ಬಾಲ್ಯದ ಆಟ, ಆ ಹುಡುಗಾಟ…

ಮತ್ತೆ ಬಾರದ ಬಾಲ್ಯ

ಮಂಜುನಾಥ

ಅಮರಗೋಳ

ಆವತ್ತೊಂದಿನ ಗಂಟೆ ಎಂಟಾದರೂ ಕುಂಭಕರ್ಣನಂತೆ ಮಲಗಿಕೊಂಡೇ ಇದ್ದೆ. ಬಾಗಿಲಲ್ಲಿ ಯಾರೋ ಅವ್ವನೊಂದಿಗೆ ಮಾತಿಗಿಳಿದಿದ್ದರು. ‘ಮಕ್ಳು ಚಿಕ್ಕವರಿದ್ದಾಗ ಶ್ಯಾನೆ ಕಾಡ್ತಾವೆ ಕಣ್ರೀ’ ಅಂತಾ ಪಕ್ಕದ್ಮನೆ ಆಂಟಿ ಅವರ ಚಿಕ್ಕ ಮಗನ್ನಾ ನಾಲ್ಕೇಟು ಹಾಕಿ ಬೈಯ್ತಿದ್ರು. ವಿಶ್ವಾಮಿತ್ರನ ತಪಸ್ಸಿಗೆ ದೇವಕನ್ಯೆಯರು ಭಂಗ ಮಾಡಿದಂತೆ ಈ ಇಬ್ಬರು ಮಾತೆಯರ ಮಾತುಗಳು ನನ್ನ ನಿದ್ರೆಗೆ ಭಂಗ ತಂದಿದ್ದರಿಂದ ಬಿಲದ ಒಳಗಿನ ಇಲಿ ಇಣುಕಿ ಹಾಕಿದಂತೆ ರಗ್ಗಿನಿಂದ ಮುಖ ಹೊರಹಾಕಿದೆ. ಸೂರ್ಯನ ಕಿರಣಗಳು ಕದಗಳ ಮರೆಯಲ್ಲಿ ಇಣುಕಿ ಮನೆಯ ತುಂಬೆಲ್ಲಾ ಬೆಳಕು ಚೆಲ್ಲಿದ್ದರಿಂದ ‘ಅವ್ವ ಮೇಲೇಳ್ತೀಯೋ ಇಲ್ಲಾ ನೀರು ಎರಚಬೇಕೋ?’ ಅಂತಾ ಬಲು ಮರ್ಯಾದೆ ಕೊಟ್ಟು ಹೇಳಿದ್ಲು.

ಹಾಸಿಗೆಯಿಂದ ಹೊರಬಂದು ಎರಡು ಕಣ್ಣುಗಳನ್ನು ಉಜ್ಜುತ್ತಾ ಅಳುತ್ತಿದ್ದ ಆ ಸಣ್ಣ ಪೋರನನ್ನು ರಮಿಸುತ್ತಾ ‘ನಿಂಗೆ ಚಾಕ್ಲೇಟ್ ಕೊಡಿಸ್ತೀನಿ ಅಳ್ಬೇಡಾ’ ಅಂತಾ ಚಿಲ್ರೆ ತುಂಬಿದ ಜೇಬಿನಲ್ಲಿ ಎಂಟಾಣೆ ತೆಗೆದು ಹುಡುಗನ ಮುಷ್ಠಿಕಟ್ಟಿದೆ. ಅಷ್ಟಕ್ಕೆ ಹುಡ್ಗ ಹಾಳು ಮೋರೆಗೆ ಒಂದು ಮುತ್ತಿಕ್ಕಿ ಮುಗುಳ್ನಗುತ್ತ ಓಡಿ ಹೋದ. ಕೇವಲ ಎಂಟಾಣೆ ಚಾಕ್ಲೇಟ್ ಗೆ ಬತ್ತಿಹೋಗುವ ಆ ದುಃಖ, ಸಂತಸದಿಂದ ಸಿಂಬಳ ಸೋರಿಸುತ್ತ ಮುತ್ತಿಟ್ಟ ಆ ಮುತ್ತು ನನಗೆ ಹಿಂದಿನ ನನ್ನ ಬಾಲ್ಯದ ನೆನಪುಗಳನ್ನು ಮೆಲಕುಹಾಕುವಂತೆ ಮಾಡಿತು.

ಮನೆಮುಂದಿನ ಶಾಲೆಯಲ್ಲಿ ಆಡುತ್ತಿದ್ದ ನನಗೆ ‘ ಕೊಬ್ರಿ ಮಿಠಾಯಿ ರೀ.. ಕೊಬ್ರಿ ಮಿಠಾಯಿ..’ ಅನ್ನೋ ಸದ್ದು ಕಿವಿಗೆ ರಪ್ಪೆಂದು ಅಪ್ಪಳಿಸಿದಂತಾಯ್ತು. ಛಂಗನೇ ಹಾರಿ ಎಡಗೈನಲ್ಲಿ ಜಾರುತ್ತಿದ್ದ ಚಡ್ಡಿಯನ್ನು ಹಿಡಿದುಕೊಂಡು, ಬಲಗೈನಲ್ಲಿ ಸೋರುತ್ತಿದ್ದ ಸಿಂಬಳ ಒರೆಸಿಕೊಳ್ಳುತ್ತ ‘ ಅವ್ವ! ನಂಗೆ ಕೊಬ್ರಿ ಮಿಠಾಯಿ ಕೊಡ್ಸು’ ಎನ್ನುತ್ತ ಅವ್ವನೊಂದಿಗೆ ಜಗಳವಾಡಿ ಮಿಠಾಯಿ ತಿಂದಾಗ ಬಟ್ಟೆಯೆಲ್ಲ ಕೊಳೆಯಾಗಿತ್ತು. ಕೃಷ್ಣ ಜನ್ಮಾಷ್ಟಮಿಯಂದು ಮನೆ ಶುಚಿಗೊಳಿಸುತ್ತಿದ್ದ ಅಕ್ಕ ಕೊಂಚ ಮರೆಯಾದಾಗ ನೊರೆ ಹಾಲಿನಂತಿರುವ ಸುಣ್ಣದಲ್ಲಿ ಕಾಲಿಟ್ಟು ಮನೆಯ ತುಂಬೆಲ್ಲಾ ಓಡಾಡಿ ಹೆಜ್ಜೆ ಹಾಕಿದ್ದರಿಂದ ಅಕ್ಕನಿಂದ ಎರ್ರಾಬಿರ್ರಿ ಥಳಿಸಿಕೊಂಡಿದ್ದು ಇನ್ನೂ ಮರೆಯಾಗದೆ ಮನದಲ್ಲಿಯೇ ಹಸಿಯಾಗಿದೆ.
ಐದನೇ ತರಗತಿಯವರೆಗೆ ನಾನು ಇರ್ರೆಗ್ಯುಲರ್ ಸ್ಟೂಡೆಂಟ್. ಮತ್ತು ಕ್ಲಾಸ್ ಗೆ ಲೇಟ್ ಎಂಟ್ರಿ ಕೊಡುತ್ತಿದ್ದವನು. ಒಂದಿನ ನಮ್ ಕನ್ನಡ ಮೇಷ್ಟ್ರು ಯಾಕೋ ದಿನ ಲೇಟಾಗಿ ಬರ್ತೀಯಾ? ಅಂತಾ ಕೇಳಿದ್ದಕ್ಕೆ , ನಾನು ಒಂಟಿ ಸಲಗ (ಆನೆ) ಸಾರ್..’ ಅಂದಿದ್ದಕ್ಕೆ ಬರೋಬ್ಬರಿ 1 ತಾಸು ಕಿವಿ ಹಿಡಿದು ಬಗ್ಗಿ ನಿಲ್ಲಿಸಿದ್ರು. ಛೇ..ಎಲುಬಿಲ್ಲದ ನಾಲಿಗೆ ನನಗೆಂಥಾ ಗತಿ ತಂತಪ್ಪಾ ಅಂತಾ ಆವತ್ತು ಒಳಗೊಳಗೆ ಅತ್ತಿದ್ದೆ. ಅಂತಾ ಪನೀಷಮೆಂಟನಿಂದ ಆವತ್ತು ರಾತ್ರಿ ನನ್ನ ಗೋಳು ಹೇಳತೀರದ್ದು. ಆರನೇ ತರಗತಿ ಓದುತ್ತಿದ್ದಾಗ ಗೆಳೆಯ ಕೃಷ್ಣನ ಸೈಕಲ್ ಕದ್ದು ಅಣ್ಣನೊಂದಿಗೆ ಒಂದು ರೌಂಡ ಶೋ ಕೊಡಲು ಹೋಗಿ ಹಳ್ಳಕ್ಕೆ ಬಿದ್ದು ಕಾಳು ಕೆತ್ತಸಿಕೊಂಡದ್ದು, ಈ ಸುದ್ದಿ ಕೃಷ್ಣನಿಗೆ ಗೊತ್ತಾಗಿ ನಮ್ಮೊಂದಿಗೆ ಗುದ್ದಾಡಲು ಬಂದದ್ದು ನೆನಪಿದೆ. ಇಂತಹ ಎಲ್ಲ ಮಹಾಯುದ್ದಗಳನ್ನು ನಾನಾವಾಗಲೇ ಎದುರಿಸಿದ್ದೆ. ಯಾಕಂದ್ರೆ ನಾನು ಐದನೇ ತರಗತಿಗೆ ರೌಡಿಸಂ ಗೆ ಎಂಟ್ರಿ ಕೊಟ್ಟು ಏಳನೇ ತರಗತಿಗೆ ರಿಟೈಡ್ ಆಗಿದ್ದೆ. ಅಪ್ಪನ ಮುದ್ದು ಮಗನಾಗಿದ್ದವನು ಅವನಿಗೆ ಹೇಳದೆ ಹೆದ್ದಾರಿಗುಂಟ ಕಾಲ್ನಡಿಗೆಯಲ್ಲಿ ಕುರಿ ಹಾಲು ತರಲು ನಾಲ್ಕೈದು ಕಿಲೋಮೀಟರ್ ಹೋಗಿ ಅವನ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ಸುಗ್ಗಿ ದಿನದಲ್ಲಿ ದನಕರುಗಳಿಗೆ ತಂದಿಟ್ಟಿದ್ದ ಹಸಿ ಜೋಳದ ದಂಟಿನಿಂದ ಥಳಿಸಿಕೊಂಡಿದ್ದನ್ನು ನೆನೆಸಿಕೊಂಡ್ರೆ ಮೈಯೆಲ್ಲ ಜುಂ ಎನ್ನುತ್ತೆ.
ಹೌದು. ಹೀಗೆಲ್ಲಾ ತುಂಟಾಟಗಳು ನಡೆಯುವುದು ಕೇವಲ ಬಾಲ್ಯದಲ್ಲಿಯೇ ಮಾತ್ರ. ಚೋಟುದ್ದ ಇರುವ ಮಕ್ಕಳು ಮಾಡುವ ಕಿಡಿಗೇಡಿತನ, ಕಲ್ಮಶವಿಲ್ಲದ ಅವರ ಮನಸ್ಸು, ಜಿಂಕೆಯಂತಹ ಜಿಗಿದಾಡುವ ಅವರ ಇಳೆಯ ವಯಸ್ಸು, ಏನೂ ಅರಿಯದ ಅಡ್ನಾಡಿ ಮಾತುಗಳನ್ನು ನೆನೆಸಿಕೊಂಡರೆ ಆಕಾಶದೆತ್ತರಕ್ಕೆ ಹಾರುವ ಆ ಮನಸ್ಸುಗಳೊಂದಿಗೆ ನಾವೂ ಜೊತೆಗೂಡಬೇಕೆನಿಸುತ್ತದೆ. ಜೊತೆಗೆ ಈ ಬಾಲ್ಯ ಮತ್ತೊಮ್ಮೆ ಬರಬಾರದೇ ಎಂದು ಮನಸ್ಸು ಮಮ್ಮಲ ಮರಗುತ್ತದೆ ಸ್ನೇಹಿತರೆ..
 

‍ಲೇಖಕರು G

December 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: