ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ. ಪ್ರದೀಪ್ ಗೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..

ಯಾಕೂಬ್ ಖಾದರ್ ಗುಲ್ವಾಡಿ

ಗೆಳೆಯ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಮೊದಲ ನಿರ್ದೇಶನಕ್ಕೆ ಜಾಗತಿಕ ಮಾನ್ಯತೆ: MIFF 2026 ರಲ್ಲಿ FIPRESCI ಅಂತರರಾಷ್ಟ್ರೀಯ ಪ್ರಶಸ್ತಿಯ ಗರಿ!…

ನನ್ನ ಬಹು ಕಾಲದ ಗೆಳೆಯ, ನಮ್ಮ ಕುಟುಂಬದ ಒಡನಾಡಿ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನ್ಯೂರ್ ಇಷ್ಟಪಟ್ಟು ಅಪ್ಪಿಕೊಂಡ ಜಗತ್ತು ಮಾತ್ರ ಸಿನಿಮಾ !

ನಮ್ಮಿಬ್ಬರದು ಒಂದೇ ಊರಿನ, ಒಂದೇ ಹೆಜ್ಜೆಯ ಒಟ್ಟೊಟ್ಟಿಗೆ ಶುರುವಾದ ಸಿನಿಮಾ ಜರ್ನಿ. ಪ್ರದೀಪ ನನಗೆ ಕೇವಲ ಗೆಳೆಯನಲ್ಲ, ಬಾಲ್ಯದ ಒಡನಾಡಿ. ಇವತ್ತಿನವರೆಗಿನ ನನ್ನ ಕಷ್ಟ-ಸುಖಗಳ ಪ್ರತಿಯೊಂದು ಹೆಜ್ಜೆಯಲ್ಲೂ ಹೆಗಲಿಗೆ ಹೆಗಲು ಕೊಟ್ಟು ನಿಂತ ಗೆಳೆಯ. ಅವನ ಸಿನಿಮಾದ ಮೇಲಿನ ಪ್ರೀತಿ, ಸಾಹಿತ್ಯದ ಓದು, ನಿರಂತರ ಬರಹ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ನಾನು ಹತ್ತಿರದಿಂದ ಕಂಡವನು.

ನಾನು ನಿರ್ಮಿಸಿದ ಮೊದಲ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ‘ರಿಸರ್ವೇಶನ್’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸಿ, ಇಡೀ ಸಿನಿಮಾದ ಯಶಸ್ಸಿನ ಹಿಂದೆ ನಿಂತವನು ಪ್ರದೀಪ್. ನನ್ನೆಲ್ಲಾ ಸಿನಿಮಾಗಳ ಮೊದಲ ಪ್ರೇಕ್ಷಕನಾಗಿ, ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾ ಬಂದವನು ಈ ನನ್ನ ಗೆಳೆಯ .

ಪ್ರದೀಪನ ಈ ಎಲ್ಲಾ ಸಾಧನೆ, ನಿರಂತರ ಅಧ್ಯಯನ ಮತ್ತು ಇವತ್ತಿನ ಈ ಯಶಸ್ಸಿನ ಹಿಂದೆ ಅವನ ಪತ್ನಿ, ನನ್ನ ಪ್ರೀತಿಯ ಸಹೋದರಿ ಡಾ. ಸೌಮ್ಯ ಹೇರಿಕುದ್ರು ಅವರ ಬೆಂಬಲ ಮತ್ತು ಪ್ರೋತ್ಸಾಹ ಬಹಳ ಮಹತ್ವವಾದದ್ದು. ಸ್ವತಃ ಪ್ರಾಧ್ಯಾಪಕರಾದ ಡಾ. ಸೌಮ್ಯ ಅವರು ನಮ್ಮನ್ನೆಲ್ಲರ ನೆಚ್ಚಿನ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದ ಮೇಲೆ ಪಿಎಚ್‌ಡಿ (PhD) ಸಂಶೋಧನೆ ನಡೆಸಿದವರು. ಪ್ರಸ್ತುತ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತೆ. ಇಬ್ಬರೂ ಸಾಹಿತ್ಯ ಮತ್ತು ಶೈಕ್ಷಣಿಕ ವಲಯದಲ್ಲಿ ಪ್ರಬುದ್ಧ ಚಿಂತಕರಾಗಿ ಪರಸ್ಪರ ಹೆಗಲಾಗುತ್ತಾ, ಒಬ್ಬರ ಸಾಧನೆಗೆ ಮತ್ತೊಬ್ಬರು ಶಕ್ತಿಯಾಗಿ ನಿಂತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಕುಂದಾಪುರ ತಾಲೂಕಿನ ಕೆಂಚನೂರಿನ ಹೆಮ್ಮೆಯ ಪ್ರತಿಭೆಯಾದ ಪ್ರದೀಪ್, ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿಯೂ ಚಲನಚಿತ್ರ ರಂಗವನ್ನು ಆಳವಾಗಿ ಅಧ್ಯಯನ ಮಾಡಿದ ಪ್ರಬುದ್ಧ ಚಿಂತಕ.

ಮಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸದ್ಯ ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕನಾಗಿದ್ದಾನೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ ವಿಷಯವಾಗಿ ಪಿಎಚ್.ಡಿ. (PhD) ಪದವಿ ಪಡೆದಿದ್ದಲ್ಲದೆ

ಪುಣೆಯ ಪ್ರತಿಷ್ಠಿತ ‘FTII’ ನಿಂದ ಫಿಲ್ಮ್ ಅಪ್ರಿಸಿಯೇಶನ್ ಕೋರ್ಸ್ ಹಾಗೂ ಕೋಲ್ಕತ್ತಾದ ‘SRFTII’ ನಿಂದ ಧ್ವನಿ ಕೋರ್ಸ್ ಪೂರ್ಣಗೊಳಿಸಿದ್ದಾನೆ.

ಸಿನಿಮಾ ಮತ್ತು ಚರಿತ್ರೆಗೆ ಸಂಬಂಧಿಸಿದಂತೆ 50 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಜರ್ನಲ್‌ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, ಚಲನಚಿತ್ರ ಹಾಗೂ ಇತಿಹಾಸ ಕುರಿತು ಆರು ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾನೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯನಾಗಿ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFES) ಉಪ ಕಲಾತ್ಮಕ ನಿರ್ದೇಶಕನಾಗಿ ಹಾಗೂ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಂತಹ ಪ್ರತಿಷ್ಠಿತ ಚಲನಚಿತ್ರೋತ್ಸವಗಳ ಜ್ಯೂರಿ (ತೀರ್ಪುಗಾರ) ಸದಸ್ಯನಾಗಿ ಸೇವೆ ಸಲ್ಲಿಸಿದ ಅವನ ಅನುಭವ ಅಪಾರ.

ಇವತ್ತು ಗೆಳೆಯನ ಈ ಆಳವಾದ ಅಧ್ಯಯನ, ನಿರಂತರ ಪರಿಶ್ರಮ, ಬದ್ಧತೆ ಮತ್ತು ಸಿನಿಮಾದ ಮೇಲಿನ ಕರಗದ ಪ್ರೀತಿಗೆ ರಾಷ್ಟ್ರೀಯ ಮಟ್ಟದ ಅದ್ಭುತ ಮಾನ್ಯತೆ ದೊರೆತಿದೆ. ತಾನು ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿದ ‘The Hug of Emptiness’ ಸಾಕ್ಷ್ಯಚಿತ್ರಕ್ಕಾಗಿ 19ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (MIFF 2026) ಅತ್ಯಂತ ಪ್ರತಿಷ್ಠಿತ FIPRESCI ಅಂತರರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಎಲ್ಲರೂ ಹೆಮ್ಮೆಪಡುವಂತೆ ಮಾಡಿದ್ದಾನೆ.

ಗೆಳೆಯ ಸಾಧಿಸಿದ ಈ ಅಪಾರ ಸಂಭ್ರಮದ ಕ್ಷಣದಲ್ಲಿ, ಅವನ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸೃಜನಶೀಲ, ಸಿನಿಮಾದ ಸಾಧನೆಗಳ ಫಲವಾಗಿ ಬಂದ ಈ ಹೆಮ್ಮೆಯ ಪ್ರಶಸ್ತಿಗೆ ಅವನು ಮುತ್ತಿಕ್ಕುವ ಈ ಕ್ಷಣದಲ್ಲಿ ನಾವೆಲ್ಲ ಅವನ ಜೊತೆಗಿದ್ದೇವೆ ಎನ್ನುವುದೇ ನಮಗೆಲ್ಲ ಅತ್ಯಂತ ಭಾವುಕ ಮತ್ತು ಹೆಮ್ಮೆಯ ಸಂಗತಿ. ಬಾಲ್ಯದಿಂದ ಜೊತೆಯಾಗಿ ಬೆಳೆದು, ಇಂದು ಸಿನಿಮಾದ ವೇದಿಕೆಯಲ್ಲಿ ಅವನು ಪ್ರಶಸ್ತಿ ಸ್ವೀಕರಿಸುವುದನ್ನು ಕಣ್ಣಾರೆ ನೋಡುವುದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದಿಲ್ಲ.

ನನ್ನ ಪ್ರೀತಿಯ ಗೆಳೆಯನಿಗೆ ಹಾಗೂ ಅವನ ಯಶಸ್ಸಿನ ಬೆನ್ನೆಲುಬಾದ ಸಹೋದರಿ ಸೌಮ್ಯಳಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮಿಬ್ಬರ ಜ್ಞಾನ, ಸಾಹಿತ್ಯ ಮತ್ತು ಕನಸುಗಳ ದಾರಿಯಲ್ಲಿ ಇನ್ನಷ್ಟು ಇಂತಹ ಅದ್ಭುತಗಳು ಮೂಡಿಬರಲಿ, ಎಲ್ಲ ಕಡೆ ನಿಮ್ಮ ಕೀರ್ತಿ ಪಸರಿಸಲಿ.

ಮುಂದೆಯೂ ಜೊತೆಯಾಗಿ ಸಾಗೋಣ ಗೆಳೆಯಾ…

‍ಲೇಖಕರು Admin

25 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading