ಕೆ ಟಿ ಶಿವಪ್ರಸಾದ್ ಹೀಗಂತಾರೆ…

ಕೆ ಟಿ ಶಿವಪ್ರಸಾದ್ ಅವರ ಒಂದು ಅಪರೂಪದ ಸಂದರ್ಶನ.

ಸಂದರ್ಶನ ಮಾಡಿದವರು ನಾಗರಾಜ್ ಹೆತ್ತೂರು, ಹಾಸನ

ಹೌದು ಕೆ.ಟಿ. ಮಾತನಾಡುವುದು ಕಡಿಮೆ. ತಂದೆ ದೊಡ್ಡ ಉದ್ಯಮಿಯಾಗಿ , ರಾಜಕಾರಣ, ಕೋಟ್ಯಾಂತರ ರೂ. ಆಸ್ತಿ ಏನೆಲ್ಲಾ ಇದ್ದರೂ ಬುದ್ದನ ತತ್ವಗಳಿಂದ ಪ್ರಭಾವಿತರಾಗಿ ಇಂದಿಗೂ ಎಲ್ಲವನ್ನೂ ಬಿಟ್ಟು ಹಾಸನದ ಉದಯಗಿರಿಯ ಬಾಡಿಗೆ ಮನೆಯೊಂದರಲ್ಲಿ ಕಲಾ ತಪಸ್ಸಿನಲ್ಲಿ ತೊಡಗಿಸಿಕೊಂಡಿದ್ದಾರೆ, ಹೀಗಿದ್ದರೂ ಇಂದಿನ ಸಮಾಜ, ಮೂಡನಂಬಿಕೆ, ರಾಜಕೀಯ, ಎಲ್ಲದರ ಬಗ್ಗೆ ನೋಡಿದಾಗ ಆಕ್ರೋಶ ಧಗ್ಗನೆ ಉರಿಯುತ್ತದೆ.

ಇಂತಹ ಕೆ.ಟಿ. ಕಾರಣ ಪರಿಣಾಮ ಸಿದ್ದಾಂತ ಮತ್ತು ಬುದ್ದನ ತತ್ವಗಳನ್ನು ಅಕ್ಷರಶಃ ಪಾಲಿಸುತ್ತಿರುವ ಕೆಲವೇ ಜನರಲ್ಲಿ ಒಬ್ಬರು. ದಲಿತಸ ಸಂಘರ್ಷ ಸಮಿತಿ ಮಾವಳ್ಳಿ ಶಂಕರ್ ಬಣದಲ್ಲಿ ಗುರುತಿಸಿಕೊಂಡಿರುವ ಕೆ.ಟಿ, . ರೈತ ಸಂಘ ಎಂದರೆ ಈ ಕಡೆ ಬರಲೇಬೇಡಿ ಎನ್ನುತ್ತಾರೆ. ತಿಂಗಳಲ್ಲಿ ಒಂದು ದಿನ ಒಡನಾಡಿ ಸಂಸ್ಥೆ ಕಡೆ, ಆಗಾಗ ತುಮಕೂರಿನ ಗೆಳೆಯ ಕೆ.ಬಿ. ಸಿದ್ದಯ್ಯ, ನಟರಾಜ್ ಬೂಧಾಳು ಎಂ.ಎಸ್. ಶೇಖರ್ ಇಂತಹ ಕಲವರೊಂದಿಗಷ್ಠೇ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.

ಕೆ.ಟಿ. ಚಿಂತನೆಗಳು ನಿಜಕ್ಕೂ ಇಂದಿನ ಸಮಾಜಕ್ಕೆ ಬೇಕಿರೋದು. ಈ ನಿಟ್ಟಿನಲ್ಲಿ ಅವರೂ ಕೂಡ ಮಾತನಾಡಲಿ ಎಂದು ಆಶಿಸುತ್ತಾ..

ಮಹದೇವ ಇನ್ನಷ್ಟು ಸೀರಿಯಸ್ ಆಗಿ ಬರೀಲಿ ಕೇಳಿದಾಗ ನಾನೆ ಉಚಿತವಾಗಿ ಡ್ರಾಯಿಂಗ್ ಮಾಡಿಕೊಡುತ್ತೇನೆ..

ಕೆ.ಟಿ. ಶಿವಪ್ರಸಾದ್ ರೊಂದಿಗೆ ಆಪ್ತ ಮಾತುಕತೆ

ಅದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮ. ಈ ನಾಡಿನ ಐಕಾನ್ ದೇವನೂರು ಮಹದೇವ ಮತ್ತು ಈ ನಾಡಿನ ನಿಜವಾದ (ದಲಿತನಲ್ಲದಿದ್ದರೂ) ದಲಿತ, ಬುದ್ದನ ಮಾರ್ಗದಲ್ಲಿ ನಡೆಯುತ್ತಿರುವ ಅಪರೂಪದ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಬಾಗವಹಿಸಬೇಕಿತ್ತು. ಕಾರ್ಯಕ್ರಮ ಆಯೋಜಕರು ಹೇಗೋ ಇಬ್ಬರನ್ನೂ ಒಪ್ಪಿಸಿ ಕಾರ್ಯಕ್ರಮಕ್ಕೆ ಕರೆದಿದ್ದರು. ಕಾರ್ಯಕ್ರಮ ಆರಂಭವಾಗಿ ಕೆ.ಟಿ ಮಾತನಾಡಲು ಶುರು ಮಾಡಿದರು. ಎಲ್ಲರಿಗೂ ಗೊತ್ತಿರುವಂತೆ ದೇವನೂರು ಮಾತನಾಡುವುದು ಕಡಿಮೆ. ಒಂದಿಷ್ಟು ಟಿಪ್ಪಣಿ ಹಾಕಿಕೊಂಡು ಮಾತನಾಡಿ ಕುಳಿತುಕೊಂಡರೆ ಮುಗಿಯಿತು. ಇಷ್ಟವಾಗದಿದ್ದರೆ ಸುಮ್ಮನೆ ಬ್ಯಾಗು ನೇತು ಹಾಕಿಕೊಂಡು ಅಲ್ಲಿಂದ ತೆರಳುತ್ತಾರೆ. ಅಂತ ಜೀವಿ ನಮ್ಮ ಮಹದೇವ.

ಕೆ.ಟಿ ಮಾತು ಆರಂಭಿಸಿದರು. ಸಂಘಟಕರು ಕೆ.ಟಿ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದಾಗ ಕೆ.ಟಿ. ಒಪ್ಪಿಕೊಂಡಿರಲಿಲ್ಲವಂತೆ ಕೊನಗೆ ಬೇಸತ್ತ ಸಂಘಟಕರು `ಮಹದೇವರೇ ಮಾತನಾಡುತ್ತಾರೆ ನಿಮಗೇನು ಬಂದಿದೆ. ಬನ್ನಿ ಸಾರ್ ಎಂದು ಒತ್ತಡ ಹಾಕಿದ್ದರಂತೆ’ ಈ ವಿಚಾರವನ್ನು ಕೆ.ಟಿ. ಹೇಳುತ್ತಿದ್ದಂತೆ ದೇವನೂರು ಮಾತೆ ಹೊರಡದೆ ಸುಮ್ಮನೆ ಕುಳಿತರಂತೆ. `ಹಾಗೆ ನಮ್ಮ ಮಹದೇವ’ ಎಂದು ಹಳೆಯ ಘಟನೆಯೊಂದನನು ನೆನಪಿಸಿಕೊಂಡರು ಕೆ.ಟಿ. ಶಿವಪ್ರಸಾದ್.

 

ಮೊನ್ನೆ ಕೆ.ಟಿ. ಮನೆಗೆ ಹೋಗಿ ಕಾಲಹರಟೆಯಲ್ಲಿ ತೊಡಗಿದ್ದಾಗ ಪ್ರಜಾವಾಣಿಯವರು ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಹೊರತಂದಿದ್ದ ದೇವನೂರು ಮಹದೇವ ಅವರ ಅತಿಥಿ ಸಂಪಾದಕತ್ವದ ಪುಸ್ತಕ ಮತ್ತು ಅವರ ಬಹುಕಾಲದ ಆತ್ಮೀಯ ಗೆಳೆಯ ಮಹದೇವರ ಎದೆಗೆ ಬಿದ್ದ ಅಕ್ಷರ ಪುಸ್ತಕದ ಬಗ್ಗೆ ಪ್ರಸ್ತಾಪಿಸಿದೆ. ಪ್ರಜಾವಣಿಯ ಸಂಚಿಕೆಯನ್ನು ದಲಿತ ಸಂಘರ್ಷ ಸಮಿತಿಯವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಅಭಿನವ ತಂದಿರುವ ಎದೆಗೆ ಬಿದ್ದ ಅಕ್ಷರವನ್ನು ಹಾಸನದಲ್ಲಿ ಬಿಡುಗಡೆ ಮಾಡೋಣ ಎಂದು ಒಪ್ಪಿಸಿದೆ.

ನನಗೊಂದು ಆಸಕ್ತಿ. ಸದಾ ಮನೆಯೊಳಗೆ ಸೇರಿಕೊಂದು ಕಲಾರಾಧನೆ ಮಾಡುವ ಕೆ.ಟಿ. ಹೆಚ್ಚು ಎಂದರೆ ತುಮಕೂರಿನ ಕಡೆ ಹೋಗುತ್ತಾರೆ. ಅದೂ ಕೂಡ ಸಿದ್ದಯ್ಯ ನವರ ಜತೆ ಸೇರಿಕೊಂಡು ಬಿರಿಯಾನಿ ತಿನ್ನಲು. ಇಂಥಹ ಕೆ.ಟಿ. ಪ್ರಸ್ತುತ ವಿಷಯಗಳ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ! ದೇವನೂರು , ಸಮಕಾಲೀನ ರಾಜಕೀಯ, ಸಾಹಿತ್ಯ ಹೀಗೆ ಬೇರೆ ವಿಷಯಗಳನ್ನು ಕೇಳುತ್ತಾ ಹೋದೆ. ಅದರ ಒಂದಷ್ಟು ವಿವರ .

ಪ್ರಶ್ನೆ: ಸಾರ್, ದೇವನೂರು ಮಹದೇವ ಬರೆಯುವುದನ್ನು ನಿಲ್ಲಿಸಿದ್ದಾರೆ, ನಿಮ್ಮ ಆತ್ಮೀಯ ಮಿತ್ರರಲ್ಲಿ ಅವರೂ ಒಬ್ಬರು ಜಾಸ್ತಿ ಬರಿಯಪ್ಪಾ ಎಂದು ನೀವಾದರೂ ಹೇಳಬಹುದಲ್ಲವಾ..?

ಕೆ.ಟಿ: ನೋಡೋ ನನ್ನ ಪ್ರಕಾರ ಈ ನಾಡಿನ ಶ್ರೇಷ್ಟ ಸಾಹಿತಿಗಳಲ್ಲಿ ಅವನದು ದೊಡ್ಡ ಹೆಸರು. ಅವನಿಗೆ ಬರೆಯಲು ಬಿಡಬೇಕು. ಬರೆಯಲು ಒತ್ತಾಯಿಸಬೇಕು. ಅವನು ಬರೆದಿದ್ದನ್ನು ನಾವು ಪಾಲಿಸಬೇಕು. ಸೀ, ದೇವನೂರು ನಮ್ಮೆಲ್ಲರ ಸ್ಟ್ರೆಂಥ್ ಮತ್ತು ವೀಕ್ನೆಸ್ ಎರಡೂ ಆಗಿದ್ದಾನೆ. 26 ವರ್ಷಗಳ ಹಿಂದೆ ಬರೆದು ಹೇಗೆ ಈ ನಾಡಿನಲ್ಲಿ ದೊಡ್ಡ ಸಂಚಲನ ತಂದ. ಅದು ಈಗ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ನಮಗೂ ಅರ್ಥವಾಗುತ್ತಿಲ್ಲ. ಆದ್ದರಿಂದ ನಾವೆಲ್ಲ ಆತನಿಗೆ ಬರೆಯಲೇಬೇಕೆಂದು ಒತ್ತಾಯಿಸಬೇಕಿದೆ. ನೋಡು ಈಗಿರುವ ನಮ್ಮ ರಾಜ್ಯದ ಸಾಹಿತಿಗಳ ಪೈಕಿ ನನಗನ್ನಿಸಿದಂತೆ ಮೂವರು ಗ್ರೇಟ್ ಸಾಹಿತಿಗಳಿದ್ದಾರೆ ದೇವನೂರು, ಮೊಗಳ್ಳಿ ಮತ್ತು ಕೆ.ಬಿ. ಸಿದ್ದಯ್ಯ. ದೇವನೂರು ಬಗ್ಗೆ ಹೇಳಲೇಬೇಕಿಲ್ಲ. ಮೊಗಳ್ಳಿ ಲಾಂಗ್ವೇಜ್ ಇದಿಯಲ್ಲ ಆ ಲಾಂಗ್ವೇಜ್ನಲ್ಲಿ ಬರೆಯುವ ಮತ್ತೊಬ್ಬ ಸಾಹಿತಿಯನ್ನು ನೋಡಲಿಲ್ಲ. ಹಾಗೆಯೇ ಕಂದ ಪದ್ಯ ಯಾರು ಬರೆಯುತ್ತಿದ್ದಾರೆ ಕೆ.ಬಿ. ಸಿದ್ದಯ್ಯ ಒಬ್ಬನೆ ಅಲ್ವಾ..? ಅವನ ಸಾಹಿತ್ಯಕ್ಕಿಂತ ಗ್ರೇಟ್ ಬೇಕೆನಯ್ಯಾ..?.

ಪ್ರಶ್ನೆ: ಸಾರ್ ಇದೇ ನೀವು ಹೇಳುವ ಕವಿ ಕೆ.ಬಿ. ಸಿದ್ದಯ್ಯ ಯಾವುದೋ ಸ್ವಾಮೀಜಿಯ ಪಾದ ತೊಳೆದರಂತಲ್ಲಾ..? ನಿಮಗೆ ಗೊತ್ತಿದೆಯೇ..?

ಕೆ.ಟಿ.: ಅದೇನೋ ನಂಗೆ ಗೊತ್ತಿಲ್ಲ ಕಣೋ ನನಗೂ ಕೆಲವ್ರು ಕೇಳಿದರು. ನಾನು ಅವನ್ನ ಕೇಳ್ದೆ ಅದ್ಯಾರೋ ಸ್ವಾಮೀಜಿ ಬಂದಿದ್ನಂತೆ ಆ ತರಾ ಏನು ನಡ್ದಿಲ್ಲ ಕೆಲವ್ರು ಸುಮ್ನೆ ಸುಳ್ಳು ಹಬ್ಸಿದ್ದಾರೆ. ಸಿದ್ದಯ್ಯನಂತಹ ಅಪರೂಪದ ನಮ್ಮೊಳಗಿನ ಸಾಹಿತಿಗಳನ್ನು ಯಾವ್ದೋ ಸುಳ್ಳು ಸುದ್ದಿಗೆ ಬಿಟ್ಕೊಡ್ಬಾರ್ದು ಕಣಯ್ಯ. ಇವೆಲ್ಲಾ ಕುತಂತ್ರಗಳು.

ಪ್ರಶ್ನೆ: ನಿಮ್ಮ ಪ್ರಕಾರ ಸಾಹಿತ್ಯ ಎಂದರೆ ಹೇಗಿರಬೇಕು..?

ಕೆ.ಟಿ.: ನೋಡು ನಾವು ಯಾವುದೇ ಒಂದು ಸಾಹಿತ್ಯ ಅಥವಾ ಒಂದು ಪಾರ್ಟ್ ತೆಗೆದುಕೊಂಡರೆ ಆ ಸಾಹಿತ್ಯ ನಮ್ಮೆಲ್ಲಾ ಪಂಚೇಂದ್ರಿಯಗಳನ್ನು ಮುಟ್ಟಬೇಕು. ಅದು ಹೇಗೆ ಎಂದರೆ; ಈಗ ಕಾಡನ್ನು ನಾವು ವರ್ಣಿಸಬೇಕು ಎಂದರೆ ಅದನ್ನು ಓದುತ್ತಾ ಹೋದಂತೆ ಕಾಡು ನಮ್ಮ ಕಣ್ಣ ಮುಂದಿರಬೇಕು ಕಾಡಿನ ವಾಸನೆ, ಹಕ್ಕಿಗಳು, ಅಲ್ಲಿನ ಪರಿಸರ, ಪ್ರಾಣಿಗಳು ಓದುತ್ತ ಹೋದರೆ ಅವೆಲ್ಲಾ ಕಣ್ಣ್ಣಮುಂದೆ ಬಂದು ಥಟ್ಟನೆ ನಿಲ್ಲಬೇಕು. ನಾವೇ ಕಾಡಿನಲ್ಲಿವೆಯೇ ಎನಿಸಬೇಕು..

ತೇಜಸ್ವಿ ಮೊಟ್ಟ ಮೊದಲಿಗೆ ಬರೆದ ಕಥೆ ಈಗ ಇನ್ನೇನು ಬಿಡುಗಡೆಯಾಗುತ್ತಿದೆ. ಅದಕ್ಕೆ ನಾನೇ ಡ್ರಾಯಿಂಗ್ ಮಾಡುತ್ತಿದ್ದೇನೆ. ನನಗನ್ನಿಸಿದಂತೆ. ಮೊದಲ ಕತೆ ಓದುವಾಗ ಅವರು ಯಾವ ಮನಸ್ಥಿತಿಯಲಿದ್ದಿರಬಹುದು ಎಂಬುದನ್ನು ನಿಜಕೂ ಗೇಜ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ತೇಜಸ್ವಿಯ ಆನಂತರದ ಕಾದಂಬರಿಗಳಲ್ಲಿ ಸಂಪೂರ್ಣ ಬದಲಾಗಿದ್ದಾರೆ. ಎಲ್ಲವೂ ಚಲನೆ ಪಡೆದುಕೊಂಡಿವೆ. ಸೀ.., ತೇಜಸ್ವಿಯ ಕಾದಂಬರಿಗಳನ್ನು ಎಲ್ಲಿಂದ ಬೇಕಾದರೂ ಓದಲು ಆರಂಭಿಸಬಹುದು. ಅವಕ್ಕೆ ಅಂತ್ಯವಿಲ್ಲ. ಆರಂಭವೂ ಇಲ್ಲ. ಎಲ್ಲಿಂದ ಓದಿದರೂ ಖುಷಿ ಆಗಬೇಕು ಬರೆದರೆ ಹಾಗೆ ಬರೆಯಬೇಕು.

ಬೋರೆನ್ ಮಾರ್ಕ್ವೇ ಇಂತವರೆಲ್ಲಾ ಹೀಗೆ ಬರೆಯುತ್ತಾರೆ. ನೋಡು ಕುವೆಂಪು ರಾಮಾಯಣದರ್ಶನಂ ಬರೆದಿದ್ದು ಸರಿ. ಆದರೆ ಅದೇ ಕುವೆಂಪು ಕೊನೆಗೆ ಹೇಳಿದ್ದೇನು. ಓ ನನ್ನ ಚೇತನ ಆಗು ನೀ ಅನಿಕೇತನ… ಆಗು ನೀ ಅನಂತವಾಗು ಎಂದರು. ಸೀ, ಒಬ್ಬ ರಾಮಾಯಣ ದರ್ಶನಂ ಬರೆದವರಿಂದ ಇದನ್ನು ನಿರೀಕ್ಷಿಸುವುದು ಅಷ್ಟು ಸುಲಭವನ್ನು ಆದರೆ ಕುವೆಂಪು ಆ ಸತ್ಯವನ್ನು ಕಂಡುಕೊಂಡು ಅದರಿಂದ ಹೊರಬಂದರು ಹಾಗಾಗಿಯೇ ಅವರು ಗ್ರೇಟ್ ಆಗಿದ್ದು.

ಪ್ರಶ್ನೆ: ನಮ್ಮ ದೇವನೂರು ಮಹದೇವ ದಲಿತ ಸಂಘರ್ಷ ಸಮಿತಿ ಒಂದುಗೂಡಿಸುತ್ತೇನೆ ಎಂದು 4 ವರ್ಷದ ಹಿಂದೆ ಎಲ್ಲರನ್ನೂ ಒಂದುಗೂಡಿಸಿ ಕಾರ್ಯಕ್ರಮ ಮಾಡಿದರು ಆದರೆ ಮತ್ತೆ ಅದರ ಮಾತೆ ಇಲ್ಲ..? ಯಾಕೆ ದಲಿತ ಸಂಘರ್ಷ ಸಮತಿಯನ್ನು ಒಂದುಗೂಡಿಸಲು ಸಾಧ್ಯವೇ ಇಲ್ಲವೇ..?

ಕೆ.ಟಿ: ನೋಡು ನಮ್ಮಲ್ಲಿ ಮಾತನಾಡುವರಿದ್ದಾರೆ. ಆದರೆ ಪ್ರಾಕ್ಟಿಕಲ್ ಆಗಿ ಅವರಿಗೆ ಒಂದು ಥಿಯರಿ ಇಲ್ಲ. ಪೊಲಿಟಿಕಲ್ ಅಥವಾ ಸಂಘಟನೆಯ ಥೀಮ್ ಇಲ್ಲದಿರುವುದೇ ಇದಕ್ಕೆ ಕಾರಣ. ಹಣ ಮಾಡುವ ಚಿಂತನೆಯಲ್ಲಿ ಸಂಘಟನೆ ಕಟ್ಟುತ್ತೇನೆ ಎಂಬುದನ್ನೇ ಇಂದಿನ ಜನಾಂಗ ಯೋಚಿಸುತ್ತದೆ. ಹೀಗಾಗಿ ಇವೆಲ್ಲಾ ನಡೆಯುತ್ತಿವೆ. ದೇವನೂರು ಬ್ಯಾಗ್ ನೇತು ಹಾಕಿಕೊಂಡು ಬಸ್ನಲ್ಲಿ ಪಕ್ಷ ಕಟ್ಟುತ್ತೇನೆ ಎಂದರೆ ಜನ ಕೇಳುತ್ತಾರೆನಯ್ಯಾ..?

ಮಹದೇವ ಕೂಡ ಅಂಥ ಪ್ರಯತ್ನ ಮಾಡಿದ . ಆದರೆ ಆಗಲಿಲ್ಲ. ಅವನಿಗೆ ರಾಜಕೀಯ ಆಗಿ ಬರಲ್ಲ ಕಣೋ. ರಾಜಕೀಯ ಮಾಡಬೇಕು ಎಂದರೆ ಅದಕ್ಕೆ ಒಂದು ಥಿಯರಿ ಇದೆ. ಸೀ, ನನ್ನ ಪ್ರಕಾರ ಈ ರಾಜ್ಯದ ಒಬ್ಬನೇ ಇಬ್ಬ ಪೊಲೀಟಿಕಲ್ ಲೀಡರ್ ಎಂದರೆ ಅದು ಒಬ್ಬ ಬಸವಲಿಂಗಪ್ಪ. ಕವಿ ಸಿದ್ದಲಿಂಗಯ್ಯ ಇವರ್ಯಾರು ನಮ್ಮ ಲೀಡರ್ಗಳಲ್ಲಿ ಆತ ಬರೆದ ಪದ್ಯಗಳು ಕೂಡ.

ಅಂಬೇಡ್ಕರ್ ಚಿಂತನೆಗಳನ್ನು ನಾವೆಲ್ಲ ಅನುಭವಿಸುವಂತೆ , ಪ್ರಬಾವಿಸುವಂತಹ ದೊಡ್ಡ ಮಹತ್ವವೇನೂ ಪಡೆದಿಲ್ಲ. ಸಿದ್ದಲಿಂಗಯ್ಯನ ಪದ್ಯಗಳು ಕೂಡ ಆ ಸಂದರ್ಭದ ದೊಡ್ಡ ಷಾಕ್ ಅಷ್ಟೇ. ಅವರೆಲ್ಲಾ ಈಗ ಏನು ಮಾಡುತ್ತಿದ್ದಾರೆ ಎಂದು ನೀನೇ ನೋಡುತ್ತಿದ್ದೀಯಲ್ಲಾ..? ನೋಡು ದಲಿತ ಸಂಘರ್ಷ ಸಮಿತಿಯನ್ನು ಒಂದುಗೂಡಿಸುವುದು ದೊಡ್ಡ ಮಾತೇನಲ್ಲ. ನಮ್ಮಲ್ಲಿ ಈಗ ಎಲ್ಲಾ ಆಂಗಲ್ನಲ್ಲಿ ಯೋಚಿಸುವ ಜನರಿದ್ದಾರೆ. ಎಲ್ಲರನ್ನೂ ಒಂದುಗೂಡಿಸಿ ಚಿಂತನೆ ಮಾಡೋಣ, ಕೊನೆಗೆ ಅಭಿಪ್ರಾಯಕ್ಕೆ ಬರೋಣ.

ಉದಾ: ನಮಗೆ ಗೊತ್ತಿಲ್ಲದ ವಿಚಾರಗಳನ್ನು ನಟರಾಜ್ ಬೂಧಾಳು ಹೇಳುತ್ತಾನೆ. ಮೊಗಳ್ಳಿ ಹೇಳುತ್ತಾನೆ. ಡಾ. ಶೇಖರ್, ಸುಬ್ಬು ಹೊಲೆಯಾರ್ ಹೀಗೆ ಇವೆಲ್ಲಾ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ದೊಡ್ಡ ಮಟ್ಟದಲ್ಲಿ ಚಿಂತನೆ ನಡೆಸಿ ಒಂದುಗೂಡಿಸಬೇಕಾಗಿದೆ. ಅವರು ಏನು ಹೇಳುತ್ತಿದ್ದಾರೆ ಎಂಬುದೇ ನಮಗೆ ಗೊತ್ತಿಲ್ಲದಿದ್ದರೆ ಅಥವಾ ಅದನ್ನು ಅರ್ಥ ಮಾಡಿಕೊಳ್ಳದಿದ್ದರೆ ಇಂತಹ ಅನರ್ಥಗಳಾಗುತ್ತವೆ. ದಲಿತರು ಶೂದ್ರರು ಸೇರಿ ಚಿಂತನೆ ಮಾಡಬೇಕಿದೆ. ಹಾಗೆ ಇದಕ್ಕೆ ಯಾರೂ ಅವಕಾಶ ಮಾಡಿಕೊಡುವುದಿಲ್ಲ ನಾವೇ ಸೃಷ್ಠಿಸಿಕೊಳ್ಳಬೇಕು.

ಪ್ರಶ್ನೆ: ದಲಿತರನ್ನು ಲೆಫ್ಟ್ -ರೈಟ್ ದೊಡ್ಡ ಮಟ್ಟದಲ್ಲಿ ಕಂದಕ ಸೃಷ್ಠಿಸಿದೆಯಲ್ಲಾ ಇವರನ್ನು ಒಂದುಗೂಡಿಸಲು ಸಾಧ್ಯವಿಲ್ಲವೇ..?

ಕೆ.ಟಿ: ನೋಡು ನಮ್ಮ ತಪ್ಪುಗಳ ಬಗ್ಗೆ ನಮಗೆ ಅರಿವಿಲ್ಲದಿದ್ದರೆ ನಾವು ಯಾವತ್ತೂ ಮುಂದೆ ಹೋಗಲು ಸಾಧ್ಯವಿಲ್ಲ. ಇದು ಇಂದಿನ ಕಾನ್ಸೆಪ್ಟ್ ಅಲ್ಲಾ ಕಣೋ. ಇದನ್ನು ಬ್ರಾಹ್ಣಣರು ಯಾವತ್ತೋ ಮಾಡಿದ್ದಾರೆ. ಪ್ರತಿಯೊಂದನ್ನು ಅಡ್ವೆಂಚರ್ ಆಗಿ ತೆಗೆದುಕೊಳ್ಳುತ್ತಾರೆ. ಜಾತಿಯೊಳಗೆ ಒಂದು ಜಾತಿ ಸೃಷ್ಠಿಸಿ ಜಗಳ ಆಡಲು ಬಿಡುತ್ತಾರೆ. ಇವೆಲ್ಲ ಹಳೆ ತಂತ್ರಗಳು ನಮ್ಮಲ್ಲಿ ಪರಸ್ಪರ ದ್ವೇಷ ಹುಟ್ಟಿಸುತ್ತಲೇ ಇವರು ಬೇಳೆ ಬೇಯಿಸಿಕೊಳ್ಳುತ್ತಾರೆ.

ಇದು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆದರೆ ಇದು ನಮ್ಮ ಜನರಿಗೆ ಅರ್ಥವಾಗುವುದಿಲ್ಲ. ಇಂಥಹವನ್ನೇಲ್ಲಾ ಮೀರಿ ನಾವು ಬದುಕಬೇಕಂದರೆ ಬುದ್ದ, ನಾಗಾರ್ಜುನನಿಂದ ಮಾತ್ರ. ಅಂತಹವರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಈ ಜಗತ್ತಿನಲ್ಲಿ ಅಲ್ಟಿಮೆಟ್ ಆಗಿ ಉಳಿಯುವುದು ಒಂದೇ ಧರ್ಮ ಅದು ಬೌದ್ಧ ಧರ್ಮ. ಕಾರಣ ಇದು ವಿಜ್ಞಾನವನ್ನು ಒಪ್ಪಿಕೊಳ್ಳುತ್ತದೆ. ಆ ಕಾರಣಕ್ಕೆ ಬೌದ್ಧ ಧರ್ಮ ಇಂದಿಗೂ ಅಸ್ಥಿತ್ವ ಉಳಿಸಿಕೊಂಡಿದೆ.

ಬುದ್ದ ಒಬ್ಬ ಒಳ್ಳೆ ಡಿಪ್ಲೊಮೆಟಿಕ್ ಕಣಯ್ಯ. ಸೀ.. ಬುದ್ದ ಇದ್ದ ಕಾಲದಲ್ಲಿ 3 ಜನ ದೊಡ್ಡ ಮಹಾರಾಜರಿದ್ದರು ಅವರೊಂದಿಗೆ ಆದ ತನ್ನ ಡಿಪ್ಲೊಮಸಿಯಿಂದಲೇ ಅತ್ಯತ್ತಮ ಬಾಂಧವ್ಯ ಇಟ್ಟುಕೊಂಡಿದ್ದ. ಹಾಗೆ ಅಂಗೂಲಿಮಾಲ ನಂತಹವರನ್ನೂ ಆತ ಚೇಂಜ್ ಮಾಡಿದ ಈ ಡಿಪ್ಲೊಮಸಿಯನ್ನು ನಾವೆಲ್ಲಾ ಕಲಿತುಕೊಳ್ಳಬೇಕು. ನಮಗ್ಯಾರಿಗೂ ಡಿಪ್ಲೊಮಸಿ ಎಂಬುದರ ಅರಿವೇ ಇಲ್ಲ. ಈಗ ಅಮೇರಿಕಾಕ್ಕೆ ಹೋಗಿ ಒಂದು ಕೆಲಸ ಮಾಡಿಕೊಂಡು ಬಾ ಎಂದು ಕಳಿಸಿದರೆ. ಹೋದ ವ್ಯಕ್ತಿ ಅವನಿಗೆ ಚೇರು ಕೊಡಲಿಲ್ಲ ಎಂದೋ ಮತ್ತೇನೋ ಕಾರಣಕ್ಕೆ ವಾಪಾಸ್ ಬರುವುದಲ್ಲ. ಹೋದ ಕೆಲಸವನ್ನು ಯಾವುದಾದರೂ ರೂಪದಲ್ಲಿ ಅವರ ಮನವೊಲಿಸಿ ಮಾಡಿಕೊಂಡೇ ಬರಬೇಕು. ಅದನ್ನು ನಾವೆಲ್ಲ ಕಲಿಯಬೇಕು.

ಪ್ರಶ್ನೆ: ನಿಮ್ಮ ಪ್ರಕಾರ ದಲಿತರ ನಾಯಕತ್ವದ ಈಗಿನ ಆಲ್ಟರ್ ನೇಟಿವ್ ಏನು..? ಯಾರನ್ನು ನಮ್ಮ ನಾಯಕ ಎಂದು ದಲಿತರು ಒಪ್ಪಿಕೊಳ್ಳಬಹುದು..?

ಕೆ.ಟಿ.: ನನ್ನ ಪ್ರಕಾರ ಅಂಬೇಡ್ಕರ್ ನಂತರ ಕಾನ್ಸಿರಾಂ ಈ ದೇಶದ ಒಬ್ಬ ಶ್ರೇಷ್ಟ ನಾಯಕ ಗ್ರೇಟ್ ಡಿಪ್ಲೊಮಟಿಕ್ ಲೀಡರ್. ಸಧ್ಯದಲ್ಲಿ ಯಾರೂ ಇಲ್ಲದಿರಬಹುದು . ಆದರೆ ಇತಿಹಾಸದಲ್ಲಿ ಒತ್ತಡಗಳು ಸೃಷ್ಠಿಯಾದಾಗ ಲೀಡರ್ಗಳು ಖಂಡಿತಾ ಹುಟ್ಟಿಕೊಳ್ಳುತ್ತಾರೆ. ಒತ್ತಡಗಳು ಲೀಡರ್ಗಳನ್ನು ಸೃಷ್ಠಿಸುತ್ತವೆ. ನಮ್ಮ ಸಿದ್ದಲಿಂಗಯ್ಯ, ದ್ವಾರಕನಾಥ್ ಇವರೆಲ್ಲ ಪ್ಯೂರ್ ಆಪರ್ಚ್ಯುನಿಸ್ಟ್ ಇವರ ಬಗ್ಗೆ ಮಾತಾನಾಡುವುದೇ ಬೇಡ.

ಕಾನ್ಸಿರಾಮ ಎಷ್ಟು ಡಿಪ್ಲೊಮೆಟಿಕ್ ಎಂದು ಹೇಳಲು ಒಂದು ಸಂಗತಿ ಹೇಳ್ತಿನಿ ಕೇಳು. ನಾನು ರಾಜಾಸ್ತಾನದಿಂದ ಬೆಂಗಳೂರಿನ ಏರ್  ಪೋರ್ಟ್ ನಲ್ಲಿ ಇಳಿದಿದ್ದೆ. ಶ್ರೀಧರ್ ಕಲಿವೀರ್ ಜತೆ ಒಬ್ಬ ವ್ಯಕ್ತಿ ಮಾತನಾಡುತ್ತ ನಿಂತಿದ್ದರು. ನನ್ನನ್ನು ಕಂಡ ಶ್ರೀಧರ್ ಕಲಿವೀರ್ ತಕ್ಷಣ ನನ್ನನ್ನು ಕರೆದು ಸಾರ್ ಇವರು ಕಾನ್ಸಿರಾಂ ಜೀ ಎಂದು ಪರಿಚಯಿಸಿದರು. ನನಗೆ ಷಾಕ್..! ಐ ವಾಸ್ ರಿಯಲ್ ಇನ್ಸ್ಪೈರ್ಡ್ ಬಿಕಾಸ್, ನಾನು ಮಾತನಾಡುತ್ತಾ ಹೋದೆ. ಆ ಮನುಷ್ಯನಿಗೆ ಎಲ್ಲಿ ಯಾವ ಪದವನ್ನು ಹೇಗೆ ಬಳಸಬೇಕು ಎಂದು ಗೊತ್ತು ಮಾತನಾಡಿದರೆ ಕರುಣೆ, ಮೈತ್ರಿ ಹುಟ್ಟಬೇಕು ಅಷ್ಟು ಚೆನ್ನಾಗಿ ಮಾತನಾಡಿದರು ಆತನ ಬಗ್ಗೆ ಇದ್ದ ಗೌರವ ನನಗೆ ಇನ್ನಷ್ಟು ವೃದ್ಧಿಯಾಯಿತು. ಕಾನ್ಸಿರಾಂ ಒಬ್ಬ ನಿಜವಾದ ಡಿಪ್ಲೊಮಟಿಕ್ ಕಣಯ್ಯ. ನೋಡು ಅದನ್ನೇ ಮಾಯಾವತಿಗೆ ಹೇಳಲು ಸಾಧ್ಯವಿಲ್ಲ. ಆಕೆ ಒಬ್ಬ ಅಪ್ಪಟ ರಾಜಕಾರಣಿ ಅಲ್ಲವೇ..?

ಪ್ರಶ್ನೆ: ನೀವು ರೈತ ಸಂಘದ ಮುಂಚೂಣಿಯಲ್ಲಿದ್ದವರು ಏನು ಹೇಳುತ್ತೀರಿ ಈಗಿನ ರೈತ ಸಂಘದ ಸ್ಥಿತಿ ಬಗ್ಗೆ..?

ಕೆ.ಟಿ.: ಅವ್ರ ಬಗ್ಗೆ ಬೇಡ ಕಣಯ್ಯ. ಪ್ರೊಫೆಸರ್ ಹೋದಾಗಲೇ ರೈತ ಸಂಘ ಹೋಗಿದೆ. ಆ ಕೋಡಿಹಳ್ಳಿ ಹಾಸನದ ಗೊರೂರಿನಲ್ಲಿ ಮೀನುಗಾರರಿಗೆ ತೊಂದರೆ ಕೊಡುತ್ತಾನೆ, ಪುಟ್ಟಣ್ಣಯ್ಯ ನಾಟಕ ಪಾತ್ರದಾರಿಯಂತೆ ಆಡುತ್ತಾನೆ ಅವ್ರಿಗೆಲ್ಲ ಏನಾಗಿದ್ಯೋ..? ರೈತ ಸಂಘ ಕಟ್ತಿನಿ ಅಂತಾರೇ , ಒಮ್ಮೆ ರಾಜಕೀಯ ಮಾಡ್ತಿನಿ ಅಂಥಾರೆ. ಇವ್ರಿಗೆಲ್ಲಾ ತತ್ವ ಸಿದ್ಧಾಂತ ಯಾವುದೂ ಇಲ್ಲ ಕಣೋ..?

ಪ್ರಶ್ನೆ: ನಿಮ್ಮ ತಂದೆ ಎಂಎಲ್ಸಿ ಆಗಿದ್ದವರು. ಈಗಿನ ರಾಜಕೀಯದ ಬಗ್ಗೆ ಏನು ಹೇಳುತ್ತೀರಿ..?

ಕೆ.ಟಿ. ಅದರ ಬಗ್ಗೆ ನೋ ಕಾಮೆಂಟ್ಸ್. ನೋಡು ನಾವು ಶೂದ್ರರು, ದಲಿತರು ಒಂದಾಗದಿದ್ದರೆ ಏನೂ ರಾಜಕೀಯ ಮಾಡಲು ಸಾಧ್ಯವಿಲ್ಲ ನೆನಪಿಟ್ಟುಕೋ. ನಮ್ಮ ದಲಿತ ಸಂಘರ್ಷ ಸಮಿತಿಯವರಾಗಲೀ, ಶೂದ್ರರಾಗಲಿ ಮೊದಲು ಡಿಪ್ಲೊಮಸಿ ಕಲಿತುಕೊಳ್ಳಲಿ. ನಡೆ-ನುಡಿ ಸಿದ್ದಾಂತವನ್ನು ಫಾಲೋ ಮಾಡಿ ಇಲ್ಲದಿದ್ದರೆ ಭವಿಷ್ಯ ನಿಜಕ್ಕೂ ಕೆಟ್ಟದಾಗಿದೆ.

ಪ್ರಶ್ನೆ: ದೇವನೂರರ ಪುಸ್ತಕ ಬಿಡುಗಡೆಯಾಗಿದೆ ಏನು ಹೇಳುತ್ತೀರಾ..?

ಕೆ.ಟಿ: ಅವನಿಗೆ ಇನ್ನೂ ಬರೆಯಲು ನಾವೆಲ್ಲಾ ಒತ್ತಾಯಿಸಬೇಕು ಕಣೋ. ಇಲ್ಲದಿದ್ದರೆ ಕಳೆದು ಹೋಗುತ್ತಾನೆ. ಜತೆಗೆ ನಾವು ಕಳೆದುಕೊಳ್ಳುತ್ತೇವೆ. ಅವನು ಒಡಲಾಳ ಬರೆದಂತೆ, ಕುಸುಮಬಾಲೆ ಬರೆದಂತೆ ಮತ್ತೊಂದು ಬರೆಯಲಿ ನಾನೇ ಫ್ರೀಯಾಗಿ ಡ್ರಾಯಿಂಗ್ ಮಾಡಿಕೊಡುತ್ತೇನೆ.

ಪ್ರಶ್ನೆ:ಕವಯತ್ರಿ ರೂಪ ಹಾಸನ ನಿಮ್ಮ ಬಗ್ಗೆ ಗಂಭೀರ ಆರೋಪ ಮಾಡುತ್ತಿದ್ದರು ನೀವು ಅಂತರಾಷ್ಟ್ರೀಯ ಕಲಾವಿದರಾಗಿದ್ದೀರಿ. ಆದರೆ ಜಿಲ್ಲೆಯವರು ನಾವೇ ಅವರ ಪೇಯಿಂಟಿಂಗ್ ನೋಡಲಾಗಿಲ್ಲ. ನಮಗೆ ತೋರಿಸದಿದ್ದ ಮೇಲೆ ನಾವು ಏನು ಹೇಳೋಣ. ನೀವು ಹೈಟೆಕ್ ಕಲಾವಿದರಂತೆ..?

ಕೆ.ಟಿ. ಇಲ್ಲ ಕಣೋ. ಅದು ಹಾಗಲ್ಲ. ನೋಡು ನಮ್ಮ ಕಲಾವಿದರ ಈಗಿನ ಸ್ಥಿತಿ ಯಾರಿಗೂ ಬೇಡ ರಿಸೇಷನ್ ಆದ ನಂತರವಂತೂ ನೂರಕ್ಕೆ ಅರ್ದ ಜನ ಪೇಯಿಂಟಿಂಗ್ ನಿಲ್ಲಿಸಿಬಿಟ್ಟಿದ್ದಾರೆ. ನನ್ನನ್ನೇ ತೆಗೆದುಕೋ. ನನ್ನ ಪೇಯಿಂಟಿಂಗ್ ಶೋ ಮಾಡಬೇಕೆಂದರೆ ಕನಿಷ್ಠ 1 ಲಕ್ಷ ಬೇಕು. ಈಗ ಯಾರೂ ಕೊಂಡುಕೊಳ್ಳುತ್ತಿಲ್ಲ ಕಣೋ. ಹಿಂದೆ ಇದ್ದಂತೆ ಇದ್ದದ್ದರೆ ನಮ್ಮನ್ನು ಹಿಡಿಯುವರೇ ಇರುತ್ತಿರಲಿಲ್ಲ. ಇದು ನಮಗೆ ಕಷ್ಟ ಕಾಲ.

ಆಗ ಮಾಡಿಟ್ಟ ಹಣದಿಂದಲೇ ಈಗ ಜೀವನ ನಡೆಸುತ್ತಿದ್ದೇವೆ. ಅವರಿಗೆ ಹೇಳು ಅವರೇ ಪ್ರಾಯೋಜನೆ ಮಾಡಿದರೆ ನನ್ನ ಪೇಯಿಂಟಿಂಗ್ ತಂದು ಶೋ ಮಾಡುತ್ತೇನೆ . (ನಗು). ಇಲ್ಲದಿದ್ದರೆ ಮುಂದಿನ ವರ್ಷ ಬಾಂಬೆಯಲ್ಲಿ ಶೋ ಮಾಡುತ್ತೇನೆ ನಾನೆ ಕರೆದುಕೊಂಡು ಹೋಗುತ್ತೇನೆ ಬಿಡು. ಕಾಯಲು ಹೇಳು.

‍ಲೇಖಕರು G

December 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Deepak Halivan

    ತೇಜಸ್ವಿ ಮೊಟ್ಟ ಮೊದಲಿಗೆ ಬರೆದ ಕಥೆ ಈಗ ಇನ್ನೇನು ಬಿಡುಗಡೆಯಾಗುತ್ತಿದೆ ಎಂದಿದ್ದೀರಿ.ಆ ಕಥೆಯ ಹೆಸರು ಏನು?
    ತೇಜಸ್ವಿಯವರ ಯಾವುದಾದರು ಹೊಸ ಪುಸ್ತಕ ಬರುತ್ತಿದೆಯೇ?

    ಪ್ರತಿಕ್ರಿಯೆ
  2. ರೂಪ ಹಾಸನ

    ಪ್ರಿಯ ನಾಗರಾಜ್,
    ಶಿವಪ್ರಕಾಶ್ ಸರ್ ಅವರ ಪೇಯಿಂಟಿಂಗ್ ಶೋ ಹಾಸನದಲ್ಲೇ ಮಾಡೋಣ. ಯಾಕೆಂದರೆ ನನ್ನ ಬಳಗ ದೊಡ್ಡದು. ಎಲ್ಲರನ್ನೂ ಬಾಂಬೆಗೆ ಕರೆದುಕೊಂಡು ಹೋಗಿ ಬರೋದು ಅವರಿಗೆ ಇನ್ನೂ ಕಷ್ಟವಾಗುತ್ತೆ! ಅವರು ಪೇಯಿಂಟಿಂಗ್ ಕೊಟ್ಟರೆ ಸಾಕು, ನಾನೇ ಮಿಕ್ಕೆಲ್ಲಾ ಏಪಾಱಡು ಮಾಡ್ತೇನೆ.

    ಪ್ರತಿಕ್ರಿಯೆ
  3. ರೂಪ ಹಾಸನ

    ಶಿವಪ್ರಸಾದ್ ಎಂದು ತಿದ್ದಿಕೊಳ್ಳಬೇಕು….

    ಪ್ರತಿಕ್ರಿಯೆ
  4. ಮಹೇಶ್ ಬಡಗಲಹುಂಡಿ

    ಕನ್ನಡ ಸಾಹಿತ್ಯ ಲೋಕಕ್ಕೆ,ಕಲಾ ಲೋಕಕ್ಕೆ ಅತ್ಯಮೂಲ್ಯ ಪ್ರತಿಭೆಗಳನ್ನು ಕೊಟ್ಟ ಹೆಗ್ಗಳಿಕೆ ಹಾಸನಜಿಲ್ಲೆಯದು.ಅಂತಹ ಜಿಲ್ಲೆಯೊಂದರಲ್ಲಿ ಕೆ.ಟಿ.ಶಿವಪ್ರಸಾದ್ ಅವರಂತಹ ಖ್ಯಾತ ಚಿತ್ರ ಕಲಾವಿದರು ಇರುವುದು ಜಿಲ್ಲೆಯ ,ಕರ್ನಾಟಕದ ಭಾಗ್ಯವೆ ಸರಿ.ಕೆ.ಟಿ.ಅವರೊಡನೆ ನೀನು ನಡೆಸಿರುವ ಸಂದರ್ಶನ ಅವರ ಹೋರಾಟದ ಬದುಕು,ಬೆಳೆದು ಬಂದ ಹಾದಿ,ಪ್ರಸ್ತುತ ದಿನಗಳ ಜೀವನಗಳ ಬಗ್ಗೆಯೊ ಅಥವಾ ಅವರ ಕಲಾ ಯಾತ್ರೆಯಲ್ಲಿ ಕಂಡು ಕೊಂಡಂತಹ ಅನುಭವಗಳ ಬುತ್ತಿಯ ಬಗ್ಗೆಯೊ ಮಾತಿಗೆಳೆದು ಓದುಗರ ಮುಂದಿಟ್ಟಿದ್ದರೆ ಸಂದರ್ಶನ ಅದ್ಭುತವಾಗಿ ಮೂಡಿಬರುತ್ತಿತ್ತು.

    ನನ್ನ ಪ್ರಕಾರ ಓದುಗನಿಗೆ ಸಂದರ್ಶನ ಎಂಬುದು ಇಬ್ಬರು ವ್ಯಕ್ತಿಗಳು ಪರಸ್ಪರ ಎದುರು-ಬದುರಾಗಿ ಕುಳಿತು ಮಾತನಾಡಿದಂತಹ ಶೈಲಿಯಲ್ಲಿರದೆ ಓದುಗನೇ ಸಂದರ್ಶನ ಮಾಡಿ ಖುಷಿ ಪಟ್ಟಂತಿರಬೇಕು..ನಿನಗೆ ಒಳ್ಳೆಯದಾಗಲಿ ಮಗಾ…

    ಪ್ರತಿಕ್ರಿಯೆ
  5. ವೀರೇಂದ್ರ ಗೌಡ, ಅವರಗುಪ್ಪ

    @Deepak Halivan
    ತೇಜಸ್ವಿಯವರ ಹೊಸ ಪುಸ್ತಕ “ಕಾಡು ಮತ್ತು ಕ್ರೌರ್ಯ”, ಕನ್ನಡಪ್ರಭ ದೀಪಾವಳಿ ವಿಶೇಂಷಾಂಕದಲ್ಲಿ ಕೆಲ ಭಾಗ ಪ್ರಕಟವಾಗಿದೆ, ಗಮನಿಸಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: