ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ಅವರಿಗೆ ಬೇಕಿದ್ದದು ’ಜೀವಂತ ಹೆಬ್ಬೆಟ್ಟು’ ಮಾತ್ರ

ಆಸ್ಪತ್ರೆಯೆಂಬ ಸುರಕ್ಷಾ ತಂಗುದಾಣ …
ಅದೊಂದು ದಿನ ಸಾಯಂಕಾಲ ಎಲ್ಲ ಪೇಷಂಟ್ ಗಳನ್ನೂ ನೋಡಿ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು,ಆಗ ನನಗೆ ಅಲ್ಪ ಪರಿಚಯದ,ಖಾದಿ ಇತ್ಯಾದಿ ಧರಿಸಿ ಮುಖಂಡರ ಹಾಗೆ ಕಾಣುವ ನಾಲ್ಕು ಜನ ನನ್ನ ಚೇಂಬರ್ ಗೆ ನುಗ್ಗಿ, ನನ್ನೆದುರಿಗೆ ಸುಖಾಸೀನರಾದರು. ನನಗೋ ಮುಂಜಾನೆಯಿಂದ ಎಡೆ ಬಿಡದೆ ಕೆಲಸ ಮಾಡಿ ಯಾವಾಗ ಮನೆಗೆ ಹೋದೇನೋ ಅನ್ನುವ ತವಕ. ಆದರೆ ಇವರು ಬಂದು ಕುಳಿತ ರೀತಿ ಹೇಗಿತ್ತೆಂದರೆ, ‘ನನಗೆ ಸುಸ್ತಾಗಿದೆ’ ಎಂದು ಹೇಳುವ ಧೈರ್ಯ ಕೂಡ ನನಗೆ ಬಂದಿರಬಾರದು,ಹಾಗಿತ್ತು. ಕೆಲವೊಮ್ಮೆ ಹೀಗೆಯೇ ಆಗುತ್ತದೆ. ಇಷ್ಟವಿರಲಿ ಇಲ್ಲದಿರಲಿ, ಇಂಥವರ ಮರ್ಜಿ ಕಾಯುವುದು ಅನಿವಾರ್ಯವಾಗುತ್ತದೆ. ಇಲ್ಲವೇ ಎಷ್ಟು ಕಾಳಜಿ ಮಾಡುವ ವೈದ್ಯನಾದರೂ,ಎಂಥ ಜಾಣನಾದರೂ ಅವರ ಬಗ್ಗೆ ಇಲ್ಲ ಸಲ್ಲದ ಕತೆ ಕಟ್ಟಿ, ಹಲವಾರು ವರ್ಷ ಕಷ್ಟಪಟ್ಟು ಗಳಿಸಿದ ಹೆಸರನ್ನು ನೆಲಸಮ ಮಾಡಿ ಗಹ ಗಹಿಸಿ ಬಿಡುತ್ತಾರೆ.
ಮುಖದ ಮೇಲೊಂದು ಬಲವಂತದ ನಗೆ ತಂದುಕೊಂಡು, “ಏನು?” ಅನ್ನುವಂತೆ ನೋಡಿದೆ. ಅದರಲ್ಲಿಯೇ ಲೀಡರ್ ಹಾಗೆ ಕಾಣುವವನೊಬ್ಬ, ಬಾಯಿ ತುಂಬ ತುಂಬಿದ ಎಲೆ-ತಂಬಾಕಿನ ಅಧ್ವಾನ ಮಿಶ್ರಣವನ್ನು ಸಪ್ಪಳ ಮಾಡುತ್ತ ನುಂಗಿ, ಧೋತರದ ಅಂಚಿನಿಂದ ಕಟಬಾಯಿ ಒರೆಸಿಕೊಂಡು ಹೇಳತೊಡಗಿದ…
“ಏನಿಲ್ರಿ ಸಾಹೇಬ್ರ, ಇಲ್ಲಿ ಕುಂತಾನಲ್ರಿ, ಇವರಪ್ಪಗ ಸ್ವಲ್ಪ ಆರಾಮ ತಪ್ಪೈತ್ರ್ಯಾ… ಮಿರಜ್, ಬೆಳಗಾವ ಎಲ್ಲಾ ತೋರಿಸಿ ಸಾಕಾಗೈತ್ರಿ. ಈಗ ಅಂವ ನಿಮ್ಮ ದವಾಖಾನಿಗೇ ಹೊಗೂನಂತ ಹಠ ಹಿಡದಾನ್ರಿ. ಅದಕ್ಕ ಕರಕೊಂಡ ಬಂದ್ಯಾವ್ರಿ. ನಿಮ್ಮಲ್ಲಿ ಅಡ್ಮಿಟ್ ಮಾಡಿ ಆರಾಮ ಮಾಡಿದ್ರ ನಿಮಗ ಪುಣ್ಯ ಬರತೈತ್ರಿ. ಭಾಳ ಬಡವರ ಅದಾರ್ರೀ, ಜರಾ ಕಾಳಜಿ ಮಾಡ್ರಿ ..”
ನನಗೆ ಬರುವ ಪುಣ್ಯದ ವಾರಸುದಾರನಂತೆ ಅವನು ಹೇಳುವುದನ್ನು ಕೇಳಿ ಸ್ವಲ್ಪ ಪಿಚ್ಚೆನಿಸಿತು. ಬಡವರು ಎಂದು ಹೇಳುವ ಇವರು ಅಷ್ಟೆಲ್ಲಾ ಆಸ್ಪತ್ರೆಗಳನ್ನು ಸುತ್ತಿದ್ದು ಹೇಗೆ ಎನಿಸಿತಾದರೂ, ರೋಗಿಯನ್ನು ನೋಡೋಣವೆಂದು ತುರ್ತುಚಿಕಿತ್ಸಾ ವಾರ್ಡಿನಲ್ಲಿ ಮಲಗಿಸಿದ ರೋಗಿಯನ್ನು ನೋಡಲು ಹೊರಟೆ. ಅಲ್ಲಿ ಹೋಗಿ ನೋಡಿದರೆ ೭೦-೭೫ ವರ್ಷದ, ಮೈಯೆಲ್ಲಾ ಬಾತುಕೊಂಡ , ಒಂದೊಂದು ಉಸಿರಿಗೂ ಕಷ್ಟ ಪಡುತ್ತ ಏದುಸಿರು ಬಿಡುತ್ತಿದ್ದ ವ್ಯಕ್ತಿ. ಕಣ್ಣು ತೆಗೆಯಲೂ ಸಾಧ್ಯವಾಗದಷ್ಟು ನಿಶಕ್ತ. ನಾಲಿಗೆ ಒಣಗಿದೆ. ನಾಡಿ ಸಿಗುತ್ತಿಲ್ಲ. ಮೊದಲು ಅವನಿಗೆ ಆಮ್ಲಜನಕದ ಮಾಸ್ಕ್ ಹಾಕಿ, ಆಮೇಲೆ ಡೀಟೇಲ್ ಆಗಿ ಪರೀಕ್ಷೆ ಮಾಡಿದರೆ ತನ್ನ ಕೊನೆಯ ಕ್ಷಣಕ್ಕಾಗಿ ಕಾಯುತ್ತಿರುವ, ಮೂತ್ರಪಿಂಡಗಳ ನಿಷ್ಕ್ರಿಯೆಯಿಂದ ಸಾವಿನಂಚಿನಲ್ಲಿದ್ದ ಹತಭಾಗ್ಯ.
ಆಶ್ಚರ್ಯವೆಂದರೆ ಈ ಮೊದಲು ಒಂದು ಬಾರಿಯೂ ನಮ್ಮ ಆಸ್ಪತ್ರೆಗೆ ಆತ ಬಂದ ಬಂದಿರಲಿಲ್ಲ. ಮತ್ತೆ ಕೊನೆಗಾಲದಲ್ಲಿ ಇಲ್ಲೇಕೆ ಬಂದರು ಎಂಬ ಭಾವ ಒಂದು ಕ್ಷಣ ಬಂದಿತಾದರೂ, ನಮ್ಮೆಡೆಗೆ ಬಂದ ರೋಗಿಗಳನ್ನು ಸೇವಾಭಾವದಿಂದ ನೋಡಬೇಕೆಂಬ “ಹಿಪೋಕ್ರಿಟಿಸ್ ಶಪಥ” ಕ್ಕೆ ಜೋತುಬಿದ್ದವರಾದ ನಮಗೆ ಆ ರೀತಿ ಯೋಚಿಸುವ ಹಕ್ಕೂ ಕೂಡ ಇಲ್ಲವಲ್ಲ.
ಆತನ ಹಳೆಯ ಕಡತಗಳನ್ನೆಲ್ಲ ತೆಗೆದು ನೋಡಿದರೆ, ಅದಾಗಲೇ ಆತ ಸಾವಿನಂಚಿನಲ್ಲಿ ಇದ್ದಾನೆಂದೂ, ಇನ್ನು ಏನೂ ಮಾಡಲು ಸಾಧ್ಯವಿಲ್ಲವೆಂದೂ, ರೋಗಿಯ ಸಂಬಂಧಿಕರು ಕೊನೆಗಾಲದವರೆಗೆ ಆಸ್ಪತ್ರೆಯಲ್ಲಿ ಉಳಿಯಲು ಉತ್ಸುಕರಾಗಿಲ್ಲವೆಂದೂ, ಅದಕ್ಕಾಗಿ ಮನೆಗೆ ತೆಗೆದುಕೊಂಡು ಹೋದರೂ ನಡೆದೀತೆಂದೂ ಬರೆದ ವೈದ್ಯರ ಟಿಪ್ಪಣಿಗಳಿದ್ದವು. ಅಂದರೆ ಅವರು ಇವನ ಸಾವನ್ನು ನಿರ್ಧರಿಕೊಂಡು ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದಾರೆ. ಆದರೆ ನಮ್ಮಲ್ಲಿಗೇ ಏಕೆ.? ಗೊತ್ತಾಗಲಿಲ್ಲ. ನನಗೆ ಸ್ವಲ್ಪ ರೇಗಿತು. ಈ ಮೊದಲು ಎಂದೂ ಬಾರದವರು, ರೋಗಿಯ ಕೊನೆಗಾಲದಲ್ಲಿ ನಮ್ಮಲ್ಲಿ ತರುವ ಉದ್ದೇಶವೇನು ಎನ್ನುವಂತೆ ಕೇಳಿದೆ.
“ ಸಾಹೇಬ್ರ , ಎರಡ ದಿನಾ ಆತು, ಅಂವ ನಿಮ್ಮನ್ನ ಬಗಸಾಕಹತ್ಯಾನ್ರಿ. ಏನರ ಆಗಲಿ ಅವರ ದವಾಖಾನಿಗೆ ಹೋಗುದು ಅಂತ ಕುಂತ್ರಿ, ಅದಕ್ಕ ನಿಮ್ಮ ಮ್ಯಾಲೆ ಭಾಳ ಆಸೆ, ಭಕ್ತಿ ಇಟ್ಕೊಂಡ ಬಂದ್ಯಾವ್ರಿ. ಏನರ ಮಾಡಿ ಇವತ್ತೊಂದ ದಿನ ನಿಮ್ಮಲ್ಲಿ ಇಟಗೊಂಡ ಬಿಡ್ರಿ. ನಿಮ್ಮ ಕೈಗುಣ ಛಲೋ ಐತ್ರಿ . ನೀವು ಮುಟ್ಟಿದರ ಸಾಕು ಆರಾಮ ಆಗ್ತಾನ್ರಿ ”

ಈ “ಕೈ ಗುಣ “ ಎನ್ನುವ ಶಬ್ದವನ್ನು ನಮ್ಮ ವೈದ್ಯಕೀಯದಲ್ಲಿ ಎಷ್ಟು ಕೇಳಿದ್ದೇವೆಂದರೆ ಕೆಲವೊಮ್ಮೆ ಕ್ಲೀಷೆ ಎನಿಸುತ್ತದೆ. ಹತ್ತು ವರ್ಷ ವೈದ್ಯಕೀಯ ಕಾಲೇಜ್ ಗೆ ಮಣ್ಣು ಹೊತ್ತು ಹಳ್ಳಿಯ ಜನರ ಸೇವೆ ಮಾಡಬೇಕೆಂದು ಆದರ್ಶಗಳನ್ನಿಟ್ಟುಕೊಂಡು ಹಳ್ಳಿಗೆ ಬಂದವನಿಗೆ ಏನೂ ಕಲಿಯದ ಒಬ್ಬ ‘ಕ್ವಾಕ್’ ನಿಂದ ಸ್ಪರ್ಧೆ ಎದುರಾಗುತ್ತದೆ, ‘ಕೈಗುಣ’ ಎಂಬ ಮೂಢ ನಂಬಿಕೆಯಿಂದ. ಒಮ್ಮೊಮ್ಮೆ ನಮ್ಮನ್ನು ಹೊಗಳಿ ಯಾಮಾರಿಸಲೂ ಈ ಅಸ್ತ್ರದ ಪ್ರಯೋಗವಾಗುತ್ತದೆ. ಈಗ ಆಗಿದ್ದೂ ಅದೇ. ಅವರಿಗೆ ಏನಾದರೂ ಮಾಡಿ ಆ ರೋಗಿಯನ್ನು ನಮ್ಮ ಆಸ್ಪತ್ರೆಯಲ್ಲಿ ಅಡ್ಮಿಶನ್ ಮಾಡಬೇಕಾಗಿತ್ತು. ಅವರು ನಿಜವಾಗಿಯೂ ಮುಗ್ಧರೂ, ನನ್ನ ಮೇಲೆ ಪ್ರೀತಿಯಿಟ್ಟು ಬಂದವರೂ ಆಗಿರಬಹುದಲ್ಲ. ರೋಗಿಯ ಜೊತೆ ಬಂದವರ ರೀತಿ ನೀತಿಗಿಂತ ರೋಗಿಯ ಕಾಳಜಿ ಮುಖ್ಯ ಅಲ್ಲವೇ.? ಎಂದು ಅವನನ್ನು ಒಳರೋಗಿಯನ್ನಾಗಿಸಿ, ಐ ಸಿ ಯು ನಲ್ಲಿಟ್ಟು, ರಾತ್ರಿಯೆಲ್ಲ ಅವನ ಆರೈಕೆ ಮಾಡುವಂತೆ ನಮ್ಮ ಸಿಬ್ಬಂದಿಗೆ ಎಲ್ಲ ತಿಳಿಸಿ, ಮನೆಗೆ ಬರಬೇಕಾದರೆ ರಾತ್ರಿಯಾಗಿತ್ತು.
ಮರುದಿನ ಬೆಳಿಗ್ಗೆ ನೋಡಿದರೆ ಒಂದಿಷ್ಟು ಹುಶಾರಾಗಿದ್ದ. ಆಸ್ಪತ್ರೆಯಲ್ಲಿ ಸಿಕ್ಕ ವಿಶ್ರಾಂತಿಯಿಂದಲೋ ಅಥವಾ ಆರೈಕೆಯಿಂದಲೋ ಕೈ ಕಾಲು ಆಡಿಸುವಷ್ಟು ಚೇತರಿಕೊಂಡಿದ್ದ. ಯಾವುದರಿಂದಾದರೂ ಆಗಲಿ, ಚೇತರಿಸಿಕೊಂಡನಲ್ಲ ಎಂದು ನನಗೂ ಒಂದಿಷ್ಟು ಖುಷಿಯಾಯಿತು. ಆದರೆ ರೋಗಿಯ ಜೊತೆ ಬಂದಿದ್ದ “ಹಿರಿಯರು” ಕಾಣಲಿಲ್ಲ. ಒಬ್ಬ ಹುಡುಗನನ್ನು ಕೂಡ್ರಿಸಿ ಹೋಗಿದ್ದರು. ಎಲ್ಲರೂ ಎಲ್ಲಿ ಎಂದು ಕೇಳಿದರೆ ಯಾವುದೋ “ಮುಖ್ಯ ಕೆಲಸ”ದ ಮೇಲೆ ಹೋಗಿದ್ದಾರೆಂದು ಉತ್ತರ ಬಂದಿತು. ಎಲ್ಲಿಯಾದರೂ ಹೋಗಲಿ ಎಂದುಕೊಳ್ಳುತ್ತ ನಮ್ಮ ಸಿಬ್ಬಂದಿಗೆ ಇನ್ನಷ್ಟು ಕಾಳಜಿ ಮಾಡಲು ತಿಳಿಸಿ ಆಪರೇಷನ್ ಥೀಯೇಟರ್ ಗೆ ಹೋದೆ.
ಎಲ್ಲ ಆಪರೇಷನ್ ಗಳನ್ನೂ ಮುಗಿಸಬೇಕಾದರೆ ಮಧ್ಯಾಹ್ನ ಎರಡು ಗಂಟೆ. ನನಗೆ ಅದೇ ಪೇಷಂಟ್ ದೆ ಚಿಂತೆ. ನಾನು ಎದುರಿಗೆ ಇಲ್ಲದಾಗ ಏನಾದರೂ “ಹೆಚ್ಚು ಕಮ್ಮಿ” ಯಾದರೆ ಏನು ಗತಿ ಎಂಬ ಅಳುಕಿನಿಂದಲೇ ಆಪರೇಷನ್ ಗೆ ಹೋಗಿದ್ದೆ. ಹೊರಬಂದವನೇ ಮೊದಲು ಅವನಿದ್ದ ವಾರ್ಡ್ ಗೇ ಓಡಿದೆ. ಅಲ್ಲಿ ನೋಡಿದರೆ ಆಶ್ಚರ್ಯ ಕಾದಿತ್ತು.
“ಅಲ್ಲಿ ಯಾರೂ ಇರಲಿಲ್ಲ…”
ರೋಗಿ, ಸಂಬಂಧಿಕರು, ಕೊನೆಗೆ ನಮ್ಮ ಸಿಬ್ಬಂದಿ ಒಬ್ಬರೂ ಇಲ್ಲ. ನನಗೆ ಗಾಬರಿ, ಏನಾದರೂ ಅನಾಹುತ ಆಗಿರಬಹುದೇ ಎಂದು. ಆದರೆ ನಮ್ಮ ಸಿಬ್ಬಂದಿ ಹೇಳಿಲ್ಲವಲ್ಲ..? ಅಸಮಾಧಾನದಿಂದ ನಮ್ಮವರನ್ನು ಕರೆದು ಕೇಳಿದಾಗ ಅವರು ಒದಗಿಸಿದ ಸುದ್ದಿ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತ್ತು. ಮುಗ್ಧರು, ನನ್ನ ಮೇಲೆ ನಂಬುಗೆ, ಭಕ್ತಿ ಇತ್ಯಾದಿ ಇಟ್ಟುಕೊಂಡು ಬಂದಿದ್ದೇವೆಂದು ಹೇಳಿದವರು ಇಂಥದನ್ನು ಮಾಡಿದರೆ ಎಂದು ಕ್ಷಣಕಾಲ ವ್ಯಥೆಯೆನಿಸಿತು.
ಆದದ್ದಿಷ್ಟು….
ನಮ್ಮ ಆಸ್ಪತ್ರೆಗೂ ಸಬ್ ರೆಜಿಸ್ಟ್ರಾರ್ ಆಫೀಸ್ ಗೂ ಬಹಳ ಸಮೀಪದ ದಾರಿ. ನೂರಾರು ಎಕರೆ ಆಸ್ತಿಯೆಲ್ಲ ಸಾಯಲಿರುವ ಆ ಮುದುಕನ ಹೆಸರಿನಲ್ಲಿತ್ತು. ಅನೇಕ ಜನರಿಗೆ ಕೊಟ್ಟಿದ್ದ ಸಾಲ ಕೈಗಡ ಇತ್ಯಾದಿಗಳಿಗೆಲ್ಲ ಅವನ “ಹೆಬ್ಬೆಟ್ಟಿನ” ಅವಶ್ಯಕತೆ ಇತ್ತು. ಅವನು ಸಾಯುವುದು ಗೊತ್ತಾದಾಗ ಬೆಳಗಾವಿಯಿಂದ ಡಿಸ್ಚಾರ್ಜ್ ಪಡೆದು ನನ್ನ ಆಸ್ಪತ್ರೆಯನ್ನು ಒಂದು ದಿನದ “ಸುರಕ್ಷಾ ತಂಗುದಾಣ” ಮಾಡಿಕೊಂಡರು. ಅವನನ್ನು ಒಂದು ದಿನದ ಮಟ್ಟಿಗೆ ಜೀವಂತ ಇಡುವುದಕ್ಕೆ ನಮ್ಮ ಸಹಾಯ ಪಡೆದು, ಸಬ್ ರೆಜಿಸ್ಟ್ರಾರ್ ಆಫೀಸ್ ತೆರದ ಕೂಡಲೇ ಅಲ್ಲಿ ‘ಎಲ್ಲ ಸಿಧ್ಧಗೊಳಿಸಿ’ ಈ ಮುದುಕನ “ಜೀವಂತ ಹೆಬ್ಬೆಟ್ಟ”ನ್ನು ಅಲ್ಲಿಗೆ ಸಾಗಿಸಿದರು…ಅಷ್ಟೇ.!!
“ಕೆಲಸ” ಮುಗಿದೊಡನೆ ಅಲ್ಲಿಂದ ಅವನನ್ನು ಸೀದಾ ತಮ್ಮ ಮನೆಗೆ ಸಾಗಿಸಿದರೆಂದೂ , ಮರುದಿನ ತುಂಬ ವಿಜೃಂಭಣೆಯಿಂದ ಅವನನ್ನು “ಬೀಳ್ಕೊಟ್ಟ” ರೆಂದೂ ಆಮೇಲೆ ಗೊತ್ತಾಯಿತು….!!
 

‍ಲೇಖಕರು G

October 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. Shantayya

    Harsh reality
    How society makes use of medical fraternity
    For selfish ends
    It’s logical that they don’t mind not to pay

    ಪ್ರತಿಕ್ರಿಯೆ
  2. Dr.Ratna Kulkarni

    ವಿಚಿತ್ರ ಆದರೂ ನಿಜ ಅನ್ನುವಂಥ ಘಟನೆಗಳು ವೈದ್ಯರ ಜೀವನದಲ್ಲಿ ಮೇಲಿಂದ ಮೇಲೆ ಬರುತ್ತವೆ.ಅದನ್ನು ಎಲ್ಲರಿಗೂ ತಿಳಿಯಪಡಿಸುವದು ಬಹಳ ಅವಶ್ಯಕ.ಉತ್ತಮ ಲೇಖನ.ಸರಣಿ ಮುಂದುವರಿಯಲಿ.

    ಪ್ರತಿಕ್ರಿಯೆ
  3. Dr Nagaraj Doddamani

    This is the storey of many of us. Such incidences make us loose faith with the people and with the belief system of ours. We tend to look at such issue carefully in the forthcoming days and try to be smart. But our HALLI AND PETE JANA tumba janaru. Navu emarisikollodantu guarantee. Still there is thing called ‘lucky and unlucky man’. We fit into that category. All in the game. Feel hurt but no way.

    ಪ್ರತಿಕ್ರಿಯೆ
  4. Gopaala Wajapeyi

    ಮಣ್ಣಿನ ಮುಂದೆ ಕಣ್ಣು ಕುರುಡಾಗುವುದು ಎಂಬುವುದು ಇದಕ್ಕೆಯೇ ಇರಬೇಕು. ಕರುಳಿಲ್ಲದ ದುರುಳರು…
    ಮುಂದಿನ ಕಂತಿಗೆ ಕಾಯುವೆ ಡಾಕ್ಟ್ರೆ…

    ಪ್ರತಿಕ್ರಿಯೆ
  5. ravi jammihal

    Harsh realities of life. How human mind manipulates the emotions of other person for his greed. No value for humans in this world except for other person’s monetary gain. Beautifully narrated. Very good work Kubsad.

    ಪ್ರತಿಕ್ರಿಯೆ
  6. GIRI BAGALI

    Sir, Beautiful narration. Tragedy of humanity. It happens everyday, parents sacrifice everything for children & they finally put them on bed of death before they die….
    Thanks for sharing your experience

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: