“ನನ್ನ ಹೆಸರೇ ಇಡಿ ಇದ್ಕೆ” ಎಂದಳು ‘ಕುಸಲೆ’

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಹೊಗೆಸೊಪ್ಪು ಅಗಿದಗಿದು ಕಲ್ಲಂಗಡಿ ಬೀಜದಂತಾದ ತನ್ನ ನಾಕು ಹಲ್ಲನ್ನು ಲೋಕದ ಮುಂದಿಟ್ಟು ಮಾತುಮಾತಿಗೆಲ್ಲ ಹ್ಹೋ.. ಹ್ಹೋ.. ಅಂತ ನಗುವ ‘ಕುಸಲೆ’ ನಮ್ಮ ಮನೆಗೆ ಬರದೇ ಈ ದೀಪಾವಳಿಗೆ ಏಳು ವರ್ಷಗಳಾದವು. ಅದಕ್ಕೂ ಹಿಂದಿನ ಇಪ್ಪತ್ತೆರಡು ವರ್ಷದವರೆಗೆ ಅವಳು ನಮ್ಮ ದನದ ಕೊಟ್ಟಿಗೆಯ ಖಾಯಂ ಒಡನಾಟಗಾರ್ತಿ.

ಚೌಕದಳ್ಳಿಯ ಯಾವ ಸಂಬಂಧಿಕರ ಮನೆಗೆ ಹೋದರೂ ಒಂದು ರಾತ್ರಿ ಮಾತ್ರ ಉಳಿದು, ನಮ್ಮ ಕೆಂಪಿ, ಸೇವಂತಿ, ಕುಸಲೆಯರ (ದನಗಳು) ಧ್ಯಾಸಕ್ಕೆ ಬೆಳ್ಳಿ ಮೂಡಿದ್ದೇ ಓಡಿ ಬಂದುಬಿಡುವವಳು ಅವಳು. ಅವಳ ಹೆಜ್ಜೆಯ ಸಪ್ಪಳ ಕೊಟ್ಟಿಗೆಯ ಸುತ್ತಮುತ್ತ ಕೇಳಿದರೂ ಸಾಕು ಕೊಟ್ಟಿಗೆಯೊಳಗೆ ತುಸು ಹೆಚ್ಚೇ ಎನ್ನಿಸುವ ಸರಬರ ಸಂಚಾರ, ಉಸಿರ ಹೂಂಕಾರ.ಈ ಸದ್ದೇ ನಮಗೆ “ಕುಸಲೆ ಬಂದಳು” ಎಂಬುದಕ್ಕೆ ವಾರ್ತಾಚರ. 

ಕುಸಲೆ ಹಾಲಕ್ಕಿ ಹೆಂಗಸು. ಬೆಳಿಗ್ಗೆ ಆರಕ್ಕೆ ನಮ್ಮ ಕೊಟ್ಟಿಗೆಗೆ ಬಂದು ಅದಾಗಲೇ ಹಾಲು ಕರೆದು ಮುಗಿಸಿದ್ದ ದನದ ಸಮೇತ ಉಳಿದ ದನಗಳಿಗೂ ನೀರುಕೊಟ್ಟು ಅವುಗಳನ್ನು ಬಿಟ್ಟು ಹೊರಗೆ ಹೊಡೆದಾದ ಮೇಲೆ ಸಗಣಿ ತೆಗೆದು, ನೀರು ಹಾಕಿ ಸಿಮೆಂಟು ಕೊಟ್ಟಿಗೆ ತೊಳೆದು ತಾನು ಬರುವಾಗ ತಂದ ಸೊಪ್ಪನ್ನು ಕೊಟ್ಟಿಗೆಯಲ್ಲಿ ಹರಡಿದ ನಂತರ ಮಳೆಗಾಲವಾಗಿದ್ದರೆ ಒಂದು ಬುಟ್ಟಿ ಹುಲ್ಲು ಕೊಯ್ದಿಟ್ಟು ಚಾ ಕುಡಿದು ಮನೆಗೆ ಹೋಗುವ ನಿರಂತರ ಕಾರ್ಯದವಳು.

ನಮ್ಮ ಕೊಟ್ಟಿಗೆಯ ಕೊನೆಯ ದನದ ಹೆಸರೂ ಕುಸಲೆಯೇ. ಊರ ಗಿಡ್ಡ ತಳಿಯ ದನಕ್ಕೆ ಜೆರ್ಸಿ ತಳಿಯ ಶುಕ್ರವನ್ನು ಇಂಜೆಕ್ಟ್ ಮಾಡಿ ಹುಟ್ಟಿದ ಕರು ಅದು. “ನನ್ನ ಹೆಸ್ರೇ ಇಡೀ ಇದ್ಕೆ” ಎಂಬ ಹಾಲಕ್ಕಿ ಕುಸಲೆಯ ಪ್ರೀತಿಯ ಆಜ್ಞೆಯನ್ನು ನಾವು ಮೀರುವುದುಂಟೇ ? ಹಾಗಾಗಿ ದಿನವೂ ನಮ್ಮ ಮನೆಯಲ್ಲಿ ಇಬ್ಬರು ಕುಸಲೆಯರ ಸಹವಾಸ.

ನಾನು ಮದುವೆಯಾಗಿ ಬಂದಾಗ ಪುಟ್ಟ ಕರು ಕುಸಲೆಗೆ ಎರಡು ವರ್ಷ. ಪಕ್ಕಾ ಜೆರ್ಸಿಯ ಹಾಗೆ ಕಾಣುತ್ತಿದ್ದ ಅದನ್ನು ಎಲ್ಲರೂ ಕೊಂಡಾಟ ಮಾಡುವವರೇ. ನಾಯಿ, ಬೆಕ್ಕು, ದನ ಹೀಗೆ ಎಲ್ಲದರೊಟ್ಟಿಗೂ ಏನೋ.. ಹೋಗೋ.. ಬಾರೋ..ಮುಂತಾಗಿ ಖಾಯಂ ಮಾತಾಡುವ ಪೈಕಿ ನಾವು. ಹೇಳಿದ್ದು ಅರ್ಥಮಾಡಿಕೊಂಡು ಅವೂ ಅದಕ್ಕೆ ತಕ್ಕಂತೆ ವರ್ತಿಸುವುದು ಕೂಡ ನಮಗೆ ರೂಢಿಗತ ವಿಷಯ.

ವರ್ಷ ಕಳೆದಂತೆ ಕುಸಲೆ ಕರು ದೊಡ್ಡದಾಗಿ, ಏಳೆಂಟು ಕರುಹಾಕಿ, ಹಾಲು ಹೈನ ಮನೆತುಂಬಿ ತುಳುಕಿ, ನಮಗೆ ಸಾಕಲಿಕ್ಕೆ ಇನ್ನು ಮುಂದೆ ಕಷ್ಟ ಎಂಬ ಕಾರಣಕ್ಕೆ ಅದರ ಹುಟ್ಟುಹುಟ್ಟಿದ ಕರುಗಳನ್ನು ಸ್ವಲ್ಪ ದೊಡ್ಡಾದದ್ದೇ ಹಾಲಕ್ಕಿ ಕುಸಲೆಗೊಂದೆರಡು.. ಮತ್ತಿತರರಿಗೆ  ಕೊಟ್ಟುಬಿಟ್ಟಿದ್ದೆವು. ಊರ ಕಡೆಗೆ ಪುಟ್ಟ ದನಕರುಗಳನ್ನು ಮಾರುವ ಪದ್ಧತಿ ಬಹಳ ಕಡಿಮೆ.ಬೇರೆಯವರಿಗೆ ಕೊಡುವುದಿದ್ದರೂ”ಚಂದಾಗಿ ಸಾಕಬೇಕು ಮತ್ಯಾರಿಗೂ ಮಾರುಕಿಲ್ಲ” ಎಂಬ ಭಾಷೆ ತಕ್ಕೊಂಡು ಶಾಸ್ತ್ರಕ್ಕೆ ಐವತ್ತು ರೂಪಾಯಿ ‘ಬಯಾನ’  ಹಿಡಿದು ಕೊಡುವುದು ಅಷ್ಟೇ.

ಕುಸಲೆ ದನಕ್ಕೆ ಅದರ ಕೊನೆಗಾಲದ ವರ್ಷಗಳಲ್ಲಿ ಹೊಟ್ಟೆಯ ಎಡಬದಿಯ ಜಠರ ದೊಡ್ಡ ಕೊಡಪಾನದ ಹಾಗೆ ಉಬ್ಬುತ್ತ ಬಂದಿತ್ತು. ಆ ಕಡೆ ಒಜ್ಜೆಯಾಗಿ.. ಆಗಿss.. ಅದು ಒಮ್ಮೊಮ್ಮೆ ಎಡಬದಿಗೆ ಹೊರಳಿ ಕಾಲು ಮೇಲಾಗಿ ಬಿದ್ದುಬಿಡುತ್ತಿತ್ತು. ಎದ್ದೇಳಲು ಆ ಭಾರ ಅದನ್ನು ಬಿಡುತ್ತಿರಲಿಲ್ಲ. ಯಾರಾದರೂ ನಾಕು ಜನ ಬಂದು ಎಬ್ಬಿಸಬೇಕು ಆಗ.

ಅದಕ್ಕೆ ವಯಸ್ಸಾದ ಸಲುವಾಗಿಯೋ.. ಅಥವಾ ಇಷ್ಟುದೊಡ್ಡ ಆಪರೇಶನ್ನಿಗೆ ಹೆದರಿಯೋ.. ನಮ್ಮ ತಾಲೂಕಾಸ್ಪತ್ರೆಯ ಪಶುವೈದ್ಯರು ಅದರ ಹೊಟ್ಟೆಯನ್ನು ಕಿಟ್ಟಲು ಮನಸ್ಸು ಮಾಡಲಿಲ್ಲ. ಕುಸಲೆಯೂ ತಾನು ಮಲಗಿದರೆ ಮತ್ತೆ ಎದ್ದೇಳಲು ಆಗದು ಎಂಬ ಭಯಕ್ಕೆ ಒಂದಿಡೀ ವರ್ಷ ನಿಂತಲ್ಲೇ ಉಳಿದಳು.

ಹೀಗಾದ ಮೇಲೆ ಮತ್ತೆ ಹೇಗೆ ಮಾಡುವುದು? ಹೊಸಮನೆಗೂ ಕೊಟ್ಟಿಗೆಗೂ ಹದಿನೈದಿಪ್ಪತ್ತು ಮಾರು ದೂರ ನಮಗೆ. ಒಂದಷ್ಟು ದಿನ, ಅಥವಾ ವರ್ಷವೇ ಅಂದುಕೊಳ್ಳಿ. ರಾತ್ರಿ ಎದ್ದೆದ್ದು ಹೋಗಿ ಕೊಟ್ಟಿಗೆ ಬಾಗಿಲು ತೆಗೆದು ಕುಸಲೆ ನಿಂತಿದ್ದಾಳಾ..ಬಿದ್ದಿದ್ದಾಳಾ..ನೋಡುವುದೇ ಆಯ್ತು ನನಗೂ..ನನ್ನ ಗಂಡನಿಗೂ.. ಬಿದ್ದಾಗ ನಮ್ಮಿಬ್ಬರ ಶಕ್ತಿ ಅದನ್ನು ಮೇಲೆಬ್ಬಿಸಲು ಸಾಲದೇ ಅದರ ಜೊತೆಗೆ ನಾವೂ ಸಗಣಿದಲ್ಲಿ ಬಿದ್ದು ಎದ್ದದ್ದು ಹತ್ತಾರು ಬಾರಿ. ಇರಲಿ.. ಭತ್ತ ಬೆಳೆವ ಮೂಲವಾದ ಸಗಣಿಗೂ.. ಗೊಬ್ಬರದ ಗುಂಡಿಗೂ.. ಪೂಜೆ ಮಾಡಿಕೊಂಡು, ಹಬ್ಬದ ಒಂದು ಎಡೆ ಇಟ್ಟುಕೊಂಡೇ ಬಂದವರು ನಾವು.

ಹೀಗೆಲ್ಲ ಆಗುತ್ತ ‘ಸಾಯಲಿ ಕಷ್ಟ’ ಎನ್ನುತ್ತ ಕೊನೆಗೊಂದು ದಿನ ಕುಸಲೆಯನ್ನು ಕೊಟ್ಟಿಗೆಯಿಂದ ತಂದು ‘ಬಿದ್ದರೆ ಗೊತ್ತಾಗಲಿ’ ಎಂದು ನಮ್ಮ ಬೆಡ್‌ರೂಮಿನ ಕಿಟಕಿಯಾಚೆಗಿನ ತೆಂಗಿನಮರಕ್ಕೆ ಕಟ್ಟಿಕೊಂಡೆವು. ಮತ್ತು ಕಿಟಕಿಯನ್ನು ತೆರೆದೇ ಇಟ್ಟುಕೊಂಡೆವು. ಬದುಕು ಒಂಚೂರು ಸರಳವಾಯ್ತು ಆಗ ಕುಸಲೆಗೂ ನಮಗೂ. ಹೀಗೇ ಬೀಳುತ್ತ ಏಳಿಸುತ್ತ ಕುಸಲೆ ಒಂದು ದಿನ ಉಸಿರು ನಿಲ್ಲಿಸಿದಳು.

ಮಕ್ಕಳು ಅತ್ತು, ದೊಡ್ಡವರು ಕಣ್ಣೀರು ಹಾಕಿ ಮುಗಿಯುವ ಹೊತ್ತಿಗೆ ಸುದ್ದಿ ಗೊತ್ತಾಗಿ ಹಾಲಕ್ಕಿ ಕುಸಲೆಯನ್ನು ಅವಳ ಮಗ ಕರೆದು ತಂದ. ಅಲ್ಲಿಗೆ ಅವಳು ವಯಸ್ಸಾದ ಕಾರಣಕ್ಕೆ ನಮ್ಮನೆಯ ಕೊಟ್ಟಿಗೆ ಕೆಲಸಕ್ಕೆ ಬರದೇ ಎರಡು ವರ್ಷ ಗತಿಸಿತ್ತು. ಆ ಕುಸಲೆ ಈ ಕುಸಲೆಯ ಮೇಲೆ ಬಿದ್ದು ಬೊಬ್ಬೆ ಹಾಕಿದಳು.

ಹಿಂದಿನದೆಲ್ಲ ನೆನಪಿಸಿ ಪುನರುಕ್ತಿಸುತ್ತ ಜೇಸಿಬಿ ತರಿಸಿ ಹೊಂಡ ತೋಡಿ ಮಣ್ಣು ಮಾಡುವ ತನಕವೂ ಈ ಕುಸಲೆಯನ್ನು ತಬ್ಬಿಕೊಂಡು ಇದ್ದು ನಂತರ ಮನೆಗೆ ಹೋದಳು.

ಕೆಲ ದಿನಗಳಾದ ಮೇಲೆ ಮಕ್ಕಳು ಕುಸಲೆ ದನವನ್ನು ಬಹಳ ನೆನಪು ಮಾಡುತ್ತಾರೆಂಬ ಕಾರಣಕ್ಕೆ ಹಾಲಕ್ಕಿ ಕುಸಲೆಯ ಮನೆಯ ಕೊಟ್ಟಿಗೆಗೆ ಕರೆದುಕೊಂಡು ಹೋದರೆ.. ಈಗ ಪುಟ್ಟ ಕರುಗಳ ಅಮ್ಮಂದಿರಾಗಿದ್ದವು ನಾವು ಕೊಟ್ಟ ಎರಡು ದನಗಳು. “ಹೆಸರೇನೋ ಹನುಮಾ ಇವುಗಳದು” ಎಂದರೆ “ಒಂದು ದೊಡ್ಡ ಕುಸ್ಲೆ ಇನ್ನೊಂದು ಸಣ್ಣ ಕುಸ್ಲೆ” ಎಂದ ಕುಸಲೆಯ ಮಗ.

ದನಗಳ ಹೊರತು ದೀಪಾವಳಿ ಹಬ್ಬವಿಲ್ಲ ಅಂದುಕೊಂಡ ಮನೆಯಲ್ಲಿ ಈಗ ಕುಸಲೆ ದನ ಇಲ್ಲ. ಹಾಗೇ ಈ ಮೂರೂವರೆ ದಿನದ ಹಬ್ಬಕ್ಕೆ ಬೇಕಾದ ಹತ್ತು ಹಲವು ಗಿಡಮೂಲಿಕೆ, ಮರದ ಚಕ್ಕೆ, ನಾರು ಬೇರು ವಾರ ಮೊದಲೇ ಕೂಡಿಸಿಕೊಡುತ್ತಿದ್ದ ಹಾಲಕ್ಕಿ ಕುಸಲೆ ಕೂಡ ಇಲ್ಲ. ಇವರಿಬ್ಬರೂ ಇಲ್ಲದಿದ್ದರೂ ನನಗೆ ದೀಪಾವಳಿ ಈಗಲೂ ಸಾಗುವುದು ಈ ಇಬ್ಬರ ಹೆಸರಿನಲ್ಲೇ. ಅವರಿಬ್ಬರನ್ನು ನೆನಪಿಸಿಕೊಳ್ಳುತ್ತ…

ಅಂಕೋಲೆ ದೀಪಾವಳಿ

ಅನಾದಿಕಾಲದಿಂದ ಮದ್ದು ಕುಡಿವ ಹಬ್ಬವಾದ ದೀಪಾವಳಿ ಈಗ ಹದಿನೈದಿಪ್ಪತ್ತು ವರ್ಷದಲ್ಲಿ ಮದ್ದು ಸುಡುವ ಹಬ್ಬವಾಗಿ ಪೂರ್ತಿ ಮಾರ್ಪಾಡಾಗಿದೆ. ಕಹಿಬೇವು, ಕಹಿಜೀರಿಗೆ, ತಗಟೆ, ಕಿರಾತಕಡ್ಡಿ, ಹಿಂಡ್ಲಿಕಾಯಿ ಮುಂತಾದ ಎಲ್ಲ ವಸ್ತುಗಳನ್ನು ಅರೆದು ತಯಾರಿಸಿದ ಯಮಕಹಿಯನ್ನು ದೀಪಾವಳಿಯ ದಿನ ಕುಡಿದರೆ ಮನೆಮಂದಿಯ ಹೊಟ್ಟೆಹುಳಗಳೆಲ್ಲ ವಾರದಲ್ಲಿ ಖಾಲಿಯಾಗಿಬಿಡಬೇಕು ಹಾಗಿರುತ್ತಿತ್ತು ಅದು. ಈಗೆಲ್ಲ ಶಾಸ್ತ್ರಕ್ಕೆ ಅಂತ ಆಗಿದೆ ಎಲ್ಲವೂ.

ನೀರ್ ತುಂಬುದು

ದೀಪಾವಳಿಯನ್ನು ಅಂಕೋಲೆಯವರು ಅದರಲ್ಲೂ ನಾಡವ ಸಮುದಾಯದವರು “ದೇಪಳಗಿ” ಅಂತ ಕರೀತಾರೆ. ಅಳಗಿ ಎಂದರೆ ಕರಿಗೆ ಅಥವಾ ಮಡಿಕೆ. ದೀಪ ಮತ್ತು ಕರಗಿ ಕುಳ್ಳಿಸುವುದು ಪ್ರಧಾನವಾದ ಕಾರಣಕ್ಕೆ ಈ ಹೆಸರು ಬಂದಿರಬಹುದು. ಆಶ್ವೀಜ ಬಹುಳ ತ್ರಯೋದಶಿಯಿಂದ  ಕಾರ್ತಿಕ ಶುದ್ಧ ಪ್ರತಿ ಪದದವರೆಗೆ ನಡೆವ ಈ ಹಬ್ಬ ಇಲ್ಲಿನ ಕೃಷಿಕರಿಗೆ ಎಲ್ಲ ಹಬ್ಬಕ್ಕಿಂತ ತುಸು ವಿಶೇಷವಾದುದು.

ನೆಟ್ಟಿ ಕೆಲಸ, ಕಳೆ ಕೀಳುವುದು ಎಲ್ಲ ಮುಗಿದು ಗದ್ದೆ “ಹೊಡೆಯಾಡು”ತ್ತಿರುವ ಸಮಯ ಇದು. ಕೆಲವೊಮ್ಮೆ ಭತ್ತದ ಬಣಿವೆ ಹಾಕಿಯೂ ಮುಗಿದಿರುತ್ತದೆ. ಗಂಗಾಷ್ಟಮಿ ದಿನವನ್ನು ನೀರು ತುಂಬುವುದು ಅಥವಾ ಬೋರಜ್ಜಿ(ಬೂರಿ ದೇವರು)ಬರುವ ದಿನ ಎಂದು ಕರೆಯುತ್ತಾರೆ. (ಈ ಸಲ ಅಧಿಕ ಮಾಸ ಬಂದು ದಿನಗಳು ಚೂರು ಹಿಂದುಮುಂದಾಗಿದೆ) ಆ ದಿನ ಮನೆಯಲ್ಲಿ ಬೋರಜ್ಜಿ ಕುಳ್ಳಿಸುವ ಸ್ಥಳವನ್ನೂ ಅದರ ಹಿಂದಿನ ಗೋಡೆಯನ್ನೂ ಸಾರಿಸಿ ಅದು ಒಣಗಿದ ಮೇಲೆ ಗೋಡೆಗೆ ಸೇಡಿಯ ದಪ್ಪ ನೀರಿನಿಂದ ಹಾಗೂ ಕೆಂಪು ಜಾಂಜಿನಿಂದ ಆಯತಾಕಾರದ ಜಾಗದಲ್ಲಿ ತೆಂಗಿನಕಾಯಿ ಕತ್ತದ ಸುಂಬಿನಿಂದ ಅರಳಿಕಟ್ಟೆಯ ಹಲಿಯನ್ನು ಹೊಯ್ಯುತ್ತಾರೆ.

ನಾಲ್ಕೂ ತುದಿಗೆ ಸರಪಳಿ ಬಿಡಿಸುತ್ತಾರೆ. ಈಗೆಲ್ಲ ಗುಡಿಗಾರರ ಮನೆಗೆ ಹೋಗಿ ರೆಡಿಮೇಡ್ ಹಲಿ ಚಿತ್ರ ತಂದು ಅಂಟಿಸಿಬಿಡುತ್ತಾರೆ.. ಇಲ್ಲಾ ಬ್ರಷ್ ಬಣ್ಣ ಉಪಯೋಗಿಸಿ ಹಾಳೆಯಲ್ಲಿ ಇವೆಲ್ಲವನ್ನು ಬಿಡಿಸಿ ಅಂಟಿಸಿಬಿಡುವುದೂ ಇದೆ. ಹಲಿ ಹೊಯ್ದಾದ ಮೇಲೆ ತ್ರಯೋದಶಿಯ ಅದೇ ದಿನ ಸಂಜೆ ಹಂಡೆ ಒಲೆಗೆ ಸಗಣಿ ಸಾರಿಸಿ ಶೇಡಿಯ ಚೌಕಳಿ ಪಟ್ಟೆ ಬಳಿದು.. ಹಂಡೆಯನ್ನು ಹುಳಿ ಮತ್ತು ಬೂದಿಯಿಂದ ಹಿಡಕಿ (ತಿಕ್ಕಿ ತೊಳೆದು) ಅದರ ಮೇಲೆಯೂ ಶೇಡಿಯ ಹಲಿ ಹೊಯ್ದು ಕುತ್ತಿಗೆಗೆ ಹಿಂಡ್ಲಿಕಾಯಿ (cucumis trigonus) ಸಹಿತದ ಬಳ್ಳಿ ಕಟ್ಟಿ ಮತ್ತೊಂದು ಗೊಂಡೆ( ಚೆಂಡು)ಹೂವಿನ ಮಾಲೆ ಸುತ್ತಿ ಒಲೆ ಮೇಲಿಟ್ಟು ಹಂಡೆಯ ಹೊಟ್ಟೆಯೊಳಗೆ ವೀಳ್ಯದೆಲೆ ಜೋಡು ಹಾಕಿ ಐದಾರು ತರದ ಮರದ ಚಕ್ಕೆ ಹಾಕುತ್ತಾರೆ.

ನಂತರ ಬಾವಿಯಿಂದ ಹೊಸ ನೀರು ತರುವ ಕೊಡಪಾನಕ್ಕೂ ಇದೇ ರೀತಿಯ ಉಪಚಾರ ನಡೆಯುತ್ತದೆ.. ಮೂರುಸಂಜೆ ಹೊತ್ತಿಗೆ ದೀಪ ಹಚ್ಚಿದ ಹರಿವಾಣದೊಂದಿಗೆ ಮನೆಯೊಡತಿ ಬಾವಿಕಟ್ಟೆಗೆ ಆ ಕೊಡಪಾನದೊಂದಿಗೆ ಹೋಗಿ ನಾಲ್ಕೂ ದಿಕ್ಕಿಗೂ ಬೆಳಗುತ್ತಿರುವ ಹಣತೆಯಿಟ್ಟು ಹಲಿ ಹೊಯ್ದು ಪೂಜೆ ಮಾಡುತ್ತಾಳೆ.

“ಗಂಗವ್ವ ತಾಯಿ ಸದಾ ತುಂಬಿ ತುಳುಕವ್ವ” ಅಂತ ಕೈ ಮುಗಿದು ಬೇಡುತ್ತಾಳೆ. ಬಾವಿಯ ಹೊಟ್ಟೆಗೊಂದು ಈಳೆಪಟ್ಟಿ ಬಿಟ್ಟು ಗಂಧಾಕ್ಷತೆ ಹಾಕಿ ಹೊಸ ನೀರು ತುಂಬಿಕೊಂಡು ಬಂದು ಹಂಡೆಗೆ ಹೊಯ್ಯುತ್ತಾಳೆ. ಈ ಸಮಯದಲ್ಲಿ ಮನೆ ಮಗ ಡೆಂವಟೆ (ಜಾಗಟೆ) ಹೊಡೆಯುತ್ತ ಅವಳಿಗೆ ಜೊತೆಯಾಗಿರುತ್ತಾನೆ.

ಹಂಡೆ ತುಂಬಿಯಾದ ಮೇಲೆ ಒಂದು ಕೊಡ ಹೊಸನೀರು ಒಳಗೂ ಬರುತ್ತದೆ. ತ್ರಯೋದಶಿ ಹಿಂದಿನ ದಿನ ಕುಂಬಾರ ಮನೆಯಿಂದ ತಂದ ಎರಡು ಹೊಸಕರಿಗೆಗಳನ್ನು ತ್ರಯೋದಶಿ ದಿನ ಸಂಜೆ ಶೇಡಿಬಳಿದು ಜಾಂಜಿನಿಂದ ಹಲಿಬಿಡಿಸಿ ತುಳಸಿ ಮನೆಯಲ್ಲಿ ಹೊಸ ಹುಲ್ಲಿನ ಇರಿಕೆಯ ಮೇಲೆ ಇಟ್ಟಿರುತ್ತಾರೆ.

ನಂತರ ಕರಿಗೆಯ ಕುತ್ತಿಗೆಗೆ ಕಟ್ಟಲು ಕಾಡು ಸೆಣಬು ನಾರುಪಟ್ಟಿಯಲ್ಲಿ ದಬ್ಬಣದಿಂದ ಗೊಂಡೆಹೂ, ಹಿಂಡ್ಲಿಕಾಯಿ, ತಗಟೆ ಸೋಡಿಗೆ, ಮಲವತ್ತರ ಗೊಂಡೆ ಮುಂತಾದವೆಲ್ಲ ಸುರಿದು ಸಜ್ಜು ಮಾಡುತ್ತಾರೆ. ರಾತ್ರಿ ಊಟಕ್ಕೆ ಮೊದಲು ಎರಡೂ ಕರಿಗೆಗಳನ್ನು ಇರಿಕೆ ಸಮೇತ ಒಳಗೆ ತಂದು ಬೋರಜ್ಹಿ ಕುಳ್ಳಿಸುವ ಜಾಗದಲ್ಲಿ ಇಡುತ್ತಾರೆ.

ಒಂದು ಕರಿಗೆಯ ಹೊಟ್ಟೆಯೊಳಗೆ ಹೊಸನೀರು, ಐದಾರು ಜಾತಿಯ ಮರದ ಚಕ್ಕೆ, ಹಸಿ ಅರಶಿನದ ಗಡ್ಡೆ ಹಾಕಿ ಕರಿಗೆಯ ಬಾಯಿಗೆ ಫಲ ಬಂದ ಮಾವಿನ ವೃಕ್ಷದ ಕುಡಿ ಇಟ್ಟು ಅದರ ಮೇಲೆ ಕಾಡಿಗೆ ಕಪ್ಪಿನಿಂದ ಕಣ್ಣು ಮೂಗು ಬಿಡಿಸಿದ ಮೊಗ್ಗೆಕಾಯಿ ಇಟ್ಟು ಬೋರಜ್ಜಿ ಎಂದು ಕರೆಯುತ್ತಾರೆ. ಇನ್ನೊಂದು ಕರಗಿಯ ಹೊಟ್ಟೆಯೊಳಗೆ ಬೆಳ್ತಿಗೆ ಅಕ್ಕಿ, ನಾಣ್ಯಗಳು, ಚೂರು ಬಂಗಾರ ಹಾಕಿ ಬಾಯಿಗೆ ಮಾವಿನ ತಿಳ್ಳು ಇಟ್ಟು ಅದರ ಮೇಲೆ ಸುಲಿದ ಜುಟ್ಟಿರುವ ತೆಂಗಿನಕಾಯಿ ಜುಟ್ಟು ಮೇಲಿರುವಂತೆ ಇಟ್ಟು ಅದನ್ನು ಲಕ್ಷ್ಮೀ ಎಂದು ಕರೆಯುತ್ತಾರೆ.

ಹೀಗೆ ಎರಡೂ ಕರಿಗೆ ಕುಳ್ಳಿಸಿಯಾದ ಮೇಲೆ ಬೋರಜ್ಜಿಯ ತಲೆಗೆ ಹೂವಿನ ಜಡೆಯನ್ನು ಮುಡಿಸಿ ಲಕ್ಷ್ಮಿಯ ತಲೆಗೆ ಹೊಸ ವಸ್ತ್ರವನ್ನು ಇಟ್ಟು ಡೆಂವಟೆ ಹೊಡೆಯುತ್ತ ಪೂಜೆ ಮಾಡಿದ ನಂತರ ಅರಶಿನ ಎಲೆಯಲ್ಲಿ ಬೋರಜ್ಹಿಗೆ ಮೊಗ್ಗೆಕಾಯಿ(ಮಂಗಳೂರು ಸೌತೆ) ಹಾಕಿ ಮಾಡಿದ “ಬಂಗ್ಲಿರೊಟ್ಟಿ” ಬಡಿಸುತ್ತಾರೆ.. ಮೊದಲ ದಿನ ಒಂದು, ಎರಡನೇ ದಿನ ಐದು, ಮೂರನೇ ದಿನ ಏಳು, ನಾಲ್ಕನೇ ದಿನ ಒಂಭತ್ತು ಅರಶಿನ ಎಲೆಗಳ ಮೇಲೆ ಬೋರಜ್ಜಿಗೆ ಪದಾರ್ಥಗಳನ್ನು ಬಡಿಸಲಾಗುತ್ತದೆ. 

“ನೀರ್ ಮೀಯುದು”

ಮರುದಿನ ನರಕ ಚತುರ್ದಶಿ. ಇದು ನೀರು ಮೀಯುವ ಹಬ್ಬ. ಮತ್ತು ಈ ದಿನ ಬಲೀಂದ್ರ ಬರುತ್ತಾನೆ ಮನೆಗೆ. ಒಂದು ಮಣೆ ಮೇಲೆ ಶೇಡಿಮಣ್ಣಿನಲ್ಲಿ ಬಲೀಂದ್ರ ದಂಪತಿಗಳನ್ನು ಮಾಡಿ ಆತನ ಕಣ್ಣಿಗೆ ಉದ್ದಿನಕಾಳಿಟ್ಟು ತಲೆಗೆ ಕುಸುಮಾಲೆ ಹೂ ಚುಚ್ಚಿ ಶೃಂಗರಿಸುತ್ತಾರೆ.. ಕೆಂಪು ಜಾಂಜು ಬಳಿಯುತ್ತಾರೆ. ತಂದು ಬೋರಜ್ಜಿಯ ಪಕ್ಕ ಇಡುತ್ತಾರೆ.

ಇದಾದ ನಂತರ ತುಳಸಿ ಮನೆ ಮುಂದೆ ಕೆಮ್ಮಣ್ಣು ಮತ್ತು ಶೇಡಿ ಕಲಸಿ ಗೋಲಾಕಾರದ ದೊಡ್ಡ ಪೀಠ ತಯಾರಿಸುತ್ತಾರೆ. ಅದರ ಮೇಲೆ ಹಿಂಡ್ಲಿಕಾಯಿಗಳನ್ನು ಮುಕ್ಕಾಲು ಭಾಗ ಮೇಲೆ ಕಾಣುವಂತೆ ಹುಗಿದು “ಹ್ವೊಂಡೆ” ಎಂದು ಕರೆವ ಬಲೀಂದ್ರನ ಕೋಟೆಯನ್ನು ಮಾಡುತ್ತಾರೆ. ಈ ಕೋಟೆಯ ಮೇಲೆ ಬೆಳಿಗ್ಗೆ ಮತ್ತು ಸಂಜೆ ಒಂದಿಷ್ಟು ಹೊತ್ತು ಬಲೀಂದ್ರನನ್ನು ತಂದು ಕೂಡಿಸಿ ಮತ್ತೆ ಒಳಗೆ ತೆಗೆದುಕೊಂಡು ಹೋಗುತ್ತಾರೆ.

ಹ್ವೊಂಡೆ ಮಾಡಿದ ನಂತರ  ಕಹಿ ಮದ್ದು ಕುಡಿದು ಮೈಗೆಲ್ಲ ಅರಶಿನ ಎಣ್ಣೆ ಮೆತ್ತಿಕೊಂಡು ಹಿಂದಿನ ದಿನ ಸಂಜೆ ತುಂಬಿದ ನೀರಿನಲ್ಲಿ ಸ್ನಾನ ಮಾಡಿ ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸುತ್ತಾರೆ. ತುಳಸಿ, ಬಲೀಂದ್ರ-ಬೋರಜ್ಜಿ ಪೂಜೆ ಮಾಡಿ ಮನೆ ಹೊಸಿಲಲ್ಲಿ ಶೇಡಿ ಗೆರೆ ಹಾಕಿದ ಚೌಕದೊಳಗೆ ಇಟ್ಟ ಹಿಂಡ್ಲಿಕಾಯಿಯನ್ನು ಮನೆಮಂದಿಯೆಲ್ಲ ಮೆಟ್ಟುತ್ತಾರೆ.

ಈ ಸಮಯದಲ್ಲಿ ಮನೆಯೊಡತಿ ಅವರಿಗೆ ಅರಶಿನ ಸುಣ್ಣ ಬೆರೆಸಿದ ಕೆಂಪು ನೀರಿನ ಹರಿವಾಣದಲ್ಲಿ ಆರತಿ ಎತ್ತಿ ಆ ನೀರನ್ನು ಅವರ ಹಣೆಗೆ ಹಚ್ಚುತ್ತಾಳೆ. ಆ ಕೆಂಪು ನೀರಿನಲ್ಲಿ ಹಣಕಿ ಮನೆ ಮಂದಿ ಮುಖ ನೋಡುತ್ತಾರೆ. ಇದನ್ನು “ಬಳು ನೋಡುವುದು” ಎನ್ನಲಾಗುತ್ತದೆ. ಮೆಟ್ಟಿದ ಹಿಂಡ್ಲಿಕಾಯಿಯ ಕಹಿಯನ್ನು ಕೊಂಚ ನಾಲಿಗೆಗೆ ತಾಗಿಸಿ ಅದನ್ನು ಮನೆಯ ಕೋಳಿನ ಮೇಲೆ ಎಸೆಯಲಾಗುತ್ತದೆ. ನಂತರ ಎಲ್ಲರೂ ಒಳಬಂದು ಬೆಲ್ಲದ ಅವಲಕ್ಕಿ ಕಲಸಿ ಬೋರಜ್ಜಿಗೆ ಅದನ್ನು ಬಡಿಸಿ ತಾವೂ ಬಾಳೆಲೆ ಮೇಲೆ ಹಾಕಿಕೊಂಡು ಸೇವಿಸುತ್ತಾರೆ.

ಚತುರ್ದಶಿಯ ದಿನ ಸಂಜೆ ದಾಯವಾದಿಗಳು, ಚಿಕ್ಕಪ್ಪ ದೊಡ್ಡಪ್ಪಂದಿರ ಮಕ್ಕಳು, ಸಂಬಂಧಿಕರು ಬೋರಜ್ಜಿ ಬಲೀಂದ್ರರನ್ನು ನೋಡಲು ಬರುತ್ತಾರೆ.. ಕೈ ಮುಗಿದು ಹೋಗುತ್ತಾರೆ. ಸಂಜೆ ಹಿಂಡ್ಲಿಕಾಯಿ ಕೊರೆದು ಒಳಗಿನ ತಿರುಳು ತೆಗೆದು ಹಣತೆಯಾಕೃತಿ ಮಾಡಿ ಅದಕ್ಕೆ ಎಣ್ಣೆ ಬತ್ತಿ ಇಟ್ಟು ದೀಪಬೆಳಗಿಸಿ ಮನೆ ಬಾವಿಕಟ್ಟೆ ಕೊಟ್ಟಿಗೆಯಲ್ಲಿ ಇಡಲಾಗುತ್ತದೆ.

“ಅಮಾಸೆ”

ಮರುದಿನ ಅಮವಾಸ್ಯೆ. ಲಕ್ಷ್ಮೀ ಪೂಜೆ, ವಾಹನಗಳ ಪೂಜೆ, ಮಾಮೂಲಿನಂತೆ  ಬೋರಜ್ಜಿ ಬಲೀಂದ್ರ ಪೂಜೆ, ಬಡಿಸುವಿಕೆ ನಡೆಯುತ್ತದೆ.

“ದೊಡ್ಡ ಹಬ್ಬ”(ದನಬಿಚ್ಚು ಹಬ್ಬ)

ಅಮವಾಸ್ಯೆಯ ಮರುದಿನ ಬಲಿಪಾಡ್ಯ ಇದನ್ನು ದೊಡ್ಡಹಬ್ಬ ಎನ್ನಲಾಗುತ್ತದೆ. ಅಥವಾ “ದನಬಿಚ್ಚು ಹಬ್ಬ” ದನಬೆಚ್ಚಿಸುವ ಕಾರ್ಯಕ್ರಮವಾದ ಈ ದಿನ ಬೆಳಿಗ್ಗೆ ಹಲಸಿನೆಲೆಯ ಕೊಟ್ಟೆರೊಟ್ಟಿ ರೆಡಿಯಾಗಿರುತ್ತದೆ. ದನಗಳನ್ನು ಮೀಯಿಸಿ ಹೊಸ ದಾಂಬು ಕಟ್ಟಲಾಗುತ್ತದೆ. ಬಲೀಂದ್ರ ಪೂಜೆ ಮಾಡಿ ಮತ್ತೆ “ಬಳು” ನೋಡುವ ಶಾಸ್ತ್ರ ಮುಗಿದ ನಂತರ ಬೆಳಿಗ್ಗೆ ಸ್ವಲ್ಪ ಇಟ್ಟ ಕೊಟ್ಟೆ ರೊಟ್ಟಿಯ ದಪ್ಪ ಹಸಿ ಹಿಟ್ಟಿಗೆ ಸಿದ್ದೆಯ ಬಾಯಿ ಒತ್ತಿ ಎಲ್ಲ ದನಕರುಗಳ ಬೆನ್ನಿಗೆ ಗೋಲ ಮುದ್ರೆ ಒತ್ತಲಾಗುತ್ತದೆ.

ಹಾಗೇ ಜಾಂಜಿನ ನೀರಿನಲ್ಲೂ ಸಿದ್ದೆ ಅಚ್ಚಿಕೊಂಡು ಬೆನ್ನಿಗೆ ಮುದ್ರೆ ಒತ್ತಲಾಗುತ್ತದೆ. ನಂತರ ಬೋರಜ್ಜಿಗೆ ಒಡೆದ ತೆಂಗಿನಕಾಯಿ ಗೆರಟೆಗೆ ತೂತು ಮಾಡಿ ಸೊಕ್ಕಿನ ಎತ್ತುಗಳ ಕುತ್ತಿಗೆಗೆ ಕಟ್ಟಲಾಗುತ್ತದೆ. ದನ ಬಿಟ್ಟಾಗ ಎತ್ತಿನ ಕೊರಳಿಗೆ ಕಟ್ಟಿದ ಈ ಕಾಯಿಕಡಿ ಹರಿದು ಕೊಂಡವನನ್ನು ಮಹಾಶೂರ ಎಂದು ಹೊಗಳುತ್ತಾರೆ.

ಅದೇ ರೀತಿ ಎಲ್ಲ ದನಗಳಿಗೂ ಕುತ್ತಿಗೆಗೆ ಅರಶಿನ ಎಲೆಯಲ್ಲಿ ಕೊಟ್ಟೆರೊಟ್ಟಿತುಂಡು ಸುತ್ತಿ ನಾರುಪಟ್ಟಿಯಲ್ಲಿ ಕಟ್ಟಿ ಕುತ್ತಿಗೆಗೆ ಕಟ್ಟುತ್ತಾರೆ. ಹಾಗೂ ಗೊಂಡೆಹೂವು ಮತ್ತು ಹಿಂಡ್ಲಿಕಾಯಿ ಸುರಿದ ಇನ್ನೊಂದು ಮಾಲೆಯನ್ನೂ ಕಟ್ಟುತ್ತಾರೆ. ಕೊಟ್ಟಿಗೆಯ ಕೋಳುಗಂಬಕ್ಕೂ ರೊಟ್ಟಿ ಮಾಲೆ ಮತ್ತು ಗೊಂಡೆ ಮಾಲೆ ಕಟ್ಟಿ ಯಜಮಾನ ಪೂಜೆ ಮಾಡಿ ನಂತರ ದನಗಳಿಗೆ ಪೂಜೆ ಮಾಡುತ್ತಾನೆ. ಜೋರಾಗಿ ಜಾಗಟೆ ಹೊಡೆಯುತ್ತ….

“ಬೆಚ್ಚಬ್ಯೆಡ ಮನೆ, ಬೆದ್ರಬ್ಯೆಡ ಮನೆವರಾಕುಂದ್ ಹುಲ್ಲಾದ್ರು ಒಡೀ ತಂದ್ ಹಾಕ್ವೆ ಉಂಬ್ಳಿ ಹಳ್ಳದ್ ನೀರ್ ಕುಡ್ಕಂಡು ಮನೀಗೇ ಬಾ ಮನೆ”(ಬೆಚ್ಚಬೇಡ, ಬೆದರಬೇಡ ನನ್ನ ಪ್ರೀತಿಯ ದನವೇ.. ವರಹಕ್ಕೊಂದು ಹುಲ್ಲಿನ ಬೆಲೆಯಾದರೂ ನಾನು ನಿನ್ನೊಡೆಯ ತಂದು ನಿನಗೆ ಹಾಕುತ್ತೇನೆ.. ಎಲ್ಲೂ ಹೋಗದೇ ಮೇದು, ಹಳ್ಳದ ನೀರು ಕುಡಿದು ಮತ್ತೆ ಮನೆಗೇ ಬಾ)

ಅಂತ ಹಾಡು ಹೇಳಿ ಕಣ್ಣಿಯನ್ನು ಕಳಚುತ್ತಾನೆ. ಎತ್ತುಗಳ ಕೋಡಿಗೆ ಸುರುಳಿಯಾಕಾರದ ಬಣ್ಣಬಣ್ಣದ ಪರಪರೆಯಿಂದ ಶೃಂಗರಿಸಿ ಕಟ್ಟಿದ “ಅಂಡಿ ಚವಲ” ನೋಡುವುದೇ ಕಣ್ಣಿಗೊಂದು ಹಬ್ಬ ಆ ದಿನ. ದನ ಬಿಚ್ಚಿದ ನಂತರ ಹಬ್ಬದಡುಗೆ ಮಾಡಿ ಮೊಗ್ಗೆಕಾಯಿ (ಮಂಗಳೂರು ಸೌತೆ) ಹುಳಗದೊಂದಿಗೆ ಮನೆಮಂದಿ ಉಣ್ಣುತ್ತಾರೆ.

ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಗೇಣಿಯ ರೈತರು,ಹಾಲಕ್ಕಿಗಳು ಒಡೆಯನ ಮನೆಗೆ” ಕೈಮುಗುಕೆ” ಅಥವಾ “ಕಾಂಬುಕೆ” ಮೊಗ್ಗೆಕಾಯಿ, ಹೀರೇಕಾಯಿ, ಪಡುವಲ, ಸೌತೆಕಾಯಿ ಮುಂತಾದವುಗಳೊಂದಿಗೆ ಬರುತ್ತಾರೆ. ಅದನ್ನು ಸ್ವೀಕರಿಸುವ ಮನೆ ಯಜಮಾನ ಅವರಿಗೆ ಬೆಲ್ಲದವಲಕ್ಕಿ, ಬಂಗ್ಲಿರೊಟ್ಟಿ, ಹೊಸಕಚ್ಚೆ ಮುಂತಾದವುಗಳನ್ನು ಕೊಟ್ಟು ಕಳಿಸುತ್ತಾನೆ.

“ಬುತ್ತಿ ಕಳುದು”

ಬಲಿಪಾಡ್ಯದ ರಾತ್ರಿ ಉಂಡ್ಲಿಕಾಳು ಎಂಬ ಅಕ್ಕಿ ಹಿಟ್ಟಿನ ಉಂಡೆ ಮಾಡಿ ಅದರಿಂದ ಪಾಯಸ ಮಾಡಿ ಬೋರಜ್ಜಿ ಬಲೀಂದ್ರರಿಗೆ ಬಡಿಸುತ್ತಾರೆ. ಜೊತೆಗೆ “ಕಬ್ಣ ಚಿಪ್ಪಿನ ವಡೆ” ಹಾಗೂ ಹಿಟ್ಟಿನ ದೀಪ ಮಾಡುತ್ತಾರೆ,  ಇಪ್ಪತ್ತೊಂದು ಹಸಿಹಿಡಿಕಡ್ಡಿಗೆ ಬಟ್ಟೆ ಸುತ್ತಿ ದೊಂದಿ ದೀಪ ಮಾಡಿ ಸಂಜೆ ಮರಳಿ ಕೊಟ್ಟಿಗೆಗೆ ಬಂದ ದನಕರುಗಳಿಗೆ ತೋರಿಸುತ್ತಾರೆ.

ರಾತ್ರಿ ಪೂಜೆಯಾದ ನಂತರ ಬಲೀಂದ್ರ ಬೋರಜ್ಜಿಯನ್ನು ಚೂರು ಅಲುಗಿಸಿ ವಿಸರ್ಜನೆ ಮಾಡುತ್ತಾರೆ. ಮರುದಿನ ಮುಂಜಾನೆ ನಾಲ್ಕು ಗಂಟೆಯಷ್ಟೊತ್ತಿಗೆ ಎದ್ದು ತಂಗಳನ್ನ, ಗಟ್ಟಿಮೊಸರು, ಕಾಯಿಹೋಳು, ಕೊಟ್ಟೆರೊಟ್ಟಿ, ಉಂಡ್ಲಿಕಾಳು ಪಾಯಸ ಇತ್ಯಾದಿಯೆಲ್ಲ ಬಾಳೆ ಎಲೆಯಲ್ಲಿ ಕಟ್ಟಿ ಬೋರಜ್ಜಿ ತಲೆಮೇಲಿನ ಹೊಸ ಕಚ್ಚೆಯಲ್ಲಿ ಅದನ್ನು ಗಂಟುಕಟ್ಟಿ ಎರಡೂ ಕರಿಗೆಗಳ ಜೊತೆ ಮನೆಯ ಒಡತಿ ಮನೆಯ ಚಿಕ್ಕಮಕ್ಕಳ ಗಂಟೆ ಡೆವಟೆ ಸದ್ದಿನೊಂದಿಗೆ ತುಳಸಿ ಮನೆಯ ಹತ್ತಿರ ಹೋಗಿ ಕರಿಗೆ ಇಟ್ಟು ಅದರ ಮೇಲೆ ಬುತ್ತಿ ಇಡುತ್ತಾಳೆ.

ಹಾಗೂ ಬಲೀಂದ್ರನನ್ನು ಅಂಗಳದ ಕುತ್ರಿಗೋಣೆಯೊಳಗೆ ಯಾರೂ ಕಾಣದಂತೆ ಹೆಟ್ಟಿ ಬಿಡುತ್ತಾಳೆ. ಅವಳು ಬುತ್ತಿ ಇಟ್ಟು ಹಿಂತಿರುಗಿದ ನಂತರ ಸುತ್ತ ಮುತ್ತಲಿನ ಮನೆಯ ಮಕ್ಕಳು ಬುತ್ತಿಯನ್ನು ಕಳಿಯಲು ಪೈಪೋಟಿ ನಡೆಸಿ ಹ್ವೊಂಡೆಯ ಹಿಂಡ್ಲಿಕಾಯಿಯಿಂದ ತಮಾಷೆಗೆ ಹೊಡೆದಾಡಿಕೊಳ್ಳುತ್ತಾರೆ. ನಂತರ ಬುತ್ತಿ ಹಂಚಿಕೊಂಡು ಉಣ್ಣುತ್ತಾರೆ.

“ಸೊರಿ ಸೊಪ್ಪಿನ ಪುಡಿ”

ಹಬ್ಬದ ಮರುದಿನ ಮನೆಯೊಡತಿ ಗಂಜಿ ಮತ್ತು ಸೋರೆ ಸೊಪ್ಪಿನ ಪುಡಿ ಮಾಡಿ ಮನೆಯ ಕೋಳ್ಗಂಬಕ್ಕೆ ಬಾಳೆಎಲೆಯಲ್ಲಿ ಬಡಿಸುತ್ತಾಳೆ. ಇಲ್ಲಿಗೆ ದೀಪಾವಳಿ ಹಬ್ಬ ಸಂಪನ್ನ.

ಇದಿಷ್ಟೂ ಅಂಕೋಲೆ ನಾಡವರ “ದೇಪಳಗಿ” ಪದ್ಧತಿ. ಇದಕ್ಕೂ ಹಿಂದಿನ ಆಚರಣೆಯಿಂದ ಎಷ್ಟನ್ನು ಕಳೆದುಕೊಂಡು ಇದು ಬಂದಿದೆ ಅಂತ ನಮಗೆ ಗೊತ್ತಿಲ್ಲ. ಈಗ ಬರೆದಿರುವ ಇಷ್ಟು ಆಚರಣೆಗಳಲ್ಲಿ ಈಗಿನವರು ಎಷ್ಟನ್ನು ಮಾಡುತ್ತಿದ್ದಾರೆ ಅಂತನೂ ನಮಗೆ ಗೊತ್ತಿಲ್ಲ. ಇನ್ನು ಮುಂದಿನ ಪೀಳಿಗೆಗಂತೂ ದೀಪಾವಳಿ ಅನ್ನೋದು “ದೀವಾಳಿ” ಅಂತ ಅಪಭ್ರಂಶವಾಗಿ ಈಗಲೇ ಕಿವಿಯೊಳಗೆ ಹೊಕ್ಕಿ ಕುಳಿತಿದೆ. ಬರೀ ಬೇಕರಿಯ ಲಡ್ಡೂ ಪೇಡಾದೊಳಗೆ ಹಾಗೂ ಮನೆಯನ್ನು ಜಗಮಗ ದೀಪದೊಳಗೆ ಹೊಳೆಸುವುದಷ್ಟೇ.. ಪಟಾಕಿ ಸುಡುವುದಷ್ಟೇ.. ದೀಪಾವಳಿ ಅಂದುಕೊಂಡಿದ್ದಾರೆ ಈಗಿನವರು..

ದಿನದಿನಕ್ಕೂ ತಾಳ್ಮೆ, ಕರುಣೆ, ಸ್ನೇಹ ಸೌಹಾರ್ದತೆ, ಶಾಂತಭಾವದ ಸಂಪನ್ನತೆ ಎಲ್ಲವನ್ನೂ ಹೆಚ್ಚಿಸಿಕೊಳ್ಳುವಲ್ಲಿ ಪ್ರತಿಯೊಂದು ಹಬ್ಬಗಳು ಅವುಗಳ ಆಚರಣೆ, ಸಂಪ್ರದಾಯಗಳು ನಮಗೆ ಸಹಕಾರಿಯಾಗಲಿ.. ಇದ್ದ ಅಸುರತೆ ನಂದಿಹೋಗಿ ಹೊದ್ದ ಪ್ರೇಮ ಜಗದ್ ವ್ಯಾಪಿಯಾಗಿ ಸದಾಸರ್ವದಾ ಹಬ್ಬಲಿ ಎಂದು ಬಯಸುತ್ತ… ಕುಸಲೆಯರ ಹಬ್ಬದ ಶುಭಾಶಯಗಳು..

November 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Smitha Amrithraj.

    ದೀಪಾವಳಿ ಹಬ್ಬದೊಂದು ಝಲಕ್….ಚೆಂದದ ನಿರೂಪಣೆ ರೇಣಕ್ಕ

    ಪ್ರತಿಕ್ರಿಯೆ
  2. Kiran Bhat

    ಅಂಕೋಲೆ ದೀಪಾವಳಿಯ ವಿವರ ಚಲೋ ಇದೆ.

    ಪ್ರತಿಕ್ರಿಯೆ
  3. ಗೀತಾ ಜಿ ಹೆಗಡೆ ಕಲ್ಮನೆ

    ಅಪ್ಪಟ ಅಂಕೋಲೆ ಭಾಷೆಯಲ್ಲಿ ಬರೆದ ಲೇಖನ ಓದಿ ಮುಗಿಸಿದಾಗ ನಿಮ್ಮೂರ ಹಬ್ಬ ನೋಡಿದಷ್ಟು ಖುಷಿ ಆಯಿತು.

    ಚೆನ್ನಾಗಿ ಬರೆದಿದ್ದೀರಿ

    ಪ್ರತಿಕ್ರಿಯೆ
  4. ರೇಣುಕಾ ರಮಾನಂದ

    ಸ್ಮಿತಾ..ಥ್ಯಾಂಕ್ಯೂ ಮುದ್ದಮ್ಮ

    ಪ್ರತಿಕ್ರಿಯೆ
  5. ರೇಣುಕಾ ರಮಾನಂದ

    ಥ್ಯಾಂಕ್ಯೂ ಕಿರಣಣ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: