ಡಾ ಶಿವಾನಂದ ಕುಬಸದ 'ನೆನಪಿನ ಪೆಟ್ಟಿಗೆ'ಯಿಂದ : ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ


“ ನನಗ ಬರ್ಲಿಕ್ಕೆ ಲೇಟ್ ಆಗ್ತೈತಿ, ನೀವು ಮುಂದ ನಡದ ಬಿಡ್ರೀ, ಯಾಕಂದ್ರ ನಾನು ನಮ್ಮವ್ವಗ ಜಳಕ ಮಾಡ್ಸಿ, ಊಟ ಮಾಡ್ಸಿ ಬರಬೇಕು…”
ಮೊನ್ನೆ ವಿಜಯಪುರದ ಗೆಳೆಯನೊಬ್ಬನ ಗೃಹ ಪ್ರವೇಶಕ್ಕೆ ನಮ್ಮೊಡನೆ ಬರುತ್ತೇನೆಂದು ಹೇಳಿದ್ದ ವೈದ್ಯಮಿತ್ರನೊಬ್ಬ ನಾವೆಲ್ಲಾ ಹೊರಟು ನಿಂತಾಗ ಕೊನೆಯ ಗಳಿಗೆಯಲ್ಲಿ ಹೇಳಿದ ಮಾತಿದು. ನನಗೆ ಹೆಮ್ಮೆ ಎನಿಸಿತು, ಅವನ ಮಾತೃಸೇವೆಯ ರೀತಿಯನ್ನು ನೋಡಿ. ಅವನು ನನ್ನ ಸಹೋದ್ಯೋಗಿ ಸರ್ಜನ್. ತನ್ನ ತಾಯಿಯ ಬಗೆಗೆ ಅವನು ತೋರಿದ ಪ್ರೀತಿ. ಮರಣಕ್ಕೆ ಅತೀ ಸಮೀಪ ತಲುಪಿದ ಅವಳನ್ನು ಶತಾಯ ಗತಾಯ ಬದುಕಿಸಿಕೊಂಡು ಬಂದ ಘಟನೆ, ಎಲ್ಲ ನೆನಪಾದವು. ಹೌದು, ಅದೊಂದು ನೆನಪಿಡಲೇಬೇಕಾದ ತಾಯಿ ಮೇಲಿನ ಪ್ರೀತಿಯ ಪರಕಾಷ್ಟೆಯ ಪ್ರಸಂಗ.
ಅವರದು ಮಧ್ಯಮ ವರ್ಗದ ಕುಟುಂಬ. ತಂದೆ ಸರಕಾರೀ ಸೇವೆಯಲ್ಲಿದ್ದು ಹಲವು ವರ್ಷಗಳ ಮೊದಲು ತೀರಿ ಹೋದರು. ಮನೆಯ ಜವಾಬ್ದಾರಿಯೆಲ್ಲ ಅವರ ತಾಯಿಯ ಮೇಲೆ. ತಂದೆ ಮಾಡಿದ್ದ ಆಸ್ತಿ, ಹಣ ಹೇಳಿಕೊಳ್ಳುವಷ್ಟು ಇರದಿದ್ದರೂ, ಆತ್ಮ ತೃಪ್ತಿಯ ಸುಖಜೀವನ ಸಾಗಿಸಿದವರು. ಜೊತೆಗೆ ಅದೇ ತಾನೇ ಪ್ರಾರಂಭಿಸಿದ ಇವನ ವೈದ್ಯಕೀಯ ವೃತ್ತಿಯ ಸಂಪಾದನೆ ಕೂಡ ಸಹಾಯಕ್ಕೆ ಬಂದಿತ್ತು. ಆ ಮನೆಯಲ್ಲಿ ಹಣಕ್ಕೆ ಕೊರತೆ ಇದ್ದಿತೆ ವಿನಹ ಪ್ರೀತಿಗೆ ಬರವಿರಲಿಲ್ಲ. ದಿನಾಲು ಸಂಜೆ ತನ್ನ ಕಷ್ಟಗಳನ್ನೆಲ್ಲ ತನ್ನ ತಾಯಿಯೆದುರು ಹೇಳುವುದು ಅವಳಿಂದ ಮಾರ್ಗದರ್ಶನ, ಸಲಹೆ ಪಡೆಯುವುದು ಅನೂಚಾನವಾಗಿ ವರ್ಷಗಟ್ಟಲೆ ನಡೆದಿತ್ತು. ಪುಟ್ಟ ಮಕ್ಕಳು ತಮ್ಮ ತಾಯಂದಿರಿಂದ ಕಥೆ ಕೇಳಿದಂತೆ, ಪ್ರತಿದಿನ ರಾತ್ರಿ ಅವಳೊಡನೆ ಜೀವನಾನುಭವದ ವಿಷಯಗಳನ್ನು ಚರ್ಚಿಸುವುದನ್ನು, ಅಷ್ಟೇನೂ ಓದಿಲ್ಲದ ಅವ್ವ ನೀಡಿದ ಸಲಹೆಗಳನ್ನು ಶಿರಸಾವಹಿಸಿ ಪಾಲಿಸುವುದನ್ನು ತನ್ನ ಜೀವನದ ಧ್ಯೇಯವನ್ನಾಗಿಸಿಕೊಂಡುಬಿಟ್ಟಿದ್ದ. ಇವನ ಕಷ್ಟ ಕಾಲದಲ್ಲಿ ಅವಳು ಇವನಲ್ಲಿ ತುಂಬುತ್ತಿದ್ದ ಧೈರ್ಯ ಯಾವ “ವ್ಯಕ್ತಿತ್ವ ವಿಕಸನ ಗುರು”ವಿಗೂ ಕಡಿಮೆಯದಾಗಿರಲಿಲ್ಲ. ಎಷ್ಟಾದರೂ ಅವಳು ಜೀವನವೆಂಬ ವಿಶ್ವವಿದ್ಯಾಲಯಕ್ಕೆ ಕಷ್ಟಪಟ್ಟು ಮಣ್ಣು ಹೊತ್ತವಳಲ್ಲವೇ?
ತಾಯಿ ಪ್ರತಿದಿನ ತಪ್ಪದೆ ತೋಟಕ್ಕೆ ಹೋಗಿ ಅವರು ಸಾಕಿದ ಮೂರು ಎಮ್ಮೆಗಳನ್ನು ಮೇಯಿಸುತ್ತಿದ್ದರೆ ಇವನೂ ಅವಳೊಡನೆ ಜೊತೆಯಾಗಿ, ಎಮ್ಮೆಗಳನ್ನು ಕಟ್ಟುವ ದಾಬೇಲಿಯನ್ನು ಚೆನ್ನಾಗಿ ಗುಡಿಸಿ ಸ್ವಚ್ಛ ಮಾಡಿ ಎಮ್ಮೆಗಳ ಮೈ ತೊಳೆಯುವಾಗ ಅವ್ವನೊಡನೆ ಕೈಗೂಡಿಸುತ್ತಿದ್ದ. ಅವಳು ನೀರು ಹಾಕುವುದು, ಇವನು ಅವುಗಳ ಮೈ ಉಜ್ಜುವುದು. ಇಬ್ಬರೂ ಮಾತಾಡುತ್ತ ಆ ವೇಳೆಯ ಸಂತೋಷವನ್ನು ಆಸ್ವಾದಿಸುವುದೂ ಸಾಮಾನ್ಯವಾಗಿತ್ತು. ಆ ಕ್ಷಣದಲ್ಲಿ ತಾನು ಸರ್ಜನ್ ಎನ್ನುವುದನ್ನು ಪೂರ್ತಿ ಮರೆತು ಅವನ ಅವ್ವನ ಮುಖದಲ್ಲಿ ಮೂಡುತ್ತಿದ್ದ ಸಂತಸದ ಗೆರೆಗಳನ್ನು ಕಂಡು ಖುಷಿ ಪಡುತ್ತಿದ್ದ. ಯಾವುದೇ ಆಪರೇಶನ್ ಮಾಡಿದಾಗಿನ ಸಂತೋಷಕ್ಕಿಂತ ಹೆಚ್ಚಿನ ಸಂತಸ ಅಲ್ಲಿ ತನಗಾಗುತ್ತದೆಂದು ಅನೇಕ ಬಾರಿ ನನ್ನೆದುರು ಹೇಳಿದ್ದ. ಎಮ್ಮೆಗಳ ಹಾಲು ಕರೆದು ಮನೆಗೆ ತಂದು ಕಾಯಿಸಿ ಇಬ್ಬರೂ ಜೊತೆಯಾಗಿ ಕುಳಿತು ಊಟ ಮಾಡಿದಾಗಲೇ ಆ ದಿನದ ಪ್ರಾರಂಭ. ಎಂಥ ಧನ್ಯರು ಇಬ್ಬರೂ..!!

ಅದೊಂದು ದಿನ, ಈತನಿಗೆ ಒಂದು ಎಮರ್ಜೆನ್ಸಿ ಆಪರೇಶನ್ ಬಂದದ್ದರಿಂದ ಅವ್ವನೊಂದಿಗೆ ತೋಟಕ್ಕೆ ಹೋಗಲಾಗಿರಲಿಲ್ಲ. ಅದೇನೋ ತಳಮಳ, ‘ಇವತ್ತು ಅವ್ವನೊಡನೆ ನಾನಿಲ್ಲವಲ್ಲ’ ಎಂದು. ಆದರೂ ಕೂಡ ತನ್ನ ತಂಗಿಯನ್ನು ಅವಳೊಡನೆ ಕಳಿಸಿದ್ದ. ಆಪರೇಶನ್ ಮುಗಿಸಿ ಇನ್ನೇನು ಅವ್ವನೆಡೆಗೆ ತೆರಳಬೇಕೆನ್ನುವುದರೊಳಗೆ, ತಂಗಿಯ ಫೋನ್,
“ ಅವ್ವ, ಹೆಂಡಿಕಸ ಮಾಡ್ತಿದ್ದಾಕಿ ಎಚ್ಚರ ತಪ್ಪಿ ಬಿದ್ದಾಳ. ಮಾತಾಡ್ಸಿದ್ರ ಮಾತ ಆಡೊಲ್ಲಳು. ಲಗೂನ ಬಾ…”
ಇವನು ಹೋಗಿ ನೋಡಿದರೆ ಅವ್ವನಿಗೆ ಎಚ್ಚರವಿಲ್ಲ, ಮಾತಿಲ್ಲ. ಕಣ್ಣು ತೆರೆದು ನೋಡುತ್ತಿಲ್ಲ. ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.
ಬೆಳಿಗ್ಗೆ ತಾನೇ “ ನೀ ಬರ್ಲಿಲ್ಲಂದ್ರ ಬಿಡಪ, ನಾ ಅಂತೂ ಎಮ್ಮಿಗೋಳ ಹೊಟ್ಟಿಗಿ ಹಾಕಿ ಬರಾಕಿನ. …”
ಎಂದು ಹಠ ಹಿಡಿದು ಬಂದವಳು ಈಗ ಈ ಸ್ಥಿತಿಯಲ್ಲಿ. ಅಲ್ಲಿಯೇ ಪರೀಕ್ಷೆ ಮಾಡಿ ನೋಡಿದರೆ, ಇದು ಮೆದುಳಿನ ರಕ್ತಸ್ರಾವ ಎಂದು ಗೊತ್ತಾಯಿತು. ತಮ್ಮದೇ ಅಂಬುಲೆನ್ಸ್ ನಲ್ಲಿ, ಬೆಳಗಾವಿಯ ಆಸ್ಪತ್ರೆಗೆ ಕರೆದೊಯ್ದು, ರಕ್ತ ಪರೀಕ್ಷೆ, ಸಿ.ಟಿ. ಸ್ಕ್ಯಾನ್ ಇತ್ಯಾದಿಗಳನ್ನು ಮಾಡಿದಾಗ ತಿಳಿದು ಬಂದದ್ದೇನೆಂದರೆ, ಮೆದುಳಿನ ಒಂದು ರಕ್ತನಾಳ ಒಡೆದು ರಕ್ತಸ್ರಾವವಾಗಿ, ಮೆದುಳಿಗೆ ಒತ್ತಡ ಬಿದ್ದು, ಬಾವು ಬಂದಿತ್ತು. ನ್ಯುರೋಸರ್ಜನ್ ರ ಅಭಿಪ್ರಾಯದಂತೆ ಇಂಥ ರೋಗಿಗಳು ಗುಣ ಮುಖರಾದದ್ದು ಕಡಿಮೆ. ಆದರೂ ಐ.ಸಿ.ಯು. ನಲ್ಲಿಟ್ಟು ಔಷಧೋಪಚಾರ ಆರೈಕೆ ಪ್ರಾರಂಭಿಸಿದ್ದಾರೆ. ಅವ್ವನ ಈ ಸ್ಥಿತಿ ಕಂಡು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿದೆ. ಪ್ರೀತಿಯ ತಾಯಿಯ ಈ ಸ್ಥಿತಿಗೆ ಮರುಗುತ್ತ, ಹಗಲು ಇರುಳುಗಳನ್ನು ಒಂದು ಮಾಡಿ ಅವಳ ಹತ್ತಿರ ಕುಳಿತೆ ಬಿಟ್ಟ, ಅವಳ ಮುಖವನ್ನೇ ದಿಟ್ಟಿಸುತ್ತ, ಈಗೋ ಇನ್ನಾವಾಗಲೋ ಕಣ್ತೆರೆದು ತನ್ನೆಡೆಗೆ ನೋಡಿ ಮುಗುಳ್ನಕ್ಕಾಳೆಂದು. ಊಟ ನಿದ್ರೆ ಬಿಟ್ಟು ಅವ್ವನ ಉಪಚಾರ ನಿರಂತರ ಸಾಗಿತು. ಏನೂ ಪ್ರಯೋಜನವಾಗಲಿಲ್ಲ. ಹೀಗೆಯೇ ನಾಲ್ಕು ದಿನ ಉರುಳಿದವು. ಐದನೇ ದಿನ ಒಮ್ಮೆಲೇ ಪರಿಸ್ಥಿತಿ ಬಿಗಡಾಯಿಸಿತು. ಉಸಿರಾಟದ ಏರು ಪೇರು ಸಾವು ಸಮೀಪಿಸಿದ್ದನ್ನು ತೋರಿಸುತ್ತಿತ್ತು. ಅವಳನ್ನು ನೋಡಿಕೊಳ್ಳುತ್ತಿದ್ದ ನ್ಯುರೋಸರ್ಜನ್ ರು ಬಂದು, ಬದುಕುವ ಲಕ್ಷಣ ಇಲ್ಲವೆಂದೂ, ಬೇಕಾದರೆ ಈಗಲೇ ಮನೆಗೆ ಕರೆದುಕೊಂಡು ಹೋಗಬಹುದೆಂದೂ ಸೂಚಿಸಿದರು.ಆದರೆ ಈತ ಅದನ್ನೊಪ್ಪಲಿಲ್ಲ.
“ ನಮ್ಮವ್ವ ಸಾಯಾಕ ಸಾಧ್ಯನ ಇಲ್ಲ. ನೀವು ಈಗ ಸಧ್ಯ ಆಪರೇಶನ್ ಮಾಡ್ರೀ. ಅವಳು ಗ್ಯಾರಂಟಿ ಉಳಿತಾಳ. ಅವಳು ಮತ್ತ ನಮ್ಮ ಮನಿಯೊಳಗ ಬಂದ ಕುಂದರತಾಳ. ನಾ ಇನ್ನ ಹತ್ತಿಪ್ಪತ್ತ ವರ್ಷ ಅವಳ ಸೇವಾ ಮಾಡಾವ ಅದೀನಿ…” ಎಂದು ಇವನೆಂದಾಗ,
“ಹಾಗೆಲ್ಲ ಸಾಮಾನ್ಯ ಜನರ ಹಂಗ ಅನಬ್ಯಾಡ್ರಿ. ಸ್ವಲ್ಪ ವೈದ್ಯರ ಹಾಗೆ ವಿಚಾರ ಮಾಡ್ರಿ. ಈ ಸ್ಥಿತಿಯೊಳಗ ಆಪರೇಶನ್ ಮಾಡೂದರ ಹ್ಯಾಂಗ ಸಾಧ್ಯ ಆದ. ಅವರು ಟೇಬಲ ಮೇಲೇ ಸಾಯೋ ಸಂಭವ ಅದ.” ಅಂದರೂ ಕೂಡ ಇವನು ಹಟಕ್ಕೆ ಬಿದ್ದವನಂತೆ,
“ನಮ್ಮವ್ವನ ನಾ ಹಿಂಗ ನಮ್ಮನೀಗೆ ಕರಕೊಂಡ ಹೋಗಾಕ ಸಾಧ್ಯ ಇಲ್ಲ. ಅಕಿ ಆರಾಮ ಆಗ್ತಾಳ ನೀವು ಆಪರೇಶನ್ ಮಾಡ್ರಿ..” ಎಂಬ ಒಂದೇ ಮಾತು ಇವನದು. ವೈದ್ಯರು ಈತನ ಮನೆಯವರನ್ನು ಗೆಳೆಯರನ್ನು ಕರೆದು ಸ್ಥಿತಿಯನ್ನು ವಿವರಿಸಿ ಅವರ ಮುಖೇನ ತಿಳಿ ಹೇಳಿದರೂ ಇವನು ತನ್ನ ಹಟ ಬಿಡಲೇ ಇಲ್ಲ. ಕೊನೆಗೆ ಇವನ ಒತ್ತಾಯಕ್ಕೆ ಮಣಿದು ಅನಿವಾರ್ಯವಾಗಿ, ಏನಾದರಾಗಲಿ ಎಂದು ಆಪರೇಶನ್ ಮಾಡಿ ಮೆದುಳಿನ ಸುತ್ತ ಸಂಗ್ರಹಗೊಂಡಿದ್ದ ಹೆಪ್ಪುಗಟ್ಟಿದ ರಕ್ತವನ್ನು ಹೊರತೆಗೆದಿದ್ದಾರೆ. ಆಶ್ಚರ್ಯವೆನ್ನುವಂತೆ ಟೇಬಲ್ ಮೇಲೆ ಅಂತ ಅವಘಡ ಸಂಭವಿಸಿಲ್ಲ. ಜೀವಂತ ತಾಯಿ ಹೊರಬಂದಾಗ ಇವನ ಸಂತೋಷಕ್ಕೆ ಪಾರವೇ ಇಲ್ಲ. ಆವ್ವ ಮತ್ತೆ ಮೊದಲಿನಂತಾಗುತ್ತಾಳೆಂಬ ಭರವಸೆಯ ಬೆಳ್ಳಿಗೆರೆ ಮಿಂಚತೊಡಗಿತು. ತನ್ನ ದೃಢ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಿ, ಉಪಚಾರಕ್ಕೆ ನಿಂತುಬಿಟ್ಟ. ಸಾಮಾನ್ಯಸ್ಥಿತಿ ಸುಧಾರಿಸಿದೊಡನೆ ವೈದ್ಯರು ಡಿಸ್ಚಾರ್ಜ್ ಮಾಡಿ ಮುಂದೆ ಮನೆಯಲ್ಲೇ ನೋಡಿಕೊಳ್ಳುವಂತೆ ತಿಳಿಸಿ ಕಳಿಸಿದ್ದಾರೆ.
ಮುಂದಿನ ನಾಲ್ಕೈದು ತಿಂಗಳು ಇವನಿಗೆ ಆತಂಕದ ಕ್ಷಣಗಳು. ಹಗಲು ಇರುಳೆನ್ನದೆ ಅವ್ವನದೆ ಕಾಳಜಿ. ಈಗ ಕಣ್ಣು ತೆರೆದಾಳು ಆಗ ತೆರೆದಾಳು ಎಂಬ ಆಸೆಯಿಂದ ಮನಸ್ಸು ಗಟ್ಟಿ ಮಾಡಿಬಿಟ್ಟಿದ್ದ. ಮೂಗಿನ ನಳಿಯ ಮುಖಾಂತರ ಆಹಾರ ನೀಡುವುದು, ಕಾಲ ಕಾಲಕ್ಕೆ ಅವಳ ಮಗ್ಗಲು ಬದಲಾಯಿಸುವುದು, ಮುಂತಾದ ಅವ್ಯಾಹತವಾದ ಆರೈಕೆ, ಉಪಚಾರಗಳಿಂದ ಪವಾಡ ಸದೃಶ ಘಟನೆ ಸಂಭವಿಸಿಯೇಬಿಟ್ಟಿತು.
ಅವ್ವ ಕಣ್ಣು ತೆರೆದಳು…!!
ಇವನಿಗೆ ಸ್ವರ್ಗ ಮೂರೇ ಗೇಣು. ಸಂತೋಷದ ಪರಾಕಾಷ್ಟೆಯಲ್ಲಿ ಕುಣಿದಾಡಿಬಿಟ್ಟ. ಮಮತೆಯ ಅವ್ವ ಕಣ್ಣು ತೆರೆದು ತನ್ನೆಡೆಗೆ ನೋಡಿದಾಗಿನ ಕ್ಷಣದಲ್ಲಿ ತನಗಾದ ಭಾವನೆಯನ್ನು ವಿವರಿಸಲಸಾಧ್ಯ ಎಂದಿದ್ದ,ನನ್ನ ಮುಂದೆ. ದುರಾದೃಷ್ಟವೆಂದರೆ ಮಾತು ಬರಲಿಲ್ಲ. ನಡೆದಾಡಲು ಸಾಧ್ಯವಾಗಲಿಲ್ಲ.
“ ಇರ್ಲಿ ಬಿಡ್ರಿ. ನಮ್ಮವ್ವ ನನ್ನ ಕಣ್ಣ ಮುಂದ ಅದಾಳಲ ಅಷ್ಟ ಸಾಕ ನನಗ..” ಅನ್ನುತ್ತ ಸಮಾಧಾನ ಮಾಡಿಕೊಳ್ಳುತ್ತಾನೆ.
ಅದರ ನಂತರ ಈತನ ದಿನಚರಿಯ ಮುಖ್ಯ ಭಾಗವೆಂದರೆ ಅವ್ವನ ಉಪಚಾರ. ಉಳಿದಿದ್ದೆಲ್ಲ ಗೌಣ. ಬೆಳಿಗ್ಗೆ ಎದ್ದೊಡನೆ ಅವಳ ಸ್ನಾನ, ಊಟ ಮಾಡಿಸದೆ ಮನೆ ಬಿಡುವುದಿಲ್ಲ. ಮಧ್ಯಾಹ್ನ ಊಟದ ವೇಳೆಗೆ ಮನೆಗೆ ಬಂದು ಊಟ ಮಾಡಿಸಿ ಮತ್ತೆ ಆಸ್ಪತ್ರೆ. ರಾತ್ರಿ ಬಂದೊಡನೆ ಅವಳ ಎದುರು ಕುಳಿತು ಸಮಯ ಕಳೆದು ಊಟ ಮಾಡಿಸಿ, ಹಾಗೆಯೆ ಅವಳ ಕುರ್ಚಿಯೆದುರು ನೆಲದ ಮೇಲೆ ಮಲಗಿ ಸುದ್ದಿಗಳನ್ನು ಹೇಳುತ್ತಾನೆ. ನಂತರ ಕುರ್ಚಿಯಿಂದ ಹಾಸಿಗೆಗೆ ವರ್ಗಾಯಿಸಿದ ನಂತರವೇ ಇವರ ಊಟ ನಿದ್ದೆ. ಮತ್ತೆ ರಾತ್ರಿ ಒಂದೆರಡು ಬಾರಿ ಅವಳ ಮಗ್ಗುಲು ಬದಲಾಯಿಸಿದಾಗಲೇ ಸಮಾಧಾನ. ಹೀಗೆ ದಣಿವಿಲ್ಲದಂತೆ ಸೇವೆ ಮಾಡತೊಡಗಿ ನಾಲ್ಕು ವರ್ಷಗಳಾದವು. ಒಂದು ದಿನವೂ ಬೇಸರಿಸಿಕೊಂಡಿಲ್ಲ. ಊರಿಗೆ ಹೋದರೆ ಎರಡು ದಿನಕ್ಕಿಂತ ಹೆಚ್ಚಿಗೆ ಹೋಗುವುದಿಲ್ಲ. ಗುಡಿ ಗುಂಡಾರಗಳಿಗೆ ಹೋಗಬೇಕಾದರೆ ಗಾಲಿಕುರ್ಚಿಯಲ್ಲಿ ಆಸೀನಳಾದ ಅವ್ವನನ್ನು ಮುಂದಿಟ್ಟುಕೊಂಡೇ ಹೋಗುವುದು. ಮದುವೆ, ಮಂಗಳ ಕಾರ್ಯಗಳಿಗೆಲ್ಲ ಅವಳೇ ಬೇಕು. ಯಾರಾದರೂ ಎದುರಾದರೆ “ಬೇ ಎವ್ವ…ಇವರ ಗುರ್ತ ಸಿಕ್ಕತಿಲ್ಲ. ಇವರು ಇಂತಿಂಥವರು..” ಎಂದು ಅವಳೆಡೆಗೆ ನೋಡುತ್ತಾನೆ. ಅವಳ ಮುಖದಲ್ಲಿ ಮೂಡಿದ ಪರಿಚಯದ ಭಾವ ಇವನನ್ನು ಖುಶಿಪಡಿಸುತ್ತದೆ.
ಈಗ ಪರಿಸ್ಥಿತಿ ಬದಲಾಗಿದೆ. ಆರ್ಥಿಕ ಅಡಚಣಿಯೆಲ್ಲ ತೊಲಗಿ ಕೈಯಲ್ಲಿ ಹಣವಿದೆ. ‘ಅದಕ್ಕೆ ನಮ್ಮ ಅವ್ವನ ಆಶೀರ್ವಾದವೇ ಕಾರಣ’ ಎನ್ನುತ್ತಾನೆ. ವರ್ಷದ ಹಿಂದೆ ಕೋಟಿಗಟ್ಟಲೆ ವ್ಯಯಿಸಿ ಸುಸಜ್ಜಿತ ಆಸ್ಪತ್ರೆ ಕಟ್ಟಿದ. ‘ಉದ್ಘಾಟನೆಗೆ ಯಾರನ್ನು ಕರೆಸುತ್ತೀ’ ಎಂದು ಕೇಳಿದರೆ ಕಣ್ಣು ತುಂಬಿಕೊಂಡು ‘ನಮ್ಮವ್ವನಲ್ಲದೆ ಮತ್ತಾರು ಅದಕ್ಕೆ ಅರ್ಹರು’ ಅನ್ನುತ್ತ ಹೆಮ್ಮೆಯ,ಅಭಿಮಾನದ ನೋಟ ಬೀರಿದ. ಆಸ್ಪತ್ರೆಯ ತಲೆಬಾಗಿಲೆದುರು ಗಾಲಿಕುರ್ಚಿಯ ಮೇಲೆ ಕುಳಿತ ಅವ್ವನನ್ನು ಕರೆತಂದ. ಕತ್ತರಿ ಹಿಡಿಯಲು ಸಾಧ್ಯವಿಲ್ಲದ ಅವ್ವನ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಗಾಲಿಕುರ್ಚಿಯ ಹಿಂದೆ ವಿನೀತನಾಗಿ ನಿಂತುಕೊಂಡು, ಬಂದ ಅತಿಥಿಗಳನ್ನೆಲ್ಲ ಸಾಲಾಗಿ ಅವಳ ಬದಿ ನಿಲ್ಲಿಸಿ, ಭವ್ಯ ಆಸ್ಪತ್ರೆಯ ಉದ್ಘಾಟನೆ ಮಾಡಿಸಿದ…!.
ಇತ್ತೀಚಿಗೆ ಒಂದು ನೃತ್ಯ ಕಾರ್ಯಕ್ರಮಕ್ಕೆ ಅವ್ವನನ್ನು ಗಾಲಿಕುರ್ಚಿ ಸಮೇತ ಕರೆತಂದು ಹಾಲ್ ನಲ್ಲಿ ಕುಳ್ಳಿರಿಸಿಬಿಟ್ಟ.
ನೃತ್ಯ ನೋಡುವಾಗ ಅವಳ ಕಣ್ಣಲ್ಲಿ ಕಂಡ ಸಂತೋಷ, ಸಂಭ್ರಮ, ತೃಪ್ತಿಯ ಮಿಂಚಿನಲ್ಲಿ ಇವನು ಬೆಳಗತೊಡಗಿದ್ದ…..!!
 
 

‍ಲೇಖಕರು G

December 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

20 ಪ್ರತಿಕ್ರಿಯೆಗಳು

  1. shankar pujari

    ಆ ನಿಮ್ಮ ವೈದ್ಯಮಿತ್ರರಿಗೆ ನನ್ನದೊಂದು ನಮಸ್ಕಾರ ಹೇಳಿ.GREAT

    ಪ್ರತಿಕ್ರಿಯೆ
  2. ಸುರೇಶ.ಎಲ್.ರಾಜಮಾನೆ,ರನ್ನಬೆಳಗಲಿ

    ಯಾವ ವ್ಯಕ್ತೊತ್ವ ವಿಕಸನದಗುರುವಿಗೂ ಕಡಿಮೆ ಇಲ್ಲ , ಜೀವನವೆಂಬ ವಿಶ್ೌವಿದ್ಯಾಲಯಕ್ಕೆ ಮಣ್ಣು ಹೊತ್ತವಳು ಎಂಬ ಪದಗಳ್ಲಿಯೇ ನಿಮ್ಮ ಬರವಣಿಗೆಯ ಭಾವಾರ್ಥವನ್ನು ಹಿಡಿದಿಟ್ಟಿದಿರಾ ಸರ್ . ತುಂಬಾ ಇಷ್ಡವಾಯಿತು ಸರ್ ತಾಯಿಯ ಸೇವೆಯಲಿ ಅವನಿರುವ ರೀತಿ ಮತ್ತು ಪ್ರೀತಿ.

    ಪ್ರತಿಕ್ರಿಯೆ
  3. Sunil Gurannavar

    Sir your article is so good sir. I cant express it. It is an eye opener for all the youths of today. In times of diminishing values of relationship and emotional bonding, whoever reads it will certainly introsoect oneself.
    So lucky a mother, so great a son. Thanks alot for writing such a good article out of a true story.

    ಪ್ರತಿಕ್ರಿಯೆ
  4. Dr.Ratna Kulkarni

    ಅಪರೂಪದ ಮಾತ್ರಪ್ರೇಮದ ದರ್ಶನ ಮಾಡಿಸಿದ್ದೀರಿ.ಆ ಪುಣ್ಯವಂತ ತಾಯಿ, ಮಕ್ಕಳಿಗೂ ನಿಮಗೂ ಸಲಾಂ.

    ಪ್ರತಿಕ್ರಿಯೆ
  5. Dr sanjay naik

    Sir, truely inspiring. Hats off to that great soul of a doctor. Opened my eyes in many ways.
    doing an excellent work sir..keep going!

    ಪ್ರತಿಕ್ರಿಯೆ
  6. Dr. S.R . Kulkarni.

    Dear Dr. Kubsad saheb, I have seen many people who are emotionally blessed. I always wonder how it becomes possible for them. If you remember, the Soudagar couple to whom I had honoured in my daughters marriage, Nayeemaji ‘ s mother met with accident at Chitradur ga . For 20 yrs they looked after her who had total paraplegia.
    The concern is not a easy thing.

    ಪ್ರತಿಕ್ರಿಯೆ
  7. kusumabaale

    ಕಣ್ಣಾಗ್ ನೀರ್ ಬಂತ್ರೀ ಸರ್ರ…ಆ ತಾಯೀ ಮಗನ ಹೆಸರು ಫೋಟೋ ಹಾಕಿದ್ರ ಚಲೋ ಆಗ್ತಿತ್ತರೀ..ನಾವೂ ಒಮ್ಮಿ ಕೈಮುಗೀತಿದ್ವಿ.

    ಪ್ರತಿಕ್ರಿಯೆ
  8. nidhi

    ಈ ವಿಷಯದಲ್ಲಿ ಶತಾವಧಾನಿ ಗಣೇಶವರವನ್ನು ನೆನಿಬೇಕು

    ಪ್ರತಿಕ್ರಿಯೆ
  9. Ravi Jammihal

    Emotional issue dealt nicely. She can be anybody’s mother but son is a unique person hats off to him.

    ಪ್ರತಿಕ್ರಿಯೆ
  10. Bheemanna

    ಕಣ್ಣೀರು ಬಂತು,ಆ ವೈದ್ಯರಿಗಿದ್ದ ಮಾತೃಪ್ರೇಮ,ಸೇವೆಯ ಹಂಬಲ ಎಲ್ಲರಿಗೂ ಮಾದರಿ

    ಪ್ರತಿಕ್ರಿಯೆ
  11. Soumya A Bangalore

    Really hats off to that son.. And mother also who cared him since childhood.. We got to learn great lesson to serving elderly people.. ..

    ಪ್ರತಿಕ್ರಿಯೆ
  12. govind

    koti bandavu , koti hodavu
    avvanillada munjavu,,,,,?
    yav koti kodalaguvude?
    ni ninaa areev modale.
    ni koti dudiva modale,
    koti runavide ninna mele..
    maribeda swarga !!
    aduve tayiya odale!!!!!!!

    ಪ್ರತಿಕ್ರಿಯೆ
  13. A.R.Deshpande.

    Sir, Is it real story. Wonderful mother is so Lucky. No son is dedicated to teir parents like this. I have seen so many parents are suffering in vrudhashrama after sacrificing their lives for children’s courier. Wonderful , simply wonderful.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: