ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ವೈದ್ಯಕೀಯ ಲೋಕದಲ್ಲಿ…


ವೈದ್ಯಕೀಯದ ಬದುಕಿನಲ್ಲಿ ದಿನ ನಿತ್ಯ ಜರುಗುವ ನೈಜ ಘಟನೆಗಳನ್ನು ಆಧರಿಸಿದ ಬರಹಗಳನ್ನು ಬರೆಯಬೇಕೆಂಬುದು ಬಲು ದಿನದ ಆಸೆ. ಆದರೆ ಸಾಧ್ಯವಾಗುವುದು ಕಡಿಮೆ. ಯಾಕೆಂದರೆ ವೈದ್ಯಕೀಯದಲ್ಲಿ ಒಂದೊಂದು ದಿನ ಬೇಸರವಾಗುವಷ್ಟು ಫ್ರೀ ಸಮಯ ಸಿಗುತ್ತದೆ. ಒಮ್ಮೊಮ್ಮೆ “ಸಾಯಲೂ” ಸಮಯ ಸಿಗುವುದಿಲ್ಲ. ಸಮಯ ಸಿಕ್ಕಾಗ ಸೋಮಾರಿ ಮನಸ್ಸು ಸುಮ್ಮನಿದ್ದುಬಿಡು ಎನ್ನುತ್ತದೆ. ಅದೇ ‘ಮನಸ್ಸು’ ಬರೆಯಬೇಕೆಂದು ‘ಮನಸ್ಸು’ ಮಾಡಿದಾಗ ಆಸ್ಪತ್ರೆಯ ತುಂಬೆಲ್ಲ ರೋಗಿಗಳು ತುಂಬಿರುತ್ತಾರೆ..
34 ವರ್ಷಗಳ ನನ್ನ ವೈದ್ಯಕೀಯದಲ್ಲಿ, ಮಳೆಗಾಲದಲ್ಲಿ ದ್ವೀಪವಾಗಿ ಬಿಡುವ ಸಣ್ಣ ಗ್ರಾಮದಿಂದ ಮೊದಲ್ಗೊಂಡು ತಾಲೂಕು, ಜಿಲ್ಲಾ ಸ್ಥಾನಗಳಲ್ಲಿ, ಮತ್ತೆ ಸರಕಾರಿ ಕೆಲಸ ಹಾಗೂ ಖಾಸಗಿಯಾಗಿ ಈ ವೃತ್ತಿ ಮಾಡಿದ್ದೇನೆ. ನೂರಾರು ಹೃದಯಸ್ಪರ್ಶಿ ಘಟನೆಗಳು ನನ್ನೆದುರಿಗೆ ಘಟಿಸಿವೆ. ವೈದ್ಯಕೀಯವೇ ಅಂಥದ್ದು. ಮಾನವ ಸಂಬಂಧಗಳು, ನೋವು, ಸಾವು, ಅಸಹಾಯಕತೆ, ಸಂತೋಷ, ಸಂಭ್ರಮಗಳನ್ನು ಅವುಗಳ ಪರಾಕಾಷ್ಟೆಯಲ್ಲಿ ನೋಡಲು ಸಾಧ್ಯವಾಗುವುದು ಇಲ್ಲಿ ಮಾತ್ರ. ವೈದ್ಯ-ರೋಗಿ-ಅವರ ಸಂಬಂಧಿಕರ ತ್ರಿಕೋನ, ಸಮಕೋನವಾದರೆ ಚೆಂದ. ಇಲ್ಲವಾದರೆ ತ್ರಿಕೋನದ ಕೋನಗಳು ಯದ್ವಾ ತದ್ವಾ ಎಳೆದಾಡಿ ಬಾಯಿತೆರೆದುಕೊಂಡು ತನ್ನ ಆಕಾರ ಕಳೆದುಕೊಳ್ಳುತ್ತವೆ.
ವೈದ್ಯವೃತ್ತಿ ಹಿಂದಿನಂತೆ “ನೋಬಲ್” ಆಗಿ ಉಳಿದಿಲ್ಲ, ವೈದ್ಯರು ಹಾಗೂ ಆಸ್ಪತ್ರೆಗಳು ಈಗ ಮೊದಲಿನ ಹಾಗೆ ಇಲ್ಲ, ಎಂಬುದು ಈಚಿನ ದಿನಗಳ ಸಾಮಾನ್ಯ ಅಪವಾದ. ಆಸ್ಪತ್ರೆಗಳೆಲ್ಲ ಹಣ ಮಾಡುವ ಸಂಸ್ಥೆಗಳಾಗಿ ಮಾರ್ಪಟ್ಟಿವೆ ಎಂಬುದೂ ಕೂಡ ಜನ ಸಾಮಾನ್ಯರ ಒಕ್ಕೊರಲ ಮಾತು. ಒಂದು ಕ್ಷಣ ವೈದ್ಯರ ಸ್ಥಾನದಲ್ಲಿ ನಿಂತು ನೋಡಿದಾಗ, ಸಮಸ್ಯೆಯ ಅರಿವಾಗುತ್ತದೆ. ಕೋಟಿಗಳನ್ನು ಕೊಟ್ಟು ಡಿಗ್ರೀ ಪಡೆದುಕೊಂಡವರನ್ನು ಹೊರತುಪಡಿಸಿದರೂ, ಸಂಕೀರ್ಣವಾದ ಪರೀಕ್ಷಾ ವಿಧಾನಗಳು, ಆಮದು ಮಾಡಿಕೊಳ್ಳಬೇಕಾದ ದುಬಾರಿ ಉಪಕರಣಗಳು,ಎಲ್ಲ ಸೌಲಭ್ಯಗಳನ್ನು ಹೊಂದಿದ ವಾರ್ಡ್ ಗಳು, ರೋಗಿಯ ಸ್ಥಿತಿ ಗಂಭೀರವಿದ್ದಾಗ ಅವಶ್ಯಕವಾಗುವ ಜೀವರಕ್ಷಣಾ ಉಪಕರಣಗಳು, ಅಹೋ ರಾತ್ರಿ ಕೆಲಸ ಮಾಡುವ ಸಿಬ್ಬಂದಿವರ್ಗ, ಮುಂತಾದವುಗಳೆಲ್ಲ ಅತೀ ಅನಿವಾರ್ಯದ ಹಾಗೂ ಕನಿಷ್ಠ ಅವಶ್ಯಕತೆಗಳಾದಾಗ, ಅವುಗಳನ್ನು ಹೊಂದಲು ವೈದ್ಯರು ಸಾಲ ಮಾಡುವುದು ಅದನ್ನು ಬಡ್ಡಿ ಸಮೇತ ತೀರಿಸಲು ರೋಗಿಗಳಿಂದ ಹಣ ಪಡೆಯುವುದೂ ಅನಿವಾರ್ಯವಾಗುತ್ತದೆ.
ಇತ್ತೀಚಿಗೆ ವೈದ್ಯಕೀಯವನ್ನು ‘ಗ್ರಾಹಕ ಹಿತರಕ್ಷಣಾ ಕಾನೂನಿನ’ ಅಡಿಯಲ್ಲಿ ತಂದ ಮೇಲಂತೂ ವೈದ್ಯರು ಅವಶ್ಯಕತೆಗಿಂತ ಹೆಚ್ಚು ‘ಕಾಳಜಿ’ ವಹಿಸಬೇಕಾಗಿದೆ. ಕೆಲವೊಂದು ಪರೀಕ್ಷೆಗಳು ಅವಶ್ಯವಿಲ್ಲವೆಂದರೂ ಕೂಡ “Evidence Based Treatment” ಎಂಬ ಹೊಸ ಪಧ್ಧತಿಯಲ್ಲಿ ಅನಿವಾರ್ಯವಾಗಿ ಸಾಕ್ಷಿಗಳನ್ನು ಕಲೆ ಹಾಕಬೇಕಾಗುತ್ತದೆ. ಉದಾಹರಣೆಗೆ,ವೈದ್ಯಕೀಯ ಪರೀಕ್ಷೆ ಮಾಡಿದಾಗ ಒಬ್ಬ ವ್ಯಕ್ತಿಗೆ ಅಪೆಂಡಿಸೈಟಿಸ್ ಇದೆ ಎಂದು ಖಂಡಿತವಾಗಿ ಗೊತ್ತಿದ್ದರೂ ಅದಕ್ಕೆ “ಸಾಕ್ಷಿ” ಯಾಗಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಬೇಕಾಗುತ್ತದೆ. ಮಾಡಿದರೆ, ಅನಾವಶ್ಯಕ ಪರೀಕ್ಷೆ ಮಾಡಿಸುತ್ತಾರೆ ಎಂಬ ಮಾತು ಬರುತ್ತದೆ. ಮಾಡಿಸದಿದ್ದರೆ ‘ಎವಿಡೆನ್ಸ್’ ಇಲ್ಲದ ಸ್ಥಿತಿ. ಇನ್ನು “ಗೂಗಲ್”ನಲ್ಲಿ ಕಣ್ಣಾಡಿಸಿ ಬಂದವರಂತೂ ಯಾವ್ಯಾವ ಪರೀಕ್ಷೆಗಳನ್ನು ಮಾಡಬೇಕು, ಏನೇನು ಔಷಧಿಗಳನ್ನು ಕೊಡಬೇಕು,ಇತ್ಯಾದಿ ಲಿಸ್ಟ್ ನ್ನೇ ತಂದಿರುತ್ತಾರೆ…!! ಇಂಥದರಲ್ಲಿ ವೈದ್ಯವೃತ್ತಿ ಕತ್ತಿಯ ಮೇಲಿನ ನಡಿಗೆಯಾಗುತ್ತಿದೆ.

ಸಂತೋಷದ ಸಂಗತಿಯೆಂದರೆ, ವೈದ್ಯಕೀಯದಲ್ಲಿ ಇಂದು ಅದ್ಭುತ ಸಾಧನೆಗಳಾಗುತ್ತಿವೆ. ಈ ಮೊದಲು ಗುಣಪಡಿಸಲು ಸಾಧ್ಯವಿರದ ಹಲವಾರು ರೋಗಗಳಿಗೆ ಔಷಧಿಗಳನ್ನು, ಆಪರೇಶನ್ ಗಳನ್ನೂ ಕಂಡು ಹಿಡಿಯಲಾಗಿದೆ. ಮೊನ್ನೆ ತಾನೇ, ಸಿನೀಮಯ ರೀತಿಯಲ್ಲಿ ಬೆಂಗಳೂರಿನ ಹೃದಯ. ಚೆನ್ನೈನಲ್ಲಿ ಮಿಡಿದ ನೆನಪು ಇನ್ನೂ ಹಸಿರಾಗಿದೆ. ಇಡೀ ಜಗತ್ತೇ ಅದನ್ನು ಕುತೂಹಲದಿಂದ, ಆಸಕ್ತಿಯಿಂದ, ‘ತಮ್ಮ ಜೀವವನ್ನೇ ಕೈಯಲ್ಲಿ ಹಿಡಿದು’ ನೋಡುತ್ತಿತ್ತು. ಯಾವಾಗ ಜೀವಂತ ಹೃದಯ ಹೊತ್ತವರು ಚೆನ್ನೈ ತಲುಪಿದರೋ ಆಗ ಉಸಿರೆಳೆದುಕೊಂಡವರು ಎಷ್ಟೋ ಮಂದಿ.
ಆದರೆ ಇನ್ನೂ ಆ ಹೃದಯ ತನ್ನ ಹೊಸ ಸ್ಥಾನದಲ್ಲಿ ನಾಲ್ಕು ಸಾರಿ ಬಡಿದಿತ್ತೋ ಇಲ್ಲವೋ, ಆಗಲೇ ಸಾಮಾಜಿಕ ತಾಣಗಳಲ್ಲಿ “ಸಂಶಯ”ಗಳು ಓಡಾಡತೊಡಗಿದ್ದವು.
“ಹೃದಯ ಕೊಟ್ಟ ಮಹಿಳೆ ನಿಜವಾಗಿ ಮರಣಿಸಿದ್ದಳೇ?” (ವೈದ್ಯರು ದುಡ್ಡಿನಾಸೆಗೆ ಸುಳ್ಳು ಪ್ರಮಾಣ ಪತ್ರ ಕೊಟ್ಟಿರಬಹುದು)
“ಬಡವರಿಗೆ ಇಂಥದ್ದೆಲ್ಲವನ್ನು ಮಾಡುವರೇ? ( ದುಡ್ಡಿದ್ದವರಿಗಷ್ಟೇ ವೈದ್ಯಕೀಯ ಸೌಲಭ್ಯ, ಬಡವರಿಗೆ ಇಲ್ಲ)
ಇತ್ಯಾದಿ ಮಾತುಗಳು ದಿನವಿಡೀ ಚರ್ಚೆಗೊಂಡವು. ನಮ್ಮ ದೃಷ್ಟಿ ಚಿಕಿತ್ಸಕವಾಗಿರಬೇಕು, ಸಂಶಯಾತ್ಮಕವಲ್ಲ.ಅಲ್ಲವೇ?
ಆದರೂ ಕೂಡ ಈ ವೃತ್ತಿಯಲ್ಲಿ ಇರುವಷ್ಟು ಆತ್ಮ ಸಂತೃಪ್ತಿ ಬಹುಶ: ಯಾವ ವೃತ್ತಿಯಲ್ಲೂ ಇಲ್ಲ, ಎಂದೇ ನನ್ನ ಅನಿಸಿಕೆ. ಸೇವೆ ಮಾಡುವ ಮನಸ್ಸಿದ್ದರೆ ಇಲ್ಲಿ ಇರುವಂಥ ಅವಕಾಶಗಳು ಬೇರೆಲ್ಲೂ ಸಿಗಲಾರವು. ಕೆಲವೊಮ್ಮೆ ನಾವು ಹೇಳಿದ ಬಿಲ್ಲಿಗಿಂತ ಸ್ವಲ್ಪ ಕಡಿಮೆ ಸಂದಾಯ ಮಾಡಬಹುದಾದರೂ, ಗುಣಮುಖನಾದ ರೋಗಿಯ ಮುಖದಲ್ಲಿ ಮೂಡುವ ಸಂತೃಪ್ತಿಯ ಭಾವನೆ, ಹೋಗುವಾಗ ಕೆಲವು ಬಾರಿ ಕಾಲು ಮುಟ್ಟಿ ನಮಸ್ಕರಿಸಲು ಬರುವ ಅವರ ಕೃತಜ್ಞತಾ ಭಾವದ ನಡವಳಿಕೆ ನಮ್ಮನ್ನು ಧನ್ಯರಾಗಿಸುತ್ತವೆ, ಸಾರ್ಥಕತೆಯ ಭಾವ ಮೂಡುತ್ತದೆ. ಹಲವು ಜನರ ದುಃಖ ಕಡಿಮೆ ಮಾಡಿ ಮುಖದಲ್ಲಿ ನಗೆ ಮೂಡಿಸುವ ಈ ವೃತ್ತಿ ದೊರೆತಿದ್ದೇ ನಮ್ಮ ಪುಣ್ಯ ಎನಿಸಿದೆ. “ದಾಸೋಹ” ವನ್ನು ಆಚರಣೆಗೆ ತರಲು ವೈದ್ಯಕೀಯದಂಥ ಕ್ಷೇತ್ರ ಇನ್ನೊಂದಿಲ್ಲ. ‘ದಯೆ ಧರ್ಮದ ಮೂಲ’ವಾಗುವ ಸಾಧ್ಯತೆ ಇಲ್ಲಿಯೇ ಹೆಚ್ಚು.
ಇನ್ನು ರೋಗಿಗಳಲ್ಲೂ ಹಲವು ವಿಧ. ಯಾಕೆಂದರೆ ಮನುಷ್ಯನ ಸ್ವಭಾವವೇ ಬಲು ಸಂಕೀರ್ಣ. ಅದರಲ್ಲೂ ಅಲ್ಲಿ ದುಡ್ಡಿನ ಪಾತ್ರವಿದ್ದರಂತೂ ಮುಗಿದೇ ಹೋಯ್ತು. ಆಸ್ಪತ್ರೆಯಲ್ಲಿ ಹಲವು ಬಾರಿ ಜರುಗುವ ಮನ ಹಿಂಡುವ ಘಟನೆಗಳನ್ನು ನೋಡಿದಾಗಲೆಲ್ಲ ಮನಸ್ಸು ಭಾರವಾಗುತ್ತದೆ. ಮನುಷ್ಯ ಸಂಬಂಧಗಳು ಇಷ್ಟೇನಾ.? ಎನಿಸುತ್ತದೆ. ಆದರೆ ಎಂಥ ಕಷ್ಟವಾದರೂ ರೋಗಿಗಳನ್ನು ಜತನ ಮಾಡಿ, ಆರೈಕೆ, ಉಪಚಾರ ಮಾಡುವ ಜನರನ್ನು ಕಂಡಾಗ ಮನಸ್ಸು ಪ್ರಫುಲ್ಲ ವಾಗುತ್ತದೆ.
ಹಿಮ್ಮಡಿ ಸವೆದ ಹವಾಯಿ ಚಪ್ಪಲಿ ಮೆಟ್ಟಿಕೊಂಡು ಹರಕಲು ಅಂಗಿ ಹಾಕಿಕೊಂಡು ಬರುವ ಅವಿದ್ಯಾವಂತ ಬಡವ ತನ್ನ ಮುಪ್ಪಿನ ತಾಯಿಯನ್ನು, ಹೆಗಲ ಮೇಲೆ ಹೊತ್ತು ತಂದು ದೀನನಾಗಿ ನಮ್ಮೆದುರು ಕೈಜೋಡಿಸಿ ನಿಂತು, “ಏನೇ ಖರ್ಚಾಗಲಿ ನಮ್ಮವ್ವನನ್ನು ಉಳಿಸಿರಿ. ಇದ್ದ ಜಮೀನೆಲ್ಲವನ್ನು ಮಾರಿ, ಸಾಲದಿದ್ದರೆ ನಿಮ್ಮಲ್ಲಿ ಜೀವನ ಪರ್ಯಂತ ದುಡಿದು ಮುಟ್ಟಿಸುವೆ.” ಎಂದು ಅಂಗಲಾಚುವುದನ್ನೂ ನೋಡಿದ್ದೇವೆ…..
ಐಶಾರಾಮಿ ಕಾರಿನಲ್ಲಿ ತಮ್ಮಪ್ಪನನ್ನು ಕರೆತಂದು, ದೂರದಿಂದಲೇ ಗಾಲಿ ಖುರ್ಚಿ ತರಲು ಆರ್ಡರ್ ಮಾಡಿ, ಅವನನ್ನು ಮುಟ್ಟಿದರೆ ಎಲ್ಲಿ ತನ್ನ ‘ಬ್ರಾಂಡೆಡ್’ ಡ್ರೆಸ್ ಗಳು ಹೊಲಸಾಗುತ್ತವೆಯೋ ಎಂದು ದೂರದಲ್ಲಿಯೇ ನಿಂತು, ವೈದ್ಯರೆದುರು, ‘ಇಷ್ಟು ಖರ್ಚು ಮಾಡಿದರೆ ಎಷ್ಟು ದಿನ ಬದುಕಿರಬಹುದು. ಅಕಸ್ಮಾತ್ ಬದುಕಿದರೆ ಮುಂದೆ ದಿನನಿತ್ಯ ಎಷ್ಟು ಖರ್ಚಾಗಬಹುದು. ಮನೆಗೆ ಕರೆದೊಯ್ದ ಮೇಲೆ ಅವರ ‘ತೊಳೆ-ಬಳೆ’ ಕೆಲಸಕ್ಕೆ ನರ್ಸ್ ಗಳನ್ನು ಮನೆಗೆ ಕಳಿಸಲು ಸಾಧ್ಯವೇ? ಅಥವಾ ಬದುಕುವ ಸಾಧ್ಯತೆಗಳಿಲ್ಲದಿದ್ದರೆ ಬೇಡ ಬಿಡಿ, ಹಾಗೇ ಮನೆಗೆ ಕರೆದೊಯ್ಯುವೆ’ ಎಂದು ವ್ಯವಹಾರದ ಮಾತಾಡುವ “ವಿದ್ಯಾವಂತ ಶ್ರೀಮಂತ”ರನ್ನೂ ಕಂಡಿದ್ದೇವೆ…..
ನನ್ನೆದುರಿಗೆ,ನಮ್ಮ ಸ್ನೇಹಿತರೆದುರಿಗೆ ಜರುಗಿದ, ಜರುಗಲಿರುವ ಇಂಥ ಹಲವು ಘಟನೆಗಳನ್ನು ಅಕ್ಷರಗಳಲ್ಲಿ ಕಟ್ಟಿ ತಮ್ಮೆದುರಿಗೆ ಇಡುವ ಪ್ರಯತ್ನ ಮಾಡಲಿದ್ದೇನೆ. ಇವುಗಳಲ್ಲಿ “ಸಾಹಿತ್ಯಿಕ ಟಚ್” ಇರದಿದ್ದರೂ “ಮಾನವೀಯ ಸ್ಪಂದನ”ವಂತೂ ಇರುತ್ತವೆ. ಯಾಕೆಂದರೆ ಆಸ್ಪತ್ರೆಯೆಂದರೆ, ಸುಖ ದುಃಖಗಳ ಹದವಾದ ಮಿಶ್ರಣ ನೀಡುವ “ಆಶ್ರಮ”.
 

‍ಲೇಖಕರು G

October 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

13 ಪ್ರತಿಕ್ರಿಯೆಗಳು

  1. Dr Sunilchandraಹ್ರ

    ಹ್ರತ್ಪೂವ೯ಕ ಅಭಿನಂದನೆಗಳು
    ತುಂಬಾ ಸೊಗಸಾಗಿದೆ ವೈದ್ಯನ ಮನದಾಳದ ನೋವು ನಲಿವು ಸಾಮಾಜಿಕ ಕಾಳಜಿ ವ್ರತ್ತಿಧಮ೯ ಮನದ ತುಡಿತ ಮಿಡಿತಗಳ ದಾಖಲಿಸಿದ ರೀತಿ ಅನನ್ಯ ಭೇಷ್ ಭೇಷ್
    ಶಿವಾಯ ನಮಃ ಓಂ ನಮೋ ಶಿವಾಯ

    ಪ್ರತಿಕ್ರಿಯೆ
  2. Dr.Ratna Kulkarni

    ನಿಮ್ಮ ಲೇಖನ ವೈದ್ಯ ವರ್ಗದ ದನಿಯಾಗಿದೆ.ದಯವಿಟ್ಟು ಮುಂದುವರೆಸಿ.ಓದಲು ಉತ್ಸುಕರಾಗಿದ್ದೇವೆ.

    ಪ್ರತಿಕ್ರಿಯೆ
  3. Dr Dayanand

    Dear sir
    very nice introduction
    I am releasing my kannada novel (Satyameva jayathe )in december, which containing all your emotions mentioned above
    I feel very happy you have same feeling. no difference what so ever !
    with regards
    Dr. Dayanand

    ಪ್ರತಿಕ್ರಿಯೆ
  4. arathi ghatikar

    ತಮ್ಮ ವೈಧ್ಯಕೀಯ ವೃತ್ತಿ ಜೀವನದ ಒಳ ನೋಟವನ್ನು , ಸಂಕೀರ್ಣ ವಿಚಾರಗಳನ್ನು ,ಕೆಲವು ಕಟು ಸತ್ಯಗಳನ್ನು ತೆರಿದಿಟ್ಟಿದ್ದೀರಿ . ಮೊದಲಿದಂತೆ ಪ್ರಾಮಾಣಿಕ , ಹಾಗು ಕಾಳಜಿ ಪೂರ್ವಕ ವೈದ್ಯರೇ ಕಾಣ ಸಿಗುವುದು ದುರ್ಲಭ ಎನ್ನುವಂತ ಮಾತುಗಳು ಕೇಳಿ ಬರುತ್ತಿರುವ ಕಾಲದವಿದು . ಆದರೂ ಇವರ ಮಧ್ಯೆ ತಮ್ಮ ಮಾನವೀಯ ಗುಣ , ನಿಸ್ವಾರ್ಥ ಸೇವೆ ಯಿಂದ ರೋಗಿಗಳ ಉಪಚಾರ ಮಾಡುವ ಅನೇಕ ವೈದ್ಯರೂ ಕಾಣ ಸಿಗುತ್ತಾರೆ , ಮೂರುದಶಕಗಳಿಂದಲೂ ಈ ವೃತ್ತಿಯಲ್ಲಿ ನಿಮ್ಮ ಸೇವಾ , ಹಾಗು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿರುವ ನಿಮ್ಮ ಅನುಭವಗಳಿರುವ ಓದುವ ಕೂತುಹಲ ನನಗಿದೆ ಸರ್ .

    ಪ್ರತಿಕ್ರಿಯೆ
  5. ಸುಜಾತಾ ವಿಶ್ವನಾಥ್

    ಅಭಿನಂದನೆಗಳು ಸಾರ್…
    ವೈದ್ಯರ ಮನದಾಳದ ನೋವು ನಲಿವುಗಳು ಸಾಮಾಜಿಕ ಕಾಳಜಿ… ಮನದ ತುಡಿತಗಳ ಭಾವನೆಗಳನ್ನು ತುಂಬ ಚನ್ನಾಗಿ ಬಿಂಬಿಸಿದ್ದೀರ ಸಾರ್…..

    ಪ್ರತಿಕ್ರಿಯೆ
  6. Dr.Brahmanand Nayak

    dear sir
    experiential,sensible and superb introduction to the forthcoming series .
    eagerly waiting for the human stories.

    ಪ್ರತಿಕ್ರಿಯೆ
  7. kusumabaale

    ಬರೆಯಿರಿ ಸರ್.ಕಾಯುತ್ತೇವೆ ಓದಿಗೆ.

    ಪ್ರತಿಕ್ರಿಯೆ
  8. suresh

    ವೃತ್ತಿ ಬದುಕಿನ ಪುಟಗಳು ಅನಾವರಣಗೊಳ್ಳುವ ಕಾಲ ತುಂಬಾ ಒಳ್ಳೆಯ ಯೋಚನೆರಿ ಸರ್ ನಿಮ್ಮ ಅನುಭವವನ್ನು ಓದಿಕೊಳ್ಳಲು ನಮಗೂ ಒಂದು ಅವಕಾಶ ಸಿಗುತ್ತೆರಿ . ಅನುಭವಗಳೆಲ್ಲ ಅಕ್ಷರಕ್ಕಿಳಿದು ಅಜರಾಮರವಾಗಲಿ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: