ತಥಾಗತನ ಚಿತ್ರ ಅಲ್ಲಿ ಡಿಲೀಟ್ ..

ಕಾಲು ಸೋತ ಕೋವಿದರು

 ರೇಣುಕಾ ರಮಾನಂದ

ಬುದ್ಧ ಪೌರ್ಣಮಿಯ ದಿನ
ಬುದ್ಧ
ಮಂಡಿ ಮಡಚಿ ಧ್ಯಾನಸ್ಥನಾಗಿದ್ದ
ಶುಭಾಶಯ ಚಿತ್ರ ಕಳಿಸಿದೆ
‘ಕ್ಯಾಲೆಂಡರ್ ನೋಡಿ ಆಯಾ ದಿನಕ್ಕೆ
ಅದದೇ ಚಿತ್ರ ಹುಡುಕಿ ಕಳಿಸುವುದನ್ನು
ನೀವು ಎಂದು ಬಿಡುತ್ತೀರೋ
ಅಂದು ಉದ್ಧಾರವಾಗುತ್ತೀರಿ’
ಎಂಬ ಪ್ರತ್ಯುತ್ತರ ಬಂತು

ಅಷ್ಟಾಂಗ ಮಾರ್ಗಗಳನ್ನು ಅಲ್ಪವಾದರೂ
ರೂಢಿಸಿಕೊಂಡಿದ್ದೀರಾ?
ದುಃಖದ ಮೂಲವನ್ನು ದೂರೀಕರಿಸುವ
ಬಗೆಯ ಬಗ್ಗೆ ಚಿಂತಿಸಿದ್ದೀರಾ
ರತ್ನತ್ರಯ ಗುಣಗಳು ಯಾವವು
ಹೇಳಿ ನೋಡುವಾ ಎಂದು
ಗೌತಮನೇ ಎದುರು ಬಂದು
ಕೇಳಿದಂತಾಗಿ

ಎದೆಯಲ್ಲಿ ಸಣ್ಣಗೆ ಪೆಚ್ಚುತನದ
ಪೇಲವ ಭಾವ ಓಡಾಡತೊಡಗಿತು

 

ಎಲ್ಲರಿಗಿಂತ ನನ್ನ ಚಿತ್ರವೇ ಮಿಗಿಲಾಗಬೇಕೆಂದು
ಹುಡುಕಿ
ವಾರದಿಂದ ಬಿಡದೆ ಆರಿಸಿ
ಹೆಚ್ಚುಗಾರಿಕೆಯಿಂದ ಕಳಿಸಿದ
ತಥಾಗತನ ಚಿತ್ರ
ಅಲ್ಲಿ
ಡಿಲೀಟ್ ಆಯಿತು

ವಿಶಾಖಪಟ್ಟಣಂ
ಆ್ಯಂಟಿಕ್ ಅಂಗಡಿಯಿಂದ ಹಿಂದೆಂದೋ ತಂದ
ಹತ್ತು ಸಾವಿರದ ಕಂಚಿನ ಪ್ರತಿಮೆ…
ಮಾಡಿಕೊಟ್ಟ ಕೆಲಸಕ್ಕೆ ಕೃತಜ್ಞತಾಪೂರ್ವಕ
ತಂದುಕೊಟ್ಟ
ಇಪ್ಪತ್ತರ ಆಸುಪಾಸಿನ ಸಂಗಮವರಿ ಕಲ್ಲಿನ
ಬೆಳ್ಳಗಿನ ಆಳೆತ್ತರದ ಮೂರ್ತಿ …
ಕತ್ತಿನ ಹತ್ತಿರವೇ ತುಂಡಾದ ಶ್ಯಾಮನೀಲಿಯ
ಸಿದ್ಧಾರ್ಥ…
ಕಪ್ಪು ಕಲ್ಲಿನ ಅಲ್ಲಲ್ಲಿ ಚಿಕ್ಕೆಯ ಫಳಫಳ
ಹೊಳೆವ ಗೌತಮ…
ಟೆರ್ರಾಕೋಟಾದ ಟೊಳ್ಳು ಬುದ್ಧ…
ಗುಂಗುರುಗೂದಲಿನೊಂದಿಗೆ
ಕಿವಿಯ ಹಾಲೆಗಳನ್ನು ಜೋಲಿಸಿಕೊಂಡು
ಹಜಾರ ಪ್ರವೇಶಿಸಿದ ಹಾಗೆ ತಕ್ಷಣ ಕಾಣುವಂತೆ
ಇಷ್ಟುದಿನ ಕುಳಿತಿದ್ದ
ಇಂದು
ಸಂಪಿಗೆಯೋ ಪಾರಿಜಾತವೋ ಕಮಲವೋ
ಹೀಗೆ ದೇಸಿ ಹೂವನ್ನು ಜೊತೆಗಿಟ್ಟುಕೊಂಡು
ಮುನ್ನೆಲೆಗೆ ಬಂದು
ಹೆಚ್ಚಾಗಿ ಕಂಗೊಳಿಸಿದ

 

ಕಣ್ಣು ಮುಚ್ಚಿಕೊಂಡು ಎಲ್ಲದರಲ್ಲೂ
ಮುಗುಳುನಗುತ್ತಿದ್ದ

ಬುದ್ಧ ಎಂದರೆ “ನಿದ್ದೆಯಿಂದ ಎದ್ದವನು” ಅನ್ನುತ್ತೀಯಲ್ಲ
ಯಾಕಿವನು ಹೀಗೆ ಸದಾ ಕಣ್ಣುಮುಚ್ಚಿಕೊಂಡೇ ಇರುವುದು
ಆರು ವರುಷದ ಮಗಳ ಪ್ರಶ್ನೆ
ಅದು ವಿಪಶ್ಶನ ಧ್ಯಾನ ಮಾರ್ಗದ
ಅರೆ ನಿಮೀಲಿತ ನೇತ್ರ ಮಗೂ ಎಂದರೆ
ಅರ್ಥವಾದೀತೆ ಅವಳಿಗೆ
ಬೋಧಿವೃಕ್ಷದ ಕೆಳಗೆ ಬುದ್ಧನೂ ಆರು ವರ್ಷ ಕುಳಿತಿದ್ದನಂತೆ
ಬರೀ ಕುಳಿತುಕೊಂಡರೆ ಏನಾಗುತ್ತದೆ ಮಮ್ಮಾ
ಅವನು ಆಗಾಗ ಎದ್ದು
ಹಕ್ಕಿಗಳ ಚಿಲಿಪಿಲಿ ಕೇಳಬೇಕಿತ್ತು
ಅಳಿಲುಗಳ ಓಡಾಟ ನೋಡಬೇಕಿತ್ತು
ಆಹಾ ನೆರಳು ಎಷ್ಟು ಚಂದ ಅನ್ನಬೇಕಿತ್ತು
ಅದಕ್ಕೂ ಬಿಳಲಿದ್ದರೆ ಜೋತು ಹೊಡೆಯಬೇಕಿತ್ತು
ರಾಹುಲ ಈಗೆಷ್ಟು ದೊಡ್ಡವನಾದ ಎಂದು ಅಂದುಕೊಳ್ಳಬೇಕಿತ್ತು
ಅಲ್ಲವಾ ಅಮ್ಮಾ
ಅನ್ನುತ್ತ ನನ್ನಲ್ಲೂ ಇರುವ ಒಂದು ಸಾದಾ ಕಲ್ಲಿನ
ಬುದ್ಧನನ್ನು ಎತ್ತಲು ಹೋಗಿ
ವಿಫಲಳಾಗುತ್ತಾಳೆ
ಇದು ಬಸವಮಂಟಪದ ಮುಂದೆ ಜೋಲಿ ಕಟ್ಟಿ
ಕಂದನ ತೂಗುತ್ತಿದ್ದ ಯಶೋಧರೆಯೊಬ್ಬಳು
ಅವಳೇ ಕೆತ್ತಿ, ಬೆಂಬಿಡದೆ ಬೆನ್ನತ್ತಿ
ನಿನ್ನೆಯಿಂದ ಊಟ ಮಾಡಿಲ್ಲ ಕಣಕ್ಕ ಎಂದಾಗ
ಚೌಕಾಸಿ ಮಾಡಿ ಕೊಂಡ ಮೂರ್ತಿ ಕಣಮ್ಮಾ ಎನ್ನಲು
ಬೋ ನಾಚಿಕೆ ನನಗೆ

ವಿನಯ ಬದ್ಧತೆ ಸಹನೆಯ ಬುದ್ಧ ಮಾರ್ಗ
ಕರುಣೆ ಪ್ರೀತಿ ಮೈತ್ರಿಯ ಧಮ್ಮ ಮಾರ್ಗ

ಈ ಎರಡನ್ನೂ ಕವಿತೆ ಕಥೆ ಖಂಡಕಾವ್ಯದೊಳಗೆ
ಕಟ್ಟಿಹಾಕಿ ಓದು ಬರಹ ವಾಚನ…
ಚಿತ್ರಗಳ ಪ್ರೇಷಣ….
ಮೂರ್ತಿಗಳ ಪ್ರದರ್ಶನ…
ಇಷ್ಟವಿದ್ದರೂ ಇಲ್ಲದಿದ್ದರೂ
ಗಚ್ಛಾಮಿ, ಅರ್ಥಾತ್ ಸ್ವೀಕಾರ..
ಮರುದಿನ ಎಲ್ಲವನ್ನೂ ಒರೆಸಿ ಮೆಮೋರಿ
ಕ್ಲಿಯರ್ ಮಾಡಿಕೊಂಡು
ಮುಗಿತಾಯ

ಬುದ್ಧನೆಂದರೆ ಹೇಳಿ
ಕೇಳಿ
ಒಂದು ದಿನಕ್ಕೆ ಮುಗಿದವನಲ್ಲ
ಸ್ವ ಸಾಮರ್ಥ್ಯದ ಅತ್ಯುನ್ನತ ಜ್ಞಾನ
ಇಪ್ಪತ್ನಾಲ್ಕು ತಾಸಿನಲ್ಲಿ ಪಡೆದವನಲ್ಲ

ಬೆಳಕ ಬಿತ್ತುತ ನಡೆದವನ ಅರಿವಿನ ಹಾದಿಯ
ಪಯಣಯ ಶುರುವಿನಲ್ಲೇ
ಷಡ್ವೈರ್ಗಿಗಳ ಸಂಗಾತ
ಕುಳಿತುಬಿಟ್ಟವರು
ನಾವು …

‘ಕಣ್ಣು ಕಾಣದ ಗಾವಿಲರು’
ಕಾಲು ಸೋತ ಕೋವಿದರು

‍ಲೇಖಕರು nalike

May 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: