ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತನ್ನೊಳಗಿದ್ದ ತನ್ನ ಹುಡುಕಿ…

-ಗೀತಾ ನಾರಾಯಣ್

ತನ್ನೊಳಗಿದ್ದ ತನ್ನ ಹುಡುಕಿ…..

ನನ್ನೊಳಗಿನ ನಾನು ಆಗಾಗ ನಡೆಯುವುದನ್ನು ನಿಲ್ಲಿಸಿಬಿಡುತ್ತೇನೆ.
ಕಾರುಣ್ಣಿಮೆಯ ದಿನ ಮುಂಗಾರಿಗೆ
ಅಬ್ಬರಿಸಿ ಬಂದ ಹಳ್ಳವೀಗ ನಿಂತೇಹೋಗಿದೆ ನನ್ನಂತೆ
ನಾ ನಿಂತಿರುವುದು ನಡೆಯುವುದಕ್ಕಾಗಿ
ಒಂದಿನ ಲೋಕದ ಜನ ನಿಜದೊಲವುಗಳ ನೀಗಿಕೊಂಡು
ಗಂಡಾಂತರಗಳ ಕಡೆಗೆ ನಡೆದು ಬಿಟ್ಟರೆ?!
ಭಯವಾಗುತ್ತದೆ ದಿನದಿನವೂ
ನನ್ನೊಳಗಿದ್ದ ನಾನು ಅತ್ತೆ ಒಳಕಲ್ಲಿನಲ್ಲಿ ಧ್ಯಾನನಸ್ಥಳಾಗಿ ಅರೆದ ಸಾರಿನ ಕಾರದಲ್ಲಿ ಪ್ರೀತಿಯ ಅಗಾಧತೆ ಕಲಿತವಳು
ಅದು ಹೇಗೆ ಹೆಚ್ಚು ಕಾಲ ಪುಡಿಪುಡಿಯಾಗಿ ಹಾರಿಹೋದವರ ಸಖ್ಯದಲ್ಲಿ ನಿಲ್ಲುವುದು?
ನನ್ನೂರ ಸಿದ್ದೇಮಣ್ಣಿನ ಸರದಲ್ಲಿ ಎಷ್ಟೊಂದು ತಾಯಂದಿರ ನಿಟ್ಟುಸಿರುಗಳು ಪ್ರೀತಿಯ ತಡಕುತ್ತಿವೆ.
ಯಾರು ಎಲ್ಲಿಯೂ ನಿಂತವರಲ್ಲ
ಬಾಳಿನಂಗಳದ ತುಂಬಾ ಪ್ರೀತಿಯ ಮೊಹರನ್ನೇ ಮತ್ತೆ ಮತ್ತೆ ಒತ್ತಿ ಬದುಕ ಗೆದ್ದವರು……
ಅವನು ಆ ಮನೆಯವನು
ಮುಂದಲ ಮನೆಯವನು
ಹಿಂದಿನ ಮನೆಯವನು ಮಗ್ಗುಲ ಮನೆಯವನು
ಎಲ್ಲರೆಲ್ಲರೂ ನಶೆಯ ನೆತ್ತಗೇರಿ ಬೆಳಕ ಕೊಂದವರು
ಊರೂರ ತುಂಬಾ ಮಕ್ಕಳ ಕೇಕೆ
ನನ್ನೊಳಗಿನ ನನಗೆ ನಿಲ್ಲದೇ ನಡೆಯುತ್ತಲೇ ಇರುವ
ಅಮ್ಮಂದಿರ ಒಲವ ತುಂಬಿ ಮುನ್ನಡೆಸಿದೆ
ಬದುಕನ್ನು ಎಳೆದೆಳೆದು ಹೊತ್ತು ನಡೆದ ಅವ್ವಂದಿರ ಹೆಗಲಿಗೆ ಎಷ್ಟೆಷ್ಟು ಹೊರೆಬಿದ್ದರೇನು ಪ್ರೀತಿಯ ತೋರಣ ಹೊಲೆದೊಲೆದು ಬಾಗಿಲ ಚೆಲುವ ಹೆಚ್ಚಿಸಿದವರು
ನನ್ನನ್ನೆಲ್ಲಿ ನಿಲ್ಲಲು ಬಿಡುತ್ತಾರೆ….
ನನ್ನೊಳಗಿನ ನಾನು ನುಚ್ಚು ನೂರಾಗಿ ಗಾಜಾದ ಬೆಳಕಿನೆದುರು ಜಡಿಮಳೆಯಲ್ಲಿ ತೋಯಲು ನಡೆಯುತ್ತೇನೆ
ಹೋಗುವವರೆಲ್ಲಾ ಹೋಗೇಬಿಡಲಿ
ಎಟುಕದ ಎತ್ತರಗಳನ್ನೆಲ್ಲಾ ಎಟಕಿಸಿಕೊಂಡು
ಬದುಕ ನೇಯ್ದ ಅವ್ವಂದಿರು ಅಕ್ಕಳ ಕದಳಿಯ ಆವರಣದಲ್ಲಿ ಪ್ರೀತಿಯ ಹಾಡು ಹಾಡುತ್ತಲೇ ಇದ್ದಾರೆ
ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನಿದ್ದಾನೆಂದು…..

‍ಲೇಖಕರು Admin

22 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading