ಅನಾಮಿಕಾ @ ಹ್ಯಾಂಡ್ ಪೋಸ್ಟ್ : ಈ ಕಡೆ ಬಂದ್ರೆ ಮನೆಗೆ ಬನ್ನಿ!

ಎಲ್ಲ ಕಾಲದಲ್ಲೂ ಮನುಷ್ಯ ತಳಮಳಗಳಲ್ಲೇ ಬದುಕುತ್ತಾನೆ. ನೆಮ್ಮದಿಯಲ್ಲೂ ವಿಷಾದ ತಬ್ಬಿಕೊಂಡಿರುತ್ತದೆ. ಸುಖದೊಂದಿಗೆ ದುಃಖವಿದೆ. ದುಃಖದೊಂದಿಗೆ ಸುಖವೂ ಇದೆ. ನೆಮ್ಮದಿ ನೆಮ್ಮದಿಯಲ್ಲ. ದುಃಖ ದುಃಖವಲ್ಲ. ಸಾವು ಸಾವಲ್ಲ. ಬದುಕು ಬದುಕಲ್ಲ. ಎಲ್ಲವೂ ಒಂದಕ್ಕೊಂದು ಮಿಳಿತಗೊಂಡಿರುವ ಒಂದು ಸೆನ್ಸ್ ಎಂದಿದ್ದರು ಕಿ ರಂ. ನನಗೆ ನನ್ನ ಊರು, ಶಾಲೆ, ಹೊಲ, ಮನೆ ಯಾವತ್ತೂ ಬೇರೆ ಬೇರೆ ಅಲ್ಲ. ಎಲ್ಲವೂ ಒಂದಕ್ಕೊಂದು ಮಿಳಿತಗೊಂಡಿರುವ ಪ್ರಜ್ಞೆ. ಅದಿಲ್ಲದೆ ನಾನಿಲ್ಲ.

ಬೇರೆ ಊರಲ್ಲಿ ಮನೆ ಕಟ್ಟಿಸಿದರೆ ಹೇಗೆ ಎನ್ನುವ ಯೋಚನೆಗೇ ಒಂದು ವಾರ ಡಿಪ್ರೆಷನ್ ನಲ್ಲಿದ್ದೆ. ಆದರೆ ಅದೇ ಸದ್ಯದ ಅಗತ್ಯ ಎನ್ನುವುದು ಮನದಟ್ಟಾಯಿತು. ಮನೆಯಿಲ್ಲ ಅಂದ್ರೆ ಏನಾಯ್ತು, ಊರೇ ನಮ್ಮದಲ್ಲವೆ ಅಂತ ಇಷ್ಟು ಕಾಲ ಇಲ್ಲಿ ಇದ್ದಿದ್ದು. ಹದಿನೈದು ವರ್ಷದಲ್ಲಿ ಬದಲಾಯಿಸಿದ ಮನೆಗಳ ಕತೆಯೇನು ಎಲ್ಲರ ಬಾಡಿಗೆ ಮನೆಗಳ ಅನುಭವಕ್ಕಿಂತ ಭಿನ್ನವಾಗಿಲ್ಲ. ಸ್ವಂತ ಮನೆಯೇ ಇರಲಿಲ್ಲ ಅಂತಿರಲಿಲ್ಲ.

ಕೂಡು ಕುಟುಂಬ ಲೋಕಾರೂಢಿಯಂತೆ ಹಿಂದೊಮ್ಮೆ ಬೇರೆಯಾಗುವ ಪ್ರಹಸನ ನಡೆಯಿತು. ಚಿಕ್ಕವರು ಬಿಟ್ಟಿದ್ದನ್ನು ದೊಡ್ಡವರು ತೆಗೊಳ್ಳೋದು ಎಂದಾದಾಗ ಅಪ್ಪನಿಗೆ ಉಳಿದಿದ್ದು, ಒಂದು ದೊಡ್ಡ ಖಾಲಿ ಮನೆ, ನಾಲ್ಕೆಕರೆ ಪಡಾ ಹೊಲ, ಬ್ಯಾಂಕಿನ ಸಾಲ. ಸತತ ಬರಗಾಲದ ಮಧ್ಯೆ ಆದಾಯದ ಮೂಲವೆ ಇಲ್ಲದ್ದರಿಂದ ಮುಂದೆ ಬೇಕು ಅಂದ್ರೆ ಕಟ್ಟಿಸಿಕೊಳ್ಳಬಹುದು, ಹೊಲ ಕೊಳ್ಳುವುದು ಆಗದ ಮಾತು ಎಂದು ಮನೆ ಮಾರಿ ಬ್ಯಾಂಕಿನ ಸಾಲ ತೀರಿಸಿದರು ಅಪ್ಪ.

ಅಜ್ಜಿ(ಅಪ್ಪನ ಅವ್ವ) ಕಳೆದ ವರ್ಷ ಸಾಯುವವರೆಗೂ ಮಗನಿಗೆ ಹೇಳುತ್ತಲೇ ಇದ್ದಳು, ನಿನ್ನನ್ನ ರಾಜಕುಮಾರನ ಥರ ಬೆಳೆಸಿದ್ದೆ. ಈಗ ನೀನು ಈ ಲಡಕಾಸಿ ಸೈಕಲ್ ಹತ್ತಿ ಹೊಲ ಮನೆ ತಿರುಗುವುದನ್ನು ನೋಡುತ್ತಿದ್ದರೆ ನನಗೆ ಸಂಕಟ ಆಗತ್ತೆ. ಭೂಮಿಗೆ ಒಳ್ಳೆಯ ಬೆಲೆ ಇದೆ. ಒಂದೆಕೆರೆ ಹೊಲ ಮಾರು, ಮನೆ ಕಟ್ಟಿಸು, ಒಂದು ಕಾರು ತಗೊ ಆರಾಮಾಗಿರು ಎಂದು. ಮಾರುವ ಕಾಲದಲ್ಲೆ ಮಾರಲಿಲ್ಲ. ಈಗ್ಯಾಕೆ ಮಾರುವುದು ಇರ್ಲಿ ಬಿಡು ಎನ್ನುತ್ತ ವಸ್ತುಗಳನ್ನು ಎಂದೂ ಪ್ರೀತಿಸದ ಅಪ್ಪ ಅದನ್ನ ಮಾಡಲಿಲ್ಲ.

 

ಸ್ನೇಹಿತರೆಲ್ಲರಿಗೂ ಹೇಳುತ್ತಿದ್ದೆ, ಕೆಲಸಕ್ಕೆ ಸೇರಿದ ತಕ್ಷಣ ಆಸ್ತಿ, ಮನೆ ಅಂತ ಸಾಲ ಮಾಡಿಕೊಂಡು ಒದ್ದಾಡಬೇಡಿ. ಇಪ್ಪತ್ತೆಂಟು ಇಪ್ಪತ್ತೊಂಬತ್ತು ವರ್ಷದವರೆಗೆ ಇಷ್ಟಸಖಿಯರ ಜೊತೆ ತಿರುಗಾಟ, ಪ್ರವಾಸ ಮಾಡಿ. ಮೂವತ್ತಕ್ಕೆ ಮದುವೆಯಾಗಿ, ಮೂವತ್ತೆರಡಕ್ಕೆ ಮಗು, ಮೂವತ್ತೈದಕ್ಕೆ ಒಂದು ಮನೆ ಮಾಡಿ ಒಂದ್ಹತ್ತು ವರ್ಷ ಮನೆಸಾಲದ ಕಂತು ಕಟ್ಟುತ್ತ ಆರಾಮಾಗಿರಿ ಎಂದು. ನಮ್ಮದೆಲ್ಲ ಸರಿ ಗುಂಡುಮರಿ, ನಿನ್ನದೇನು ಪ್ಲ್ಯಾನ್? ಎಂದರೆ, ನಾನು ‘ಹಣ್ಣೆಲೆ ಚಿಗುರಿದಾಗ’ ಸಿನೆಮಾದ ಕಲ್ಪನಾ ಥರ, “ಬದುಕಿರುವವರೆಗೂ ನಿಮ್ಮ ಮಕ್ಕಳು, ಮೊಮ್ಮಕ್ಕಳನ್ನು ನೋಡಿಕೊಳ್ತೇನೆ. ಎರಡು ಹೊತ್ತಿನ ಊಟ, ವರ್ಷಕ್ಕೆರಡು ಜೊತೆ ಬಟ್ಟೆ ನಾನು ನಿಮಗೆ ಭಾರವೇನ್ರೋ…” ಅಂತಿದ್ದೆ. ಅಷ್ಟಕ್ಕೆ ಮಾತು ಬೇರೆಡೆಗೆ ಹೊರಳುತ್ತಿತ್ತು.

ತೀರಾ ಕಷ್ಟ ಅಂತಲ್ಲ. ಪರವಾಗಿಲ್ಲ ಮನೆ ಕಟ್ಟಿಸುವ ಬಗ್ಗೆ ಯೋಚನೆ ಮಾಡಬಹುದು ಎನ್ನುವ ಸಮಯ ಬಂದಾಗ ನನಗೆ ಸಾಲ, ಜನರ ಜೊತೆ, ಕೆಲಸಗಾರರ ಜೊತೆ ಮಾತನಾಡುವುದು ಹೆಣಗಾಡುವುದು ಆಗದ ಕೆಲಸ ಅಂತ ಕೈ ಎತ್ತಿದೆ. ಅಪ್ಪನ ಮನಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ನಾನು ಬಾಯಿ ಬಿಟ್ಟು ಹೇಳಿದೆ ಅವರು ಸುಮ್ಮನಿದ್ದರು! ಇಷ್ಟು ದಿಢೀರ್ ಅಂತ, ಸಾಲದ ಕಂತು ಕಟ್ಟುವ ಜವಾಬ್ದಾರಿಯೊಂದನ್ನು ಬಿಟ್ಟರೆ ಬೇರೆ ಯಾವ ಕಿರಿಕಿರಿ ಇಲ್ಲದಂತೆ ಮನೆ ಅನ್ನೊದೊಂದು ಆಗತ್ತೆ ಎನ್ನುವ ಕಲ್ಪನೆ ಸಹ ನನಗಿರಲಿಲ್ಲ. ನನಸು ಕಣ್ಣ ಮುಂದೆ ಇರುವುದರಿಂದ ನಂಬುತ್ತಿದ್ದೇನೆ.

ಈ ಗೋಡೆಗಳಿಗೆ ನಾನೇ ನೀರು ಹಾಕಿದೆ ಹಾಗೆ ಹೀಗೆ ಎನ್ನುವಷ್ಟು ನಾನು ಮನೆಯನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿಲ್ಲ. ಟೈಲ್ಸ್ ಕಲರ್-ಡಿಸೈನ್, ಪೇಂಟ್ ಕೂಡ ಫ್ರೆಂಡ್ಸ್ ಸೆಲೆಕ್ಟ್ ಮಾಡಿದ್ದು. ಇರುವುದಕ್ಕೆ ಒಂದು ಮನೆ ಬೇಕು. ಅದು ಅಪ್ಪ-ಅವ್ವನ ಅನುಕೂಲಕ್ಕೆ ತಕ್ಕಂತೆ ಇದ್ದರೆ ಸಾಕು ಎನ್ನುವುದೊಂದೇ ಮನಸ್ಸಲ್ಲಿ ಇದ್ದಿದ್ದು, ಅದರಂತಾಗಿದೆ. ಮನೆಯ ನಂಟು ಅಂದಾಗಲೆಲ್ಲ ನಾನು ಹುಟ್ಟಿ ಬೆಳೆದ ಮನೆ ಅಂಗಳಲ್ಲಿ ನನ್ನ ಮುಂದಿನ ಪೀಳಿಗೆ ಆಡಲಾಗಲಿಲ್ಲ ಎನ್ನುವ ಯೋಚನೆಗೆ ತುಸು ಕಿರಿಕಿರಿಯಾಗುತ್ತದೆ. ಬದುಕಿನ ಚಲನೆ ಆ ಬೇಸರವನ್ನ ಮರೆಸುತ್ತದೆ.

 

ಹುಟ್ಟಿದಾಗಿನಿಂದ ಆ ಮನೆಯೊಂದೇ ನನ್ನ ಪ್ರಪಂಚವಾಗಿತ್ತು. ನಾನು ನಾಲ್ಕು ವರ್ಷದವಳಿದ್ದಾಗ ಹೊರ ಗೋಡೆಯ ಪ್ಲಾಸ್ಟರ್, ಗೇಟ್ ಮತ್ತಿತರೆ ಕೆಲಸ ಮಾಡಿಸಿದ್ದು. ಪಕ್ಕದಲ್ಲೆ ಇದ್ದ ಶಾಲೆಗಿಂತ ನಮ್ಮ ಅಂಗಳದಲ್ಲೆ ಜಾಸ್ತಿ ಇರುತ್ತಿದ್ದೆ. ನನ್ನ ಸೈಕಲ್ ಓಡಾಡಲು ಅನುಕೂಲವಾಗುವಂತೆ ಅಲ್ಲಿ ಸಿಮೆಂಟ್ ಮಾಡಿಸಿದ್ದರು. ಆ ಹಸಿ ಸಿಮೆಂಟಿನ ಮೇಲೆ ನಾನು ಕಾಲೂರಿದ ಜಾಗವನ್ನು ಗೌಂಡಿಗಳು ಸರಿ ಮಾಡಲು ಮುಂದಾದಾಗ ಅಪ್ಪ, ‘‘ಹಾಗೆ ಇರ್ಲಿ ಅದು,’’ ಎಂದಿದ್ದಕ್ಕೆ ನನ್ನ ಪುಟಾಣಿ ಪಾದದ ಗುರುತು ಆ ಮನೆಯಂಗಳದಲ್ಲಿದೆ.

ನನ್ನ ಅಸ್ತಿತ್ವದ ಈ ಒಂದು ಸಣ್ಣ ಕುರುಹು ನನ್ನೊಳಗೆ ಮೂಡಿಸಿದ ಹೆಮ್ಮೆಯ ಭಾವವನ್ನ ಪದಗಳಲ್ಲಿ ಹೇಳುವುದು ಕಷ್ಟ. ಇದಕ್ಕಾಗಿಯೇ ಅನಿಸತ್ತೆ ಈ ಮನೆ ಅಂಗಳದಲ್ಲಿ ಪ್ರಜ್ಞಾಪೂರ್ವಕವಾಗಿ ಮಕ್ಕಳ ಹೆಜ್ಜೆಗಳನ್ನು ಮೂಡಿಸಿದ್ದೇನೆ. ಇನ್ನೊಂದು ಹತ್ತು ವರ್ಷಕ್ಕೆ ಈ ಮಕ್ಕಳೆಲ್ಲ ತಮ್ಮ ಪಾದದ ಗುರುತುಗಳ ಕಡೆಗೆ ಬೆನ್ನು ಮಾಡಿ, ಮನೆ ಕಟ್ಟೆ ಮೇಲೆ ಕೂತು ಕಾಣುವ ಭವ್ಯಭವಿತವ್ಯದ ಕನಸು ನನಸಾಗಲಿ ಎನ್ನುವುದು ನನ್ನ ಹಾರೈಕೆ. ನಿಮ್ಮದೂ ಇರಲಿ!!

ಈ ಮನೆ, ನನ್ನ ಪಾಲಿನ ಹೊಲ -ಎರಡನ್ನೂ ಒಂದು ಸಣ್ಣ ಟ್ರಸ್ಟಾಗಿ ಮಾಡಬೇಕು ಎಂದಿದ್ದೇನೆ. ಇದು -ಸ್ನೇಹಿತರ, ಅಕ್ಕಂದಿರ, ಅಣ್ಣನ, ಕಸಿನ್ ಗಳ ಹೆಣ್ಣುಮಕ್ಕಳಿಗಾಗಿ. ಇವರೆಲ್ಲ ಹದಿನೆಂಟು ವರ್ಷದ ನಂತರ ಶಿಕ್ಷಣ ಮುಂದುವರಿಸಲು ಇಷ್ಟವಿಲ್ಲದೆಯೋ, ವೃತ್ತಿಪರ ಕೋರ್ಸ್ ಬೇಡ ಎಂತಲೋ, ಕೃಷಿ-ಹೈನುಗಾರಿಕೆ ಅಥವಾ ಅದನ್ನು ಮೀರಿದ ಹುಚ್ಚಾಟಗಳಲ್ಲಿ ಜೀವನವನ್ನ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು ಎಂದರೆ ಇಲ್ಲಿಗೆ ಬರಬಹದು. ಇದು ಯಾವತ್ತೂ ಮಾರುವ ಅಥವಾ ಲಾಭದಾಯಕ ವ್ಯವಹಾರಿಕ ಆಸ್ತಿಯಲ್ಲ. ನನಗೆ ಭರವಸೆ ಇದೆ ಇದನ್ನ ಈ ಮಕ್ಕಳು ತುಂಬಾ ಜವಾಬ್ದಾರಿಯುತವಾಗಿ ಅವರ ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಾರೆಂದು. ಮಕ್ಕಳಿಗೆ ಹಿತವಿರಲಿ.

ಬೇಕು ಎಂದಿದ್ದನ್ನು ಕೇಳಿ ಪಡೆಯುವ ಹಕ್ಕು ಕೊಟ್ಟ, ನಾನು ಕೇಳದಿದ್ದರೂ ಈಗ ನಿನಗಿದು ಅವಶ್ಯ ಎಂದು ಕೈ ಹಿಡಿದು ನಡೆಸಿದ ಜೀವಗಳ ಜೊತೆಯೇ ಬದುಕಿಗೆ ಸಾರ್ಥಕ ಭಾವ ಮೂಡಿಸಿದ ಎರಡು ಮೂರು ಸಂಗತಿಗಳನ್ನು ಇಲ್ಲಿ ಅಕ್ಕರೆಯಿಂದ ನೆನೆಯುತ್ತಿದ್ದೇನೆ.

ಒಂದು ವಯಸ್ಸಿನ ನಂತರ ಅಪ್ಪ-ಅವ್ವಂದಿರು ಜೀವಂತ ಇರುವುದಿಲ್ಲ. ಅವರನ್ನು ಜೀವಂತ ಇಟ್ಟುಕೊಳ್ಳಬೇಕಾಗತ್ತೆ. ಅದು ಮಕ್ಕಳದೇ ಜವಾಬ್ದಾರಿ. ಇಂಥದೊಂದು ಜವಾಬ್ದಾರಿಯನ್ನು ಪ್ರೀತಿ ಮತ್ತು ಹಕ್ಕಿನಿಂದ ನನಗೆ ಕೊಟ್ಟ ಅಪ್ಪ-ಅವ್ವನನ್ನು,

ಈ ಮನೆಗೆ ಸಂಬಂಧಿಸಿದಂತೆ ಹಣಕಾಸಿನ ವಿಷಯಕ್ಕಾಗಲಿ, ಬೇರೆ ಯಾವುದೇ ರೀತಿಯ ಸಹಾಯಕ್ಕಾಗಲಿ ಪರಿಚಯಗಳನ್ನು ನನ್ನ ಅವಶ್ಯಕತೆಗೆ ಬಳಸಿಕೊಳ್ಳುವಂತಹ ಪರಿಸ್ಥಿತಿ ತಂದೊಡ್ಡದ ನಿಯತಿಯನ್ನು,

ಬಾಗಿಲ ಆಚೆ ಇದ್ದ ಭಾವನಿಗೆ, ಸಿಂಕ್ ಹತ್ರ ಇದ್ದ ಓರಗಿತ್ತಿಗೆ ಗೊತ್ತಾಗದಂತೆ ತಮ್ಮ ತಾಳಿ ಚೈನಿನ (ಅವರ ಗಂಡ ತೀರಿ ಹೋಗಿ ತಿಂಗಳಾಗಿತ್ತು ಅಷ್ಟೇ) ಒಂದೆಳೆಯನ್ನು ನನ್ನ ಕೈಗೆ ವರ್ಗಾಯಿಸಿ ಮನೆಗೆ ಬೇಕಾಗತ್ತೆ ಇಟ್ಟುಕೊ, ಎಂದು ಮುಂಗೈಯ್ಯೊತ್ತಿದ ಸ್ನೇಹಿತೆಯ ಅಮ್ಮನನ್ನು,

…ಎಲ್ಲ ವ್ಯವಸ್ಥೆ ಹೌದು. ಸಾಲ ಮಾಡಿ ಅದರ ಕಂತು ಕಟ್ಟಲು ಅಷ್ಟು ವರ್ಷ ಬದುಕಿರಬೇಕಲ್ಲ. ಸಾಕು ಈ ಬದುಕು ಮುಗಿಸಿ ಹೋದ್ರಾಯ್ತು ಎನ್ನುತ್ತಿದ್ದವಳಿಗೆ -ಬದುಕಿರಲೇಬೇಕು ಅಂತಿಲ್ಲ. ಮನೆ ವಿಮೆ ಮಾಡಿಸಿದರೆ ಮಧ್ಯೆ ನೀ ಎದ್ದು ಹೋದ್ರೂ ಅದರ ಬಾಕಿ ಹಣ ವಸೂಲಿ ಮಾಡೋಲ್ಲ ಎನ್ನುವ ವಾಸ್ತವವನ್ನು ಅಚ್ಚುಕಟ್ಟಾಗಿ ಅರ್ಥ ಮಾಡಿಸಿದ ಸಖನನ್ನು.

ಸಮಾರಂಭಗಳು ಎಂದರೆ ನನಗೆ ಬರ್ಷಣ. ಅದಕ್ಕಾಗಿ ಅವ್ವ ಮನೆಯೊಳಗೆ ಬಂದರದೇ ಗೃಹಪ್ರವೇಶವೆಂದೆ. ತನ್ನ ಆಚಾರ, ನನ್ನ ವೈಚಾರಿಕತೆ ಎರಡನ್ನು ಗೌರವಿಸುವ ಅವ್ವ, ಗೃಹಶಾಂತಿಯ ಪೂಜೆ ಮಾಡುವುದು ಅಂತಸ್ತಿನ ಪ್ರದರ್ಶನಕ್ಕಲ್ಲ. ಮನೆ ಕುರಿತಾದ ನಮ್ಮ ಸಂಕಟ ಇವತ್ತಿಗೆ ಪರ್ಲು ಹರಿಯಿತಲ್ಲ; ನೆರವಾದ ಎಲ್ಲರಿಗೂ ಒಳಿತು ಬಯಸುತ್ತ, ಇದ್ದಲ್ಲಿಂದಲ್ಲೆ ಕೈಮುಗಿದು ಕೃತಜ್ಞತೆ ಸಲ್ಲಿಸಲು ನಾವೇ ಮಾಡಿಕೊಳ್ಳುವ ಒಂದು ಅವಕಾಶ ಎಂದಳು. ಅವಳಿಚ್ಛೆಯಂತೆ ಆಯಿತು. ನಾನು ಹೋಗಲಿಲ್ಲ.

ನಮ್ಮಲ್ಲಿ ‘ಈ ಕಡೆ ಬಂದ್ರೆ ಮುದ್ದಾಂ ಮನೆಗೆ ಬಂದೇss ಹೋಗಬೇಕು’ ಅಂತ ತುಂಬು ಗೌರವದಿಂದ ಒತ್ತಾಯ ಮಾಡುತ್ತಾರೆ. ನಾನೂ ಕರೆಯುತ್ತಿದ್ದೇನೆ, “ಈ ಕಡೆ ಬಂದ್ರೆ, ಮನೆಗೆ ಬನ್ನಿ!”

‍ಲೇಖಕರು nalike

May 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Vatsala Patil

    ಜೀವನದಲ್ಲಿ ಇನ್ನೊಂದು ಮೈಲಿಗಲ್ಲು ಸಾಧಿಸಿದ ನಿನಗೆ ಶುಭಾಶಯಗಳು, ನಿನ್ನ ಭಾವನೆಗಳಿಗೆ ಕೊಟ್ಟ ಬರಹ ರೂಪ ತುಂಬಾ ಚೆನ್ನಾಗಿದೆ, ಮನಮುಟ್ಟಿತು. ನಿನ್ನ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಖಂಡಿತ ಆ ಕಡೆ ಬಂದ್ರೆ ನಿಮ್ಮನೆಗೆ ಬಂದೆ ಬರ್ತಿನಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: