ಅರಿವಿನ ಸಾಲುಗಳ ‘ನುಡಿ ದೀಪ್ತಿ’

ಸುನೀತ, ಕುಶಾಲನಗರ

ತಿಂಗಳ ಹಿಂದೆಯಷ್ಟೆ ಸೋಮವಾರಪೇಟೆ ತಾಲ್ಲೂಕಿನ ನಿಡ್ತದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೋಕಾರ್ಪಣೆಗೊಂಡ ಪುಸ್ತಕ ‘ನುಡಿ ದೀಪ್ತಿ’. ಕೊಡಗಿನ ಸಾಹಿತಿಗಳ ಪಟ್ಟಿಯಲ್ಲಿ ಅನಂತಶಯನರವರು ಸೇರ್ಪಡೆಗೊಳ್ಳುತಿರುವುದು ಸಂತೋಷದ ವಿಚಾರ ಹಾಗು ಜಿಲ್ಲೆಯ ಪುಸ್ತಕ ಭಂಡಾರಕ್ಕೆ ಮತ್ತೊಂದು ಪುಸ್ತಕ ಸೇರಿರುವುದು ಅತ್ಯಂತ ಖುಷಿಯ ಸಂಗತಿ.

ಹಾಗೆ ನೋಡಿದರೆ ಇವರು ಬರಹ ಕ್ಷೇತ್ರದಲ್ಲಿ ಹೊಸಬರೇನಲ್ಲ ಎಂಬುದು ಕೊಡಗಿನವರಿಗೆ ತಿಳಿದಿರುವ ವಿಷಯವೆ. ತಮ್ಮ ವರದಿಗಳ ಮೂಲಕ, ಸಂಪಾದಕೀಯಗಳ ಮೂಲಕ ಪ್ರಸಿದ್ಧರಾಗಿ ‘ಶಕ್ತಿ’ ಪತ್ರಿಕೆಯ ಆಧಾರಸ್ಥಂಭಗಳಲ್ಲಿ ಒಬ್ಬರು ಎಂಬುದು ಚಿರಪರಿಚಿತವಷ್ಟೆ. ಪುಸ್ತಕ ಓದಲು ಶುರುವಿಟ್ಟಾಗಲೇ ಕೃತಿಕಾರನೊಳಗಿನ ಸಾಮಾಜಿಕ ಕಾಳಜಿ ನಮಗೆ ಗೋಚರಿಸುತ್ತದೆ. ಸಮಾಜದ ಬದುಕಿನ ವಿವಿಧ ಜಂಜಾಟಗಳು ಹಾಗು ಅದನ್ನು ಸ್ವೀಕರಿಸುವ ರೀತಿಯನ್ನು ಪ್ರತಿ ಬರಹಗಳಲ್ಲೂ ಬಹಳ ಹೃದಯಸ್ಪರ್ಶಿಯಾಗಿ ಅನಾವರಣ ಮಾಡಿದ್ದಾರೆ.

ಅನಂತಶಯನರವರು ತಮ್ಮ ಸಂಪಾದಕೀಯದಲ್ಲಿ ಧೈರ್ಯ ತುಂಬುವ, ಎಚ್ಚರಿಸುವ, ಜಾಗೃತಿ ಮೂಡಿಸುವ ಬರಹಗಳನ್ನು ಬರೆದಿರುವುದನ್ನು ನಾವು ಸಾಕಷ್ಟು ಓದಿದ್ದೇವೆ. ‘ಮೈಕೊಡವಿ ಎದ್ದೇಳಿ’ ಶೀರ್ಷಿಕೆಯಡಿಯಲ್ಲಿ ಇರುವ ಬರಹ ಜಿಲ್ಲೆಯ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ, ಧೈರ್ಯ ತುಂಬುವ ಕಾರ್ಯವನ್ನು ಯಶಸ್ಸು ಮಾಡಿತ್ತು. ಆಗ ತಾನೇ ಪ್ರಕೃತಿ ವಿಕೋಪ ಎದುರಿಸಿ ಭಯದ ಕಣ್ಣುಗಳಲ್ಲಿದ್ದ ನಮ್ಮನ್ನು ಸಾಂತ್ವನ ಪಡಿಸುತ್ತಲೇ ವಿಕೋಪವನ್ನು ಜಿಲ್ಲೆ ಏಕೆ ಎದುರಿಸುತ್ತಿದೆ ಮತ್ತೆ ಮುಂದೆ ಏನಾಗಬೇಕೆಂಬುದನ್ನು ಮುಕ್ತವಾಗಿ ಉಲ್ಲೇಖಿಸಿದ್ದರು.

ಬೆಳ್ಳಂಬೆಳಗ್ಗೆಯಿಂದಲೇ ರೇಡಿಯೋ ಕೇಳುವ ನಾವು ಅನಂತಶಯನವರ ಸಾಕಷ್ಟು ಚಿಂತನೆಗಳಿಗೂ ಕಿವಿಯಾಗಿದ್ದೇವೆ. ಜಗದ ಜಗುಲಿಯಲ್ಲಿ ಬರುವ ಇವರ ಸಾಲುಗಳೊಳಗೆ ಅನುಭವಿಗಳ ಮಾತಿವೆ, ಗುರುಭಕ್ತಿಯ ಅಗಾಧತೆಯಿದೆ, ದೈವೀ ಪ್ರಜ್ಞೆಯಿದೆ, ದೇಶಭಕ್ತಿಯಿದೆ, ಮಾನವೀಯತೆಯನ್ನು ಕೂಡಾ ಯಥೇಚ್ಛವಾಗಿಯೇ ಕಾಣುತ್ತೇವೆ. ಇವರ ‘ಆಪ್ತರು ಯಾರು’ ಲೇಖನದಲ್ಲಿ ನಾವು ಅತ್ಯಂತ ದುಃಖವಾದಾಗ ಮತ್ತು ಆನಂದವಾದಾಗ ಒಬ್ಬಂಟಿಯಾಗಿ ಕೆಲಕ್ಷಣವಾದರೂ ಕಣ್ಮುಚ್ಚಿ ಕಳೆಯಲು ಬಯಸುವುದು, ನಿಜವಾದ ನನ್ನೊಡನೆ, ನಿಜವಾಗಿಯೂ ನನ್ನೊಡನೆ ಇರಲು ಬಯಸುವುದು ಈ ಸಾಲುಗಳನ್ನೇ ಗಮನಿಸಿದರೆ ನಿಜಕ್ಕೂ ಆಧ್ಯಾತ್ಮದೆಡೆಗೆ ಕೊಂಡೊಯ್ಯುತ್ತದೆ.

ಕೃತಿಕಾರನ ಅರಿವಿನ ವಿಸ್ತಾರ ಹಾಗೂ ಓದಿನ ಹರಹು ಅವರ ಪುಸ್ತಕದ ಎಲ್ಲಾ ಬರಹಗಳಲ್ಲಿ ಕಾಣಬಹುದಾಗಿದ್ದು ಗುರುಗಳಾಡುವ ಮಾತುಗಳ ಬಗ್ಗೆ ಉಲ್ಲೇಖಿಸುವ ಚಿಂತನೆಗಳು ಮನದಾಳಕ್ಕೆ ಇಳಿಸಿ ಬಿಡುತ್ತವೆ. ಒಬ್ಬ ಸರಿಯಾದ ಗುರುವಿನ ಬಳಿ ಅಭ್ಯಸಿಸುವ ಶಿಷ್ಯನಲ್ಲಿ ಆತ್ಮಶಕ್ತಿ ಹೆಚ್ಚುತ್ತದೆ. ಆತ್ಮಶಾಂತಿ ಲಭಿಸುತ್ತದೆ. ಆತ್ಮಾನಂದ ನೆಲೆಗೊಳ್ಳುತ್ತದೆ. ಧ್ಯಾನದಲ್ಲಿ  ತೊಡಗುವವನಲ್ಲಿ ಈ ಮೂರು ಜಾಗೃತವಾಗುತ್ತಿದ್ದರೆ ಆತ ಸರಿಯಾದ ಗುರುವಿನ ಕೈ ಹಿಡಿದಿದಕ್ಕೆ ಸಾಕ್ಷಿ ಎನ್ನುತ್ತಾರೆ.

ಭಾರತವನ್ನು ನಾವು ಮಾತೆ ಎಂದು ಸಂಭೋದಿಸುತ್ತೇವೆ. ದೇಶಕ್ಕೆ ದ್ರೋಹ ಮಾಡುವ ಮಂದಿ ಮಾತ್ರ ದ್ರೋಹಿಗಳಿಗೆ ಸಮಾನರಾದುದರಿಂದ ಅಂತಹವರಿಗೆ ಇಲ್ಲಿ ಸ್ಥಳವಿರಕೊಡದು ಎಂದು ಕಾನೂನು ಅಗತ್ಯ ಬರಹದಲ್ಲಿ ದಿಟ್ಟತನದಿಂದಲೇ ದೇಶಭಕ್ತಿಯನ್ನು ಬಿಂಬಿಸುತ್ತಾರೆ. ದೈವ ಭಕ್ತಿಯ ಸಾಕ್ಷಾತ್ಕಾರ ಮಾಡುತ್ತಾ ದೇವರನ್ನು ಜರಿಯುವ ಹುಲು ಜೀವಿಗಳು ನಾವು ಎಂಬ ಅಸಮಾಧಾನವನ್ನು ಹೊರಹಾಕುತ್ತಾರೆ. ಸೌಂದರ್ಯ ಎಲ್ಲಿ ಅಡಗಿದೆ ಎಂಬುದಕ್ಕೆ ಸೌಂದರ್ಯ ನೋಡುಗನ ದೃಷ್ಟಿಕೋನದಲ್ಲಿದೆ. ದೃಷ್ಟಿ ನಮ್ಮ ಮನಸ್ಸನ್ನು ಅವಲಂಭಿಸಿದೆ. ಹಾಗಾಗಿ ಸೌಂದರ್ಯ ನಮ್ಮ ನಿಮ್ಮೊಳಗೆ ಅಡಗಿದೆ. ಅದು ಬಾಹ್ಯದಲ್ಲಿಲ್ಲ ಎನ್ನುವಾಗ ನಮ್ಮೊಳಗೆ ಸಣ್ಣದೊಂದು ಜಾಗೃತಿಯನ್ನು ಬಿತ್ತುವ ಪ್ರಯತ್ನ ಮಾಡಿರುವುದು ಮನಸ್ಸನ್ನು ತಟ್ಟುತ್ತದೆ.

ಅರಿವಿನ ಸಾಲುಗಳನ್ನೇ ತುಂಬಿಕೊಂಡಿರುವ ‘ನುಡಿ ದೀಪ್ತಿ’ ಶೀರ್ಷಿಕೆಗೆ ತಕ್ಕಂತೆ ಸಾಕಷ್ಟು ಅರಿವನ್ನು ಉಣಬಡಿಸುತ್ತದೆ. ಸೂಕ್ತ ಅನಿಸಿಕೆಯನ್ನೊಳಗೊಂಡ ಮುನ್ನುಡಿ ಕೊಡಗಿನ ಪಕ್ವ ಬರಹಗಾರ್ತಿ ಸ್ಮಿತಾ ಅಮೃತರಾಜ್‌ರವರು ಬರೆದಿರುವುದು ಪುಸ್ತಕದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ‘ದಿನಾ ಬೆಳಗೂ ಬೈಗೂ ಆಗುತ್ತಿದೆ ಅದರ ಹಿಂದೆ ಯಾವುದೋ ಅದೃಶ್ಯ ಶಕ್ತಿಯ ಕೈವಾಡ ಇದೆ. ಹಾಗಾಗಿ ಬದುಕು ನಿರಾತಂಕವಾಗಿ ಸಾಗಲು ನಿತ್ಯ ಪ್ರಾರ್ಥನೆ ಅಗತ್ಯ ಅನ್ನುವಂತದನ್ನು ಇವರ ಚಿಂತನೆಗಳು ಕಟ್ಟಿಕೊಡುತ್ತಿವೆ. ‘ಬರುವಾಗ ಖಾಲಿ ಕೈ, ಹೋಗುವಾಗಲೂ ಬರಿದು ಕೈ’ ಈ ಸರಳ ಸತ್ಯವನ್ನು ಅರಗಿಸಿಕೊಂಡರೆ ಬದುಕು ಹೊಸ ಮಗ್ಗುಲಿಗೆ   ಹೊರಳಿಕೊಂಡು ಬಿಡುತ್ತದೆ ಎನ್ನುತ್ತಾ ಕೃತಿಕಾರನ ತಾತ್ವಿಕ ಚಿಂತನೆಯ ಸಾಲುಗಳು ಓದುಗನೆದೆಯಲ್ಲಿ ಮೊಳಕೆಯೊಡೆದರೆ ಲೇಖಕರ ಶ್ರಮ ಸಾರ್ಥಕ, ನಮ್ಮಗಳ ಬದುಕು ಪಾವನ ಎಂದಿದ್ದಾರೆ.

ಸುಮಾರು ನೂರಾ ಮೂವತ್ತಾರು ಪುಟಗಳನ್ನೊಳಗೊಂಡ ‘ನುಡಿ ದೀಪ್ತಿ’ ಉತ್ತಮ ಮುಖಪುಟದೊಂದಿಗೆ ನೂರಾನಲ್ವತ್ತು ರೂಪಾಯಿಗಳ ಬೆಲೆಯುಳ್ಳದ್ದಾಗಿದ್ದು ಇದರಲ್ಲಿ ಏನೇನೆಲ್ಲಾ ಇದೆ ? ವಿಚಾರ ಮಾಡಬೇಕಾದ ಹಲವಷ್ಟು ಸತ್ಯಗಳಾದ ಬಂಧನ, ಪ್ರೀತಿ ಪ್ರೇಮ, ಭಕ್ತಿ, ಸಮಚಿತ್ತ, ಅರಿವು ಹೀಗೆ ಹೃದಯವನ್ನು ಮುಟ್ಟುವ ಮೊಗ ಮೊಗೆದ ಅನುಭವಗಳು, ಬಗೆ ಬಗೆದರೂ ದೊರಕುವಷ್ಟು ಇವರ ಚಿಂತನೆ ಹಾಗೂ ಸಂಪಾದಕೀಯ ಬರಹಗಳನ್ನೊಳಗೊಂಡ ಈ ಕೃತಿಯ ಆಶಯ ನಿಜಕ್ಕೂ ಒಳ್ಳೆಯ ಪ್ರಯತ್ನ. ಇವರ ಅರಿವಿನ ಬತ್ತಳಿಕೆಯಿಂದ ಮತ್ತಷ್ಟು ಕೃತಿಗಳು ಹೊರಬರಲಿ ಹಾಗೂ ಪರಿಣಾಮಕಾರಿಯಾಗುವಲ್ಲಿ ಯಶಸ್ವಿಯಾಗಿ ಸಮಾಜಮುಖಿಯಾಗಿ  ಹರಿಯಲಿ ಆ ಮೂಲಕ ಸಂತೋಷ, ಕೀರ್ತಿ ಒಲಿದು ಬರಲಿ. ಅರಿವಿನ ಸಾಲಿನ ನುಡಿದೀಪ್ತಿಗೂ ಕೃತಿಕಾರನಿಗೂ ಶುಭ ಹಾರೈಕೆಗಳು.

 

‍ಲೇಖಕರು avadhi

March 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Kavitha A Y

    ಲೇಖನ ತುಂಬಾ ಚೆನ್ನಾಗಿದೆ. ನಾನೂ ಬಿ.ಜಿ. ಅನಂತಶಯನ ಸರ್ ಅಭಿಮಾನಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: