ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಎಂದೂ ಮರೆಯದ ಎರಡು ಪಾಠಗಳು


ನನ್ನ ಮೂರು ದಶಕಗಳಿಗಿಂತ ಹೆಚ್ಚಿನ ಅವಧಿಯ ವೈದ್ಯಕೀಯ ಜೀವನದಲ್ಲಿ, ರೋಗಿ, ಅವರ ಸಂಬಂಧಿಕರು ಹಾಗೂ ನಮ್ಮ ನಡುವೆ ನಡೆದ ಹಲವು ಸಂತೋಷದ , ತೃಪ್ತಿದಾಯಕ ಘಟನೆಗಳನ್ನೂ, ಮತ್ತೆ ಮನಸ್ಸನ್ನು ಘಾಸಿಗೊಳಿಸುವ ಕೆಲವು ವಿದ್ಯಮಾನಗಳನ್ನೂ ಕಂಡಿದ್ದೇನೆ. ಜೊತೆಗೆ ಕೆಲವೊಮ್ಮೆ ಏನೂ ಅರಿಯದ ಮುಗ್ಧರೆಂದು ನಾನು ಭಾವಿಸಿಕೊಂಡ ರೋಗಿಗಳು, ಮತ್ತವರ ಸಂಬಂಧಿಕರು ನನಗೆ “ಮರೆಯಲಾಗದ ( ಮರೆಯಬಾರದ) ಪಾಠ” ಕಲಿಸಿದ ಘಟನೆಗಳು ಜರುಗಿವೆ, ನಾನು ಒಂದಿಷ್ಟು ಭಾವಜೀವಿಯಾದ್ದರಿಂದ ಅವೆಲ್ಲವೂ ನನ್ನ ಮನ:ಪಟಲದಲ್ಲಿ ಅಚ್ಚಳಿಯದೆ ಉಳಿದುಕೊಂಡಿವೆ.
ಅಂಥವುಗಳಲ್ಲಿ ‘ಮುಟ್ಟಿ ನೋಡಿಕೊಳ್ಳುವಂಥ’ ಎರಡು ಮಾತ್ರ ಇಲ್ಲಿ.
ಪಾಠ-೧
ಸುಮಾರು ಹತ್ತು ವರ್ಷಗಳ ಹಿಂದಿನ ಮಾತು, ನಮ್ಮ ಭಾಗದಲ್ಲಿ ನಿರಂತರ ಮೂರು ವೆರ್ಷದ ಬರಗಾಲ ಕಾಡಿತು. ತೋಟಗಳಲ್ಲಿದ್ದ ಎಲ್ಲ ಬೆಳೆ ಒಣಗಿ, ಜನರ ಕೈಯಲ್ಲಿ ದುಡ್ಡಿಲ್ಲದಂತಾಗಿ ಕಷ್ಟಪಡುವಂತಾಯ್ತು. ಮೊದಲೇ ನಮ್ಮ ಜನ ಆರೋಗ್ಯಕ್ಕಾಗಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವಂಥವರು. ತಮ್ಮ ದಿನ ನಿತ್ಯದ ಖರ್ಚು ವೆಚ್ಚಗಳನ್ನೆಲ್ಲ ತೂಗಿಸಿದ ನಂತರವೆ ಆರೋಗ್ಯಕ್ಕಾಗಿ ವೆಚ್ಚಾ ಮಾಡಲು ಮನಸೂ ಮಾಡುತ್ತಾರೆ. ಅಂಥದರಲ್ಲಿ ಬರಗಾಲ ಬಿದ್ದರಂತೂ ತೀರಿತು, ಇನ್ನಷ್ಟು ನೆಪ ಸಿಕ್ಕಂತೆ. ಹೀಗಾಗಿ ಅನೇಕ ಬಾರಿ ರೋಗ ಉಲ್ಬಣಿಸಿದ ನಂತರ ಆಸ್ಪತ್ರೆಗೆ ಬರುವುದು ಸಾಮಾನ್ಯ. ಕೆಲವೊಮ್ಮೆ ಯಾವ ಸ್ಥಿತಿಯಲ್ಲಿ ಬರುತ್ತಿದ್ದರೆಂದರೆ ರೋಗಿಗಳನ್ನು ಉಳಿಸುವುದು ಕಷ್ಟಸಾಧ್ಯವಾಗುತ್ತಿತ್ತು. ನಾನು ಸರಕಾರೀ ವೈದ್ಯಕೀಯ ವಿದ್ಯಾಲಯದಲ್ಲಿ ಸರಕಾರದ ಖರ್ಚಿನಿಂದ ವೈದ್ಯಕೀಯ ಕಲಿತದ್ದು, ಅಲ್ಲದೆ ಹದಿನೈದು ವರ್ಷ ಸರಕಾರೀ ವೈದ್ಯನಾಗಿ ಸೇವೆ ಸಲ್ಲಿಸಿದ್ದರಿಂದ ಸಾಮಾನ್ಯ ಜನರಿಗೆ ಉಪಯುಕ್ತವಾದುದನ್ನು ಏನಾದರೂ ಮಾಡುತ್ತಲೇ ಇರಬೇಕೆಂಬ ವಿಚಾರ ಯಾವಾಗಲೂ ನನ್ನಲ್ಲಿ ಜಾಗೃತವಾಗಿರುತ್ತದೆ, ಜನರ ದುಡ್ಡಿನಿಂದ ಕಲಿತ ಈ ವಿದ್ಯೆ ಸ್ವಲ್ಪವಾದರೂ ಜನೋಪಯೋಗಿಯಾಗಬೇಕಲ್ಲ. ಅಲ್ಲದೆ ಉಚಿತ ಸೇವೆಗಳು, ರಿಯಾಯತಿ ಸೇವೆಗಳು ಇತ್ಯಾದಿಗಳನ್ನೆಲ್ಲ ಆಗಾಗ್ಗೆ ‘ಬಳಸುತ್ತಿರುತ್ತೇನೆ’, ಹಾಗೆ ಮಾಡುತ್ತಲೇ ರೋಗಿಗಳಿಗೆ ಆರ್ಥಿಕ ತೊಂದರೆ ಇದ್ದಾಗಲೆಲ್ಲ ನಾನು ಸ್ಪಂದಿಸಿದ್ದೇನೆ, ಎಂಬ ತೃಪ್ತಿ ನನಗಿದೆ. ಹೀಗಾಗಿ ಜನ ಕೈಯಲ್ಲಿ ದುಡ್ಡಿಲ್ಲದೆ ಕಷ್ಟಪಡುತ್ತಿರುವುದನ್ನು ನೋಡಿ ನನಗೆ ಸುಮ್ಮನೆ ಇರುವುದಾಗಲಿಲ್ಲ. ಅದಕ್ಕೆಂದೇ ಯೋಜನೆಯೊಂದನ್ನು ಸಿಧ್ದಪಡಿಸಿದೆ,
“ನಿಮ್ಮ ಕ್ಷೇತ್ರಗಳಲ್ಲಿ ನಿಜವಾಗಿಯೂ ಬಡವರಾದ ಯಾರಿಗಾದರೂ ರಿಯಾಯತಿ ದರದಲ್ಲಿ ಅಥವಾ ಉಚಿತವಾದ ವೈದ್ಯಕೀಯ ಸೇವೆಯ ಅವಶ್ಯಕತೆಯಿದೆ, ಎಂಬುದು ನಿಮ್ಮ ಗಮನಕ್ಕೆ ಬಂದರೆ, ನಮ್ಮ ಆಸ್ಪತ್ರೆಗೆ ಕಳಿಸಿರಿ. ಅವರ ಜೊತೆಗೆ ನಿಮ್ಮ ಶಿಫಾರಸು ಪತ್ರ ಕಳಿಸಿಕೊಡಿ. ಅವರವರ ಪರಿಸ್ಥಿತಿಗೆ ಅನುಸಾರವಾಗಿ ಉಚಿತ ಅಥವಾ ರಿಯಾಯತಿ ದರದ ವೈದ್ಯಕೀಯ ಸೇವೆ ನೀಡಲು ನಾನು ಉತ್ಸುಕನಾಗಿದ್ದೇನೆ…”
ಎಂಬ ಒಕ್ಕಣೆಯಿರುವ “ಹ್ಯಾಂಡ್ ಬಿಲ್” ಗಳನ್ನು ಪ್ರಿಂಟ್ ಹಾಕಿಸಿ, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೂ, ತಾಲೂಕಾ ಪಂಚಾಯಿತಿ ಸದಸ್ಯರಿಗೂ ತಲುಪಿಸಿದೆ. ಅದು ನಿಜವಾಗಿಯೂ ಕೆಲಸ ಮಾಡಿತು. ಜನಮೆಚ್ಚುಗೆಯನ್ನೂ ಪಡೆಯಿತು. ಅನೇಕ ಜನ ಆಸ್ಥೆವಹಿಸಿ ರೋಗಿಗಳನ್ನು ಕಳಿಸತೊಡಗಿದರು. ನನ್ನ ‘ಸಮೀಪವರ್ತಿ’ಗಳನೇಕರು ನನ್ನನ್ನು ನೋಡಿ ನಗುತ್ತಿದ್ದರಾದರೂ, ಇದು ನಾನು ನಮ್ಮ ಸಮಾಜಕ್ಕೆ ಮಾಡಲೇಬೇಕಾದ ಕರ್ತವ್ಯವೆಂದು ಭಾವಿಸಿ ಸುಮ್ಮನಾಗುತ್ತಿದ್ದೆ. ಅದರಲ್ಲಿ ಆತ್ಮತೃಪ್ತಿಯ “ಸ್ವಾರ್ಥ” ಕೂಡ ಇತ್ತಲ್ಲ.
ಹೀಗಿರುವಾಗ ಒಂದು ದಿನ ಒಬ್ಬ ಶಸ್ತ್ರ ಚಿಕಿತ್ಸೆಯಾದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಒಟ್ಟು ಬಿಲ್ಲಿನಲ್ಲಿ ಸುಮಾರು ಅರ್ಧದಷ್ಟು ರಿಯಾಯತಿ ಮಾಡಿ, ಅಷ್ಟೇ ದುಡ್ಡನ್ನು ಮಾತ್ರ ಕಟ್ಟುವಂತೆ ನಮ್ಮ ಸಿಬ್ಬಂದಿಯವರು ಅವಳ ತಂದೆಗೆ ತಿಳಿಸಿದ್ದರು. ಅಷ್ಟೆಲ್ಲ ರಿಯಾಯತಿ ಮಾಡಿದರೂ ಸಮಾಧಾನವಾಗದೇ ಅವನು ಮತ್ತೆ ಇನ್ನಷ್ಟು ಕಡಿಮೆ ಮಾಡುವಂತೆ ನನ್ನೆದುರಿಗೆ ಬಂದು ನಿಂತ. ನನಗೆ ವಿಚಿತ್ರವೆನಿಸಿತು. ಯಾಕೆಂದರೆ ಅವನೇನೂ ಬಡವನಲ್ಲ ಎಂದು ನನಗೆ ಗೊತ್ತಿತ್ತು. ಎಷ್ಟು ಕಡಿಮೆ ಮಾಡಿದರೂ ‘ಇನ್ನೂ ಕಡಿಮೆ ಮಾಡಲಿ’ ಎಂಬ ನಮ್ಮ ಜನರ ಸ್ವಭಾವಕ್ಕೆ ಬೇಸರವೂ ಆಯಿತು. ಆದರೂ ಬೇಸರ ತೋರ್ಪಡಿಸದೆ ಅವನಿಗೆ ತಿಳಿಹೇಳತೊಡಗಿದೆ.
“ ನೋಡಪಾ, ನಿನಗೂ ಗೊತ್ತೈತಿ. ಎಲ್ಲಾ ಕಡೆ ಬರಗಾಲ ಬಿದ್ದ ಸಲುವಾಗಿ ನಾನss ಮೊದಲಿನಕಿಂತ ಬಿಲ್ ಕಡಿಮಿ ಮಾಡಿನಿ, ಅಷ್ಟs ಅಲ್ಲದ ನಿಮ್ಮಲ್ಲಿನ ಪೇಶಂಟ್ ಕಳಸರಿ, ಯಾರರ ಬಡವರ ಇದ್ದರ ಕಡಿಮಿ ರೇಟ್ ನ್ಯಾಗ ಅಥವಾ ಫ್ರೀ ಆಪರೇಶನ್ ಮಾಡ್ತೀನಿ, ಅಂತ ಎಲ್ಲಾ ಪಂಚಾಯಿತಿಗಿ ಪತ್ರ ಸಹಿತ ಬರದ ತಿಳಿಸಿನಿ, ನಿನಗೂ ಗೊತ್ತಿರಬೇಕಲ್ಲ…”
“ ಹೌದ್ರಿ, ನಾನೂ ಆ ಪತ್ರ ಓದಿನಿ ಬಿಡ್ರಿ ಸಾಹೇಬ್ರ..”
“ಮತ್ತ, ಅದು ಗೊತ್ತಿದ್ದೂ ಇನ್ನss ಕಡಿಮಿ ಮಾಡಾಕ ಕೇಳ್ತಿಯಲ್ಲಪಾ..?”
“ ನೋಡ್ರಿ ಸಾಹೇಬ್ರ, ನನಗೂ ಎಲ್ಲ ಗೊತ್ತಾಕ್ಕೈತಿ. ಈಗಿನ ಕಾಲದಾಗ ಯಾರರ ಸುಮ್ನss ಬಿಲ್ ಕಡಿಮಿ ಮಾಡ್ತಾರೇನ್ರಿ…? ನಿಮ್ಮಲ್ಲಿ ಮೊದಲಿನಕ್ಕಿಂತ ಈಗ ಪೇಶಂಟ್ ಕಡಿಮಿ ಆಗಿರಬೇಕು, ಅದಕ್ಕss ಪೇಶಂಟ್ ಹೆಚ್ಚ ಬರಲಿ ಅಂತ ಆ ಪತ್ರ ಎಲ್ಲಾ ಕಡೆ ಕೊಟ್ಟಕಳಿಸಿರಿ, ಬಿಡ್ರೀ….. ಅಷ್ಟೂ ತಿಳೆಂಗಿಲ್ಲೇನ್ ನನಗ…….!!”

ನಾನು ಒಂದು ಕ್ಷಣ ಆವಾಕ್ಕಾದೆ. ಜೊತೆಗೆ ಒಂದಿಷ್ಟು ಅಸಮಾಧಾನವೂ ಆಯಿತು. ಜನರಿಗೆ, ಅದರಲ್ಲೂ ಬಡವರಿಗೆ ಅನುಕೂಲವಾಗಲಿ, ಎಂದು ಪ್ರಾಮಾಣಿಕವಾಗಿ ಪ್ರಯತ್ನಿಸಿದ ನನಗೆ ಅವನು ಕೊಟ್ಟ “ಬಹುಮಾನ” ಎತ್ತಿಕೊಳ್ಳಲು ಸಾಧ್ಯವಾಗಷ್ಟು ಭಾರವಾಯಿತು. ಎಲ್ಲ ಸಂಗತಿಗಳಿಗೂ ಇರುವಂತೆ ಇದಕ್ಕೂ ಎರಡು ಮುಖಗಳಿರಬಹುದು ಎಂಬ ವಿಚಾರ ನನಗೆ ಹೊಳೆದೇ ಇರಲಿಲ್ಲ. “ರಿಯಾಯತಿ ಅಥವಾ ಉಚಿತ ಸೇವೆ ನೀಡುತ್ತೇವೆ” ಎಂದ ತಕ್ಷಣ ಜನ ನಮ್ಮೆಡೆಗೆ ಗೌರವದಿಂದ, ಮೆಚ್ಚುಗೆಯಿಂದ ಅಷ್ಟೇ ಅಲ್ಲದೇ, ಅನುಮಾನದಿಂದಲೂ ನೋಡಬಹುದಲ್ಲ, ಎಂಬುದು ನನಗೆ ಹೊಳೆದೇ ಇರಲಿಲ್ಲ. ಅದು ಅಂದು ಮನದಟ್ಟಾಯಿತು. ಜೀವನದಲ್ಲಿ ಮರೆಯದ ಪಾಠ ಕಲಿಸಿದ ಆತನಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದೆ.
ಅದಾದ ನಂತರ “ಉಚಿತ ಹಾಗೂ ರಿಯಾಯತಿ ” ಸೇವೆಗಳ ‘ರೀತಿ’ಯನ್ನು ಬದಲಿಸಿದೆ, ನಿಲ್ಲಿಸಿಲ್ಲ.
 
ಪಾಠ-೨
ಮೊದಲು ಸರಕಾರೀ ಸೇವೆಯಲ್ಲಿದ್ದ ನಾನು, ಆ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಕೈತುಂಬ ಸಾಲ ಮಾಡಿ ಮುಧೋಳದಲ್ಲಿ ಅದೇ ಹೊಸದಾಗಿ ಆಸ್ಪತ್ರೆ ಕಟ್ಟಿದ್ದೆ. ನಮ್ಮ ಸೇವೆ “ರೋಗಿಸ್ನೇಹಿ” ಆಗಿರಲೆಂಬ ನನ್ನ ಧ್ಯೇಯ ಹಾಗೂ ಉದ್ದೇಶಕ್ಕೆ ಅನುಸಾರವಾಗಿ ಸಾಧ್ಯವಿದ್ದಷ್ಟೂ ರೋಗಿಗಳಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಿ ಕೆಲಸ ನಿರ್ವಹಿಸತೊಡಗಿದೆ. ರೋಗಿಗಳು ಯಾವುದೇ ಸಂದರ್ಭದಲ್ಲೂ ಪರದಾಡದಂತಿರಲೆಂದು ನನ್ನ ಸೆಲ್ ನಂಬರನ್ನು ದೊಡ್ಡದಾಗಿ ಪ್ರಿಂಟ್ ಹಾಕಿಸಿ ರಿಷೆಪ್ಶನ್ ನಲ್ಲಿ ಅಂಟಿಸಿದೆ. ಅಲ್ಲದೆ ನಾನು ಎಂದೂ ಮೊಬೈಲ್ ಸ್ವಿಚ್ ಆಫ್ ಮಾಡುವುದಿಲ್ಲ. ಇಷ್ಟೆಲ್ಲ ಮಾಡಿದರೂ ‘ಯಾವುದೋ ಮಾಯ’ದಲ್ಲಿ ಕೆಲವರು ಪರದಾಡುತ್ತಾರೆ, ಆ ಮಾತು ಬೇರೆ.
ಹೀಗಿರುತ್ತಿರುವಾಗ ಒಂದು ದಿನ ಸಮೀಪದ ಹಳ್ಳಿಯ ‘ವಿ.ಐ.ಪಿ.’ಯೊಬ್ಬ ದ್ವಿಚಕ್ರ ವಾಹನದಿಂದ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿ ಬಂದ. ಅಷ್ಟೊಂದು ಗಂಭೀರ ಗಾಯಗಳೇನೂ ಇರದಿದ್ದರೂ ಬಿದ್ದು ಬಂದವರು ವಿ.ಐ.ಪಿ. ಇದ್ದದ್ದೇ ಒಂದು ಗಂಭೀರ ವಿಷಯವಲ್ಲವೇ? ಗಾಯಗಳನ್ನೆಲ್ಲ ಪರೀಕ್ಷಿಸಿ, ತೊಳೆದು, ಔಷಧಿ ಹಚ್ಚಿ, ಡ್ರೆಸ್ಸಿಂಗ್ ಮಾಡಿ, ಚಂದನೆಯ ಮಾತಾಡಿ, ಡಿಲಕ್ಸ್ ರೂಮಿನಲ್ಲಿ ಅಡ್ಮಿಟ್ ಮಾಡಿ, ಸಾಂತ್ವನ ಹೇಳಿ ಬರಬೇಕಾದರೆ ಒಂದು ಗಂಟೆಯ ಅಮೂಲ್ಯ ವೇಳೆ ವ್ಯಯವಾಗಿತ್ತು. ಆದರೆ ಅದು ಇಂಥವರಿದ್ದಾಗ ಅನಿವಾರ್ಯ. ವಿ.ಐ.ಪಿ. ಅಲ್ಲದ ರೋಗಿಯಾಗಿದ್ದರೆ ಇಷ್ಟೇ ಕೆಲಸ ಮಾಡಲು ಹತ್ತು ನಿಮಿಷ ಸಾಕು. ಮತ್ತೆ ಅವರು ತೋರುವ ಕೃತಜ್ಞತೆಯಂತೂ ಬೆಲೆ ಕಟ್ಟಲಾಗದ್ದು. ಗಮನಿಸುವ ಇನ್ನೊಂದು ವಿಷಯವೆಂದರೆ ಕೆಲವು ವಿ.ಐ.ಪಿ.ಗಳು ಬಿಲ್ಲು ಆಮೇಲೆ ಕಳಿಸುತ್ತೇನೆಂದು ಬಿರಬಿರನೆ ಹೊರಟು ಬಿಡುತ್ತಾರೆ. ಪೆಚ್ಚಾಗಿ ಅವರೆಡೆಗೆ ನೋಡುತ್ತಾ ನಿಲ್ಲುವುದಷ್ಟೇ ನಮ್ಮ ಹಕ್ಕು. ಅದೇ ಬಡವರಾದರೆ ಬಿಲ್ಲಿನಲ್ಲಿ ಸ್ವಲ್ಪವೇ ಕಡಿಮೆ ಮಾಡಿದರೂ, ಸಾಲ ಮಾಡಿಯಾದರೂ ತಂದುಕೊಟ್ಟು ಖುಷಿಯಿಂದ ಹರಸುತ್ತಾರೆ.
ಅವನು ನಮ್ಮಲ್ಲಿ ಅಡ್ಮಿಟ್ ಆದ ದಿನವೇ ನನ್ನ ಮಗಳಿಗೆ ತಲೆನೋವು, ತಲೆತಿರುಗುವುದು ಪ್ರಾರಂಭವಾಯಿತು. ಅಷ್ಟಿಟ್ಟು ನೋವಿಗೆಲ್ಲ ಜಪ್ಪೆನ್ನದ ನನ್ನ ಮಗಳು ತಲೆ ನೋಯುತ್ತದೆ ಎಂದಾಗ ನನಗೆ ಸ್ವಲ್ಪ ಗಾಬರಿಯಾಯಿತು. ವೈದ್ಯರಾದ ನಮಗೆ ತಲೆನೋವಿನ ನೂರೆಂಟು ಕಾರಣಗಳೂ, ಅದರಿಂದಾಗಬಹುದಾದ ಅಪಾಯಗಳೂ ಗೊತ್ತಿರುತ್ತವಾದ್ದರಿಂದ, ಮನೆಯಲ್ಲಿ ಯಾರಿಗೆ ಏನೇ ಆಗಲಿ ಚಿಂತ ಶುರುವಾಗಿಬಿಡುತ್ತದೆ. ಮನಸ್ಸು ಹರದಾರಿ ಮುಂದೆ ಓಡುತ್ತದೆ. ಏನೇನೋ ವಿಚಾರಗಳು ಬರಲಾರಂಭಿಸುತ್ತವೆ. ಆಗಲೂ ಹಾಗೆಯೇ ಆಯಿತು . ನನ್ನ ಅತ್ಯಂತ ಪ್ರೀತಿಯ ಮಗಳು ತಲೆನೋವು ಎಂದಾಗ ಆಗಿಂದಾಗ್ಯೆ ಅವಳನ್ನು ಕರೆದುಕೊಂಡು ಬೆಳಗಾವಿಯಲ್ಲಿ ನ್ಯುರೋಸರ್ಜನ್ ಗೆ ತೋರಿಸಿ ಸಿ.ಟಿ. ಸ್ಕಾನ್ ಮಾಡಿದರೆ, ಅವರು ಸ್ವಲ್ಪ ಸಮಸ್ಯೆಯಿದೆಯೆಂದೂ ಅದಕ್ಕಾಗಿ ಅವಳನ್ನು ಬೆಂಗಳೂರಿಗೆ ಹೆಚ್ಚಿನ ಪರೀಕ್ಷೆಗಾಗಿ ಕರೆದುಕೊಂಡು ಹೋಗಲೇಬೇಕೆಂದೂ ಹೇಳಿದಾಗ ಚಿಂತೆ ಹಾಗೂ ಆತಂಕ ಹೆಚ್ಚಾಯಿತು. ಅದೇ ಆತಂಕ ಹಾಗೂ ಚಿಂತೆಯನ್ನು ತಲೆಯೆಲ್ಲಾ ತುಂಬಿಕೊಂಡು ಮರುದಿನ ಬೆಳಿಗ್ಗೆ ನಮ್ಮ ಆಸ್ಪತ್ರೆಗೆ ಹೋದರೆ ಈ ವಿ.ಐ.ಪಿ. ಮಹಾಶಯ ನನ್ನ ಮೇಲೆ ಗರಂ ಆಗಿ ಕುಳಿತುಬಿಟ್ಟಿದ್ದ..
“ಏನ್ರೀ, ನನ್ನ ಅಡ್ಮಿಟ್ ಮಾಡಿ ನೀವು ಚೈನಿ ಮಾಡಾಕ ಹೋಗಿದ್ರೇನು..” ಅಂದ
ನನಗೆ ಸ್ವಲ್ಪ ಬೇಸರವಾಯಿತು. ನಮ್ಮ ಕಷ್ಟ ನಮಗೆ, ಇವನು ಮಾತಾಡುವ ರೀತಿ ಎಂಥದ್ದಿದೆಯಲ್ಲ ಎಂದುಕೊಳ್ಳುತ್ತ,
“ ಇಲ್ರೀ, ಸ್ವಲ್ಪ ಪರ್ಸನಲ್ ಕೆಲಸ ಇತ್ತು, ಅದೂ ಒಂದss ದಿನ ಹೊಗೀನಿ ”
“ ಮತ್ತ ನಮ್ಮನ್ನ ಇಲ್ಲಿ ಒಗದ್ ಹೊಗೂದೇನ್ರಿ”
“ ನಮ್ಮ ಸಿಬ್ಬಂದಿ ಹಾಗೂ ಅಸಿಸ್ಟಂಟ್ ಡಾಕ್ಟರು ನಿಮ್ಮ ವ್ಯವಸ್ಥಾ ಮಾಡ್ಯಾರಲ್ರಿ..ವ್ಯಾಳ್ಯಾಕ್ ಸರಿಯಾಗಿ ಇಂಜೆಕ್ಷನ್,ಡ್ರೆಸ್ಸಿಂಗ್ ಎಲ್ಲಾ ಮಾಡಾಕ ನಾ ಹೇಳೇ ಹೋಗಿದ್ದೆ..”
“ ಹೌದ್ರಿ, ಅದೆಲ್ಲಾ ಖರೆ. ನಮ್ಮಂಥವರು ಅಡ್ಮಿಟ್ ಆದಾಗ ನೀವು ಸೀನಿಯರ್ ಡಾಕ್ಟರ್ ಆಗಿ ಇಲ್ಲಿರಬೇಕಾಗಿತ್ತು. ನನಗೇನರ ಆಗಿತ್ತಂದ್ರ ಹ್ಯಾಂಗ್ರೀ. ಇಷ್ಟು ಬೇಜವಾಬ್ದಾರಿ ಆದ್ರ ಹ್ಯಾಂಗ್..”
“ನಿಮಗ ಏನರ ಆಗೂವಂಥದ್ದು ಏನೂ ಇಲ್ಲ, ಅನ್ನೂದು ಗೊತ್ತ ಮಾಡಿಕೊಂಡ ಹೊಗೀನ್ರೀ”
“ ಆದರೂ ಉಪಯೋಗ್ ಇಲ್ಲ ಬಿಡ್ರೀ. ನೀವು ಭಾಳ ಬೇಜವಾಬ್ದಾರಿ ಮಾಡಿದ್ರಿ..”
ಮೊದಲೇ ಮನಸ್ಸು ಸರಿಯಿಲ್ಲದ ನನಗೆ ಸ್ವಲ್ಪ ಸಿಟ್ಟು ಬರತೊಡಗಿತ್ತು. ಏನೂ ಅನಾನುಕೂಲವಾಗದೆ ಎಲ್ಲ ಆರೈಕೆಗಳನ್ನು ಸರಿಯಾಗಿ ಪಡೆದ ಇವನ ಬಾಯಿಂದ ಇಂಥ ಮಾತುಗಳನ್ನು ನಾನು ನಿರೀಕ್ಷಿಸಿರಲಿಲ್ಲ. ಅಲ್ಲದೆ, ಆಗಿನ ನನ್ನ ಮನಸ್ಥಿತಿ ಯಾರದ್ದಾದರೂ ಸಹಾನುಭೂತಿಯನ್ನು ಬಯಸುವಂಥದಾಗಿತ್ತು. ಅದಕ್ಕೆ ‘ಕೇಳಬಾರದ’ ಒಂದು ಪ್ರಶ್ನೆಯನ್ನು ಅವನಿಗೆ ಕೇಳಿದೆ. ಅಂತಹ ಪ್ರಶ್ನೆಯನ್ನು ಕೇಳಿ ಅವನಿಂದ ಸಾಂತ್ವನದಾಯಕ ಉತ್ತರ ಅಪೇಕ್ಷಿಸಬಾರದಾಗಿತ್ತೆಂದು ಆ ಮೇಲೆ ಪಶ್ಚಾತ್ತಾಪ ಪಟ್ಟಿದ್ದೇನೆ.
“ ಬರುವಾಗ ಹಾದಿಯೊಳಗ ನನಗss ಏನರ ಆಗಿತ್ತಂದರ ಎನ್ಮಾಡ್ತಿದ್ರಿ….?”
(ನಾನಿಲ್ಲಿ ನಿರೀಕ್ಷಿದ ಉತ್ತರ .. “ ಸಾಹೇಬ್ರ, ಹಂಗ್ಯಾಕ ಅಂತೀರಿ, ಬಿಡ್ತು ಅನ್ರಿ” )
ಅವನು ನೀಡಿದ ಉತ್ತರ ನನ್ನ ಕಿವಿಯಲ್ಲಿ ಅನೇಕ ದಿನ ರಿಂಗಣಿಸಿತು. ಅವನು ಶಾಂತನಾಗಿ, ಅವನಿಗೂ ನನಗೂ ಏನೂ ಸಂಬಂಧವೇ ಇಲ್ಲದಂತೆ ಉತ್ತರಿಸಿದ….
“ನೀ ಸತ್ತಿದ್ದೆಂದ್ರ ಇನ್ನೊಬ್ಬ ಡಾಕ್ಟರ್ ಕಡೆ ಹೋಗ್ತಿದ್ದೆ…”
ಒಂದು ಕ್ಷಣ ನಾನು ದಿಗ್ಭ್ರಾಂತನಾದೆ. ಸಾವರಿಸಿಕೊಂಡು ಹೊರಬಂದೆ. ನನ್ನ ಚೇಂಬರ್ ನಲ್ಲಿ ಕುಳಿತು ಮನಸ್ಸನ್ನು ಶಾಂತಗೊಳಿಸಿಕೊಂಡು ನನಗೆ ನಾನೇ ಸಮಾಧಾನಿಸಿಕೊಂಡೆ. ‘ಎಂಥಾ ಕಟುಸತ್ಯವನ್ನು ಅವನು ಎಷ್ಟು ಸರಳವಾಗಿ, ನಿರ್ಭಿಡೆಯಿಂದ, ನಿರ್ಭಾವುಕನಾಗಿ ಹೇಳಿಬಿಟ್ಟನಲ್ಲ’, ಅನಿಸಿತು.
“ಇಲ್ಲಿ ಯಾರೂ ಅನಿವಾರ್ಯರಲ್ಲ. ನೀನಿರದಿದ್ದರೆ ಇನ್ನೊಬ್ಬ ನಿನ್ನ ಕೆಲಸ ನೋಡಿಕೊಳ್ಳುತ್ತಾನೆ…..”
ಎಂಬ ಸತ್ಯವನ್ನು ‘ಅರ್ಥವಾಗುವ’ ಹಾಗೆ ಮನದಟ್ಟು ಮಾಡಿದ್ದ…!!
 
 
 

‍ಲೇಖಕರು G

December 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

16 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಎಷ್ಟೊಂದು ಕಟು ಅನುಭವಗಳು ಸರ್, ಅಯ್ಯೋ ದೇವರೇ! ಒಳ್ಳೆಯದನ್ನು ಸ್ವೀಕರಿಸುವ ಮನಸ್ಥಿತಿಯು ನಮ್ಮಲ್ಲಿರುವುದಿಲ್ಲವಲ್ಲ. ಪಾಲಿಸಿ ಪೋಷಿಸಿ ದೊಡ್ಡವರನ್ನಾಗಿ ಮಾಡಿದ ನಂತರ ಮಕ್ಕಳು ಪಾಲಕರಿಗೆ ತಮ್ಮನ್ನು ಹೆತ್ತ ಕಾರಣವನ್ನು ವಿಶ್ಲೇಷಿಸುವಂತೆ! ಏನಾದರೂ ಕೈಲಾದ್ದನ್ನು ಸದಾಚಾರದ ಕೆಲಸ ಮಾಡಿದರೆ, ಅದರ ಹಿಂದೆ ಇನವದು ಏನೋ ಹಿತಾಸಕ್ತಿ ಕಂಡುಹಿಡಿಯುವ ‘ಕುಹಕ’ ಮತಿವಂತರೂ ಸುತ್ತಲೂ ಇರುತ್ತಾರೆ, ಯಾಕಂದರೆ ಅಂಥವರಿಗೆ ಉಪಕಾರದ ಲವಲೇಶವೂ ಗೊತ್ತಿರುವುದಿಲ್ಲ.’ಅವರು ಜಗತ್ತನ್ನು ತಮ್ಮ ಮನಸ್ಥಿತಿಯಿಂದ, ತಮ್ಮ ಕಣ್ಣ ಕ್ಯಾಮರಾದಿಂದ ನೋಡುತ್ತಿರುತ್ತಾರೆ, ಬಹಳ ನಾಜೂಕಿನ ಸಂಗತಿಗಳನ್ನು ವಿಶ್ಲೇಷಿಸಿದ್ದೀರಿ. ಅಪಾತ್ರರು ಎಲ್ಲ ಕಡೆಗೂ ಇರುತ್ತಾರೆ. ಸಹಿಸಿಕೊಳ್ಳುವುದಷ್ಟೆ ಸಾರ್ವಜನಿಕ ಜೀವನದಲ್ಲಿರುವವರ ಪಾಡು.

    ಪ್ರತಿಕ್ರಿಯೆ
  2. Dr. S.R . Kulkarni.

    Saheb,The experiences have come beautifully. MORE beautiful is the way in which you have taken. Wi
    th relation to 1st incident ‘Where are sincere people. Especially in govt sector corruption is so much there is no guarantee of work even after meeting their demands . This we are seeing over the decade’.The result the people have lost their sensitivity. They just can’t different iate what is Horse&
    Donkey. For they have been seeing Donkeys only.
    The 2nd is ref or med crude addition. Time will teach him. He has to learn he can get a substitute . At what cost? He will learn himself.
    With all bitter experiences majority are good, we should step keeping these people into account & at the same time a cautious attitude that a drop of sour is enough to spoil big amount of milk.
    Lastly I congratulate you for all your best efforts & conclude saying ‘the value of any precious things is realised when it is kept for test.

    ಪ್ರತಿಕ್ರಿಯೆ
  3. Kantha

    Convey my thanks to that VIP if possible, Truth Prevails. He briefed the greatest poem by KUVEMPU in two words. Thank you for sharing an wonderful experience, of course it is.

    ಪ್ರತಿಕ್ರಿಯೆ
  4. Kiran Tankasali

    Very unpleasant experience sir. I never thought such a noble profession like Medicine can also face such rude circumstances.

    ಪ್ರತಿಕ್ರಿಯೆ
  5. mmshaik

    adakka hiriyaru gaade maadidareenoo sir..uurige maadida upkaara heNakke maadida srungaara onde,endu..manssu manassu ariyuvavaru bahaLa kadime..adu ee jaagatikaraNda otadali..manaviya moulyagaLu tumbaa dubaariyagive sir…

    ಪ್ರತಿಕ್ರಿಯೆ
  6. Rj

    ಡಾಕ್ಟ್ರೇ, ನಮಸ್ಕಾರ.
    ಕಳೆದ ವಾರದ ನಿಮ್ಮ ಅನುಭವದ ಲೇಖನಕ್ಕೆ ಒಂದು ಕಮೆಂಟ್ ಹಾಕಬೇಕೆಂದುಕೊಂಡಿದ್ದೆ. ಕಾರಣಾಂತರಗಳಿಂದ ಬರೆಯಲಾಗಲಿಲ್ಲ. ದಯವಿಟ್ಟು ಕ್ಷಮಿಸಿ.
    ಸಾಮಾನ್ಯವಾಗಿ ವೈದ್ಯರೂ ಕೂಡ ಮನುಷ್ಯರೇ. ಅನೇಕ ವೈದ್ಯರುಗಳು ಸಂವೇದನಾಶೀಲರೂ, ಮಾನವೀಯ ಮುಖವುಳ್ಳವರೂ ಆಗಿರುವದನ್ನು ನೋಡಿರುವೆ. ಹಾಗೆಯೇ ಹಣದ ಹಿಂದೆ ಬಿದ್ದಿರುವ ವೈದ್ಯರನ್ನೂ ನೋಡುತ್ತಿದ್ದೇವೆ. ಸಂವೇದನೆ ಮತ್ತು ಸಂಪಾದನೆಗಳ ನಡುವೆ ನಿಮ್ಮಂಥವರು ಇರುವದರಿಂದಲೇ ಇವತ್ತಿಗೂ ರೋಗಿಗಳು ಧೈರ್ಯವಾಗಿ ಆಸ್ಪತ್ರೆಗಳೆಡೆಗೆ ನೋಡುತ್ತಾರೆ.
    ನಿಮ್ಮ ಅನುಭವಕಥನಕ್ಕೆ ಮಾನವೀಯ ಸ್ಪರ್ಶವಿದೆ. ಈ ಪಯಣದಲ್ಲಿ ನಿಮಗೆ ಉಂಟಾಗುವ ಎಲ್ಲ ಕಹಿ ಅನುಭವಗಳ ಬಗ್ಗೆ ಬೇಸರವಿದೆ. ಇದೆಲ್ಲದರ ನಡುವೆಯೂ ನೀವು ಎಂದಿನ ಶೈಲಿಯಲ್ಲಿ ಕಾರ್ಯಭಾರ ಮಾಡುತ್ತಿರುವದು ಶ್ಲಾಘನೀಯ. ಒಟ್ಟಿನಲ್ಲಿ, ಬದುಕಿನ ಗಡಿಗೆಯಲ್ಲಿ ಆತ್ಮತೃಪ್ತಿಯ ಪಾಯಿಂಟುಗಳು ತುಂಬುತ್ತ ಹೋಗುವದೇ ಮುಖ್ಯವೆನಿಸುತ್ತದೆ..
    ನಿಮ್ಮ ವೃತ್ತಿಗೆ, ಅದರ ರೀತಿಗೆ ಅಭಿನಂದನೆಗಳು.
    -Rj

    ಪ್ರತಿಕ್ರಿಯೆ
  7. ಭೀಮಣ್ಣ ಹುಣಸೀಕಟ್ಟಿ

    ಇಲ್ಲಿ ನೀವು ನಿರೂಪಿಸಿದ ಸಂಧರ್ಭಗಳು ನೂರಕ್ಕೆ ನೂರು ಸತ್ಯ ! ಗ್ರಾಮೀಣ ಪ್ರದೇಶಗಳಲ್ಲಿ “ದೊಡ್ಡ”ವರು ತೋರುವ ದರ್ಪ-ದೌಲತ್ತುಗಳಿಂದಾಗುವ ಬೇಸರಗಳ ಮಧ್ಯೆ ,ಬಡವರ ಪ್ರಾಮಾಣಿಕತೆ,ಕೃತಜ್ಞತೆಗಳು ತುಂಬ ಖುಷಿಕೊಡುತ್ತವೆ!

    ಪ್ರತಿಕ್ರಿಯೆ
  8. Dr Ravi Jammihal

    Nicely depicted the incidents which are part our profession. Many good heart touching– very few heart/head breaking incidents all of us face in public life. But most important aspect is how you have taken the incidents and responded/learnt from them. We can’t change our personality and values just because few bad people/incidents

    ಪ್ರತಿಕ್ರಿಯೆ
  9. ಗಣಪತಿ.ಎಂ.ಎಂ

    ಮಾನ್ಯರೇ ಕೆಲ ದಿನಗಳಿಂದ ನಿಮ್ಮಲೇಖನಗಳನ್ನು ಓದುತ್ತಿದ್ದೇನೆ. ಬಹಳ ಗಾಢವಾದ ಜೀವನ ಅನುಭವಗಳನ್ನು ನೀಡುತಿರುವುದಕ್ಕೆ ಧನ್ಯವಾದಗಳು. ನಿಮ್ಮ ಲೇಖನಗಳನ್ನು ಓದುತ್ತಿದ್ದಂತೆ ನನಗೆ ಹಲವಾರು ನೆನಪುಗಳು ಕಣ್ಣಮುಂದೆ ಬಂದವು ಸಧ್ಯಕ್ಕೆ ಅಂತಹ ಒಂದು ನೆನಪು.ನನ್ನ ಊಋ ಶರಾವತಿಗೆ ಲಿಂಗಿನಮಕ್ಕಿಯಲ್ಲಿ ಕಟ್ಟಿದ ಆಣೆಕಟ್ಟಿನ ಹಿಂಭಾಗದಲ್ಲಿ ಮುಳುಗಡೆಯಾಗಿ ಉಳಿದಿರುವ ಜನವಸತಿಗಳಲ್ಲಿ ಒಂದು. ಅದಕ್ಕೆ ಹತ್ತಿರದ ನಿಟ್ಟೂರು ( ಕೊಲ್ಲೂರು-ಶಿವಮೊಗ್ಗ -ಬೆಂಗಳೂರು ಹೆದ್ದಾರಿಯಲ್ಲಿ ಇದೆ. ಸುಮಾರು ೪೫-೫೦ ವರ್ಷಗಳ ಹಿಂದೆ ಅಪರೂಪಕ್ಕೆ ಅಲ್ಲಿಗೆ ಒಬ್ಬರು ಡಾ. ಜಟ್ಟಾ ನಾಯಕ್ ಅಂತ ಕಟ್ಟಾ ಸಮಾಜವಾದದಲ್ಲಿ ನಂಬಿಕೆ ಇದ್ದ, ದಿ. ಗೋಪಾಲ ಗೌಡರಲ್ಲಿ ನಂಬಿಕೆ ಇದ್ದವರು ವೈದ್ಯರಾಗಿ ಬಂದರು. ಅವರು ಮಾಡಿದ ಮೊದಲ ಕೆಲಸ ಅವರಲ್ಲಿನ ಅಡುಗೆಯವರಾದ ಗುರುನಂಜಪ್ಪ, ಹಾಗೂ ಇನ್ನಿತರೆ ವೈದ್ಯಕೀಯ ಸಿಬ್ಬಂದಿಗೆ ಪ್ರಾಥಮಿಕ ಚಿಕಿತ್ಸೆಯ ಪಾಠ ಮಾಡಿದ್ದು. ನಮ್ಮ ಮನೆಗೆ ನಿಟ್ಟುರಿನಿಂದ ಸುಮಾರು ೧೦ ಕಿ.ಮಿ ನಡೆಯಬೇಕಿತ್ತು. ಮಧ್ಯೆ ಹೊಳೆ ದಾಟಬೇಕಿತ್ತು. ಮಳೆ ಬಂದರೆ ರೋಗಿಯ ಪಾಡು ಯಾರಿಗೆ ಪ್ರೀತಿ? ಇಂತಹ ಸಂದರ್ಭದಲ್ಲಿ ರಾತ್ರಿ ಹಗಲು ಎನ್ನದೆ ನಮ್ಮ ಊರಿಗೆ ಬಂದು ಜೀವಗಳನ್ನು ಉಳಿಸಿದ ಪುಣ್ಯಾತ್ಮರು ಅವರು. ಅವರ ನಂತರ ಸುಮಾರು ೩ ದಶಕಗಳ ಕಾಲ ನಮ್ಮ ಊರಿನ ಜೀವ ಉಳಿಸಿದ ಧವ್ನಂತರಿ ಗುರುನಂಜಪ್ಪ. ಅವರ ಮೇಲಾಧಿಕಾರಿಗಳ ಕ್ರಿಕುಳಗಳ ನಡುವೆ ರಾತ್ರಿ ಮನೆಯಿಂದ ಮನೆಗೆ ಏಕಾಂಗಿಯಾಗಿ ಓಡಾಡಿ ಜನರ ಜೀವ ಉಳಿಸಿದ್ದು ನೆನಪಿಸಿಕೊಂಡರೆ ಇಂತಹವರು ನಮ್ಮ ಮಧ್ಯೆ ಇದ್ದರೆ ಅಂತ ಒಮ್ಮೊಮ್ಮೆ ನನ್ನನ್ನೇ ನಾವು ಕೇಳಿಕೊಳ್ಳುವಂತಾಗುತ್ತದೆ. ಇಂದೂ ಕೂಡ ನಮ್ಮ ಊರ‍ಿನ ಹಳೆತಲೆಗಳು ಗುರುನಂಜಪ್ಪನನ್ನು ನೆನೆಯುತ್ತಾರೆ. ಹಣವಿಲ್ಲವೆಂದರೆ ಬಾತುಂಬಾ ಬೈಯ್ಯುತ್ತಾ (ಅವರು ಶಿವಮೊಗ್ಗ ಕಡೆಯವರು ಎನ್ನುವ ನೆನಪು)ಹುಷಾರಾಗು ಎಂದು ಹರಸುವವರು. ತನ್ನ ಕೈಲಿ ಆಗದ ಒಂದೂ ರೋಗಿಯನ್ನೂ ಆತ ಚಿಕಿತ್ಸೆ ಮಾಡಿಲ್ಲ. ಊರಿನ ಉಳ್ಳವರ ನೆರವಿನೊಂದಿಗೆ ಮಣಿಪಾಲ ಶಿವಮೊಗ್ಗಕ್ಕೆ ಕಳುಹಿಸಿ ಜೀವ ಉಳಿಸಿದ್ದಾರೆ. ಉಳ್ಳವರಿಗೆ ತಕ್ಷಣಕ್ಕೆ ಗುರುನಂಜಪ್ಪ ಬೇಕಾಗಿದ್ದಕ್ಕೆ ಅವರ ಮಾತನ್ನು ಕೇಳುತ್ತಿದ್ದರು. ನನ್ನ ತಂದೆ ದಿ. ಡಾ. ಜಟ್ಟ ನಾಯ್ಕರು ಹೇಳಿದ ಮಾತು ಈಗಲೂ ನೆನಪಿದೆ. ಜನರ ಜೀವ ಉಳಿಸುವುದು ಮುಖ್ಯ. ಅದಕ್ಕೆ ನಾನು ಇವರನ್ನು ತರಪೇತು ಮಾಡುತ್ತೇನೆ ಎಂದಿದ್ದು. ಅಂತಹ ಮಹಾನುಭಾವರನ್ನ ಈಗ ನೆನಸಿಕೊಳ್ಳಲು ಸಾಧ್ಯವಾಗಿದ್ದು ನಿಮ್ಮ ಲೇಖನ ಓದಿದಾಗ. ಇನ್ನೂ ಕೆಲವಾರು ವೈದ್ಯರ ಬಗ್ಗೆ ಬರೆಯಬೇಕಿಸಿದೆ. ಮುಂದೆ ಬರೆದೇನು.

    ಪ್ರತಿಕ್ರಿಯೆ
  10. Parvati Naik

    Sir ,even we have come across many incidents of same kind but nothing can be done to these people. Upar bhagawan hai, neeche hum hai , wo sab dekta hai.

    ಪ್ರತಿಕ್ರಿಯೆ
  11. G B SALAKKI

    I had read it from & commented for your experience and sincere exposure of the strange treatment by the great people

    ಪ್ರತಿಕ್ರಿಯೆ
  12. ಕಿರಣ್

    ನಿಜವಾದ ಮಾತುಗಳು!
    ಕಡು ಬಡವರಿಗೆಂದು ಸರ್ಕಾರ ಮಾಡಿರುವ ‘ವಾಜಪೇಯಿ ಆರೋಗ್ಯ ಯೋಜನೆ’ ಇದಕ್ಕೆ ಜ್ವಲಂತ ಸಾಕ್ಷಿ. ಇದರಲ್ಲಿ ರೋಗಿಯ ಜೊತೆಗೆ ಬರುವ ಸಹಾಯಕರಿಗೂ ಪ್ರಯಾಣದ ವೆಚ್ಚ ನೀಡಲಾಗುತ್ತದೆ.
    ಇದರ ‘ಸದುಪಯೋಗ’ ಪಡೆಯಲು ಕೆಲವು ‘ಆಪ್ತರು’ ಯಾವುದೋ ರೋಗಿಯ ಜೊತೆಗೆ ಶನಿವಾರ ಸಂಜೆ ಬರುತ್ತಾರೆ. ಭಾನುವಾರ ರೋಗಿಯನ್ನು ಅವನ ದರ್ದಿಗೆ ಬಿಟ್ಟು ‘ಬೆಂಗಳೂರು ದರ್ಶನ’ ಮಾಡುತ್ತಾರೆ.
    ಸೋಮವಾರ ರೋಗಿಯ ಜೊತೆಗೆ ಆಸ್ಪತ್ರೆಗೆ ಬಂದು ತಮ್ಮ ‘ಇರುವಿಕೆ’ಯನ್ನು ತೋರಿಸಿಕೊಳ್ಳಲು ಕಾವಲುಗಾರನಿಂದ ಹಿಡಿದು ಹಿರಿಯ ವೈದ್ಯರ ಜೊತೆಗೂ ಕಾರಣವಿಲ್ಲದೆ ಏರು ದನಿಯಲ್ಲಿ ಮಾತನಾಡಿ, ರೋಗಿಗೆ ‘ನೋಡು; ನಾನಿಲ್ಲದಿದ್ದರೆ ನಿನ್ನ ಗತಿ ಏನಾಗುತ್ತಿತ್ತು!’ ಎಂಬ ಭಾವನೆ ಹುಟ್ಟುವಂತೆ ಮಾಡುತ್ತಾರೆ.
    ಇಂತಹವರ ಹಾವಳಿ ಸೋಮವಾರ ತಡೆಯಲಸಾಧ್ಯ. ಇದರ ಪರಿಣಾಮ ರೋಗಿಯ ನಂತರದ ಚಿಕಿತ್ಸೆಯ ಮೇಲೆ ಹೇಗಾಗಬಹುದು ಎಂಬ ಪರಿವೆ ಅವರಿಗೆ ಬೇಕಾಗಿಯೇ ಇಲ್ಲ.
    ‘ಕಾಲ ಬದಲಾದಂತೆ ಕ್ರಿಮಿಗಳು ಹೊಸ ರೀತಿಯಲ್ಲಿ ತಮ್ಮ ದರ್ಪ ತೋರಿಸುತ್ತವೆ’ ಎಂಬ ಕಡೆ ಈ ‘ಮನುಷ್ಯ ಕ್ರಿಮಿ’ಗಳನ್ನೂ ಸೇರಿಸಬೇಕು!

    ಪ್ರತಿಕ್ರಿಯೆ
  13. Dr Naaz Shaikh

    Very well narrated incidents Dr Shivanand Kubsad
    The second with the loose comment is the sad truth. This happened to a colleague of mine who used to handle all difficult obstetric cases and served the people day and night. With one mishap he became the unlucky victim of criticism. The same words were spoken to him. Now He has now drawn himself under a safety cover and has stopped attending emergencies. Bad tongue of one person has put the whole town into hardship.
    It is good to learn that you have the courage to accept criticism too.

    ಪ್ರತಿಕ್ರಿಯೆ
  14. ಡಾ.ಶಿವಾನಂದ ಕುಬಸದ

    ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: