ಡಾ ಜ್ಯೋತಿ ಕಂಡ ‘ನೋಮ್ಯಾಡ್ ಲ್ಯಾಂಡ್’

ಡಾ ಜ್ಯೋತಿ

ಈ ವರ್ಷದ ಆಸ್ಕರ್ ಶ್ರೇಷ್ಠ ನಟಿ ಪ್ರಶಸ್ತಿಯನ್ನು ‘ನೋಮ್ಯಾಡ್ ಲ್ಯಾಂಡ್’ ಚಿತ್ರದ ನಾಯಕಿ 63 ವರ್ಷದ ಫ್ರಾನ್ಸಿಸ್ ಮೆಕ್ ಡಾರ್ಮಂಡ್ ಪಡೆದಿದ್ದಾರೆ. ಅವರು ಶ್ರೇಷ್ಠ ನಟನೆಗಾಗಿ ಗಳಿಸಿರುವ ಈ ಮೂರನೇ ಪ್ರಶಸ್ತಿ ಆಸ್ಕರ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಕೂಡ. ಅರವತ್ತು ವರ್ಷ ದಾಟಿದ ನಿರಾಡಂಬರದ ಮಹಿಳೆಯೊಬ್ಬಳು ಒಂದು ಸಿನೆಮಾದ ಪ್ರತಿ ಫ್ರೇಮಿನಲ್ಲಿ ಕಾಣಿಸಿಕೊಂಡು, ಅದಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿರುವುದು ಗ್ಲಾಮರ್ ಸಿನೆಮಾ ಜಗತ್ತಿನಲ್ಲಿ ಒಂದು ಸಾಧನೆಯೇ ಸರಿ.

ಅವರ ಪ್ರಶಸ್ತಿ ಸ್ವೀಕಾರ ಭಾಷಣದ ಸಂಕ್ಷಿಪ್ತ ಹೇಳಿಕೆ ಹೀಗಿದೆ: ‘ಕೆಲಸವೇ ನನ್ನ ಆಯುಧ. ನಾನದನ್ನು ಬಹಳ ಇಷ್ಟಪಡುತ್ತೇನೆ. ಇದನ್ನು ಗುರುತಿಸಿರುವುದಕ್ಕೆ ನಿಮಗೆ ಕೃತಜ್ಞತೆಗಳು’. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಚೀನಾ ಮೂಲದ ನಿರ್ದೇಶಕಿ ಕ್ಲೋಯ್ ಝಾವೋ ಶ್ರೇಷ್ಠ ನಿರ್ದೇಶಕಿ ಪ್ರಶಸ್ತಿ ಪಡೆಯುವುದರ ಮೂಲಕ ಆಸ್ಕರ್ ಇತಿಹಾಸದಲ್ಲಿ ಇದನ್ನು ಪಡೆದ ಎರಡನೇ ಮಹಿಳೆ ಮತ್ತು ಏಶಿಯಾದ ಪ್ರಥಮ ಮಹಿಳೆಯೆಂಬ ಹೆಗ್ಗಳಿಕೆ ಪಡೆದಿದ್ದಾರೆ. 

ಈ ಚಲನಚಿತ್ರದ  ವಿಶೇಷವೆಂದರೆ, ನೋಮ್ಯಾಡ್ ಲ್ಯಾಂಡ್  ವಾಸ್ತವ ಜಗತ್ತಿನ ನೈಜ್ಯ ಚಿತ್ರಣದಂತೆ ಭಾಸವಾಗುತ್ತದೆ. ಪ್ರಸ್ತುತ, ಕೊರೊನ ಸಂಬಂಧಿತ ಲಾಕ್ ಡೌನ್ ಮತ್ತು ಆರ್ಥಿಕ ಮುಗ್ಗಟ್ಟಿನಿಂದಾಗಿ ಜನರು ಹೊಸ ಬದುಕಿನ ಹುಡುಕಾಟದಲ್ಲಿ ಗುಳೆ ಹೋಗುತ್ತಿರುವಂತೆ, ಈ ಚಿತ್ರದಲ್ಲಿ ಕೂಡ ಅಮೆರಿಕಾದ ಒಂದು ಪಟ್ಟಣದಲ್ಲಿ 88 ವರ್ಷ ಇತಿಹಾಸದ ಜಿಪ್ಸುಮ್  ಗಣಿ ಮುಚ್ಚಿದ್ದರ ಪರಿಣಾಮವಾಗಿ, ಅದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಜನರೆಲ್ಲಾ ಉದ್ಯೋಗ ಕಳೆದುಕೊಂಡು ಅಲೆಮಾರಿಗಳಾಗಿ ಹೊಸ ಜೀವನೆಲೆಗಳ ಹುಡುಕಾಟದಲ್ಲಿ ತೊಡಗುತ್ತಾರೆ. ಅಂತವರಲ್ಲಿ ಒಬ್ಬಳು, 60 ವರ್ಷ ದಾಟಿದ, ಮಕ್ಕಳಿಲ್ಲದ ವಿಧವೆ ಫರ್ನ್ (ಮೆಕ್ ಡಾರ್ಮಂಡ್ ನಿರ್ವಹಿಸಿದ ಪಾತ್ರ). 

ಹೀಗೆ, ಅಸ್ತಿತ್ವ ಕಳೆದುಕೊಂಡ ಫರ್ನ್ ತನ್ನ ವ್ಯಾನನ್ನು ಮನೆಯಾಗಿಸಿ ಕೆಲವೇ ಅಗತ್ಯವೆನಿಸಿದ ವಸ್ತುಗಳೊಂದಿಗೆ, ಕೆಲಸ ಮತ್ತು ಬದುಕಿನ ಹುಡುಕಾಟದಲ್ಲಿ ಹೆದ್ದಾರಿ ಪ್ರವೇಶಿಸುತ್ತಾಳೆ. ಮಾರ್ಗದಲ್ಲಿ ತನ್ನಂತೆಯೇ ಬದುಕು ಸಾಗಿಸುತ್ತಿರುವ ಹಲವಾರು ವಯೋವೃದ್ಧರನ್ನು ಭೇಟಿ ಮಾಡುತ್ತಾಳೆ. ನಿಧಾನವಾಗಿ ಧೈರ್ಯ ತಂದುಕೊಳ್ಳುತ್ತಾ, ಹಳೆಯ ನೆನಪುಗಳಿಂದ ಹೊರಬರುತ್ತಾ ಮುಂದಿನ ಪಯಣಕ್ಕೆ ಮಾನಸಿಕವಾಗಿ ಸಿದ್ಧಳಾಗುತ್ತಾಳೆ.

ವಿಶೇಷವೆಂದರೆ, ದಾರಿಯುದ್ದಕ್ಕೂ ನೆಲೆನಿಲ್ಲುವ ಸಿಕ್ಕ ಅವಕಾಶಗಳನ್ನು ಅವಳು ನಯವಾಗಿ ತಿರಸ್ಕರಿಸುತ್ತಾಳೆ. ಅವಳ ಸ್ನೇಹಿತೆ ತನ್ನ ಮನೆಗೆ ಆಹ್ವಾನಿಸುತ್ತಾಳೆ. ಅದಕ್ಕೆ ನಯವಾಗಿ ‘ನನಗೆ ಮನೆಯೆಂಬ ಕಟ್ಟಡವಿಲ್ಲ ನಿಜ, ಆದರೆ ಮನಸ್ಸಿನೊಳಗೆ ಮನೆಯಿದೆ’ ಎನ್ನುತ್ತಾಳೆ. ಮುಂದೆ, ಆರ್ಥಿಕ ಕಷ್ಟವಾದಾಗ ತಂಗಿಯ ಮನೆಗೆ ಹೋಗಿ ಸಾಲ ಪಡೆದು, ಅದನ್ನು ಖಂಡಿತವಾಗಿ ಹಿಂದಿರುಗಿಸುತ್ತೇನೆ ಎಂದು ಸ್ವಾಭಿಮಾನದಿಂದ ಹೇಳಿ, ಆದರೆ ಉಳಿದುಕೊಳ್ಳಲು ಹೇಳಿದಾಗ, ‘ನನಗಿಲ್ಲಿ ಉಸಿರು ಕಟ್ಟಿದ ಅನುಭವವಾಗುತ್ತದೆ’ ಎಂದು ಮುಂದುವರಿಯುತ್ತಾಳೆ.

ಹಾಗೆಯೇ, ಪಯಣದಲ್ಲಿ ಜೊತೆಗಾರನಾದ ಡೇವ್, ತನ್ನ ಮಗನ ಮನೆಗೆ ತೆರಳುವಾಗ, ಫರ್ನ್ ಗೆ ಜೊತೆಯಾಗಲು ಆಹ್ವಾನಿಸುತ್ತಾನೆ. ಅದನ್ನೂ ನಿರಾಕರಿಸಿ, ಒಮ್ಮೆ ಭೇಟಿಯಂತೂ ನೀಡುತ್ತೇನೆ ಎನ್ನುತ್ತಾಳೆ. ಅದರಂತೆಯೇ, ಮನೆ ತಲುಪಿದಾಗ ಅವನ ವ್ಯಾನ್ ಮೂಲೆಯಲ್ಲಿ ಧೂಳು ಹಿಡಿದಿರುವುದನ್ನು ಗಮನಿಸುತ್ತಾಳೆ. ಈ ಮೂಲಕ, ಬದುಕು ನಿಂತಾಗ ಧೂಳು ಹಿಡಿಯುತ್ತದೆ, ಹಾಗಾಗಿ, ಚಲನೆ ಮುಖ್ಯವೆನ್ನುವುದನ್ನು ಸಾಂಕೇತಿಕವಾಗಿ  ನಿರ್ದೇಶಕಿ ಬಿಂಬಿಸುತ್ತಾಳೆ. ಅಲ್ಲಿಯೂ ನಿಲ್ಲದೆ ಫರ್ನ್ ಹೊರಗಿನ ತಾಜಾ ಗಾಳಿಗೆ ಮೈಯೊಡ್ಡಿ ಪಯಣ ಮುಂದುವರಿಸುತ್ತಾಳೆ. 

ಎಲ್ಲಾ ಕಳೆದುಕೊಂಡ ಮೇಲೆಯೂ, ಬದುಕನ್ನು ಬಂದಂತೆಯೇ ಸ್ವೀಕರಿಸು ಎನ್ನುವ ತತ್ವ ಸಾರುವ ಈ ಸಿನೆಮಾದಲ್ಲಿ ಫರ್ನ್ ತನ್ನ ಇಳಿವಯಸ್ಸಿನಲ್ಲಿ ಸಿಕ್ಕಿದ ಎಲ್ಲಾ ರೀತಿಯ ಕೆಲಸಗಳನ್ನು ಮನಃಪೂರ್ವಕವಾಗಿ ಮಾಡುತ್ತಾಳೆ. ಒಂದು ಕಾಲದಲ್ಲಿ ಅದ್ಯಾಪಕಿಯಾಗಿದ್ದವಳು, ಶೌಚಾಲಯ ಸ್ವಚ್ಛಗೊಳಿಸುವುದು, ಫಾಸ್ಟ್ ಫುಡ್ ರೆಸ್ಟೋರೆಂಟ್ ನಲ್ಲಿ ಅಡುಗೆ ಮಾಡುವುದು, ಹೀಗೆ ಕೆಲಸ ಮಾಡುತ್ತಾ ಜೀವನ ಪಯಣದಲ್ಲಿ ಆತ್ಮಸ್ಥೈರ್ಯದಿಂದ ಮುಂದುವರಿಯುತ್ತಾಳೆ. ದಾರಿಯುದ್ದಕ್ಕೂ ಸ್ನೇಹಿತರನ್ನು ಮಾಡಿಕೊಳ್ಳುತ್ತಾಳೆ, ಆದರೆ ಯಾರೊಂದಿಗೂ ನಿಕಟ ಸಂಪರ್ಕ ಬೆಳೆಸಿಕೊಳ್ಳದೆ, ಅಂತರ ಕಾಯ್ದುಕೊಳ್ಳುತ್ತಾಳೆ. ಆದರೆ, ಪ್ರಕೃತಿಯೊಂದಿಗೆ ಸಾಕಷ್ಟು ಸಮಯ ಕಳೆಯುತ್ತಾಳೆ. 

ಫರ್ನ್ ಭಾಗವಹಿಸುವ ಬಾಬ್ ವೆಲ್ಸ್ ನೇತೃತ್ವದ ಅಲೆಮಾರಿಗಳ ಸಮಾವೇಶದಲ್ಲಿ, ಒಬ್ಬರೇ ಹೇಗೆ ತಮ್ಮ ವ್ಯಾನ್ ರಿಪೇರಿ ಮಾಡಬಹುದು, ಹವಾಮಾನ ವೈಪರೀತ್ಯದಲ್ಲಿ ಸಂಭಾಳಿಸಿಕೊಳ್ಳಬಹುದು ಹಾಗು ಒಂಟಿ ಪಯಣದಲ್ಲಿ ಹತಾಶರಾಗದೆ, ತಾಳ್ಮೆ ಮತ್ತು ಸಹಾನುಭೂತಿ ಬೆಳೆಸಿಕೊಳ್ಳುವ ತರಬೇತಿ ಪಡೆಯುತ್ತಾಳೆ. ಅಲ್ಲಿ, ಅಲೆಮಾರಿಗಳೆಲ್ಲಾ ಜೊತೆಯಾಗಿ ಹಾಡುತ್ತಾರೆ, ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಾರೆ, ಕಳೆದುಹೋದವರಿಗೆ ಭಾವಾಂಜಲಿ ಅರ್ಪಿಸುತ್ತಾರೆ ಹಾಗು ತಮ್ಮ ಪಯಣ ಮುಂದುವರಿಸುತ್ತಾರೆ.

ಲೇಖಕಿ ಜೆಸ್ಸಿಕಾ ಬ್ರೂಡರ್ ರವರ ಅಧ್ಯಯನ ಗ್ರಂಥ ನೋಮ್ಯಾಡ್ ಲ್ಯಾಂಡ್ ಆಧಾರಿತ ಈ ಸಿನೆಮಾ, ಬದುಕಿನ ಇಳಿವಯಸ್ಸಿನಲ್ಲಿ ಅಲೆಮಾರಿಗಳಾಗಬೇಕಾದ ಜನರ ಬದುಕಿನ ನೈಜ್ಯ ಚಿತ್ರಣ ನೀಡುತ್ತದೆ. ಇಲ್ಲಿ ಸ್ವತಃ ಅಲೆಮಾರಿಗಳು ಹೇಳಿಕೊಳ್ಳುವಂತೆ, ಅವರ ಸಾಮಾನ್ಯ ಹಿನ್ನೆಲೆಯೇನೆಂದರೆ ಕೆಳವರ್ಗದವರು, ಉದ್ಯೋಗ ಕಳೆದುಕೊಂಡವರು, ವಿಚ್ಛೇದಿತರು, ಸಂಗಾತಿಯನ್ನು ಕಳೆದುಕೊಂಡವರು, ಪಿಂಚಣಿ ಲಭ್ಯವಿಲ್ಲದವರು ಹಾಗು ಮನೆಯಿಲ್ಲದವರು.

ಸಮಾಜದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ನಡುವೆ, ತಮ್ಮ ಇಳಿವಯಸ್ಸಿನಲ್ಲೂ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಇವರು ಸ್ವಾಭಿಮಾನದಿಂದ ಬದುಕಲು ಹವಣಿಸುತ್ತಾರೆ. ಹೀಗೆ, ‘ನೋಮ್ಯಾಡ್ ಲ್ಯಾಂಡ್’, ಜಾಗತೀಕರಣದ ಉತ್ತುಂಗದಲ್ಲಿರುವ ಅಮೇರಿಕಾದ ಬಂಡವಾಳಶಾಹಿಯಿಂದಾಗಿ ಬೀದಿಪಾಲಾದ ಜನಸಾಮಾನ್ಯರ ಜೀವನದ ಮುಸ್ಸಂಜೆಯ ಅತಂತ್ರ ಬದುಕನ್ನು ಪರಿಚಯಿಸುತ್ತದೆ. 

ಮೂಲತಃ, ಮನುಷ್ಯ ಅಲೆಮಾರಿ ಮತ್ತು ಸ್ಥಿರತೆ ಬಯಸುವುದು ಅವನು ಕಟ್ಟಿಕೊಂಡ ಸಾಮಾಜಿಕ ವ್ಯವಸ್ಥೆಯ ಒಂದು ಸಂಸ್ಕ್ರತಿ. ಆದರೆ ಬದುಕಿನ ದಾರಿ ಅನಿಶ್ಚಿತ ಮತ್ತು ಬದಲಾವಣೆ ಅನಿವಾರ್ಯ. ಫರ್ನ್ ಪಾತ್ರ, ಬಾಹ್ಯ ಅನಿಶ್ಚತೆಗಳ ನಡುವೆ ಆಂತರಿಕ ಗಟ್ಟಿತನದ ಮೂಲಕ ಸ್ವಾಭಿಮಾನದಿಂದ ಬದುಕುವ ದಾರಿ ನಮಗೆ ತೋರಿಸುತ್ತದೆ. ವಿಸ್ಮಯವೆಂದರೆ, ಅವಳು ಹೊಸ ಮನೆಯ ಹುಡುಕಾಟದಲ್ಲಿಲ್ಲ.

ಮನೆಯೆನ್ನುವುದು ನಮ್ಮ ಮನಸ್ಸಿನೊಳಗಿದೆ ಎಂದು ಫರ್ನ್ ಹೇಳುತ್ತಾಳೆ. ಹಾಗಂತ, ಇಲ್ಲಿ ಅಲೆಮಾರಿಗಳ ಬದುಕಿನ ರಮ್ಯ ಚಿತ್ರಣವಿಲ್ಲ, ಬದಲಾಗಿ ನಿಷ್ಟುರ ವಾಸ್ತವ ದರ್ಶನದಲ್ಲಿ ಬದುಕನ್ನು ಹೇಗೆ ಸಹನೀಯಗೊಳಿಸಬಹುದೆನ್ನುವ ಸಂದೇಶವಿದೆ. ಚಿತ್ರದಲ್ಲಿ ಬಾಬ್ ವೆಲ್ಸ್ ಹೇಳುವಂತೆ, ‘ಜೀವನ ಒಂದು ಪಯಣದಂತೆ, ಇಲ್ಲಿ ಅಂತಿಮ ವಿದಾಯಗಳಿಲ್ಲ’. ಈ ಚಿತ್ರವನ್ನು ನೋಡುವಾಗ ಕುವೆಂಪುರವರ ಸಾಲುಗಳು ‘ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು, ಓ ಅನಂತವಾಗಿರು’, ನೆನಪಾಗುತ್ತವೆ.  

‍ಲೇಖಕರು Admin

July 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: