'ಬೆಳಗೆಂದರೆ ಮತ್ತೊಂದು ಮುಂಜಾವಿಗಾಗಿ ಕಾದು ಕೂಡುವದು' – ಅನಿಲ ತಾಳಿಕೋಟಿ

ಬೆಳಗು

ಅನಿಲ ತಾಳಿಕೋಟಿ

ಮುಗುಚಿ ಹಾಕಲೋ ಎಂಬಂತಿರುವ, ನಾಲ್ಕೂ ಬದಿಯಿಂದಲೂ ಎದ್ದೆದ್ದು ಬರುತ್ತಿರುವ ಅಲೆಗಳ ಆರ್ಭಟ. ಅದನ್ನು ಎದುರುಗೊಳ್ಳುವೆ, ಅಪ್ಪಿಕೊಳ್ಳುವೆ ಆದರೆ ಅಹಂಕಾರದಿಂದ ಎದುರಿಸುವದಿಲ್ಲಾ. ಅದನ್ನು ಚಾಲಕ ಶಕ್ತಿಯಾಗಿ ಬಳಸುವೆ -ಆದರೆ ಅತ್ಯಾಶೆಯಿಂದ ಸ್ವಾಹಾ ಮಾಡಿಕೊಳ್ಳುವದಿಲ್ಲ ಎನ್ನುವ ಪಾಠ ಕಲಿಯಲು ಸಮುದ್ರಯಾನ ಅತ್ಯಂತ ಉಪಯುಕ್ತವಾದದ್ದು. ನಮ್ಮನ್ನು ಕ್ಷುದ್ರರಾಗಿಸುವದಿಲ್ಲವಾದರೂ ನಮ್ಮ ಸ್ಥಾನಮಾನವನ್ನರಹದೆ ಬಿಡುವದಿಲ್ಲ. ನಮ್ಮನ್ನು ವಿನೀತರಾಗಿಸುತ್ತ, ತಗ್ಗಿ ಬಗ್ಗಿ ನಡೆಯಲು ಪ್ರೇರೇಪಿಸುತ್ತದೆ-ಸಾಗರ.
ಕಾಲು ಚಾಚಿ, ಕಣ್ಣು ಮುಚ್ಚಿ ನನ್ನನ್ನು ನೀನು ಸ್ವಲ್ಪ ಮಟ್ಟಿಗೆ ಅರಿಯಬಲ್ಲೆ. ನಿನ್ನ ಮೈ ಮನಸಿನಲ್ಲಿ ಮಗ್ನನಾಗಿಸಬಲ್ಲಿಯಾದರೆ ನನ್ನ ಬಳಿ ಬರಬಲ್ಲಿ ಎಂಬ ತಿಳವಳಿಕೆ ನೀಡುವ ಬೆಳಗು. ನೀನಗೇನೆಲ್ಲಾ ಅವಕಾಶ ಕೊಟ್ಟಿದ್ದೇನೆ -ತಿಳವಳಿಕೆ ತಂದೆ -ತಾಯಿ ನೀಡಿದರೆ, ಸಂಸಾರ ಸುಖ,ಶಾಂತಿ ನೀಡಿದೆ. ಮಿತ್ರರು ನಿನ್ನ ಮಹತ್ತರಿತಿದ್ದಾರೆ, ಸುಖಿಯೊ ಅಸುಖಿಯೊ ನೀನು ಎಂಬುವದು ನಿನ್ನ ಮನದಲ್ಲಿದೆ, ನಿನ್ನ ಕೈಯಲ್ಲಿದೆ. ಥಳ ಥಳ ಹೊಳೆಸಿ ತೊಳೆಸಿದ್ದೇನೆ ನಿಮ್ಮೆಲ್ಲರಿಗಾಗಿ ಅನುದಿನ. ನೋಡುವ ಭಾಗ್ಯ ಕರುಣಿಸಿದ್ದೇನೆ ಅದಕ್ಕೆಂದೆ. ನೋಡದೆ ಮಲಗುವ, ಮತ್ತೇನೋ ಮಾಡುವ ಸ್ವಾತಂತ್ರವನ್ನೂ ನಿಮಗೆ ಬಿಟ್ಟಿದ್ದೇನೆ. ಆಯ್ಕೆ ನಿನ್ನದು ಕಂದ ಎನ್ನುವ ವಾತ್ಸಲ್ಯಮಯಿ ಭಾಸ್ಕರ – ಕರ್ತವ್ಯದ ಕರೆಗಾರ. ಆರಾಮಾಗಿ ಕಾಲುಚೆಲ್ಲಿ ನನ್ನ ಬಗ್ಗೆ ಯೋಚಿಸಲು ನೀನು ಕಷ್ಟಪಡುತ್ತಿರುವೆಯಾದರೆ ಆ ಅಧಿಕಾರ ನಿನ್ನದು ಎಂಬ ಔದಾರ್ಯವಂತನಾತ. ಪ್ರಪಂಚದ ಯಾವ ತಂದೆ, ತಾಯಿಗೂ ತಮ್ಮ ಮಕ್ಕಳ ಅಭ್ಯುದಯಯದ ಹೊರತಾಗಿ ಮತ್ತೇನೋ ಬೇಕಾಗಿರಬಹುದೆ ಎಂಬ ಭಾವ ಬಂದ ದಿನ ಮನುಜನ ಜನ್ಮ ಅರ್ಥ ಕಳೆದುಕೊಂಡಂತೆ. ಹಾಗೆಯೇ ಕರ್ತವ್ಯ ಎಚ್ಚರಿಸುವದು ಅವನ ನಿಯೋಜಿತ ಕೆಲಸ ಅಲ್ಲ ಎಂದುಕೊಂಡ ದಿನ ನಮ್ಮ ಪಿತೃ ಋಣ ಹರಿದಂತೆ.

ಅಗಣಿತ ಅರಿವಿನ ಗಣಿಯಿದು, ಗಣಿತದಂತಹ ಸಲಕರಣೆ ನೀನು ಆವಿಷ್ಕರಿಸಬಲ್ಲೆಯಾದರೆ , ಸರ್ವ ಜನಾಂಗದ ಏಳಿಗೆ ಬಯಸುವೆಯಾದರೆ ಇಗೋ ಈ ಬೆಳಗಿನ ಉಡುಗೊರೆ ನಿನಗೆ. ಕಣ್ಣು ಮುಚ್ಚಿ ಕುಳಿತರೂ ಕುಣಿಯುವದು ಅರುಣರಾಗ ಕಣ್ಣ ಮುಂದೆ. ಹಗುರಾಗಿ ಉಸಿರಾಡುತ್ತ ಮನಸು ಪ್ರಶಾಂತ ವಾಗಿಸಿಕೊಳ್ಳುತ್ತ ನಿನ್ನ ನೀನೆ ಮರೆಯಬಲ್ಲೆಯಾದರೆ ನಿನ್ನ ಮೈಗೆ ತಂಗಾಳಿಯಾಗಿ ಬಾ ನೀಡುವೆ ಸಾಥಿ ಎಂಬ ಆಶ್ವಾಸನೆ ಅವನದು.
ಇದೇ ಧ್ಯಾನದ ವ್ಯಾಖ್ಯಾನವೋ ಎಬ ಸಂದಿಗ್ಧತೆ ಬೇಡಾ. ಮರೆಯುವದೆ, ತನ್ನನ್ನು ತಾನೆ ಮರೆತು ಆಚೆ-ಇಚೆಯ ಅರಿವಿಲ್ಲದೆ ನಿರುದ್ವಿಗ್ನನಾಗಿ ಘಂಟೆ ಎರಡು ಕಳೆಯಬಲ್ಲೆಯಾದರೆ ಅದೇ ಧ್ಯಾನ. ಯಾವ ಮಂತ್ರ, ತಂತ್ರಗಳು ಬೇಕಿಲ್ಲ.ಯಾವ ಅಖಂಡ ನಂಬುಗೆಗಳ ಅವಶ್ಯಕತೆ ಇಲ್ಲಾ. ನಾಡು ನುಡಿಗಳ ಗೊಂದಲವಿಲ್ಲ. ಆನಂದಿಸು ಈ ಕ್ಷಣ, ಈ ದಿನ, ಇಲ್ಲಿ ನೀನೆಲ್ಲಿರುವೆಯೋ ಅಲ್ಲಿ. ಈ ದಿನದ ಪ್ರತಿ ಘಳಿಗೆಯೂ ಅಮೂಲ್ಯ, ಪ್ರತಿ ಹಗಲು ಸುದಿನವೆ, ಪ್ರತಿ ಅಲೆಯೂ ಸಮಸ್ತದ ಮೂಟೆ ಹೊತ್ತಿರುವ ಸಂಚಲನವೆ. ಈ ಚಲನೆಯೆ ಜೀವಾಳ. ವೃತ್ತದ ಚಲನೆ ಜೀವನವೆಂದರೆ. ಕೊನೆ ಮೊದಲಿಲ್ಲದ ಅಥವಾ ಕೊನೆ ಮೊದಲಿಂದಲೆ ತುಂಬಿದ ಬಾಳಿದು. ನಿನಗೆ ಮಾತ್ರ ಗೊತ್ತು ಯಾವುದು ಆರಂಭ ಯಾವುದು ಕೊನೆ ಎಂಬುವದು. ನಿನ್ನ ವ್ಯಾಸವೂ ನಿನ್ನದೆ ಪ್ರತಿಬಿಂಬ. ಎಷ್ಟು ಬೇಕೋ ಅಷ್ಟು ಹಿಗ್ಗಿಸಿಕೊಳ್ಳಬಹುದು, ಆಕುಂಚಿಸಿಕೊಳ್ಳಲೂಬಹುದು. ಹಿಗ್ಗಿಸಿಕೊಂಡು ಯಾರನ್ನು ತಾಗಿಸಿಕೊಳ್ಳಬಹುದು ಎಂಬುವದು ನಮಗೆ ಬಿಟ್ಟಿದ್ದು. ಕುಗ್ಗಿಸಿಕೊಳ್ಳುತ್ತ ಎಷ್ಟು ಏಕಾಂಗಿಯಾಗಗಬಲ್ಲೆವು ಎಂಬುವದು ಕೂಡಾ ನಮಗೆ ಬಿಟ್ಟಿದ್ದು. ನಿನ್ನ ವೃತ್ತದ ಗಾತ್ರ ನಿಂತಿರುವದು ಅದರ ವ್ಯಾಸದ ಮೇಲಲ್ಲ ಬದಲಾಗಿ ಅದರ ಪರಿಧಿಯಿಂದ ಎಷ್ಟು ಜನ ಖುಷಿಯಾಗಿದ್ದಾರೆ ಎಂಬುವದರ ಮೇಲೆ. ಬೇರೆಯವರ ಖುಷಿಯೇ ಅದರ ಸಾಂದ್ರತೆಯ ಅಳತೆಗೋಲು. ಪ್ರತಿಯೊಬ್ಬರಿಗೆ ನೀನು ನೀಡಿದ ಸಂತಸ ಅವರಿಂದ ಪಡೆದ ನಲಿವನ್ನು ಕಳೆದೂ ಸಕಾರಾತ್ಮಕವಾಗಿ ಉಳಿಯಬಲ್ಲದಾದರೆ ಅದು ನಿನ್ನ ವೃತ್ತದ ಸಾಂದ್ರತೆಗೆ ಸೇರಿಕೆ ಆಗುತ್ತ ಹೋಗುವದು. ಸಾಂದ್ರವಾದಷ್ಟು ಸುಂದರವಾಗುತ್ತ ಸಾಗುವ ಬದುಕಿದು. ಆ ಸಾಂದ್ರತೆ ಇಟ್ಟುಕೊಂಡು ಬೆಳೆಯಬಲ್ಲೆಯಾದರೆ ಅದುವೆ ಜೀವನದ ಗುರಿ. ಆದರೆ ಎಚ್ಚರವಿರಲಿ , ಜಾಸ್ತಿ ಜನರಾದಷ್ಟು ಸಾಂದ್ರತೆ ಕಮ್ಮಿಯಾಗುತ್ತ ಹೋಗುವದು ಜಗ ನಿಯಮ. ನಮ್ಮ ಅಂತಿಮ ಗುರಿ ಎಷ್ಟು ಸಾಧ್ಯವಗುತ್ತದೋ ಅಷ್ಟು ಇತರರನ್ನು ಮುಟುತ್ತ ನಾವು ಏಕಾಂಗಿಯಾಗಿ ಏಳಿಗೆಯಾಗುತ್ತ ಎಷ್ಟು ಸಾಂದ್ರವಾಗಿರಬಲ್ಲೆಯೋ ಅಷ್ಟು ಸಾಂದ್ರವಾಗಲು ಪ್ರಯತ್ನಿಸುವದು.
ಈ ಸಾಂದ್ರತೆಯ ಅಳತೆಗೋಲು ಅನೇಕ. ಬೆಳೆದಂತೆಲ್ಲ ಬದಲಾಗುವ ಬಾಬತಿದು -ನಮ್ಮ ದ್ರವ್ಯದ ಮೊತ್ತ ನಾವಲ್ಲದೆ ಮತ್ಯಾರು ನಿರ್ಧರಿಸಬಲ್ಲರು? ಹುಟ್ಟಿದಾಗ ಪರಿಪೂರ್ಣ ಒಂದು ನಮ್ಮ ಸಾಂದ್ರತೆಯ ಸಂಖ್ಯೆ. ನೂರು ಪ್ರತಿಶತ ಇದ್ದಂತೆ ಇದು. ಪ್ರತಿಯೊಬ್ಬರಿಗೂ ಜೀವನ ಒಡ್ಡುವ ಸವಾಲಿದು. ನಿನಗೊಂದು ಆಯುಸ್ಸೆಂಬ ನಿನ್ನ ಕೈ ಮೀರಿದ ಅಸ್ಥಿರವಾದ ಧಾತು ಒಂದನ್ನು ಅಳವಡಿಸಿದ್ದೇನೆ. ಅಲ್ಲಿಯವರೆಗೂ ಬದುಕಿ ನಿನ್ನ ಆರಂಭದ ಶೇಕಡಾ ನೂರಿನಿಂದ ಎಷ್ಟು ದೂರ ಸಾಗಿ ಹೋಗುತ್ತಿಯೋ ನೋಡೋಣ ಎಂಬ ಸವಾಲು. ಅಂತಹ ನೂರಾರು ಜನುಮಗಳ, ಯುಗ ಯುಗಾಂತರದ ಜನನ ಮರಣಗಳ ಪಟ್ಟಿ ಹರಡಿದ್ದೇನೆ ಈ ಜಗದಲ್ಲಿ. ಸುಖ-ಶಾಂತಿಯನ್ನು ಅರಿಸುವ ಅಗತ್ಯವಿಲ್ಲ. ಇನ್ನೂ ವರೆಗೂ ಈ ನೂರನ್ನು ತ್ರೇತಾಯುಗದಿಂದ ಇಲ್ಲಿಯವರೆಗೂ ಎಷ್ಟು ಮಾನವ ಜನ್ಮಗಳು ಮುಟ್ಟಿವೆಯೋ ನನಗಂತೂ ಗೊತ್ತಿಲ್ಲ. ಇಗಿರುವ ಜಗದ ಸ್ಥಿತಿ ನೋಡಿದರೆ ನಾವಿನ್ನೂ ಕ್ರಮಿಸುವ ದಾರಿ ಬಹಳ ದೂರವಿದ್ದಂತನಿಸುವದಿಲ್ಲವೆ?
ಯಾವ ಕ್ರಮವಿಲ್ಲದೆ, ವೈಜ್ನಾನಿಕವಲ್ಲದ, ಸ್ವೇಚ್ಛಾನುಸಾರದ ಮಾದರಿಯೊಂದನ್ನು ಸುಮ್ಮನೆ ನೋಡೋಣ. ನನಗೆ ಅನಿಸುವಂತೆ ಬುದ್ದ, ಬಸವ, ಏಸುಗಳನ್ನು ಬದಿಗಿರುಸುವಾ. ರಾಮ, ಕೃಷ್ಣ -ಅವತಾರ ಗಳ ಬಗ್ಗೆ ಗೊತ್ತಿರುವದಕ್ಕಿಂತ ಹೆಚ್ಚು ಗೊತ್ತಿಲ್ಲದ್ದು – ಅವರನ್ನು ಬಿಟ್ಟು ಬಿಡುವಾ, ನನ್ನ ಅಲ್ಪ ಮತಿಗೆ ಗೊತ್ತಿರುವ ಏಕ ಮಾತ್ರ ಉದಾಹರಣೆ ಎಂದರೆ ಮಹಾತ್ಮನದು, ನನ್ನ ವೈಯಕ್ತಿಕ ದೃಷ್ಟಿಯಲ್ಲಿ ಆತ ಪ್ರಾಯಶಃ ಶೇಕಡಾ ೮೫ ಅನಿಸುತ್ತದೆ. ‘A’ (ಉದಾತ್ತ ಮಾನವ) ಗಿಂತ ಸ್ವಲ್ಪ ಕಮ್ಮಿ. ಆದರೆ ಉದಾತ್ತತೆಯತ್ತ ಖಂಡಿತವಾಗಿ ಹೊರಟವನು, ಇಲ್ಲಿಯವರೆಗೆ ಎಷ್ಟು ಜನ ಯಾವ ಯಾವ ಪೆರ್ಸೆಂಟ ಗಳಿಸಿದ್ದಾರೋ ಅದನ್ನು ವರ್ಗಿಕರಿಸುವ ಗುರು ಎಂದು ಬರುತ್ತಾನೋ ನನಗಂತೂ ಗೊತ್ತಿಲ್ಲ -ಕಾಯುವ ತಾಳ್ಮೆ ಇದ್ದುದಾದರೆ ಅದುವೆ ದೊಡ್ಡ ಬಹುಮಾನ ಇ ಜೀವನದ್ದು. ಗಾಂಧಿಯನ್ನು ಮೀರಿಸುವ ಇನ್ನೊಬ್ಬ ಮಾನವ ಬಂದೇ ಬರುತ್ತಾನೆ – ಪ್ರಶ್ನೆ ಅದಲ್ಲ – ನಾವು ಅಳೆಯುವ ಮಾನದಂಡ ಎಷ್ಟು ಕಳಂಕ ರಹಿತವಾಗಿರಬಲ್ಲದು ಎಂಬುವದು ನಿಜದ ಪ್ರಶ್ನೆ. ಇವತ್ತಿನ ಸೋಶಿಯಲ ಮೀಡಿಯಾಗಳು, ಮಾರುಕಟ್ಟೆಯ ದ್ವಂದ್ವಗಳು, ಬದಲಾಗುತ್ತಿರುವ ನಮ್ಮ ಮೌಲ್ಯಗಳು, ಸಂವೇದನೆಗಳು ನನಗೇನೋ ಇನ್ನೊಬ್ಬ ಮಹಾತ್ಮನನ್ನು ಅಳೆಯಲು ನಾವು ಅಸಮರ್ಥರಾಗಿರುತ್ತೇವೆ ಎನಿಸುತ್ತದೆ. ಕೆಡುವುದೇ ಕಾಲದ ನಿಯಮ -ಕೆಡುವುದಲ್ಲದೆ ನಾವು ಒಳ್ಳೆಯದನ್ನು ಕಟ್ಟಲಾರೆವೂ ಏನೋ? ಕೆಡುವುದರ ಸವಾಲೆಂದರೆ ಅಂತಿಮ ಕೆಡುವಿಕೆ ಏನೆಂಬ ಅರಿವಿರಲಾರದ್ದು. ಆಟದ ವಿನ್ಯಾಸ ನಾವು ನಿರ್ಮಿಸಿದ್ದಲ್ಲವಾದ್ದರಿಂದ ಮುಕ್ತಾಯ ನಮ್ಮ ಅರಿವಿನಾಚೆಯದು. ಅದೇ ಪ್ರಾಯಶ ನಮ್ಮನ್ನು ಆಟದಿಂದ ವಿಮುಖರಾಗಿ ಓಡಿಹೋಗದಂತೆ ಪ್ರಚೋದಿಸುತ್ತಿರುವದು. ಬೆಳಗೆಂದರೆ ಅದೇ -ಬದುಕಿನ ಮತ್ತೊಂದು ಮುಂಜಾವಿಗಾಗಿ ಕಾದು ಕೂಡುವದು, ಹೊಸ ಹುರುಪಿನೊಂದಿಗೆ ಹೊಸ ಆಶೆಯಿಂದ.
 

‍ಲೇಖಕರು G

October 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. vidyashankar

    ‘ಬೆಳಗೆಂದರೆ ಅದೇ -ಬದುಕಿನ ಮತ್ತೊಂದು ಮುಂಜಾವಿಗಾಗಿ ಕಾದು ಕೂಡುವದು, ಹೊಸ ಹುರುಪಿನೊಂದಿಗೆ ಹೊಸ ಆಶೆಯಿಂದ…’ Lovely lahari!

    ಪ್ರತಿಕ್ರಿಯೆ
  2. mmshaik

    arivina haNte hchhiddiri ..dipaavaliya shubhaashyagaLondige…….abhinandanegaLu..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: