ಡಿಜಿಟಲ್‌ ಕನ್ನಡ ಪುಸ್ತಕಗಳು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

ಡಿಜಿಟಲ್ ಕನ್ನಡ ಪುಸ್ತಕಗಳು ಹಾಗೂ ಸಮುದಾಯ

ಕನ್ನಡ ಪುಸ್ತಕಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ವಾಣಿಜ್ಯ ರೂಪದಲ್ಲೇ ಭಾಷೆಯನ್ನೂ, ಭಾಷೆಯ ಸೇವೆಯನ್ನೂ ನೋಡುವ ಸಾಮಾನ್ಯ ವಿಷಯ ನಿಮಗೆ ಕಂಡು ಬಂದಿರಬಹುದು. 

ಇದೆಲ್ಲದರ ನಡುವೆ ಕಳೆದ ಎರಡು ಮೂರು ವರ್ಷಗಳಿಂದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಇತ್ಯಾದಿಗಳಲ್ಲಿದ್ದ ಕನ್ನಡದ ಪಿಡಿಎಫ್ ಪುಸ್ತಕಗಳನ್ನು ಕಾಪಿಡುವ, ಅವುಗಳನ್ನು ಜನರಿಗೆ ಸುಲಭವಾಗಿ ಸಿಗುವಂತೆ ಮಾಡುವ ಸಮುದಾಯ ಸಹಭಾಗಿತ್ವದ (crowd sourcing) ಯೋಜನೆಯಾದ ಪುಸ್ತಕ ಸಂಚಯ (https://pustaka.sanchaya.net) ಮಾಡಿರುವ ಕೆಲಸವನ್ನು ಗಮನಿಸಬೇಕು – ಇದೇ ರೀತಿಯ ಯೋಜನೆಗಳು ವೈಯುಕ್ತಿಕ ಮಟ್ಟದಲ್ಲಿ ಅನೇಕರಿಂದ ಆಗಿದೆ. 

ಇದ್ದೂ ಇಲ್ಲದಂತಾಗಿದ್ದ ಕನ್ನಡ ಪುಸ್ತಕಗಳು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಓಸ್ಮಾನಿಯಾ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿದ್ದ ೬೦೦೦ ಡಿಜಿಟಲೀಕರಿಸಿದ ಪುಸ್ತಕಗಳಿಗೆ ಜನರ ಸಹಾಯದಿಂದ ಅವುಗಳ ಹೆಸರು, ಲೇಖಕರ ಹೆಸರು, ಪ್ರಕಾಶಕರ ಹೆಸರು ಇತ್ಯಾದಿ ಮೆಟಾಡೇಟಾವನ್ನು ಕನ್ನಡೀಕರಿಸಿ – ಇಂಟರ್ನೆಟ್ ಮೂಲಕ ಅವುಗಳ ಸುಲಭ ಲಭ್ಯತೆಗೆ ಈ ಯೋಜನೆ ಕಾರಣವಾಯಿತು.

ಈ ಪುಸ್ತಕಗಳ‌ನ್ನು ಡಿಜಿಟಲೀಕರಿಸಿದ ಮೂಲ ಯೋಜನೆಯ ತಾಣಗಳು ಈಗ ಸಾರ್ವಜನಿಕರಿಗೆ ಲಭ್ಯ ಇಲ್ಲದಿರುವುದನ್ನು ಮನಗಂಡು ಇಷ್ಟೂ ಪುಸ್ತಕಗಳನ್ನು ಇಂಟರ್ನೆಟ್ ಆರ್ಕೈವ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ಇಲ್ಲೂ ಸಹ ಪುಸ್ತಕಗಳ ಮೆಟಾಡೇಟಾ ಕನ್ನಡದಲ್ಲಿರುವುದರಿಂದ ನೇರವಾಗಿ ಗೂಗಲ್ ಸರ್ಚ್ ನಲ್ಲಿ ಕೂಡ ಈ ಕೊಂಡಿಗಳು ಸಿಗುವುದು ಸಾಧ್ಯವಾಗಿದೆ.

ಪುಸ್ತಕ ಸಂಚಯದ ಮೂಲಕ ೬೦೦೦ಕ್ಕೂ ಹೆಚ್ಚು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಓಸ್ಮಾನಿಯಾ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನು ಇಂಟರ್ನೆಟ್ ಆರ್ಕೈವ್ ಮೂಲಕ ಹುಡುಕಿ ಪಡೆಯುವ ಅವಕಾಶವಿದೆ. ಈ ಎಲ್ಲಾ ಪುಸ್ತಕಗಳನ್ನು ಪರಿಪೂರ್ಣ ಇ-ಪುಸ್ತಕ ಆಗಿಸುವ ಕಾರ್ಯವನ್ನೂ ಕೂಡ ಸಂಚಯ (https://sanchaya.org) ಕೈಗೆತ್ತಿಕೊಂಡಿದೆ.

ಇದರ ಜೊತೆಗೆ ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರ ಇತ್ಯಾದಿಗಳು ಪ್ರಕಟಿಸಿರುವ ಪುಸ್ತಕಗಳ ಮಾಹಿತಿಯನ್ನೂ ಇದು ಒದಗಿಸುತ್ತಿದ್ದು, ಜನರನ್ನು ಆಯಾ ಸಂಸ್ಥೆಯ ಜಾಲತಾಣಕ್ಕೆ ಒಯ್ದು ಬಿಡುತ್ತದೆ. ಇದಕ್ಕೆ ಪ್ರಕಾಶಕರು ಹಾಗೂ ಲೇಖಕರು ಸಹಕರಿಸಿದರೆ ಮುಂದೊಂದು ದಿನ ಕನ್ನಡದ ಪುಸ್ತಕಗಳ ಸಂಪೂರ್ಣ ಪರಿವಿಡಿ ದೊರೆಯು‌ವಂತೆ ಮಾಡುವ ಸಾಧ್ಯತೆ ಇದೆ.  

ಈ ಮಧ್ಯೆ ಸಂಚಯ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆ – ಕಾಪಿರೆಟ್ ಹೊರತಾದ ಹಾಗೂ ಲೇಖಕ/ಪ್ರಕಾಶಕರು ತಾವಾಗಿಯೇ ಮುಂದೆ ಬಂದು – ಮುಕ್ತ ಜ್ಞಾನದ (Open Knowledge intiative) ಆಶಯಕ್ಕೆ ಓಗುಡುತ್ತಾ –  ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಅಡಿ ಬಿಡುಗಡೆಗೊಳಿಸಿದ ೧೫೦೦ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಇಂಟರ್ನೆಟ್ ಆರ್ಕೈವ್, ಪಬ್ಲಿಕ್ ರಿಸೋರ್ಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಸಂಚಿ ಫೌಂಡೇಷನ್ ಆಶ್ರಯದಲ್ಲಿ ಡಿಜಿಟಲೀಕರಿಸಿದೆ.

ಇಂಟರ್ನೆಟ್ ಆರ್ಕೈವ್‌ನ ಅಂತರರಾಷ್ಟ್ರೀಯ ಮಟ್ಟದ ಸ್ಕ್ಯಾನರ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು, ಓಪನ್ ಸ್ಟಾಂಡರ್ಡ್ಸ್ ಬಳಸಿ ಸ್ಕ್ಯಾನ್ ಮಾಡಲಾಗಿದೆ. ಎರಡನೇ ಹಂತದಲ್ಲಿ ಈ ಪುಸ್ತಕಗಳನ್ನು ಗೂಗಲ್ ವಿಷನ್ ಎಪಿಐ ಬಳಸಿ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಾಗ್ನಿಷನ್) ತಂತ್ರಜ್ಞಾನ ಬಳಸಿ ಓಸಿಆರ್ ಮಾಡಲಾಗಿದ್ದು, ಎಲ್ಲ ಪುಸ್ತಕಗಳ ಪೂರ್ಣ ಪಠ್ಯ ಯುನಿಕೋಡ್‌ನಲ್ಲಿ ಲಭ್ಯವಾಗಿದೆ ಹಾಗೂ ಈ ಪುಸ್ತಕಗಳು ಇಪಬ್ ಹಾಗೂ ಇತರೆ ಮಾದರಿಗಳಲ್ಲಿ ಲಭ್ಯವಿವೆ.

ಈ ಪುಸ್ತಕಗಳಲ್ಲಿ ನೇರವಾಗಿ ಯುನಿಕೋಡ್‌ನಲ್ಲಿ ಸರ್ಚ್ ಮಾಡಬಹುದು. ಇವುಗಳ ಪಿಡಿಎಫ್‌ನಲ್ಲೂ ಯುನಿಕೋಡ್ ಸರ್ಚ್ ಸುಲಭವಾಗಿ ಕೆಲಸ ಮಾಡುತ್ತದೆ. ಈ ಎಲ್ಲಾ ಪುಸ್ತಕಗಳನ್ನು https://digital.sanchaya.net ಹಾಗೂ https://archive.org/details/ServantsOfKnowledge  ಮೂಲಕವೂ ಸುಲಭವಾಗಿ ಪಡೆಯಬಹುದು.

ಈ ಯೋಜನೆ ಅಡಿಯಲ್ಲಿ ಲಭ್ಯವಾದ ಪುಸ್ತಕಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುವ ಮೂಲಕ ನೇರವಾಗಿ ಪಡೆಯುವುದೂ ಸಾಧ್ಯವಾಗಿದ್ದು, ಇದರ ಮೂಲಕ ಪುಸ್ತಕ ಹುಡುಕಾಟಕ್ಕೆ ವೆಬ್‌ಸೈಟ್‌ಗಳನ್ನು ಮಾತ್ರ ಅವಲಂಭಿಸುವ ಕಷ್ಟ ತಪ್ಪಿಸಲಾಗಿದೆ. 

ಸಮುದಾಯ ಒದಗಿಸಿದ ಇ-ಪುಸ್ತಕಗಳು

ಜಿ. ಟಿ ನಾರಾಯಣರಾವ್ (ಸಮಗ್ರ), ಕೆ. ವಿ. ಸುಬ್ಬಣ್ಣ, ಪಾವೆಂ ಆಚಾರ್ಯ (ಸಮಗ್ರ), ಚೆನ್ನಪ್ಪ ಎರೇಸೀಮೆ (ಸಮಗ್ರ), ಕೆ.ವಿ. ಅಕ್ಷರ, ಓ.ಎಲ್. ನಾಗಭೂಷಣ ಸ್ವಾಮಿ, ಟಿ. ಆರ್. ಅನಂತರಾಮು, ಎ.ಪಿ. ಮಾಲತಿ (ಸಮಗ್ರ), ಪಾಲಹಳ್ಳಿ ವಿಶ್ವನಾಥ್ ಮುಂತಾದವರ ಕೃತಿಗಳೂ, ೫೦ ವರ್ಷದ ಕಸ್ತೂರಿ ಸಂಚಿಕೆಗಳು, ನೀನಾಸಂ‌ನ ಮಾತುಕತೆ, ಸಂಚಯ, ನಗುವ ನಂದ, ‍ಸಾಕ್ಷಿ, ರುಜುವಾತು, ‍ಕಾನನ, ‍ನವಕರ್ನಾಟಕದ ಹೊಸತು, ‍‍‍ಪಂಚಾಮೃತ. ಸಿದ್ದಗಂಗ ಮಠದ ೫೦ ವರ್ಷಗಳ ತ್ರೈಮಾಸಿಕ, ‍ಕಲ್ಯಾಣ ಕನ್ನಡ, ‍‍ಇತ್ಯಾದಿ ಪತ್ರಿಕೆಗಳೂ ಸೇರಿದ್ದು – ಕೆಲವು ಅಮೂಲ್ಯ ಪ್ರಥಮ ಮುದ್ರಣಗಳು ಜನರ ಒತ್ತಾಸೆಯಿಂದಲೇ ಮುಂದಿನ ತಲೆಮಾರಿಗೆ ಕಾಪಿಡಲು ಲಭ್ಯವಾಗಿವೆ.

ಇತ್ತೀಚೆಗೆ ನವಲುಗುಂದದ ಶಂಕರ ಆರ್ಟ್ಸ್‌ ಮತ್ತು ಕಾಮರ್ಸ್ ಕಾಲೇಜು ಕೂಡ ತನ್ನಲ್ಲಿನ ಅಮೂಲ್ಯ ಹಸ್ತ ಪ್ರತಿಗಳನ್ನು ಈ ಯೋಜನೆಯ ಮೂಲಕ ಡಿಜಿಟಲೀಕರಿಸಿದೆ. 

ಈ ಯೋಜನೆಯ ಮೂಲಕ ಡಿಜಿಟಲೀಕರಿಸಿದ ಪುಸ್ತಕಗಳ ಸಂಖ್ಯೆ ‍ಎರಡೂ ಮುಕ್ಕಾಲು ಸಾವಿರ ದಾಟಿದ್ದು, ೫ ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇದರಲ್ಲಿ ೧೧ ಭಾಷೆಗಳ ಸಾಹಿತ್ಯ ಅಡಗಿದ್ದು, ಕನ್ನಡದ ೧೫೦೦ಕ್ಕೂ ಹೆಚ್ಚು ಪುಸ್ತಕಗಳ ೨ ಲಕ್ಷಕ್ಕೂ ಹೆಚ್ಚಿನ ಪುಟಗಳು ಕನ್ನಡಿಗರಿಗೆ ಮುಕ್ತವಾಗಿ ಲಭ್ಯವಿವೆ. ‍

ಈ ಸಮುದಾಯದ ಕೆಲಸ‌ಗಳು ದಶಕಗಳ ಕನ್ನಡ ಮುದ್ರಣದಲ್ಲಿ ಅಡಗಿದ್ದ ಅನೇಕ ವಿಷಯಗಳನ್ನು ಹುಡುಕಿ ನೋಡಿ ಮತ್ತೆ ಆಸ್ವಾದಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಸಂಖ್ಯೆ ಸಾವಿರ, ಲಕ್ಷಗಳನ್ನು ದಾಟಬೇಕಿದೆ. 

ಮುಕ್ತ ಜ್ಞಾನವನ್ನು ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ

ಪಬ್ಲಿಕ್ ಡೊಮೇನ್‌ನಲ್ಲಿರುವ ಕನ್ನಡ ಪುಸ್ತಕಗಳನ್ನು ಉತ್ತಮ ತಾಂತ್ರಿಕ ಶಿಷ್ಟಾಚಾರಗಳನ್ನು ಅಳವಡಿಸಿಕೊಂಡಿರುವ ವೇದಿಕೆಗಳ ಮೂಲಕ (ಉದಾ: ಇಂಟರ್ನೆಟ್ ಆರ್ಕೈವ್) ಲಭ್ಯವಾಗಿಸಲು ನಮ್ಮ ಸರ್ಕಾರೀ ಯೋಜನೆಗಳು ಖಂಡಿತವಾಗಿಯೂ ಆಲೋಚಿಸಬೇಕಿದೆ. ಕಣಜ ಹಾಗೂ ಭಾರತವಾಣಿಯಲ್ಲಿ ಲಭ್ಯ ಪುಸ್ತಕಗಳ ಸಂಖ್ಯೆಯನ್ನು ತಿಳಿದುಕೊಳ್ಳುಲು ತಡಕಾಡಬೇಕಾಗಿದೆ.

ಪುಸ್ತಕಗಳನ್ನು ಹುಡುಕಿ ಓದುವುದು ಮತ್ತೊಂದು ಸಾಹಸ. ಕೆಲವೊಮ್ಮೆ ಈ ತಾಣಗಳು ತೆರೆದುಕೊಳ್ಳುವುದೂ ಇಲ್ಲ. ‌ಇವುಗಳ ಬಗ್ಗೆ ಹಲವಾರು ಬಾರಿ ವಿಚಾರಿಸಿದರೂ, ತಾಂತ್ರಿಕ ನೆರವು ನೀಡಲು ಮುಂದೆ ಬಂದರೂ ಕೆಳುವ ಸ್ಥಿತಿಯಲ್ಲಿ ಯೋಜನೆ ಇಲ್ಲ ಎನಿಸುತ್ತದೆ.

ಸಾರ್ವಜನಿಕರಿಗೆ ಮುಕ್ತವಾಗಿಸಿದ ಪುಸ್ತಕಗಳಿಗೆ ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಬಳಸುವ ಶಿಷ್ಟತೆಯನ್ನು ವಿಶ್ವದ ಅನೇಕ ದೇಶಗಳ ಸರ್ಕಾರಗಳು, ವಿಶ್ವವಿದ್ಯಾನಿಲಯಗಳು, ಜೊತೆಗೆ ನಮ್ಮ ದೇಶದ ಐಐಟಿ, ಒಡಿಸ್ಸಾ, ಕೇರಳ ಸರ್ಕಾರಗಳಂತೆ ಕರ್ನಾಟಕ ಸರ್ಕಾರವೂ ಬಳಸುವ ಮನಸ್ಸು ಮಾಡಬೇಕಿದೆ.

ಇದು ಡಿಜಿಟಲ್ ರೂಪದಲ್ಲಿರುವ ಪುಸ್ತಕಗಳನ್ನು ಬಳಸುವವರು ಯಾವ ಹಕ್ಕು ಹೊಂದಿರುತ್ತಾರೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುವ ಹಾಗೂ ಅದನ್ನು ಕಾನೂನು, ಸಾಮಾನ್ಯರ ಪರಿಭಾಷೆ ಹಾಗೂ ಯಾಂತ್ರಿಕ ಪರಿಭಾಷೆಯಲ್ಲೂ ತಿಳಿಸುವ ಸಾಧ್ಯತೆಗಳನ್ನು ನಮ್ಮ ಸರ್ಕಾರೀ ಯೋಜನೆಗಳಿಗೆ ಒದಗಿಸುತ್ತದೆ.

‍ಲೇಖಕರು ಓಂಶಿವಪ್ರಕಾಶ್

November 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶರಣಗೌಡ

    ಕನ್ನಡದ ಪುಸ್ತಕ ಹೋಸತನ ತರುತ್ತಿವೆ. ಓದುವವರಿಲ್ಲದೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: