆ ದ್ರೌಪದಿಯೂ ತನ್ನ ತಪ್ಪನ್ನು ಹೇಳಿಕೊಂಡಳು. ಕೂಡಲೇ ಆ ಹಣ್ಣು ಮೊದಲಿದ್ದ ಜಾಗದ ಹತ್ತಿರ ಹೋಗಿ ಮತ್ತೆ ನೆಲಕ್ಕೆ ಬಿದ್ದುಬಿಟ್ಟಿತು. ಕೃಷ್ಣ ಹೇಳಿದ: ‘ನೋಡಿ ನಿಮ್ಮಲ್ಲಿ ಯಾರೋ ಒಬ್ಬರ ತಪ್ಪು ಇನ್ನೂ ಉಳಿದುಬಿಟ್ಟಿದೆ. ನೀವು ಹೇಳದಿದ್ದರೆ ಅದು ಹೋಗುವುದೇ ಇಲ್ಲ’ ಎಂದು. ಎಲ್ಲರೂ ತಮ್ಮ ತಮ್ಮ ತಪ್ಪುಗಳಲ್ಲಿ ಏನಾದರೂ ಉಳಿದಿವೆಯೇ ಎಂದು ನೆನಪಿಸಿಕೊಂಡರು. ಕೊನೆಗೆ ಕೃಷ್ಣ ದ್ರೌಪದಿಯ ಹತ್ತಿರ ಬಂದು ‘ನಿನ್ನ ಎಲ್ಲ ತಪ್ಪನ್ನು ಹೇಳಿಬಿಟ್ಟಿದ್ದೀಯಾ’ ಎಂದು ಕೇಳಿದ. ‘ಹೌದು ಏನನ್ನೂ ಬಚ್ಚಿಟ್ಟಿಲ್ಲ’ ಎಂದಳು. ಮತ್ತೆ ‘ನೆನಪಿಸಿಕೋ…’ ಕೃಷ್ಣ ಸಂದೇಹದ ಧ್ವನಿಯಲ್ಲಿ ಕೇಳಿದ. ‘ಇಲ್ಲ’ ಎಂದಳು ದ್ರೌಪದಿ. ಕೃಷ್ಣ ಕೇಳಿದ: ‘ನೀನು ಮದುವೆಯಾಗುವುದಕ್ಕೆ ಮುಂಚೆ ಕರ್ಣನನ್ನು ಇಷ್ಟಪಟ್ಟಿದ್ದೆಯಾ?’ ದ್ರೌಪದಿಗೆ ತಕ್ಷಣ ಸ್ವಯಂವರದಲ್ಲಿ ಕರ್ಣನ ದೇಹದ ಸೌಂದರ್ಯ ಮತ್ತು ಪರಾಕ್ರಮವನ್ನು ನೆನೆದು ತನ್ನ ಗಂಡನಾಗಬಹುದೇ ಎಂಬಂತೆ ಕಲ್ಪಿಸಿಕೊಂಡದ್ದು ನೆನಪಿಗೆ ಬಂತು. ಆ ತಪ್ಪನ್ನು ಒಪ್ಪಿಕೊಂಡಳು. ತಕ್ಷಣ ಆ ಹಣ್ಣು ಮೊದಲಿದ್ದ ಜಾಗಕ್ಕೆ ಅಂಟಿಕೊಂಡಿತು… ನಾವೆಲ್ಲಾ ಉಸ್ಸಪ್ಪ ಎಂದು ನಿಟ್ಟುಸಿರುಬಿಟ್ಟೆವು…

ಈ ಕಥೆ ಕೇಳಿ ಇಪ್ಪತ್ತು ಇಪ್ಪತ್ತೈದು ವರ್ಷಗಳಾಗಿವೆ. ಆದರೆ ಎಷ್ಟು ಅರ್ಥಪೂರ್ಣವಾಗಿದೆ ಎಂದರೆ-ಮನುಷ್ಯರು ತಪ್ಪು ಮಾಡುವುದು ಸಹಜ. ಆ ತಪ್ಪನ್ನು ಒಪ್ಪಿಕೊಳ್ಳು-ವುದಿದೆಯಲ್ಲ ಅದು ದೊಡ್ಡದು. ಅದಕ್ಕಿಂತ ದೊಡ್ಡ ಪಶ್ಚಾತ್ತಾಪ ಮತ್ತೊಂದಿಲ್ಲ. ಎಲ್ಲ ಧರ್ಮಗಳು ಹೇಳುವುದೂ ಇಂಥ ಪ್ರಾಯಶ್ಚಿತ್ತವನ್ನೆ. ‘ದ್ರೌಪದಿ ಮನಸ್ಸಿನಲ್ಲಿ ಕರ್ಣನನ್ನು ಕಲ್ಪಿಸಿಕೊಂಡದ್ದು ತಪ್ಪೆ?’ ಎಂದು ಈ ಹೊತ್ತಿನ ಸಮಾಜ ವ್ಯವಸ್ಥೆಯಲ್ಲಿ ನಾವು ಪ್ರಶ್ನಿಸುವುದು ಬೇರೆ. ಆದರೆ ಆ ಕಾಲದ ಸಮಾಜ ವ್ಯವಸ್ಥೆಯಲ್ಲಿ ಅದು ಸರಿ ಇರಬಹುದು.

ಇಂಥ ಅನೇಕ ಕಥೆಗಳನ್ನು ಅಜ್ಜ ದಿನವೂ ಹೇಳುತ್ತಿದ್ದ. ದೊಡ್ಡ ತಮ್ಮನಿಗೋ ಹಲವು ಅನುಮಾನಗಳು. ‘ಒಂದೇ ಸಲ ನೂರು ಮಕ್ಕಳು ಹೆಂಗೆ ಹುಟ್ಟಿದಾ’ ಮುಂತಾಗಿ. ಅಜ್ಜಿ ಮಧ್ಯೆ ಬಾಯಿ ಹಾಕಿ ಅಜ್ಜನನ್ನು ಗದರುತ್ತಿದ್ದಳು ‘ನಿಂಗಳದು ಇದೇ ಆತು’ ಅಜ್ಜ ಯಾವುದನ್ನೂ ಮುಚ್ಚುಮರೆ ಇಲ್ಲದೆ ಹೇಳಿಬಿಡುತ್ತಿದ್ದ. ನಮಗೆ ಅದು ಎಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ ಆದರೆ ಕಥೆ ಕೇಳುವುದು ಮಜಾ ಎನಿಸುತ್ತಿತ್ತು.

ಪ್ರತಿ ಸಲ ಅದದೇ ಕಥೆ. ರೀತಿ ಬೇರೆ ಕೃಷ್ಣ ಸಂಧಾನ ಕಥೆ ಯಾರಿಗೆ ಗೊತ್ತಿಲ್ಲ? ಎಷ್ಟು ಬಾರಿ ನೋಡುವಾಗಲೂ, ಕೇಳುವಾಗಲೂ ಅದು ಹೊಚ್ಚ ಹೊಸತು. ತಾಳಮದ್ದಲೆಯ ವಿಶೇಷತೆಯೇ ಅದು. ಪ್ರತಿಯೊಂದು ಪ್ರದರ್ಶನವೂ ಒಂದು ಹೊಸ ಕೃತಿ. ಅದೇ ಕಥೆ, ಅದೇ ಪಾತ್ರಧಾರಿ, ಅದೇ ಸ್ಥಳವಾದರೂ ಒಂದು ಕ್ಷಣ ಬಿಟ್ಟು ಮತ್ತೊಂದು ಕ್ಷಣದಲ್ಲಿ ಅದೇ ಪ್ರಸಂಗ ಮಾಡಿದರೆ ಬೇರೆ ಮಾತುಗಳು!(ಒಮ್ಮೆ ಹೀಗೆ ನಡೆದಿರಬಹುದಾದ ಎಲ್ಲ ತಾಳಮದ್ದಲೆಯನ್ನು ಸಂಗ್ರಹಿಸಿ ಪ್ರಕಟಿಸುವುದಾಗಿದ್ದರೆ ಅದು ಕನ್ನಡಕ್ಕೆ ಎಷ್ಟು ದೊಡ್ಡ ನಿಧಿಯಾಗುತ್ತಿತ್ತು?) ಕಲಾವಿದನ ಜಾಣ್ಮೆ ಮತ್ತು ಅಂಥ ವಿಚಾರವನ್ನು ಹೇಗೆ ತರುತ್ತಾನೆಂಬುದಕ್ಕೆ ಒಂದು ಸಣ್ಣ ಉದಾಹರಣೆ :

ಕೃಷ್ಣ ಮತ್ತು ಕರ್ಣ ಯುದ್ಧಭೂಮಿಯಲ್ಲಿ ಭೇಟಿಯಾಗುವ ಸಂದರ್ಭ. ಬ್ರಾಹ್ಮಣ ವೇಷದಾರಿಯಾದ ಕೃಷ್ಣನನ್ನು ಕೇಳುತ್ತಾನೆ ಕರ್ಣ:

‘ಯಾವೂರಪ್ಪ ನಿಂದು’

‘ನಂದು ಬೆಳೆಯುತ್ತಲೇ ಇರುವ ಊರು!’

‘ಅಂದರೆ ಬೆಳೆಯೂರೇ?’

‘ಹೌದು’

-ಹೀಗೆ ಪೌರಾಣಿಕ ಪ್ರಸಂಗದ ಜೊತೆ ನಮ್ಮ ಊರಿನ ಹೆಸರು ಸೇರಿಕೊಳ್ಳುವುದು ಸಹಜ. ಆ ಮೂಲಕ ಅದು ನಮ್ಮದೇ ಊರಿನಲ್ಲಿ ನಡೆಯುತ್ತಿರುವ ಕಥೆಯಾಗಿ, ನನ್ನದೇ ಊರಿನ ಕೃಷ್ಣನಾಗಿ, ಕರ್ಣನಾಗಿ, ದ್ರೌಪದಿಯಾಗಿ ಕಾಣುತ್ತದೆ. ಒಂದು ವಿಷಯವನ್ನು ಗಮನಿಸಬೇಕು. ನಮ್ಮ ಪರಂಪರೆ ಏನನ್ನೂ ಬೇಕಾದರೂ ಜೀರ್ಣಿಸಿಕೊಳ್ಳುತ್ತದೆ ಎನ್ನುತ್ತಾರಲ್ಲ- ಆದರೆ, ಅದು ತನಗೆ ಬೇಕಾದುದನ್ನು, ಬೇಕಾದ ಹಾಗೆ ಮಾತ್ರ ಜೀರ್ಣಿಸಿಕೊಳ್ಳುತ್ತದೆ. ಉದಾಹರಣೆಗೆ ತಾಳಮದ್ದಲೆಯಲ್ಲಿ ನಮ್ಮ ದಿನನಿತ್ಯದ ಎಲ್ಲ ವ್ಯವಹಾರಗಳಲ್ಲಿ ಹಾಸುಹೊಕ್ಕಾಗಿರುವ ಇಂಗ್ಲಿಷ್‌ನ ಒಂದೇ ಒಂದು ಪದ ಸುಳಿಯದಂತೆ ಕಟ್ಟುವ ಕ್ರಮ ಸಾಮಾನ್ಯವಾದುದಲ್ಲ. ಬೇರೆ ಧರ್ಮಗಳ ಅರ್ಥದಾರಿಗಳಿದ್ದರೂ ಅವರ ಮಾತಿನಲ್ಲಿ ನಮ್ಮದೇ ಪರಂಪರೆಯ ಹಾವಭಾವಗಳು, ವೈಖರಿಗಳಿರುತ್ತವೆಯೇ ಹೊರತು ಬೇರೆ ಧರ್ಮದ್ದಲ್ಲ. ಯಾಕೆ ಹೀಗೆ? ಎಂದು ಯೋಚಿಸುತ್ತೇನೆ. ಅದು ಕಲೆಯ ಅನನ್ಯತೆ; ಪರಂಪರೆಯ ಜೊತೆಗಿನ ಸಾತತ್ಯ.

ಮುಂದೆ ನಾನು ಮದುವೆಯಾಗಿ ಹೊನ್ನಾವರದ ಹತ್ತಿರವಿರುವ ಧಾರೇಶ್ವರದ ಪ್ರಕಾಶ ನಾರಾಯಣ ಜೋಶಿ ಅವರ ಮಡದಿಯಾದೆ. ಅವರ ಕುಟುಂಬವೂ ತಾಳಮದ್ದಲೆಯ ಬಗೆಗೆ ಆಸಕ್ತಿಯಿದ್ದ ಮನೆತನ. ನಮ್ಮ ಮಾವ ನಾರಾಯಣ ಜೋಶಿಯವರಂತೂ ಕುಳಿತಲ್ಲಿಯೇ ಹಲವು ಪದ್ಯಗಳನ್ನು ಕಟ್ಟಿ ಹೇಳಿಬಿಡುತ್ತಿದ್ದರು. ನನ್ನ ಕೆಲಸದ ಒತ್ತಡ, ಕುಟುಂಬದ ನಿರ್ವಹಣೆಯ ಮಧ್ಯೆಯೂ ಬೆಂಗಳೂರಿನಲ್ಲಿ ತಾಳಮದ್ದಲೆ, ಯಕ್ಷಗಾನ ಇದೆಯೆಂದಾದರೆ ನಿಂತ ನಿಲುವಿನಲ್ಲಿ ಹೊರಟುಬಿಡುವಷ್ಟು ಆಸೆಯಾಗುತ್ತದೆ. ಕಾಲೇಜಿ-ನಲ್ಲಿಯೋ ಹೊರಗಡೆಯೋ ಒಮ್ಮೊಮ್ಮೆ ಯಕ್ಷಗಾನ ವೇಷದ ಅವಕಾಶಗಳು ನನ್ನಲ್ಲಿ ಅ ಬಗೆಗೆ ಆಸಕ್ತಿಯನ್ನೂ ಅಭಿರುಚಿಯನ್ನೂ ಕಾಯ್ದಿರಿಸಿವೆ.

ತಾಳಮದ್ದಲೆಯ ಕಥೆಯ ಬಗೆಗೆ ಹೇಳಿದೆನಲ್ಲ- ಮಹಾಭಾರತ, ರಾಮಾಯಣ, ಪುರಾಣಗಳ ಕಥೆಗಳನ್ನು ಎಷ್ಟು ಬಾರಿ ಕೇಳಿಲ್ಲ! ನೋಡಿಲ್ಲ, ಓದಿಲ್ಲ? ಆದರೂ ನೋಡಬೇಕೆನಿಸುತ್ತದೆ, ಕೇಳಬೇಕೆನಿಸುತ್ತದೆ, ಓದಬೇಕೆನಿಸುತ್ತದೆ. ಏಕೆಂದರೆ ಪ್ರತಿಬಾರಿ ಕೃಷ್ಣ ಹೊಚ್ಚ ಹೊಸಬನಂತೆ ಕಾಣುತ್ತಾನೆ. ವಿಧುರನಿಗೆ ಭಕ್ತಿಯ ಸಾಕಾರರೂಪವಾಗಿ, ಅರ್ಜುನನಿಗೆ ಗುರುವಾಗಿ, ಧರ್ಮರಾಯನಿಗೆ ಧರ್ಮಸೂಕ್ಷ್ಮಿಯಾಗಿ, ದ್ರೌಪದಿಗೆ ಕರುಣೆಯ ಸಾಕಾರಮೂರ್ತಿಯಾಗಿ, ರಸಿಕನಾಗಿ, ಕೌರವನಿಗೆ ಚಾಣಕ್ಷ ರಾಜಕೀಯ ನಿಪುಣನಾಗಿ ಕಾಣುತ್ತಾನೆ. ಇದು ಒಂದು ನೆಲೆ. ಇದೆಲ್ಲವನ್ನು ನಮ್ಮ ಕಣ್ಣಿನಲ್ಲಿ, ಹೃದಯದಲ್ಲಿ ತುಂಬಿಕೊಳ್ಳುತ್ತಾ ಹೋಗುವುದು ಇನ್ನೊಂದು ನೆಲೆ. ರಾವಣನಲ್ಲಿಯೂ ಇರಬಹುದಾದ ಮಾನವೀಯತೆ, ಕೃಷ್ಣನ ಕುಟಿಲತೆ ಇಂಥ ಹಲವು ವ್ಯಕ್ತಿತ್ವಗಳು ವೇದಿಕೆಯಲ್ಲಿ ತೆರೆದುಕೊಳ್ಳುತ್ತವೆ. ಹೀಗಾಗಿಯೇ ಪ್ರತಿಯೊಂದು ತಾಳಮದ್ದಲೆಯ ಪ್ರಸಂಗ ಪಂಪ ಹೇಳುವಂತೆ ‘ಇದು ನಿಚ್ಚಂ ಪೊಸತು’.

ಅಂಬೆಯ ಕಥೆಯನ್ನು ಯಾರು ಕೇಳಿಲ್ಲ? ಅವಳು ಸಾಲ್ವನನ್ನು ಪ್ರೀತಿಸಿದವಳು. ನಿನ್ನನ್ನೇ ಮದುವೆಯಾಗುತ್ತೇನೆಂದು ಮಾತುಕೊಟ್ಟವಳು. ಅದರೆ ಅವನ ತಂದೆ ಕಾಶಿರಾಜ ತನ್ನ ಮೂರೂ ಹೆಣ್ಣುಮಕ್ಕಳಿಗಾಗಿ ಬಲಶಾಲಿ ವರರನ್ನು ಹುಡುಕಲು ಸ್ವಯಂವರವನ್ನು ಏರ್ಪಡಿಸಿದ. ಅಂಬೆಯ ಧರ್ಮಸಂಕಟ ಹೇಳತೀರದು. ತಂದೆಯ ಹತ್ತಿರ ಹೇಳಲಾಗದ ದುಗುಡ. ಸಾಲ್ವ ಸ್ವಯಂವರದಲ್ಲಿ ಸೋತು ಹೋಗುತ್ತಾನೆ. ಆಜನ್ಮ ಬ್ರಹ್ಮಚಾರಿ ಭೀಷ್ಮ ಸ್ವಯಂವರ ಗೆದ್ದು ಅಂಬೆ, ಅಂಬಿಕೆ, ಅಂಬಾಲಿಕೆ ಮೂವರನ್ನೂ ತನ್ನ ರಥದಲ್ಲಿ ಹಸ್ತಿನಾವತಿಗೆ ಕರೆತರುತ್ತಾನೆ. ತನ್ನ ಇಬ್ಬರು ತಮ್ಮಂದಿರಿಗೆ ಅಂಬಾಲಿಕೆ ಮತ್ತು ಅಂಬಿಕೆಯರನ್ನು ಮದುವೆ ಮಾಡುತ್ತಾನೆ. ಅಂಬೆ ತನ್ನನ್ನು ಮದುವೆಯಾಗು ಎಂದು ಭೀಷ್ಮನನ್ನು ಕೇಳಿಕೊಳ್ಳುತ್ತಾಳೆ.

ಭೀಷ್ಮ ತನ್ನ ತಂದೆ ಶಂತನು ಸತ್ಯವ್ರತ ರಾಜನ ಮಗಳನ್ನು ವರಿಸಿದಾಗ ಅವನು ‘ನಿನಗೀಗಾಲೇ ವಯಸ್ಸಾಗಿದೆ. ನಿನ್ನ ನಂತರ ಪಟ್ಟದ ರಾಣಿಯ ಸ್ಥಾನವು ನಿನ್ನ ಮಗನಾದ ಭೀಷ್ಮನ ಹೆಂಡತಿಗೆ ಹೋಗುತ್ತದೆ. ನನ್ನ ಮಗಳು ಯಾವಾಗಲೂ ಪಟ್ಟ ಮಹಿಷಿಯಾಗಿಬೇಕು’ ಎಂದು ಹೇಳಿ ನಿರಾಕರಿಸಿಬಿಡುತ್ತಾನೆ. ಶಂತನು ಚಿಂತಾಕ್ರಾಂತನಾದಾಗ ಭೀಷ್ಮ ಆ ರಾಜನನ್ನು ಕಂಡು ತಾನು ಆಜನ್ಮಬ್ರಹ್ಮಚಾರಿಯಾಗಿರುವುದಾಗಿ ಪ್ರತಿಜ್ಞೆ ಮಾಡಿ ತಂದೆಗೆ ಮದುವೆಯಾಗುವಂತೆ ನೋಡಿಕೊಳ್ಳುತ್ತಾನೆ. ಈ ಕಾರಣ ಹೇಳಿ ತಾನು ಮದುವೆಯಾಗುವುದಿಲ್ಲವೆಂದು ಅಂಬೆಯನ್ನು ನಿರಾಕರಿಸುತ್ತಾನೆ. ಭೀಷ್ಮನಿಗೆ ಸಾಲ್ವನನ್ನು ಪ್ರೀತಿಸಿರುವ ವಿಚಾರವನ್ನು ತಿಳಿಸಿ ಅವನ ಅನುಮತಿಯ ಮೇರೆಗೆ ಸಾಲ್ವನ ಹತ್ತಿರ ಬಂದು ‘ಮದುವೆಯಾಗು’ ಎಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಸಾಲ್ವ ‘ನೋಡು ಸ್ವಯಂವರದಲ್ಲಿ ಸೋತ ನಾನು ಹೆಣ್ಣಾಗಿದ್ದೇನೆ. ಹೆಣ್ಣನ್ನು ಹೆಣ್ಣು ಮದುವೆಯಾಗುವುದುಂಟೆ?’ ಎಂದು ನಿರಾಕರಿಸುತ್ತಾನೆ. ಅಂಬೆ ಭೀಷ್ಮನ ಗುರುವಾದ ಪರಶುರಾಮನ ಹತ್ತಿರ ಹೋಗಿ ತನ್ನ ದುಃಖವನ್ನೆಲ್ಲ ತೋಡಿಕೊಳ್ಳುತ್ತಾಳೆ. ಅವನಿಗೆ ಮನಸ್ಸು ಕರಗಿ ಭೀಷ್ಮನಲ್ಲಿಗೆ ಬಂದು ‘ಪ್ರತಿಜ್ಞೆಯನ್ನು ಮುರಿದು ಮದುವೆಯಾಗು’ ಎಂದು ಹೇಳುತ್ತಾನೆ. ಭೀಷ್ಮ ಒಪ್ಪುವುದಿಲ್ಲ. ಸಿಟ್ಟಿನಿಂದ ಅಂಬೆ ‘ನನ್ನಿಂದಲೇ ನಿನಗೆ ಸಾವಾಗಲಿ’ ಎಂಬ ಶಾಪಕೊಟ್ಟು ಅಗ್ನಿಪ್ರವೇಶ ಮಾಡುತ್ತಾಳೆ. ಮುಂದೆ ಶಿಖಂಡಿಯಾಗಿ

ಅರ್ಜುನನ ಸಾರಥಿಯಾಗುತ್ತಾಳೆ. ಅವಳ ಶಾಪದಿಂದಾಗಿ ಚಿರಂಜೀವಿ ಭೀಷ್ಮ ಶರಶಯ್ಯೆಯಲ್ಲಿ ಮಲಗುತ್ತಾನೆ. ಇದು ತಾಳಮದ್ದಲೆಯಲ್ಲಿ ಎಂಥಾ ಹೃದಯವಿದ್ರಾವಕ ಪ್ರಸಂಗ!

ಮಾತಿನಂಥ ಮಾತು ಕೂಡ ತನ್ನ ಅರ್ಥವಂತಿಕೆಯನ್ನು ಕಳೆದುಕೊಂಡುಬಿಡುತ್ತದೆ ಎನ್ನುವುದಕ್ಕೆ ಕರ್ಣಾವಸಾನ ಪ್ರಸಂಗವೇ ಸಾಕು. ಅಂದರೆ ಆ ಸನ್ನಿವೇಷದಲ್ಲಿ ಕರ್ಣನ ಮನಃಸ್ಥಿತಿಯನ್ನು, ಒಳತೋಟಿಯನ್ನು, ಅಸಹಾಯಕತೆಯನ್ನು, ವಿಧಿಯ ಆಟವನ್ನು ಬಣ್ಣಿಸಲು ಮಾತು ಸಾಲದಾಗುತ್ತದೆ. ನಮ್ಮ ಅಂತರಂಗದಲ್ಲಿ ದುಃಖ ಮಡುಗಟ್ಟುತ್ತದೆ. ನಮಗೇ ಗೊತ್ತಿಲ್ಲದಂತೆ ಕಣ್ಣುಗಳಲ್ಲಿ ನೀರು ಹರಿಯುತ್ತದೆ. ನಾವೇ ಅಸಹಾಯಕರಾದವರಂತೆ ಬಿಕ್ಕುತ್ತೇವೆ. ಆ ಸನ್ನಿವೇಶವನ್ನು ವರ್ಣಿಸುತ್ತಾ ಎ. ಆರ್. ಕೃಷ್ಣಶಾಸ್ತ್ರಿಗಳು ಬರೆಯುತ್ತಾರೆ ‘ತನ್ನ ಮಗನ ಸಾವನ್ನು ನೋಡಲಾರದೆ ಸೂರ್ಯ ಅಸ್ತಂಗತನಾದ’ ಎಂದು.

ಅಂಬೆಯ ಪಾತ್ರವಾಗಲೀ, ಕರ್ಣನ ಪಾತ್ರವಾಗಲೀ, ಕೃಷ್ಣನ ಪಾತ್ರವಾಗಲೀ ಬೇರೆ ಪ್ರಸಂಗಗಳಾಗಲೀ ಇವತ್ತಿಗೆ ಪ್ರಸ್ತುತವಲ್ಲ ಎಂದು ಹೇಳುವುದು ಹೇಗೆ ಸಾಧ್ಯ? ಕುಂತಿಯ ಒಳತೋಟಿ, ದ್ರೌಪದಿಯ ಅಸಹಾಯಕತೆ ಇವತ್ತಿನ ಹೆಣ್ಣುಮಗಳ ಮನಃಸ್ಥಿತಿಯೂ ಹೌದಲ್ಲವೆ? ಈ ಕಾರಣಕ್ಕೇ ಬಹುಶಃ ಪುರಾಣದ, ಮಹಾಭಾರತದ, ರಾಮಾಯಣದ ಪ್ರಸಂಗ- ಪಾತ್ರಗಳು ಪ್ರಸ್ತುತವಾಗುವುದು. ನಾಟಕವಾಗಲೀ, ಸಿನೆಮಾವಾಗಲೀ, ಸಂಗೀತ ವಾಗಲೀ ಸಮಾಜಕ್ಕೆ ಪ್ರತಿಸ್ಪಂದಿಸುವುದು ಇದೇ ನೆಲೆಯಲ್ಲಲ್ಲವೆ? ಅವು ಹುಡುಕುವುದು ಮನುಷ್ಯ ಮನುಷ್ಯ ಸಂಬಂಧಗಳಲ್ಲಡಗಿರಬಹುದಾದ ಸೂಕ್ಷ್ಮತೆಗಳನ್ನಲ್ಲವೆ? ಅಂತಃಕರಣ

ವನ್ನಲ್ಲವೆ? ನೇರವಾಗಿ ಕಲೆ ಜನರನ್ನು ತಿದ್ದುವುದರ ಮೂಲಕ ತನ್ನನ್ನೂ ತಾನು ಪರಿವರ್ತಿಸಿ

ಕೊಳ್ಳುತ್ತದೆಯಲ್ಲವೆ? ಸಮಾಜದ, ಇತಿಹಾಸದ, ಸಂಸ್ಕೃತಿಯ ಪುನರ್ ಶೋಧವೂ ಸಂಸ್ಕರಣವೂ ಸಾಧ್ಯವಾಗುತ್ತದೆ. ಮನುಷ್ಯ ಸ್ವಭಾವವನ್ನೇಕೆ-ಎಲ್ಲ ತರತಮಭಾವಗಳನ್ನು ಒಳಗೊಂಡಂತೆ-ಭಕ್ತಿ ಇರಬಹುದು, ಸಂಭ್ರಮವಿರಬಹುದು, ನೋವಿರಬಹುದು, ಅಸಹಾಯಕತೆ ಇರಬಹುದು, ದುರಂತವಿರಬಹುದು- ಎಲ್ಲವನ್ನು ಅಭಿವ್ಯಕ್ತಿಸಲು ಸಾಧ್ಯವಾಗುತ್ತದೆ.

ತಾಳಮದ್ದಲೆ ಮುಂದೆಯೂ ಹೀಗೆ ಉಳಿಯುತ್ತದಾ? ಖಂಡಿತಾ. ಯಾಕೆಂದರೆ ನನ್ನ ಅಜ್ಜನ ಕಣ್ಣಿನ ಕಾವು ನನ್ನ ಮಗಳ ಕಣ್ಣಿನಲ್ಲಿ ಚೂಪುಗೊಳ್ಳುತ್ತಿದೆ. ಯಾಕೆಂದರೆ ನಾನು ಮರೆತಿದ್ದ ಅಂಬೆಯನ್ನು ನೆನಪಿಸಿದವಳು ಮಗಳು ನಿಧಿ ಪ್ರಕಾಶ ಜೋಶಿ.

ಕಲೆ ಅಜರಾಮರ ಎನ್ನುವ ಮಾತು ಸತ್ಯ…

*

ಭೂಮಿಯ ಋಣ ದೊಡ್ಡದು ಹೀಗಾಗಿ ಸಮಾಜಕ್ಕೆ ಏನನ್ನಾದರೂ ಮಾಡಬೇಕೆಂಬ ಹಂಬಲ. ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿದರೆ ಹೇಗೆ? ಯೋಚನೆ ಹಲವು ವರ್ಷಗಳಿಂದ ನನ್ನ ತಲೆಯಲ್ಲಿತ್ತು. ತಾಳಮದ್ದಲೆಯನ್ನೇ ಕೇಂದ್ರವಾಗಿಸಿಕೊಂಡರೆ ಹೇಗೆ? ಹೌದು. ಅದು ಸರಿ ಎನ್ನಿಸಿತು. ಅದರ ಬೆನ್ನಲ್ಲೇ ರೂಪತಳೆದದ್ದು ಈ ಸಂಪುಟ. ಇದಕ್ಕೆ ಸಾಕಾರಮೂರ್ತಿಯಾಗಿ ಕನಸಿನ ಗರಿಗೆ ಬಣ್ಣ ತುಂಬಿದ ರವಿ, ನನ್ನ ಆತ್ಮಸ್ಥೆರ್ಯವನ್ನೂ ಸ್ಥಿರಗೊಳಿಸಿದರು.

ಸಂಪುಟ ರೂಪಗೊಳ್ಳುವುದಕ್ಕೆ ಮುಂಚೆ ಪ್ರಭಾಕರ ಜೋಶಿ, ಶ್ರೀಧರ ಹೆಗಡೆ ಮುಂತಾದವರಲ್ಲಿ ವಿಚಾರಿಸಿದಾಗ ‘ತುಂಬಾ ಒಳ್ಳೆಯ ಯೋಚನೆ ಮಾಡಬಹುದು’ ಎಂದರು. ನನಗೆ ಅನುಮಾನ. ಯಾರೆಲ್ಲ ಬರೆಯಬಹುದು ಎಂದು. ಆದರೆ ನೋಡನೋಡತ್ತಿದ್ದಂತೆ ಕೇಳಿದ ಎಲ್ಲರೂ ಅದೆಷ್ಟು ಉತ್ಸಾಹದಿಂದ ಬರೆದುಕೊಟ್ಟರೆಂದರೆ ಇಡೀ ಸಂಚಿಕೆ ಎರಡು ತಿಂಗಳಿನಲ್ಲಿ ಸಿದ್ದವಾಗಿಬಿಟ್ಟಿತು. ನಾವು ಕೇಳಿದ ಅಷ್ಟೂ ಜನ ಬರೆದರು. ತಾಳಮದ್ದಲೆಯ ಭೀಷ್ಮರೆಂದೇ ಗುರುತಿಸಲ್ಪಟ್ಟ ಹೊಸ್ತೋಟ ಮಂಜುನಾಥಭಟ್ಟರು, ಎಂ ಎ. ಹೆಗಡೆ, ನೀರ್ನಳ್ಳಿ ಗಳಪತಿ, ಜಿ. ಎಸ್. ಭಟ್, ಜೋಗಿ ಎಲ್ಲರೂ… ಜೊತೆಗೆ ಹಿಂದೆ ಬಂದಿದ್ದ ಕೆಲವು ಮಹತ್ವದ ಲೇಖನಗಳನ್ನೂ ಬಳಸಿಕೊಳ್ಳಲು ತೀರ್ಮಾನಿಸಿದೆವು.

ಈಗ ತಾಳಮದ್ದಲೆ ಕುರಿತ ಸ್ವಯಂ ಸೇವಾಸಂಸ್ಥೆಯ ಕಲ್ಪನೆಗೆ ಸ್ಪಷ್ಟ ರೂಪ ಸಿಕ್ಕಿದೆ. ಈ ಕಲೆಯನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ಮಟ್ಟದಲ್ಲಿ ಪುರಸ್ಕಾರ, ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ತಾಳಮದ್ದಲೆಯ ಸಾಹಿತ್ಯದ ಪ್ರಕಟನೆ, ತಾಳಮದ್ದಲೆಯನ್ನು ಕಾಲೇಜುಗಳೂ ಸೇರಿದಂತೆ ಹಲವು ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ, ಮಕ್ಕಳಿಗಾಗಿ ತಾಳಮದ್ದಲೆಯ ಶಿಬಿರಗಳು ಅಶಕ್ತ ಕಲಾವಿದರಿಗೆ ನೆರವು ಇತ್ಯಾದಿ…

*

ಇಲ್ಲಿಯ ಪ್ರಭಾಕರ ಜೋಶಿಯವರ ಲೇಖನ ತಾಳಮದ್ದಲೆ ಬಗೆಗೆ ವಿಸ್ತಾರವಾದ, ಅಷ್ಟೇ ಖಚಿತವಾದ ಚಿತ್ರವನ್ನು ಕಟ್ಟಿಕೊಡುತ್ತದೆ. ವಿಜಯ ನಳಿನಿ ರಮೇಶರ ಲೇಖನ ಇದಕ್ಕೆ ಪೂರಕವಾಗಿದೆ. ಮಾಧವ ಪೆರಾಜೆಯವರ ಲೇಖನ, ಅವರು ಮಹಾಪ್ರಬಂಧಕ್ಕೆ ಸಿದ್ದಪಡಿಸಿದ್ದರೂ ಆ ಮಿತಿಯನ್ನು ದಾಟಿಗಿಂತ ಭಿನ್ನವಾಗಿ ಹಲವು ಅರ್ಥಾಂತರ ವಿನ್ಯಾಸಗಳನ್ನು ಪರಿಚಯಿಸುತ್ತದೆ. ತೆಕ್ಕಟ್ಟೆ ಆನಂದ ಮಾಸ್ತರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಮಾತುಗಾರಿಕೆಯ ತಾತ್ವಿಕ ವಿಚಾರಗಳನ್ನು ವಿವರಿಸುತ್ತಾರೆ. ಕಲೆ ಎಷ್ಟು ಪ್ರಾಚೀನ ಎನ್ನುವುದು ಮುಖ್ಯವಲ್ಲ ಅದು ಎಷ್ಟು ಅನನ್ಯವೆಂಬುದೇ ಮುಖ್ಯ’ ಎಂಬಂಥ ಶಿವರಾಮ ಕಾರಂತರ ನೇರ, ಸ್ಪಷ್ಟ ಮಾತುಗಳೂ ಇಲ್ಲಿವೆ.

ತಾಳಮದ್ದಲೆಯ ಬಗೆಗೆ ಪ್ರಕಟವಾದ ಸೇಡಿಯಾಪು ಅವರ ಲೇಖನ ಐತಿಹಾಸಿಕವಾಗಿ ಮುಖ್ಯ. ತಾಳಮದ್ದಲೆಯ ಹಲವು ಸಮಸ್ಯೆಗಳು ಎಷ್ಟೋ ವರ್ಷಗಳದರೂ ಹಾಗೆಯೇ ಉಳಿದಿವೆ ಎಂಬುದಕ್ಕೆ ಈ ಲೇಖನ ಸಾಕ್ಷಿ. ಚಂದ್ರಶೇಖರ ಕಂಬಾರರು ಸಿರಿಸಂಪಿಗೆ ನಾಟಕ ಬರೆಯಲು ಒಂದು ವರ್ಷ ಹೆಗ್ಗೋಡಿನಲ್ಲಿ ಭಾಗವತರೊಬ್ಬರ ಜೊತೆಗಿದ್ದರು. ಆ ಅನುಭವದ ಹಿನ್ನೆಲೆಯಲ್ಲಿ ವಿಚಾರಸಂಕಿರಣದಲ್ಲಿ ಮಂಡಿಸಿದ ಲೇಖನವನ್ನು ಇಲ್ಲಿ ಅನುವಾದಿಸಿದೆ. ಹೊಸ್ತೋಟ ಮಂಜುನಾಥ ಭಾಗವತರ ಲೇಖನ ಅವರ ಅನುಭವದ ವಿಸ್ತಾರ ಮತ್ತು ವಿದ್ವತ್ತನ್ನು ಪರಿಚಯಿಸುತ್ತದೆ. ಎಂ. ಎ. ಹೆಗಡೆಯವರು ತಾಳಮದ್ದಲೆಯಲ್ಲಿ ಜನಪ್ರಿಯವಾದ ಆಖ್ಯಾನಗಳ ಬಗೆಗೆ ನಮ್ಮ ಗಮನಸೆಳೆಯುತ್ತಾರೆ. ಹಾಗೆಯೇ ಇಂಥಾ ಕಲೆಯ ಹಲವು ಸೃಜನಶೀಲ ಸಾಧ್ಯತೆಗಳನ್ನು ಗುರುತಿಸುತ್ತಾರೆ. ನಾ. ದಾಮೋದರ ಶೆಟ್ಟಿಯವರ ಲೇಖನ ತಾಳಮದ್ದಲೆಯ ಪರಿಸರ ಹೇಗೆ ರೂಪುಗೊಳ್ಳುತ್ತದೆಂಬುದನ್ನೂ, ರಾಘವ ನಂಬಿಯಾರರ ಲೇಖನ ಈ ಕಲೆಯ ಸಾಮಾಜಿಕ ಪ್ರಭಾವ ಮತ್ತು ಆಶಯಗಳನ್ನು ಗಮನಿಸುತ್ತವೆ. ಕಿ.ರಂ. ನಾಗರಾಜರ ಲೇಖನ ತಾಳಮದ್ದಲೆಯನ್ನು ಇತರ ಮೌಕಿಕ ಕಲೆಗಳ ಜೊತೆಗಿಟ್ಟು ತಲಸ್ಪರ್ಷಿಯಾಗಿ ಪರಿಶೀಲಿಸಿರುವಂಥದು. ಆರ್. ವಿ. ಭಂಡಾರಿಯವರು ಪುರಾಣ ಪ್ರತೀಕಗಳು ಹೇಗೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿವೆ ಎಂಬುದನ್ನು ವಿವರಿಸುತ್ತಾರೆ. ವಿವೇಕ ರೈ ಅವರು ತಮ್ಮ ನಿತ್ಯದ ಹೊಟ್ಟೆಪಾಡಿನ ಮಾತು ಮತ್ತು ಮಾತು ಸಾರ್ವಜನಿಕರ ಸಮ್ಮುಖದಲ್ಲಿ ಕಲೆಯಾಗಿ ಅರಳುವ ಪ್ರಕ್ರಿಯೆಯನ್ನು ವಿವರಿಸುತ್ತಾರೆ.

ಇಲ್ಲಿನ ಬಹಳ ಮುಖ್ಯವಾದ ಎರಡು ಭಾಗಗಳೆಂದರೆ ಒಂದು ತಾಳಮದ್ದಲೆಯ ಸ್ವಂತ ಅನುಭವಗಳನ್ನು ಕುರಿತದ್ದು; ಅವುಗಳನ್ನೆಲ್ಲ ಓದುತ್ತಾ ಹೋದಂತೆ ನಾವೇ ತಾಳಮದ್ದಲೆಯಲ್ಲಿ ಭಾಗವಹಿಸಿದವರಂತೆ ಭಾಸವಾಗುತ್ತದೆ. ಕೆಲವು ನಿರೂಪಣೆಗಳಂತೇ ಆ ಘಟನೆಗಳನ್ನು ನಮ್ಮ ಕಣ್ಣಮುಂದೆ ತಂದು ನಿಲ್ಲಿಸುತ್ತವೆ. ಜೋಗಿಯಂಥವರು ‘ಮಹಿಳಾ ಅರ್ಥಧಾರಿಗಳಿಲ್ಲ’ ಎಂದು ಹೇಳುವ ಬೆನ್ನಲ್ಲೇ ವಿಜಯ ನಳಿನಿ, ಸುಮಾ ಜಗದೀಶ್, ಗೀತಾ ಹೆಗಡೆಯವರಂಥವರು ಇದ್ದಾರೆ. ಶಂಕರನಾರಾಯಣರು ಕೋಟೆಗುಡ್ಡೆಯವರು ಗುರುತಿಸುವಂಥ ಅನೇಕ ಮಹಿಳಾ ತಾಳಮದ್ದಲೆಯ ಸಂಘಟನೆಗಳೂ ಇವೆ

ಎಂಬುದು ಗಮನಾರ್ಹ. ಆದರೆ ಇಂಥಾ ಸಂಘಟನೆಗಳು ಯಾವ ಯಾವ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿವೆ ಎಷ್ಟು ವರ್ಷಗಳಿಂದ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿವೆ ಅವುಗಳ ವ್ಯಾಪ್ತತೆ ಏನು? ಮುಂತಾಗಿ ಅಧ್ಯಯನ ಮಾಡುವ ಅವಶ್ಯಕತೆ ಇದೆ. ಶ್ರೀಪಾದ

ಶೆಟ್ಟಿ ಅವರು ಕಲೆ ಪಡೆದುಕೊಳ್ಳುವ ಸಾಮಾಜಿಕ ಆಯಾಮ ಮತ್ತು ಪಡೆದುಕೊಳ್ಳಬೇಕಾದ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ಹೇಳುತ್ತಾರೆ. ಪೃಥ್ವಿರಾಜ ಕವತ್ತಾರರ ಲೇಖನ ಶೇಣಿ ಯವರನ್ನು ಕೇಂದ್ರವಾಗಿಸಿಕೊಂಡು ತಾಳಮದ್ದಲೆಯ ಅನನ್ಯತೆಯನ್ನು ಪರಿಶೀಲಿಸುತ್ತದೆ. ಸ್ವಗತದಲ್ಲಿಯೂ ಕೂಡ ವೈವಿಧ್ಯಮಯ ಬರಹಗಳು ಇಲ್ಲಿವೆ. ಮದ್ದಲೆಗಾರರ ಅನುಭವವೂ ಅರ್ಥದಾರಿಗಳ ಅನುಭವದಂತೆಯೇ ನಿರೂಪಿಸಲ್ಪಟ್ಟಿವೆ.

ಮತ್ತೊಂದು ಮುಖ್ಯವಾದ ಭಾಗ ವಿದ್ವಾಂಸರಿಂದ ಪಡೆದ ಅಭಿಪ್ರಾಯಗಳದ್ದು. ಬಿಳಿಮಲೆಯವರು ‘ಯಾವತ್ತೂ ಇಂಥ ಕಲಾಪ್ರಕಾರಗಳು ಧಾರ್ಮಿಕ ಚೌಕಟ್ಟಿನಲ್ಲಿ ಉಸಿರಾಡುತ್ತಿರಲಿಲ್ಲ’ ಎಂಬುದನ್ನೂ, ಇವತ್ತು ಹೇಗೆ ಯಕ್ಷಗಾನದಂಥ ಕಲೆ ಮುಂದಿನ ಹದಿನೈದು ವರ್ಷಗಳ ಕಾಲ ದೇವಸ್ಥಾನದಲ್ಲಿ ಹರಕೆಯ ಆಟವಾಗಿ ಬುಕ್ ಆಗಿವೆ ಎಂಬ ಮಹತ್ವದ ಅಂಶಗಳ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. ತಿರುಮಲೇಶರು ಕನ್ನಡ ಭಾಷಾಭಿವೃದ್ದಿಯ ದೃಷ್ಟಿಯಿಂದ ಇಂಥ ಕಲೆಗಳ ಮಹತ್ವವನ್ನು ಪರಿಶೀಲಿಸುತ್ತಾರೆ.

ಮತ್ತೆರಡು ಮುಖ್ಯ ಲೇಖನಗಳೆಂದರೆ ಜಿ. ಎಲ್. ಹೆಗಡೆಯವುರು ನಿರೂಪಿಸಿರುವ ಶೇಣಿ ರಾಮಾಯಣದ ಒಂದು ಅಧ್ಯಾಯ. ಅವರ ಮಾತಿನ ಓಘದಂತೆಯೇ ನಿರೂಪಿಸಲ್ಪಟ್ಟಿರುವುದರಿಂದ ಸಹಜತೆ ಎದ್ದು ಕಾಣುತ್ತದೆ ಹಾಗೆಯೇ ಶೇಣಿಯಂಥವರು ಮಾತ್ರ ನೀಡಬಹುದಾದ ಹಾಗು ಸಮಕಾಲೀನಕ್ಕೂ ಸ್ಪಂದಿಸುವ ದೃಷ್ಟಿಕೋನವನ್ನು ನಮ್ಮ ಮುಂದಿರಿಸುತ್ತದೆ.

ಈ ಸಂಪುಟದ ಮತ್ತೊಂದು ಮಹತ್ವಾಕಾಂಕ್ಷೆಯ ಲೇಖನ ಶ್ರೀಧರ ಹೆಗಡೆ ಭದ್ರನ್ ಅವರದ್ದು. ಅವರ ಅಧ್ಯಯನಶೀಲತೆ ಹಾಗು ಸಂಗ್ರಾಹ್ಯತೆಗಳು ಇಲ್ಲಿ ಎದ್ದು ಕಾಣುತ್ತದೆ. ತಾಳಮದ್ದಲೆಯ ಬಗೆಗೆ ಲೇಖನಗಳು, ವರದಿಗಳು, ಪುಸ್ತಕಗಳು ಮತ್ತು ಆಕರಗಳನ್ನೆಲ್ಲ ಬಳಸಿಕೊಂಡು ಸಮಗ್ರ ಚಿತ್ರಣವನ್ನು ಕೊಡಲು ಪ್ರಯತ್ನಿಸಿದ್ದಾರೆ. ಒಂದು ಅಧ್ಯಯನ ವ್ಯಾಪ್ತಿಯ ಆಶಯವನ್ನುಳ್ಳ ಈ ಲೇಖನ ತನ್ನ ಗುಣಮಟ್ಟ ಹಾಗು ಪ್ರಸ್ತುತಪಡಿಸುವಿಕೆಯ ವಿಧಾನಗಳಿಂದ ಅನನ್ಯವಾಗಿದೆ.

ತಾಳಮದ್ದಲೆಯನ್ನು ಕುರಿತು ಈವರೆವಿಗೆ ನಡೆದಿರುವ ಶೈಕ್ಷಣಿಕ(ಅಕಾಡೆಮಿಕ್) ಮಾದರಿಯ ಹವ್ಯಾಸಿ ಪರಿಚಯಾತ್ಮಕ ರೀತಿಯ ಬರಹಗಳಿಗಿಂತ ಭಿನ್ನವಾದ ಬರವಣಿಗೆ

ಇಲ್ಲಿ ಸಂಚಯಗೊಂಡಿದೆ. ತಾಳಮದ್ದಲೆ ಕಲೆಗಾರಿಕೆಗೆ ಇರುವ ಬಹುಮುಖಿ ಆಯಾಮಗಳನ್ನು ಶೋಧಿಸಬೇಕೆಂಬ ನಮ್ಮ ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆ ಎಂಬುದನ್ನು ಸಹೃದಯರು ಹೇಳಬೇಕು. ಇನ್ನು ಮುಂದೆ ನಾವು ಈ ಕ್ಷೇತ್ರದಲ್ಲಿ ಮಾಡಬೇಕೆಂದುಕೊಂಡಿರುವ ವಿಧಾಯಕ ಕೆಲಸ ಕಾರ್ಯಗಳಿಗೆ ಇದು ನಾಂದಿಯಾಗಲಿ ಎಂಬ ಆಶಯ ನಮ್ಮದು. ಹೀಗೊಂದು ಸಂಪುಟ ಮಾಡಬಹುದೆಂಬ ಅನುಭವವನ್ನೂ; ಮುಂದೆ ಮಾಡಬಹುದಾದ ಹಲವು ಸಾಧ್ಯತೆಗಳ ಭರವಸೆಯನ್ನು ತಂದುಕೊಟ್ಟಿದೆ.

ಈ ಸಂಚಿಕೆ ರೂಪಗೊಳ್ಳುವಲ್ಲಿ ಹೆಚ್ಚು ಶ್ರಮವಹಿಸಿದ ಶ್ರೀಧರ ಹೆಗಡೆ ಭದ್ರನ್, ನಮಗೆ ಕಲಾವಿದರ ಮತ್ತು ಬರಹಗಾರರ ಬಗೆಗೆ ಮಾಹಿತಿ ಒದಗಿಸಿ ನಮ್ಮ ಬೆನ್ನು ತಟ್ಟಿದ ಪ್ರಭಾಕರ ಜೋಶಿ, ಲೇಖನಗಳನ್ನು ಬಳಸಿಕೊಳ್ಳಲು ಅನುಮತಿ ಇತ್ತವರು ಮತ್ತು ಅವರ ಕುಟುಂಬ ವರ್ಗ, ಆಸಕ್ತಿಯಿಂದ ಮತ್ತು ಮುತುವರ್ಜಿಯಿಂದ ಲೇಖನಗಳನ್ನು ಬರೆದುಕೊಟ್ಟ ಲೇಖಕರು, ಆಕರಗಳನ್ನು ಒದಗಿಸಿಕೊಟ್ಟ ಕೆಲವು ಸಂಘಟನೆಗಳು-ಮುಖ್ಯವಾಗಿ ‘ಉಡುಪಿಯ ಯಕ್ಷಗಾನ ಕೇಂದ್ರ’ ಮತ್ತು ಬೆಂಗಳೂರಿನ ‘ಅಗ್ನಿ ಸೇವಾ ಟ್ರಸ್ಟ್’ನ್ನು ಕೃತಜ್ಞತೆಯಿಂದ ನೆನಯುತ್ತೇನೆ.

ಹಾಗೆಯೇ ಅರ್ಥಪೂರ್ಣ ಹಿನ್ನುಡಿಯನ್ನು ಬರೆದುಕೊಟ್ಟ ಶ್ರೀ ಯು. ಆರ್. ಅನಂತಮೂರ್ತಿಯವರಿಗೆ ಧನ್ಯವಾದಗಳು.

ನನ್ನ ಬರಹ ಮತ್ತು ಅಲೋಚನಾ ವಿಧಾನಗಳನ್ನು ತಿದ್ದುತ್ತಾ ಪ್ರೋತ್ಸಾಹಿಸುವ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹೆಚ್. ಡಿ. ಮಹೇಶಪ್ಪ, ಅಪಾರ ಸಂಯಮದಿಂದ ನನ್ನ ಹುಚ್ಚುತನಗಳನ್ನು ಸಹಿಸಿಕೊಂಡು ಎಲ್ಲ ಕೆಲಸಗಳನ್ನು ಬೆಂಬಲಿಸುವ ಪತಿ ಪ್ರಕಾಶ ನಾರಾಯಣ ಜೋಶಿ ಮತ್ತು ಇವರ ಕುಟುಂಬದವರಾದ ಕೃಷ್ಣಜೋಶಿ-ಮಮತ, ಸುರೇಶ ಜೋಶಿ-ಉಷಾ ಹಾಗು ನಾಗರಾಜ ಜೋಶಿ-ಸಂಧ್ಯಾ, ಅತ್ತೆ ಸಾವಿತ್ರಿ, ಎಂಥ ಕೆಲಸವಾದರೂ ಸೈ ಎಂದು ನಿಲ್ಲುವ ಅಶೋಕ ಹೆಗಡೆ ಬಿ. ಎಮ್, ತನ್ನ ಆತ್ಮೀಯತೆಯನ್ನು ಕಣ್ಣುಗಳಲ್ಲಿ ಹೊತ್ತುನಿಂತ ರಾಜಿ(ರಾಜೇಶ್ವರಿ ಹೆಗಡೆ) ‘ನೀ ನಿನ್ನ ಕೆಲ್ಸ ಮಾಡ್ಕ್ಯಾ, ಆನು ಮನೆ ಕೆಲ್ಸ ಮಾಡ್ಕ್ಯಲ್ತೆ’ ಎಂದು ಹುರಿದುಂಬಿಸುವ- ನನ್ನಮ್ಮ ಶಾಂತಾಳ ಪ್ರೀತಿಯನ್ನೇ ನೆನಪಿಸುವ- ಸುಶೀಲಾ ಚಿಕ್ಕಮ್ಮ, ‘ನಿಮಗೆ ಜವಾಬ್ದಾರಿಯೇ ಇಲ್ಲ’ವೆಂದು ಬೈದರು ನಗುತ್ತಾ ‘ಹೌದಕ್ಕ ನೀನು ಹೇಳಿದ್ ಮೇಲೆ ಗೊತ್ತಾತು ನೋಡು’ ಎನ್ನುವ ತಮ್ಮಂದಿರು, ಲೇಖನ ಕೇಳಿದ್ದೇ ತಡ ಲೈಬ್ರರಿಯಲ್ಲೆಲ್ಲ ಹುಡುಕಾಡಿ ತನ್ನ ಪುಟ್ಟ ಅನುಭವವನ್ನೇ ನಮ್ಮ ಅನುಭವವಾಗುವಂತೆ ನಿರೂಪಿಸಿದ ಪವಿತ್ರಾ ರಾಘವೇಂದ್ರ, ಶ್ರೀಲಕ್ಷ್ಮೀ ಜಗದೀಶ, ನನಗೆ ಹಲವು ಅವಕಾಶಗಳ ಮೂಲಕ ಯಕ್ಷಪ್ರೀತಿಯನ್ನು ಜೀವಂತವಿಟ್ಟಿರುವ ರಾಧಾಕೃಷ್ಣ ಬೆಳೆಯೂರು ಹಾಗು ಮಯೂರಿ ಉಪಾಧ್ಯಾಯ, ನೀರ್ನಳ್ಳಿ ಗಳಪತಿ ಮತ್ತು ಕುಟುಂಬ ವರ್ಗದವರನ್ನು, ‘ಎಂಥ ಮಾಡ್ತ್ಯೆ… ನಾನೂ ಮಾಡ್ತಿ…’ ಎಂದು ಪುಟ್ಟ ಕಣ್ಣುಗಳನ್ನು ಅರಳಿಸುತ್ತಾ ನನ್ನಲ್ಲಿ ಜೀವಂತಿಕೆಯನ್ನು ಪುಟಿದೇಳಿಸುವ ಮಗಳು ನಿಧಿ ಪ್ರಕಾಶ ಜೋಶಿ,

ಹಾಗು

ನನ್ನ ಬಾಲ್ಯವನ್ನು ಮತ್ತೆ ಕಣ್ಣಗಲಕ್ಕೆ ತಂದುಕೊಳ್ಳುವಂತೆ ಮಾಡಿದ ಅಭಿನವ ಬಳಗಕ್ಕೆ, ಅಕ್ಷರ ವಿನ್ಯಾಸ ಮಾಡಿ ಈ ಸಂಪುಟಕ್ಕೆ ಘನತೆ ತಂದುಕೊಟ್ಟ ಗುರುಪ್ರಸಾದ್, ಕರಡುತಿದ್ದಿದ ಇಂದ್ರಕುಮಾರ್, ಮುಖಪುಟ ವಿನ್ಯಾಸ ಮಾಡಿದ ದೇವರಾಜ್, ಪುಸ್ತಕ

ಪ್ರೀತಿಯ ಕೆಲಸದಲ್ಲೇ ಉತ್ಸಾಹ ಕಾಣುವ ಕೃಷ್ಣ ಚೆಂಗಡಿ, ಮುದ್ರಿಸಿದ ಲಕ್ಷ್ಮೀ ಮುದ್ರಣಾಲಯದ

ಮಂಜು ಮತ್ತು ಸಿಬ್ಬಂದಿ ವರ್ಗ ಇವರೆಲ್ಲರಿಗೂ ಕೃತಜ್ಞತೆ ಹೇಳಲು ಮಾತುಗಳಿಲ್ಲ.

*

ಆ ಘಟನೆಯನ್ನು ನಾನು ಮರೆಯುವುದಿಲ್ಲ. ಅಪ್ಪನಿಗೆ ಕ್ಯಾನ್ಸರ್ ಆಗಿತ್ತು. ಅವರ ಕೊನೆಯ ದಿನಗಳವು. ದೀಪಾವಳಿಗೆ ಹೋದವಳನ್ನು ‘ಇನ್ನೆರಡು ದಿನ ಇರು ಅಮ್ಮಿ’ ಎಂದು ಅಂಗಲಾಚಿದ್ದರು. ಯಾವತ್ತು ನಮಸ್ಕಾರ ಮಾಡಿ ಬರುವ ನಾನು, ಅಂದು ಅವರ ನೋವನ್ನು ನೋಡಲಾರದೆ. ಆಸ್ಪತ್ರೆಗೆ ಹೋಗಿದ್ದಾಗ ಹೇಳದೆ ಕೇಳದೆ ಬಂದುಬಿಟ್ಟಿದ್ದೆ. ಇದಾದ ಒಂದು ವಾರದಲ್ಲಿ ಯಾರಿಗೂ ಹೇಳದೆಯೇ ಅಪ್ಪ ಹೊರಟೇಬಿಟ್ಟಿದ್ದರು.

ದೀಪಾವಳಿ ಮತ್ತೆ ಮತ್ತೆ ಬರುತ್ತೆ

ನೆನಪು ತರತ್ತೆ

ಆದರೆ ಅಪ್ಪ ಮತ್ತೆ ಎಂದೂ ಬರಲ್ಲ…

‘ಕಾಡಿಸುವ ನೆನಪು

ಎಂದೂ ಕಾಡುತ್ತಲೇ ಇರುತ್ತ’

– ಹಾಗೆಯೇ-

ಹೊನ್ನಾವರದ ನನ್ನ ಮಾವನವರ ಮನೆಗೆ ಹೋದಾಗಲೆಲ್ಲ ‘ಸ್ವರ್ಗದ ಕಿಚ್ಚೇ ಭುವಿಗೆ ಬಂದಂತೆ’ ಎಂದು ಮಾವ ಸಂಭ್ರಮ ಪಡುತ್ತಿದ್ದರು.

ಇವರಿಬ್ಬರಿಗೆ ಈ ಸಂಪುಟವನ್ನು ಅರ್ಪಿಸಿದ್ದೇನೆ.

ಈ ಕೆಲಸದಲ್ಲಿ ನೆರವಾದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ಜಿ. ಮಮತಾ

ಸಂಪಾದಕಿ

 

‍ಲೇಖಕರು G

December 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sindhu

    endu bidugade.. endininda pustaka koLLalu siguttade?
    Great Effort!
    Best Wishes
    -sindhu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: