ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.
ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.
ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.
ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.
ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.
ಸರಣಿ – 2
ಫೋಟೋ ಕೃಪೆ : ಪ್ರವೀಣ್ ಮೂರ್ತಿ
ಮೂರು ದಿನ. ಸಾವಿರ ಕಿಲೋಮೀಟರ್. ಒಂದು ಕಾಂಗರೂ ಕೂಡ ಇಲ್ಲ.
ಆಸ್ಟ್ರೇಲಿಯಾದಲ್ಲಿ ನಾವು ಸುತ್ತುತ್ತಿದ್ದೆವು. ಸಮುದ್ರ ನೋಡಿದ್ದೆವು. ಕಾಡು ನೋಡಿದ್ದೆವು. ಗ್ರೇಟ್ ಓಷನ್ ರೋಡ್‌ನ ಮೌನ ನೋಡಿದ್ದೆವು. ಆದರೆ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಮಾತ್ರ ಕಾಣಿಸಲಿಲ್ಲ.
ಒಂದು ಬೆಳಗ್ಗೆ ರಂಜನಾ ನಕ್ಕು ಪ್ರವೀಣ್‌ಗೆ ಕೇಳಿದಳು:
“ನಿಜವಾಗಿಯೂ ಇಲ್ಲಿ ಕಾಂಗರೂಗಳಿವೆಯಾ? ಇಲ್ಲ logo ಗಳಲ್ಲಿ ಮಾತ್ರವಾ?”
ಪ್ರವೀಣ್ ಜೋರಾಗಿ ನಕ್ಕ.
“ಅಯ್ಯೋ, ಇಲ್ಲಿ ಕಾಂಗರೂಗಳು ನಮ್ಮಲ್ಲಿ ಬೀದಿ ನಾಯಿಗಳಷ್ಟು ಸಾಮಾನ್ಯ,” ಎಂದ. “ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ಜನರಿಗಿಂತ ಕಾಂಗರೂಗಳೇ ಹೆಚ್ಚು.” ಆ ಮಾತು ಕೇಳಿದ ಮೇಲೆ ಕುತೂಹಲ ಮತ್ತಷ್ಟು ಹೆಚ್ಚಾಯಿತು.
ಕಾಂಗರೂ ಎನ್ನುವುದು ನಮಗೆ ಹೊಸ ಪ್ರಾಣಿ ಅಲ್ಲ. ಬಾಲ್ಯದಿಂದಲೇ ಅದರ ಪರಿಚಯ ಇದೆ. ಪಾಠಪುಸ್ತಕಗಳಲ್ಲಿ. Documentary ಗಳಲ್ಲಿ. Qantas ವಿಮಾನದ ಬಾಲದಲ್ಲಿ. ಕ್ರಿಕೆಟ್ ಸುದ್ದಿಗಳಲ್ಲಿ. ಆದರೆ ಒಂದು ಪ್ರಾಣಿಯನ್ನು ವರ್ಷಗಳ ಕಾಲ ಚಿತ್ರಗಳಲ್ಲಿ ನೋಡಿದರೂ, ಅದು ಜೀವಂತವಾಗಿ ಎದುರು ನಿಂತಾಗ ಮನಸ್ಸು ಮತ್ತೆ ಮಗು ಆಗುತ್ತದೆ.
ಪ್ರವೀಣ್‌ನ ಸ್ನೇಹಿತ ಲಕ್ಷ್ಮೀನಾರಾಯಣ ರಾವ್ ಸಲಹೆ ಕೊಟ್ಟರು.
“Airport ಹತ್ತಿರ Woodland Historic Park ಗೆ ಹೋಗಿ. ಬೆಳಗ್ಗೆ ಹೋದರೆ ಅದೃಷ್ಟ ಒಲಿಯಬಹುದು.”
ಮರುದಿನ ನಾವು ಬೇಗ ಹೊರಟೆವು.
ನಗರ ನಿಧಾನವಾಗಿ ಹಿಂದೆ ಸರಿಯತೊಡಗಿತು. ಮುಂದೆ ಉದ್ದ ಹುಲ್ಲುಗಾವಲುಗಳು. ತಣ್ಣನೆಯ ಗಾಳಿ. ವಿಚಿತ್ರವಾಗಿ ಖಾಲಿ ಕಾಣುವ ರಸ್ತೆ. ಆಸ್ಟ್ರೇಲಿಯಾದ ಪ್ರಕೃತಿ ನೋಡಿದಾಗ ಭೂಮಿ ತನ್ನ rough draft ಇಲ್ಲಿ ಉಳಿಸಿಕೊಂಡಂತಿದೆ ಅನ್ನಿಸುತ್ತದೆ. ಪ್ರಾಣಿಗಳೂ ಹಾಗೇ. ಎಲ್ಲೋ ನೋಡಿದಂತಿವೆ. ಆದರೆ ಸಂಪೂರ್ಣ ಹೊಸದಾಗಿ ಕಾಣುತ್ತವೆ.

ರಸ್ತೆಯಲ್ಲಿ ಹೋಗುತ್ತಾ ಪ್ರವೀಣ್ ಹೇಳಿದ:
“ಮೊದಲು ಕಾಣಿಸಿದರೆ ಅದು wallaby ಆಗಿರಬಹುದು. ಕಾಂಗರೂನ ಚಿಕ್ಕ cousin ಅಂತ್ಕೊಳ್ಳಿ.”
ಸ್ವಲ್ಪ ಹೊತ್ತಿನ ನಂತರ ದೂರದಲ್ಲಿ ಕೆಲವು ಕಂದು ನೆರಳುಗಳು ಕಾಣಿಸಿದವು. ಮೊದಲಿಗೆ ಕಲ್ಲುಗಳಂತೆ ಕಂಡವು. ನಂತರ ಅವು ಒಂದೊಂದಾಗಿ ಗಾಳಿಯಲ್ಲಿ ತೇಲಿದಂತೆ ಜಿಗಿಯತೊಡಗಿದವು.
ಕಾಂಗರೂಗಳು.
ಒಂದೆರಡು ಅಲ್ಲ. ನೂರಾರು.
ಅವುಗಳ ಜಿಗಿತ ವಿಚಿತ್ರವಾಗಿ ಮೌನ. ನೆಲಕ್ಕೆ ಇಳಿಯುವಾಗ ಮಾತ್ರ ಧಪ್. ಮತ್ತೆ ಧಪ್. ದೂರದ ಹುಲ್ಲಿನ ಮೇಲೆ ಮಳೆಯ ಮೊದಲ ಹನಿಗಳಂತೆ.
ಕೆಲವು ಹುಲ್ಲು ಮೇಯುತ್ತಿದವು. ಕೆಲವು ನಮ್ಮತ್ತ ನೋಡುತ್ತ ನಿಂತಿದ್ದವು. ಸಣ್ಣ ಮುಂಗೈಗಳು. ಬಲವಾದ ಹಿಂಬದಿಯ ಕಾಲುಗಳು. ಸಮತೋಲನ ಕಾಯುವ ದಪ್ಪ ಬಾಲ. ಮೊದಲ ನೋಟಕ್ಕೆ ಪ್ರಕೃತಿ ಬೇರೆ ಬೇರೆ ಪ್ರಾಣಿಗಳ spare parts ಸೇರಿಸಿ ತಯಾರಿಸಿದಂತೆ ಕಾಣುತ್ತದೆ. ಆದರೆ ಐದು ನಿಮಿಷದ ನಂತರ ಅರ್ಥವಾಗುತ್ತದೆ. ಇದಕ್ಕಿಂತ Australian ಪ್ರಾಣಿ ಇನ್ನೊಂದಿಲ್ಲ.
ಅವುಗಳ ದೇಹದಲ್ಲೇ ಒಂದು ವಿಚಿತ್ರ ನಿರ್ಧಾರ ಕಾಣಿಸುತ್ತಿತ್ತು. ಹಿಂದಕ್ಕೆ ಹೋಗುವುದಕ್ಕಿಂತ ಮುಂದೆ ಜಿಗಿಯಲು ಹುಟ್ಟಿದ ಪ್ರಾಣಿಗಳಂತೆ.
ಆ ಕ್ಷಣದಲ್ಲಿ ಅದು ಕೇವಲ ಕಾಂಗರೂ ಬಗ್ಗೆ ಮಾಹಿತಿ ಅನ್ನಿಸಲಿಲ್ಲ. ಆಸ್ಟ್ರೇಲಿಯಾ ದೇಶದ ಸ್ವಭಾವವೇ ಹಾಗಿರಬೇಕು ಅನ್ನಿಸಿತು.
ಲಕ್ಷಾಂತರ ವರ್ಷಗಳ ಕಾಲ ಉಳಿದ ಜಗತ್ತಿನಿಂದ ಪ್ರತ್ಯೇಕವಾಗಿದ್ದ ಖಂಡ ಇದು. ಅದರಿಂದ ಇರಬಹುದು, ಇಲ್ಲಿ ಪ್ರಾಣಿಗಳಿಗೂ ಸ್ವಲ್ಪ ಏಕಾಂತದ ಸ್ವಭಾವ ಬಂದಿದೆ. ಕಾಂಗರೂ ನೋಡಿದಾಗ ಕೆಲ ದೇಶಗಳು ತಮ್ಮ ಇತಿಹಾಸದಿಂದ ಅಲ್ಲ, ತಮ್ಮ ಏಕಾಂತದಿಂದ ರೂಪುಗೊಳ್ಳುತ್ತವೆ ಎನ್ನುವ ಭಾವನೆ ಬರುತ್ತದೆ.

ಅವುಗಳ ಜಿಗಿತ ನೋಡಿದಾಗ ಆಸ್ಟ್ರೇಲಿಯಾದ ಭೂಗೋಳವೇ ಅದರ ದೇಹದೊಳಗೆ ಸೇರಿಕೊಂಡಂತೆ ಕಾಣುತ್ತದೆ. ಅಪಾರ ಜಾಗ. ದೊಡ್ಡ ದೂರಗಳು. ಕಡಿಮೆ ಜನಸಂಖ್ಯೆ. ಈ ದೇಶದಲ್ಲಿ ನಡೆಯುವುದಕ್ಕಿಂತ ಜಿಗಿಯುವುದೇ ಹೆಚ್ಚು ಉಪಯುಕ್ತವಾಗಿರಬೇಕು ಅನ್ನಿಸುವಷ್ಟು ವಿಶಾಲತೆ.
ಸ್ವಲ್ಪ ಹೊತ್ತಿನ ನಂತರ ಒಂದು ತಾಯಿ ಕಾಂಗರೂ ನಿಧಾನವಾಗಿ ತಿರುಗಿತು. ಅದರ pouch ಒಳಗಿಂದ ಚಿಕ್ಕ joey ತಲೆ ಹೊರಗೆ ಹಾಕಿ ನೋಡುತ್ತಿತ್ತು.
“ಹೊಸದಾಗಿ ಹುಟ್ಟುವ joey ಒಂದು ಚಿಕ್ಕ jellybean ಗಾತ್ರದಲ್ಲಿರುತ್ತದೆ,” ಎಂದು ಪ್ರವೀಣ್ ಹೇಳಿದ. “ಕಣ್ಣು ಕೂಡ ತೆರೆಯದೇ pouch ಒಳಗೆ ಹತ್ತುತ್ತದೆ.”
ಆ ಮಾತು ಕೇಳಿದ ಕ್ಷಣದಲ್ಲಿ ವಿಚಿತ್ರವಾದ ಭಾವನೆ ಆಯಿತು. ಕೆಲವು ಜೀವಿಗಳು ಜಗತ್ತಿಗೆ ಸಂಪೂರ್ಣ ರೂಪದಲ್ಲಿ ಬರುವುದಿಲ್ಲ. ಉಳಿದ ಬೆಳವಣಿಗೆಯನ್ನು ತಾಯಿಯ ದೇಹದೊಳಗೇ ಮುಂದುವರಿಸುತ್ತವೆ.
ಮೊದಲ ಐದು ನಿಮಿಷ ನಾವು ಫೋಟೋ ತೆಗೆದುಕೊಂಡೆವು. ಮುಂದಿನ ಐದು ನಿಮಿಷ ಅವು ನಮ್ಮನ್ನೇ ಗಮನಿಸುತ್ತಿರುವಂತಿತ್ತು.
ಒಂದು ದೊಡ್ಡ ಕಾಂಗರೂ ನಮ್ಮ ಕಡೆ ನೋಡುತ್ತ ನಿಂತಿತ್ತು. ಅದರ ಕಣ್ಣಲ್ಲಿ ವಿಚಿತ್ರ ಶಾಂತಿ ಇತ್ತು. ಆದರೆ ಜೊತೆಗೆ ಒಂದು ಪ್ರಶ್ನೆಯೂ.
ನೀವ್ಯಾರು? ಇಲ್ಲೇನು ಮಾಡ್ತಿದ್ದೀರಿ?
ಅಲ್ಲಿನ ಮೌನ ಇನ್ನೂ ವಿಚಿತ್ರವಾಗಿತ್ತು.
ಅಲ್ಲಿ ಮೊದಲಿಗೆ ಗಮನ ಸೆಳೆಯುವುದು ಕಾಂಗರೂಗಳು ಅಲ್ಲ. ಮೌನ. ಆ ಮೌನಕ್ಕೂ ತನ್ನದೇ ಭಾರ ಇದ್ದಂತೆ ಅನ್ನಿಸಿತು.
ರಸ್ತೆಗಳ ಪಕ್ಕದಲ್ಲಿ ಎಲ್ಲೆಲ್ಲೂ yellow warning boards ಕಾಣಿಸುತ್ತವೆ. Kangaroo Crossing. ಮೊದಲಿಗೆ ಅದು tourist attraction ಹಾಗೆ ಕಾಣಿಸುತ್ತದೆ. ನಂತರ ಅರ್ಥವಾಗುತ್ತದೆ. ಇಲ್ಲಿ ಕಾಂಗರೂಗಳು ಕಾಡಿನೊಳಗೆ ಮಾತ್ರ ಇರುವ ಪ್ರಾಣಿಗಳು ಅಲ್ಲ. ರಸ್ತೆ ನಕ್ಷೆಗಳಲ್ಲೂ ಇವೆ. insurance claim ಗಳಲ್ಲೂ ಇವೆ. ಅಪಘಾತಗಳ ಕಥೆಗಳಲ್ಲೂ ಇವೆ. ಈ ದೇಶದ ದೈನಂದಿನ ಜೀವನದೊಳಗೆ ಸಂಪೂರ್ಣ ಬೆರೆತುಹೋಗಿರುವ ಜೀವಿಗಳು.

“ಇವನ್ನ mob ಅಂತಾರೆ,” ಎಂದ ಪ್ರವೀಣ್.
ಆ ಪದ ಸರಿಯಾಗಿಯೇ ಅನ್ನಿಸಿತು. ಯಾಕೆಂದರೆ ಅವು zoo ಪ್ರಾಣಿಗಳಂತೆ ಕಾಣಿಸುತ್ತಿರಲಿಲ್ಲ. ಈ ಭೂಮಿಯ ಮೂಲ ನಿವಾಸಿಗಳಂತೆ ಕಾಣಿಸುತ್ತಿದ್ದವು.
ನಾವು ಮಾತ್ರ visitors.
ಹಿಂತಿರುಗುವಾಗ ರಸ್ತೆಯ ಪಕ್ಕದಲ್ಲಿ ಮತ್ತೊಂದು ಕಾಂಗರೂ ಕ್ಷಣಕಾಲ ನಿಂತಿತ್ತು. ಅದರ ಹಿಂದೆ ಉದ್ದ ಹುಲ್ಲುಗಾವಲು. ಅದರ ಹಿಂದೆ ಇನ್ನಷ್ಟು ಮೌನ.
ನಮ್ಮ ಕಾರು ಹತ್ತಿರ ಬಂದ ಕ್ಷಣ ಅದು ಎರಡು ಜಿಗಿತಗಳಲ್ಲಿ ಹುಲ್ಲಿನೊಳಗೆ ಮರೆಯಾಯಿತು. ಆಸ್ಟ್ರೇಲಿಯ ಸ್ವಲ್ಪ ಹಾಗೆಯೇ ಅನ್ನಿಸಿತು.
ಮೊದಲ ನೋಟಕ್ಕೆ ಅದು ತುಂಬಾ ಖಾಲಿ ದೇಶದಂತೆ ಕಾಣುತ್ತದೆ. ನಿಧಾನವಾಗಿ ನೋಡಿದರೆ ಅದರ ಮೌನದೊಳಗೆ ಒಂದು ವಿಚಿತ್ರ ಆಳ ಕಾಣಿಸುತ್ತದೆ. ಕಾಂಗರೂಗಳಂತೆಯೇ ಈ ದೇಶವೂ ಸಂಪೂರ್ಣವಾಗಿ ನಿಮ್ಮ ಬಳಿ ಬರುವುದಿಲ್ಲ. ಸ್ವಲ್ಪ ದೂರ ನಿಂತೇ ನಿಮ್ಮನ್ನು ಗಮನಿಸುತ್ತದೆ. ನೀವು ಅದನ್ನು ಅರ್ಥಮಾಡಿಕೊಳ್ಳತೊಡಗುವಷ್ಟರಲ್ಲಿ, ಅದು ಮತ್ತೆ ತನ್ನ ಅಪಾರ ಭೂದೃಶ್ಯದೊಳಗೆ ಜಿಗಿದು ಕಾಣೆಯಾಗುತ್ತದೆ.
| ಮುಂದುವರೆಯುವುದು ।






0 Comments