ತಮಟೆ ಜಯ "ಮತ್ತೊಮ್ಮೆ ಹುಟ್ಟಿ ಬಾ.."

ಅವನ ಮನೆಯಲ್ಲಿ ದೆವ್ವಗಳೆ ಅನ್ನ ತಿನ್ನುತ್ತವೆ!
ಎನ್ ರವಿಕುಮಾರ್ ಟೆಲೆಕ್ಸ್
ಅದೊಂದು ನಡುರಾತ್ರಿ ನನ್ನ ಸೆಲ್‌ಪೋನ್ ಬಿಟ್ಟೂ ಬಿಡದಂತೆ ರಿಂಗ್ ಆಗತೊಡಗಿತು.
ಓ ಗುಣವಂತ ಓ.. ಗುಣವಂತ ನಿನ್ನಾ…ಹ..ಹ.. ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ.
ಹಾಂ…. ಹ್ಞಾ.. ಪದಗಳೇ ಸಿಗುತ್ತಿಲ್ಲ..
ರಿಂಗ್ ಟೋನ್ ದಟ್ಟ ನಿದ್ದೆಯನ್ನು ತಬ್ಬಿಕೊಂಡು ಮಲಗಿದ್ದ ನನ್ನನ್ನು ಎಚ್ಚರಗೊಳಿಸದೆ ಬಿಡಲೇ ಇಲ್ಲ. ಪತ್ರಕರ್ತನಾದವನಿಗೆ ಸರಿ ರಾತ್ರಿಯ ಕರೆಗಳು ಅಷ್ಟೇನು ಆತಂಕ ತರುವುದಿಲ್ಲ. ಅದೆಲ್ಲಾ ಮಾಮೂಲು. ಪೋನ್ ರೀಸೀವ್ ಮಾಡಿಕೊಂಡಾಗ ಆಪ್ತ ಪತ್ರಕರ್ತ ಗೆಳೆಯ ಮಾತಾಡುತ್ತಿದ್ದ.
“ರವೀ….. ಸ್ಸಾರಿ ಕಣೋ, ನಿಂಗೆ ಡಿಸ್ಟರ್ಬ್ ಮಾಡ್ತಿತಿದಿನಿ”
ಔಪಚಾರಿಕ ಮಾತು ಕೇಳಿ ಬಂತು.
“ಇರ್ಲಿ, ವಿಷಯ ಹೇಳೋ. ಏನಾಯ್ತು?”
“ಏನಿಲ್ಲ, ನಮ್ಮ .. (——) ಇವ್ರಿದಾರಲ್ಲ.., ಅವರ ತಾಯಿ ಈಗಷ್ಟೆ ತೀರಿಹೋಗಿಬಿಟ್ರು.. ಅವರ ಕಡೆಯವರು ಯಾರು ಇಲ್ಲ.
ನೀ ಸ್ವಲ್ಪ ಹೋಗಿ ಬೆಳಗ್ಗೆ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಕಣೋ…ಪ್ಲೀಸ್”
ಎಂದ ಗೆಳೆಯ .
ಇದೊಂದು ಗೆಳೆಯ ಕೊಟ್ಟ social concern reporting assignment ಎಂಬಂತೆ ಗಡಿಯಾರದ ಕಡೆ ನೋಡಿದೆ. ಮುಂಜಾನೆ ಮೂರರ ಗಡಿ ದಾಟಿತ್ತು. ಕಣ್ಣಿಗೆ ನಿದ್ದೆ ಹತ್ತಲಿಲ್ಲ. ನನ್ನ ಮನೆಯ ಮೂರು ತಿರುವಿನ ಮಗ್ಗಲಿಗಿದ್ದ
ಆ ದುಃಖದ ಮನೆಗೆ ಹೆಜ್ಜೆಗಳು ತಲುಪಿಬಿಟ್ಟವು.
ದಲಿತ ಸಮುದಾಯಕ್ಕೆ ಸೇರಿದ ಆತ ಪ್ರಗತಿ ಪರ ಹೋರಾಟಗಾರ, ರೈತ ನಾಯಕ ಎಂದೆಲ್ಲಾ ಬಿರುದಾವಳಿಗಳನ್ನು ಪಡೆದವರು. ಹೋರಾಟದ ನೆಪದಲ್ಲಿ ಕೆಲವು ವರ್ಷಗಳಿಂದ ಶಿವಮೊಗ್ಗಕ್ಕೆ ಬಂದು ನೆಲೆಸಿದ್ದರು. ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಂಡು ನಮ್ಮ ಪತ್ರಿಕಾ ಕಚೇರಿಗಳಿಗೂ ಪತ್ರಿಕಾ ಹೇಳಿಕೆಗಳನ್ನು ಕೊಡಲು ಬರುತ್ತಿದ್ದರಿಂದ ನನಗೂ ಪರಿಚಿತ. ನಗರದಲ್ಲಿ ಎಲ್ಲೇ ರೈತ, ಪ್ರಗತಿಪರ ಸಂಘಟನೆಗಳ ಹೋರಾಟ, ಕಾರ್ಯಕ್ರಮಗಳು ಇದ್ದರೂ ಅಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೂಡ.
ಅವಕಾಶ ಸಿಕ್ಕಾಗಲೆಲ್ಲಾ ಸಮ ಸಮಾಜದ ಬಗ್ಗೆ ಮೆದುಮಾತಿನಲ್ಲೇ ಪ್ರಖರ ವಿಚಾರವನ್ನು ಕುಟ್ಟುತ್ತಿದ್ದರು. ಇಂತಹ ವ್ಯಕ್ತಿಯ ತಾಯಿ ಸರೋತ್ತಿನಲ್ಲಿ ತೀರಿ ಹೋಗಿಬಿಟ್ಟಿದ್ದರು. ತಿರುವುಗಳ ತಿರುವಿಕೊಂಡು ತಾಯಿ ಕಳೆದುಕೊಂಡು ದುಃಖದಲ್ಲಿದ್ದ ಈ ಪ್ರಗತಿಪರ ಚಿಂತಕನ ಜೊತೆಯಾಗಿ ಸಾಂತ್ವನದ ಮಾತುಗಳನ್ನು ಆಡಿದ್ದಾಯ್ತು.

“ಸರ್, ಈ ಊರಿನಲ್ಲಿ ನನಗೆ ಹೋರಾಟದ ಸಂಗಾತಿಗಳಲ್ಲದೆ ಬಂಧುಗಳು ಯಾರೂ ಇಲ್ಲ. ಪರ ಊರಿನಿಂದ ಬರಬೇಕು ಅವರಿಗೆಲ್ಲಾ ಹೇಳಿ ಆಗಿದೆ. ಬೆಳಗ್ಗೆವೊಷ್ಟತ್ತಿಗೆ ಬಂದು ಬಿಡುತ್ತಾರೆ. ಮಧ್ಯಾಹ್ನಕ್ಕೆಲ್ಲಾ ಮಣ್ಣು ಮಾಡೋಣ. ಮಸಣವೂ ನಂಗೆ ಗೊತ್ತಿಲ್ಲ ನೀವೇ ಎಲ್ಲಾ ಮಾಡಬೇಕು”
ಎಂದೆಲ್ಲಾ ಈ ಹೋರಾಟಗಾರ ಮನವಿ ಪೂರ್ವಕ ಯೋಜನೆ ಹೇಳುವ ಹೊತ್ತಿಗೆಲ್ಲಾ ಬೆಳಕು ಹರಿಯಿತು.
ನನ್ನ ಆಪ್ತ ಹುಡುಗನೊಬ್ಬನನ್ನು ಕಳುಹಿಸಿ, ರಾಜ, ಹನುಮ, ವಿಠಲ, ತಮಟೆ ಜಯ ಅವರನ್ನೆಲ್ಲಾ ಜೋಪಡಿಗಳಿಂದ ಎಬ್ಬಿಸಿಕೊಂಡು ಬಂದು ಅವರಲ್ಲಿ ಒಂದಿಬ್ಬರನ್ನು ಮಸಣದಲ್ಲಿ ಗುಂಡಿ ತೆಗೆಯುವ ಕೆಲಸಕ್ಕೆ ಕಳುಹಿಸಲಾಯಿತು, ಇನ್ನೊಂದಿಬ್ಬರು ಪೇಟೆಗೆ ಹೋಗಿ ಬಿದಿರು, ಬಾಳೆ ಕಂದು ಇತರೆ ಪೂಜಾ ಪರಿಕರಗಳನ್ನು ತಂದರು. ಮನೆಯೊಳಗಿದ್ದ ಹೆಣವನ್ನು ಮಗ, ಸೊಸೆ, ಅಲ್ಲಿದ್ದ ಬಂಧುಗಳೆನಿಸಿಕೊಂಡ ಯಾರೊಬ್ಬರೂ ಮುಟ್ಟಲು ಮೀನಾಮೇಷ ಏಣಿಸತೊಡಗುತ್ತಿದ್ದಂತೆ ಹೇಗೋ ನನ್ನ ಕರೆ ಮೇರೆಗೆ ಬಂದಿದ್ದ ವ್ಯಕ್ತಿಗಳೇ ಹೆಣವನ್ನು ಹೊರ ತಂದು ಮೈತೊಳೆದು, ಚಟ್ಟಕೂಡ ಕಟ್ಟಿ ನನ್ನ ಜೊತೆ ಹೆಗಲು ಕೊಟ್ಟರು. ಶವ ಸಂಸ್ಕಾರ ವಿಧಿವತ್ತಾಗಿ ನಡೆದು ಗುಂಡಿಗೆ ಮಣ್ಣೇರಿಸಿ ಅವತ್ತಿನ ಕಾರ್ಯವೆಲ್ಲಾ ಮುಗಿದು ಹೋಯಿತು. ಇಡೀ ದಿನ ಕೆಲಸ ಮಾಡಿದವರಿಗೆ ಪ್ರಗತಿಪರ ನಾಯಕ ಜೇಬು ಹಿಸುಕಿಕೊಂಡೆ ಕೂಲಿ ಕೊಟ್ಟ. ಅದರೊಂದಿಗೆ ನಾನು ಒಂದಿಷ್ಟು ಸೇರಿಸಿ ಕೊಟ್ಟು ಕಳುಹಿಸಿ ಗೆಳೆಯನ ಮನವಿಯಂತೆ ಎಲ್ಲವನ್ನು ಮಾಡಿಕೊಟ್ಟ ಸಮಾಧಾನದಿಂದ ಮನೆ ಸೇರಿಕೊಂಡೆ.
ಹನ್ನೊಂದನೆ ದಿನ ತಿಥಿ. ನನಗೂ ಆಹ್ವಾನವಿತ್ತು. ಗೆಳೆಯನ ಜೊತೆ ನಾನು ಅಲ್ಲಿದ್ದೆ. ದೊಡ್ಡದೊಂದು ಷಾಮಿಯಾನ ದಡಿಯಲ್ಲಿ ಕುರಿ -ಕೋಳಿ ಬಾಡಿನ ಸಮಾರಾಧನೆ ನಡೆದಿತ್ತು. ದೊಡ್ಡ ಸಂಖ್ಯೆಯಲ್ಲೇ ಸೇರಿದ್ದ ಬಂಧುಬಳಗವೆಲ್ಲಾ ನಡುಮನೆಯಲ್ಲಿ ತೀರಿಹೋದ ತಾಯಿಯ ಪೋಟೊವನ್ನು ಮುಟ್ಟಿ ಮುಟ್ಟಿ ಮುಗಿಬಿದ್ದು ಪೂಜೆ ಮಾಡಿ ಭಕ್ತಿ, ನಿಷ್ಠೆಯನ್ನು (?)ಯನ್ನು ಸಮರ್ಪಿಸುತ್ತಿದ್ದರು. ತಿಥಿ ಊಟ ಅಂದ್ರ ಕೇಳಬೇಕೇ..? ಗುಂಡಿ ತೆಗೆದು ಶವಸಂಸ್ಕಾರ ಮಾಡಿದ್ದ ಹನುಮ, ವಿಠಲ, ರಾಜ, ತಮಟೆ ಜಯ ಇನ್ನಿಬ್ಬರು ಎಲ್ಲರಿಗಿಂತಲೂ ಮುಂಚೆಯೇ ಎಂಬಂತೆ ಬಂದು ಷಾಮಿಯಾನದ ಗಳ ಒರಗಿ ನಿಂತಿದ್ದರು. ಊಟ ಆರಂಭವಾಗುತ್ತಿದ್ದಂತೆ ಈ ಆರು ಜನರು ತಾವೇ ಮುಖ್ಯ ಅತಿಥಿಗಳಂತೆಯೋ ಅಥವಾ ಹೆಣ ಮಣ್ಣು ಮಾಡಿದ ಕರ್ಮದ ಋಣದ ಹಕ್ಕಿನಿಂದಲೋ ಎಂಬಂತೆ ಹೋಗಿ ದಡ ದಡನೇ ಪಂಕ್ತಿಗೆ ಕುಳಿತು ಎಲೆ ತೊಳೆದುಕೊಂಡರು. ನೋಡು, ನೋಡುತ್ತಿದ್ದಂತೆ ಪ್ರಗತಿಪರ ಹೋರಾಟಗಾರನ ಹೆಂಡತಿ ಬಂದವರೆ ಮುಖ ಗಡಿಗೆ ಗಾತ್ರ ಮಾಡಿಕೊಂಡು ಅಷ್ಟು ಜನರನ್ನು ಪಂಕ್ತಿಯಿಂದ ಎಬ್ಬಿಸಿ ಷಾಮಿಯಾನದ ಹೊರಗಿರುವಂತೆ ಕಟ್ಟಪ್ಪಣೆ ಮಾಡಿಬಿಟ್ಟರು.
ಇದನ್ನು ನೋಡಿದ ಹೋರಾಟಗಾರ ನನ್ನ ಪಕ್ಕಕ್ಕೆ ಬಂದವನೇ
“ಸರ್, ಅವರಿಗೆ ಆಮೇಲೆ ಊಟ ಕೊಡಿಸ್ತಿನಿ, ಸ್ವಲ್ಪ ಹೊರಗಿರುವಂತೆ ಹೇಳಿ”. ಎಂದ.
ನಾನು “ಯಾಕೆ ಹೀಗೆ.. ” ಎಂದೆ.
“ಅವರೆಲ್ಲ ಕೆಳ ಜಾತಿಯವ್ರಲ್ವ, ನಮ್ ಫ್ಯಾಮಿಲಿಯೋರು ಒಪ್ಪೋಲ್ಲ. ಅದ್ಕೆ ಸರ್. ಕೊನಿಗೆ ನಾನೇ ಊಟ ಕೊಡಿಸ್ತಿನಿ.” ಎಂದು ಬಿಟ್ಟ.
ಸ್ವತಃ ದಲಿತನೇ ಆಗಿದ್ದ ಈ ‘ಷೋ’ ಕಾಲ್ಡ್ ಹೋರಾಟಗಾರನ ಮಾತು ನನ್ನ ಮುಖಕ್ಕೆ ರಪ್ಪನೆ ಬೆಚ್ಚು ನೀರು ಬಡಿದಂತಾಯ್ತು. ಪಕ್ಕದಲ್ಲೇ ನಿಂತಿದ್ದ ನನ್ನ ಮೇಲ್ಜಾತಿಯ ಗೆಳೆಯ ಶವ ಸಂಸ್ಕಾರದ ಅಸೈನ್ ಮೆಂಟ್ ಕೊಟ್ಟಿದ್ದಕ್ಕೆ ನಾನೆಲ್ಲಿ ಸ್ಫೋಟಗೊಂಡು ಬಿಡುತ್ತೇನೋ ಎಂಬಂತೆ ಆತಂಕದಿಂದ ನೋಡತೊಡಗಿದ. ನನ್ನ ಕಣ್ಣ ನೋಟ ಎದುರಿಸಲಾರದೆ ನೆಂಟರೊಂದಿಗೆ ಕರಗಿದ ಈ ‘ಷೋ’ ಕಾಲ್ಡ್ ಪ್ರಗತಿಪರ ನಾಯಕ ತಿಥಿ ಸಂಭ್ರಮದಲ್ಲಿ ನಿರ್ಲಜ್ಜನಾಗಿ ಓಡಾಡುತ್ತಿದ್ದ.

ಜಾತಿ, ಕುಲ ಯಾವೊಂದರ ಹಂಗು -ಹಕ್ಕಿಲ್ಲದೆ ಹೆಣವೊಂದನ್ನು ಬಾಚಿ ಎದೆಗಪ್ಪಿಕೊಂಡು ಮೈತೊಳೆದು ಮಣ್ಣು ಮಾಡಿ ಬಂದಿದ್ದ ಹನುಮ, ವಿಠಲ, ತಮಟೆ ಜಯ ಎಲ್ರೂ ನನ್ನ ಬೆನ್ನ ಹಿಂದೆ ಬಂದು ನಿಂತು ಪಂಕ್ತಿಯಲ್ಲಿ ಬಡಿಸುತ್ತಿದ್ದ ಬಾಡೂಟದತ್ತ ನಿರಾಶೆಯಿಂದ ನೋಡುತ್ತಿದ್ದರು. ಪಂಕ್ತಿಯಿಂದ ಹೊರಬಿದ್ದು ಬಾಡೂಟದ ಭಂಗದಿಂದ ನಿರಾಶೆಗೊಂಡಿದ್ದ ತಮಟೆ ಜಯ ತಾನೂ ಉಂಡು ಮಕ್ಕಳಿಗೆ ಅನ್ನ ಕಟ್ಟಿಕೊಂಡು ಹೋಗಲೆಂದೆ ರೆಡಿ ಮಾಡಿಕೊಂಡಿದ್ದ ಟವಲ್‌ನ್ನು ಕೊಡವಿ ಮುಖದಲ್ಲಿಳಿಯುತ್ತಿದ್ದ ಬೆವರನ್ನು ಒರೆಸಿಕೊಂಡು..
“ಅಣ್ಣಾ.. ಇವ್ರು ನಮ್ ಜಾತ್ರಿಯವ್ರೆ ಅಲ್ವಾ…..?, ನಾವೆಲ್ಲಾ ಒಂದೇ ಅಂದ್ಮ್ಯಾಕೆ ಮತ್ಯಾಕೆ ಆ ವಮ್ಮ ನಮ್ಮನ್ನ ಎಬ್ಸಿ ಓಡ್ಸಿದ್ರು?,”
“ಥೂ…, ಬಾರಣ್ಣ ಹೋಗ್ಲಿ ಅತ್ಲಗೆ……ಅವ್ರ ಮನೆ ಅನ್ನ ದೆವ್ವ್ ತಿನ್ಲಿ.. ”
ಎಂದು ವಿಶ್ವಾಮಿತ್ರನ ಶಾಪದಂತೆ ಶಪಿಸಿಬಿಟ್ಟ.
ಅವರೆಲ್ಲರಿಗೂ ನಾನೇನೋ ಗ್ರ್ಯಾಂಡ್ ಹೊಟೇಲ್ ಗೆ ಕರೆದೊಯ್ದು ಬಾಡೂಟವನ್ನೆ ಹಾಕಿಸಿದೆ. ಆ ‘ಷೋ’ ಕಾಲ್ಡ್ ಪ್ರಗತಿಪರ ನಾಯಕ ಕುಟುಂಬ ಸಮೇತ ತಲೆ ಮರೆಸಿಕೊಂಡು ಬಹಳ ದಿನಗಳೇ ಆದವು. ಆತನ ಕುಟುಂಬ ಮುಂದಿನೂರಿಗೆ ಗುಳೆ ಹೋಗಿದೆ ಎಂದು ಗೆಳೆಯ ಹೇಳಿದ. ಮತ್ತೆಂದು ಅವನ ಮುಖ ನೋಡಲಿಲ್ಲ.
ಕೆಲವು ದಿನಗಳ ಹಿಂದೆ ತಮಟೆ ಜಯ ಕೊನೆಯುಸಿರೆಳೆದು ಬಿಟ್ಟ. ಅದೆಷ್ಟೋ ಹೆಣಗಳಿಗೆ ಮೈತೊಳೆದು, ತಮಟೆ ಬಾರಿಸಿದ್ದು ಲೆಕ್ಕವಿಲ್ಲ. ತಮಟೆ ಜಯ “ಮತ್ತೊಮ್ಮೆ ಹುಟ್ಟಿ ಬಾ..” ಎಂಬ ಫ್ಲೆಕ್ಸಿನಲ್ಲಿ ನಗುತ್ತಿದ್ದ. ಕಣ್ಣುಗಳು ತೇವಗೊಂಡವು.
ಅದಿರಲಿ, ಅದರೆ ಆ ‘ಷೋ’ ಕಾಲ್ಡ್ ಪ್ರಗತಿಪರ ದಲಿತ ನಾಯಕನ ಹೆಣ ಹೆತ್ತಿದ ಮನೆಯಲ್ಲಿ ಅನ್ನವನ್ನು ದೆವ್ವಗಳೆ ತಿನ್ನುತ್ತಿರುವಂತೆ ಈಗಲೂ ನನಗೆ ಆಗ್ಗಾಗ್ಗೆ ಕನಸುಗಳು ಬೀಳುತ್ತಿರುತ್ತವೆ.!!!!
 

‍ಲೇಖಕರು avadhi

March 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: